ಭಾರತದಲ್ಲಿ ಉದ್ಯೋಗಿಗಳ ವಜಾ ವದಂತಿಗೆ Google ಪ್ರತಿಕ್ರಿಯಿಸಿದ್ದು ಹೀಗೆ...

ಸಾಂದರ್ಭಿಕ ಚಿತ್ರ (Photo: PTI)
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವ ಕುರಿತು ವದಂತಿಗಳು ಹರಡಿವೆ.
ಗೂಗಲ್ ಕಂಪನಿ ಭಾರತದಲ್ಲಿ ಮುಂದಿನ ವರ್ಷ ನೇಮಕಾತಿ ಮಾಡಿಕೊಳ್ಳುವುದಿಲ್ಲ ಮತ್ತು ಬದಲಿಗೆ ವ್ಯಾಪಕವಾಗಿ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎನ್ನುವ ವರದಿಗಳನ್ನು ಗೂಗಲ್ ನಿರಾಕರಿಸಿದೆ. ನವೆಂಬರ್ 24ರ ಮಂಗಳವಾರ ‘ಎಕ್ಸ್’ ಸಾಮಾಜಿಕ ಜಾಲತಾಣದ ಬಳಕೆದಾರ ವೆಂಕಟೇಶ್ ಅಲ್ಲಾ ಅವರು ‘ಗೂಗಲ್ ಇಂಡಿಯಾದಲ್ಲಿ ಬೃಹತ್ ವಜಾಗಳು, ಏನಾಗುತ್ತಿದೆ” ಎಂದು ಬರೆದ ನಂತರ ಕಂಪನಿಯು ವಜಾದ ಸುತ್ತ ಎದ್ದಿರುವ ಊಹಾಪೋಹಗಳು ಸುಳ್ಳೆಂದು ಹೇಳಿದೆ.
ವೆಂಕಟೇಶ್ ಅಲ್ಲಾ ಅವರು ಪೋಸ್ಟ್ ಮಾಡಿದ ಕೆಲ ಕ್ಷಣಗಳ ನಂತರ ಅನಾಮದೇಯ ಪೋಸ್ಟ್ ಒಂದು ಗೂಗಲ್ನಲ್ಲಿ ಭಾರಿ ಪ್ರಮಾಣದ ವಜಾಗಳು ನಡೆಯುತ್ತಿವೆ ಎಂದು ಹೇಳಿತ್ತು. ಅದಕ್ಕೆ ಉತ್ತರಿಸಿದ ಅಧಿಕೃತ ಗೂಗಲ್ ಕ್ಲೌಡ್ ಇಂಡಿಯಾ ಖಾತೆಯು ನೇರವಾಗಿ ವಿಷಯವನ್ನು ವಿವರಿಸಿದೆ. “ಈ ವದಂತಿಗಳು ಸಂಪೂರ್ಣ ತಪ್ಪು. ಕಳೆದ ವಾರ ಗೂಗಲ್ ಕ್ಲೌಡ್ ಭಾರತದಲ್ಲಿ ಸಣ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಿದೆ. ಕೆಲಸದ ಮರು ಆದ್ಯತೆಯ ಭಾಗವಾಗಿ 30 ಜನರನ್ನು ಮಾತ್ರ ಉದ್ಯೋಗದಿಂದ ತೆಗೆದು ಹಾಕಲಾಗಿದೆ” ಎಂದು ತಿಳಿಸಿದೆ.
ಗೂಗಲ್ ನ ಕ್ಲೌಡ್ ನೀಡಿದ ಪ್ರತ್ಯುತ್ತರ ತನ್ನ ತಂಡದಲ್ಲಿ ಆಗಿರುವ ಬದಲಾವಣೆಗಳಿಗೆ ಮಾತ್ರ ಸೀಮಿತವಾಗಿದೆ. ಭವಿಷ್ಯದಲ್ಲಿ ವಜಾಗಳನ್ನು ಮಾಡಲಾಗುವುದೇ ಅಥವಾ ಇಲ್ಲವೇ ಮತ್ತು ಇತರ ಯಾವುದೇ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆಯೇ ಎಂಬ ವಿವರ ನೀಡಿಲ್ಲ.
ಅನಾಮಧೇಯ ಫೋಸ್ಟ್ ನಲ್ಲಿ ಏನಿದೆ?
ಒಂದು ಅನಾಮಧೇಯ ಪೋಸ್ಟ್ನಲ್ಲಿ ಬೆಂಗಳೂರಿನ ನಾಲ್ಕನೇ ಹಂತದ ಉದ್ಯೋಗಿ ಎಂದು ವಿವರಿಸಿರುವ ವ್ಯಕ್ತಿಯೊಬ್ಬರು ಬ್ಲೈಂಡ್ ಜಾಲತಾಣದಲ್ಲಿ ಗೂಗಲ್ ಚಾನೆಲ್ ನ ಬಗ್ಗೆ ಚರ್ಚೆಗಳನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ. ಅವರು ಎರಡು ಥ್ರೆಡ್ಗಳಿಗೆ ಲಿಂಕ್ ಮಾಡಿ ಬಾರತ ಮೂಲದ ಕ್ಲೌಡ್ ತಂಡಗಳ ಕಡಿತ, ಕೆಲಸ ತೊರೆಯುವಾಗಿನ ಕೊಡುಗೆಗಳು ಮತ್ತು ಜನವರಿಯಲ್ಲಿ ಸಂಭಾವ್ಯ ಬದಲಾವಣೆಗಳನ್ನು ಓದಿದ್ದಾಗಿ ವಿವರಿಸಿದರು. ಭಾರತೀಯ ಕ್ಲೌಡ್ ತಂಡಗಳಾದ್ಯಂತ ಜನರು ಹಠಾತ್ ಬದಲಾವಣೆಯ ಪೋಸ್ಟ್ ಮಾಡುತ್ತಿದ್ದಾರೆ. ಕಾರ್ಯಕ್ಷಮತೆಗೆ ಯಾವುದೇ ಲಿಂಕ್ ಇಲ್ಲ ಮತ್ತು ಅವರ ಅಮೆರಿಕದ ಉದ್ಯೋಗಿಗಳನ್ನು ವಜಾ ಮಾಡಿಲ್ಲ ಎಂದು ಪೋಸ್ಟ್ ಹೇಳಿದೆ.
ಪೋಸ್ಟ್ನಲ್ಲಿ ವಿವರಿಸಿರುವ ಪ್ರಕಾರ, “ಉದ್ಯೋಗಿಗಳಿಗೆ 24 ಗಂಟೆಗಳ ಒಳಗೆ ರಾಜೀನಾಮೆ ನೀಡುವಂತೆ ಮತ್ತು ಇಲ್ಲದೆ ಹೋದರೆ ವಜಾ ಮಾಡಲಾಗುವುದು ಎನ್ನುವ ಬೆದರಿಕೆಗಳನ್ನು ಕೊಟ್ಟಿರುವುದಾಗಿ ಹೇಳಲಾಗುತ್ತಿದೆ. ಕೇವಲ ಒಂದು ತಿಂಗಳ ವೇತನವನ್ನು ಮಾತ್ರ ವಜಾಗೊಳಿಸುವಾಗ ನೀಡಲಾಗಿದೆ. ಬ್ಲೈಂಡ್ನಲ್ಲಿರುವ ಪೋಸ್ಟ್ಗಳ ಪ್ರಕಾರ ಗೂಗಲ್ನ ಕ್ಲೌಡ್ ಮತ್ತು ಡೆವಲಪರ್ ತಂಡಗಳಿಗೆ ಮಾತ್ರ ವಜಾ ಸೀಮಿತವಾಗಿದೆಯೇ ಅಥವಾ ಭಾರತದಲ್ಲಿ ನೇಮಕಾತಿಯಲ್ಲಿ ವ್ಯಾಪಕ ವಜಾದ ಸೂಚನೆಯೇ ಎನ್ನುವುದು ತಿಳಿದುಬಂದಿಲ್ಲ ಎಂದು ಹೇಳಲಾಗಿದೆ.”
ಮೈಕ್ರೋಸಾಫ್ಟ್ ವಜಾದ ವದಂತಿ
ಈ ನಡುವೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಇದೇ ರೀತಿಯ ಬರಹಗಳನ್ನು ಬರೆಯುತ್ತಿದ್ದಾರೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಎರಡೂ ಕಡೆ ವಜಾಗಳು ನಡೆಯುತ್ತಿವೆ ಎನ್ನಲಾಗಿದೆ.
ಮೈಕ್ರೋಸಾಫ್ಟ್ ಕುರಿತಂತೆಯೂ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಮೈಕ್ರೋಸಾಫ್ಟ್ ಇಂಡಿಯಾ ಸಿಬ್ಬಂದಿಗಳಿಗೆ ವಜಾಗೆ ಒಪ್ಪಿಗೆ ನೀಡಿ ಕೊಡುಗೆ ಸ್ವೀಕರಿಸಲು 8 ದಿನಗಳು ಉಳಿದಿವೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಭಾರತದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ 23,000 ಉದ್ಯೋಗಿಗಳು ಇದ್ದಾರೆ. ಅವರಲ್ಲಿ ಎಷ್ಟು ಮಂದಿಗೆ ವಜಾದ ನೋಟೀಸ್ ಸಿಕ್ಕಿದೆ ಎಂದು ತಿಳಿದು ಬಂದಿಲ್ಲ.






