ಜಗತ್ತಿನ ಅತಿ ಭಯಾನಕ ಪಕ್ಷಿ ಕ್ಯಾಸೋವರಿ ಬಗ್ಗೆ ನಿಮಗೆ ಗೊತ್ತೆ?

Images: Pexels, wikimedia commons
ಕ್ಯಾಸೋವರಿಗಳು ಬಹುತೇಕ ನಾಚಿಕೆ ಸ್ವಭಾವದ ಪಕ್ಷಿಗಳು. ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಅಡಗಿರುತ್ತವೆ. ಬೆದರಿಕೆ ಎದುರಾದಾಗ ಅಥವಾ ಆತಂಕ ಉಂಟಾದಾಗ ಮಾತ್ರ ದಾಳಿ ಮಾಡುತ್ತವೆ. ಆದರೆ ಗಾತ್ರ ಮತ್ತು ಶಕ್ತಿಯಿಂದಾಗಿ ಇವು ದೈತ್ಯ ಪಕ್ಷಿಗಳ ಸಾಲಿಗೆ ಸೇರುತ್ತವೆ.
ಎಲ್ಲಾ ಪಕ್ಷಿಗಳೂ ಅಮಾಯಕವೆಂದು ನೀವು ಅಂದುಕೊಂಡಿದ್ದರೆ, ಮತ್ತೊಮ್ಮೆ ಯೋಚಿಸಬೇಕು. ಉತ್ತರ ಆಸ್ಟ್ರೇಲಿಯಾ ಮತ್ತು ನ್ಯೂ ಗಿನಿಯ ಮಳೆಕಾಡುಗಳಲ್ಲಿ ನೆಲೆಸಿರುವ ಕ್ಯಾಸೋವರಿಗಳು ಭೂಗ್ರಹದ ಅತಿ ಅಪಾಯಕಾರಿ ಪಕ್ಷಿಗಳಲ್ಲೊಂದೆಂದು ಖ್ಯಾತಿ ಪಡೆದಿವೆ.
ಸುಮಾರು ಆರು ಅಡಿ (1.8 ಮೀಟರ್) ಎತ್ತರ ಮತ್ತು 60 ಕಿಲೋಗ್ರಾಂಗಳಷ್ಟು ತೂಕವಿರುವ ಈ ಹಾರಲಾಗದ ದೈತ್ಯ ಪಕ್ಷಿಗಳು ಅತ್ಯಂತ ಶಕ್ತಿಯುತ ಕಾಲುಗಳನ್ನು ಹೊಂದಿವೆ. ಕಾಲಿನ ಚೂಪಾದ ಉಗುರುಗಳು ಮಾಂಸವನ್ನು ಸೀಳುವಷ್ಟು ತೀಕ್ಷ್ಣವಾಗಿವೆ. ಕಾಲ್ಬೆರಳಲ್ಲಿ ಕಠಾರಿಯಂತಹ ಪಂಜಗಳು ಇದ್ದು, ಮಾನವರು ಅಥವಾ ಇತರ ಪ್ರಾಣಿಗಳಿಗೆ ಮಾರಕ ಗಾಯಗಳನ್ನುಂಟುಮಾಡುವ ಸಾಮರ್ಥ್ಯವಿದೆ. ಭಯಾನಕ ಪಕ್ಷಿಗಳೆಂದು ಹೆಸರು ಪಡೆದಿದ್ದರೂ, ಕ್ಯಾಸೋವರಿಗಳು ಸಾಮಾನ್ಯವಾಗಿ ನಾಚಿಕೆ ಸ್ವಭಾವದವು. ಮರಗಳಲ್ಲಿ ಅಡಗಿರುತ್ತವೆ. ಆದರೆ ಪ್ರಚೋದನೆಗೆ ಒಳಗಾದರೆ ಅತ್ಯಂತ ಅಪಾಯಕಾರಿ ಆಗುತ್ತವೆ.
ಭಯಾನಕ ದೇಹದ ದೈತ್ಯ ಪಕ್ಷಿ
ಕ್ಯಾಸೋವರಿಗಳು ಜೀವಂತ ಟ್ಯಾಂಕ್ನಂತೆ ಕಾಣುವ ದೇಹವನ್ನು ಹೊಂದಿವೆ. ಮಾಂಸಖಂಡಗಳಿಂದ ಕೂಡಿದ ಕಾಲುಗಳು ಮನುಷ್ಯನ ಮೂಳೆಯನ್ನೇ ಮುರಿಯುವಷ್ಟು ಬಲವಾದ ಒದೆತ ನೀಡಬಲ್ಲವು. ಕಾಲ್ಬೆರಳ ಒಳಭಾಗದಲ್ಲಿರುವ ಸುಮಾರು ಮೂರು ಇಂಚಿನ ಕಠಾರಿಯಂತಹ ಉಗುರು ನೈಸರ್ಗಿಕ ಆಯುಧವಾಗಿ ಕಾರ್ಯನಿರ್ವಹಿಸುತ್ತದೆ. ತಲೆಯ ಮೇಲೆ ಹೆಲ್ಮೆಟ್ನಂತಹ ಶಿರಸ್ತ್ರಾಣವಿದ್ದು, ದಟ್ಟ ಅರಣ್ಯದಲ್ಲಿ ದಾರಿ ಮಾಡಿಕೊಳ್ಳಲು ನೆರವಾಗುತ್ತದೆ. ಚುರುಕಾಗಿರುವ ಇವು ವೇಗವಾಗಿ ಓಡಬಲ್ಲವು ಹಾಗೂ ಕದ್ದುಮುಚ್ಚಿ ಚಲಿಸುವ ಸ್ವಭಾವ ಹೊಂದಿವೆ. ಪ್ರಚೋದಿಸಿದರೆ ಈ ದೈತ್ಯ ಪಕ್ಷಿಗಳು ಮಾರಕವಾಗಿ ಪರಿಣಮಿಸುತ್ತವೆ.
ಆಹಾರ ಮತ್ತು ವರ್ತನೆ
ಅತಿ ಅಪಾಯಕಾರಿ ಎಂದು ಕರೆಯಲ್ಪಡುವ ಕ್ಯಾಸೋವರಿಗಳು ಮೂಲತಃ ಹಣ್ಣುಹಂಪಲನ್ನು ಆಹಾರವಾಗಿಟ್ಟುಕೊಳ್ಳುತ್ತವೆ. ಮಳೆಕಾಡುಗಳಲ್ಲಿ ಬೀಜಗಳ ಹರಡುವಿಕೆಗೆ ಇವು ಪ್ರಮುಖ ಪಾತ್ರವಹಿಸುತ್ತವೆ. ಶಿಲೀಂಧ್ರಗಳು, ಸಣ್ಣ ಪ್ರಾಣಿಗಳು ಹಾಗೂ ಕೀಟಗಳನ್ನೂ ತಿನ್ನುತ್ತವೆ. ಸಾಮಾನ್ಯವಾಗಿ ಏಕಾಂತ ಜೀವನ ನಡೆಸುವ ಇವು, ಅನೇಕ ಚದರ ಕಿಲೋಮೀಟರ್ಗಳಷ್ಟು ವ್ಯಾಪಿಸುವ ಪ್ರದೇಶದಲ್ಲಿ ತಮ್ಮದೇ ಪ್ರಾಬಲ್ಯವನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ಗಂಡು ಪಕ್ಷಿಗಳೇ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳನ್ನು ಸಂರಕ್ಷಿಸುತ್ತವೆ. ಇದು ಇಂತಹ ಶಕ್ತಿಶಾಲಿ ಪಕ್ಷಿಗಳಲ್ಲಿ ಕಾಣುವ ವಿಶಿಷ್ಟ ವರ್ತನೆಯಾಗಿದೆ.
ಮಾನವ–ಪಕ್ಷಿ ಸಂಘರ್ಷ
ಕ್ಯಾಸೋವರಿಗಳು ನೆಲೆಸಿರುವ ಪ್ರದೇಶಗಳಲ್ಲಿ ಮಾನವರು ಅಚಾನಕ್ ಎದುರಾದಾಗ ಸಂಘರ್ಷಗಳು ಸಂಭವಿಸಿರುವ ಉದಾಹರಣೆಗಳಿವೆ. ದಟ್ಟ ಕಾಡಿನಲ್ಲಿ ಈ ಪಕ್ಷಿಗಳು ಗಂಟೆಗೆ ಸುಮಾರು 50 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು. ಹೀಗಾಗಿ ಅವುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ. ಮಾನವರ ಮೇಲೆ ಗಂಭೀರ ದಾಳಿ ನಡೆಸಿರುವ ಘಟನೆಗಳು ಅಪರೂಪವಾದರೂ, ದಾಳಿ ನಡೆದರೆ ಅದು ಮಾರಕವಾಗುತ್ತದೆ. ಇದೇ ಕಾರಣಕ್ಕೆ ಕ್ಯಾಸೋವರಿಗಳನ್ನು ಜಗತ್ತಿನ ಅತಿ ಅಪಾಯಕಾರಿ ಪಕ್ಷಿ ಎಂದು ಕರೆಯಲಾಗುತ್ತದೆ.
ಸಂರಕ್ಷಣೆಯ ಪ್ರಯತ್ನ
ಭಯಾನಕವೆಂದು ಹೆಸರಾಗಿದ್ದರೂ ಕ್ಯಾಸೋವರಿಗಳು ಇಂದು ತಮ್ಮ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತಿವೆ. ರಸ್ತೆ ಅಪಘಾತಗಳಿಗೆ ಸಿಲುಕಿ ಸಾಯುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಮರಿಗಳಿಗೆ ಅಗತ್ಯವಾದ ರಕ್ಷಣೆ ಕಡಿಮೆಯಾಗುತ್ತಿದೆ. ಮಳೆಕಾಡುಗಳನ್ನು ಸಂರಕ್ಷಿಸುವುದರ ಮೂಲಕ ಮಾತ್ರ ಈ ದೈತ್ಯ ಪಕ್ಷಿಗಳ ಭವಿಷ್ಯವನ್ನು ಉಳಿಸಬಹುದು.







