ವ್ಯಸನ, ಮಾನಸಿಕ ಹಾನಿಗೆ ಮೆಟಾ-ಯುಟ್ಯೂಬ್ ಹೊಣೆ ಎಂಬ ತೀರ್ಪು

Photo Credit : meta , YouTube \ logo
ಈ ತೀರ್ಪು ತಂತ್ರಜ್ಞಾನ ಕಂಪೆನಿಗಳ ವಿರುದ್ಧ ಭವಿಷ್ಯದ ಮೊಕದ್ದಮೆಗಳ ಮೇಲೂ ಪ್ರಭಾವ ಬೀರಬಹುದು.
ಯುವ ಬಳಕೆದಾರರ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವ ವ್ಯಸನಕಾರಿ ಸಾಮಾಜಿಕ ಮಾಧ್ಯಮ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದ ಆರೋಪವನ್ನು ಮೆಟಾ ವೇದಿಕೆಗಳು ಮತ್ತು ಯುಟ್ಯೂಬ್ ಕಂಪೆನಿಗಳ ಮೇಲೆ ಹೊರಿಸಲಾಗಿದೆ. ಈ ಸಂಬಂಧ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹೂಡಲಾದ ಮೊಕದ್ದಮೆಯಲ್ಲಿ ನ್ಯಾಯಾಧೀಶರು ವಾದಿಯ ಪರವಾಗಿ ತೀರ್ಪು ನೀಡಿದ್ದಾರೆ. ಅಪ್ರಾಪ್ತ ವಯಸ್ಕರ ಮೇಲೆ ತಮ್ಮ ಉತ್ಪನ್ನಗಳ ಮಾನಸಿಕ ಪರಿಣಾಮಕ್ಕೆ ಟೆಕ್ ವೇದಿಕೆಗಳನ್ನು ಹೊಣೆಗಾರರನ್ನಾಗಿ ಮಾಡಬಹುದೇ ಎಂಬ ಕಾನೂನು ಹೋರಾಟದಲ್ಲಿ ಈ ತೀರ್ಪನ್ನು ನಿರ್ಣಾಯಕ ಕ್ಷಣವೆಂದು ಪರಿಗಣಿಸಲಾಗುತ್ತಿದೆ.
ಸಾಮಾಜಿಕ ಮಾಧ್ಯಮ ಕಂಪೆನಿಗಳು ವ್ಯಸನಕಾರಿ ಉತ್ಪನ್ನ ವಿನ್ಯಾಸದ ಮೂಲಕ ಮಕ್ಕಳಿಗೆ ಹಾನಿ ಉಂಟುಮಾಡುತ್ತಿವೆ ಎಂದು ಆರೋಪಿಸಿರುವ ಸಾವಿರಾರು ವಾದಿಗಳನ್ನು ಒಳಗೊಂಡ ಪರೀಕ್ಷಾ ಪ್ರಕರಣಗಳ (ಟೆಸ್ಟ್ ಕೇಸ್ ಗಳು) ಸರಣಿಯಲ್ಲಿ ಇದು ಮೊದಲನೆಯದಾಗಿದೆ. ಈ ತೀರ್ಪು ಜಾಗತಿಕವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ. ತೀರ್ಪು ತಂತ್ರಜ್ಞಾನ ಕಂಪನಿಗಳ ವಿರುದ್ಧ ಭವಿಷ್ಯದ ಮೊಕದ್ದಮೆಗಳ ಮೇಲೂ ಪ್ರಭಾವ ಬೀರಬಹುದು ಮತ್ತು ಆನ್ ಲೈನ್ ವೇದಿಕೆಗಳು ಸಾಮಾನ್ಯವಾಗಿ ಹೊಂದಿರುವ ಹೊಣೆಗಾರಿಕೆ-ರಕ್ಷಣೆಗಳ ಮಿತಿಗಳ ಕುರಿತು ಚರ್ಚೆಯನ್ನು ಮರುರೂಪಿಸಬಹುದು.
ವಿಶ್ವದಾದ್ಯಂತ ಸರ್ಕಾರಗಳು ಮಕ್ಕಳ ಮೇಲಿನ ಸಾಮಾಜಿಕ ಮಾಧ್ಯಮದ ಪ್ರಭಾವವನ್ನು ಹೆಚ್ಚಾಗಿ ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಈ ತೀರ್ಪು ಬಂದಿದೆ. ಭಾರತದಲ್ಲಿ ನೀತಿ ನಿರೂಪಕರು ವಯೋ ಆಧಾರಿತ ನಿರ್ಬಂಧಗಳಿಂದ ಹಿಡಿದು, ವ್ಯಸನಕಾರಿ ವೈಶಿಷ್ಟ್ಯಗಳು ಮತ್ತು ಹಾನಿಕಾರಕ ವಿಷಯಗಳಿಗೆ ಅಪ್ರಾಪ್ತ ವಯಸ್ಕರು ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸುವ ಗುರಿ ಹೊಂದಿರುವ ಬಿಗಿಯಾದ ವೇದಿಕೆ ಬಾಧ್ಯತೆಗಳವರೆಗೆ ಕ್ರಮಗಳನ್ನು ಅನ್ವೇಷಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಮೂಲಕ ನಿದರ್ಶನವನ್ನು ಸ್ಥಾಪಿಸಲಾಗಿದೆ.
ಮೆಟಾ ಮತ್ತು ಯುಟ್ಯೂಬ್ ವಿರುದ್ಧ ಮಹತ್ತರ ತೀರ್ಪು
ಕೆಜಿಎಂ ಎಂಬ ಮಹಿಳೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಯುವ ವಯಸ್ಸಿನಲ್ಲಿಯೇ ಇನ್ ಸ್ಟಾಗ್ರಾಂ ಮತ್ತು ಯುಟ್ಯೂಬ್ ನಂತಹ ವೇದಿಕೆಗಳಿಗೆ ಬಲವಂತವಾಗಿ ಬಳಸುವ ಒತ್ತಡಕ್ಕೆ ತಾನು ಒಳಗಾಗಿದ್ದೆ ಎಂದು ವಾದಿ ಆರೋಪಿಸಿದ್ದಾರೆ. ಕಂಪೆನಿಗಳು ತಮ್ಮ ವೇದಿಕೆಗಳ ವಿನ್ಯಾಸ ಅಥವಾ ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯ ವಹಿಸಿವೆ ಮತ್ತು ಆ ನಿರ್ಲಕ್ಷ್ಯದಿಂದ ಉಂಟಾದ ಹಾನಿ ಗಣನೀಯವಾಗಿದೆ ಎಂದು ನ್ಯಾಯಾಧೀಶರು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಸುಮಾರು 6 ದಶಲಕ್ಷ ಡಾಲರ್ ನಷ್ಟಪರಿಹಾರ ನೀಡಲಾಗಿದೆ. ಇದರಲ್ಲಿ ಮೆಟಾ ಶೇ 70ರಷ್ಟು ಹಾಗೂ ಯುಟ್ಯೂಬ್ ಶೇ 30ರಷ್ಟು ಹೊಣೆಗಾರಿಕೆಯನ್ನು ಭರಿಸಬೇಕಾಗಿದೆ.
ಇನ್ಫಿನೈಟ್ ಸ್ಕ್ರೋಲಿಂಗ್, ಅಲ್ಗಾರಿದಮಿಕ್ ಶಿಫಾರಸುಗಳು ಮತ್ತು ನಿರಂತರ ಎಂಗೇಜ್ಮೆಂಟ್ ಲೂಪ್ ಗಳಂತಹ ವೈಶಿಷ್ಟ್ಯಗಳನ್ನು ವಿಶೇಷವಾಗಿ ಯುವ ಬಳಕೆದಾರರ ಗಮನವನ್ನು ಕೇಂದ್ರೀಕರಿಸಲು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದರ ಮೇಲೆ ವಿಚಾರಣೆ ಕೇಂದ್ರೀಕೃತವಾಗಿತ್ತು. ಈ ರೀತಿಯ ವಿನ್ಯಾಸಗೊಳಿಸಿದ ವ್ಯಸನದ ಪರಿಣಾಮವಾಗಿ ವ್ಯಕ್ತಿಗಳು ಮಾಡಿಕೊಂಡ ಆಯ್ಕೆಗಳು ಆತಂಕ ಮತ್ತು ಖಿನ್ನತೆ ಸೇರಿದಂತೆ ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಹದಗೆಡಿಸುತ್ತವೆ ಎಂದು ವಾದಿಯ ವಕೀಲರು ವಾದಿಸಿದ್ದಾರೆ.
ಎರಡೂ ಕಂಪನಿಗಳು ಈ ತೀರ್ಪಿಗೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಲು ಯೋಜಿಸಿವೆ. “ಈ ತೀರ್ಪನ್ನು ನಾವು ಒಪ್ಪುವುದಿಲ್ಲ. ನಮ್ಮ ವೇದಿಕೆಗಳಲ್ಲಿ ಸುರಕ್ಷತಾ ಪರಿಕರಗಳು ಮತ್ತು ಪೋಷಕರ ನಿಯಂತ್ರಣ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ” ಎಂದು ಅವು ತಿಳಿಸಿವೆ.
“ಹದಿಹರೆಯದವರ ಆರೋಗ್ಯ ಸಂಕೀರ್ಣವಾದ ವಿಷಯ. ಅದಕ್ಕೆ ಒಂದು ಆಪ್ ಮೇಲೆ ಸಂಪೂರ್ಣ ಹೊರೆ ಹಾಕಲಾಗದು. ಪ್ರತಿ ಪ್ರಕರಣವೂ ಭಿನ್ನವಾಗಿರುತ್ತದೆ. ಪ್ರಕರಣಗಳಲ್ಲಿಯೂ ನಾವು ನಮ್ಮ ವಾದವನ್ನು ಮಂಡಿಸಲಿದ್ದೇವೆ. ಹದಿಹರೆಯದವರನ್ನು ಆನ್ ಲೈನ್ ನಲ್ಲಿ ರಕ್ಷಿಸುವ ವಿಚಾರದಲ್ಲಿ ನಮಗೆ ಆತ್ಮವಿಶ್ವಾಸವಿದೆ” ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
“ಯುಟ್ಯೂಬ್ ಅನ್ನು ಜವಾಬ್ದಾರಿಯುತವಾಗಿ ಬೆಳೆಸಲಾಗಿದೆ. ಇದು ಸಾಮಾಜಿಕ ಜಾಲತಾಣದಂತಲ್ಲ” ಎಂದು ಗೂಗಲ್ ವಕ್ತಾರ ಹೇಳಿದ್ದಾರೆ.







