ಮೋದಿ ಸರ್ಕಾರದಿಂದ ಪೋಲಿಯೋ ಲಸಿಕೆ ತಯಾರಿಕಾ ಸಂಸ್ಥೆ 'BIBCOL' ಬಂದ್: ಊಟಕ್ಕೂ ಗತಿಯಿಲ್ಲದೆ ಮಾಂಗಲ್ಯ ಸರ ಮಾರುವ ಸ್ಥಿತಿಗೆ ತಲುಪಿದ ಕಾರ್ಮಿಕರು
►ನೂತನ್ ಶರ್ಮಾ – theprint. in ವರದಿ

Photo Credit : ThePrint
ನರೇಂದ್ರ ಮೋದಿ ಸರ್ಕಾರವು ಬಿಬ್ಕಾಲ್ (BIBCOL) ಸಂಸ್ಥೆಯನ್ನು ಮುಚ್ಚುತ್ತಿರುವುದು ಒಂದು "ದೊಡ್ಡ ದುರಂತ" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಅನ್ನು ನೋಡಿದ ಕೂಡಲೇ ಸುನಿಲ್ ಕುಮಾರ್ ಶರ್ಮಾ ಸ್ಕ್ರೋಲ್ ಮಾಡುವುದನ್ನು ನಿಲ್ಲಿಸಿ, ತಕ್ಷಣವೇ ಕಾಮೆಂಟ್ ಬರೆಯಲು ಪ್ರಾರಂಭಿಸಿದರು. ಒಮ್ಮೆ ಕೋಟ್ಯಂತರ ಡೋಸ್ ಪೋಲಿಯೋ ಲಸಿಕೆಗಳನ್ನು ಉತ್ಪಾದಿಸುತ್ತಿದ್ದ ಬುಲಂದ್ಶಹರ್ ನ ಈ ಕಾರ್ಖಾನೆಯ 58 ವರ್ಷದ ಮಾಜಿ ಉದ್ಯೋಗಿ ಶರ್ಮಾ ಬಳಿ ವರ್ಷಗಳಿಂದ ಸಿದ್ಧಪಡಿಸಿಟ್ಟುಕೊಂಡ ಖಚಿತ ಉತ್ತರಗಳಿದ್ದವು.
"ದೇಶವನ್ನು ಪೋಲಿಯೋ ಮುಕ್ತಗೊಳಿಸಿದ ಸಾರ್ವಜನಿಕ ರಂಗದ ಸಂಸ್ಥೆಯನ್ನು ಭ್ರಷ್ಟ ಅಧಿಕಾರಿಗಳು ನುಂಗಿಹಾಕಿದ್ದಾರೆ" ಎಂದು ರಮೇಶ್ ಅವರಿಗೆ ಪ್ರತಿಕ್ರಿಯಿಸಿದ ಅವರು, ಕೆಲಸವಿಲ್ಲದ ನಾಲ್ವರು ಉದ್ಯೋಗಿಗಳು ಆರ್ಥಿಕ ಸಂಕಷ್ಟದಿಂದ ಮೃತಪಟ್ಟಿದ್ದಾರೆ ಮತ್ತು ಇತರರು "ಹಸಿವಿನಿಂದ ಕಂಗೆಟ್ಟಿದ್ದಾರೆ" ಎಂದು ಆರೋಪಿಸಿದರು.
ಲಕ್ಷಾಂತರ ಜನರ ಪಾಲಿಗೆ ಸಾರ್ವಜನಿಕ ಆರೋಗ್ಯ ರಕ್ಷಣೆಯ ಕನಸಿನ ಕಾರ್ಖಾನೆಯಾಗಿದ್ದ ಈ ಸಂಸ್ಥೆ, ಇಂದು ಈಡೇರದ ಭರವಸೆಯಂತೆ ನಿಂತಿದೆ. ಹಳೆಯ ಸಾರ್ವಜನಿಕ ವಲಯದ ಸಂಸ್ಥೆಗಳನ್ನು (PSU) ರಕ್ಷಿಸಲು ಸರ್ಕಾರಕ್ಕೆ ಮನಸ್ಸಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಉದ್ಯೋಗಿಗಳಿಗೆ ಮಾತ್ರ ಇದು ನೀಡದ ಬಾಕಿ ವೇತನ, ತಡೆಹಿಡಿದ ಪರಿಹಾರ ಧನ, ಏಕಾಏಕಿ ಕಳೆದುಕೊಂಡ ಕೆಲಸ ಮತ್ತು ಕಷ್ಟಕ್ಕೆ ಸಿಲುಕಿದ ಜೀವನದ ಸುದೀರ್ಘ ಕಥೆಯಾಗಿದೆ.
ಶರ್ಮಾ ಅವರಿಗೆ ಈ ಸಂಕಷ್ಟದ ನೇರ ಅನುಭವವಿದೆ. ಭಾರತ್ ಇಮ್ಯುನೊಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್ (BIBCOL) ನಲ್ಲಿ ಹಿರಿಯ ಪ್ಲಾಂಟ್ ಸೂಪರಿಂಟೆಂಡೆಂಟ್ ಆಗಿದ್ದ ಶರ್ಮಾ, ಡಿಸೆಂಬರ್ 2022ರಲ್ಲಿ ಲಸಿಕೆ ಉತ್ಪಾದನೆ ನಿಂತ ನಂತರ ವೇತನವಿಲ್ಲದೆ ಪರದಾಡುತ್ತಿರುವ ಸುಮಾರು 100 ಉದ್ಯೋಗಿಗಳಲ್ಲಿ ಒಬ್ಬರು. ತಮ್ಮ ಬಾಕಿ ಹಣವನ್ನು ನೀಡುವಂತೆ ಆಗ್ರಹಿಸಿ ನ್ಯಾಯಾಲಯಗಳ ಬಾಗಿಲು ತಟ್ಟಿದರು, CBI ಮತ್ತು ಲೋಕಪಾಲ್ ಮೆಟ್ಟಿಲೇರಿದರು, ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದರು ಮತ್ತು ಧರಣಿಗಳನ್ನು ನಡೆಸಿದರು. ಈ ಕಾರ್ಖಾನೆ ಎಂದಾದರೂ ಮತ್ತೆ ಆರಂಭವಾಗಬಹುದು ಎಂಬ ಭರವಸೆಯನ್ನು ಅವರು ಇಟ್ಟುಕೊಂಡಿದ್ದರು.
ಆದರೆ, ಆ ಭರವಸೆ ಈಗ ಸಂಪೂರ್ಣವಾಗಿ ಹುಸಿಯಾಗಿದೆ.
2026ರ ಸೆಪ್ಟೆಂಬರ್ 17ರಂದು ಕೇಂದ್ರ ಸರ್ಕಾರವು 'ಬಿಬ್ಕಾಲ್' ಸಂಸ್ಥೆಯನ್ನು ಮುಚ್ಚಲು ಅನುಮೋದನೆ ನೀಡಿತು. ಇದರೊಂದಿಗೆ ಕಾರ್ಖಾನೆ ಮತ್ತೆ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಕೊನೆಗೊಂಡವು. ಆದರೂ, ಉದ್ಯೋಗಿಗಳಿಗೆ ತಮ್ಮ ಬಾಕಿ ವೇತನ, ಇತರ ಸೌಲಭ್ಯಗಳು ಅಥವಾ ತಮ್ಮನ್ನು ಇತರ ಸಾರ್ವಜನಿಕ ರಂಗದ ಕಂಪೆನಿಗಳಿಗೆ ಸೇರಿಸಿಕೊಳ್ಳಲಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಲಸಿಕೆ ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಗೊಳಿಸಲು 1989ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಉದ್ಯೋಗಿಗಳು ನೀಡಿದ ದಶಕಗಳ ಸೇವೆಯು ಇಂದು ಬೆಲೆಯಿಲ್ಲದಂತಾಗಿದೆ.
ಬಿಬ್ಕಾಲ್ ಸಂಸ್ಥೆಯ ಮುಚ್ಚುವಿಕೆಯನ್ನು ತಡೆಯಲು ನಡೆಸಿದ ಪ್ರತಿಯೊಂದು ಪ್ರಯತ್ನವೂ ವಿಫಲವಾಗಿದೆ. 2025ರ ಮಾರ್ಚ್ನಲ್ಲಿ, ಸಂಸದೀಯ ಸ್ಥಾಯಿ ಸಮಿತಿಯು ಸಂಸ್ಥೆಯ ಪುನರುಜ್ಜೀವನಕ್ಕಾಗಿ ವಿಶೇಷ ನೆರವಿನ ಪ್ಯಾಕೇಜ್ ಅನ್ನು ಶಿಫಾರಸು ಮಾಡಿತ್ತು. ಅದೇ ವರ್ಷ ಡಿಸೆಂಬರ್ ನಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೀಡದ ವೇತನದ ಕುರಿತು ಉದ್ಯೋಗಿಗಳ ನಿಯೋಗವನ್ನು ಭೇಟಿಯಾಗಿದ್ದರು. ಈ ಯಾವ ಪ್ರಯತ್ನಗಳೂ ಈ ಸಂಸ್ಥೆಯನ್ನು ಮುಚ್ಚುವುದರಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.
ಈಗ ಕಾರ್ಖಾನೆಯು ಮಂಗಗಳು ಮತ್ತು ಕಾಡುಕೋಣಗಳ ತಾಣವಾಗಿಬಿಟ್ಟಿದೆ. ಪ್ರವೇಶದ್ವಾರದಲ್ಲಿ ಒಬ್ಬಂಟಿ ಕಾವಲುಗಾರನನ್ನು ನಿಯೋಜಿಸಲಾಗಿದೆಯಾದರೂ, ಅವರು ತಮ್ಮ ಜಾಗದಲ್ಲಿರುವುದು ವಿರಳ. ಗೇಟ್ ಒಳಗಡೆ ಸರ್ಕಾರಿ ವಾಹನವೊಂದು ಧೂಳು ಹಿಡಿದು ನಿಂತಿದ್ದರೆ, ಕಾರ್ಖಾನೆಯ ಮುರಿದ ನಾಮಫಲಕವು ಪೊದೆಯಲ್ಲಿ ಬಿದ್ದಿದೆ. ಪ್ರವೇಶದ್ವಾರದ ಮಾರ್ಬಲ್ ಕಲ್ಲಿನ ಮೇಲಿದ್ದ ಹೆಸರಿನ ಅಕ್ಷರಗಳು ಮಸುಕಾಗಿವೆ.
ಉದ್ಯೋಗಿಗಳು ತಮಗೆ ಬರಬೇಕಾದ ಹಣವನ್ನು ಪಡೆಯುವ ಭರವಸೆಯಲ್ಲಷ್ಟೇ ಇದ್ದಾರೆ. ಕಂಪೆನಿಯನ್ನು ಮುಚ್ಚಿರುವ ಬಗ್ಗೆ, ಸೇವೆಗಳನ್ನು ಕೊನೆಗೊಳಿಸಿರುವ ಬಗ್ಗೆ ಅಥವಾ ಬಾಕಿ ಹಣವನ್ನು ನೀಡುವ ಬಗ್ಗೆ ಯಾರಿಗೂ ಅಧಿಕೃತ ಮಾಹಿತಿ ಬಂದಿಲ್ಲ. ಇದು ಸರ್ಕಾರದ ವರ್ಷಗಳ ನಿರಾಸಕ್ತಿಯ ಜೊತೆಗೆ ಉದ್ಯೋಗಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಹೊಸದಿಲ್ಲಿಯಲ್ಲಿರುವ ಸಚಿವಾಲಯದ ಅಧಿಕಾರಿಗಳು ಪ್ರತಿಭಟಿಸುತ್ತಿರುವ ಮತ್ತು ಸಂಕಷ್ಟದಲ್ಲಿರುವ ಬಿಬ್ಕಾಲ್ ಉದ್ಯೋಗಿಗಳಿಗೆ ಯಾವುದೇ ಅಧಿಕೃತ ಸಂದೇಶವನ್ನು ಕಳುಹಿಸಿಲ್ಲ.
ಕಾರ್ಖಾನೆ ಮುಚ್ಚಿದ ನಂತರ ಉದ್ಯೋಗಿಗಳ ಗತಿಯೇನು ಎಂದು ಕೇಳಿದಾಗ, "ನಾವು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ" ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ (DBT) ಜಂಟಿ ಕಾರ್ಯದರ್ಶಿ ಏಕ್ತಾ ವಿಷ್ಣೋಯಿ ತಿಳಿಸಿದರು.
►ಕೈಗೂಡದ ಸರ್ಕಾರಿ ಉದ್ಯೋಗದ ಕನಸು
ಕೆಲವೇ ವರ್ಷಗಳ ಹಿಂದೆ, ಬಿಬ್ಕಾಲ್ ಸಂಸ್ಥೆಯ ಉದ್ಯೋಗವು ಅನೇಕ ಭಾರತೀಯರ ಪಾಲಿಗೆ ಸಾಮಾಜಿಕವಾಗಿ ಉತ್ತಮ ಮಟ್ಟ ತಲುಪುವ ಗೌರವಾನ್ವಿತ ದಾರಿಯಾಗಿತ್ತು.
2005ರಲ್ಲಿ ವಿಜಯ್ ಪ್ರಕಾಶ್ ನಾಗ್ ಪತ್ರಿಕೆಯೊಂದರಲ್ಲಿ ಉದ್ಯೋಗ ಜಾಹೀರಾತನ್ನು ನೋಡಿದರು. ಸಂದರ್ಶನಕ್ಕಾಗಿ ದಿಲ್ಲಿಗೆ ಪ್ರಯಾಣಿಸಿದ ಅವರು, ಬಿಬ್ಕಾಲ್ ಸಂಸ್ಥೆಯ ಕಿರಿಯ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ 30 ಅಭ್ಯರ್ಥಿಗಳಲ್ಲಿ ಆಯ್ಕೆಯಾದ ನಾಲ್ಕರಲ್ಲಿ ಒಬ್ಬರಾಗಿದ್ದರು. ಅವರ ವೇತನವು ಹಿಂದಿನ ಖಾಸಗಿ ವಲಯದ ಕೆಲಸದಲ್ಲಿದ್ದ 5,000 ರೂ.ಗಳಿಂದ 15,000 ರೂ.ಗಳಿಗೆ ಏರಿತು. ಅದಕ್ಕಿಂತ ಹೆಚ್ಚಾಗಿ, ಸರ್ಕಾರಿ ಉದ್ಯೋಗದ ಭದ್ರತೆ ಸಿಕ್ಕಿತ್ತು. ಈ ಉದ್ಯೋಗದ ಬಲದ ಮೇಲೆಯೇ ಅವರು 2013ರಲ್ಲಿ ವಿವಾಹವಾದರು.
ಸುಮಾರು 17 ವರ್ಷಗಳ ಕಾಲ, ಈ ಕೆಲಸವು ಆರ್ಥಿಕ ಭದ್ರತೆ ಮತ್ತು ಹೆಮ್ಮೆಯ ಮೂಲವಾಗಿತ್ತು. ನಾಗ್ ತಮ್ಮ ಹೆಂಡತಿಗೆ ಒಡವೆಗಳನ್ನು ಖರೀದಿಸಿದರು, ಮಗಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದರು ಮತ್ತು ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಹಣದ ನೆರವು ನೀಡಿದರು. ಬಿಬ್ಕಾಲ್ ಲಸಿಕೆ ಉತ್ಪಾದನೆಯನ್ನು ನಿಲ್ಲಿಸಿದ ಸಮಯದಲ್ಲಿ, ನಾಗ್ ತಿಂಗಳಿಗೆ 55,000 ರೂ. ವೇತನ ಪಡೆಯುತ್ತಿದ್ದರು.
ವೇತನ ನಿಂತುಹೋದ ನಂತರ, ಅವರ ಜೀವನ ಪೂರ್ತಿ ತಲೆಕೆಳಗಾಗಿದೆ. ತಮ್ಮ 12 ವರ್ಷದ ಮಗಳ ಶಾಲಾ ಶಿಕ್ಷಣವನ್ನು ಮುಂದುವರಿಸಲು ಅವರು ಕಷ್ಟಪಡುತ್ತಿದ್ದಾರೆ. ಆಕೆಯ ಬೋಧನಾ ಶುಲ್ಕ, ಶಾಲಾ ವ್ಯಾನ್ ಮತ್ತು ಇತರ ವೆಚ್ಚಗಳು ಪ್ರತಿ ಮೂರು ತಿಂಗಳಿಗೆ ಸುಮಾರು 18,000 ರೂ.ಗಳಷ್ಟಾಗುತ್ತವೆ. ಒಮ್ಮೆ ಸುಲಭವಾಗಿ ಸಿಗುತ್ತಿದ್ದ ಸೌಲಭ್ಯಗಳು ಈಗ ಏಕೆ ಸಿಗುತ್ತಿಲ್ಲ ಎಂಬುದನ್ನು ಆಕೆಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
"ಸರ್ಕಾರಿ ಕೆಲಸದ ಅತ್ಯಂತ ಪ್ರಮುಖ ವಿಷಯವೆಂದರೆ ಅದರ ಭದ್ರತೆ, ಆದರೆ ಅದನ್ನು ನನ್ನಿಂದ ಕಸಿದುಕೊಳ್ಳಲಾಯಿತು. ನಾಲ್ಕು ವರ್ಷಗಳ ಹಿಂದೆ ನಮಗಿದ್ದ ಜೀವನಶೈಲಿಯನ್ನು ಈಗ ನಿರ್ವಹಿಸಲು ಸಾಧ್ಯವಾಗದಿರುವುದರಿಂದ ನನ್ನ 12 ವರ್ಷದ ಮಗಳು ನನ್ನೊಂದಿಗೆ ಜಗಳವಾಡುತ್ತಾಳೆ" ಎಂದು ಈಗ 47 ವರ್ಷ ವಯಸ್ಸಿನ ನಾಗ್ ಅಳಲು ತೋಡಿಕೊಂಡರು.
ಕಾರ್ಖಾನೆ ಉತ್ಪಾದನೆಯನ್ನು ನಿಲ್ಲಿಸಿದಾಗ ಅವರಿಗೆ ಇನ್ನೂ 17 ವರ್ಷಗಳ ಸೇವೆ ಬಾಕಿ ಇತ್ತು. ಆದರೆ ಈಗ ವಯಸ್ಸಿನ ಕಾರಣ ನೀಡಿ ಇತರ ಉದ್ಯೋಗದಾತರು ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ.
"ಯುವಜನರಿಗೇ ಕೆಲಸ ಸಿಗುತ್ತಿಲ್ಲ, ಹಾಗಿರುವಾಗ ನನಗೆ ಹೇಗೆ ಸಿಗುತ್ತದೆ? ಬುಲಂದ್ಶಹರ್ ನಂತಹ ಸ್ಥಳದಲ್ಲಿ ಹೆಚ್ಚಿನ ಅವಕಾಶಗಳೂ ಇಲ್ಲ. ನಾನು ಬಾಡಿಗೆ ಮನೆಯಲ್ಲಿದ್ದೇನೆ. ಬಾಡಿಗೆ ಕೊಡುವುದು ಸ್ವಲ್ಪ ತಡವಾದರೂ ಮನೆಮಾಲೀಕರಿಂದ ಅಪಮಾನ ಎದುರಿಸಬೇಕಾಗುತ್ತದೆ. ಸರ್ಕಾರ ಈ ಕಂಪೆನಿಯನ್ನು ಮುಚ್ಚುತ್ತಿದ್ದರೆ, ನಮ್ಮನ್ನು ಬೇರೆ ಕಂಪೆನಿಗೆ ಸೇರಿಸಿಕೊಳ್ಳಬೇಕು ಎಂಬುದು ಒಂದೇ ನನ್ನ ಬೇಡಿಕೆ" ಎಂದು ನಾಗ್ ಹೇಳಿದರು.
ಇತರ ಮಾಜಿ ಉದ್ಯೋಗಿಗಳು ತಮ್ಮ ವಸ್ತುಗಳನ್ನು ಮಾರಿ, ವೈದ್ಯಕೀಯ ಚಿಕಿತ್ಸೆಯನ್ನೂ ಮುಂದೂಡುವ ಪರಿಸ್ಥಿತಿಗೆ ಸಿಲುಕಿದ್ದಾರೆ.
ಐವತ್ತೆರಡು ವರ್ಷದ ರೇಖಾ ಪಂತ್ ತಮ್ಮ ಸಂಸಾರ ನಡೆಸಲು ಮತ್ತು ವೈದ್ಯಕೀಯ ವೆಚ್ಚಗಳನ್ನು ಭರಿಸಲು ತಮ್ಮ ಬಳಿಯಿದ್ದ ಪ್ರತಿಯೊಂದು ಆಭರಣವನ್ನೂ ಅಂದರೆ ತಮ್ಮ ಕಿವಿಯೋಲೆ, ಮೂಗುತಿ, ಚೈನು ಮತ್ತು ಮಾಂಗಲ್ಯ ಸರವನ್ನು ಸಹ ಮಾರಾಟ ಮಾಡಿದ್ದಾರೆ. ಈಗ ಅವರು ಕೃತಕ ಮಾಂಗಲ್ಯ ಸರವನ್ನು ಧರಿಸುತ್ತಿದ್ದಾರೆ.
ಅವರ ಪತಿ ದಿನೇಶ್ ಚಂದ್ರ ಪಂತ್ 1993ರಲ್ಲಿ ಬಿಬ್ಕಾಲ್ ಸಂಸ್ಥೆಗೆ ಸೇರಿದ್ದರು. ಸುಮಾರು 30 ವರ್ಷಗಳ ಸೇವೆಯ ನಂತರ, ಪ್ಲಾಂಟ್ನ ಹವಾನಿಯಂತ್ರಣ ವ್ಯವಸ್ಥೆ ಮತ್ತು ಪ್ರಯೋಗಾಲಯಗಳ ನಿರ್ವಹಣೆಗಾಗಿ ಅವರು ತಿಂಗಳಿಗೆ 80,000 ರೂ. ಪಡೆಯುತ್ತಿದ್ದರು. ತಮ್ಮ ಮಕ್ಕಳನ್ನು ದಿಲ್ಲಿಗೆ ಕಳುಹಿಸಿ ಓದಿಸಿದ್ದ ಅವರು, ಆರಾಮದಾಯಕ ಜೀವನ ನಡೆಸುತ್ತಿದ್ದರು. 2020ರಲ್ಲಿ ಸಂಸ್ಥೆ ಸಂಕಷ್ಟದಲ್ಲಿದೆ ಎಂಬ ವದಂತಿಗಳು ಹರಡಿದಾಗಲೂ, ಸಂಸ್ಥೆಯ ವಿಸ್ತರಣೆಯ ಮುನ್ಸೂಚನೆಗಳು ಅವರ ಆತಂಕವನ್ನು ದೂರವಿಟ್ಟಿದ್ದವು. ಕಾರ್ಖಾನೆಯ ಕಾರ್ಯಾಚರಣೆ ನಿಲ್ಲುವುದಕ್ಕಿಂತ ಕೆಲವು ತಿಂಗಳುಗಳ ಮುಂಚೆಯಷ್ಟೇ, ಅಂದರೆ 2022ರಲ್ಲಿ ಅವರು ಗೃಹ ಸಾಲವನ್ನೂ ಪಡೆದಿದ್ದರು.
"ಹೊಸ ಯೋಜನೆಗಳ ತರಬೇತಿಗಾಗಿ ಜನರು ವಿದೇಶಗಳಿಗೆ ಹೋಗುತ್ತಿದ್ದರು, ಹೊಸ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಎಲ್ಲವೂ ಸರಿಯಾಗುತ್ತದೆ ಎಂದುಕೊಂಡು ಮನೆ ಕಟ್ಟಲು 10 ಲಕ್ಷ ರೂ. ಸಾಲ ಪಡೆದೆ. ಈಗ ಬಡ್ಡಿ ಬೆಳೆಯುತ್ತಲೇ ಇದೆ, ಆದರೆ ಹಣ ಹಿಂತಿರುಗಿಸಲು ನನ್ನ ಬಳಿ ಸಾಧ್ಯವಾಗುತ್ತಿಲ್ಲ" ಎಂದು ಪಂತ್ ಹೇಳಿದರು.
ವರ್ಷಗಳ ಕಾಲ ನಿಂತುಕೊಂಡೇ ಕೆಲಸ ಮಾಡಿದ್ದು ಈಗ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ತಾವು ಕುಂಟುತ್ತಾ ನಡೆಯುತ್ತಿರುವುದಾಗಿ ಅವರು ಹೇಳುತ್ತಾರೆ. ಆದರೆ ಅವರಿಗಾಗಲಿ ಅಥವಾ ಅವರ ಪತ್ನಿಗಾಗಲಿ ನಿಯಮಿತವಾಗಿ ವೈದ್ಯರ ಬಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.
"ನಾನು ಕೊನೆಯ ಬಾರಿಗೆ ವೈದ್ಯರ ಬಳಿಗೆ ಹೋದಾಗ 7,000 ರೂ. ಖರ್ಚಾಯಿತು. ಒಂದು ತಿಂಗಳ ನಂತರ ಮತ್ತೆ ಬರಲು ವೈದ್ಯರು ಹೇಳಿದ್ದರು, ಆದರೆ ಅದಕ್ಕೆ ನನ್ನ ಬಳಿ ಹಣವಿಲ್ಲ. ನನ್ನ ಮದುವೆಯ ಎಲ್ಲ ಆಭರಣಗಳನ್ನು ಮಾರಿಬಿಟ್ಟಿದ್ದೇನೆ. ಈಗ ಮಾರಲು ನನ್ನ ಬಳಿ ಏನೂ ಉಳಿದಿಲ್ಲ" ಎಂದು ರೇಖಾ ಪಂತ್ ಹೇಳಿದ್ದಾರೆ.
ನಾಗ್ ಮತ್ತು ಪಂತ್ ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕಚೇರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳಿಂದ ಹಲವು ಬಾರಿ ನೆರವು ಕೋರಿದರು.
ಮೋದಿ ಸರ್ಕಾರವು ಕಾರ್ಖಾನೆಯನ್ನು ಮತ್ತೆ ತೆರೆಯುತ್ತದೆ ಅಥವಾ ತಮಗೆ ಸೂಕ್ತ ಪರಿಹಾರ ನೀಡುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಆದರೆ ತಮ್ಮನ್ನು ಹೀಗೆ ಬೀದಿಯಲ್ಲಿ ಬಿಟ್ಟಿರುವುದು ಅವರಿಗೆ ತೀವ್ರ ಬೇಸರ ತಂದಿದೆ.
"ನಮ್ಮ ನಾಲ್ವರು ಸ್ನೇಹಿತರು ಆರ್ಥಿಕ ಸಂಕಷ್ಟದಿಂದ ಹೋರಾಡುತ್ತಲೇ ಮೃತಪಟ್ಟಿದ್ದಾರೆ. ನಾವು ಈ ಸರ್ಕಾರಕ್ಕೆ ಮತ ಹಾಕಿದ್ದೆವು, ಆದರೆ ಈ ಕಷ್ಟದ ಪರಿಸ್ಥಿತಿಯಲ್ಲಿ ಅವರು ನಮ್ಮನ್ನು ಏಕಾಂಗಿಯಾಗಿ ಬಿಟ್ಟಿದ್ದಾರೆ. ನಮಗೆ ಬರಬೇಕಾದ ನೈಜ ಹಕ್ಕನ್ನೇ ಅವರು ನೀಡುತ್ತಿಲ್ಲ" ಎಂದು ದಿನೇಶ್ ಪಂತ್ ತಮ್ಮ ಅಳಲು ತೋಡಿಕೊಂಡರು.
►ರಾಜೀವ್, ರಾಹುಲ್ ಮತ್ತು ಎಂದೂ ಬಾರದ ಪುನರುಜ್ಜೀವನ
ಉದ್ಯೋಗಿಗಳು ನಡೆಸಿದ ಮೂರು ವರ್ಷಗಳ ಧರಣಿ, ಪತ್ರ ಚಳವಳಿ ಮತ್ತು ಅರ್ಜಿ ಸಲ್ಲಿಕೆ ಅಭಿಯಾನವು ಕೊನೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತಲುಪಿತು. 2025ರ ಡಿಸೆಂಬರ್ 11ರಂದು, ರಾಹುಲ್ ಗಾಂಧಿ ತಮ್ಮ ಸಂಸತ್ ಕಚೇರಿಯಲ್ಲಿ ಬಿಬ್ಕಾಲ್ ಉದ್ಯೋಗಿಗಳ ನಿಯೋಗದೊಂದಿಗೆ ನಡೆಸಿದ ಭೇಟಿಯ ವಿಡಿಯೊವನ್ನು ಹಂಚಿಕೊಂಡರು.
"ಅವರು ವಿವರಿಸಿದ ಪರಿಸ್ಥಿತಿಯು ನಿಮಗೆ ಆಶ್ಚರ್ಯ ತರುವುದು ಮಾತ್ರವಲ್ಲದೆ ತೀವ್ರ ಆಘಾತವನ್ನುಂಟುಮಾಡುತ್ತದೆ" ಎಂದು ಅವರು ತಮ್ಮ ವಾಟ್ಸಾಪ್ ಚಾನೆಲ್ ನಲ್ಲಿ ಬರೆದುಕೊಂಡಿದ್ದು, ಉದ್ಯೋಗಿಗಳು ಸಾಲ ಮತ್ತು ಕೈಸಾಲ ಪಡೆದ ಹಣದಿಂದ ಜೀವನ ಸಾಗಿಸುವ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ ಎಂದು ತಿಳಿಸಿದರು.
ಬಿಬ್ಕಾಲ್ ಸಂಸ್ಥೆಯ ಕನಸು ರಾಹುಲ್ ಅವರ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದಲೇ ಪ್ರಾರಂಭವಾಗಿತ್ತು. 1980ರ ದಶಕದ ಕೊನೆಯಲ್ಲಿ, ಪ್ರಪಂಚದ ಪೋಲಿಯೋ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಭಾಗ ಭಾರತದಲ್ಲೇ ಇದ್ದವು ಮತ್ತು ದೇಶವು ತನ್ನ ಬಹುತೇಕ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಎರಡನ್ನೂ ಬದಲಾಯಿಸಲು ರಾಜೀವ್ ಬಯಸಿದ್ದರು. "ನಾವು ಸಿಡುಬು ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯವಾದರೆ ಪೋಲಿಯೋ ವಿಷಯದಲ್ಲೂ ಅದನ್ನೇಕೆ ಮಾಡಲು ಸಾಧ್ಯವಿಲ್ಲ?" ಎಂದು ಅವರು ಪ್ರಶ್ನಿಸಿದ್ದರು. ಜೈರಾಮ್ ರಮೇಶ್ ತಮ್ಮ ಲೇಖನವೊಂದರಲ್ಲಿ, 1989ರಲ್ಲಿ ಸೋವಿಯತ್ ಒಕ್ಕೂಟದ ನೆರವಿನೊಂದಿಗೆ ಬಿಬ್ಕಾಲ್ ಸ್ಥಾಪನೆಗೆ ರಾಜೀವ್ ಗಾಂಧಿ ಅವರು ಹೇಗೆ ಪ್ರಮುಖ ಪಾತ್ರ ವಹಿಸಿದರು ಎಂಬುದನ್ನು ವಿವರಿಸಿದ್ದಾರೆ. ಈ ಕಾರ್ಖಾನೆಯು 1996ರಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿತು ಮತ್ತು ಭಾರತದ ಶೇಕಡಾ 60ರಷ್ಟು ಪೋಲಿಯೋ ಲಸಿಕೆಗಳನ್ನು ಪೂರೈಸಿತು. 2012ರ ಜನವರಿಯಲ್ಲಿ, ಭಾರತವು ಯಾವುದೇ ಹೊಸ ಪೋಲಿಯೋ ಪ್ರಕರಣವಿಲ್ಲದೆ ಸಂಪೂರ್ಣ ಒಂದು ವರ್ಷವನ್ನು ಪೂರ್ಣಗೊಳಿಸಿತು.
"ನಮ್ಮ ಸಮಸ್ಯೆಗಳನ್ನು ತಿಳಿಸಲು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ನಮಗೆ ಮೂರು ವರ್ಷ ಬೇಕಾಯಿತು. ಅವರು ನಿಜವಾಗಿಯೂ ನೆರವಾದರು. ನಮ್ಮ ಕಣ್ಣೆದುರೇ PMO (ಪ್ರಧಾನಿ ಕಾರ್ಯಾಲಯ) ಅಧಿಕಾರಿಗಳಿಗೆ ಕರೆ ಮಾಡಿ, ನಮಗೆ ಬರಬೇಕಾದ ಬಾಕಿ ಹಣ ಪಾವತಿಸುವಂತೆ ಹೇಳಿದರು" ಎಂದು ಸುನಿಲ್ ಶರ್ಮಾ ಹೇಳಿದರು.
ಈ ಎಲ್ಲಾ ಬೆಳವಣಿಗೆಗಳ ನಂತರ, ಬಿಬ್ಕಾಲ್ (BIBCOL) ಉದ್ಯೋಗಿಗಳಿಗೆ ಫೆಬ್ರವರಿ 2026ರಲ್ಲಿ ಸೆಪ್ಟೆಂಬರ್ನಿಂದ ನವೆಂಬರ್ 2023ರವರೆಗಿನ ಕೇವಲ ಮೂರು ತಿಂಗಳ ಬಾಕಿಯಿರುವ ವೇತನ ಮಾತ್ರ ದೊರೆಯಿತು. ಡಿಸೆಂಬರ್ 2023ರಿಂದ ಈವರೆಗಿನ ಅವರ ವೇತನ ಇನ್ನೂ ಪಾವತಿಯಾಗಿಲ್ಲ.
"ನಾವು ದೀರ್ಘಕಾಲದಿಂದ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದೇವೆ ಮತ್ತು ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ" ಎಂದು ಸುನಿಲ್ ಶರ್ಮಾ ಅಳಲು ತೋಡಿಕೊಂಡರು.
ಸಂಸ್ಥೆ ನಷ್ಟದ ಹಾದಿಯಲ್ಲಿದ್ದರೂ ಕೆಲವು ವಾರಗಳ ಹಿಂದಿನವರೆಗೂ ಚೇತರಿಕೆಯ ಸಣ್ಣದೊಂದು ಭರವಸೆಯಿತ್ತು. 2021ರಲ್ಲಿ ಭಾರತ್ ಬಯೋಟೆಕ್ ಸಹಯೋಗದೊಂದಿಗೆ ಕೊವಾಕ್ಸಿನ್ ಲಸಿಕೆ ತಯಾರಿಸಲು ಬಿಬ್ಕಾಲ್ ಸಂಸ್ಥೆಯನ್ನು ಆಯ್ಕೆ ಮಾಡಲಾಗಿತ್ತು. ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ 30 ಕೋಟಿ ರೂ. ಅನುದಾನವನ್ನೂ ಘೋಷಿಸಿತ್ತು. ಆದರೆ ಉತ್ಪಾದನೆ ಮಾತ್ರ ಎಂದಿಗೂ ಪ್ರಾರಂಭವಾಗಲಿಲ್ಲ. ಜುಲೈ 2024ರಲ್ಲೂ ಸಂಸ್ಥೆಯ ಅಂದಿನ ವ್ಯವಸ್ಥಾಪಕ ನಿರ್ದೇಶಕ ಧನಂಜಯ್ ತಿವಾರಿ, "ಸಂಸ್ಥೆಯ ಪುನಶ್ಚೇತನ ಮತ್ತು ಕಾರ್ಯಚಟುವಟಿಕೆಗಳ ವಿಸ್ತರಣೆಗೆ ಪ್ರಯತ್ನಗಳು ನಡೆಯುತ್ತಿವೆ" ಎಂದು the print ಗೆ ತಿಳಿಸಿದ್ದರು.
ಅದೇ ವರ್ಷದ ಡಿಸೆಂಬರ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಮಾಹಿತಿ ನೀಡಿ, ಬಿಬ್ಕಾಲ್ ಸಂಸ್ಥೆಯು ನಷ್ಟದಲ್ಲಿದೆ. ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಹಣಕಾಸಿನ ನೆರವು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದಿದ್ದರು.
ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಸರ್ಕಾರ ಸಂಸ್ಥೆಯನ್ನು ಮುಚ್ಚಲು ಅನುಮೋದನೆ ನೀಡಿದಾಗ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗೆ ನೀಡಿದ ಪ್ರಕಟಣೆಯಲ್ಲಿ ಈ ನಿರ್ಧಾರದ ಬದಲಾವಣೆಗೆ ಯಾವುದೇ ಸ್ಪಷ್ಟ ಕಾರಣಗಳನ್ನು ನೀಡಲಿಲ್ಲ.
ಸರ್ಕಾರ ಈ ವಿಷಯದಲ್ಲಿ ಮೌನ ವಹಿಸಿದ್ದರೆ, ವಿಪಕ್ಷ ನಾಯಕರು ಬಿಬ್ಕಾಲ್ ಸಂಸ್ಥೆಯ ಅವನತಿ ಮತ್ತು ಮುಚ್ಚುವಿಕೆಯ ಬಗ್ಗೆ ವಿಭಿನ್ನ ಆರೋಪಗಳನ್ನು ಮಾಡಿದ್ದಾರೆ.
ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಸರ್ಕಾರ ಯೋಜನಾಬದ್ಧವಾಗಿ ದುರ್ಬಲಗೊಳಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಖಾಸಗಿ ಲಸಿಕೆ ತಯಾರಕರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬಿಬ್ಕಾಲ್ ಸಂಸ್ಥೆಯನ್ನು "ಉದ್ದೇಶಪೂರ್ವಕವಾಗಿ ನಷ್ಟಕ್ಕೆ ತಳ್ಳಲಾಗಿದೆ" ಎಂದು ಅವರು ದೂರಿದ್ದಾರೆ.
"ಅಗ್ಗದ ದರದಲ್ಲಿ ಲಸಿಕೆಗಳನ್ನು ಪೂರೈಸಿ ಪೋಲಿಯೋ ನಿರ್ಮೂಲನೆಗೆ ನೆರವಾದ ಸಂಸ್ಥೆ ಇದೇ ಬಿಬ್ಕಾಲ್. ಇದು 2017ರವರೆಗೆ ಲಾಭದಲ್ಲಿತ್ತು" ಎಂದು ಗಾಂಧಿ ತಮ್ಮ ವಾಟ್ಸಾಪ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಜೈರಾಮ್ ರಮೇಶ್ ಕಳೆದ ತಿಂಗಳು ಮಾತನಾಡಿ, "ಹೊಸ ಜೇವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಸಂಸ್ಥೆಯ ಸುಮಾರು 60 ಎಕರೆ ಜಾಗವನ್ನು ಸರ್ಕಾರ ಮಾರಾಟ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ.
►ನಷ್ಟದತ್ತ ಸಾಗಿದ್ದು...
ಸುನಿಲ್ ಕುಮಾರ್ ಶರ್ಮಾ ಅವರ ಪ್ರಕಾರ, ಬಿಬ್ಕಾಲ್ ಸಂಸ್ಥೆಯು ಲಾಭದಿಂದ ನಷ್ಟದ ಹಾದಿಗೆ ಕುಸಿದಿರುವುದರ ಹಿಂದೆ ಅದರ ಆಡಳಿತ ಮಂಡಳಿಯ ಕೈವಾಡವಿದೆ.
"ಸಂಸ್ಥೆಯನ್ನು ಹಾಳುಮಾಡಿದ್ದೇ ಇದರ ಮೇಲಧಿಕಾರಿಗಳು. ಹಿರಿಯ ಅಧಿಕಾರಿಗಳು ಕಮಿಷನ್ ಪಡೆಯುತ್ತಿದ್ದರು. ತಮ್ಮ ಜೇಬು ತುಂಬಿಸಿಕೊಂಡು ಸಂಸ್ಥೆಯನ್ನು ನಷ್ಟಕ್ಕೆ ತಳ್ಳಿದರು" ಎಂದು ಅವರು ಆರೋಪಿಸಿದರು.
ಈ ಭ್ರಷ್ಟಾಚಾರದ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲದಿದ್ದರೂ, ಸಿಎಜಿ (Comptroller and Auditor General) ಬಿಬ್ಕಾಲ್ ಸಂಸ್ಥೆಯ ಹಣಕಾಸು ನಿಯಂತ್ರಣ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿನ ಲೋಪಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ತೋರಿಸಿದೆ.
2023ರ ಮಾರ್ಚ್ಗೆ ಕೊನೆಗೊಂಡ ಅವಧಿಯ ಸಾರ್ವಜನಿಕ ವಲಯದ ಉದ್ಯಮಗಳ ಕುರಿತ 2025ರ ವರದಿಯಲ್ಲಿ, "ಆಡಳಿತ ಮಂಡಳಿಯು ನಿರಂತರ ಮನವಿಗಳ ಹೊರತಾಗಿಯೂ ಅಗತ್ಯ ಮಾಹಿತಿಯನ್ನು ನೀಡದ ಕಾರಣ ಬಿಬ್ಕಾಲ್ ಲೆಕ್ಕಪರಿಶೋಧನೆ ನಡೆಸಲು ಸಾಧ್ಯವಾಗಿಲ್ಲ" ಎಂದು ಸಿಎಜಿ ಉಲ್ಲೇಖಿಸಿದೆ. 2010-11ರ ವರದಿಯಲ್ಲೂ ಬಿಬ್ಕಾಲ್ "ಸರಿಯಾದ ವೆಚ್ಚದ ದಾಖಲೆಗಳನ್ನು ನಿರ್ವಹಿಸಿಲ್ಲ" ಎಂದು ಸಿಎಜಿ ತಿಳಿಸಿತ್ತು.
"ಸಾಲಗಳು, ಮುಂಗಡಗಳು ಹಾಗೂ ವಿವಿಧ ಬಾಕಿ ಪಾವತಿಗಳ ಲೆಕ್ಕಾಚಾರಗಳು ದೃಢೀಕರಣಗೊಳ್ಳದೆ ಬಾಕಿಯಿದ್ದವು. ಇದರಿಂದಾಗಿ ಸಂಸ್ಥೆಯ ಮೇಲಾದ ನೈಜ ಪರಿಣಾಮವನ್ನು ಅಂದಾಜಿಸಲು ಸಾಧ್ಯವಾಗಲಿಲ್ಲ" ಎಂದು ವರದಿ ಹೇಳಿದೆ.
ಬಿಬ್ಕಾಲ್ ಸಂಸ್ಥೆಯ ಹಣಕಾಸು ದಾಖಲೆಗಳು ಅದರ ಏರಿಳಿತದ ಹಾದಿಯನ್ನು ಸ್ಪಷ್ಟಪಡಿಸುತ್ತವೆ. 2013-14ರಲ್ಲಿ ಸಂಸ್ಥೆಯು ತನ್ನ ಸಾರ್ವಕಾಲಿಕ ಗರಿಷ್ಠ 202.75 ಕೋಟಿ ರೂ. ವಹಿವಾಟು ನಡೆಸಿ, ತೆರಿಗೆಪೂರ್ವ 11.01 ಕೋಟಿ ರೂ. ಲಾಭ ದಾಖಲಿಸಿತ್ತು. ಮರುವರ್ಷ ವಹಿವಾಟು 146.22 ಕೋಟಿ ರೂ.ಗೆ ಕುಸಿದು, ಲಾಭ 2.09 ಕೋಟಿ ರೂ.ಗೆ ಕುಗ್ಗಿತು. 2015-16ರ ನಿರ್ದೇಶಕರ ವರದಿಯ ಪ್ರಕಾರ, ಸಂಸ್ಥೆಯು ತೆರಿಗೆಪೂರ್ವ 8.96 ಕೋಟಿ ರೂ. ನಷ್ಟ ಅನುಭವಿಸುವ ಮೂಲಕ ಹಿನ್ನಡೆ ಕಂಡಿತು.
2016-17ರ ನಿರ್ದೇಶಕರ ವರದಿಯ ಪ್ರಕಾರ, ಸಂಸ್ಥೆಯು 124.18 ಕೋಟಿ ರೂ. ವಹಿವಾಟು ನಡೆಸಿ 9.22 ಕೋಟಿ ರೂ. ತೆರಿಗೆಪೂರ್ವ ಲಾಭ ಗಳಿಸುವ ಮೂಲಕ ಚೇತರಿಸಿಕೊಂಡಿತು. ಆದರೆ ಈ ಚೇತರಿಕೆ ದೀರ್ಘಕಾಲ ಉಳಿಯಲಿಲ್ಲ. ಬಿಬ್ಕಾಲ್ ಮುಂದಿನ ಆರು ವರ್ಷಗಳ ಕಾಲ ನಿರಂತರ ನಷ್ಟ ಅನುಭವಿಸಿತು. 2022-23ರಲ್ಲಿ 17.06 ಕೋಟಿ ರೂ. ನಿವ್ವಳ ನಷ್ಟ ದಾಖಲಿಸಿತು.
ಸಂಸ್ಥೆಯಲ್ಲಿ ಮೂಲಭೂತ ಸಮಸ್ಯೆಗಳೂ ಇದ್ದವು. ಬಿಬ್ಕಾಲ್ ಪೋಲಿಯೋ ಹನಿ ಲಸಿಕೆಗಾಗಿ ಸರ್ಕಾರದ ಆಡಳಿತಾತ್ಮಕ ಆದೇಶಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿತ್ತು. 2015ರ ಮಾರ್ಚ್ ವರದಿಯಲ್ಲಿ, ಕ್ರೆಡಿಟ್ ರೇಟಿಂಗ್ ಸಂಸ್ಥೆ ICRA, ಕಂಪೆನಿಯ ಶೇಕಡಾ 98ರಷ್ಟು ಮಾರಾಟವು ಈ ಒಂದೇ ಉತ್ಪನ್ನದಿಂದ ಬರುತ್ತದೆ ಎಂದು ಉಲ್ಲೇಖಿಸಿತ್ತು. ಆದಾಯ ತರಬಲ್ಲ ಇತರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಿಬ್ಕಾಲ್ ವಿಫಲವಾಗಿದ್ದು ಹಾಗೂ ಲಸಿಕೆ ಪೂರೈಕೆ ಆದೇಶಗಳು ಇಲ್ಲದಿದ್ದಾಗಲೂ ಘಟಕ ಮತ್ತು ಕಾರ್ಪೊರೇಟ್ ಕಾರ್ಯಾಚರಣೆ ನಡೆಸುವ ವೆಚ್ಚದ ಹೊರೆ ಹೆಚ್ಚಾಗಿದ್ದನ್ನು ವರದಿ ಎತ್ತಿ ತೋರಿಸಿತ್ತು.
"ಲಸಿಕೆ ಟೆಂಡರ್ಗಳು ಸಿಗದ ವರ್ಷಗಳಲ್ಲಿ ಕಾರ್ಖಾನೆ ಮತ್ತು ಕಾರ್ಪೊರೇಟ್ ಮಟ್ಟದ ನಿರ್ವಹಣಾ ವೆಚ್ಚ ಹೆಚ್ಚಾಗಿ ಸಂಸ್ಥೆಯು ನಷ್ಟ ಅನುಭವಿಸುತ್ತಿತ್ತು" ಎಂದು ವರದಿ ಹೇಳಿದೆ.
ವಿಪರ್ಯಾಸವೆಂದರೆ, ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸಲು ನಂತರ ನಡೆಸಿದ ಪ್ರಯತ್ನಗಳಿಗೂ ಹಿನ್ನಡೆಯಾಯಿತು. 2025ರ ಮತ್ತೊಂದು ವರದಿಯಲ್ಲಿ, ಕಾಲರಾ ಲಸಿಕೆ ಅಭಿವೃದ್ಧಿಪಡಿಸಲು ಬಿಬ್ಕಾಲ್ ಮತ್ತು ಟ್ರಾನ್ಸ್ಲೇಶನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಕೈಗೆತ್ತಿಕೊಂಡ ಯೋಜನೆಯನ್ನು ಸಿಎಜಿ ಪರಿಶೀಲಿಸಿತು. 11.40 ಕೋಟಿ ರೂ. ಅನುದಾನ ನೀಡಿದ್ದರೂ, "ಯೋಜನೆಯಲ್ಲಿ ಯಾವುದೇ ತಾಂತ್ರಿಕ ಮೈಲಿಗಲ್ಲು ತಲುಪಲು ಸಾಧ್ಯವಾಗಿಲ್ಲ" ಎಂದು ಅದು ಕಂಡುಕೊಂಡಿದೆ. ನಿಯಮಿತ ಗುರಿ ತಲುಪುವ ಮುನ್ನವೇ 1.37 ಕೋಟಿ ರೂ. ಬಿಡುಗಡೆ ಮಾಡಿರುವುದನ್ನೂ ಸಿಎಜಿ ತೋರಿಸಿದೆ. ಸರ್ಕಾರದ ಬೆಂಬಲಿತ ಜೈವಿಕ ತಂತ್ರಜ್ಞಾನ ಧನಸಹಾಯ ಸಂಸ್ಥೆಯಾದ BIRAC ಈ ಲೋಪವನ್ನು ಒಪ್ಪಿಕೊಂಡಿದೆ. ಅಂತಿಮವಾಗಿ ಈ ಯೋಜನೆಯನ್ನು ಕೈಬಿಡಲಾಯಿತು.
ಆಡಳಿತದಲ್ಲಿದ್ದವರು ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದರೆ ಸಂಸ್ಥೆಯನ್ನು ಉಳಿಸಬಹುದಿತ್ತು ಎಂದು ಶರ್ಮಾ ಹೇಳುತ್ತಾರೆ. ಸರ್ಕಾರ ಈ ಹಿಂದೆ ಬಿಬ್ಕಾಲ್ ಸಂಸ್ಥೆಯ ನೆರವಿಗೆ ಬಂದಿರಲಿಲ್ಲ ಎಂದೇನೂ ಇಲ್ಲ. 2003ರಲ್ಲಿ ಕೇಂದ್ರ ಸರ್ಕಾರವು 4.72 ಕೋಟಿ ರೂ. ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ, ಆ ಸಾಲವನ್ನು ಷೇರುಗಳಾಗಿ ಪರಿವರ್ತಿಸುವ ಮೂಲಕ ಸಂಸ್ಥೆಯ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಿತ್ತು. ಸಾಲು ಸಾಲು ನಷ್ಟದ ವರ್ಷಗಳ ನಂತರ ಸಂಸ್ಥೆಯು 2004-2005ರಲ್ಲಿ ಅಲ್ಪ ಪ್ರಮಾಣದ ಲಾಭ ಕಂಡಿತ್ತು.
ಎರಡು ದಶಕಗಳ ನಂತರ, ಈ ಕಾರ್ಖಾನೆ ಇಂದು ಪಾಳುಬಿದ್ದಿದೆ. ಅಗತ್ಯವಿರುವವರಿಗೆ ಲಸಿಕೆಗಳನ್ನು ತಲುಪಿಸುವ ಕಾರ್ಯಕ್ಕೆ ಸಾಕ್ಷಿಯಾಗಿದ್ದ ಹೆಲಿಪ್ಯಾಡ್, ಇಂದು ಹಳೆಯ ನೆನಪಾಗಿ ಮಾತ್ರ ಉಳಿದಿದೆ. ಒಳಗಿರುವ ನೀರು ಸಂಸ್ಕರಣಾ ಘಟಕ, ವಿದ್ಯುತ್ ಉಪಕೇಂದ್ರಗಳು ಹಾಗೂ ಪ್ರಾಣಿಗಳ ಸಾಕಣೆ ಕೇಂದ್ರಗಳು ಬಳಕೆಯಿಲ್ಲದೆ ಧೂಳು ಹಿಡಿಯುತ್ತಿವೆ.
ಕೋಟಿಗಟ್ಟಲೆ ಭಾರತೀಯರನ್ನು ಪೋಲಿಯೋದಿಂದ ರಕ್ಷಿಸಿದ ಲಸಿಕೆ ತಯಾರಿಕೆಯಲ್ಲಿ ವರ್ಷಗಟ್ಟಲೆ ಶ್ರಮಿಸಿದ ವಿಜಯ್ ಪ್ರಕಾಶ್ ನಾಗ್ ಅವರಿಗೆ ಈ ವಿಪರ್ಯಾಸ ತೀವ್ರ ಆಘಾತ ತಂದಿದೆ.
"ನಮ್ಮ ಶ್ರಮ ಈ ಕಾರ್ಖಾನೆಯನ್ನು ಬೆಳೆಸಲು ನೆರವಾಯಿತು ಮತ್ತು ಭಾರತವನ್ನು ಪೋಲಿಯೋ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇಂದು ಸರ್ಕಾರ ನನ್ನೆರಡು ಕಾಲುಗಳಿಗೂ ಪೋಲಿಯೋ ಬಂದಿದೆಯೇನೋ ಎಂಬಂತಹ ಸ್ಥಿತಿಗೆ ನನ್ನನ್ನು ತಳ್ಳಿದೆ" ಎಂದು ನಾಗ್ ಕಣ್ಣೀರು ಒರೆಸಿಕೊಳ್ಳುತ್ತಾ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಸೌಜನ್ಯ: theprint.in






