700 ಮಂದಿಯನ್ನು ವಜಾಗೊಳಿಸಿದ ಮೆಟಾ

Photo Credit : meta.com
ವಿಫಲವಾದ ಮೆಟಾವರ್ಸ್ ಅಭಿವೃದ್ಧಿಪಡಿಸಿದ ರಿಯಾಲಿಟಿ ಲ್ಯಾಬ್ಸ್ ವಿಭಾಗ ಸೇರಿದಂತೆ ವಿವಿಧ ತಂಡಗಳ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.
ಮಾರ್ಕ್ ಝುಕರ್ಬರ್ಗ್ ನೇತೃತ್ವದ ಮೆಟಾ ಕಂಪನಿಯು ವಿವಿಧ ತಂಡಗಳಲ್ಲಿ 700 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಮುಖ್ಯವಾಗಿ ತನ್ನ ರಿಯಾಲಿಟಿ ಲ್ಯಾಬ್ಸ್ ಆಗಿರುವ ಮೆಟಾ ವರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಗಳನ್ನು ತೆಗೆದು ಹಾಕಿದೆ. ಕಂಪನಿಯು ತನ್ನ ಉನ್ನತ ಕಾರ್ಯನಿರ್ವಾಹಕರಿಗೆ ಹೊಸ ಷೇರುಗಳ ಆಯ್ಕೆಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ವಜಾದ ನೋಟೀಸ್ಗಳೂ ಬಂದಿವೆ.
ವಿಫಲವಾದ ಮೆಟಾವರ್ಸ್ ಅಭಿವೃದ್ಧಿಪಡಿಸಿದ ರಿಯಾಲಿಟಿ ಲ್ಯಾಬ್ಸ್ ವಿಭಾಗ ಸೇರಿದಂತೆ ವಿವಿಧ ತಂಡಗಳ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಇನ್ನಷ್ಟು ವಜಾಗಳ ಭಾಗವಾಗಿ ಇತ್ತೀಚೆಗಿನ ವಜಾ ನೋಟೀಸ್ ಬಂದಿದೆ ಎಂದು ಹೇಳಲಾಗಿದೆ. ಹಿಂದಿನ ವರದಿಗಳ ಪ್ರಕಾರ ಕಂಪನಿಯು ಜಾಗತಿಕವಾಗಿ 15,000 ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡುವ ಉದ್ದೇಶ ಹೊಂದಿದೆ.
ʼನ್ಯೂಯಾರ್ಕ್ ಟೈಮ್ಸ್ʼ ವರದಿಯ ಪ್ರಕಾರ ವರ್ಚುವಲ್ ರಿಯಾಲಿಟಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದ ರಿಯಾಲಿಟಿ ಲ್ಯಾಬ್ಸ್ ಸೇರಿದಂತೆ, ಮಾರಾಟಗಳು, ನೇಮಕಾತಿ ವಿಭಾಗ ಮತ್ತು ಫೇಸ್ಬುಕ್ ವಿಭಾಗಗಳಿಂದಲೂ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಇತ್ತೀಚೆಗೆ ಮೆಟಾ ತನ್ನ ಮೆಟಾವರ್ಸ್ ವಿಭಾಗವನ್ನು ಮುಚ್ಚುವುದಾಗಿ ಘೋಷಿಸಿತ್ತು. ಈ ವಿಭಾಗದಿಂದ ಕಂಪನಿ 80 ಶತಕೋಟಿ ಡಾಲರ್ಗಳಷ್ಟು (ಸುಮಾರು 8000 ಕೋಟಿ ರೂ.ಗಳು) ನಷ್ಟ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ವಜಾಗೊಂಡ ಕೆಲವು ಉದ್ಯೋಗಿಗಳಿಗೆ ಕಂಪನಿಯಲ್ಲಿ ಹೊಸ ಹುದ್ದೆಗಳನ್ನು ನೀಡಲಾಗಿದೆ. ಆದರೆ ಇವುಗಳಲ್ಲಿ ಕೆಲವು ಹುದ್ದೆಗಳಿಗಾಗಿ ಸ್ಥಳಾಂತರವಾಗಬೇಕಾದ ಅಗತ್ಯವೂ ಇದೆ. “ಮೆಟಾದಾದ್ಯಂತ ತಂಡಗಳನ್ನು ಉತ್ತಮ ಗುರಿ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಪುನರ್ರಚನೆ ಅಥವಾ ಸ್ಥಾನ ಬದಲಾವಣೆಗಳನ್ನು ಜಾರಿಗೆ ತರುತ್ತಾ ಬಂದಿದ್ದೇವೆ” ಎಂದು ಮೆಟಾ ವಕ್ತಾರರು ಹೇಳಿದ್ದಾರೆ.
ಇದೀಗ ಎರಡನೇ ಬಾರಿಗೆ ರಿಯಾಲಿಟಿ ಲ್ಯಾಬ್ಸ್ ವಿಭಾಗವನ್ನು ವಜಾಗೊಳಿಸಲಾಗುತ್ತಿದೆ. ಕಳೆದ ಜನವರಿಯಲ್ಲಿ ಮೆಟಾ ಸಂಸ್ಥೆ ರಿಯಾಲಿಟಿ ಲ್ಯಾಬ್ಸ್ ತಂಡದ 1000 ಸಿಬ್ಬಂದಿಗಳನ್ನು ವಜಾ ಮಾಡಿತ್ತು.
ಹಿರಿಯ ಅಧಿಕಾರಿಗಳಿಗೆ ಷೇರು
ಸಿಬ್ಬಂದಿಗಳ ಪ್ರಮಾಣವನ್ನು ಕಡಿತಗೊಳಿಸುತ್ತಿರುವ ಸಂದರ್ಭದಲ್ಲಿಯೇ ಮೆಟಾ ತನ್ನ ಟಾಪ್ ಕಾರ್ಯನಿವಾರ್ಹಕರಿಗೆ ಹೊಸ ಉತ್ತೇಜಕಗಳನ್ನು ನೀಡುತ್ತಿದೆ. ತನ್ನ ಉನ್ನತ ಕಾರ್ಯನಿರ್ವಾಹಕರಿಗೆ ಷೇರುಗಳನ್ನು ನೀಡುವ ಕಾರ್ಯಕ್ರಮವನ್ನು ಅದು ಇದೇ ಬುಧವಾರ ಘೋಷಿಸಿದೆ. ಈ ಯೋಜನೆಯಿಂದ ಮುಂದಿನ ಐದು ವರ್ಷಗಳಲ್ಲಿ ಮೆಟಾದ ಕೆಲವು ಹಿರಿಯ ಅಧಿಕಾರಿಗಳ ವೇತನವನ್ನು 921 ದಶಲಕ್ಷ ಡಾಲರ್ ( ಸುಮಾರು 8,660 ಕೋಟಿ ರೂ.) ಗಳಷ್ಟು ಏರಿಸಲಿದೆ. ಆದರೆ 2031ರೊಳಗೆ ಕಂಪನಿ 9 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳವನ್ನು ತಲುಪಿದರೆ ಉನ್ನತ ಅಧಿಕಾರಿಗಳಿಗೆ ಈ ಲಾಭ ದೊರೆಯಲಿದೆ. ಪ್ರಸ್ತುತ ಕಂಪನಿಯ ಮೌಲ್ಯ 1.5 ಟ್ರಿಲಿಯನ್ ಡಾಲರ್ನಷ್ಟಿದೆ.
ಮೆಟಾ ಪ್ರಕಾರ ಈ ಪ್ರೋತ್ಸಾಹಕಗಳು AI ಯುಗದಲ್ಲಿ ಪ್ರತಿಭೆಯನ್ನು ಉಳಿಸಿಕೊಳ್ಳುವ ಮತ್ತು ಭವಿಷ್ಯದ ಬೆಳವಣಿಗೆಗೆ ಬೆಂಬಲಿಸುವ ಗುರಿಯನ್ನು ಹೊಂದಿದೆ.
AI ಬೆಳೆಸುವತ್ತ ಗುರಿ
ಮೆಟಾ ಇತ್ತೀಚೆಗಿನ ತಿಂಗಳುಗಳಲ್ಲಿ AI ಬೆಳೆಸುವತ್ತ ತನ್ನ ಗಮನಹರಿಸಿದೆ. ಕಂಪನಿ ಇತ್ತೀಚೆಗೆ ಮೋಲ್ಟ್ಬುಕ್ ಮತ್ತು ಮನುಸ್ AI ನಂತರ ಸಂಸ್ಥೆಗಳನ್ನು ಖರೀದಿಸಿದ್ದು, ತನ್ನ ಏಜೆಂಟಿಕ್ AI ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ. ಮೆಟಾ ಇತ್ತೀಚೆಗೆ ಮಾಜಿ ಗೂಗಲ್ ತಜ್ಞರನ್ನೂ ನೇಮಿಸಿಕೊಂಡಿದೆ. ಆದರೆ AI ವಿಷಯಕ್ಕೆ ಬಂದಾಗ ವೆಚ್ಚವೂ ಸಾಕಷ್ಟಿದೆ. 2026 ರಲ್ಲಿ AI ಅಭಿವೃದ್ಧಿಗೆ ಸಂಸ್ಥೆ 162 ಶತಕೋಟಿ ಡಾಲರ್ ಮತ್ತು 169 ಶತಕೋಟಿ ಡಾಲರ್ ನಡುವೆ ವೆಚ್ಚ ಮಾಡುವ ಉದ್ದೇಶ ಹೊಂದಿದೆ. ಅದರಲ್ಲಿ ಹೊಸ ಡಾಟಾ ಕೇಂದ್ರಗಳನ್ನು ನಿರ್ಮಿಸುವ ಗುರಿಯೂ ಸೇರಿದೆ.
ಕಂಪನಿ ತನ್ನ AI ಮಾಡೆಲ್ ಅವಕಾಡೊವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಮೆಟಾ ಸೂಪರ್ಇಂಟೆಲಿಜೆನ್ಸ್ ಲ್ಯಾಬ್ಗಳು (MSL) ಇದನ್ನು ನಿರ್ಮಿಸಿವೆ. ಆದರೆ ಆಂತರಿಕ ಪರೀಕ್ಷೆಗಳಲ್ಲಿ ವಿಫಲವಾದ ಕಾರಣ ಅದನ್ನು ಬಿಡುಗಡೆ ಮಾಡಲಾಗಿಲ್ಲ. ಈ ಲ್ಯಾಬ್ ನೇತೃತ್ವವನ್ನು ಅಲೆಕ್ಸಾಂಡರ್ ವಾಂಗ್ ವಹಿಸಿದ್ದಾರೆ. ವಾಂಗ್ ಅವರ ಸ್ಟಾರ್ಟಪ್ Scale AI ಅನ್ನು ಸ್ವಾಧೀನಪಡಿಸಿಕೊಂಡ ನಂತರ ಮಾರ್ಕ್ ಜುಕರ್ಬರ್ಗ್ ಸ್ವತಃ ಅವರನ್ನು ನೇಮಿಸಿಕೊಂಡಿದ್ದರು.






