ಕಡಿಮೆ ವೆಚ್ಚದಲ್ಲಿ ಹೆಚ್ಚು ಕೆಲಸ; ಭಾರತದ ಐಟಿ ವಲಯದ ಒಪ್ಪಂದಗಳನ್ನು ಬದಲಿಸುತ್ತಿರುವ AI

ಸಾಂದರ್ಭಿಕ ಚಿತ್ರ | Photo Credit : magnific.com
ಒಪ್ಪಂದದಲ್ಲಿನ ಬದಲಾವಣೆಯು AI ಅನ್ನು ಪರಿಣಾಮಕಾರಿಯಾಗಿ ಬಳಸುವ ಸಣ್ಣ ಕಂಪೆನಿಗಳಿಗೆ ಬಾಗಿಲು ತೆರೆದಿದೆ. ಹೀಗೆ ದೈತ್ಯ ಕಂಪೆನಿಗಳಿಗೆ ಹೋಗಬಹುದಾಗಿದ್ದ ಒಪ್ಪಂದಗಳನ್ನು ಸಣ್ಣ ಕಂಪೆನಿಗಳು ಪಡೆದುಕೊಳ್ಳುತ್ತಿವೆ.
ಕೃತಕ ಬುದ್ಧಿಮತ್ತೆ ಭಾರತದ ಐಟಿ ಉದ್ಯಮವನ್ನು ಅಸ್ತವ್ಯಸ್ತಗೊಳಿಸುವ ನಿರೀಕ್ಷೆ ನಿಜವಾಗುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ವಿಪ್ರೋ, ಎಚ್ಸಿಎಲ್ಟೆಕ್ ಮತ್ತು ಕಾಗ್ನಿಜೆಂಟ್ನಂತಹ ಹೊರಗುತ್ತಿಗೆ ದೈತ್ಯ ಕಂಪೆನಿಗಳು ತಮ್ಮ ವ್ಯವಹಾರ ಮಾದರಿಗಳನ್ನು ಪುನರ್ನಿರ್ಮಿಸುತ್ತಿವೆ. ಕ್ಲೈಂಟ್ ಗಳು ತೀವ್ರ ಬೆಲೆ ಕಡಿತ ಮತ್ತು ಹೆಚ್ಚಿನ ಫಲವನ್ನು ಬಯಸುತ್ತಿರುವ ಕಾರಣ, ಕೆಲಸದ ಸಮಯಕ್ಕೆ ಬದಲಾಗಿ ಕಾರ್ಯಕ್ಷಮತೆಯ ಫಲಿತಾಂಶಗಳಿಗೆ ಪಾವತಿ ಮಾಡುತ್ತಿದ್ದಾರೆ.
ಕೃತಕ ಬುದ್ಧಿಮತ್ತೆಯು (AI) ಲಭ್ಯವಿರುವ ಹೊರಗುತ್ತಿಗೆ ಕೆಲಸದ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ಕೆಲವು ಕ್ಲೈಂಟ್ ಗಳು ಈಗ ಐಟಿ ಸೇವೆ ಪೂರೈಕೆದಾರರನ್ನು ನೇಮಿಸಿಕೊಳ್ಳುವ ಬದಲಾಗಿ ಆಂತರಿಕವಾಗಿ ಕಾರ್ಯಗಳನ್ನು ನಿರ್ವಹಿಸಲು AI ಬಳಸುತ್ತಿದ್ದಾರೆ. AI ಉದ್ಯಮವನ್ನು ಹೇಗೆ ಮರುರೂಪಿಸಲಿದೆ ಎನ್ನುವುದರ ಕುರಿತ ಅನಿಶ್ಚಿತತೆಯಿಂದಾಗಿ, ದೀರ್ಘಾವಧಿಯ ಒಪ್ಪಂದಗಳಿಗೆ ಬದ್ಧರಾಗುವ ಬದಲು ಅಲ್ಪಕಾಲೀನ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದಾರೆ.
ಈ ಹಿಂದೆ ದೊಡ್ಡ ಐಟಿ ಕಂಪೆನಿಗಳು ತಮ್ಮ ಬೃಹತ್ ಸಿಬ್ಬಂದಿಯನ್ನು ಮುಂದಿಟ್ಟು, ದೊಡ್ಡ ಪ್ರಾಜೆಕ್ಟ್ ಗಳನ್ನು ಚೆನ್ನಾಗಿ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಬಹುದಾಗಿದ್ದರಿಂದ ಸಣ್ಣ ಕಂಪೆನಿಗಳನ್ನು ಹಿಂದಿಕ್ಕಿ ಪ್ರಾಜೆಕ್ಟ್ ಗಳನ್ನು ಪಡೆಯುತ್ತಿದ್ದವು. ಆದರೆ ಈಗ AI ಅನೇಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುತ್ತಿರುವ ಕಾರಣ, ಸಾವಿರಾರು ಸಿಬ್ಬಂದಿಯನ್ನು ಹೊಂದಿರುವುದು ಬಲವಾದ ಮಾರಾಟದ ಅಂಶವಾಗಿಲ್ಲ. ಈ ಬದಲಾವಣೆಯು AI ಅನ್ನು ಪರಿಣಾಮಕಾರಿಯಾಗಿ ಬಳಸುವ ಸಣ್ಣ ಕಂಪೆನಿಗಳಿಗೆ ಬಾಗಿಲು ತೆರೆದಿದೆ. ಹೀಗೆ ದೈತ್ಯ ಕಂಪೆನಿಗಳಿಗೆ ಹೋಗಬಹುದಾಗಿದ್ದ ಒಪ್ಪಂದಗಳನ್ನು ಸಣ್ಣ ಕಂಪೆನಿಗಳು ಪಡೆದುಕೊಳ್ಳುತ್ತಿವೆ.
ಜಾಗತಿಕವಾಗಿ ಸಾಫ್ಟ್ವೇರ್ ಕಂಪೆನಿಗಳು AI ತಮ್ಮ ಉದ್ಯಮದ ಪ್ರಮುಖ ಭಾಗಗಳನ್ನು ಅನಗತ್ಯಗೊಳಿಸಬಹುದು ಎಂದು ಚಿಂತಿತರಾಗಿದ್ದಾರೆ. ಆದರೆ, ಭಾರತದ ಐಟಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಅದು ಸಾಂಪ್ರದಾಯಿಕವಾದ “ಕೆಲಸದ ಗಂಟೆಗಳಿಗೆ ಶುಲ್ಕ” ಪಾವತಿಯ ಮಾದರಿಯನ್ನು ಅವಲಂಬಿಸಿದೆ. ಉದ್ಯೋಗಿಗಳು ಕೆಲಸ ಮಾಡುವ ಗಂಟೆಗಳ ಸಂಖ್ಯೆಯನ್ನು ಆಧರಿಸಿ ಕ್ಲೈಂಟ್ಗಳಿಗೆ ಶುಲ್ಕ ವಿಧಿಸಲಾಗುತ್ತದೆ. AI ಅಟೋಮೇಶನ್ ಕಾರ್ಯಗಳು ಬಂದ ಮೇಲೆ ಈ ಮಾದರಿಗೆ ಗಂಭೀರ ಬೆದರಿಕೆ ಒಡ್ಡಲಿವೆ. ಹೀಗಾಗಿ ಭಾರತದ ಒಟ್ಟು 315 ಬಿಲಿಯನ್ ಡಾಲರ್ ಐಟಿ ವಲಯ ಅಪಾಯದಲ್ಲಿದೆ.
ಭಾರತದ ಐಟಿ ವಲಯವು ಆರ್ಥಿಕವಾಗಿ ನಷ್ಟ ಅನುಭವಿಸಿದೆ. ಈ ವರ್ಷ ನಿಫ್ಟಿ ಐಟಿ ಷೇರು ಸೂಚ್ಯಂಕವು ಶೇ. 20ರಷ್ಟು ಕುಸಿದಿದ್ದು, ಅದರ 10 ಪ್ರಮುಖ ಕಂಪನಗಳ 73 ಬಿಲಿಯನ್ ಡಾಲರ್ ಮೌಲ್ಯವನ್ನು ಅಳಿಸಿಹಾಕಿದೆ. ಅದೇ ಸಮಯದಲ್ಲಿ ಕಾಂಟ್ರಾಕ್ಟ್ ಗಳಿಗೆ ಬೆಲೆ ನಿಗದಿಪಡಿಸುವ ವಿಧಾನವು ಬದಲಾಗಿದೆ. ಕೆಲಸದ ಸಮಯದ ಆಧಾರದ ಮೇಲೆ ಶುಲ್ಕ ವಿಧಿಸುವ ಬದಲು, ಕಂಪೆನಿಗಳಿಗೆ ಈಗ ಫಲಿತಾಂಶಗಳ (ಕಾರ್ಯಕ್ಷಮತೆ) ಆಧಾರದ ಮೇಲೆ ಪಾವತಿಸಲಾಗುತ್ತಿದೆ.
TCS ಸಿಇಒ ಕೆ. ಕೃತಿವಾಸನ್ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, ಹಣಕಾಸು, ಮಾನವ ಸಂಪನ್ಮೂಲ ಮತ್ತು ವ್ಯವಹಾರ ಸೇವೆಗಳಂತಹ ಕ್ಷೇತ್ರಗಳಲ್ಲಿ ಸುಮಾರು ಶೇ. 80ರಷ್ಟು ಕಾಂಟ್ರಾಕ್ಟ್ಗಳು ಈಗ ಕಾರ್ಯಕ್ಷಮತೆ ಆಧರಿಸಿವೆ. TCS ಉದ್ಯೋಗಿಗಳು ಕೆಲಸದಲ್ಲಿ ಕಳೆಯುವ ಸಮಯಕ್ಕೆ ಬೆಲೆ ಸಿಗುವುದಿಲ್ಲ; ಅವರ ಕಾರ್ಯಕ್ಷಮತೆಗೆ (ತೋರಿಸಿದ ದಕ್ಷತೆ ಅಥವಾ ವೆಚ್ಚ ಉಳಿತಾಯ) ಪಾವತಿಸಲಾಗುತ್ತಿದೆ.
ಅಂದರೆ, AI ಐಟಿ ಒಪ್ಪಂದಗಳನ್ನು ಬರೆಯುವ ವಿಧಾನವನ್ನು ಬದಲಿಸುತ್ತಿದೆ. ಕಾಗ್ನಿಜೆಂಟ್ ಕಂಪೆನಿಯು ಇತ್ತೀಚೆಗೆ ಡೇಮ್ಲರ್ ಟ್ರಕ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲಿ AI ಚಾಲಿತ ವೆಚ್ಚ ಉಳಿತಾಯದ ಲಾಭವನ್ನು ಎರಡು ಕಂಪೆನಿಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಕ್ಲೈಂಟ್ಗಳು ಹೆಚ್ಚಿನ ಮೌಲ್ಯ ಮತ್ತು ಸ್ಪಷ್ಟ, ಪರಿಮಾಣಾತ್ಮಕ (greater value and clear, quantifiable) ಫಲಿತಾಂಶಗಳನ್ನು ನಿರೀಕ್ಷಿಸುತ್ತಾರೆ. ಹೀಗಾಗಿ, ಕಂಪೆನಿಯು ಅಂತಹ ನಿರೀಕ್ಷೆಗಳನ್ನು ಪೂರೈಸಲು ತನ್ನ ಉದ್ಯಮ ಮಾದರಿಯನ್ನು ಮರುರೂಪಿಸುತ್ತಿದೆ ಎಂದು ವರದಿಯಾಗಿದೆ.
ಅನೇಕ ಕ್ಲೈಂಟ್ಗಳು ಇದೀಗ AI ಮತ್ತು ಅಟೋಮೇಶನ್ ಪರೀಕ್ಷೆಗೆ ತ್ವರಿತ ಪ್ರಾಯೋಗಿಕ ಯೋಜನೆಗಳನ್ನು ಬಯಸುತ್ತಾರೆ. ಸಣ್ಣ ಐಟಿ ಸಂಸ್ಥೆಗಳು ಈ ಅವಕಾಶಗಳನ್ನು ಗೆಲ್ಲುತ್ತಿವೆ. ಏಕೆಂದರೆ ಅವರು ತ್ವರಿತವಾಗಿ ಹಿರಿಯ ನಾಯಕರನ್ನು ನಿಯೋಜಿಸಬಹುದು ಮತ್ತು ಹೊಂದಿಕೊಳ್ಳುವ ಬೆಲೆ ಮಾದರಿಗಳನ್ನು ಒಪ್ಪಿಕೊಳ್ಳಬಹುದು. ಹೀಗಾಗಿ, AI ಚಾಲಿತ ಪರಿಸರದಲ್ಲಿ ದೊಡ್ಡ ಕಂಪೆನಿಗಳಿಗಿಂತ ಸಣ್ಣ ಕಂಪೆನಿಗಳಿಗೆ ಹೊರಗುತ್ತಿಗೆ ಪಡೆಯುವ ಅವಕಾಶ ಹೆಚ್ಚಾಗಿದೆ. ಎರಡನೇ ಹಂತದಲ್ಲಿರುವ ಐಟಿ ಕಂಪೆನಿಗಳು ಅವಕಾಶಗಳನ್ನು ಪಡೆದುಕೊಳ್ಳುತ್ತಿವೆ.
ಪರ್ಸಿಸ್ಟಂಟ್, ಕೋಫೋರ್ಜ್ ಮತ್ತು ಮತ್ತೊಂದು ಮಧ್ಯಮ ಗಾತ್ರದ ಐಟಿ ಸೇವೆ ಒದಗಿಸುವ ಕಂಪೆನಿಯ ಡಾಲರ್ ಆದಾಯವು ಸತತವಾಗಿ ಕನಿಷ್ಠ ಎಂಟು ತ್ರೈಮಾಸಿಕಗಳಿಂದ ಎರಡು ಅಂಕಿಗಳಷ್ಟು ಬೆಳೆದಿದೆ. ಪರ್ಸಿಸ್ಟಂಟ್ ಆದಾಯ ಶೇ. 16ರಷ್ಟು ಏರಿದರೆ, ಕೋಫೋರ್ಜ್ ನ ಆದಾಯ ಮೂರು ಪಟ್ಟು ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, TCS, ಇನ್ಫೋಸಿಸ್, ವಿಪ್ರೋ ಮತ್ತು ಎಚ್ಸಿಎಲ್ಟೆಕ್ ಶೇ 1ರಿಂದ ಶೇ 3ರಷ್ಟು ಪ್ರಗತಿ ಕುಸಿತ ದಾಖಲಿಸಿವೆ ಎಂದು ವರದಿಯಾಗಿದೆ.






