14 ಹೈಕೋರ್ಟ್ ಗಳಲ್ಲಿ ವಕೀಲರ ಕೋಟಾದಿಂದ ನೇಮಕಗೊಂಡವರಲ್ಲಿ ಒಬ್ಬರೂ ಮುಸ್ಲಿಂ ನ್ಯಾಯಾಧೀಶರಿಲ್ಲ!
►ಪ್ರಾತಿನಿಧ್ಯದ ತೀವ್ರ ಕೊರತೆ ಬಹಿರಂಗಪಡಿಸಿದ ಅಂಕಿ-ಅಂಶ ►ಹೆಚ್ಚು ಮುಸ್ಲಿಂ ಹೆಸರುಗಳನ್ನು ಶಿಫಾರಸು ಮಾಡಲು ಕೊಲಿಜಿಯಂಗೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಶಂಶಾದ್ ಆಗ್ರಹ

ಸಾಂದರ್ಭಿಕ ಚಿತ್ರ | Photo Credit : magnific.com
ದೇಶದ ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ತೀರಾ ಕಡಿಮೆಯಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಿಗೆ ವಕೀಲರ ಕೋಟಾದಿಂದ ನೇರವಾಗಿ ನೇಮಕಗೊಳ್ಳುವ ನ್ಯಾಯಾಧೀಶರಲ್ಲಿ ಈ ಕೊರತೆ ಎದ್ದು ಕಾಣುತ್ತಿದೆ.
ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಎಂ.ಆರ್. ಶಂಶಾದ್ ಅವರು ಕಾನೂನು ಸುದ್ದಿ ತಾಣ ‘ಬಾರ್ ಆಂಡ್ ಬೆಂಚ್’ನಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಅಧಿಕೃತ ಅಂಕಿ-ಅಂಶಗಳನ್ನು ಆಧರಿಸಿ ಈ ಗಂಭೀರ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ದೇಶದ 14 ಹೈಕೋರ್ಟ್ ಗಳಲ್ಲಿ ವಕೀಲರಿಂದ ನೇರವಾಗಿ ನೇಮಕಗೊಂಡ ಒಟ್ಟು 232 ನ್ಯಾಯಾಧೀಶರಲ್ಲಿ ಒಬ್ಬರೂ ಮುಸ್ಲಿಂ ನ್ಯಾಯಾಧೀಶರಿಲ್ಲ ಎಂಬ ಅಂಶವನ್ನು ಅವರು ದಾಖಲೆಗಳ ಸಮೇತ ಮುಂದಿಟ್ಟಿದ್ದಾರೆ.
ದೆಹಲಿ ಹೈಕೋರ್ಟ್ ನಲ್ಲಿ ಬಾರ್ (ವಕೀಲರ) ಕೋಟಾದಿಂದ ನೇಮಕಗೊಂಡ 32 ನ್ಯಾಯಾಧೀಶರಿದ್ದಾರೆ. ಕಲ್ಕತ್ತಾ ಹೈಕೋರ್ಟ್ ನಲ್ಲಿ ಇಂತಹ 39 ನ್ಯಾಯಾಧೀಶರಿದ್ದಾರೆ. ಈ ಎರಡೂ ಪ್ರಮುಖ ನ್ಯಾಯಾಲಯಗಳಲ್ಲಿ ಒಬ್ಬ ಮುಸ್ಲಿಂ ನ್ಯಾಯಾಧೀಶರೂ ಇಲ್ಲ. ಗುಜರಾತ್ ಹೈಕೋರ್ಟ್ ನಲ್ಲಿ 19, ಮಧ್ಯಪ್ರದೇಶದಲ್ಲಿ 24 ಹಾಗೂ ಆಂಧ್ರಪ್ರದೇಶದಲ್ಲಿ 22 ನ್ಯಾಯಾಧೀಶರು ವಕೀಲರ ವೃಂದದಿಂದ ಬಂದವರಾಗಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ 43, ಒಡಿಶಾದಲ್ಲಿ 12, ಛತ್ತೀಸ್ ಗಢ, ಜಾರ್ಖಂಡ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ತಲಾ 9 ಮತ್ತು ಉತ್ತರಾಖಂಡದಲ್ಲಿ 7 ನ್ಯಾಯಾಧೀಶರು ವಕೀಲರಿಂದ ನೇಮಕಗೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಯಾವ ಹೈಕೋರ್ಟ್ ನಲ್ಲೂ ಬಾರ್ ಕೋಟಾದಿಂದ ಪ್ರಸ್ತುತ ಸೇವೆಯಲ್ಲಿರುವ ಒಬ್ಬ ಮುಸ್ಲಿಂ ನ್ಯಾಯಾಧೀಶರೂ ಇಲ್ಲ.
ಇನ್ನುಳಿದ ಕೆಲವು ಹೈಕೋರ್ಟ್ ಗಳಲ್ಲಿಯೂ ಪ್ರಾತಿನಿಧ್ಯದ ಪ್ರಮಾಣ ತೀರಾ ಸೀಮಿತವಾಗಿದೆ. ಬಾರ್ ನಿಂದ ನೇಮಕಗೊಂಡ 31 ನ್ಯಾಯಾಧೀಶರಿರುವ ಪಾಟ್ನಾ ಹೈಕೋರ್ಟ್ ನಲ್ಲಿ ಕೇವಲ ಒಬ್ಬರು ಮುಸ್ಲಿಂ ನ್ಯಾಯಾಧೀಶರಿದ್ದಾರೆ. ತೆಲಂಗಾಣದ 22 ರಲ್ಲಿ ಒಬ್ಬರು, ರಾಜಸ್ಥಾನದ 26 ರಲ್ಲಿ ಒಬ್ಬರು ಹಾಗೂ ಗುವಾಹಟಿಯ 15 ರಲ್ಲಿ ಒಬ್ಬರು ಮಾತ್ರ ಮುಸ್ಲಿಂ ನ್ಯಾಯಾಧೀಶರಿದ್ದಾರೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನಲ್ಲಿ ಬಾರ್ನಿಂದ ನೇಮಕಗೊಂಡ ಆರು ನ್ಯಾಯಾಧೀಶರಲ್ಲಿ ಇಬ್ಬರು ಮಾತ್ರ ಮುಸ್ಲಿಮರಾಗಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನಲ್ಲಿ ಬಾರ್ ಕೋಟಾದಿಂದ ನೇಮಕಗೊಂಡ 77 ನ್ಯಾಯಾಧೀಶರಲ್ಲಿ ನಾಲ್ವರು ಮುಸ್ಲಿಂ ನ್ಯಾಯಾಧೀಶರಿದ್ದಾರೆ. ಬಾಂಬೆ ಹೈಕೋರ್ಟ್ ನ 59 ನ್ಯಾಯಾಧೀಶರಲ್ಲಿ ಮೂವರು ಹಾಗೂ ಮದ್ರಾಸ್ ಹೈಕೋರ್ಟ್ ನ 43 ನ್ಯಾಯಾಧೀಶರಲ್ಲಿ ಮೂವರು ಮುಸ್ಲಿಮರಾಗಿದ್ದಾರೆ. ಕರ್ನಾಟಕ ಹೈಕೋರ್ಟ್ ನಲ್ಲಿ ಬಾರ್ನಿಂದ ಬಂದ 40 ನ್ಯಾಯಾಧೀಶರ ಪೈಕಿ ಮೂವರು ಹಾಗೂ ಕೇರಳ ಹೈಕೋರ್ಟ್ ನಲ್ಲಿ 25 ರಲ್ಲಿ ಮೂವರು ಮುಸ್ಲಿಂ ನ್ಯಾಯಾಧೀಶರಿದ್ದಾರೆ. ಹಿರಿಯ ವಕೀಲ ಎಂ.ಆರ್. ಶಂಶಾದ್ ಅವರ ಪ್ರಕಾರ, ಒಟ್ಟು ನ್ಯಾಯಾಧೀಶರ ಸಂಖ್ಯೆ ಮತ್ತು ಸಂಬಂಧಿತ ರಾಜ್ಯಗಳ ಜನಸಂಖ್ಯಾ ಅನುಪಾತಕ್ಕೆ ಹೋಲಿಸಿದರೆ ಈ ಪ್ರಾತಿನಿಧ್ಯ ತೀರಾ ನಗಣ್ಯವಾಗಿದೆ.
ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ ನಲ್ಲಿ 38 ನ್ಯಾಯಾಧೀಶರ ಮಂಜೂರಾದ ಬಲ ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ ಒಬ್ಬರೇ ಒಬ್ಬರು ಮುಸ್ಲಿಂ ನ್ಯಾಯಾಧೀಶರಿದ್ದಾರೆ. ಬಹಳ ಕಾಲದಿಂದ ಸುಪ್ರೀಂ ಕೋರ್ಟ್ ನಲ್ಲಿ ಸಿಖ್ ಸಮುದಾಯದ ಯಾವುದೇ ನ್ಯಾಯಾಧೀಶರಿಲ್ಲ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹುದ್ದೆಗಳನ್ನು ತಲುಪಲು ಬಾರ್ನಿಂದ ಆಗುವ ನೇರ ನೇಮಕಾತಿಯೇ ಪ್ರಮುಖ ಹಾದಿಯಾಗಿದೆ. ಸರ್ವಿಸ್ ಕೋಟಾದ ಮೂಲಕ ಬಡ್ತಿ ಪಡೆಯುವವರು ಹೈಕೋರ್ಟ್ಗೆ ಬರುವ ವೇಳೆಗೆ ಅವರ ನಿವೃತ್ತಿ ವಯಸ್ಸು ಸಮೀಪಿಸಿರುತ್ತದೆ. ಇದರಿಂದಾಗಿ ಅವರು ಹೈಕೋರ್ಟ್ ಗಳಲ್ಲಿ ಕೆಲವೇ ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.
ವಕೀಲ ವೃಂದದಿಂದ ನೇಮಕಗೊಳ್ಳುವ ಹಂತದಲ್ಲೇ ತಾರತಮ್ಯ ಉಂಟಾದರೆ, ಉನ್ನತ ನ್ಯಾಯಾಂಗದ ನಾಯಕತ್ವ ಸ್ಥಾನಗಳಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ. ನ್ಯಾಯಾಧೀಶರನ್ನು ನೇಮಕ ಮಾಡುವಾಗ ಅವರ ವಯಸ್ಸನ್ನು ಸಹ ಪರಿಗಣಿಸಲಾಗುತ್ತದೆ. ಕಿರಿಯ ವಯಸ್ಸಿನಲ್ಲಿ ಹೈಕೋರ್ಟ್ಗೆ ನೇಮಕಗೊಳ್ಳುವ ವಕೀಲರು ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆಯುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತಾರೆ. ಆರಂಭಿಕ ಹಂತದಲ್ಲೇ ವಕೀಲರ ನೇಮಕಾತಿಯಲ್ಲಿ ಅವಕಾಶ ತಪ್ಪಿದರೆ ಭವಿಷ್ಯದ ಸಾಂವಿಧಾನಿಕ ಹುದ್ದೆಗಳಲ್ಲೂ ಸಮುದಾಯದ ಉಪಸ್ಥಿತಿ ಶೂನ್ಯವಾಗುತ್ತದೆ.
ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಕೊಲಿಜಿಯಂ ವ್ಯವಸ್ಥೆಯೇ ನೇರ ಹೊಣೆಗಾರಿಕೆ ಹೊಂದಿದೆ. ಸಂಸತ್ತಿನಲ್ಲಿ ಇತ್ತೀಚೆಗೆ ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಚರ್ಚೆ ನಡೆದಿತ್ತು. ಈ ಪ್ರಕ್ರಿಯೆಯನ್ನು ನ್ಯಾಯಾಂಗವೇ ಪ್ರಾರಂಭಿಸುವುದರಿಂದ ಸರ್ಕಾರದ ಪಾತ್ರ ಇಲ್ಲಿ ತೀರಾ ಸೀಮಿತವಾಗಿರುತ್ತದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳ ಮುಖ್ಯಸ್ಥರು ಹಾಗೂ ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ಕೊಲಿಜಿಯಂ ಸಮಿತಿಯೇ ವಕೀಲರ ಹೆಸರುಗಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ. ಈ ಆರಂಭಿಕ ಹಂತದಲ್ಲೇ ಸಾಮಾಜಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅರ್ಹ ವಕೀಲರ ಹೆಸರುಗಳನ್ನು ಆಯ್ಕೆ ಮಾಡುವ ಪರಮಾಧಿಕಾರ ನ್ಯಾಯಾಂಗಕ್ಕಿದೆ. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸರ್ಕಾರವು ತಡೆಹಿಡಿಯುವ ಅಥವಾ ವಿಳಂಬ ಮಾಡುವ ಸಾಧ್ಯತೆಗಳಿರುವುದರಿಂದ, ಕೊಲಿಜಿಯಂ ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಅಂತಹ ಅರ್ಹ ಹೆಸರುಗಳನ್ನು ಶಿಫಾರಸು ಮಾಡಬೇಕು ಎಂದು ಎಂ.ಆರ್. ಶಂಶಾದ್ ಪ್ರತಿಪಾದಿಸಿದ್ದಾರೆ. ಒಂದು ವೇಳೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದರೂ ಅಥವಾ ಹೆಸರುಗಳನ್ನು ತಡೆದರೂ ಸಹ, ಕೊಲಿಜಿಯಂ ದೃಢ ನಿಲುವು ತಳೆದು ತನ್ನ ಶಿಫಾರಸುಗಳನ್ನು ಮತ್ತೆ ಕಳಿಸುವ ಗಟ್ಟಿತನ ಪ್ರದರ್ಶಿಸಬೇಕು ಎಂದು ಅವರು ವಾದಿಸಿದ್ದಾರೆ.
ಸೌಜನ್ಯ: barandbench.com






