ಮೋದಿ ಅಧಿಕಾರವಧಿಯಲ್ಲಿ ಅದಾನಿ ಸಾಮ್ರಾಜ್ಯ ವಿಸ್ತರಣೆ: ರಾಷ್ಟ್ರೀಯ ಹಿತಾಸಕ್ತಿಯೋ ಅಥವಾ ಕಾರ್ಪೊರೇಟ್ ಮಹತ್ವಾಕಾಂಕ್ಷೆಯೋ?

ಗೌತಮ್ ಅದಾನಿ , ನರೇಂದ್ರ ಮೋದಿ | Photo Credit : aljazeera.com
ಅದಾನಿ ಗ್ರೂಪ್ ಗೆ ನೈರೋಬಿ ವಿಮಾನ ನಿಲ್ದಾಣವನ್ನು 30 ವರ್ಷಗಳ ಕಾಲ ನಡೆಸುವ ಹಕ್ಕುಗಳನ್ನು ನೀಡುವ ಪ್ರಸ್ತಾವಿತ ಒಪ್ಪಂದವನ್ನು ಕೀನ್ಯಾದ ಹೈಕೋರ್ಟ್ ಕಳೆದ ವಾರ ಅಮಾನತುಗೊಳಿಸಿತು. ಇದು ಭಾರತದ ಹೊರಗೆ ಅದಾನಿ ಗ್ರೂಪ್ನ ಮೊದಲ ವಿಮಾನ ನಿಲ್ದಾಣ ಉದ್ಯಮವಾಗಿದೆ. ನ್ಯಾಯಾಲಯದ ಆದೇಶವು ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುವ ಅದಾನಿ ಗ್ರೂಪ್ನ ಯೋಜನೆಗಳಿಗೆ ಹಿನ್ನಡೆಯಾಗಿದೆ. ಈ ವಿಸ್ತರಣೆಯು ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕ ಭೇಟಿ, ಮಾತುಕತೆಗಳ ಬೆನ್ನಲ್ಲೇ ನಡೆದಿದೆ. ಭಾರತದ ಹೊರಗಿರುವ ಹೆಚ್ಚಿನ ಅದಾನಿ ಯೋಜನೆಗಳು, ನೆರೆಹೊರೆಯಲ್ಲಾಗಲಿ ಅಥವಾ ದೂರದಲ್ಲಾಗಲಿ, ಮೋದಿ ದೇಶಕ್ಕೆ ಭೇಟಿ ನೀಡಿದ ಅಥವಾ ಅದರ ರಾಷ್ಟ್ರದ ಮುಖ್ಯಸ್ಥರನ್ನು ಭೇಟಿಯಾದ ತಿಂಗಳುಗಳೊಳಗೆ ಘೋಷಿಸಲ್ಪಟ್ಟವು ಎಂದು scroll.in ವಿಶ್ಲೇಷಣೆ ಹೇಳುತ್ತದೆ.
ಉದಾಹರಣೆಗೆ, ಕೀನ್ಯಾದ ಅಧ್ಯಕ್ಷರು 2023ರ ಡಿಸೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಮೂರು ತಿಂಗಳ ನಂತರ, ಮಾರ್ಚ್ನಲ್ಲಿ, ಅದಾನಿ ಗ್ರೂಪ್ ನೈರೋಬಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಮತ್ತು ವಿಸ್ತರಿಸಲು ಪ್ರಸ್ತಾವನೆಯನ್ನು ಸಲ್ಲಿಸಿತು. ಜೂನ್ನಲ್ಲಿ, ಕೀನ್ಯಾದ ಅಧಿಕಾರಿಗಳು ರಾಷ್ಟ್ರೀಯ ವಾಯುಯಾನ ನೀತಿಯನ್ನು ಬದಲಾಯಿಸಿದರು ಮತ್ತು ವಿಮಾನ ನಿಲ್ದಾಣ ಹೂಡಿಕೆ ಯೋಜನೆಯನ್ನು ಅನುಮೋದಿಸಿದರು.
ಮಾಹಿತಿ ಸೋರಿಕೆ ದಾಖಲೆಗಳು ಇದನ್ನು ಬೆಳಕಿಗೆ ತಂದ ನಂತರ, ಕೀನ್ಯಾದ ಮಾನವ ಹಕ್ಕುಗಳ ಆಯೋಗ ಮತ್ತು ವಕೀಲರ ಸಂಘವು ನ್ಯಾಯಾಲಯದ ಮೆಟ್ಟಿಲೇರಿತು. ಯಾವುದೇ ಸ್ಪರ್ಧಾತ್ಮಕ ಬಿಡ್ಡಿಂಗ್ ಇಲ್ಲದೆ ಖಾಸಗಿ ಘಟಕಕ್ಕೆ ಕಾರ್ಯತಂತ್ರದ ಮತ್ತು ಲಾಭದಾಯಕ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುತ್ತಿಗೆಗೆ ನೀಡುವುದು ಕಾನೂನು ಬಾರಹಿರ ಎಂದು ಅದು ವಾದಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸೆಪ್ಟೆಂಬರ್ 9ರಂದು ಹೈಕೋರ್ಟ್ ಪ್ರಸ್ತಾವನೆಯ ಮೇಲೆ ತಾತ್ಕಾಲಿಕ ತಡೆಯಾಜ್ಞೆ ನೀಡಿತು.
ಕೀನ್ಯಾ ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆಗಳು ಎದ್ದವು. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಹೆಚ್ಚಾದಾಗ, ಸರ್ಕಾರಿ ಸಲಹೆಗಾರರೊಬ್ಬರು, ವಿಮಾನ ನಿಲ್ದಾಣಕ್ಕಾಗಿ ಅದಾನಿಗೆ ಯಾವುದೇ ಒಪ್ಪಂದವನ್ನು ನೀಡಲಾಗಿಲ್ಲ. ಆದರೆ, ಕೀನ್ಯಾದಲ್ಲಿ ಹೈ-ವೋಲ್ಟೇಜ್ ವಿದ್ಯುತ್ ಮಾರ್ಗಗಳನ್ನು ನಿರ್ಮಿಸಲು ಅದಾನಿ ಗುಂಪಿಗೆ 1.3 ಬಿಲಿಯನ್ ಡಾಲರ್ ಮೌಲ್ಯದ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಹೇಳಿದರು.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅದಾನಿಯ ಜೊತೆಗಿನ ವಿದ್ಯುತ್ ಖರೀದಿ ಒಪ್ಪಂದವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿರುವ ಸಮಯದಲ್ಲಿ ಕೀನ್ಯಾದಲ್ಲಿ ಈ ಕೋಲಾಹಲ ಉಂಟಾಗಿದೆ. ಈ ಒಪ್ಪಂದ ಕೂಡಾ ಮೋದಿಯ ರಾಜತಾಂತ್ರಿಕತೆಯ ಹಿನ್ನೆಲೆಯಲ್ಲಿ ನಡೆಯಿತು.
ಜೂನ್ 2015ರಲ್ಲಿ ಪ್ರಧಾನಿಯಾಗಿ ಢಾಕಾಗೆ ಮೊದಲ ಬಾರಿಗೆ ಭೇಟಿ ನೀಡಿದ ಮೋದಿ, ಬಾಂಗ್ಲಾದೇಶದ ವಿದ್ಯುತ್ ಅಗತ್ಯಗಳನ್ನು ಪೂರೈಸುವಲ್ಲಿ ಭಾರತವು ಪ್ರಮುಖ ಪಾಲುದಾರರಾಗಬಹುದು ಎಂದಿದ್ದರು. ಎರಡು ತಿಂಗಳ ನಂತರ, ಜಾರ್ಖಂಡ್ ನಿಂದ ವಿದ್ಯುತ್ ರಫ್ತು ಮಾಡಲು ಅದಾನಿ ಬಾಂಗ್ಲಾದೇಶದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಎರಡು ವರ್ಷಗಳ ನಂತರ, 2017ರ ಏಪ್ರಿಲ್ನಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿಯ ಸಮಯದಲ್ಲಿ ಅನುಷ್ಠಾನ ಒಪ್ಪಂದ ನಡೆಯಿತು.
ಮೋದಿ ಸರ್ಕಾರದ ಒತ್ತಡದ ಮೇರೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಬಾಂಗ್ಲಾದೇಶದ ವಿರೋಧ ಪಕ್ಷವು ಆರೋಪಿಸಿತು. ಈಗ, ಢಾಕಾದಲ್ಲಿ ಆಡಳಿತ ಬದಲಾವಣೆಯೊಂದಿಗೆ, ಒಪ್ಪಂದವು ರದ್ದಾಗುವ ಅಪಾಯವಿದೆ.
"ಬಾಂಗ್ಲಾದೇಶ ಸರ್ಕಾರವು ನಮ್ಮ ಪಿಪಿಎ ಅನ್ನು ಪರಿಶೀಲಿಸುತ್ತಿದೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆಯಿಲ್ಲ. ಪಾಲುದಾರಿಕೆಯ ಉತ್ಸಾಹದಲ್ಲಿ, ಗಣನೀಯ ಬಾಕಿ ಪಾವತಿಗಳ ಹೊರತಾಗಿಯೂ ನಾವು ವಿದ್ಯುತ್ ಸರಬರಾಜು ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಅದಾನಿ ಗ್ರೂಪ್ ನ ವಕ್ತಾರರು ಸ್ಕ್ರಾಲ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಕೀನ್ಯಾದಲ್ಲಿನ ಬೆಳವಣಿಗೆಗಳ ಬಗ್ಗೆ ಅಥವಾ ಮೋದಿ ಸರ್ಕಾರದ ರಾಜತಾಂತ್ರಿಕತೆಯು ವಿದೇಶದಲ್ಲಿ ಅದಾನಿಯ ವ್ಯವಹಾರ ಹಿತಾಸಕ್ತಿಗಳನ್ನು ಪೂರೈಸುತ್ತಿದೆ ಎಂಬ ಭಾರತದಲ್ಲಿನ ವಿರೋಧ ಪಕ್ಷದ ಆರೋಪಗಳ ಬಗ್ಗೆ ಅದಾನಿ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
2014ರವರೆಗೆ ಮೋದಿ ಪ್ರಧಾನಿಯಾಗುವವರೆಗೂ, ಭಾರತದ ಹೊರಗೆ ಅದಾನಿ ಗ್ರೂಪ್ ನ ಯೋಜನೆಗಳು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಗಳಿಗೆ ಸೀಮಿತವಾಗಿದ್ದವು. ಈಗ, ಅವು ಏಷ್ಯಾ ಮತ್ತು ಆಫ್ರಿಕಾದಾದ್ಯಂತ ವ್ಯಾಪಕ ಶ್ರೇಣಿಯ ಮೂಲಸೌಕರ್ಯ ವಲಯಗಳನ್ನು ವ್ಯಾಪಿಸಿವೆ.
►ದಕ್ಷಿಣ ಏಷ್ಯಾದಲ್ಲಿನ ವಿವಾದಗಳು
ಅದಾನಿ ಯೋಜನೆಗಳ ಸುತ್ತಲಿನ ವಿವಾದಗಳು ಬಾಂಗ್ಲಾದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವು ದಕ್ಷಿಣ ಏಷ್ಯಾದ ದೇಶಗಳಲ್ಲಿಯೂ ವ್ಯಾಪಿಸಿವೆ.
ಶ್ರೀಲಂಕಾದಲ್ಲಿ, ವಿದ್ಯುತ್ ಮಂಡಳಿಯ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡುತ್ತಾ, ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು 2021ರ ನವೆಂಬರ್ ನಲ್ಲಿ ಮೋದಿ ಅವರು ಪವನ ಶಕ್ತಿ ಯೋಜನೆಯನ್ನು ಅದಾನಿ ಗ್ರೂಪ್ಗೆ ಹಸ್ತಾಂತರಿಸುವಂತೆ "ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ" ಎಂದು ಹೇಳಿದ್ದರು. ಗ್ಲ್ಯಾಸ್ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಸಮ್ಮೇಳನದ ವೇಳೆ ರಾಜಪಕ್ಸೆ ಅವರು ಮೋದಿಯವರನ್ನು ಭೇಟಿಯಾದ ಕೆಲವು ದಿನಗಳ ನಂತರ ಇದು ಸಂಭವಿಸಿತು. ಈ ಬಹಿರಂಗಪಡಿಸುವಿಕೆ ಶ್ರೀಲಂಕಾದಲ್ಲಿ ಕೋಲಾಹಲಕ್ಕೆ ಕಾರಣವಾದ ನಂತರ, ಅಧಿಕಾರಿ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಇದಕ್ಕೂ ಮೊದಲು, 2020ರ ಫೆಬ್ರವರಿಯಲ್ಲಿ, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಹೊಸದಿಲ್ಲಿಯಲ್ಲಿ ಮೋದಿಯವರನ್ನು ಭೇಟಿಯಾಗಿ "ಆರ್ಥಿಕವಾಗಿ ಪ್ರಮುಖ ವಿಷಯಗಳ" ಬಗ್ಗೆ ಚರ್ಚಿಸಿದರು. ತಿಂಗಳುಗಳ ನಂತರ, ಭಾರತ, ಶ್ರೀಲಂಕಾ ಮತ್ತು ಜಪಾನ್ ನಡುವಿನ ಒಪ್ಪಂದದ ಭಾಗವಾಗಿ ಕೊಲಂಬೊ ಬಂದರಿನಲ್ಲಿರುವ ಪೂರ್ವ ಕಂಟೇನರ್ ಟರ್ಮಿನಲ್ ಅನ್ನು ನಿರ್ವಹಿಸಲು ಅದಾನಿ ಗ್ರೂಪ್ ನೆಚ್ಚಿನ ಕಂಪೆನಿಯಾಗಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿದವು. ಒಕ್ಕೂಟಗಳು ಮತ್ತು ಬೌದ್ಧ ಧರ್ಮಗುರುಗಳ ಪ್ರತಿಭಟನೆಯ ನಂತರ, ಶ್ರೀಲಂಕಾ ಒಪ್ಪಂದವನ್ನು ರದ್ದುಗೊಳಿಸಿತು. ಆದರೆ, ಅದಾನಿ ಗ್ರೂಪ್ ಬಂದರಿನಲ್ಲಿ ಮತ್ತೊಂದು ಟರ್ಮಿನಲ್ ಅನ್ನು ನಿರ್ವಹಿಸುವ ಹಕ್ಕುಗಳನ್ನು ಪಡೆದುಕೊಂಡಿತು.
ಈ ವರ್ಷ, ಅದಾನಿ ಗ್ರೂಪ್ ನೇಪಾಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿಕೊಳ್ಳಲು ನೇಪಾಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಚೀನಾದಿಂದ ಸಾಲ ಪಡೆದು ನಿರ್ಮಿಸಲಾದ ಪೋಖರಾ ಮತ್ತು ಭೈರಹವಾದಲ್ಲಿನ ಎರಡು ಹೊಸ ವಿಮಾನ ನಿಲ್ದಾಣಗಳು ಇಲ್ಲಿಯವರೆಗೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ. ಏಕೆಂದರೆ, ಭಾರತವು ಜೆಟ್ ವಿಮಾನಗಳಿಗಾಗಿ ಎತ್ತರದ ವಾಯು ಮಾರ್ಗಗಳನ್ನು ತೆರೆಯಲಿಲ್ಲ. ನೇಪಾಳದ ಪ್ರಧಾನಿ 2023ರ ಜೂನ್ ನಲ್ಲಿ ನಡೆದ ಸಭೆಯಲ್ಲಿ ಮೋದಿ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆನಂತರ ಅದಾನಿ ಗ್ರೂಪ್ನ ಅಧಿಕಾರಿಗಳು ನೇಪಾಳದ ನಾಗರಿಕ ವಿಮಾನಯಾನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಕಠ್ಮಂಡುವಿಗೆ ಭೇಟಿ ನೀಡಿದರು ಎಂದು ದೇಶದ ಹಣಕಾಸು ಸಚಿವರು ತಿಳಿಸಿದ್ದಾರೆ.
►ತಾಂಜಾನಿಯಾದಿಂದ ವಿಯೆಟ್ನಾಂವರೆಗೆ
ಮೋದಿಯವರ ರಾಜತಾಂತ್ರಿಕತೆ ಮತ್ತು ಅದಾನಿಯ ವ್ಯವಹಾರಗಳು ಜೊತೆಜೊತೆಯಾಗಿ ಸಾಗಿದ್ದು ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲ.
ಮಾರ್ಚ್ 2017ರಲ್ಲಿ, ಮೋದಿ ಹೊಸದಿಲ್ಲಿಯಲ್ಲಿ ಮಲೇಷ್ಯಾದ ಪ್ರಧಾನಿ ನಜೀಬ್ ತುನ್ ರಜಾಕ್ ಅವರಿಗೆ ಆತಿಥ್ಯ ವಹಿಸಿದ್ದರು. ಅಲ್ಲಿ ಇಬ್ಬರೂ ಎರಡು ದೇಶಗಳ ನಡುವಿನ ಆರ್ಥಿಕ ಸಂಪರ್ಕಗಳನ್ನು ಹೇಗೆ ಹೆಚ್ಚಿಸುವುದು ಮತ್ತು ಭಾರತೀಯ ಸಂಸ್ಥೆಗಳ ವ್ಯಾಪಾರ ನಿರೀಕ್ಷೆಗಳ ಕುರಿತು ಚರ್ಚಿಸಿದರು. ಒಂದು ತಿಂಗಳ ನಂತರ, ಕ್ಯಾರಿ ದ್ವೀಪದಲ್ಲಿ ಮೆಗಾ ಕಂಟೇನರ್ ಬಂದರು ಯೋಜನೆಯನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಮಲೇಷಿಯಾದ ಮೂಲಸೌಕರ್ಯ ಸಮೂಹದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.
ಜೂನ್ 2018ರಲ್ಲಿ, ಮೋದಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರನ್ನು ಭೇಟಿಯಾದರು. ಆ ತಿಂಗಳ ಕೊನೆಯಲ್ಲಿ, ಸಿಂಗಾಪುರದ ಸರ್ಕಾರಿ ಸ್ವಾಮ್ಯದ ಹೂಡಿಕೆ ಸಂಸ್ಥೆ ಟೆಮಾಸೆಕ್ ಅದಾನಿ ಬಂದರುಗಳಲ್ಲಿ 1,000 ಕೋಟಿ ರೂಪಾಯಿ ಹೂಡಿಕೆ ಮಾಡಿತು.
2023ರ ಅಕ್ಟೋಬರ್ನಲ್ಲಿ ಮೋದಿ ದಿಲ್ಲಿಯಲ್ಲಿ ತಾಂಜಾನಿಯಾ ಅಧ್ಯಕ್ಷೆ ಸಮಿಹಾ ಸುಲುಹು ಅವರಿಗೆ ಆತಿಥ್ಯ ವಹಿಸಿಕೊಂಡರು. ಎಂಟು ತಿಂಗಳ ನಂತರ, 2024ರ ಮೇ ತಿಂಗಳಲ್ಲಿ, ಅದಾನಿ ಗ್ರೂಪ್ ದಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ ಅನ್ನು ನಿರ್ವಹಿಸಲು 30 ವರ್ಷಗಳ ರಿಯಾಯಿತಿ ಒಪ್ಪಂದವನ್ನು ಪಡೆದುಕೊಂಡಿತು. ಟರ್ಮಿನಲ್ ಸೇವೆಗಳನ್ನು ಒದಗಿಸುವ ಕಂಪನಿಯಲ್ಲಿ 95% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಅಬುಧಾಬಿಯ ಎಡಿ ಪೋರ್ಟ್ಸ್ ಗುಂಪಿನೊಂದಿಗೆ ಜಂಟಿ ಉದ್ಯಮವನ್ನೂ ಮಾಡಿಕೊಂಡಿತು.
ಜುಲೈ 24ರಿಂದ ಆಗಸ್ಟ್ ಮಧ್ಯೆ ವಿಯೆಟ್ನಾಂನ ಪ್ರಧಾನಿ ಫಾಮ್ ಮಿನ್ಹ್ ಚಿನ್ಹ್ ಭಾರತಕ್ಕೆ ಬಂದಿದ್ದರು. ಪ್ರಧಾನಿ ಮೋದಿಯವರನ್ನು ಭೇಟಿಯಾದ ಅದೇ ದಿನ ಅವರು ಗೌತಮ್ ಅದಾನಿ ಅವರೊಂದಿಗೆ ಮಾತುಕತೆ ನಡೆಸಿದರು. ಹೊಸ ಬಂದರು ಯೋಜನೆಗೆ ಅನುಮೋದನೆ ದೊರೆತ ನಂತರ, ಅದಾನಿ ಗ್ರೂಪ್ ಈಗ ವಿಯೆಟ್ನಾಂನ ಎರಡು ವಿಮಾನ ನಿಲ್ದಾಣಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ನೋಡುತ್ತಿದೆ ಎಂದು ಘೋಷಿಸಿತು.
ಜುಲೈ 2017ರಲ್ಲಿ ಮೋದಿ ಇಸ್ರೇಲ್ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾದ ನಂತರ, ಅದಾನಿ ಗ್ರೂಪ್ ಇಸ್ರೇಲ್ನೊಂದಿಗೆ ಗಮನಾರ್ಹ ವ್ಯಾಪಾರ ಸಂಬಂಧಗಳನ್ನು ಬೆಳೆಸಿಕೊಂಡಿದೆ. ಮೋದಿ 2018ರ ಜನವರಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಆತಿಥ್ಯ ವಹಿಸಿದ್ದರು. ಆ ವರ್ಷದ ಡಿಸೆಂಬರ್ನಲ್ಲಿ, ಅದಾನಿ ಗ್ರೂಪ್ ಇಸ್ರೇಲಿ ಸಂಸ್ಥೆ ಎಲ್ಬಿಟ್ ಸಿಸ್ಟಮ್ಸ್ ಜೊತೆ ಜಂಟಿ ಉದ್ಯಮದಲ್ಲಿ ವೈಮಾನಿಕ ಮಿಲಿಟರಿ ಡ್ರೋನ್ಗಳನ್ನು ತಯಾರಿಸಲು ತೆಲಂಗಾಣದಲ್ಲಿ ಒಂದು ಸೌಲಭ್ಯವನ್ನು ಉದ್ಘಾಟಿಸಿತು. 2022ರಲ್ಲಿ, ಅದಾನಿ ಗ್ರೂಪ್ ಇಸ್ರೇಲ್ ನ ಹೈಫಾ ಬಂದರನ್ನು ತಮ್ಮದಾಗಿಸಿತು.
►ʼಅದಾನಿ ಜೀʼ ವಿದೇಶಾಂಗ ನೀತಿ
ಅದಾನಿ ಗ್ರೂಪ್ ನ ಅಧ್ಯಕ್ಷರಾದ ಬಿಲಿಯನೇರ್ ಗೌತಮ್ ಅದಾನಿ ಭಾರತದ ಪ್ರಧಾನಿಯ ಆಪ್ತರು. ಇಬ್ಬರೂ ಗುಜರಾತ್ ರಾಜ್ಯದವರು. 2014ರಲ್ಲಿ ಮೋದಿ ಪ್ರಧಾನಿಯಾದಾಗಿನಿಂದ, ಅದಾನಿ ಗ್ರೂಪ್ ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿದೆ. ಭಾರತದಲ್ಲಿ ವಿಮಾನ ನಿಲ್ದಾಣಗಳು, ಬಂದರುಗಳು, ಕಲ್ಲಿದ್ದಲು ಗಣಿಗಳು, ವಿದ್ಯುತ್ ಕೇಂದ್ರಗಳು ಮತ್ತು ಅನಿಲ ಕೇಂದ್ರಗಳ ಅತಿದೊಡ್ಡ ಖಾಸಗಿ ಮಾಲೀಕರಾಗಿದೆ ಅದಾನಿ ಗ್ರೂಪ್.
2023ರ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಇದು ಭಾರತದ ವಿದೇಶಾಂಗ ನೀತಿಯಲ್ಲ. ಇದು ಅದಾನಿ ಜೀ ಅವರ ವಿದೇಶಾಂಗ ನೀತಿ" ಎಂದಿದ್ದರು.
ಅನೇಕ ತಜ್ಞರು ಅದಾನಿಯ ಜಾಗತಿಕ ಬೆಳವಣಿಗೆಯನ್ನು ಭಾರತವು ಚೀನಾದೊಂದಿಗೆ ಸ್ಪರ್ಧಿಸುವ ಒಂದು ಮಾರ್ಗವೆಂದು ನೋಡುತ್ತಾರೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ, ಈ ಗುಂಪು ಚೀನಾದ ಬೃಹತ್ 'ಬೆಲ್ಟ್ ಆಂಡ್ ರೋಡ್' ಯೋಜನೆಗಳನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. "ಅದಾನಿಯ ಮೂಲಸೌಕರ್ಯ ಸಾಮ್ರಾಜ್ಯವು ಭಾರತ ಸರ್ಕಾರದ ಆರ್ಥಿಕ ಕಾರ್ಯಸೂಚಿಗೆ ಹೊಂದಿಕೆಯಾಗುತ್ತದೆ" ಎಂದು ಲಂಡನ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ನ ವಿಶ್ಲೇಷಕ ಆಲ್ಬರ್ಟ್ ವಿಡಾಲ್ ಬರೆದಿದ್ದಾರೆ.
ಒಂದೇ ಖಾಸಗಿ ಕಂಪನಿಗೆ ಸರ್ಕಾರ ಇಷ್ಟೊಂದು ಬೆಂಬಲ ನೀಡುವ ನಿರ್ಧಾರವನ್ನು ವಿಮರ್ಶಕರು ಪ್ರಶ್ನಿಸಿದ್ದಾರೆ. 2022ರಲ್ಲಿ, ಪತ್ರಕರ್ತೆ ನಿರುಪಮಾ ಸುಬ್ರಮಣಿಯನ್ ಅವರು ಭಾರತೀಯ ರಾಜತಾಂತ್ರಿಕತೆಯು ಪಾರದರ್ಶಕವಾಗಿರಬೇಕು. ರಾಷ್ಟ್ರೀಯ ಹಿತಾಸಕ್ತಿಯನ್ನು ಒಂದು ನಿರ್ದಿಷ್ಟ ವ್ಯವಹಾರ ಘಟಕದ ಯಶಸ್ಸಿಗೆ ತುಂಬಾ ನಿಕಟವಾಗಿ ಜೋಡಿಸುವುದನ್ನು ತಪ್ಪಿಸಬೇಕು ಎಂದಿದ್ದರು.
ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್ ಬರ್ಗ್ ರಿಸರ್ಚ್ ಹೊರಿಸಿದ ಕಾರ್ಪೊರೇಟ್ ವಂಚನೆ ಮತ್ತು ಹಣ ವರ್ಗಾವಣೆ ಆರೋಪಗಳಿಗಾಗಿ ಅದಾನಿ ಗ್ರೂಪ್ ಕಳೆದ ವರ್ಷ ಜಾಗತಿಕ ಸುದ್ದಿಗಳಲ್ಲಿ ಕಾಣಿಸಿಕೊಂಡ ನಂತರ ಈ ಪ್ರಶ್ನೆಗಳು ಹೆಚ್ಚು ತೀವ್ರವಾಗಿವೆ. ಇತ್ತೀಚೆಗೆ, ಸ್ವಿಸ್ ಅಧಿಕಾರಿಗಳು ಅದಾನಿ ಗ್ರೂಪ್ ಪರವಾಗಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆಂದು ಶಂಕಿಸಲಾಗಿರುವ ತೈವಾನೀಸ್ ನಿವಾಸಿಯೊಬ್ಬರು ಹೊಂದಿದ್ದ 311 ಮಿಲಿಯನ್ ಡಾಲರ್ ಅನ್ನು ಸ್ಥಗಿತಗೊಳಿಸಿದ್ದಾರೆ. ಅದಾನಿ ಗ್ರೂಪ್ ಈ ಆರೋಪಗಳನ್ನು ನಿರಾಕರಿಸಿದೆ.
ಕೀನ್ಯಾದ ವಿರೋಧ ಪಕ್ಷದ ನಾಯಕರು ಅದಾನಿಯೊಂದಿಗಿನ ವಿಮಾನ ನಿಲ್ದಾಣ ಒಪ್ಪಂದವನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿರುವ ಹೊತ್ತಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಗೌತಮ್ ಅದಾನಿಯನ್ನು ಮೋದಿಯ ಸ್ನೇಹಿತ ಎಂದು ನೋಡಲಾಗುತ್ತಿರುವುದರಿಂದ ಕೀನ್ಯಾದಲ್ಲಿನ ಪ್ರತಿಭಟನೆಗಳು "ಸುಲಭವಾಗಿ ಭಾರತ ಮತ್ತು ಭಾರತ ಸರ್ಕಾರದ ವಿರುದ್ಧದ ಕೋಪವಾಗಿ ಬದಲಾಗಬಹುದು" ಎಂದು ಎಚ್ಚರಿಸಿದ್ದಾರೆ.
ಸೌಜನ್ಯ: scroll.in






