Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಮಾನದ ಯಜಮಾನ: ‘ಪಾರ್ಶ್ವ ಸಂಗೀತ’

ಜಮಾನದ ಯಜಮಾನ: ‘ಪಾರ್ಶ್ವ ಸಂಗೀತ’

ಗಣೇಶ ಅಮೀನಗಡಗಣೇಶ ಅಮೀನಗಡ6 Oct 2023 10:39 AM IST
share
ಜಮಾನದ ಯಜಮಾನ: ‘ಪಾರ್ಶ್ವ ಸಂಗೀತ’
ನಾಟಕ: ಪಾರ್ಶ್ವ ಸಂಗೀತ ಮೂಲ: ಶ್ರೀನಿವಾಸ ವೈದ್ಯರ ಬರಹಗಳು ರಂಗರೂಪ: ಬಿ.ಪಿ.ಅರುಣ್ ಪರಿಕಲ್ಪನೆ ಮತ್ತು ನಿರ್ದೇಶನ: ಪ್ರಶಾಂತ್ ಹಿರೇಮಠ ಸಂಗೀತ ನಿರ್ವಹಣೆ: ವಿಶ್ವಾಸ್ ಕೃಷ್ಣ ರಂಗವಿನ್ಯಾಸ: ಎಚ್.ಕೆ.ದ್ವಾರಕಾನಾಥ್ ಬೆಳಕು: ಕೃಷ್ಣಕುಮಾರ್ ನಾರ್ಣಕಜೆ ವಸ್ತ್ರವಿನ್ಯಾಸ: ನಂದಿನಿ ಕೆ.ಆರ್. ಪ್ರಸಾಧನ: ರಾಘವೇಂದ್ರ ಬೂದನೂರು, ದಿವ್ಯಾ, ಸರಿತಾ ನೃತ್ಯ: ಕಾರ್ತಿಕ್ ಉಪಮನ್ಯು ಸಹನಿರ್ದೇಶನ: ಮಹೇಶ್ ಕುಮಾರ್ ಎನ್. ನಿರ್ಮಾಣ ನಿರ್ವಹಣೆ: ರಾಜೇಶ್ ಬಿ.

ಶ್ರೀನಿವಾಸ ವೈದ್ಯರ ಲೇಖನ ಹಾಗೂ ಪ್ರಬಂಧಗಳನ್ನು ಆಧರಿಸಿದ ‘ಪಾರ್ಶ್ವ ಸಂಗೀತ’ ನಾಟಕವು 1940ರಿಂದ 1970ರ ದಶಕದ ಲೇಖಕರ ಬದುಕಿನ ಗತಕಾಲದ ವೈಭವವನ್ನು ಹಿಡಿದಿಡುತ್ತದೆ.

ನಾಟಕ ಶುರುವಾಗುವುದೇ ಅಲೆಗಳ ಶಬ್ದದಿಂದ. ಅಲೆಗಳು ಬಂದು ಶ್ರೀನಿವಾಸ ವೈದ್ಯರನ್ನು ಅಪ್ಪಳಿಸಿದಾಗ ನೆನಪುಗಳಿಗೆ ಮೊರೆ ಹೋಗುತ್ತಾರೆ. ಅವರ ಶಾಮ ಚಿಕ್ಕಪ್ಪ, ಕಾಕೂ, ಧಾರವಾಡದ ಜೀವನ, ಹಾಡುಗಳು, ತಂದೆ, ತಾಯಿ, ಅಣ್ಣಂದಿರು ನೆನಪಾಗುತ್ತಾರೆ. ಶ್ರೀನಿವಾಸ ವೈದ್ಯರ ಜೀವನದಲ್ಲಿ ನಿಜವಾಗಿ ನಡೆದ ಘಟನೆಗಳನ್ನು ಆಧರಿಸಿದ ಜೊತೆಗೆ ಹಿಂದಿ ಹಾಡುಗಳನ್ನು ಬಳಸಿಕೊಂಡ ಅಪರೂಪದ ನಾಟಕವಿದು. ಮುಖ್ಯವಾಗಿ ಚಿಕ್ಕಪ್ಪ ಹಾಗೂ ಕಾಕೂ ನಡುವೆ ನಡೆಯುವ ಕಥೆಯಿದು. ಶ್ರೀನಿವಾಸ ವೈದ್ಯರು ಪಾತ್ರವಾಗಿ ನಿರೂಪಣೆ ಮೂಲಕ ನಾಟಕವನ್ನು ಮುನ್ನಡೆಸುತ್ತಾರೆ. ಹಾಗೆಯೇ ಬಾಲಕ ಸೀನು ಮೂಲಕ ನಾಟಕ ಕಟ್ಟುತ್ತಾರೆ. ಜೊತೆಗೆ ಬಾಲಕನ ಮೂಲಕ ತಮ್ಮ ಜೀವನವನ್ನು ನೋಡುತ್ತಾರೆ ಮತ್ತು ಆಗಾಗ ಪಾತ್ರವೂ ಆಗುತ್ತಾರೆ.

ಹಳೆಯ ಹಿಂದಿ ಸಿನೆಮಾ ಹಾಡುಗಳನ್ನು ಕೇಳುವ ಹುಚ್ಚಿರುವ ಶಾಮ ಚಿಕ್ಕಪ್ಪನನ್ನು ಕಂಡರೆ ಬೆಂಕಿನವಾಬರಾಗುವ ಅವರ ಅಜ್ಜ, ಅಂದರೆ ಸಂಪ್ರದಾಯ ಕುಟುಂಬದಲ್ಲಿ ಸಿನೆಮಾ ಹಾಡುಗಳನ್ನೂ ಕೇಳಬಾರದೆನ್ನುವ ದಿನಗಳಲ್ಲಿ ಗ್ರಾಮಾಫೋನ್ ಮೂಲಕ ಹಳೆಯ ಹಿಂದಿ ಸಿನೆಮಾ ಹಾಡು ಕೇಳುವ, ಗುಣುಗುಣಿಸುವ ಗುಣ ಬೆಳೆಸಿಕೊಂಡಿದ್ದ ಶಾಮ ಚಿಕ್ಕಪ್ಪನಿಗೆ ಕಾಕೂ ಪರಿಚಯವಾಗುತ್ತದೆ. ಅವರ ನಡುವೆ ಅರಳುವ ನವಿರಾದ ಪ್ರೇಮ, ಇದಕ್ಕಾಗಿ ಬಳಸಿಕೊಂಡ ಸೈಕಲ್, ಸಮಾರಂಭಕ್ಕೆಂದು ಪ್ರಯಾಣಕ್ಕೆ ಹೊರಡುವ ಕುಟುಂಬದವರನ್ನು ಆತುರದಿಂದ ಬೀಳ್ಕೊಡುವ ಶಾಮ ಚಿಕ್ಕಪ್ಪ, ಮನೆಗೆ ಬರಲಿರುವ ಕಾಕೂ ಜೊತೆಗೆ ಹೇಗೆ ಮಾತನಾಡಬೇಕೆಂದು ತಾಲೀಮು ನಡೆಸುತ್ತಾನೆ. ಹೀಗೆ ಕಾಯುವಾಗ ಬರುವವನು ರದ್ದಿ ಪೇಪರು ಕೊಳ್ಳುವವನು! ಎರಡು ಬಾರಿ ಆತನೇ ಬರುತ್ತಾನೆ. ಮೂರನೆಯ ಸಲ ಕಾಕೂ ಬಂದಾಗ ಗಲಿಬಿಲಿಗೆ ಒಳಗಾಗುತ್ತಾನೆ.

‘‘ಪಂಖಾ (ಫ್ಯಾನ್) ಹಾಕಲೆ? ಚಹಾ ಮಾಡಲೆ?’’ ಎಂದು ಕೇಳುತ್ತಾನೆ. ಹೀಗೆ ಅವರ ನಡುವೆ ಮೊಳಕೆಯೊಡೆಯುವ ಪ್ರೇಮ ಮದುವೆಯಲ್ಲಿ ಅಂತ್ಯವಾಗುತ್ತದೆ. ಆದರೆ ಕಾಕೂ ಬದುಕು ಬಹಳ ಬೇಗೆ ಅಂತ್ಯವಾಗುತ್ತದೆ. ಮಳೆಯಲ್ಲಿ ನೆನೆದ ಪರಿಣಾಮ ಅಂಟಿದ ಜ್ವರವು ಹೆಚ್ಚಾಗಿ ಕೊನೆಗೆ ಸಾವನ್ನಪ್ಪುತ್ತಾಳೆ. ಹೀಗೆ ಶಾಮ ಚಿಕ್ಕಪ್ಪನ ಬದುಕಲ್ಲಿ ಕಾಕೂ ಕೂಡಾ ಸುಂದರವಾದ ಒಂದು ಹಾಡಿನ ಹಾಗೆ ಬಂದು ಹೋಗುತ್ತಾಳೆ. ಇದಕ್ಕೂ ಮೊದಲು ಶಾಮ ಚಿಕ್ಕಪ್ಪನಿಗೆ ಅಂಟಿದ ಸಿಗರೇಟು ಚಟವನ್ನು ಕಾಕೂ ಬಿಡಿಸುತ್ತಾಳೆ. ಈ ಸಂಬಂಧ ಮಾತು ಬಿಟ್ಟ ಇಬ್ಬರ ನಡುವೆ ಬಾಲಕ ಸೀನು ಸೇತುವೆಯಾಗುತ್ತಾನೆ, ಮಧ್ಯಸ್ಥಿಕೆ ವಹಿಸುತ್ತಾನೆ. ಆಗ ನಡೆಯುವ ತಮಾಷೆಯ ಸಂಗತಿಗಳು ಗಮನಾರ್ಹ.

ನಾಟಕದ ಉದ್ದಕ್ಕೂ ಹಳೆಯ ಹಿಂದಿ ಸಿನೆಮಾ ಹಾಡುಗಳನ್ನು ಕೇಳಿಸುವುದರಿಂದ ಜಮಾನದ ಕಾಲಕ್ಕೆ ಕರೆದೊಯ್ಯುತ್ತದೆ ನಾಟಕ. ಹೀಗೆ ಇಡೀ ನಾಟಕದ ಉದ್ದಕ್ಕೂ ಹಿಂದಿ ಹಾಡುಗಳನ್ನು ಬಳಸಿಕೊಂಡಿದ್ದು ಪರಿಣಾಮಕಾರಿಯಾಗಿದೆ ಜೊತೆಗೆ ನಾಟಕದ ಓಘಕ್ಕೂ ಪೂರಕವಾಗಿದೆ. ಇದಕ್ಕೆ ಪೂರಕವಾಗಿ ಹಿರಿಯ ರಂಗಕಲಾವಿದರಾದ ಮೈಮ್ ರಮೇಶ್ ಅವರು ಶ್ರೇಷ್ಠ ನಟ ರಾಜಕಪೂರ್ ಅವರ ಪ್ರತಿಮೆಯಾಗಿ ಆಗಾಗ ಬರುತ್ತಾರೆ. ನಮ್ಮ ನೆನಪುಗಳು ಕುಣಿಯುತ್ತವೆ ಎನ್ನುವ ಹಾಗೆ ನೃತ್ಯಗಾರರು ಆಗಾಗ ಬಂದು ಹಾಡುಗಳಿಗೆ ಕುಣಿಯುವ ಮೂಲಕ ನೆನಪುಗಳ ಸಂಕೇತವಾಗುತ್ತಾರೆ.

ಈ ನಾಟಕದ ನಿರ್ದೇಶಕ ಪ್ರಶಾಂತ್ ಹಿರೇಮಠ ಅವರು ಕಲಾವಿದರನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಕಾಕೂ ಪಾತ್ರದಲ್ಲಿ ಪ್ರಶಾಂತ್ ಅವರ ಮಗಳು ಶಾಲ್ಮಲಿ ಹಿರೇಮಠ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಪ್ರಶಾಂತ್ ಹಿರೇಮಠ ಹಾಗೂ ಮೈಸೂರು ರಂಗಾಯಣದ ಕಲಾವಿದರಾದ ಕೆ.ಆರ್.ನಂದಿನಿ ಅವರ ಪುತ್ರಿ ಶಾಲ್ಮಲಿ ಅಭಿನಯಿಸಿಲ್ಲ, ಪಾತ್ರವೇ ಅವರಾಗಿದ್ದಾರೆ. ಎಪ್ಪತ್ತರ ದಶಕದ ಹುಡುಗಿಯರ ನಾಚಿಕೆ ಸ್ವಭಾವ, ಕಣ್ಣಲ್ಲೇ ಮಾತನಾಡುವ ಬಗೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಹೀಗೆಯೇ ತಾತನಾಗಿ ಮಂಜುನಾಥ ಶಾಸ್ತ್ರಿ ಗಮನ ಸೆಳೆಯುತ್ತಾರೆ. ನಾಟಕವನ್ನು ನಿರೂಪಿಸುವ ವಯಸ್ಸಾದ ಶ್ರೀನಿವಾಸ ವೈದ್ಯರ ಪಾತ್ರಧಾರಿ ಮುರಳಿ ಗುಂಡಣ್ಣ ಸೇರಿದಂತೆ ಪೂರ್ಣಚಂದ್ರ, ಮಾಸ್ಟರ್ ಸಖ್ಯಾ ರಾಜೇಶ್, ಶ್ವೇತಾ, ವಿನಯ್ ಕಶ್ಯಪ್, ಗೀತಾ ಪಡುವಾರಹಳ್ಳಿ, ಮಂಜು, ಸಿರಿ, ಮಂಜು ಮಂಗಲ, ಹರಿಪ್ರಸಾದ್, ಚೈತ್ರಾ ನಾಗರಾಜು, ಮಂಜು ಗಂಗಾವತಿ, ರಾಕೇಶ್, ರವಿಪ್ರಸಾದ್, ನೇಸರಾ, ಜಗತಿ, ಸುಷ್ಮಿತಾ, ಅನಘಾ, ಆಂಟೊ, ವಿಷ್ಣು, ನಿಖಿಲ್, ಪ್ರಯಾಗ್ ಕೋರೆ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಶ್ರೀನಿವಾಸ ವೈದ್ಯರ ಬರಹಗಳಲ್ಲಿದ್ದ ಉತ್ತರ ಕರ್ನಾಟಕದ ಜವಾರಿ ಭಾಷೆಯು ಕೆಲ ಕಲಾವಿದರಿಗೆ ಬರದೆ ಮೈಸೂರು ಭಾಷೆಯನ್ನು ಬಳಸಿದ್ದಾರೆ. ಇದು ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಬಲ್ಲವರಿಗೆ ಗೊತ್ತಾಗುತ್ತದೆ. ಆದರೂ ಆ ಕಾಲದ ಜೀವನವನ್ನು ಈ ತಲೆಮಾರಿನ ಕಲಾವಿದರು ರಂಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಎರಡೂವರೆ ಗಂಟೆಯ ಈ ನಾಟಕವು ನವಿರಾದ ನಿರೂಪಣೆ, ಹಾಡು, ಹಾಸ್ಯ ದೃಶ್ಯಗಳಿಂದ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಪಾರ್ಶ್ವ ಎಂದರೆ ಮಗ್ಗಲು/ಜೊತೆ ಎಂದರ್ಥವೂ ಇದೆ. ಜೀವನದ ಮಗ್ಗುಲಾದ ಸಂಗೀತದಿಂದಾಗುವ ಬದಲಾವಣೆಗಳು ಇಲ್ಲಿ ರಂಗರೂಪ ಪಡೆದಿವೆ. ಕೆ.ಎಲ್.ಸೈಗಲ್, ತಲತ್ ಮುಹಮ್ಮದ್, ಮುಹಮ್ಮದ್ ರಫಿ, ಕಿಶೋರ್‌ಕುಮಾರ್, ಸಂಶಾದ್ ಬೇಗಂ, ಲತಾ ಮಂಗೇಶ್ಕರ್, ಮನ್ನಾಡೆ ಅವರ ಹಾಡುಗಳನ್ನು ಕೇಳುವ ಭಾಗ್ಯ ಈ ನಾಟಕದಿಂದ ಪ್ರೇಕ್ಷಕರಿಗೆ ದಕ್ಕುತ್ತದೆ. ಹಾಡುಗಳನ್ನು ಕೇಳಿಸುವಂತೆಯೇ ರೆಕಾರ್ಡ್ ಪ್ಲೇಯರ್ ಪ್ಲೇ ಮಾಡುವ ಕ್ರಮವೂ ಚೆಂದ. ಇದಕ್ಕಾಗಿ ಈ ನಾಟಕದ ಭಿತ್ತಿಪತ್ರದಲ್ಲಿ ‘ಕಮ್ ಆ್ಯಂಡ್ ಫಾಲ್ ಇನ್ ಲವ್ ವಿತ್ ಗ್ರಾಮಾಫೋನ್ ಎರಾ’ ಎಂದಿರುವುದು ನಿಜ. ಆದರೆ ಇದರಿಂದ ಮನೆಯಲ್ಲಿ ಜಗಳವಾಗುವ, ಬಂದ ವರನ ಎದುರು ಹುಡುಗಿಯು ಹಿಂದಿ ಸಿನೆಮಾ ಹಾಡು ಹಾಡಿದಳೆಂದು ತಿರಸ್ಕರಿಸುವ ಆ ಕಾಲದವರ ಮನಸ್ಥಿತಿಯ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಆ ಕಾಲದವರ ಉಡುಪಿನ ಹಾಗೆ ವಸ್ತ್ರವಿನ್ಯಾಸಗೊಳಿಸಿದ ಕೆ.ಆರ್.ನಂದಿನಿ ಅವರ ಶ್ರಮ ಎದ್ದು ಕಾಣುತ್ತದೆ.

ಈಗಾಗಲೇ 38 ಪ್ರದರ್ಶನಗಳನ್ನು ಪೂರೈಸಿರುವ ಈ ನಾಟಕಕ್ಕೆ ಇಂಟರ್‌ವಲ್ ಕೂಡಾ ಇದೆ. ಮೈಸೂರು ರಂಗಾಯಣದ ಕಲಾವಿದರಾಗಿ ನಿವೃತ್ತರಾಗಿರುವ ಪ್ರಶಾಂತ್ ಹಿರೇಮಠ ಒಳ್ಳೆಯ ನಟರೆಂದು ಸಾಬೀತುಪಡಿಸಿದ್ದಾರೆ. ಈ ನಾಟಕದಿಂದ ತಾವೊಬ್ಬ ಸೂಕ್ಷ್ಮ ಹಾಗೂ ಸಮರ್ಥ ನಿರ್ದೇಶಕ ಎಂಬುದನ್ನೂ ಸಾಬೀತುಪಡಿಸಿದ್ದಾರೆ.

2019ರಲ್ಲಿ ಬೆಂಗಳೂರಿನ ರಂಗಶಂಕರದಲ್ಲಿ ಈ ನಾಟಕ ನೋಡಿದ ಶ್ರೀನಿವಾಸ ವೈದ್ಯರು ಮಾತನಾಡಿದ್ದು ಹೀಗೆ; ‘‘ಇದು ನಮ್ಮ ಮನೆ ಕಥೆ. ಸೈಗಲ್, ಪಂಕಜ್ ಮಲ್ಲಿಕ್, ಅಮೀರಬಾಯಿ ಕರ್ನಾಟಕಿ, ನೂರ್‌ಜಹಾನ್ ಹಾಡುಗಳನ್ನು ಧಾರವಾಡ ರಸ್ತೆದಾಗ ಆಗ ಹಾಡಿಕೊಂಡು ಜನ ಹೋಗ್ತಿದ್ರು. ಇಷ್ಟು ವರ್ಷ ಬದುಕಿದ್ದೇ ಸಿನೆಮಾ ಹಾಡುಗಳನ್ನು ಗುಣುಗುಣಿಸಿಕೊಂಡು. ಒಂದು ವೇಳೆ, ಸಿನೆಮಾ ಹಾಡುಗಳಿರದಿದ್ರ ನಮ್ಮ ಕಥೆ ಏನಾಗ್ತಿತ್ತೋ ಏನೋ? ಇದು ಎಲ್ಲರ ಕಥೆ. ಸ್ವಲ್ಪ ಕಲಾಮನೋವೃತ್ತಿ ಇದ್ದವರ ಹಣೆಬರಹ ಇಷ್ಟ. ಸಿನೆಮಾ ಬೈತೀವಿ. ಆದ್ರ ಸಿನೆಮಾ ಇಲ್ಲದ ಬದುಕಿಲ್ಲ. ಬೆಂಕಿನವಾಬರಂಥ ಅಜ್ಜ ಇಲ್ಲದಿದ್ರ ನಮ್ಮ ಹಣೆಬರಹ ಏನಾಗಿಬಿಡ್ತಿತ್ತೋ ಏನೋ? ಏಕತ್ರ ಕುಟುಂಬದಿಂದ ಬಂದವ್ರಿಗೆ ನಾಸ್ಟಾಲ್ಜಿಯಾ ಇದು. ಈಗೆಲ್ಲಾ ನ್ಯೂಕ್ಲಿಯರ್ ಕುಟುಂಬಗಳಾಗಿವೆ. ಈಗ ಬೆಂಕಿನವಾಬಿಲ್ಲ, ಶಾಮ ಚಿಕ್ಕಪ್ಪ ಇಲ್ಲ. ಕಾಕೂ ತೀರಿಕೊಂಡ ದಿವಸ ಗಣಪತಿ ಹಬ್ಬ ಇತ್ತು. ಗಣಪತಿ ಇಟ್ಟ ಮಾಡಿನ ಕೆಳಗ ಕಾಕೂನ ಮಲಗಿಸಿದ್ರು. ನಮ್ಮ ತಂದಿ-ತಾಯಿ ಹೋದ್ರು. ಈಗೇನ ಉಳದದ? ಅವ್ಯಾಹತವಾದ ಪ್ರೇಮ, ವಾತ್ಸಲ್ಯದೊಳಗ ಬೆಳದಾಂವ ನಾನು. ಧಾರವಾಡದ ಮಳಿ, ಕರ್ನಾಟಕ ಕಾಲೇಜಿನ ಕೆಂಪು ಕಟ್ಟಡ ಹಿಂಗ ಧಾರವಾಡ ಜೀವನದ ಕಥಿಯಿದು. ಯಾವಾಗಲೂ ಹುಡುಗ್ರು ಕೂಡು ಕುಟುಂಬದೊಳಗ ಬೆಳದ್ರ ಐಡಿಂಟಿಟಿ ಇರ‌್ತದ. ಮುಂಬೈದಂಥ ನಗರದಾಗ ಬೆಳದ್ರ ಅನಾಥಪ್ರಜ್ಞೆ ಬರ‌್ತದ...’’

ಹೀಗೆಂದಿದ್ದ ಶ್ರೀನಿವಾಸ ವೈದ್ಯರು ಈಗಿಲ್ಲ.

ಅಂದ ಹಾಗೆ ಈ ನಾಟಕದ ಪ್ರದರ್ಶನ ಇದೇ ಅಕ್ಟೋಬರ್ 8ರಂದು ಸಂಜೆ 6:30ಕ್ಕೆ ಮೈಸೂರಿನ ಕಲಾಮಂದಿರ ಪಕ್ಕದ ಕಿರು ರಂಗಮಂದಿರದಲ್ಲಿದೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X