Meta ಬಿಲಿಯನ್ ಡಾಲರ್ ಇತ್ಯರ್ಥ: ಹದಿಹರೆಯದವರ ಸುರಕ್ಷತೆಗಾಗಿ ಫೇಸ್ಬುಕ್-ಇನ್ಸ್ಟಾಗ್ರಾಂನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ?

ಮೆಟಾ | Photo Credit ; facebook.com
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಹದಿಹರೆಯದ ಬಳಕೆದಾರರಿಗೆ ದೈನಂದಿನ ಬಳಕೆಯ ಮಿತಿಯನ್ನು ಹೇರುವುದು ಮತ್ತು ರಾತ್ರಿ ಬಳಕೆಗೆ ನಿರ್ಬಂಧಗಳನ್ನು ಪರಿಚಯಿಸಲು ಕಂಪನಿ ಒಪ್ಪಿಕೊಂಡಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಗಳನ್ನು ಮಕ್ಕಳಿಗೆ ಚಟವಾಗಿಸುವಂತೆ ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದ್ದು, ಆ ಪ್ಲಾಟ್ಫಾರ್ಮ್ಗಳ ಸುರಕ್ಷತೆ ಬಗ್ಗೆ ಬಳಕೆದಾರರನ್ನು ದಾರಿ ತಪ್ಪಿಸಲಾಗಿದೆ ಮತ್ತು ಯುವ ಬಳಕೆದಾರರ ಮಾಹಿತಿಯನ್ನು ಸೂಕ್ತವಲ್ಲದ ರೀತಿಯಲ್ಲಿ ಸಂಗ್ರಹಿಸಲಾಗಿದೆ ಎನ್ನುವ ಆರೋಪದಲ್ಲಿ ಇತ್ಯರ್ಥಕ್ಕೆ ಮೆಟಾ ಕಂಪನಿ ಒಪ್ಪಿಕೊಂಡಿದೆ.
ಅಮೆರಿಕದ ರಾಜ್ಯಗಳು ಹಾಕಿರುವ ಮೊಕದ್ದಮೆಯನ್ನು ಇತ್ಯರ್ಥಮಾಡಿಕೊಳ್ಳಲು 16.68 ಶತಕೋಟಿ ಡಾಲರ್ ತೆರಲು ಸಿದ್ಧವಾಗಿದೆ. ಮೆಟಾದ ಪ್ಲಾಟ್ಫಾರ್ಮ್ಗಳು ಯುವಜನರ ಮಾನಸಿಕ ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಿವೆ ಎಂದು ಅಮೆರಿಕದ 29 ರಾಜ್ಯಗಳು ಮೊಕದ್ದಮೆ ದಾಖಲಿಸಿದ್ದವು.
ಇನ್ಸ್ಟಾಗ್ರಾಂ-ಫೇಸ್ಬುಕ್ ಚಟಕ್ಕೆ ಮುಕ್ತಿ?
ಇತ್ಯರ್ಥ ಮಾಡಿಕೊಳ್ಳುವಾಗ ಮೆಟಾ ತನ್ನ ತಪ್ಪನ್ನು ನಿರಾಕರಿಸಿದೆ. ಆದರೆ, ನ್ಯಾಯಾಲಯದ ದಾಖಲೆಗಳ ಪ್ರಕಾರ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಹದಿಹರೆಯದ ಬಳಕೆದಾರರಿಗೆ ದೈನಂದಿನ ಬಳಕೆಯ ಮಿತಿಯನ್ನು ಹೇರುವುದು ಮತ್ತು ರಾತ್ರಿ ಬಳಕೆಗೆ ನಿರ್ಬಂಧಗಳನ್ನು ಪರಿಚಯಿಸಲು ಕಂಪನಿ ಒಪ್ಪಿಕೊಂಡಿದೆ.
ಈ ಇತ್ಯರ್ಥದ ನಂತರ ಮೆಟಾ ಮಕ್ಕಳಿಗೆ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ತರಲಿರುವ ಬದಲಾವಣೆಗಳೇನು?
• ಡಿಫಾಲ್ಟ್ ಆಗಿ ಮಕ್ಕಳು ದಿನಕ್ಕೆ ಎರಡು ಗಂಟೆಗಳ ಕಾಲವಷ್ಟೇ ಅಪ್ಲಿಕೇಶನ್ ಬಳಸಲು ನಿರ್ಬಂಧ ಹೇರಲಾಗುವುದು. ಈ ನಿರ್ಬಂಧವನ್ನು ಹೆತ್ತವರು ಮಾತ್ರ ಬದಲಿಸಬಹುದಾಗಿದೆ.
• 18 ವರ್ಷದೊಳಗಿನ ಬಳಕೆದಾರರಿಗೆ ಲೈಕ್ಗಳು ಮತ್ತು ಪ್ರತಿಕ್ರಿಯೆಗಳ ಕೌಂಟ್ಗಳನ್ನು ಮರೆ ಮಾಡಲಾಗುವುದು
• ಪ್ಲಾಸ್ಟಿಕ್ ಸರ್ಜರಿ ಅಥವಾ ಎಕ್ಸ್ಟ್ರೀಮ್ ಮೇಕಪ್ ಫಿಲ್ಟರ್ಗಳನ್ನು ತೆಗೆದು ಹಾಕಲಾಗುವುದು
• ವಾರದ ದಿನಗಳಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಶಾಲಾ ಸಮಯದ ನೋಟಿಫಿಕೇಶನ್ಗಳನ್ನು ನಿಷ್ಕ್ರಿಯಗೊಳಿಸಲಾಗುವುದು.
• ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಸಮಯದಲ್ಲಿ ನೋಟಿಫಿಕೇಶನ್ಗಳನ್ನು ನಿಷ್ಕ್ರಿಯಗೊಳಿಸಲಾಗುವುದು.
• ಇನ್ಸ್ಟಾಗ್ರಾಂ ಅಥವಾ ಫೇಸ್ಬುಕ್ ಅನ್ನು ಸತತವಾಗಿ 15 ನಿಮಿಷಗಳ ಕಾಲ ಬಳಸಿದ ಮೇಲೆ ಬಳಕೆದಾರರಿಗೆ ಪ್ರಾಂಪ್ಟ್ಗಳನ್ನು ನೀಡಲಾಗುತ್ತದೆ.
• 60 ಮತ್ತು 90 ನಿಮಿಷಗಳ ಬಳಕೆಯ ನಂತರ ಹೆಚ್ಚುವರಿ ಪ್ರಾಂಪ್ಟ್ಗಳು ಗೋಚರವಾಗಲಿವೆ.
• ಬಳಕೆದಾರರು ರೀಲ್ಸ್ಗಳು ಆಟೋಪ್ಲೇ ಆಗುವುದನ್ನು ನಿಷ್ಕ್ರಿಯಗೊಳಿಸಬಹುದು. ವೈಯಕ್ತೀಕರಣವನ್ನು ಆಫ್ ಮಾಡಬಹುದು. ಅಂದರೆ ಬಳಕೆದಾರರು ವೈಯಕ್ತೀಕರಣ ಆಫ್ ಮಾಡಿದರೆ ತಮ್ಮ ನಡವಳಿಕೆಗೆ ಅನುಗುಣವಾದ ಕಂಟೆಂಟ್ ಸ್ವೀಕರಿಸುವುದಿಲ್ಲ. ಬದಲಾಗಿ ಕಾಲಾನುಕ್ರಮ ಅಥವಾ ಸಾಮಾನ್ಯ ಫೀಡ್ ನೋಡಬಹುದು. ಕಸ್ಟಮೈಸ್ ಮಾಡಲಾಗುವುದಿಲ್ಲ.
ಪೋಷಕರು ಈ ಕೆಳಗಿನ ವಿವರಗಳನ್ನು ಗಮನಿಸಲು ವಿಸ್ತರಿತ ಮೇಲ್ವಿಚಾರಣಾ ಟೂಲ್ಗಳನ್ನು ಪಡೆಯಲಿದ್ದಾರೆ:
• ಅಪ್ಲಿಕೇಶನ್ ಗಳ ಮೇಲೆ ಮಕ್ಕಳು ಕಳೆದ ಸಮಯ
• ಅವರು ಹುಡುಕಾಡಿದ ಕಂಟೆಂಟ್
• ವಯಸ್ಕರು ಅಥವಾ ಅನುಮಾನಾಸ್ಪದ ಖಾತೆಗಳ ಜೊತೆಗಿನ ಸಂವಹನದ ವಿವರ
• ಆತ್ಮಹತ್ಯೆ, ಸ್ವಯಂ ಹಾನಿ ಅಥವಾ ತಿನ್ನುವ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಆತಂಕಕಾರಿ ಪದಗಳಿಗಾಗಿ ಹುಡುಕಾಟಗಳು
ಈ ಬದಲಾವಣೆಗಳನ್ನು ಮುಂದಿನ ಆರು ತಿಂಗಳ ಒಳಗೆ ಅಳವಡಿಸುವುದಾಗಿ ಮೆಟಾ ಹೇಳಿದೆ. ಬಳಕೆದಾರರ ವಯಸ್ಸಿನ ಪರಿಶೀಲನೆ ಮಾಡುವಂತಹ ಇತರ ಕ್ರಮಗಳನ್ನು ಕೈಗೊಳ್ಳಲು ಒಂದು ವರ್ಷದವರೆಗೂ ಕಾಲಾವಕಾಶವನ್ನು ಮೆಟಾ ಕೇಳಿದೆ.






