ಡೊನಾಲ್ಡ್ ಟ್ರಂಪ್ ಅವರ ಆಪ್ತೆ, ‘ಹ್ಯೂಮನ್ ಪ್ರಿಂಟರ್’ ಎಂದೇ ಪ್ರಸಿದ್ಧರಾಗಿರುವ ನಟಾಲಿ ಹಾರ್ಪ್ ಯಾರು?

ಡೊನಾಲ್ಡ್ ಟ್ರಂಪ್ | Photo Credit : AP
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ಹಾಗೂ ವಿಶ್ವಾಸಾರ್ಹ ಸಹಾಯಕಿ ನಟಾಲಿ ಹಾರ್ಪ್ ಇತ್ತೀಚೆಗೆ ಹೆಚ್ಚಿನ ಗಮನ ಸೆಳೆದಿದ್ದಾರೆ. ಹೆಚ್ಚು ಪ್ರಚಾರದಲ್ಲಿರದಿದ್ದರೂ ಟ್ರಂಪ್ ಅವರೊಂದಿಗೆ ನಿರಂತರವಾಗಿ ಪ್ರಯಾಣಿಸುವ ಹಾರ್ಪ್, ಟ್ರಂಪ್ ಅವರಿಗೆ ತಲುಪುವ ಮಾಹಿತಿಯನ್ನು ನಿರ್ವಹಿಸುವಲ್ಲಿ ಹಾಗೂ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಷ್ಟು ದಿನ ತೆರೆಮರೆಯಲ್ಲಿದ್ದ ಅವರು ದಿಢೀರನೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದ್ದು ಹೇಗೆ? ಎಂದು ಕೇಳಿದರೆ, ಡೆಮಾಕ್ರಟಿಕ್ ಸಂಸದ ಜಾನ್ ಓಸಾಫ್ ಅವರ ಹೇಳಿಕೆ ಮತ್ತು ಅದಕ್ಕೆ ಟ್ರಂಪ್ ಆಡಳಿತ ನೀಡಿದ ತೀವ್ರ ಪ್ರತಿಕ್ರಿಯೆಯೇ ಇದಕ್ಕೆ ಕಾರಣ.
►ಯಾರು ಈ ನಟಾಲಿ ಹಾರ್ಪ್?
35 ವರ್ಷದ ಹಾರ್ಪ್ ಕ್ಯಾಲಿಫೋರ್ನಿಯಾದಲ್ಲಿ ಬೆಳೆದವರು. 2012ರಲ್ಲಿ ಸ್ಯಾನ್ ಡಿಯಾಗೋದ ಕ್ರಿಶ್ಚಿಯನ್ ಲಿಬರಲ್ ಆರ್ಟ್ಸ್ ಕಾಲೇಜಾದ ಪಾಯಿಂಟ್ ಲೋಮಾ ನಝರೇನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ನಂತರ 2015ರಲ್ಲಿ ವರ್ಜೀನಿಯಾದ ಲಿಬರ್ಟಿ ವಿಶ್ವವಿದ್ಯಾಲಯದಿಂದ MBA ಪದವಿ ಪೂರ್ಣಗೊಳಿಸಿದರು.
►ಕ್ಯಾನ್ಸರ್ನಿಂದ ಚೇತರಿಸಿಕೊಂಡು ಗಮನ ಸೆಳೆದಿದ್ದ ಹಾರ್ಪ್
ನಟಾಲಿ ಹಾರ್ಪ್ ಅವರು ಕ್ಯಾನ್ಸರ್ನೊಂದಿಗೆ ಹೋರಾಡಿದ ತಮ್ಮ ಅನುಭವದ ಮೂಲಕವೇ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. 2019ರಲ್ಲಿ ಲಿಂಕ್ಡ್ಇನ್ನಲ್ಲಿ "I’m Living Proof – the Party of Healthcare is Trump’s" ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಲೇಖನದಲ್ಲಿ, ತಮ್ಮ ಮೂಳೆ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಹಂಚಿಕೊಂಡಿದ್ದರು. ಟ್ರಂಪ್ ಅವರು 2018ರಲ್ಲಿ ಜಾರಿಗೆ ತಂದ 'ರೈಟ್ ಟು ಟ್ರೈ' (Right to Try) ಕಾಯ್ದೆಯೇ ತಮ್ಮ ಹೊಸ ಚಿಕಿತ್ಸೆಗೆ ನೆರವಾಯಿತು ಎಂದು ಅವರು ಅದರಲ್ಲಿ ಬರೆದುಕೊಂಡಿದ್ದರು.
'ರೈಟ್ ಟು ಟ್ರೈ' ಕಾಯ್ದೆಯು FDA ಅನುಮತಿಯ ಅಗತ್ಯವಿಲ್ಲದೇ, ಕೇವಲ ಹಂತ-1ರ ಸುರಕ್ಷತಾ ಪರೀಕ್ಷೆಯನ್ನು ಪೂರ್ಣಗೊಳಿಸಿದ ಪ್ರಾಯೋಗಿಕ ಚಿಕಿತ್ಸೆಗಳನ್ನು ಪಡೆಯಲು ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅವಕಾಶ ನೀಡುತ್ತದೆ. ಡೆಮಾಕ್ರಟಿಕ್ ಪಕ್ಷದವರು ರೋಗಶಮನಕ್ಕಿಂತ ಹೆಚ್ಚಾಗಿ ನೋವಿನೊಂದಿಗೆ ಬದುಕುವುದು ಮತ್ತು 'ಗೌರವಯುತ ಮರಣ' ಹೊಂದುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಅವರು ಆರೋಪಿಸಿದ್ದರು. "ಡೆಮಾಕ್ರಟಿಕ್ ಪಕ್ಷದವರ ಪ್ರಕಾರ ಆರೋಗ್ಯ ರಕ್ಷಣೆ ಎಂಬುದು ಒಂದು ಹಕ್ಕು. ಆದರೆ ಆ ಹಕ್ಕು ಎಂತಹದ್ದು? ಇವೆಲ್ಲವನ್ನೂ ಸಹಿಸಿಕೊಳ್ಳುವುದಕ್ಕಾ? ಖಂಡಿತ ಇಲ್ಲ. ಡೊನಾಲ್ಡ್ ಟ್ರಂಪ್ ಇದನ್ನು ಸಂಪೂರ್ಣವಾಗಿ ಬದಲಾಯಿಸಲು ಬಯಸುತ್ತಾರೆ. ಅವರ ಪ್ರಕಾರ ಆರೋಗ್ಯ ರಕ್ಷಣೆ ಎಂಬುದು ಒಂದು ಹೋರಾಟ" ಎಂದು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದರು.
ಈ ಲೇಖನವು ಫಾಕ್ಸ್ ನ್ಯೂಸ್ ಗಮನ ಸೆಳೆಯಿತು. ತಮ್ಮ ಅನುಭವವನ್ನು ಹಂಚಿಕೊಳ್ಳಲು ಚಾನೆಲ್ ಹಾರ್ಪ್ ಅವರನ್ನು ಆಹ್ವಾನಿಸಿತು. ತದನಂತರ ಟ್ರಂಪ್ ಬಹಿರಂಗವಾಗಿಯೇ ಅವರ ಕಾರ್ಯವನ್ನು ಶ್ಲಾಘಿಸಿದರು. ಮುಂದೆ 2020ರ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್ ನಲ್ಲಿ ಮಾತನಾಡಲು ಅವರಿಗೆ ಆಹ್ವಾನ ನೀಡಲಾಯಿತು. ಅಲ್ಲಿ ಅವರು ಟ್ರಂಪ್ ಅವರನ್ನು ಉದ್ದೇಶಿಸಿ, "ನೀವು ಇಲ್ಲದಿದ್ದರೆ ನಾನು ಇಂದು ಜೀವಂತವಾಗಿರುತ್ತಿರಲಿಲ್ಲ" ಎಂದು ಹೇಳಿದರು. ಆದರೆ, ಅವರಿಗೆ ದೊರೆತ ಚಿಕಿತ್ಸೆಗೆ ನಿಜವಾಗಿಯೂ 'ರೈಟ್ ಟು ಟ್ರೈ' ಕಾಯ್ದೆಯೇ ಕಾರಣವೇ ಎಂಬ ಬಗ್ಗೆ ವಾಷಿಂಗ್ಟನ್ ಪೋಸ್ಟ್ ವರದಿ ಸಂಶಯ ವ್ಯಕ್ತಪಡಿಸಿತ್ತು. ಕಾಲಮಿತಿಯ ಆಧಾರದ ಮೇಲೆ ತಜ್ಞರು ಈ ವಾದವನ್ನು ತಿರಸ್ಕರಿಸಿದ್ದರು.
►ಟ್ರಂಪ್ ಅವರಿಗೆ ಆಪ್ತರಾಗಿದ್ದು ಹೇಗೆ?
ರಿಪಬ್ಲಿಕನ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಹಾರ್ಪ್, ಟ್ರಂಪ್ ಅವರ ರಾಜಕೀಯ ವಲಯದಲ್ಲಿ ಹೆಚ್ಚು ಸಕ್ರಿಯರಾದರು. ಅವರು ತಮ್ಮ ತಾಯಿಯೊಂದಿಗೆ ಕ್ಯಾಲಿಫೋರ್ನಿಯಾ ತೊರೆದು, ಟ್ರಂಪ್ ಅವರ ಮಾರ್-ಎ-ಲಾಗೋ ಎಸ್ಟೇಟ್ ಬಳಿಯಿರುವ ಫ್ಲೋರಿಡಾಗೆ ವಾಸ ಬದಲಿಸಿದರು. 2020ರಲ್ಲಿ 'ಒನ್ ಅಮೆರಿಕ ನ್ಯೂಸ್ ನೆಟ್ವರ್ಕ್' (OANN) ಸೇರಿದ ಅವರು, ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಾ 2020ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಟ್ರಂಪ್ ವಾದಗಳನ್ನು ಬೆಂಬಲಿಸಿ ಪ್ರಚಾರ ಮಾಡಿದರು. 2022ರಲ್ಲಿ OANN ಸಂಸ್ಥೆಯನ್ನು ತೊರೆದ ಅವರು, ನೇರವಾಗಿ ಟ್ರಂಪ್ ಅವರೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.
ಡೊನಾಲ್ಡ್ ಟ್ರಂಪ್ ಅವರು ಮತ್ತೆ ಶ್ವೇತಭವನಕ್ಕೆ ಮರಳಲು ನಡೆಸಿದ ಚುನಾವಣಾ ಪ್ರಚಾರದ ಸಮಯದಲ್ಲಿ, ನಟಾಲಿ ಹಾರ್ಪ್ ತಮ್ಮ ಸಹೋದ್ಯೋಗಿಗಳಲ್ಲಿ ‘ಹ್ಯೂಮನ್ ಪ್ರಿಂಟರ್’ (Human Printer) ಎಂದೇ ಪ್ರಸಿದ್ಧರಾಗಿದ್ದರು. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಟ್ರಂಪ್ ಅವರಿಗೆ ಕಾಗದದ ಮೇಲಿರುವ ಸುದ್ದಿ ಹಾಗೂ ಮಾಹಿತಿಯನ್ನು ಓದಲು ಹೆಚ್ಚಿನ ಆಸಕ್ತಿಯಿರುವುದರಿಂದ, ಹಾರ್ಪ್ ಅವರು ಪೋರ್ಟಬಲ್ ಪ್ರಿಂಟರ್ ಮತ್ತು ಬ್ಯಾಟರಿ ಪ್ಯಾಕ್ ಹಿಡಿದುಕೊಂಡು ಅವರನ್ನು ಹಿಂಬಾಲಿಸುತ್ತಿದ್ದರು.
ದಿ ಗಾರ್ಡಿಯನ್ ವರದಿಯ ಪ್ರಕಾರ, ಹಾರ್ಪ್ ಪ್ರಸ್ತುತ ಅಧ್ಯಕ್ಷರ ವಿಶೇಷ ಸಹಾಯಕಿಯಾಗಿ ಹಾಗೂ ಕಾರ್ಯನಿರ್ವಾಹಕ ಸಹಾಯಕಿಯಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ 150,000 ಡಾಲರ್ (ಅಂದಾಜು 1.43 ಕೋಟಿ ರೂಪಾಯಿ) ವೇತನ ಪಡೆಯುತ್ತಿದ್ದಾರೆ. ಟ್ರಂಪ್ ಅವರೊಂದಿಗೆ ನಿರಂತರವಾಗಿ ಇರುತ್ತಾ, ಅವರ ‘ಟ್ರುತ್ ಸೋಶಿಯಲ್’ (Truth Social) ಖಾತೆಯ ಪೋಸ್ಟ್ಗಳನ್ನು ತೋರಿಸುವುದು ಹಾಗೂ ವಿಷಯಗಳನ್ನು ಪ್ರಕಟಿಸುವುದು ಸೇರಿದಂತೆ ಅವರ ಮಾಧ್ಯಮ ಸಂವಹನ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.
►ಈಗ ಸುದ್ದಿಯಲ್ಲಿರಲು ಕಾರಣವೇನು?
ಇತ್ತೀಚೆಗೆ ಇರಾನ್ನಿಂದ ಜೀವ ಬೆದರಿಕೆ ಇದೆ ಎಂಬ ಕಾರಣಕ್ಕೆ ಟ್ರಂಪ್ ಅವರು ಟರ್ಕಿಯಲ್ಲಿ ರಹಸ್ಯವಾಗಿ ವಿಮಾನ ಬದಲಾಯಿಸಿದಾಗ ಹಾರ್ಪ್ ಅವರ ಉಪಸ್ಥಿತಿ ಹೆಚ್ಚು ಚರ್ಚೆಗೆ ಬಂದಿತು. ಅಪಾಯದಲ್ಲಿದೆ ಎನ್ನಲಾದ ವಿಮಾನದಲ್ಲಿ ಇತರ ಸಿಬ್ಬಂದಿ ಮತ್ತು ಪತ್ರಕರ್ತರು ಪ್ರಯಾಣಿಸಿದರೆ, ಟ್ರಂಪ್ ಅವರೊಂದಿಗೆ ಸೇನಾ ವಿಮಾನದಲ್ಲಿ ಪ್ರಯಾಣಿಸಿದ ಕೆಲವೇ ಕೆಲವು ಆಪ್ತ ಸಿಬ್ಬಂದಿಯಲ್ಲಿ ಹಾರ್ಪ್ ಕೂಡ ಒಬ್ಬರಾಗಿದ್ದರು.
ಡೆಮಾಕ್ರಟಿಕ್ ಸಂಸದ ಜಾನ್ ಓಸಾಫ್ ಅವರ ಹೇಳಿಕೆ ಈ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿತು. ಟ್ರಂಪ್ ಅವರು ತಮ್ಮ ಅಧ್ಯಕ್ಷೀಯ ಜವಾಬ್ದಾರಿಯನ್ನು ನಿರ್ವಹಿಸುವ ಬದಲು "ಬಾಲ್ರೂಮ್ ನಿರ್ಮಿಸುವುದು ಮತ್ತು ನಟಾಲಿ ಅವರೊಂದಿಗೆ ಪ್ರಯಾಣಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ" ಎಂದು ಓಸಾಫ್ ಇತ್ತೀಚಿನ ಚುನಾವಣಾ ಭಾಷಣದಲ್ಲಿ ಆರೋಪಿಸಿದ್ದರು.
ಈ ಹೇಳಿಕೆಗೆ ಟ್ರಂಪ್ ಆಡಳಿತ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿತು. ಓಸಾಫ್ ಅವರ ಹೇಳಿಕೆಯ ಬಗ್ಗೆ ಪ್ರಶ್ನಿಸಿದ CNN ವರದಿಗಾರ್ತಿ ಕ್ರಿಸ್ಟನ್ ಹೋಮ್ಸ್ ಅವರ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದರು. ಶ್ವೇತಭವನದ 'ರ್ಯಾ ಪಿಡ್ ರೆಸ್ಪಾನ್ಸ್' ಖಾತೆಯು ಈ ಪ್ರಶ್ನೆಯನ್ನು "ಅಸಹ್ಯಕರ ಮತ್ತು ಅಮಾನವೀಯ" ಎಂದು ಟೀಕಿಸಿತು.
ಓಸಾಫ್ ಅವರು ಪ್ರಚಾರ ಮತ್ತು ಗಮನ ಸೆಳೆಯುವ ಉದ್ದೇಶದಿಂದಲೇ ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಭಾವಿಸುತ್ತಾರೆ. ಆದರೆ ಟ್ರಂಪ್ ಆಡಳಿತ ನೀಡಿದ ತೀವ್ರ ಪ್ರತಿಕ್ರಿಯೆಯು ಓಸಾಫ್ ಅವರ ಉದ್ದೇಶಕ್ಕೆ ಇನ್ನಷ್ಟು ನೆರವಾಗಿದ್ದು, ಪ್ರಸ್ತುತ ಹಾರ್ಪ್ ಹಾಗೂ ಓಸಾಫ್ ಇಬ್ಬರೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.
ಸೌಜನ್ಯ: indianexpress.com






