ಮೆಮೊರಿ ಚಿಪ್ ಬಿಕ್ಕಟ್ಟು; ಮ್ಯಾಕ್, ಐಪ್ಯಾಡ್ ಮತ್ತು ಹೋಂಪಾಡ್ಗಳ ಬೆಲೆಯೇರಿಕೆ!

ಸಾಂದರ್ಭಿಕ ಚಿತ್ರ | Photo Credit : magnific.com
ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು ಇತ್ಯಾದಿಗಳಲ್ಲಿ ಬಳಸಲಾಗುವ DRAM ಮತ್ತು NAND ಫ್ಲ್ಯಾಶ್ನಂತಹ ಮೆಮೊರಿ ಚಿಪ್ಗಳ ಕೊರತೆಯೇ ಬೆಲೆಯೇರಿಕೆಗೆ ಮುಖ್ಯ ಕಾರಣವಾಗಿದೆ.
ಈ ತಿಂಗಳ ಆರಂಭದಲ್ಲಿ ಆ್ಯಪಲ್ ಕಂಪನಿಯಿಂದ ನಿರ್ಗಮಿಸುತ್ತಿರುವ ಸಿಇಒ ಟಿಮ್ ಕುಕ್ ಅವರು, ಮೆಮೊರಿ ಚಿಪ್ಗಳ ಬೆಲೆಯಲ್ಲಿ ಸುಸ್ಥಿರವಲ್ಲದ ಏರಿಕೆಯಿಂದಾಗಿ ಬೆಲೆಯೇರಿಕೆ ಅನಿವಾರ್ಯ ಎಂದು ಎಚ್ಚರಿಸಿದ್ದರು. ಒಂದು ವಾರದ ನಂತರ ಕಂಪನಿಯು ತನ್ನ ಅನೇಕ ಮ್ಯಾಕ್ ಮತ್ತು ಐಪ್ಯಾಡ್ಗಳ ಬೆಲೆಯನ್ನು ಏರಿಸಿತು. ಆದರೆ, ಐಫೋನ್ ಬೆಲೆ ಏರಿಸಿಲ್ಲ.
ಬೆಲೆಗಳ ಬದಲಾವಣೆಗೆ ಮೊದಲು ಆ್ಯಪಲ್ ತನ್ನ ಆನ್ಲೈನ್ ಸ್ಟೋರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿತ್ತು. ನಂತರ ಅದು ಮರಳಿ ಆನ್ಲೈನ್ಗೆ ಬಂದಾಗ ಎಲ್ಲಾ ಬೆಲೆಗಳು ಬದಲಾಗಿದ್ದವು. ಮ್ಯಾಕ್ ಬೆಲೆಗಳು ಶೇ. 15ರಿಂದ 20ರಷ್ಟು ಮತ್ತು ಐಪ್ಯಾಡ್ ಬೆಲೆಗಳು ಶೇ. 15ರಿಂದ 25ರಷ್ಟು ಏರಿವೆ. ಭಾರತದ ಆ್ಯಪಲ್ ಆನ್ಲೈನ್ ಸ್ಟೋರ್ನಲ್ಲೂ ಬೆಲೆಯೇರಿಕೆ ಪ್ರತಿಫಲಿಸಿದೆ. ಆದರೆ, ಆ್ಯಪಲ್ನ ಐಫೋನ್ಗಳಿಗೆ ಬೆಲೆಯೇರಿಕೆಯಾಗಿಲ್ಲ.
ವಿಶ್ಲೇಷಕರ ಪ್ರಕಾರ, AI ಮೂಲಸೌಕರ್ಯಗಳ ವೆಚ್ಚಗಳು ನೇರವಾಗಿ ಗ್ರಾಹಕ ಸಾಧನಗಳ ಬೆಲೆಗಳಿಗೆ ಹರಡುತ್ತಿರುವ ಸ್ಪಷ್ಟ ಉದಾಹರಣೆ ಇದಾಗಿದೆ. "AI ಚಾಲಿತ ಮೆಮೊರಿ ಕೊರತೆಯು ಈಗ ನಾವು ಹಿಂದೆಂದೂ ನೋಡಿರದ ಪ್ರಮಾಣದಲ್ಲಿ ಗ್ರಾಹಕ ಬೆಲೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹೆಚ್ಚುತ್ತಿರುವ ಮೆಮೊರಿ ವೆಚ್ಚಗಳಿಂದ ಆ್ಯಪಲ್ ಕೂಡ ಹೊರತಾಗಿಲ್ಲ" ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಐಫೋನ್ ಕಂಪನಿಯ ಅರ್ಧಕ್ಕೂ ಹೆಚ್ಚು ಆದಾಯ ತಂದುಕೊಡುತ್ತಿರುವ ಕಾರಣದಿಂದ ಆ್ಯಪಲ್ ಅದರ ಬೆಲೆಯನ್ನು ಏರಿಸಿಲ್ಲ. ಹೀಗಾಗಿ, ಆ್ಯಪಲ್ನ ಆದ್ಯತೆ ಎಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಐಫೋನ್ ಬೇಡಿಕೆ ಕಡಿಮೆಯಾಗದಂತೆ ಬೆಲೆಯೇರಿಕೆಯ ಬಿಸಿಯನ್ನು ಗ್ರಾಹಕರಿಗೆ ಕಂಪನಿ ರವಾನಿಸಿದೆ.
ಭಾರತದಲ್ಲಿ ಏರಿಕೆಯಾದ ಬೆಲೆಯನ್ನು ಮೂಲ ಬಿಡುಗಡೆ ಬೆಲೆಗಳಿಗೆ ಹೋಲಿಸಿದರೆ, ಆ್ಯಪಲ್ನ ಹಲವಾರು ಉತ್ಪನ್ನಗಳು ಸುಮಾರು ಶೇ. 14ರಿಂದ ಶೇ. 40ರಷ್ಟು ದುಬಾರಿಯಾಗಿವೆ. ಬೆಲೆಯೇರಿಕೆಯ ವಿಷಯಕ್ಕೆ ಬಂದರೆ, 10,900 ರೂ. ಬೆಲೆಯಲ್ಲಿದ್ದ ಹೋಂಪಾಡ್ ಮಿನಿ ಶೇ. 45.87ರಷ್ಟು ತೀವ್ರ ಏರಿಕೆ ಕಂಡಿದ್ದು, ಈಗ 15,900 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, 5,000 ರೂ.ಗಳಷ್ಟು ಏರಿಕೆಯಾಗಿದೆ. ಹೋಂಪಾಡ್ ಬೆಲೆ 32,900 ರೂ.ನಿಂದ 44,900 ರೂ.ಗೆ ಏರಿದೆ.
ಟ್ಯಾಬ್ಲೆಟ್ ಸಾಧನಗಳ ವಿಷಯಕ್ಕೆ ಬಂದಾಗ, 11 ಇಂಚಿನ ಐಪ್ಯಾಡ್ ಏರ್ ಶೇ. 30.82ರಷ್ಟು ಹೆಚ್ಚಳ ದಾಖಲಿಸಿದೆ. ಅದರ ಬೆಲೆ 64,000 ರೂ.ನಿಂದ 84,900 ರೂ.ಗೆ ಏರಿದೆ. 11 ಇಂಚಿನ ಐಪ್ಯಾಡ್ ಪ್ರೊ ಬೆಲೆ 99,900 ರೂ.ಗಳಿಂದ 1,19,900 ರೂ.ಗಳಿಗೆ ಏರಿದೆ.
ಈ ನಡುವೆ, ಮ್ಯಾಕ್ ಲೈನಪ್ ನಲ್ಲಿ ಮೂಲ ಮಾದರಿಯ ಮ್ಯಾಕ್ಬುಕ್ ಪ್ರೊ ಬೆಲೆ 50,000 ರೂ.ಗಳಷ್ಟು ಏರಿಕೆಯಾಗಿ, 1,89,900 ರೂ.ಗಳಿಂದ 2,39,900 ರೂ.ಗಳಿಗೆ ತಲುಪಿದೆ. ಮ್ಯಾಕ್ಬುಕ್ ಏರ್ (512GB ಮಾದರಿ) ಬೆಲೆ 18,000 ರೂ.ಗಳಷ್ಟು ಏರಿಕೆಯಾಗಿದೆ. ಮ್ಯಾಕ್ಬುಕ್ ನಿಯೊ ಬೆಲೆ 69,900 ರೂ.ನಿಂದ 79,900 ರೂ.ಗಳಿಗೆ ಏರಿದೆ. ಕೈಗೆಟುಕುವ ಕಂಪ್ಯೂಟಿಂಗ್ ಸಾಧನಗಳ ವರ್ಗಕ್ಕೆ ಆ್ಯಪಲ್ನ ಪ್ರವೇಶ ಮಾದರಿಯಾಗಿರುವ ಮ್ಯಾಕ್ಬುಕ್ ನಿಯೊ ಲೈನಪ್ನಲ್ಲಿ ಶೇ. 14.31ರಷ್ಟು ಅತಿ ಕಡಿಮೆ ಹೆಚ್ಚಳ ಕಂಡಿದೆ. ಸ್ಮಾರ್ಟ್ ಸ್ಪೀಕರ್ಗಳು ಅತಿ ಹೆಚ್ಚು ಬೆಲೆಯೇರಿಕೆ ಕಂಡಿವೆ.
ಈ ಏರಿಕೆಗಳಿಗೆ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು ಇತ್ಯಾದಿಗಳಲ್ಲಿ ಬಳಸಲಾಗುವ DRAM ಮತ್ತು NAND ಫ್ಲ್ಯಾಶ್ನಂತಹ ಮೆಮೊರಿ ಚಿಪ್ಗಳ ಕೊರತೆಯೇ ಮುಖ್ಯ ಕಾರಣವಾಗಿದೆ. AI ಕಂಪನಿಗಳು AI ಮಾದರಿಗಳಿಗೆ ತರಬೇತಿ ನೀಡಲು ಮತ್ತು ಕಾರ್ಯನಿರ್ವಹಿಸಲು ಡೇಟಾ ಕೇಂದ್ರಗಳಿಗಾಗಿ ಹೆಚ್ಚಿನ ಪ್ರಮಾಣದ ಸುಧಾರಿತ ಮೆಮೊರಿಯನ್ನು ಖರೀದಿಸುತ್ತಿರುವುದರಿಂದ, ಮೆಮೊರಿ ಪೂರೈಕೆದಾರರು ಹೆಚ್ಚಿನ ಲಾಭಾಂಶದ ಆರ್ಡರ್ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ಇತರ ಉತ್ಪನ್ನಗಳಿಗೆ ಬಳಸುವ ಮೆಮೊರಿಯ ಬೆಲೆಗಳನ್ನು ಮತ್ತಷ್ಟು ಏರಿಸಿದ್ದಾರೆ.
ಮೆಮೊರಿ ಬಿಕ್ಕಟ್ಟಿನಿಂದ ಆ್ಯಪಲ್ ಮಾತ್ರ ಬೆಲೆ ಏರಿಸಿಲ್ಲ. ಡೆಲ್ ಟೆಕ್ನಾಲಜೀಸ್, ಎಚ್ಪಿ ಮತ್ತು ಲೆನೊವೊನಂತಹ ಕಂಪನಿಗಳೂ ತಮ್ಮ ಕಂಪ್ಯೂಟರ್ಗಳು ಮತ್ತು ಲ್ಯಾಪ್ಟಾಪ್ಗಳ ಬೆಲೆಯನ್ನು ಏರಿಸಿವೆ. ಆದರೆ, ಮೆಮೊರಿ ಚಾಲಿತ ಬೆಲೆಯೇರಿಕೆಯೆಂದು ಅಧಿಕೃತವಾಗಿ ಯಾವುದೇ ಕಂಪನಿ ಘೋಷಿಸಿಲ್ಲ. ಇದೀಗ ಆ್ಯಪಲ್ ಮಾತ್ರ ಅಧಿಕೃತವಾಗಿ ಘೋಷಿಸಿ ಬೆಲೆಯೇರಿಕೆ ಮಾಡಿದೆ.






