ಇಸ್ರೇಲ್ ನಡೆಸುವ ನರಮೇಧವನ್ನು ಬೆಂಬಲಿಸುತ್ತಿವೆ 60 ಕ್ಕೂ ಹೆಚ್ಚು ಕಂಪೆನಿಗಳು!
► ಹತ್ಯಾಕಾಂಡದಲ್ಲೂ ಕೋಟಿ ಕೋಟಿ ಲಾಭ ► "ಕೆಲವರಿಗೆ, ಹತ್ಯಾಕಾಂಡವು ಲಾಭದಾಯಕವಾಗಿದೆ " - ವಿಶ್ವಸಂಸ್ಥೆಯ ವರದಿ ಹೇಳಿದ್ದೇನು ?

ನಾವೆಲ್ಲರೂ ವಾಟ್ಸಾಪ್, ಇನ್ಸ್ಟಾಗ್ರಾಮ್, ಗೂಗಲ್ ಮತ್ತು ಯೂಟ್ಯೂಬ್ ಗಳನ್ನು ಪ್ರತಿದಿನ ಬಳಸುತ್ತೇವೆ. ಆದರೆ ಇತ್ತೀಚಿನ ವರದಿಯೊಂದು ಈ ಅಪ್ಲಿಕೇಶನ್ ಗಳ ಹಿಂದಿರುವ ಬೃಹತ್ ಟೆಕ್ ಕಂಪೆನಿಗಳು ಫೆಲೆಸ್ತೀನ್ ನಲ್ಲಿ ನಡೆಯುತ್ತಿರುವ ಹತ್ಯಾಕಾಂಡಕ್ಕೆ ಸಹಕರಿಸುತ್ತಿವೆ ಎಂದು ಹೇಳುತ್ತದೆ.
ಇದು ನಿಜಕ್ಕೂ ಆಘಾತಕಾರಿ ವಿಷಯ. ಒಂದು ಕಡೆ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೆ, ಇನ್ನೊಂದು ಕಡೆ ಕೆಲವು ಬೃಹತ್ ಕಂಪೆನಿಗಳು ಇದರಿಂದ ಕೋಟಿಕೋಟಿ ಲಾಭ ಗಳಿಸುತ್ತಿವೆ.
ಇದು ಹೇಗೆ ಸಾಧ್ಯ?
ವಿಶ್ವ ಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬಾನೀಸ್ ಅವರ ವರದಿಯ ಪ್ರಕಾರ, ಇಸ್ರೇಲ್ ನ "ಹತ್ಯಾಕಾಂಡದ ಆರ್ಥಿಕತೆ"ಗೆ ವಿಶ್ವದ ಅನೇಕ ಕಂಪೆನಿಗಳು ಬೆಂಬಲ ನೀಡುತ್ತಿವೆ.
ಫ್ರಾನ್ಸೆಸ್ಕಾ ಅಲ್ಬಾನೀಸ್ ಅವರು ಇತ್ತೀಚೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ತಮ್ಮ ವರದಿಯನ್ನು ಮಂಡಿಸುತ್ತಾ ಇಸ್ರೇಲ್ ನೊಂದಿಗಿನ ಎಲ್ಲಾ ವ್ಯಾಪಾರ ಮತ್ತು ಹಣಕಾಸು ಸಂಬಂಧಗಳನ್ನು ಕಡಿದುಕೊಳ್ಳುವಂತೆ ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಇದರಲ್ಲಿ ಶಸ್ತ್ರಾಸ್ತ್ರಗಳ ಸಂಪೂರ್ಣ ಬಹಿಷ್ಕಾರವೂ ಸೇರಿದೆ.
ಇಸ್ರೇಲ್ "ಹತ್ಯಾಕಾಂಡದ ಆರ್ಥಿಕತೆ"ಯನ್ನು ನಡೆಸುತ್ತಿದೆ ಮತ್ತು ಇದಕ್ಕೆ ಅಂತರರಾಷ್ಟ್ರೀಯ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಎಂದು ಫ್ರಾನ್ಸೆಸ್ಕಾ ಅಲ್ಬಾನೀಸ್ ಬಲವಾಗಿ ವಾದಿಸಿದ್ದಾರೆ.
"ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಇಸ್ರೇಲ್ ಆಧುನಿಕ ಇತಿಹಾಸದ ಅತಿ ಕ್ರೂರ ಹತ್ಯಾಕಾಂಡಗಳಲ್ಲಿ ಒಂದನ್ನು ನಡೆಸುತ್ತಿದೆ" ಎಂದು ಆಲ್ಬನೀಸ್ ವಿಷಾದಿಸಿದ್ದಾರೆ.
ಕಳೆದ 22 ತಿಂಗಳುಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಸುಮಾರು 57,000 ಪ್ಯಾಲೆಸ್ಟೀನಿಯನ್ನರು ಹತರಾಗಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ನಗರಗಳು ಮತ್ತು ಪಟ್ಟಣಗಳು ನೆಲಸಮವಾಗಿವೆ, ಆಸ್ಪತ್ರೆಗಳು ಮತ್ತು ಶಾಲೆಗಳ ಮೇಲೂ ದಾಳಿ ನಡೆದಿದೆ. ಗಾಝಾ ಪಟ್ಟಿಯ ಶೇಕಡಾ 85 ರಷ್ಟು ಭಾಗ ಈಗ ಇಸ್ರೇಲ್ ನ ಮಿಲಿಟರಿ ನಿಯಂತ್ರಣದಲ್ಲಿದೆ ಎಂದು ಅವರು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.
ಆದರೆ "ಕೆಲವರಿಗೆ, ಹತ್ಯಾಕಾಂಡವು ಲಾಭದಾಯಕವಾಗಿದೆ" ಎಂದು ಅಲ್ಬನೀಸ್ ತಮ್ಮ ವರದಿಯಲ್ಲಿ ಹೇಳಿದ್ದಾರೆ.
From economy of occupation to economy of genocide ಅಂದರೆ, "ಆಕ್ರಮಣದ ಆರ್ಥಿಕತೆಯಿಂದ ಹತ್ಯಾಕಾಂಡದ ಆರ್ಥಿಕತೆ" ಎಂಬ ಶೀರ್ಷಿಕೆಯ ವರದಿಯಲ್ಲಿ, ಆಕ್ರಮಿತ ಪ್ರದೇಶದಿಂದ ಫೆಲೆಸ್ತೀನಿ ಜನರನ್ನು ಸ್ಥಳಾಂತರಿಸುವ ಇಸ್ರೇಲ್ ನ ವಸಾಹತುಶಾಹಿ ಯೋಜನೆಯನ್ನು ಬೆಂಬಲಿಸುವ 60 ಕ್ಕೂ ಹೆಚ್ಚು ಕಂಪೆನಿಗಳನ್ನು ಹೆಸರಿಸಲಾಗಿದೆ.
ಈ ಕಂಪೆನಿಗಳು ಇಸ್ರೇಲ್ ನ ದಬ್ಬಾಳಿಕೆ ಮತ್ತು ಫೆಲೆಸ್ತೀನ್ ಮೇಲಿನ ಹಿಂಸಾಚಾರವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ವರದಿ ಆರೋಪಿಸಿದೆ.
ಶಸ್ತ್ರಾಸ್ತ್ರ ತಯಾರಕರು, ತಂತ್ರಜ್ಞಾನ ದೈತ್ಯರು, ಭಾರೀ ಯಂತ್ರೋಪಕರಣಗಳ ಕಂಪೆನಿಗಳು ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ಅನೇಕ ಕಂಪೆನಿಗಳನ್ನು ಈ ವರದಿಯಲ್ಲಿ ಹೆಸರಿಸಲಾಗಿದೆ. ಈ ಕಂಪೆನಿಗಳು ಆಕ್ರಮಿತ ಭೂಮಿಯಲ್ಲಿ ಇಸ್ರೇಲ್ ನ ವಿಸ್ತರಣೆಯನ್ನು ಬೆಂಬಲಿಸುವುದರಿಂದ ಹಿಡಿದು ಫೆಲೆಸ್ತೀನಿ ಜನರ ಮೇಲೆ ಕಣ್ಗಾವಲು ಮತ್ತು ಹತ್ಯೆಗೆ ನೆರವಾಗುವವರೆಗೆ ಎಲ್ಲ ರೀತಿಯಲ್ಲೂ ಇಸ್ರೇಲ್ ನ ದೌರ್ಜನ್ಯಕ್ಕೆ "ಸಹಕರಿಸುತ್ತಿವೆ" ಎಂದು ವರದಿ ಹೇಳಿದೆ.
ರಾಜಕೀಯ ನಾಯಕರು ಗಾಝಾದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ನಿಲ್ಲಿಸಲು ಇಸ್ರೇಲ್ ಮೇಲೆ ಒತ್ತಡ ಹೇರುವ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದರೆ, ಅನೇಕ ಕಾರ್ಪೊರೇಟ್ ಸಂಸ್ಥೆಗಳು ಇಸ್ರೇಲ್ ನ ಅಕ್ರಮ ಆಕ್ರಮಣ, ವರ್ಣಭೇದ ನೀತಿ ಮತ್ತು ಈಗ ಹತ್ಯಾಕಾಂಡದ ಆರ್ಥಿಕತೆಯಿಂದ ಅಪಾರ ಲಾಭ ಗಳಿಸುತ್ತಿವೆ ಎಂದು ವರದಿ ಹೇಳಿದೆ.
ಈ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಸಮುದಾಯವು ಕಂಪೆನಿಗಳ ಪಾತ್ರಕ್ಕಾಗಿ ಖಾಸಗಿ ವಲಯವನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳಲ್ಲಿ ಭಾಗಿಯಾಗಿರುವ ಕಂಪೆನಿಗಳು ಕಾನೂನು ಪರಿಣಾಮಗಳನ್ನು ಎದುರಿಸುವಂತೆ ಮಾಡಬೇಕು ಎಂದು ವರದಿ ಒತ್ತಾಯಿಸಿದೆ.
ಗಾಝಾ ಮತ್ತು ಇತರ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿನ ಹಿಂಸಾಚಾರ, ಹತ್ಯೆ, ಅಂಗವಿಕಲತೆ ಮತ್ತು ನಾಶದಿಂದ ಕೆಲವು ಕಂಪೆನಿಗಳು ಮತ್ತು ವ್ಯಕ್ತಿಗಳು ಲಾಭ ಗಳಿಸಿದ್ದಾರೆ ಎಂದು ಫ್ರಾನ್ಸೆಸ್ಕಾ ಅಲ್ಬಾನೀಸ್ ಹೇಳುತ್ತಾರೆ.
ಫೆಲೆಸ್ತೀನ್ ಮೇಲಿನ ಆಕ್ರಮಣ ಶುರುವಾದ ಕಳೆದ 21 ತಿಂಗಳುಗಳಲ್ಲಿ ಟೆಲ್ ಅವಿವ್ ಸ್ಟಾಕ್ ಎಕ್ಸ್ಚೇಂಜ್ ಕನಿಷ್ಠ 200 ಪ್ರತಿಶತದಷ್ಟು ಏರಿಕೆಯಾಗಿದೆ ಮತ್ತು 220 ಬಿಲಿಯನ್ ಡಾಲರ್ ಗಳಿಗಿಂತಲೂ ಹೆಚ್ಚು ಮಾರುಕಟ್ಟೆ ಲಾಭವನ್ನು ಗಳಿಸಿದೆ. ಇದು ಫೆಲೆಸ್ತೀನಿ ಜನರ ದುರಂತ ಬದುಕಿಗೆ ತದ್ವಿರುದ್ಧವಾಗಿದೆ. "ಒಂದು ಕಡೆ ಜನರು ಶ್ರೀಮಂತರಾಗುತ್ತಿದ್ದಾರೆ, ಇನ್ನೊಂದು ಕಡೆ ಜನರು ನಾಶವಾಗುತ್ತಿದ್ದಾರೆ" ಎಂದು ಅವರು ವಿಷಾದಿಸಿದ್ದಾರೆ.
ಇಸ್ರೇಲ್ ನ ದೀರ್ಘಕಾಲದ ಆಕ್ರಮಣ ಮತ್ತು ಪದೇ ಪದೇ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನಕ್ಕೆ ಪರೀಕ್ಷಾ ಮೈದಾನವನ್ನು ಒದಗಿಸಿವೆ.
ವಾಯು ರಕ್ಷಣಾ ವ್ಯವಸ್ಥೆಗಳು, ಡ್ರೋನ್ ಗಳು, AI-ಚಾಲಿತ ಗುರಿ ಸಾಧಿಸುವ ಸಾಧನಗಳು ಮತ್ತು F-35 ಫೈಟರ್ ಜೆಟ್ ಕಾರ್ಯಕ್ರಮ ಸೇರಿದಂತೆ ಅನೇಕ ತಂತ್ರಜ್ಞಾನಗಳನ್ನು ಇಲ್ಲಿ ಪರೀಕ್ಷಿಸಲಾಗಿದೆ. ಶಸ್ತ್ರಾಸ್ತ್ರ ಕಂಪೆನಿಗಳು ದಾಖಲೆಯ ಲಾಭವನ್ನು ಗಳಿಸಿವೆ. ಗಾಝಾದ ಮೇಲೆ 85,000 ಟನ್ ಗಳಿಗಿಂತಲೂ ಹೆಚ್ಚು ಅಂದರೆ ಹಿರೋಷಿಮಾದ ಮೇಲೆ ಹಾಕಿದ್ದ ಬಾಂಬ್ಗಿಂತ ಆರು ಪಟ್ಟು ಹೆಚ್ಚು ಶಕ್ತಿಶಾಲಿ ಸ್ಫೋಟಕಗಳನ್ನು ಸುರಿಯಲು ಇಸ್ರೇಲ್ ಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿವೆ ಎಂದು ಅಲ್ಬಾನೀಸ್ ಹೇಳಿದ್ದಾರೆ.
ಡಯಾನಾ ಬುಟ್ಟು ಅವರು zeteo ದಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಇಸ್ರೇಲ್ ಸರಕಾರದ ರಚನೆಯು ಫೆಲೆಸ್ತೀನಿ ಜನರನ್ನು ಅಳಿಸಿಹಾಕುವ ಮತ್ತು ಅವರ ಸ್ಥಳದಲ್ಲಿ ಯಹೂದಿ ವಲಸಿಗರನ್ನು ತುಂಬುವ ಯೋಜನೆಯಾಗಿದೆ. ಇದಕ್ಕಾಗಿ ಫೆಲೆಸ್ತೀನಿ ಪಟ್ಟಣಗಳು, ಹಳ್ಳಿಗಳು ಮತ್ತು ಮನೆಗಳನ್ನು ನಾಶಪಡಿಸಲು, ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ಮತ್ತು ವಸಾಹತುಗಳನ್ನು ನಿರ್ಮಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಇಸ್ರೇಲ್ ಮಾಡಿದೆ. ಇದೆಲ್ಲಕ್ಕೂ ಅಪಾರ ಹಣ ಮತ್ತು ಸಹಕಾರದ ಅಗತ್ಯವಿದೆ. ಆಶ್ಚರ್ಯಕರ ಸಂಗತಿಯೆಂದರೆ, ಇದು ಬಹಳ ಲಾಭದಾಯಕ ವ್ಯವಹಾರವಾಗಿದೆ ಎಂದು ಬುಟ್ಟು ಹೇಳುತ್ತಾರೆ.
ಅಲ್ಬಾನೀಸ್ ಅವರ ವರದಿಯು ಕೇವಲ ಮಿಲಿಟರಿ ಸಂಬಂಧಿತ ಕಂಪೆನಿಗಳನ್ನು ಮಾತ್ರವಲ್ಲದೆ ತಂತ್ರಜ್ಞಾನ ಕ್ಷೇತ್ರವನ್ನೂ ಗಮನಿಸಿದೆ. ಮೈಕ್ರೋಸಾಫ್ಟ್, ಗೂಗಲ್ ಮಾಲಕ ಕಂಪೆನಿ ಆಲ್ಫಾಬೆಟ್ ಮತ್ತು ಅಮೆಝಾನ್ ನಂತಹ ದೈತ್ಯ ಕಂಪೆನಿಗಳು ಇಸ್ರೇಲ್ ನ ಸಾಮೂಹಿಕ ಕಣ್ಗಾವಲು ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ವರದಿ ಹೇಳಿದೆ.
ಮಿಲಿಟರಿ ಮತ್ತು ಗುಪ್ತಚರ ಸಿಬ್ಬಂದಿಗೆ IBM ತರಬೇತಿ ನೀಡಿದೆ, ಜೊತೆಗೆ ಫೆಲೆಸ್ತೀನಿ ಜನರ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುವ ಕೇಂದ್ರ ಡೇಟಾಬೇಸ್ ಅನ್ನು ನಿರ್ವಹಿಸುತ್ತಿದೆ. ಯುಎಸ್ ಮೂಲದ ಪಾಲಂಟೀರ್ ಟೆಕ್ನಾಲಜೀಸ್ ಗಾಝಾದ ಮೇಲಿನ ಆಕ್ರಮಣ ಪ್ರಾರಂಭವಾದ ನಂತರ ಇಸ್ರೇಲ್ ಮಿಲಿಟರಿಗೆ ತನ್ನ ಬೆಂಬಲವನ್ನು ವಿಸ್ತರಿಸಿದೆ.
ಕ್ಯಾಟರ್ಪಿಲ್ಲರ್ ಇಂಕ್, ಹಂಡಯ್ ಮತ್ತು ವೋಲ್ವೋ ಗ್ರೂಪ್ನಂತಹ ಭಾರೀ ಯಂತ್ರೋಪಕರಣಗಳ ಕಂಪೆನಿಗಳು ಫೆಲೆಸ್ತೀನಿ ಆಸ್ತಿಯನ್ನು ನಾಶಪಡಿಸುವಲ್ಲಿ ಬಳಸಲಾದ ಉಪಕರಣಗಳನ್ನು ಒದಗಿಸಿವೆ. ಬುಕಿಂಗ್ ಡಾಟ್ ಕಾಮ್ ಮತ್ತು ಏರ್ ಬಿಎನ್ಬಿ ಯಂತಹ ಬಾಡಿಗೆ ವೇದಿಕೆಗಳು ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಆಸ್ತಿಗಳು ಮತ್ತು ಹೋಟೆಲ್ ಕೊಠಡಿಗಳನ್ನು ಪಟ್ಟಿ ಮಾಡುವ ಮೂಲಕ ಅಕ್ರಮ ವಸಾಹತುಗಳಿಗೆ ನೆರವು ನೀಡುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
"ನಾನು ಬಹಿರಂಗಪಡಿಸುತ್ತಿರುವುದು ಕೇವಲ ಪಟ್ಟಿಯಲ್ಲ, ಇದೊಂದು ವ್ಯವಸ್ಥೆ, ಮತ್ತು ಅದನ್ನು ಪರಿಹರಿಸಬೇಕಾಗಿದೆ" ಎಂದು ಅಲ್ಬಾನೀಸ್ ಒತ್ತಿ ಹೇಳುತ್ತಾರೆ.
ಈ ವರದಿಯನ್ನು ಇಸ್ರೇಲ್ ನ ಉಲ್ಲಂಘನೆಗಳಿಗೆ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಪ್ರಾಸಿಕ್ಯೂಟರ್ ಗಳು ಬಳಸಿಕೊಳ್ಳಬಹುದು. ಅಲ್ಲದೆ, ವಿಶ್ವಾದ್ಯಂತದ ಗ್ರಾಹಕರಿಗೆ ಈ ವರದಿ ಒಂದು ಪ್ರಮುಖ ಸಂಪನ್ಮೂಲವಾಗಬಹುದು ಮತ್ತು ಇದರಿಂದಾಗಿ ಗ್ರಾಹಕರು ಈ ಕಂಪೆನಿಗಳ ಮೇಲೆ ವಾಣಿಜ್ಯ ಒತ್ತಡ ಹೇರಬಹುದು.
ಆಲ್ಬಾನೀಸ್ ಅವರು ಹೇಳಿದಂತೆ, ಈ ವರದಿಯನ್ನು ಓದಿ ಸಾಮಾನ್ಯ ನಾಗರಿಕರು ನಾವು ಏನು ಖರೀದಿಸುತ್ತಿದ್ದೇವೆ, ಯಾವ ಕಂಪೆನಿಗಳೊಂದಿಗೆ ವ್ಯವಹರಿಸುತ್ತಿದ್ದೇವೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು.
ಒಂದು ಕಡೆ ಅಮಾಯಕ ಜನರು ಹತ್ಯೆಯಾಗುತ್ತಿದ್ದರೆ, ಇನ್ನೊಂದು ಕಡೆ ಹಣದಾಸೆಗೆ ಬಿದ್ದಿರುವ ಕೆಲವು ಕಂಪೆನಿಗಳು ಈ ಹತ್ಯಾಕಾಂಡಕ್ಕೆ ಬೆಂಬಲ ನೀಡುತ್ತಿವೆ. ಇದಕ್ಕಿಂತ ದೊಡ್ಡ ವಿಪರ್ಯಾಸ ಏನಿದೆ?







