ಮೈಕ್ರೋವೇವ್, ಡಿಯೋಡ್ರಂಟ್, ಸಕ್ಕರೆ ಕ್ಯಾನ್ಸರ್ ಜನಕವೆ? ವೈದ್ಯರ ಅಭಿಪ್ರಾಯವೇನು?

ಸಾಂದರ್ಭಿಕ ಚಿತ್ರ | Photo Credit : indiatoday.in
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳು ರವಾನೆಯಾಗುವುದು ರೋಗ ಲಕ್ಷಣಗಳನ್ನು ನಿರ್ಲಕ್ಷಿಸುವುದು, ರೋಗ ನಿರ್ಣಯ ವಿಳಂಬವಾಗುವುದು ಅಥವಾ ತಪ್ಪು ಪರಿಹಾರಗಳನ್ನು ನಂಬಲು ಕಾರಣವಾಗುತ್ತಿದೆ.
ಮೈಕ್ರೋವೇವ್ ಬಳಸಿದರೆ ಕ್ಯಾನ್ಸರ್ ಬರುತ್ತದೆ ಅಥವಾ ಸಕ್ಕರೆ ತಿಂದರೆ ಕ್ಯಾನ್ಸರ್ ಬರುತ್ತದೆ ಎನ್ನುವ ರೀತಿಯಲ್ಲಿ ಜನರಲ್ಲಿ ಕ್ಯಾನ್ಸರ್ ಭಯ ತುಂಬಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳು ರವಾನೆಯಾಗುವುದು ರೋಗ ಲಕ್ಷಣಗಳನ್ನು ನಿರ್ಲಕ್ಷಿಸುವುದು, ರೋಗ ನಿರ್ಣಯ ವಿಳಂಬವಾಗುವುದು ಅಥವಾ ತಪ್ಪು ಪರಿಹಾರಗಳನ್ನು ನಂಬಲು ಕಾರಣವಾಗುತ್ತಿದೆ.
ಕ್ಯಾನ್ಸರ್ ಜಾಗೃತಿ ತಿಂಗಳ ಅಂಗವಾಗಿ ಈ ಬಗ್ಗೆ ವಿವರಿಸಿರುವ ಅಪೋಲೋ ಆಸ್ಪತ್ರೆಗಳ ಆಂಕೋಲಜಿ ನೆಟ್ವರ್ಕ್ನ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿರುವ ಡಾ. ಹರಿತ್ ಚತುರ್ವೇದಿ ಅವರು, ಕ್ಯಾನ್ಸರ್ ಸುತ್ತಲಿನ ಕೆಲವು ಸಾಮಾನ್ಯ ಭಯಗಳು ಮತ್ತು ತಪ್ಪು ಕಲ್ಪನೆಗಳನ್ನು ವಿವರಿಸಿದ್ದಾರೆ.
►ಕೌಟುಂಬಿಕ ಇತಿಹಾಸ ಮಾತ್ರ ಕಾರಣವಲ್ಲ
ಕ್ಯಾನ್ಸರ್ ಕುಟುಂಬದಲ್ಲಿ ಇಲ್ಲದೆ ಇದ್ದರೆ ಸುರಕ್ಷಿತ ಎಂದು ಬಹಳಷ್ಟು ಮಂದಿ ಅಂದುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಕ್ಯಾನ್ಸರ್ ಅಪಾಯ ಇದ್ದೇ ಇದೆ. ಇತರ ಎಲ್ಲಾ ರೋಗಗಳಂತೆ ಮಾರಕ ಕಾಯಿಲೆಗಳೂ ಬರಬಹುದು. ಹೀಗಾಗಿ ಜಾಗರೂಕರಾಗಿರಬೇಕು. ಸ್ತನ ಕ್ಯಾನ್ಸರ್ನಂತಹ ಕೆಲವು ಕ್ಯಾನ್ಸರ್ಗಳು ಅನುವಂಶಿಕವಾಗಿ ಬರಬಹುದು. ಆದರೆ ಶೇ 5ರಷ್ಟು ಮಾತ್ರ ಅನುವಂಶಿಕವಾಗಿರುತ್ತದೆ. ಶೇ 95ರಷ್ಟು ಮಂದಿಗೆ ಕುಟುಂಬದ ಇತಿಹಾಸ ಇರುವುದಿಲ್ಲ. ಮುಖ್ಯವಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರು ಎರಡರಿಂದ ಮೂರು ವಾರಗಳಿಗಿಂತ ಹೆಚ್ಚು ಕಾಲ ಇರುವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.
►ಸಕ್ಕರೆ ಕ್ಯಾನ್ಸರ್ ಗೆ ಆಹಾರ ನೀಡುತ್ತದೆಯೆ?
ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನಂಬಿಕೆಗಳಲ್ಲಿ ಸಕ್ಕರೆ ಕ್ಯಾನ್ಸರ್ ಗೆ ನೇರ ಕಾರಣ ಮತ್ತು ಚಿಕಿತ್ಸೆ–ಚೇತರಿಕೆ ಸಮಯದಲ್ಲಿ ಅದನ್ನು ಪೂರ್ಣವಾಗಿ ತಪ್ಪಿಸಬೇಕು ಎನ್ನುವುದೂ ಒಂದು. ಆದರೆ ದೇಹದ ಎಲ್ಲಾ ಆರೋಗ್ಯಕರ ಮತ್ತು ಅನಾರೋಗ್ಯಕರ ಜೀವಕೋಶಗಳು ಶಕ್ತಿಗಾಗಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಬಳಸುತ್ತವೆ. ಆರೋಗ್ಯಕರ ಆಹಾರವೆಂದರೆ ಸಮತೋಲಿತ ಆಹಾರ. ಅದರಲ್ಲಿ ಪ್ರೋಟೀನ್, ಫೈಬರ್ ಮತ್ತು ಇತರ ಪೌಷ್ಟಿಕ ಅಂಶಗಳು ಇರುತ್ತವೆ. ಹೀಗಾಗಿ ಕ್ಯಾನ್ಸರ್ ರೋಗಿಗಳು ಸೂಕ್ತ ಪ್ರಮಾಣದಲ್ಲಿ ಸಕ್ಕರೆ ಸೇವಿಸಬಹುದು.
►ಮೈಕ್ರೋವೇವ್ಗಳು ಮತ್ತು ಡಿಯೋಡ್ರಂಟ್ ಗಳು ಕ್ಯಾನ್ಸರ್ ಜನಕವೆ?
ಆನ್ ಲೈನ್ ನಲ್ಲಿ ವೈರಲ್ ಆಗಿರುವ ಸಂದೇಶಗಳಲ್ಲಿ ಮೈಕ್ರೋವೇವ್, ಡಿಯೋಡ್ರಂಟ್ ಗಳು ಹಾಗೂ ಸ್ಟವ್ ಪಕ್ಕ ಅಡುಗೆ ಮಾಡುವ ಬಗ್ಗೆ ಇರುವ ಆತಂಕವನ್ನು ವೈದ್ಯರು ತಳ್ಳಿ ಹಾಕಿದ್ದಾರೆ. ಈ ನಂಬಿಕೆಗೆ ಯಾವುದೇ ಪುರಾವೆಗಳಿಲ್ಲ. ಹೆಚ್ಚು ಸಂಸ್ಕರಿಸಿದ ಆಹಾರಗಳು ಆರೋಗ್ಯಕ್ಕೆ ಸೂಕ್ತವಲ್ಲದಿದ್ದರೂ, ಮೈಕ್ರೋವೇವ್ ಗಳು ಸ್ವತಃ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದಿಲ್ಲ. ಆರೋಗ್ಯಕರ, ತಾಜಾ ಆಹಾರ ಉತ್ತಮ ಎನ್ನುತ್ತಾರೆ ವೈದ್ಯರು.
ಹಾಗೆಯೇ ಡಿಯೋಡ್ರಂಟ್ ಗಳ ಕುರಿತ ಸಾಮಾಜಿಕ ಮಾಧ್ಯಮ ಚಾಲಿತ ಭಯವೂ ತಪ್ಪು. ಸಾಕಷ್ಟು ತಪ್ಪು ಮಾಹಿತಿ ವಾಟ್ಸ್ಆಪ್ನಲ್ಲಿ ಹರಿದಾಡುತ್ತದೆ. ಆದರೆ ಡಿಯೋಡ್ರಂಟ್ ಗಳು ಮಾರಕವೆನ್ನುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ.
►ನೈಸರ್ಗಿಕ ಪರಿಹಾರಗಳು ಕ್ಯಾನ್ಸರ್ ಗೆ ಉತ್ತಮವೆ?
“ಕ್ಯಾನ್ಸರ್ ಗೆ ಸೂಕ್ತ ನೈಸರ್ಗಿಕ ಚಿಕಿತ್ಸೆಗಳ ಬಗ್ಗೆ ಹೆಚ್ಚು ವೈಜ್ಞಾನಿಕ ಪುರಾವೆಗಳಿಲ್ಲ. ಅಲೋಪತಿಯಲ್ಲಿ ಆಧುನಿಕ ಕ್ಯಾನ್ಸರ್ ಚಿಕಿತ್ಸೆಯು ವೈಜ್ಞಾನಿಕ ಸಾಕ್ಷ್ಯಗಳು, ಕ್ಲಿನಿಕಲ್ ಪ್ರಯೋಗಗಳು ಮತ್ತು ಸಾಬೀತಾದ ವೈದ್ಯಕೀಯ ಪ್ರೋಟೋಕಾಲ್ ಗಳನ್ನು ಆಧರಿಸಿದೆ” ಎಂದು ಡಾ. ಚತುರ್ವೇದಿ ಹೇಳಿದ್ದಾರೆ.
►ಅಂಡಾಶಯದ ಕ್ಯಾನ್ಸರ್ ನಿಂದ ಋತುಸ್ರಾವದ ಮೇಲೆ ಪರಿಣಾಮವಿಲ್ಲ
ಅಂಡಾಶಯವು ಪೆಲ್ವಿಸ್ ನಲ್ಲಿ ಇರುತ್ತದೆ. ಪೆಲ್ವಿಸ್ ನಲ್ಲಿ ಗೆಡ್ಡೆ ಹೆಚ್ಚು ಬೆಳೆಯಬಹುದು. ಋತುಸ್ರಾವ ನಿಯಮಿತವಾಗಿ ಆಗುತ್ತಿದ್ದರೆ ಸಮಸ್ಯೆಯಿಲ್ಲ ಎಂದು ಬಹುತೇಕ ಮಹಿಳೆಯರು ನಂಬಿದ್ದಾರೆ. ಆದರೆ ಅಂಡಾಶಯದ ಕ್ಯಾನ್ಸರ್ ಹೊಟ್ಟೆಯ ಅಸ್ವಸ್ಥತೆ, ಉಬ್ಬುವುದು, ಹೊಟ್ಟೆ ತುಂಬಿದ ಭಾವನೆ ಅಥವಾ ಕಡಿಮೆ ಹಸಿವು ಮುಂತಾದ ಅಸ್ಪಷ್ಟ ಲಕ್ಷಣಗಳೊಂದಿಗೆ ಕಾಣಿಸಬಹುದು.
►ಮ್ಯಾಮೋಗ್ರಾಮ್ ಗಳಿಂದ ಕ್ಯಾನ್ಸರ್ ಬರುವುದೆ?
ಮಹಿಳೆಯರಲ್ಲಿ ಮತ್ತೊಂದು ಪ್ರಮುಖ ಭಯವೆಂದರೆ, ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಮ್ಯಾಮೋಗ್ರಾಮ್ಗಳು ಕ್ಯಾನ್ಸರ್ ಹರಡಿಸಬಹುದು ಎನ್ನುವುದು. ಆದರೆ ಆಧುನಿಕ ಡಿಜಿಟಲ್ ಇಮೇಜಿಂಗ್ ಅತ್ಯಲ್ಪ ಪ್ರಮಾಣದ ವಿಕಿರಣವನ್ನು ಮಾತ್ರ ಬಳಸುತ್ತದೆ. ಹೀಗಾಗಿ ಮ್ಯಾಮೋಗ್ರಾಮ್ ಕ್ಯಾನ್ಸರ್ ಹರಡಿಸುತ್ತದೆ ಎನ್ನುವುದು ತಪ್ಪು ಕಲ್ಪನೆ.






