ಅಲ್ಪಸಂಖ್ಯಾತರ ಮೈತ್ರಿ, ಪೊಲೀಸ್ ಕಾರ್ಯಾಚರಣೆ ಮತ್ತು ದಲಿತ ರಝಾಕಾರರ ಸಂಕಷ್ಟದ ಗತಕಾಲ

ಸರಣಿ-4
‘‘ಆ ಕ್ಷಣದಲ್ಲಿ ನಮ್ಮನ್ನು ಎಚ್ಚರಿಸಿದ ಕಾರಣ ನಾವಿಂದು ಜೀವಂತ ಇದ್ದೇವೆ. ಹಿಂದಿನ ದಿನವಷ್ಟೇ ದಾಳಿ ಜಾರಿ, ಮಹರ್ ರ ವಿರುದ್ಧ ದಾಳಿ! ಎಂದು ಕೂಗುತ್ತಾ ಅವರು ಖಾಪರ್ಟಾನ್‌ನಲ್ಲಿ ದಲಿತರ ಮೇಲೆ ದಾಳಿ ಮಾಡಿದ್ದರು’’( ಗವಾನೆ, ೧೯೯೬)
‘‘ಪೊಲೀಸ್ ಕಾರ್ಯಾಚರಣೆಯ ಬಳಿಕ ರಝಾಕಾರರೂ ಅಂಥಾ ದೌರ್ಜನ್ಯ ಅನುಭವಿಸಿರಲಾರರು. ಅಂದು ಎದುರಾದದ್ದನ್ನು ನೆನಪಿಸಿಕೊಂಡರೆ ಇಂದು ನೋಡುತ್ತಿರುವುದು ಇನ್ನೂ ಭೀಕರ’’ (ಶ್ರೀಸತ್, ಅಸ್ತಿತ್ವ ಮ್ಯಾಗಜೀನ್, ೧೯೭೮).
೧೯೭೮ರಲ್ಲಿ ಔರಂಗಾಬಾದ್‌ನ ಮರಾಠಾವಾಡಾ ವಿಶ್ವವಿದ್ಯಾನಿಲಯವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಪುನರ್ನಾಮಕರಣಗೊಳಿಸಿ ಮಹಾರಾಷ್ಟ್ರ ವಿಧಾನಸಭೆ ನಿರ್ಣಯ ಅಂಗೀಕರಿಸಿತು. ಇದು ಮರಾಠಾವಾಡಾ ಪ್ರದೇಶದಲ್ಲಿ ದಲಿತರ ವಿರುದ್ಧ ವ್ಯಾಪಕ ಹಿಂಸೆಯನ್ನು ಪ್ರಚೋದಿಸಿತು. ಈ ನಾಮಕರಣವನ್ನು ವಿರೋಧಿಸಿದ್ದ ಗುಂಪು ಈ ಹಿಂಸೆಯನ್ನು ಉದ್ಘಾಟಿಸಿತು. ಈ ಪುನರ್ನಾಮಕರಣದ ಕಾರಣಕ್ಕಾದ ವ್ಯಾಪಕ, ಭೀಕರ ಹಿಂಸಾಚಾರ ೧೯೪೮ರ ಪೊಲೀಸ್ ಕಾರ್ಯಾಚರಣೆಯ ಕಾಲದಲ್ಲಿ ದಲಿತರ ಮೇಲೆ ನಡೆದ ಹಿಂಸಾಚಾರವನ್ನು ನೆನಪಿಸಿತು ಪುನರ್ನಾಮಕರಣದ ಹಿಂಸಾಚಾರಕ್ಕೆ ಬಲಿಯಾದ ದಲಿತ ಕುಟುಂಬಗಳ ಕಥನಗಳಲ್ಲಿ ಈ ನೆನಪು ಮರುಕಳಿಸಿದೆ
ಇದೇ ವೇಳೆ ವಿಲೀನಕ್ಕಾಗಿ ನಿಜಾಮನ ವಿರುದ್ಧ ಹೋರಾಡಿದ್ದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹಿಂದೂ ಮೇಲ್ಜಾತಿ ಗುಂಪುಗಳು ಈ ವಿಶ್ವವಿದ್ಯಾನಿಲಯದ ಪುನರ್ನಾಮಕರಣದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದರು. ಇವರೆಲ್ಲ ದಲಿತ ರಝಾಕಾರರು ಎಂಬ ಪದವನ್ನು ಮತ್ತೆ ಮತ್ತೆ ಪ್ರಯೋಗಿಸಿದ್ದರು.
ದಲಿತರು ಹೈದರಾಬಾದಿನ ವಿಲೀನದ ವಿರುದ್ಧವಾಗಿದ್ದರು ಎಂದು ಹೇಳಿ ಈ ಗುಂಪುಗಳು ದಲಿತರ ವಿರುದ್ಧದ ಹಿಂಸಾಚಾರವನ್ನು ಸಮರ್ಥಿಸಿಕೊಂಡವು. ಈ ಸಮಯದ ಪ್ರಚಾರ ಸಾಮಗ್ರಿಗಳು, ಬಾಬಾ ಸಾಹೇಬರು ಸ್ವತಂತ್ರ ಹೈದರಾಬಾದಿನ ಬೇಡಿಕೆಯನ್ನು ಬೆಂಬಲಿಸಿದರು ಎಂಬ ಸುಳ್ಳೇ ಅಪಮಾಹಿತಿಯನ್ನು ಹೊಂದಿದ್ದವು. ಇದು ಸತ್ಯಕ್ಕೆ ದೂರ. ಪ್ರಮುಖ ದಲಿತ ನಾಯಕರಾಗಿದ್ದ ಶ್ಯಾಮಸುಂದರ್‌ಈ ಸ್ವತಂತ್ರ ಹೈದರಾಬಾದ್ ಬೇಡಿಕೆಯನ್ನು ಬೆಂಬಲಿಸಿದ್ದರು.
ಯಾಕೆ ಈ ಬೇಡಿಕೆಗೆ ಅಸ್ತು ಎನ್ನಲಾಯಿತು?. ಅಲ್ಪಸಂಖ್ಯಾತ ಗುಂಪುಗಳ ಮೈತ್ರಿ ಹೇಗಾಯಿತು? ಹೈದರಾಬಾದಿನಲ್ಲಿ ಸೃಷ್ಟಿಯಾದ ಹಿಂದೂ ಬಹುಸಂಖ್ಯಾತ ಗುಂಪುಗಳ ಬೆದರಿಕೆಯನ್ನು ಈ ಅಲ್ಪಸಂಖ್ಯಾತ ಗುಂಪುಗಳು ಹೇಗೆ ನೋಡಿದವು? ಇದನ್ನು ಅರ್ಥ ಮಾಡಿಕೊಳ್ಳಲು ಪೊಲೀಸ್ ಕಾರ್ಯಾಚರಣೆಯ ಮೊದಲಿನ ದಶಕಗಳ ದಲಿತ ರಾಜಕೀಯದತ್ತ ಹೋಗಬೇಕು. ತನ್ನ ನಿಲುವನ್ನು ಅದು ಹೇಗೆ ಘೋಷಿಸಿಕೊಂಡಿತು ಎಂಬುದನ್ನು ನೋಡಬೇಕು.
ಆಝಾದ್ ಹೈದರಾಬಾದ್
೧೯೨೦ರಲ್ಲಿ, ಹೈದರಾಬಾದಿನಲ್ಲಿ ಸಮಾಜ ಸುಧಾರಣೆಯನ್ನು ಹೆಚ್ಚು ಮುನ್ನಡೆಸಿದ್ದು ಆರ್ಯಸಮಾಜ. ಹೊಸದಾಗಿ ಶಿಕ್ಷಣ ಪಡೆದಿದ್ದ ದಲಿತ ಯುವಕರು, ಈ ಸುಧಾರಣೆಯ ಗತಿ ಮತ್ತು ಮೂಲ ಸ್ವರೂಪದ ಬಗ್ಗೆ ಆಳವಾದ ಅತೃಪ್ತಿ ಹೊಂದಿದ್ದರು. ಪೂನಾ ಒಪ್ಪಂದದ ಸಂದರ್ಭದಲ್ಲಿ ರಾಜಕೀಯ ಪ್ರಾತಿನಿಧಿತ್ವದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹಾಗೂ ಅಂಬೇಡ್ಕರ್‌ರ ಬಲವಾದ ಸಮರ್ಥನೆಗಳ ಕಡೆಗೆ ಅವರ ಗಮನ ಹರಿಯಿತು. ಅಂಬೇಡ್ಕರ್ ಸಹ, ಬಾಂಬೆ ಪ್ರಾಂತದಿಂದಾಚೆಗೂ ತಮ್ಮ ಪ್ರಭಾವ ಮತ್ತು ಸಿದ್ಧಾಂತಗಳನ್ನು ಹರಡುತ್ತಿದ್ದರು. ೧೯೩೬ರಲ್ಲಿ, ಅಂಬೇಡ್ಕರ್ ಅವರು, ಯುವ ದಲಿತ ಚಳವಳಿಗಾರರನ್ನು ಪೂನಾದಲ್ಲಿ ನಡೆಸಲು ಆಯೋಜಿಸಿದ್ದ ‘ಅಸ್ಪಶ್ಯ ಯುವ ಸಮ್ಮೇಳನ’ದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು. ಬಿ.ಎಸ್. ವೆಂಕಟರಾವ್, ಪಿ.ಆರ್. ವೆಂಕಟರಾವ್, ಆರಿಗೈ ರಾಮಸ್ವಾಮಿ ಮತ್ತಿತರರು ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆ ಸಮ್ಮೇಳನವು ಅವರ ಮೇಲೆ ಆಳವಾದ ಪ್ರಭಾವ ಬೀರಿತು.ಹೈದರಾಬಾದಿಗೆ ಹಿಂದಿರುಗಿದ ಕೂಡಲೇ ಅವರು ಬಾಬಾ ಸಾಹೇಬರಿಗೆ ಬೆಂಬಲ ನೀಡಲು ಅಂಬೇಡ್ಕರ್‌ವಾದಿ ಯುವ ಸಂಘಟನೆಯನ್ನು ಸ್ಥಾಪಿಸಿದರು.
೧೯೩೮ರಲ್ಲಿ, ಆರ್ಯಸಮಾಜ, ಹಿಂದೂ ಮಹಾಸಭಾ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷಗಳು ಸತ್ಯಾಗ್ರಹ ಚಳವಳಿಗಳನ್ನು ಸಂಘಟಿಸುವುದರ ಮೂಲಕ, ಹೈದರಾಬಾದಿನಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾದವು. ಸಕ್ರಿಯ ರಾಜಕೀಯದ ಅವಶ್ಯಕತೆಯನ್ನು ಮನಗಂಡ ದಲಿತ ಚಳವಳಿಗಾರರು ಯುವ ಸಂಘಟನೆಯನ್ನು ‘ಡಿಪ್ರೆಸ್ಡ್ ಕ್ಲಾಸಸ್ ಅಸೊಸಿಯೇಷನ್’(ಡಿಸಿಎ) ಎಂದು ಬದಲಾಯಿಸಿದರು. ಡಿಸಿಎ ರಾಜಕೀಯಕ್ಕೆ ಧುಮುಕಿತು ಹಾಗೂ ಬಾಬಾ ಸಾಹೇಬರ ಹೆಜ್ಜೆಗಳನ್ನೇ ಹಿಂಬಾಲಿಸಿ, ಒಂದು ಪ್ರಭಾವಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. ಒಂದು ಮುಖ್ಯ ಬೆಳವಣಿಗೆಯೆಂದರೆ, ೧೯೩೯ರಲ್ಲಿ ಪ್ರಾಂತೀಯ ಕಾಂಗ್ರೆಸ್ ಪಕ್ಷದ ಸರಕಾರಗಳು ರಾಜೀನಾಮೆ ನೀಡಿದಾಗ, ಅದನ್ನು ‘ಬಿಡುಗಡೆಯ ದಿನ’ ವೆಂದು ಸಂಭ್ರಮಾಚರಣೆ ಮಾಡಲು ಅಂಬೇಡ್ಕರ್‌ರವರು ಹಾಗೂ ಜಿನ್ನಾರವರು ಒಟ್ಟಾಗಿ ಸೇರಿಕೊಂಡರು. ಹೈದರಾಬಾದಲ್ಲಿ, ಡಿಸಿಎ ಮತ್ತು ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್(ಎಂ.ಐ.ಎಂ.) ಎರಡೂ ಸಹಭಾಗಿತ್ವದಲ್ಲಿ, ‘ಬಿಡುಗಡೆಯ ದಿನ’ದ ಸಂಭ್ರಮಾಚರಣೆಗೆ ಸಾರ್ವಜನಿಕ ಸಭೆಯೊಂದನ್ನು ನಡೆಸಿದವು. ಇದು, ಎಂ.ಐ.ಎಂ ರಾಜಕೀಯದೊಂದಿಗೆ ಡಿಸಿಎ ಕೈ ಜೋಡಿಸಿದ್ದರ ಸೂಚಿಯಾಗಿತ್ತು
ಅಂಬೇಡ್ಕರರ ರಾಜಕೀಯ ನಿಲುವನ್ನು ನಿರ್ದೇಶಿಸಿದ ಒಂದು ಮೂಲ ತತ್ವವೆಂದರೆ ಗಾಂಧಿ ಮತ್ತು ಕಾಂಗ್ರೆಸ್‌ನ (ಮುಖ್ಯವಾಗಿ ಮೇಲ್ಜಾತಿ ಹಿಂದೂಗಳ ಸ್ಥಾನ ಎಲ್ಲವನ್ನು ಏಕೀಕರಿಸುವ ವಿಧಾನ ಕುರಿತಾದ ವಿರೋಧ ಹಾಗೂ ದಲಿತರಿಗೆಂದೇ ಒಂದು ಸ್ವಾಯತ್ತ ಅಸ್ಮಿತೆ ಮತ್ತು ರಾಜಕೀಯದ ಸೃಷ್ಟಿ. ಬ್ರಾಹ್ಮಣೇತರ ಚಳವಳಿ ಮತ್ತು ವಸಾಹತು ಸರಕಾರದಿಂದ ಬೆಂಬಲ ಪಡೆದರೂ, ಅವರು ದೇಶ ವಿಭಜನೆ ಮತ್ತು ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಶೇಖರ್ ಬಂದೋಪಾಧ್ಯಾಯರವರು, ಈ ಸವಾಲುಗಳನ್ನು ‘ದಲಿತ ರಾಜಕೀಯದ ಬಿಕ್ಕಟ್ಟು’ ಎಂದು ಗುರುತಿಸುತ್ತಾರೆ. ೧೯೪೬ರ ಚುನಾವಣೆಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಫೆಡರೇಷನ್‌ಗಳ ಸಂಪೂರ್ಣ ಸೋಲಿನಿಂದ ಈ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿತು. ಈ ಬಿಕ್ಕಟ್ಟಿಗೆ ಸ್ಪಂದಿಸಲು ಅಂಬೇಡ್ಕರರು ಪ್ರತಿಭಟನೆ ಶುರುಮಾಡಿದರು, ಪೂನಾ ಒಪ್ಪಂದವನ್ನು ಖಂಡಿಸಿದರು. ಪ್ರತ್ಯೇಕ ಎಲೆಕ್ಟೋರೇಟ್‌ಗೆ ಹಾಗೂ ಪ್ರತ್ಯೇಕ ನೆಲೆಗೆ ಬೇಡಿಕೆ ಶುರು ಮಾಡಿದರು. ಜೊತೆಗೇ, ದಲಿತ ಸಮಸ್ಯೆಯನ್ನು ಅಂತರ್‌ರಾಷ್ಟ್ರೀಯಗೊಳಿಸಲು ಚರ್ಚಿಲ್ ಮತ್ತು ಡಬ್ಲ್ಯು.ಇ.ಬಿ. ಬೋಯಿಸ್‌ರನ್ನು ಸಂಪರ್ಕಿಸಿದರು. ಆದರೆ ನಂತರ, ಕಾಂಗ್ರೆಸ್‌ನೊಂದಿಗೆ ಅವರು ಅನಿವಾರ್ಯವಾಗಿ ಒಪ್ಪಂದ ಮಾಡಿಕೊಳ್ಳಬೇಕಾಯಿತು
ಅಂಬೇಡ್ಕರ್‌ರ ಈ ಎಲ್ಲ ಪ್ರಯತ್ನಗಳೂ, ದಲಿತರನ್ನು ರಾಜಕೀಯವಾಗಿ ಕಾಪಾಡುವುದಕ್ಕಾಗಿಯೇ ಇದ್ದವು.
ಬ್ರಿಟಿಷ್ ಇಂಡಿಯಾದಲ್ಲಿ ನಡೆಯುತ್ತಿದ್ದ ಈ ರಾಜಕೀಯ ಬೆಳವಣಿಗೆಗಳನ್ನು ಶ್ಯಾಮಸುಂದರ್‌ಮತ್ತು ಡಿಸಿಎ ಚಳವಳಿಕಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹೈದರಾಬಾದಿನ ತಮ್ಮ ತಮ್ಮದೇ ಸನ್ನಿವೇಶಕ್ಕೆ ಅದನ್ನು ಸಮೀಕರಿಸಿ ನೋಡುತ್ತಿದ್ದರು. ಹೈದರಾಬಾದಿನ ರಾಜ್ಯ ರಾಜಕೀಯದಲ್ಲಿ ಬ್ರಾಹ್ಮಣೇತರರ ರಾಜಕೀಯ ಅಸ್ಮಿತೆ, ಗೈರಾಗಿದ್ದುದು ಬಹುಮುಖ್ಯ ವೈಚಿತ್ರ್ಯವಾಗಿತ್ತು. ಇದು, ಮೇಲ್ಜಾತಿ ಹಿಂದೂಗಳಿಗೆ ತಾವು ಏಕರೂಪೀ ಸಮುದಾಯವೆಂಬಂತೆ ಬಿಂಬಿಸಿಕೊಳ್ಳಲು ಅನುಕೂಲ ಮಾಡಿತು. ಮುಸ್ಲಿಮರು ಹಾಗೂ ದಲಿತರು ಈ ಹಿಂದೂ ಬಹುಸಂಖ್ಯಾತ ಸಮುದಾಯಕ್ಕೆ ಹೆದರಿದ್ದರು.
ಡಿಸಿಎ ಹೋರಾಟಗಾರರು, ಮೇಲ್ಜಾತಿ ಹಿಂದೂಗಳು ನಿಮ್ನ ವರ್ಗದ ಸಮುದಾಯದ ಅಭಿವೃದ್ಧಿಯ ಬಗ್ಗೆ ಗಂಭೀರ ಕಾಳಜಿ ಹೊಂದಿಲ್ಲವೆಂದೂ, ಜಾತ್ಯಸ್ತರು ಅಸ್ಪಶ್ಯತಾ ನಿವಾರಣೆ ಕುರಿತು ಕೇವಲ ಬಾಯಿ ಮಾತಿನ ಕಾಳಜಿ ತೋರುವವರೆಂದೂ ನಂಬಿದ್ದರು. ದಲಿತರು ಹೆಚ್ಚು ರಾಜಕೀಯ ಮತ್ತು ಆರ್ಥಿಕ ಹಕ್ಕುಗಳಿಗಾಗಿ ಒತ್ತಾಯ ಮಂಡಿಸತೊಡಗಿದ್ದರು. ೧೯೪೭ರಲ್ಲಿ, ಹೈದರಾಬಾದ್ ಪ್ರದೇಶ ರಾಜ್ಯ ಕಾಂಗ್ರೆಸ್ ದೇಗುಲ ಪ್ರವೇಶದ ಬಗ್ಗೆ ಮಾತಾಡತೊಡಗಿತು. ಆದರೆ ಡಿಸಿಎ ಸಂಘಟನೆ ಅದರೊಂದಿಗೆ ಅಂತರ ಕಾಯ್ದುಕೊಂಡಿತು.
ಶ್ಯಾಮಸುಂದರ್‌ರವರು ಅಧ್ಯಕ್ಷತೆಯಲ್ಲಿ ೧೯೪೨ರಲ್ಲಿ ಪರ್ಭಾನಿಯಲ್ಲಿ ನಡೆದ ಡಿಸಿಎ ಸಮ್ಮೇಳನಕ್ಕೆ ಒಂದು ದಿನ ಮೊದಲು ನಡೆದ ಒಂದು ಘಟನೆಯನ್ನು ಡಿಸಿಎನ ಒಬ್ಬ ನಾಯಕ ಸೊಪನ್ ರಾವ್ ಧನ್ವೆಯವರು ನೆನಪಿಸಿಕೊಂಡರು. ಒಬ್ಬ ಮುಸ್ಲಿಮ್ ನಡೆಸುತ್ತಿದ್ದ ಟೀ ಅಂಗಡಿಗೆ ಹೋದಾಗ, ಡಿಸಿಎ ಹೋರಾಟಗಾರರನ್ನು ದಲಿತರೆಂದು ಗುರುತಿಸಿದ ಅಂಗಡಿಯವನು, ಟೀಗೆ ಹಣ ಪಡೆದಿದ್ದಲ್ಲದೆ, ದಲಿತರು ಕುಡಿದ ಕಪ್‌ಗಳು ‘ಮೈಲಿಗೆ’ಯಾಗಿದ್ದರಿಂದ ಬೇರೆ ಕಪ್‌ಗಳನ್ನು ತಂದುಕೊಡುವಂತೆ ವಿನಂತಿಸಿದನು. ಮಾರನೆ ದಿನ, ಸಮ್ಮೇಳನದಲ್ಲಿ ತಮ್ಮ ಭಾಷಣದಲ್ಲಿ ಧನ್ವೆಯವರು ಈ ಘಟನೆಯನ್ನು ಪ್ರಸ್ತಾಪಿಸಿ, ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಅಸ್ಪಶ್ಯತೆ ಆಚರಿಸುತ್ತಾರೆಂದು ಹೇಳಿದರು. ಈ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಎಂ.ಐ.ಎಂ. ಸಂಘಟನೆಯವರು, ಆ ಮುಸ್ಲಿಮನ ಟೀ ಅಂಗಡಿಯನ್ನು ಧ್ವಂಸ ಮಾಡಿದರು. ಈ ಘಟನೆಯನ್ನು ಎಂ.ಐ.ಎಂ. ಪತ್ರಿಕೆಯಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟಿಸಲಾಗಿತ್ತು (ಗಾಯಕ್‌ವಾಡ್, ೧೯೯೦), ಈ ಘಟನೆ ಮುಸ್ಲಿಮರು ದಲಿತರ ವಿಮೋಚನಾ ಚಳವಳಿಗೆ ಸಹಕಾರ ನೀಡುತ್ತಾರೆಂಬ ಅಭಿಪ್ರಾಯವನ್ನು ಗಟ್ಟಿಗೊಳಿಸಿತು.
ಶ್ಯಾಮಸುಂದರ್, ಬಿ.ಎಸ್. ವೆಂಕಟರಾವ್ ಹಾಗೂ ಡಿಸಿಎಯ ಇತರ ಆ್ಯಕ್ಟಿವಿಸ್ಟರು ಹೈದರಾಬಾದಿನ ವಿಲೀನವೆಂದರೆ ಮೇಲ್ಜಾತಿ ಹಿಂದೂ ಆಳ್ವಿಕೆಯ ಆರಂಭ ಎಂದು ಭಾವಿಸಿದರು. ಭಾರತ ಒಕ್ಕೂಟದ ಬದಲು ಸ್ವತಂತ್ರ ಹೈದರಾಬಾದಿನಲ್ಲಿ ದಲಿತರ ಏಳಿಗೆಗೆ ಹೆಚ್ಚಿನ ಅವಕಾಶವಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಆಝಾದ್ ಹೈದರಾಬಾದ್‌ಗೆ ತನ್ನ ಬೆಂಬಲದ ಬಗ್ಗೆ ತಮ್ಮ ಭಾಷಣದಲ್ಲಿ ಶ್ಯಾಮಸುಂದರ್ ಸ್ಪಷ್ಟೀಕರಣ ನೀಡುತ್ತಾ ಹೀಗೆ ಹೇಳಿದರು. ರಾಜಕೀಯ ಉದ್ದೇಶಗಳಿಗಾಗಿ ನಾವು ಮುಸ್ಲಿಮರೊಂದಿಗೆ ಸಹಕರಿಸುತ್ತಿದ್ದೇವೆ. ಇದರರ್ಥ ನಾವು ಇಸ್ಲಾಂನ್ನು ಒಪ್ಪಿಕೊಳ್ಳುತ್ತಿದ್ದೇವೆ ಎಂದಲ್ಲ. ಧಾರ್ಮಿಕ ಮತಾಂತರ ಅಸ್ಪಶ್ಯರ ಸಾಮಾಜಿಕ ಸ್ಥಿತಿಯನ್ನು ಬದಲಾಯಿಸುವುದಿಲ್ಲ. ನಾವು ದಲಿತರಿಗೆ ಸಂಪನ್ಮೂಲ ಸೃಷ್ಟಿಸಲು ಯತ್ನಿಸುತ್ತಿದ್ದೇವೆ (ಗಾಯಕವಾಡ್, ೧೯೯೦) ದಲಿತರಿಗೆ ಪ್ರತ್ಯೇಕ ಚುನಾವಣಾ ಮತಗಟ್ಟೆಯ ಡಿಸಿಎಯ ಬೇಡಿಕೆಯನ್ನು ರಝಾಕಾರರೂ, ಎಂ.ಐ.ಎಂ. ಬೆಂಬಲಿಸಿದರು.
ಡಿಸಿಎಯ ಕಲ್ಯಾಣ ಕಾರ್ಯಕ್ರಮಗಳ ಬೇಡಿಕೆಗಳಿಗೆ ನಿಝಾಮ್ ತಕ್ಷಣವೇ ಸ್ಪಂದಿಸಿ, ಈ ದಮನಿತ ವರ್ಗಗಳ ವಿಶ್ವಾಸ ಗಳಿಸಲು ಸರಣಿ ಕಾನೂನುಗಳನ್ನು ಜಾರಿಗೊಳಿಸಿದನು. ಅಸ್ಪಶ್ಯರನ್ನು ಜೀತಕ್ಕಿಟ್ಟುಕೊಳ್ಳುವುದನ್ನು ರದ್ದುಗೊಳಿಸಲಾಯಿತು. ಸಾಮಾಜಿಕ ಅಸಾಮರ್ಥ್ಯ ಕಾನೂನನ್ನು ಕಿತ್ತು ಹಾಕಲಾಯಿತು. ದೇವಾಲಯ ಪ್ರವೇಶವನ್ನು ಅಧಿಕೃತಗೊಳಿಸುವ ಕಾನೂನು ಜಾರಿಗೆ ಬಂತು. ಹಾಗೇ ೧೯೪೪ರಲ್ಲಿ ಬರಡುಭೂಮಿಯನ್ನು ಭೂರಹಿತ ದಲಿತರಿಗೆ ಹಂಚಲಾಯಿತು. ದಲಿತರಿಗೆ ಶಾಲೆ ಮತ್ತು ವಿಶೇಷ ವಿದ್ಯಾರ್ಥಿ ನಿಲಯಗಳನ್ನೂ ಸ್ಥಾಪಿಸಲಾಯಿತು.
ಶ್ಯಾಮಸುಂದರ್‌ಮತ್ತು ಬಿ.ಎಸ್. ವೆಂಕಟರಾವ್ ಅವರ ಪ್ರಯತ್ನದಿಂದಾಗಿ ಎಪ್ರಿಲ್ ೧೯೪೭ರಲ್ಲಿ ದಮನಿತ ವರ್ಗಗಳ ಕಲ್ಯಾಣಕ್ಕಾಗಿ ಒಂದು ಕೋಟಿ ರೂಪಾಯಿ ನಿಧಿಯನ್ನು ನಿಝಾಮ್ ಸ್ಥಾಪಿಸಿದರು. ಆದರೆ ಈ ರಾಜ ಸಂಸ್ಥಾನದ ಭವಿಷ್ಯದ ಬಗ್ಗೆ ಅಂಬೇಡ್ಕರ್ ಮತ್ತು ಡಿಸಿಎ ಮಧ್ಯೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಹೈದರಾಬಾದ್‌ನ ಸ್ವತಂತ್ರ/ ಸ್ವಾಯತ್ತ ಸ್ಥಾನಮಾನದ ಬಗ್ಗೆ ಡಿಸಿಎ ಒಲವು ತೋರಿದರೆ, ಅಂಥಾ ಭವಿಷ್ಯದ ಅಸಾಧ್ಯತೆಯ ಬಗ್ಗೆ ಅಂಬೇಡ್ಕರ್ ಅವರಿಗೆ ಅರಿವಿತ್ತು. ಆಝಾದ್ ಹೈದರಾಬಾದ್ ವಿರುದ್ಧ ಅವರು ಹಲವಾರು ಹೇಳಿಕೆಗಳನ್ನು ನೀಡಿದರು. ಹೈದರಾಬಾದ್ ಪ್ರದೇಶ ಕಾಂಗ್ರೆಸ್ ಅದನ್ನು ವಿಸ್ತೃತವಾಗಿ ಪ್ರಚಾರ ಮಾಡಿತು.
ಅಂಬೇಡ್ಕರ್ ಅವರ ಆದ್ಯ ಅನುಯಾಯಿಗಳು ಪ್ರದೇಶ ಕಾಂಗ್ರೆಸ್ ಜೊತೆ ಸಹಕರಿಸಲು ಹೈದರಾಬಾದ್ ರಾಜ್ಯ ಪರಿಶಿಷ್ಟ ಜಾತಿ ಫೆಡರೇಶನ್ (ಎಚ್‌ಎಸ್‌ಎಸ್‌ಸಿಎಫ್) ಸ್ಥಾಪಿಸಿದರು. ಇನ್ನೊಂದೆಡೆ ಡಿಸಿಎ ನಾಯಕರಾಗಿದ್ದ ಬಿ.ಎಸ್. ವೆಂಕಟರಾವ್ ಹೈದರಾಬಾದ್ ಸರಕಾರದಲ್ಲಿ ಸಚಿವರಾದರು. ವಿಲೀನದ ವಿರುದ್ಧ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲು ತೆರಳಿದ ನಿಯೋಗದ ಸದಸ್ಯರಾಗಿ ಶ್ಯಾಮಸುಂದರ್ ಆಯ್ಕೆಯಾದರು.
ಸೈನ್ಯದ ಕಾರ್ಯಾಚರಣೆಯ ಬಳಿಕ ಮುಸ್ಲಿಮರ ಜೊತೆ ದಲಿತರನ್ನೂ ಆಝಾದ್ ಹೈದರಾಬಾದ್ ಆಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಶಿಕ್ಷಿಸಲಾಯಿತು. ಶ್ಯಾಮಸುಂದರ್ ಮತ್ತು ಬಿಎಸ್. ವೆಂಕಟರಾವ್ ಇಬ್ಬರನ್ನೂ ಬಂಧಿಸಲಾಯಿತು. ಪಿ.ಆರ್. ವೆಂಕಟಸ್ವಾಮಿಯವರು ತಮ್ಮ ಆತ್ಮಕಥಾನಕ, ಬಿಡುಗಡೆಗಾಗಿ ನಮ್ಮ ಹೋರಾಟ ಕೃತಿಯಲ್ಲಿ ಮುಸ್ಲಿಮರು ಹಾಗೂ ದಲಿತರು ಅನುಭವಿಸಿದ ಸಂಕಷ್ಟದ ಬಗ್ಗೆ ಬರೆದಿದ್ದಾರೆ.
‘‘ಅಧಿಕಾರದ ಅಮಲಿನ ರಝಾಕಾರರ ನಾಯಕರ ಮೂರ್ಖತನವು ನೂರಾರು ಮುಸ್ಲಿಮರು ಮತ್ತು ದಮನಿತ ದಲಿತರ ಹತ್ಯೆಗೆ ಕಾರಣವಾಯಿತು. ಪರ್ಭಾನಿ, ನಾಂದೇಡ್, ಔರಂಗಾಬಾದ್ ಹಾಗೂ ಬೀದರಗಳು ತೀವ್ರ ಸಂಕಷ್ಟಕ್ಕೊಳಗಾದವು. ಅಪಾರ ಮುಗ್ಧರ ನೆತ್ತರು ಇಲ್ಲಿ ಹರಿಯಿತು’’(ಪುಟ ೫೧೮)
ಪೊಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ ದಲಿತರ ವಿರುದ್ಧ ನಡೆದ ಹಿಂಸೆಯ ಬಗ್ಗೆ ಹಲವಾರು ದೂರುಗಳು ಅಂಬೇಡ್ಕರ್ ಅವರಿಗೆ ತಲುಪಿದವು. ಈ ಕಾರಣಕ್ಕೆ ಮಿಲಿಟರಿ ಆಡಳಿತಾಧಿಕಾರಿಯಾಗಿದ್ದ ಜೆ.ಎನ್. ಚೌಧರಿ ಅವರಿಗೆ ಅಂಬೇಡ್ಕರ್ ಪತ್ರವೊಂದನ್ನು ಬರೆದು, ಅದರಲ್ಲಿ ಎಲ್ಲಾ ದಲಿತರೂ ರಝಾಕಾರರಲ್ಲ ಎಂದು ಸ್ಪಷ್ಟೀೀಕರಣ ನೀಡಿದರು. ಪರಿಶಿಷ್ಟ ಜಾತಿ ಫೆಡರೇಶನ್ ಸದಸ್ಯರು ತಮ್ಮ ಅನುಯಾಯಿಗಳಾಗಿದ್ದು ಅವರು ಶಿಕ್ಷೆಗೊಳಪಡಬಾರದು ಎಂದೂ ಒತ್ತಾಯಿಸಿದರು. (ನರ್ವಾಡೆ, ೨೦೧೧ ಪು.೭೪)
ಶ್ಯಾಮಸುಂದರ್ ಮತ್ತು ಅಲ್ಪಸಂಖ್ಯಾತ ಮೈತ್ರಿ:
ಬಹುಸಂಖ್ಯಾತ ಹಿಂದೂಗಳ ಸರ್ವಾಧಿಕಾರದ ಬಗ್ಗೆ ಅಂಬೇಡ್ಕರ್ ಮತ್ತು ಶ್ಯಾಮಸುಂದರ್ ಇಬ್ಬರೂ ಆತಂಕಗೊಂಡಿದ್ದರು. ಆದರೆ ಅದನ್ನು ನಿಭಾಯಿಸಲು ಬೇರೆ ಬೇರೆ ಹಾದಿ ಹಿಡಿದರು. ಅಂಬೇಡ್ಕರ್ ಅವರು ಪ್ರತ್ಯೇಕ ಮತವ್ಯವಸ್ಥೆ ಹಾಗೂ ನೆಲೆಯ ಬೇಡಿಕೆ ಮೂಲಕ ದಲಿತರಿಗೊಂದು ಸ್ವಾಯತ್ತ ರಾಜಕೀಯವನ್ನು ಸೃಷ್ಟಿಸಲು ಯತ್ನಿಸಿದರು. ತರುವಾಯದ ಅಂಬೇಡ್ಕರ್‌ವಾದಿ ದಲಿತ ರಾಜಕೀಯ ಜಾತಿ ಭಿನ್ನತೆಯನ್ನು ಬಳಸಿತೇ ವಿನಃ ಉಳಿದ ಅಲ್ಪಸಂಖ್ಯಾತ ಗುಂಪುಗಳ ಜೊತೆ ಮೈತ್ರಿಗೆ ಯತ್ನಿಸಲೇ ಇಲ್ಲ.
ವಿಲೀನದ ಬಳಿಕವೂ ಶ್ಯಾಮಸುಂದರ್ ಮೇಲ್ಜಾತಿ ಹಿಂದೂಗಳ ಯಜಮಾನಿಕೆ ವಿರುದ್ಧ ಹೋರಾಟ ಮುಂದುವರಿಸಿದರು. ಅಲ್ಪಸಂಖ್ಯಾತ ಫೆಡರೇಶನ್ ಕಟ್ಟಲು ಯತ್ನಿಸಿದರು. ಭಾರತದ ವಿಭಜನೆ ಭಾರತದ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನವನ್ನು ಬದಲಾಯಿಸಿದೆ ಎಂದು ಅವರಿಗೆ ಅರ್ಥವಾಗಿತ್ತು. ಈ ಸ್ಥಿತ್ಯಂತರದ ಹೊರತಾಗಿಯೂ ಬೇರೆ ಬೇರೆ ಅಲ್ಪಸಂಖ್ಯಾತ ಗುಂಪುಗಳ ಜೊತೆ ಮೈತ್ರಿ ಸೃಷ್ಟಿಸಲು ತಮ್ಮ ಪ್ರಯತ್ನ ಮುಂದುವರಿಸಿದರು. ೧೯೭೦ರಲ್ಲಿ ಮುಸ್ಲಿಮರುನ್ನುದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ ಇದು ವ್ಯಕ್ತವಾಗುತ್ತದೆ.
‘‘ಇಂದಿನ ಭಾರತದ ಮುಸ್ಲಿಮರು ನಿನ್ನೆಯ ಅಸ್ಪಶ್ಯರಿಗಿಂತ ಉತ್ತಮರಾಗೇನೂ ಇಲ್ಲ. ಯಾವುದೇ ವೈರುಧ್ಯದ ಭಯ ಇಲ್ಲದೆ ಕಹಿ ಸತ್ಯ ಹೇಳಲೇಬೇಕೆಂದರೆ ನೀವು ನಾಳೆಯ ಅಸ್ಪಶ್ಯರಾಗಲು ಹೆಜ್ಜೆ ಇಟ್ಟಿದ್ದೀರಿ. ಈ ರಾಜಕೀಯ ವಾಸ್ತವ ನಿಮ್ಮ ಮನಸ್ಸಿನಲ್ಲಿರಬೇಕು. ಇದಕ್ಕಿಂತ ಭಿನ್ನವಾದ ಯಾವುದೇ ವೃತ್ತಿ, ಹಗಲುಗನಸುಗಳು ನಿಮಗಿದ್ದರೂ’’ (ಬಾತುಲಾ, ೨೦೦೬)
‘ಹಿಂದೂ ಆಳ್ವಿಕೆ’ ಎಲ್ಲಾ ಅಲ್ಪಸಂಖ್ಯಾತರಿಗೂ ಮಾರಕ ಎಂಬ ಶ್ಯಾಮಸುಂದರ್ ಅವರ ಮಾತಿನಲ್ಲಿ ಆಳ ತಿಳುವಳಿಕೆ ಇದೆ.
ಮೇಲ್ಜಾತಿ ಹಿಂದೂಗಳ ಯಜಮಾನಿಕೆಯಿಂದ ಪಾರಾಗಲು ಅವರು ಅಲ್ಪಸಂಖ್ಯಾತ ಫೆಡರೇಶನ್ ರಚನೆ, ಜನಸಂಖ್ಯಾಧಾರಿತ ಪ್ರಮಾಣ ಬದ್ಧ ಪ್ರಾತಿನಿಧ್ಯ ಆಧರಿಸಿದ ಬಹುಸದಸ್ಯ ಕ್ಷೇತ್ರ ಕ್ರೋಡೀಕೃತ ಮತ, ಅಲ್ಪಸಂಖ್ಯಾತರ ಸ್ಥಾನಮಾನ ಹೆಚ್ಚಿಸಲು ರಾಜ್ಯ ಗಡಿ ಪುನರ್ನಿರ್ಮಾಣ ಇತ್ಯಾದಿಗಳನ್ನು ಪ್ರಸ್ತಾಪಿಸಿದರು. ‘‘Aqliyatoun ka Nara Hindustan Hamara’’ ಎಂಬ ಘೋಷಣೆ ಅವರ ರಾಜಕೀಯ ಭಾವನೆಗಳನ್ನು ಹಿಡಿದಿಡುತ್ತದೆ.
ರಝಾಕಾರ ಎಂಬ ಲೇಬಲ್ ಶ್ಯಾಮಸುಂದರ್‌ಅವರಿಗೆ ಸದಾ ಅಂಟಿಕೊಂಡಿತು.ಅವರನ್ನು ಸಲೀಸಾಗಿ ಅಂಚಿಗೆ ತಳ್ಳಿ ವಿಸ್ಮತಿಗೆ ಸರಿಸಲು ಇದು ಕಾರಣವಾಯಿತು. ಅವರ ರಾಜಕೀಯ ಬದುಕಿನ ಸಮಗ್ರ ವಿವರಗಳೇ ಇಲ್ಲದಿರುವಾಗ ಅಲ್ಲಿ ಇಲ್ಲಿ ದೊರಕುವ ಉಲ್ಲೇಖಗಳಿಂದಷ್ಟೇ ಶ್ಯಾಮಸುಂದರ್‌ಅವರ ರಾಜಕೀಯದ ಪ್ರಭಾವವನ್ನು ಪುನರ್‌ಸೃಷ್ಟಿಸಬೇಕಷ್ಟೇ.
ಬೀದರ್‌ನಲ್ಲಿ ನಾನು ಶ್ಯಾಮಸುಂದರ್ ಅವರ ಅನುಯಾಯಿಯೊಬ್ಬರನ್ನು ಭೆಟ್ಟಿಯಾಗಿದ್ದೆ. ಅವರು ನನ್ನೊಡನೆ, ಜಗತ್ತು ಅವರನ್ನು ಮರೆಯಬಹುದು, ಆದರೆ ಹಳೆ ಹೈದರಾಬಾದಿನ ದಲಿತರು ಮರೆಯಲಾರರು. ನಾವು ಅಂಬೇಡ್ಕರ್‌ರ ಕೋಟನ್ನು ಧರಿಸಬಹುದು. ಆದರೆ ಶ್ಯಾಮಸುಂದರ್‌ಅವರ ಫೋಟೋವನ್ನು ಹೃದಯಕ್ಕೆ ಸನಿಹ ಇರುವ ಜೋಬಲ್ಲಿ ಇಟ್ಟುಕೊಳ್ಳುವುದನ್ನು ಮರೆಯುವುದಿಲ್ಲ. ಎಂದು ಹೇಳಿದರು. ಶ್ಯಾಮಸುಂದರ್‌೧೯೭೫ರಲ್ಲಿ ಕೊನೆಯುಸಿರೆಳೆದರು. ಒಂದು ಶೆರ್ವಾನಿ ಮತ್ತು ಕೆಲವು ಪುಸ್ತಕಗಳನ್ನು ಬಿಟ್ಟರೆ ಇನ್ಯಾವ ಆಸ್ತಿಯೂ ಅವರಿಗಿರಲಿಲ್ಲ. ಈ ಶೆರ್ವಾನಿ ಒಸ್ಮಾನಿಯಾ ವಿಶ್ವವಿದ್ಯಾಲಯದ ಸಮವಸ್ತ್ರ. ಅದು ಕೊಡಬಯಸಿದ್ದ ಆಧುನಿಕತೆಯ ಸಂಕೇತ.
(ಪ್ರಮೋದ್ ಮಂದಾಡೆ ಮುಂಬೈಯ ಐಐಟಿಯಲ್ಲಿ ಸಮಾಜಶಾಸ್ತ್ರದಲ್ಲಿ ಪಿಎಚ್.ಡಿ. ಮಾಡುತ್ತಿದ್ದಾರೆ.)