‘Cowpathy’ ಸಂಶೋಧನೆಗೆ 2020ರಲ್ಲಿ ಮೋದಿ ಸರ್ಕಾರದಿಂದ 98 ಕೋಟಿ ರೂ. ಅನುದಾನ: 6 ವರ್ಷಗಳ ನಂತರ ಬಿಡುಗಡೆಯಾಗಿವೆ IITಗಳು ನಡೆಸಿದ ಸಂಶೋಧನಾ ವರದಿಗಳು

Photo Credit : theprint.in
ಹಸುವಿನ ಸಗಣಿಯಿಂದ ಎಲೆಕ್ಟ್ರೋಡ್ ಗಳ ತಯಾರಿಕೆಯಿಂದ ಹಿಡಿದು, ಗೋಮೂತ್ರದ ರಾಸಾಯನಿಕ ವಿಶ್ಲೇಷಣೆಯವರೆಗೆ, ದೇಶದ ವಿವಿಧ ಐಐಟಿಗಳ ಸಂಶೋಧಕರು ಕಳೆದ ಕೆಲವು ವರ್ಷಗಳಿಂದ ‘ಕೌಪತಿ’ (Cowpathy) ಮತ್ತು ಸ್ಥಳೀಯ ತಳಿಯ ಹಸುಗಳ ಗುಣಲಕ್ಷಣಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಸೂತ್ರ-ಪಿಕ್’ (SUTRA-PIC) ಕಾರ್ಯಕ್ರಮದ ಅಡಿಯಲ್ಲಿ ಈ ಸಂಶೋಧನೆಗೆ ಆರ್ಥಿಕ ನೆರವು ನೀಡಲಾಗಿದೆ. ‘ಸೂತ್ರ-ಪಿಕ್’ ಎಂದರೆ ಸೈಂಟಿಫಿಕ್ ಯುಟಿಲೈಸೇಶನ್ ಥ್ರೂ ರಿಸರ್ಚ್ ಅಗಮೆಂಟೇಶನ್–ಪ್ರೈಮ್ ಪ್ರಾಡಕ್ಟ್ಸ್ ಫ್ರಮ್ ಇಂಡಿಜಿನಸ್ ಕೌಸ್ (Scientific Utilisation Through Research Augmentation–Prime Products from Indigenous Cows).
ಆರು ವರ್ಷಗಳ ಬಳಿಕ ಸಂಶೋಧನಾ ವರದಿಗಳು ಪ್ರಕಟವಾಗಿವೆ. ಈವರೆಗೆ ಪ್ರಕಟವಾಗಿರುವ ಅಧ್ಯಯನ ವರದಿಗಳನ್ನು ‘The Print’ ವಿಶ್ಲೇಷಣೆ ಮಾಡಿದ್ದು, ಇದರಲ್ಲಿ ಕಲುಷಿತ ನೀರನ್ನು ಶುದ್ಧೀಕರಿಸುವ ಹಸುವಿನ ಸಗಣಿಯ ಸಾಮರ್ಥ್ಯ ಮತ್ತು ಗೋಮೂತ್ರದ ರಾಸಾಯನಿಕ ಲಕ್ಷಣಗಳು ಹಾಗೂ ಅವುಗಳ ಕೈಗಾರಿಕಾ ಬಳಕೆಗಳಂತಹ ಮಹತ್ವದ ವಿಷಯಗಳು ಇವೆ ಎಂದು ತಿಳಿಸಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಏಪ್ರಿಲ್ 2020ರಲ್ಲಿ ‘ಸೂತ್ರ-ಪಿಕ್’ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಭಾರತೀಯ ಹಸುಗಳ ಕುರಿತು ನಿರ್ದಿಷ್ಟವಾಗಿ ಸಂಶೋಧನೆ ನಡೆಸಲು ಮೀಸಲಿಟ್ಟ ಮೊದಲ ಕಾರ್ಯಕ್ರಮ ಇದಾಗಿದೆ. ಇದಕ್ಕಾಗಿ 98 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದ್ದು, ಸ್ಥಳೀಯ ಹಸುಗಳು ಮತ್ತು ಹಸುವಿನ ಉತ್ಪನ್ನಗಳನ್ನು ಆರೋಗ್ಯ, ಕೃಷಿ ಮತ್ತು ಪೌಷ್ಟಿಕಾಂಶ ಕ್ಷೇತ್ರಗಳಲ್ಲಿ ಬಳಸುವ ಉದ್ದೇಶವನ್ನು ಇದು ಹೊಂದಿದೆ.
ಈ ಯೋಜನೆಯಡಿ ಒಟ್ಟು 10 ಸಂಶೋಧನೆಗಳಿಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ನಾಲ್ಕು ಸಂಶೋಧನೆಗಳನ್ನು IIT ಸಂಶೋಧಕರು ಮಾಡಿದ್ದರು. ಇವುಗಳಲ್ಲಿ ಎರಡು IIT-BHU, ಒಂದು IIT ಧನ್ಬಾದ್ ಮತ್ತು ಮತ್ತೊಂದು IIT ಕಾನ್ಪುರ ಸಂಸ್ಥೆಗಳಿಗೆ ಸೇರಿವೆ. ಉಳಿದ ಸಂಶೋಧನೆಗಳನ್ನು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮತ್ತು ICAR-ಕೇಂದ್ರ ಜಾನುವಾರು ಸಂಶೋಧನಾ ಸಂಸ್ಥೆಯಂತಹ ಪ್ರಮುಖ ಸಂಸ್ಥೆಗಳು ನಡೆಸಿವೆ.
ಈ ಯೋಜನೆಗಳ ವಿವರಗಳು ಮತ್ತು ಹಣದ ಬಳಕೆಯ ಬಗ್ಗೆ ಮಾಹಿತಿ ಕೋರಿ ‘the print’ ಮಾಧ್ಯಮವು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವನ್ನು ಇಮೇಲ್ ಮತ್ತು ದೂರವಾಣಿ ಕರೆಗಳ ಮೂಲಕ ಸಂಪರ್ಕಿಸಿತ್ತಾದರೂ, ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
‘ಸೂತ್ರ-ಪಿಕ್’ ಯೋಜನೆ ಆರಂಭವಾದ ಸಮಯದಲ್ಲಿ ಸಚಿವಾಲಯದ ಈ ವಿಶಾಲ ಪ್ರಸ್ತಾಪದ ವಿರುದ್ಧ ಕೆಲವು ವಿಜ್ಞಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಪ್ರಸ್ತಾಪಗಳು “ದೋಷಪೂರಿತ” ಸಂಶೋಧನಾ ವರದಿಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲ ದಾಖಲೆಯಲ್ಲಿ ಈ ಯೋಜನೆಯ ಹಿಂದಿನ ಮುಖ್ಯ ಉದ್ದೇಶವನ್ನು ಹೀಗೆ ವಿವರಿಸಲಾಗಿತ್ತು:
“ಭಾರತೀಯ ಹಸುಗಳು ಕೆಲವು ವಿಶಿಷ್ಟ ಗುಣಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ನಂಬಲಾಗಿದೆ. ದೇಶಿ ಹಸುಗಳು ಸ್ಥಳೀಯ ಪರಿಸರದಲ್ಲಿ ಆರೋಗ್ಯವಾಗಿರಬಲ್ಲವು ಮತ್ತು ಸುಲಭವಾಗಿ ಬದುಕಬಲ್ಲವು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ದೇಶಿ ಹಸುಗಳ ಇಂತಹ ಹಲವು ಗುಣಗಳ ಬಗ್ಗೆ ವಿವರವಾದ ವೈಜ್ಞಾನಿಕ ತನಿಖೆಯ ಅಗತ್ಯವಿದೆ.”
ಆದರೆ, ತಾವು ಈ ಯೋಜನೆಯನ್ನು ಯಾವುದೇ ಇತರ ವೈಜ್ಞಾನಿಕ ಸಂಶೋಧನೆಯಷ್ಟೇ ಅತ್ಯಂತ ಶಿಸ್ತು ಮತ್ತು ನಿಖರತೆಯಿಂದ ನಿರ್ವಹಿಸಿದ್ದೇವೆ ಎಂದು ಸಂಶೋಧಕರು ಹೇಳುತ್ತಾರೆ.
“ಹಸುವಿನ ಉತ್ಪನ್ನಗಳ ಪ್ರಯೋಜನಗಳನ್ನು ಈಗಾಗಲೇ ನಮ್ಮ ವೇದಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ದಾಖಲಿಸಲಾಗಿದೆ. ನಾವು ಅದಕ್ಕೆ ಆಧುನಿಕ ವಿಜ್ಞಾನದ ಸ್ಪರ್ಶ ನೀಡುತ್ತಿದ್ದೇವೆ. ಅದನ್ನು ವಿಜ್ಞಾನದ ಮೂಲಕ ಸಾಬೀತುಪಡಿಸುತ್ತಿದ್ದೇವೆ ಅಷ್ಟೇ” ಎಂದು ಹೆಸರು ಹೇಳಲಿಚ್ಛಿಸದ IIT ವಿಜ್ಞಾನಿಯೊಬ್ಬರು ಹೇಳಿರುವುದಾಗಿ ‘the print’ ವರದಿ ಉಲ್ಲೇಖಿಸಿದೆ.
ಈ ಸಂಶೋಧನೆಗಳಿಂದ ಹೊರಬಂದಿರುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
*ಕೈಗಾರಿಕಾ ಬಳಕೆಗೆ ಗೋಮೂತ್ರ
IIT-BHU ಸಂಸ್ಥೆಯ ಬಯೋಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಅಭಿಷೇಕ್ ಎಸ್. ಧೋಬ್ಲೆ ಅವರು ‘ಸೂತ್ರ-ಪಿಕ್’ ಯೋಜನೆಯಡಿ ಸಿಕ್ಕ 31 ಲಕ್ಷ ರೂ. ಅನುದಾನದ ಸಹಾಯದಿಂದ ಹಲವು ಸಂಶೋಧನಾ ವರದಿಗಳನ್ನು ಪ್ರಕಟಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಸ್ತಾಪಕ್ಕೆ ಅನುಗುಣವಾಗಿ, ಹಸುಗಳಿಂದ ಸಿಗುವ ಹಾಲು, ಸಗಣಿ ಮತ್ತು ಮೂತ್ರದಂತಹ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಅವರ ವೈಜ್ಞಾನಿಕ ಸಂಶೋಧನೆ ಗಮನ ಹರಿಸಿದೆ.
“ದನಗಳ ಸಗಣಿ ಮತ್ತು ಮೂತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಸುಗಳಿಗೆ ಸಮತೋಲಿತ ಪೌಷ್ಟಿಕ ಆಹಾರವನ್ನು ನೀಡುವುದರಿಂದ ಈ ಉತ್ಪನ್ನಗಳ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಬಹುದು” ಎಂದು ‘ಟ್ರಾಪಿಕಲ್ ಅನಿಮಲ್ ಹೆಲ್ತ್ ಅಂಡ್ ಪ್ರೊಡಕ್ಷನ್’ ಜರ್ನಲ್ನಲ್ಲಿ ಪ್ರಕಟವಾದ ಅವರ ಒಂದು ವರದಿ ಹೇಳುತ್ತದೆ.
ಆದರೆ, ಈ ಅನುದಾನದ ಅಡಿಯಲ್ಲಿ ಧೋಬ್ಲೆ ಅವರ ನೇತೃತ್ವದಲ್ಲಿ ನಡೆದ ಅತ್ಯಂತ ಪ್ರಮುಖ ಅಧ್ಯಯನವು ‘ಅಪ್ಲೈಡ್ ಬಯೋಕೆಮಿಸ್ಟ್ರಿ ಅಂಡ್ ಬಯೋಟೆಕ್ನಾಲಜಿ’ ಜರ್ನಲ್ನ 2025ರ ಜುಲೈ ಆವೃತ್ತಿಯಲ್ಲಿ ಪ್ರಕಟವಾಗಿದೆ.
“Metabolomic Profiling of Cow Urine of Various Breeds Reveals Bioactive Metabolites of Diverse Industrial Application” ಎಂಬ ಶೀರ್ಷಿಕೆಯ ಈ ಅಧ್ಯಯನವು ಮೊದಲ ಬಾರಿಗೆ ಬೇರೆ ಬೇರೆ ತಳಿಯ ಹಸುಗಳ ಮೂತ್ರದಲ್ಲಿರುವ ರಾಸಾಯನಿಕ ಅಂಶಗಳ ವ್ಯತ್ಯಾಸವನ್ನು ವಿವರವಾಗಿ ತಿಳಿಸಿದೆ. ಸಂಶೋಧಕರು ಏಳು ದೇಶಿ ಮತ್ತು ಒಂದು ವಿದೇಶಿ ಸೇರಿದಂತೆ ಒಟ್ಟು ಎಂಟು ತಳಿಯ ಹಸುಗಳ ಮೂತ್ರವನ್ನು ಪರೀಕ್ಷಿಸಿದ್ದು, ಕೈಗಾರಿಕೆಗಳಲ್ಲಿ ಬಳಸಬಹುದಾದ ಜೈವಿಕ ಸಂಯುಕ್ತಗಳನ್ನು (Bioactive Compounds) ಪತ್ತೆಹಚ್ಚಿದ್ದಾರೆ.
ಗೋಮೂತ್ರದಲ್ಲಿ ಫೀನಾಲ್, ಕ್ರೆಸೋಲ್ ಮತ್ತು ಎಸ್ಟರ್ಗಳಂತಹ ಸಂಯುಕ್ತಗಳ ಜೊತೆಗೆ, ಗ್ಸೈಲೀನ್ ಮತ್ತು ಫಾರ್ಮಾಮೈಡ್ನಂತಹ ವಿಷಕಾರಿ ಅಂಶಗಳೂ ಇರುವುದು ಈ ಅಧ್ಯಯನದಲ್ಲಿ ಕಂಡುಬಂದಿದೆ.
“ಇಲ್ಲಿ ಪತ್ತೆಯಾಗಿರುವ ರಾಸಾಯನಿಕಗಳು ಸೋಂಕು ನಿವಾರಕಗಳು, ಸುವಾಸನೆ ದ್ರವ್ಯಗಳು, ಸೌಂದರ್ಯವರ್ಧಕಗಳು, ಕೃಷಿ ರಾಸಾಯನಿಕಗಳು ಮತ್ತು ಮೆಟಬಾಲಿಕ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೈಗಾರಿಕಾ ಹಾಗೂ ಔಷಧೀಯ ಕ್ಷೇತ್ರಗಳಲ್ಲಿ ಬಳಕೆಯಾಗುತ್ತವೆ” ಎಂದು ಅಧ್ಯಯನ ವರದಿ ತಿಳಿಸಿದೆ.
ಔಷಧ ಮತ್ತು ಆರೋಗ್ಯ ಕ್ಷೇತ್ರಕ್ಕಾಗಿ ಹಸುವಿನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ‘ಸೂತ್ರ-ಪಿಕ್’ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಆದರೆ, ಗೋಮೂತ್ರದಲ್ಲಿರುವ ಈ ವಿಷಕಾರಿ ಅಂಶಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತೊಂದರೆ ಇದೆಯೇ ಎಂಬ ಬಗ್ಗೆ ಈ ಅಧ್ಯಯನದಲ್ಲಿ ಉಲ್ಲೇಖಿಸಲಾಗಿಲ್ಲ.
“ದೇಶಾದ್ಯಂತ ಆಯುರ್ವೇದ ವೈದ್ಯರು ಗೋಮೂತ್ರ ಮತ್ತು ಅದರ ಬಟ್ಟಿ ಇಳಿಸಿದ ದ್ರವವನ್ನು ಬಳಸುತ್ತಿದ್ದಾರೆ. ಪ್ರಾಚೀನ ಆಯುರ್ವೇದ ಸಾಹಿತ್ಯದ ಪ್ರಕಾರ, ಹಸುವಿನ ಉತ್ಪನ್ನಗಳನ್ನು ಕ್ಯಾನ್ಸರ್, ಭೇದಿ, ರಕ್ತದೊತ್ತಡ ಮತ್ತು ಅಸ್ತಮಾ ಮುಂತಾದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲು ಅವಕಾಶವಿದೆ” ಎಂದು DST ಪ್ರಸ್ತಾಪದಲ್ಲಿ ಹೇಳಲಾಗಿತ್ತು.
ಆದರೆ, ಈ ಹಿಂದೆ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ್ದ ಅಧ್ಯಯನವೊಂದರಲ್ಲಿ ಆರೋಗ್ಯವಂತ ಹಸುಗಳ ಮೂತ್ರದ ಮಾದರಿಗಳಲ್ಲಿ ಕನಿಷ್ಠ 14 ಬಗೆಯ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿತ್ತು.
ಶುದ್ಧ ನೀರು ಮತ್ತು ಬ್ಯಾಟರಿ ತಯಾರಿಕೆಗೆ ಹಸುವಿನ ಸಗಣಿ
ಐಐಟಿ ಧನ್ಬಾದ್ನ ಪ್ರೊಫೆಸರ್ ಬ್ರಿಜೇಶ್ ಕುಮಾರ್ ಮಿಶ್ರಾ ಮತ್ತು ಅವರ ತಂಡವು, ನೀರಿನಲ್ಲಿರುವ ವಿಷಕಾರಿ ಹೆವಿ ಮೆಟಲ್ಗಳನ್ನು ತೆಗೆದುಹಾಕಲು ಹಸುವಿನ ಸಗಣಿಯಿಂದ ತಯಾರಿಸಿದ ವಸ್ತುವನ್ನು ಬಳಸುವ ಬಗ್ಗೆ ಅಧ್ಯಯನ ನಡೆಸಿದೆ. ಈ ಯೋಜನೆಗಾಗಿ ಮಿಶ್ರಾ ಅವರಿಗೆ ‘ಸೂತ್ರ-ಪಿಕ್’ ಅಡಿಯಲ್ಲಿ 36 ಲಕ್ಷ ರೂ. ಸಿಕ್ಕಿದ್ದು, ಪರಿಸರ ಇಂಜಿನಿಯರಿಂಗ್ ಹಾಗೂ ರಸಾಯನಶಾಸ್ತ್ರ ವಿಭಾಗಗಳು ಜಂಟಿಯಾಗಿ ಈ ಕೆಲಸ ಮಾಡಿವೆ.
‘ಬಯೋಕೆಮಿಕಲ್ ಎಂಜಿನಿಯರಿಂಗ್ ಜರ್ನಲ್’ನ ಆಗಸ್ಟ್ ಆವೃತ್ತಿಯಲ್ಲಿ ಪ್ರಕಟವಾಗಲಿರುವ ಈ ಸಂಶೋಧನಾ ವರದಿಯು, ಕಾರ್ಬನ್ ಅಂಶ ಹೆಚ್ಚಾಗಿರುವ ಸಗಣಿಯನ್ನು ಸಂಸ್ಕರಿಸಿ, ಕಲುಷಿತ ನೀರಿನಲ್ಲಿರುವ ವಿಷಕಾರಿ ಕ್ರೋಮಿಯಂ ಅನ್ನು ಹೀರಿಕೊಳ್ಳುವಂತೆ ಹೇಗೆ ಬಳಸಬಹುದು ಎಂಬುದನ್ನು ವಿವರಿಸುತ್ತದೆ.
ಹೀಗೆ ಸಗಣಿಯ ವಸ್ತುವು ಕ್ರೋಮಿಯಂ ಅನ್ನು ಹೀರಿಕೊಂಡ ನಂತರ, ಆ ವಸ್ತುವನ್ನು ಇಂಧನ ಸಂಗ್ರಹಿಸುವ ಸಾಧನಗಳಲ್ಲಿ (ಬ್ಯಾಟರಿಗಳಲ್ಲಿ) ‘ಎಲೆಕ್ಟ್ರೋಡ್’ ಆಗಿ ಮರುಬಳಕೆ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಹಸುವಿನ ಸಗಣಿ ಮತ್ತು ಕೈಗಾರಿಕಾ ತ್ಯಾಜ್ಯವಾದ ಕ್ರೋಮಿಯಂ ಇವೆರಡೂ ತ್ಯಾಜ್ಯಗಳನ್ನು ಪರಿಸರ ಮತ್ತು ಇಂಧನ ಕ್ಷೇತ್ರಕ್ಕೆ ಉಪಯುಕ್ತವಾಗುವ ಆಧುನಿಕ ವಸ್ತುಗಳನ್ನಾಗಿ ಪರಿವರ್ತಿಸುವ ಮೂಲಕ, ಈ ವಿಧಾನವು ಮಾಲಿನ್ಯವನ್ನು ಕಡಿಮೆ ಮಾಡುವುದಲ್ಲದೆ, ಸಂಪನ್ಮೂಲಗಳ ಮರುಬಳಕೆಗೆ ಉತ್ತಮ ಮಾದರಿಯಾಗಿದೆ ಎಂದು ವರದಿಯ ಸಾರಾಂಶ ಹೇಳುತ್ತದೆ.
ಈ ಸಂಶೋಧನಾ ವರದಿಯು ಕೇವಲ “ದೇಶಿ ಹಸುಗಳ” ಮೇಲೆ ಮಾತ್ರ ಗಮನ ಹರಿಸದೆ, ಒಟ್ಟಾರೆಯಾಗಿ ಹಸುವಿನ ಸಗಣಿಯನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡು ಅಧ್ಯಯನ ನಡೆಸಿದೆ.
*ತುಕ್ಕು ನಿರೋಧಕವಾಗಿ ಹಸುವಿನ ಸಗಣಿ
ಐಐಟಿ ಕಾನ್ಪುರದ ಪ್ರೊಫೆಸರ್ ಕಲ್ಲೋಲ್ ಮೊಂಡಲ್ ಅವರು, ಹಸುವಿನ ಸಗಣಿಯಿಂದ ಪರಿಸರ ಸ್ನೇಹಿ ತುಕ್ಕು ನಿರೋಧಕಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾಂಕ್ರೀಟ್ನಲ್ಲಿ ಬಳಸುವ ಉಕ್ಕನ್ನು ರಕ್ಷಿಸಲು ಅವುಗಳ ಸಾಮರ್ಥ್ಯವನ್ನು ಪರೀಕ್ಷಿಸಲು ‘ಸೂತ್ರ-ಪಿಕ್’ ಅಡಿಯಲ್ಲಿ 58 ಲಕ್ಷ ರೂ. ಅನುದಾನ ಪಡೆದಿದ್ದಾರೆ.
‘ಬಯೋರಿಸೋರ್ಸ್ ಟೆಕ್ನಾಲಜಿ ರಿಪೋರ್ಟ್ಸ್’ ಜರ್ನಲ್ನ 2024ರ ಜೂನ್ ಆವೃತ್ತಿಯಲ್ಲಿ ಪ್ರಕಟವಾದ ಮೊಂಡಲ್ ಮತ್ತು ಇತರ ಸಂಶೋಧಕರ ವರದಿಯ ಪ್ರಕಾರ, ಹಸುವಿನ ಸಗಣಿಯ ಸಾರವು ಉಕ್ಕಿಗೆ ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ತುಕ್ಕು ನಿರೋಧಕವಾಗಿ ಕೆಲಸ ಮಾಡಬಲ್ಲದು ಎಂದು ತಿಳಿದುಬಂದಿದೆ. ಸಗಣಿಯಲ್ಲಿರುವ ಕೆಲವು ಸಂಯುಕ್ತಗಳು ಲೋಹದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುವ ಮೂಲಕ, ಅದು ತುಕ್ಕು ಹಿಡಿಯುವುದನ್ನು ತಡೆಯುತ್ತದೆ ಎಂದು ಅಧ್ಯಯನ ಹೇಳಿದೆ.
IIT ಮದ್ರಾಸ್ ಪ್ರಕಟಿಸುವ ‘ಶಾಸ್ತ್ರ’ ವಿಜ್ಞಾನ ಮತ್ತು ತಂತ್ರಜ್ಞಾನ ನಿಯತಕಾಲಿಕೆಯ ಪ್ರಕಾರ, ಸಂಶೋಧನಾ ತಂಡವು ಈ ಪ್ರಯೋಗಾಲಯದ ಆವಿಷ್ಕಾರಗಳನ್ನು ಕೈಗಾರಿಕಾ ಮಟ್ಟದಲ್ಲಿ ಪರೀಕ್ಷಿಸಲು ಯೋಜಿಸಿದೆ.
*ಪಂಚಗವ್ಯ ಬಗ್ಗೆಯೂ ಸಂಶೋಧನೆ
‘ಸೂತ್ರ-ಪಿಕ್’ ಯೋಜನೆಯಡಿ ಅನುಮೋದನೆ ಪಡೆದ ಕೆಲವು ಸಂಶೋಧನೆಗಳು ಇನ್ನು ಪ್ರಕಟಣೆಯ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿವೆ.
IIT-BHU ಸಂಸ್ಥೆಯಲ್ಲಿ ನಡೆಯುತ್ತಿರುವ ಇಂತಹದೇ ಒಂದು ಸಂಶೋಧನೆಯು ಪಂಚಗವ್ಯ, ಅಂದರೆ ಹಸುವಿನ ಹಾಲು, ಮೊಸರು, ತುಪ್ಪ, ಮೂತ್ರ ಮತ್ತು ಸಗಣಿಯ ಮಿಶ್ರಣದ “ಸೋಂಕು ನಿವಾರಕ” ಸಾಮರ್ಥ್ಯವನ್ನು ಪರಿಶೀಲಿಸುತ್ತಿದೆ. ಪ್ರೊಫೆಸರ್ ಶ್ರೇಯಾಂಸ್ ಕುಮಾರ್ ಜೈನ್ ಅವರು ಈ ಯೋಜನೆಗಾಗಿ 65 ಲಕ್ಷ ರೂ. ಅನುದಾನ ಪಡೆದಿದ್ದಾರೆ.
ICAR-ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿದ್ವಾಂಸರು ಈಗಾಗಲೇ ಪಂಚಗವ್ಯದ “ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳ” ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಆದರೆ, ಜೈನ್ ಅವರು ಮೆಟಬಾಲೊಮಿಕ್ಸ್, ಅಂದರೆ ಮಾಸ್ ಸ್ಪೆಕ್ಟ್ರೋಮೆಟ್ರಿ ತಂತ್ರಜ್ಞಾನವನ್ನು ಬಳಸಿ ಸಾವಯವ ರಾಸಾಯನಿಕ ಕಣಗಳ ವಿಶ್ಲೇಷಣೆಯ ಮೂಲಕ ಇದನ್ನು ಅಧ್ಯಯನ ಮಾಡುತ್ತಿದ್ದಾರೆ.
“ನಾವು ಕ್ಯಾಂಪಸ್ ಸುತ್ತಮುತ್ತಲಿನ ಹಸುಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದೇವೆ ಮತ್ತು ಹಸುಗಳ ತಳಿಯನ್ನು ಗುರುತಿಸಲು ಪಶುವೈದ್ಯರ ಸಹಾಯವನ್ನು ಪಡೆದಿದ್ದೇವೆ” ಎಂದು ಜೈನ್ ಹೇಳಿದ್ದಾರೆ.
ಅವರ ಸಂಶೋಧನಾ ವರದಿ ಮತ್ತು ಅದಕ್ಕೆ ಸಂಬಂಧಿಸಿದ ಪೇಟೆಂಟ್ ಇನ್ನೂ ಸಿದ್ಧವಾಗಿಲ್ಲದ ಕಾರಣ, ಕೆಲಸವನ್ನು ಪೂರ್ಣಗೊಳಿಸಲು ಅವರು ಆರು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಡೇಟಾ ನಿಖರವಾಗಿದ್ದರೆ ಈ ಅಧ್ಯಯನವನ್ನು ಪ್ರಕಟಿಸಲು ಸಾಕಷ್ಟು ಜರ್ನಲ್ಗಳು ಮುಂದೆ ಬರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಸೂತ್ರ-ಪಿಕ್’ ಯೋಜನೆಯು ಐಐಟಿಗಳ ಹೊರತಾಗಿ ಮತ್ತೊಂದು ಪಂಚಗವ್ಯ ಸಂಶೋಧನೆಗೂ ಧನಸಹಾಯ ನೀಡಿದೆ. ಗಾಂಧಿನಗರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧಕ ಜಯರಾಜ್ಸಿನ್ಹ್ ಸರ್ವೈಯಾ ಅವರಿಗೆ “ಅಸಲಿ” ಪಂಚಗವ್ಯ ಉತ್ಪನ್ನಗಳನ್ನು ಗುರುತಿಸುವ ವಿಧಾನವನ್ನು ಅಭಿವೃದ್ಧಿಪಡಿಸಲು 42 ಲಕ್ಷ ರೂ. ಅನುದಾನ ನೀಡಲಾಗಿದೆ.
ಇತ್ತೀಚೆಗೆ ಎಪ್ರಿಲ್ ನಲ್ಲಿ, ಉತ್ತರಾಖಂಡದ ಗಂಗೋತ್ರಿ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನ ಪ್ರವೇಶಿಸುವ ಮುನ್ನ ಪಂಚಗವ್ಯ ಸೇವನೆಯನ್ನು ಕಡ್ಡಾಯಗೊಳಿಸಿತ್ತು. ಹಿಂದೂ ಸಂಪ್ರದಾಯದಲ್ಲಿ ಇದನ್ನು ಪವಿತ್ರೀಕರಣದ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ.
ಭಾರತದಲ್ಲಿ ಹಸುಗಳ ಮೇಲಿನ ಸಂಶೋಧನೆಯು ಕೇವಲ ‘ಸೂತ್ರ-ಪಿಕ್’ ಯೋಜನೆಗಷ್ಟೇ ಸೀಮಿತವಾಗಿರದೆ, ವೇಗವಾಗಿ ಬೆಳೆಯುತ್ತಿರುವ ಸಂಶೋಧನಾ ಕ್ಷೇತ್ರವಾಗುತ್ತಿದೆ. 2024ರಲ್ಲಿ ಐಐಟಿ ಮದ್ರಾಸ್ ಸಂಶೋಧಕರೊಬ್ಬರ ವರದಿಯು ಹಸುವಿನ ಸಗಣಿ ಆಧಾರಿತ ಗಿಡಮೂಲಿಕೆ ಸೊಳ್ಳೆ ನಿವಾರಕವನ್ನು ಅಭಿವೃದ್ಧಿಪಡಿಸುವ “ಹೊಸ ವಿಧಾನ”ವನ್ನು ಪ್ರಸ್ತುತಪಡಿಸಿತ್ತು. ಹಾಗೆಯೇ, 2023ರಲ್ಲಿ ಐಐಟಿ ಗುವಾಹಟಿಯು “ಆಧುನಿಕ ಜೀವನ ಮತ್ತು ವೈದ್ಯಕೀಯ ವಿಜ್ಞಾನದಲ್ಲಿ ಗೋ ವಿಜ್ಞಾನದ ರಾಷ್ಟ್ರೀಯ ಸಮ್ಮೇಳನ”ವನ್ನು ಆಯೋಜಿಸಿತ್ತು.






