ಭಾರತಕ್ಕೆ ಮುಂಗಾರು ಆಗಮಿಸಿದರೂ ಒಣಹವೆ; ಜೂನ್ ಮಳೆ ಕೈಕೊಡಲು ಅಸಲಿ ಕಾರಣಗಳೇನು?

Photo Credit : Windy
ಮುಂಗಾರು ಬಂದಿದೆ. ಆದರೂ ಭಾರತದ ಬಹುಪಾಲು ಭಾಗ ಇನ್ನೂ ಮಳೆಗಾಗಿ ಕಾಯುತ್ತಿದೆ. 146 ವರ್ಷಗಳ ಇತಿಹಾಸದಲ್ಲೇ ಅತಿ ಕಡಿಮೆ ಮಳೆ ಬಿದ್ದ ತಿಂಗಳಾಗಿ 2026ರ ಜೂನ್ ದಾಖಲಾಗಿದೆ. ನಿಗದಿತ ಸಮಯಕ್ಕಿಂತ ಸ್ವಲ್ಪ ಹಿಂದೆ ನೈಋತ್ಯ ಮುಂಗಾರು ಜೂನ್ 4ರಂದು ಕೇರಳ ಕರಾವಳಿ ಪ್ರದೇಶವನ್ನು ತಲುಪಿದೆ. ನಂತರ ಜೂನ್ 15ರ ಹೊತ್ತಿಗೆ ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗವನ್ನು ಆವರಿಸಿದ ಬಳಿಕ ಅದರ ಪ್ರಗತಿ ಸ್ಥಗಿತಗೊಂಡಿದೆ.
ಹದಿನೈದು ದಿನಗಳ ಕಾಲ ದೇಶದ ಬಹುತೇಕ ಭಾಗಗಳಲ್ಲಿ ಆಕಾಶ ಶಾಂತವಾಗಿತ್ತು. ಶೇ 40ಕ್ಕೂ ಹೆಚ್ಚು ಪ್ರಮಾಣದಲ್ಲಿ ಮಳೆಯ ಕೊರತೆ ಕಂಡುಬಂದಿದೆ. ಮಧ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇ 60ರಷ್ಟು ಕಡಿಮೆ ಮಳೆ ದಾಖಲಾಗಿದೆ. ನಂತರ ಕೆಲವು ಪ್ರದೇಶಗಳಲ್ಲಿ ಮಳೆ ಸ್ವಲ್ಪ ಪುನಶ್ಚೇತನಗೊಂಡಿದೆ. ಆದರೆ ಜೂನ್ನಲ್ಲಿ ಕಂಡುಬಂದ ಕೊರತೆಯನ್ನು ನೀಗಿಸಲು ಇನ್ನೂ ಸಾಧ್ಯವಾಗಿಲ್ಲ.
ಭಾರತದಲ್ಲಿ ಮುಂಗಾರು ಕೊರತೆಗೆ ಕಾರಣವೇನು?
ಮುಂಗಾರು ಕೊರತೆಗೆ ಒಂದೇ ಕಾರಣವನ್ನು ನೀಡಲು ಸಾಧ್ಯವಿಲ್ಲ. ಈ ಬಾರಿ ಐದು ಮಳೆ-ನಿಗ್ರಹ ವ್ಯವಸ್ಥೆಗಳು ಸಾಲಾಗಿ ನಿಂತಿವೆ.
ಮೊದಲನೆಯದಾಗಿ, ಮ್ಯಾಡೆನ್-ಜೂಲಿಯನ್ ಆಸಿಲೇಶನ್ (MJO) ದುರ್ಬಲವಾಗಿದೆ. ಅಂದರೆ, ಪ್ರತಿ 30ರಿಂದ 60 ದಿನಗಳಿಗೊಮ್ಮೆ ಸಮಭಾಜಕ ವೃತ್ತವನ್ನು ಸುತ್ತುವ ಮೋಡಗಳು ಮತ್ತು ಗುಡುಗು-ಸಿಡಿಲುಗಳ ವ್ಯಾಪಕ, ಲಯಬದ್ಧ ಚಲನೆ. ಅವು ಹಿಂದೂ ಮಹಾಸಾಗರದ ಮೇಲೆ ಬಂದಾಗ ಮಳೆಗೆ ಪ್ರಚೋದನೆ ನೀಡುತ್ತವೆ. ಜೂನ್ನಲ್ಲಿ ಈ MJO ದೂರ ಸರಿದಿದ್ದು, ಮಳೆಯ ಪ್ರಚೋದಕವನ್ನೂ ತನ್ನೊಡನೆ ಕರೆದೊಯ್ದಿದೆ.
ಎರಡನೆಯದಾಗಿ, ಸೋಮಾಲಿ ಜೆಟ್ ದುರ್ಬಲವಾಗಿದೆ. ಈ ಸೋಮಾಲಿ ಜೆಟ್ ಒಂದು ಕೆಳಮಟ್ಟದ ಗಾಳಿಯ ಪ್ರವಾಹವಾಗಿದ್ದು, ಪೂರ್ವ ಆಫ್ರಿಕಾದಿಂದ ಸಮಭಾಜಕ ವೃತ್ತದ ಮೂಲಕ ಹಾದು ಅರೆಬಿಯನ್ ಸಮುದ್ರದಿಂದ ಭಾರತಕ್ಕೆ ತೇವಾಂಶವನ್ನು ಸಾಗಿಸುತ್ತದೆ. ಇದು ಮುಂಗಾರಿನ ಪ್ರಮುಖ ತೇವಾಂಶ ಸರಬರಾಜು ಮಾರ್ಗವಾಗಿದ್ದು, ಈ ಬಾರಿ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದೆ.
ಮೂರನೆಯದಾಗಿ, ವಾಯುವ್ಯ ಭಾರತ ಮತ್ತು ಪಶ್ಚಿಮ ಏಷ್ಯಾದ ಮರುಭೂಮಿ ಪ್ರದೇಶಗಳಿಂದ ಬೀಸಿದ ಬಿಸಿ, ಒಣಗಾಳಿಯು ಮೋಡಗಳು ಮಳೆಯಾಗುವುದನ್ನು ತಡೆಯುವ ಮುಚ್ಚಳದಂತೆ ಮಧ್ಯ ಭಾರತದ ಮೇಲೆ ನೆಲೆಗೊಂಡಿತು.
ನಾಲ್ಕನೆಯದಾಗಿ, ಪಶ್ಚಿಮ ಮತ್ತು ಪೂರ್ವ ಹಿಂದೂ ಮಹಾಸಾಗರದ ನಡುವಿನ ತಾಪಮಾನ ವ್ಯತ್ಯಾಸವನ್ನು ಸೂಚಿಸುವ ಇಂಡಿಯನ್ ಓಶನ್ ಡೈಪೋಲ್ ತಟಸ್ಥ ಸ್ಥಿತಿಯಲ್ಲಿಯೇ ಉಳಿಯಿತು. ಸಾಮಾನ್ಯವಾಗಿ ಬೆಚ್ಚಗಿನ ಪಶ್ಚಿಮ ಸಾಗರವು ಮುಂಗಾರಿಗೆ ನೀಡುವ ಉತ್ತೇಜನ ಈ ಬಾರಿ ದೊರೆಯಲಿಲ್ಲ.
ಐದನೆಯದಾಗಿ, ಸಾಮಾನ್ಯವಾಗಿ ಒಳನಾಡಿಗೆ ಮಳೆಯನ್ನು ಎಳೆಯುವ ಕಡಿಮೆ ಒತ್ತಡದ ವ್ಯವಸ್ಥೆಗಳನ್ನು ಸೃಷ್ಟಿಸುವಲ್ಲಿ ಬಂಗಾಳ ಕೊಲ್ಲಿ ವಿಫಲವಾಗಿದೆ.
ಭಾರತದ ಮಳೆಯ ಕೊರತೆಗೆ ಎಲ್ ನಿನೊ ಕಾರಣವೇ?
ಮುಖ್ಯಾಂಶಗಳ ಹೊರತಾಗಿಯೂ ಎಲ್ ನಿನೊ ಇನ್ನೂ ಸಂಪೂರ್ಣವಾಗಿ ರೂಪುಗೊಂಡಿಲ್ಲ. ಎಲ್ ನಿನೊ ಎಂದರೆ ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದ ನೀರು ಬೆಚ್ಚಗಾಗುವುದು. ಇದರಿಂದ ಏರುತ್ತಿರುವ, ಮಳೆ-ತರುವ ಗಾಳಿಯ ಪ್ರವಾಹ ಪೂರ್ವದತ್ತ ಸರಿಯುತ್ತದೆ ಮತ್ತು ಮುಳುಗುವ ಒಣ ಗಾಳಿಯು ಭಾರತದತ್ತ ಹರಿಯುತ್ತದೆ. ಅಮೆರಿಕದ ಹವಾಮಾನ ಸಂಸ್ಥೆ NOAA ಈಗಾಗಲೇ ಜೂನ್ ಎರಡನೇ ವಾರದಲ್ಲಿ ಎಲ್ ನಿನೊ ಪ್ರಭಾವ ಆರಂಭವಾಗಿದೆ ಮತ್ತು ಅದು ಚಳಿಗಾಲದ ವೇಳೆಗೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದೆ.
ಆದರೆ, ಮುಂಗಾರು ಮೇಲಿನ ಅದರ ಪ್ರಭಾವ ಸಾಮಾನ್ಯವಾಗಿ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಹೆಚ್ಚು ಸ್ಪಷ್ಟವಾಗುತ್ತದೆ. ಜೂನ್ನಲ್ಲಿ ಎಲ್ ನಿನೊ ಸೀಮಿತ ಪಾತ್ರ ವಹಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಜುಲೈ ನಂತರ ಮುಂಗಾರು ಚೇತರಿಸಿಕೊಳ್ಳಲಿದೆಯೇ?
ಮುಂಗಾರು ಚೇತರಿಕೆಯ ಲಕ್ಷಣಗಳು ಇನ್ನೂ ಇವೆ. ಜೂನ್ 23ರ ಸುಮಾರಿಗೆ ಮಳೆ ಪುನಶ್ಚೇತನಗೊಂಡಿದೆ. ಮುಂಗಾರು ಮುಂಬೈ ತಲುಪಿದ್ದು, ಸೋಮಾಲಿ ಜೆಟ್ ಬಲಗೊಂಡಂತೆ ಮಧ್ಯ ಭಾರತಕ್ಕೂ ಪ್ರವೇಶಿಸಿದೆ. ಆದರೆ ಭಾರತೀಯ ಹವಾಮಾನ ಇಲಾಖೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಋತುವನ್ನು ನಿರೀಕ್ಷಿಸಿದೆ. ದೀರ್ಘಾವಧಿಯ (1971ರಿಂದ 2020ರವರೆಗಿನ) ಸರಾಸರಿಯ ಶೇ 90ರಷ್ಟು ಮಳೆ ಈ ಮುಂಗಾರು ಅವಧಿಯಲ್ಲಿ ದಾಖಲಾಗಬಹುದು.
ಈಗಿನ ಹವಾಮಾನ ವಿನ್ಯಾಸವು ಚಿಂತೆಗೆ ಕಾರಣವಾಗಿದೆ. ಬೆಚ್ಚಗಿನ ವಾತಾವರಣವು ಹೆಚ್ಚು ನೀರಾವಿಯನ್ನು ಹಿಡಿದಿಡುತ್ತದೆ. ಅಂದರೆ, ಪ್ರತಿ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಗೆ ವಾತಾವರಣವು ಶೇ 7ರಷ್ಟು ಹೆಚ್ಚು ತೇವಾಂಶವನ್ನು ಹಿಡಿದಿಡಬಲ್ಲದು. ಇದರಿಂದ ಭಾರತವು ಬರಗಾಲ ಮತ್ತು ಜಲಪ್ರಳಯದ ಪರ್ಯಾಯ ಚಕ್ರಕ್ಕೆ ಸಿಲುಕುವ ಸಾಧ್ಯತೆಯಿದೆ. ಅಂದರೆ, ದೀರ್ಘಕಾಲದ ಒಣ ವಾತಾವರಣದ ನಂತರ ಹಠಾತ್ ಭಾರೀ ಮಳೆಯು ಸುರಿಯಬಹುದು. ಮುಂಗಾರು ಕಣ್ಮರೆಯಾಗುತ್ತಿಲ್ಲ, ಆದರೆ ಅದನ್ನು ಮುಂಚಿತವಾಗಿ ನಿರೀಕ್ಷಿಸುವುದು ಕಷ್ಟವಾಗುತ್ತಿದೆ.
ಮಾಹಿತಿ ಕೃಪೆ: India Today






