ಕರಾವಳಿಗೆ ಆಗಮಿಸಿದ ಮೋಟು ಪತ್ಲು ; AI ವೀಡಿಯೋಗಳಿಂದ ಖಾತೆ ಸಸ್ಪೆಂಡ್ ಆಗಬಹುದು ಎಚ್ಚರ!

Credit : Screengrab \ instagram
ಇತ್ತೀಚೆಗೆ ರೀಲ್ಸ್ಗಳಲ್ಲಿ ಎಐ ವೀಡಿಯೋಗಳ ಬಳಕೆ ಹೆಚ್ಚಾಗುತ್ತಿದೆ. ಮೋಟು ಮತ್ತು ಪತ್ಲು, ಮಿಸ್ಟರ್ ಬೀನ್ನಂತಹ ಪಾತ್ರಗಳನ್ನೂ ಬಳಸಲಾಗುತ್ತಿದೆ. ಇವುಗಳಿಂದ ನಿಮ್ಮ ಖಾತೆ ಸಸ್ಪೆಂಡ್ ಆಗುವ ಆತಂಕವೂ ಬರಲಿದೆ ಎನ್ನುವುದು ನಿಮಗೆ ಗೊತ್ತೆ?
ಇತ್ತೀಚೆಗೆ ಕರಾವಳಿ ಪ್ರದೇಶದಲ್ಲಿ ಮೋಟು ಮತ್ತು ಪತ್ಲು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಮೋಟು ಮತ್ತು ಪತ್ಲು ಎನ್ನುವ ಕಾರ್ಟೂನ್ ಪಾತ್ರವನ್ನು ಬಳಸಿ ಇದೀಗ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ರೀಲ್ಸ್ಗಳನ್ನು ಮಾಡಲಾಗುತ್ತಿದೆ. ‘ಪಬ್ಬಾಸ್’ನಲ್ಲಿ ಕುಳಿತು ಐಸ್ ಕ್ರೀಮ್ ತಿನ್ನುವುದು, ಪಾನಿಪುರಿ ತಿನ್ನುವುದು, ಬೇರೆ ಬೇರೆ ಊರಿನ ಹೆಸರಿರುವ ಸ್ಥಳದಲ್ಲಿ ಮೋಟು ಮತ್ತು ಪತ್ಲು ಆಗಮಿಸಿರುವ ವೀಡಿಯೋಗಳನ್ನು ಸೃಷ್ಟಿಸಲಾಗುತ್ತದೆ. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು ಹಿಡಿದು ಬಂಧಿಸಿರುವ ವಿಡಿಯೋಬ್ಲಾಗ್ಗಳನ್ನೂ ಸೃಷ್ಟಿಸಿದ್ದಾರೆ. ಇವುಗಳಿಗೆ ಕೋಟ್ಯಂತರ ವೀಕ್ಷಣೆಗಳೂ ಸಿಗುತ್ತಿವೆ.
ಏನಿದು ಮೋಟು ಪತ್ಲು ಎಐ ಟ್ರೆಂಡ್
ಎಐ ಸಾಧನಗಳನ್ನು ಬಳಸಿ ಮೋಟು ಮತ್ತು ಪತ್ಲು ಪಾತ್ರಗಳ ಅನಿಮೇಟೆಡ್ ಕಿರು ವೀಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ. ಸಾಂಪ್ರದಾಯಿಕ 2ಡಿ ಅನಿಮೇಷನ್ಗಿಂತ ಭಿನ್ನವಾಗಿ ಇಲ್ಲಿ ಪಾತ್ರಗಳು ನೈಜ ಸ್ಥಳೀಯ ಪರಿಸರದಲ್ಲಿ ಸ್ಮಾರ್ಟ್ ಫೋನ್ನಲ್ಲಿ ವಿಡಿಯೋಬ್ಲಾಗ್ ಮಾಡುತ್ತಿರುವಂತೆ ಅಥವಾ ಸೆಲ್ಫಿ ವೀಡಿಯೋ ಚಿತ್ರೀಕರಿಸಿಕೊಳ್ಳುತ್ತಿರುವಂತೆ ಕಾಣಿಸುತ್ತವೆ.
ಮೋಟು ಮತ್ತು ಪತ್ಲು ಮಾತ್ರವಲ್ಲ, ಮಿಸ್ಟರ್ ಬೀನ್ನಂತಹ ಪಾತ್ರಗಳನ್ನೂ ಬಳಸಲಾಗುತ್ತಿದೆ. ಕೆಲವರು ಈ ಪಾತ್ರಗಳನ್ನು ಬಳಸಿ ವೀಡಿಯೋಗಳನ್ನು ಹೇಗೆ ತಯಾರಿಸುವುದು ಎಂದೂ ರೀಲ್ಸ್ ಮಾಡುತ್ತಿದ್ದಾರೆ.
ವೀಡಿಯೋ ತಯಾರಿ ಹೇಗೆ?
ಇವುಗಳನ್ನು ತಯಾರಿಸುವುದು ಬಹಳ ಸರಳ. ಗೂಗಲ್ ಬಳಿ ಕೇಳಿದರೆ ಹಂತ ಹಂತವಾಗಿ ಏನು ಮಾಡಬೇಕು ಎಂದು ವಿವರಿಸುತ್ತದೆ. ಮೊದಲಿಗೆ ಗೂಗಲ್ನಿಂದ ಒಂದು ಕಾರ್ಟೂನ್ ಪಾತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಚಾಟ್ ಜಿಪಿಟಿ ಅಥವಾ ಗೂಗಲ್ ಜೆಮಿನಿ ತೆರೆದು ಆ ಇಮೇಜ್ಗೆ ಬೇಕಾದ ಬ್ಯಾಕ್ಗ್ರೌಂಡ್ ಫೋಟೋವನ್ನು ಕೂಡ ಅಪ್ಲೋಡ್ ಮಾಡಿ. ನಂತರ ಪ್ರಾಂಪ್ಟ್ ಕೊಡಬೇಕು. ಪ್ರಾಂಪ್ಟ್ ಬೇಕೆಂದರೆ ಯಾವುದೇ ಜಿಪಿಟಿ, ಜೆಮಿನಿ ಮೊದಲಾದ ಟೂಲ್ಗಳನ್ನು ಬಳಸಿ ಬರೆಯಬಹುದು. ಚಿತ್ರ ಮತ್ತು ವೀಡಿಯೋ ಸೃಷ್ಟಿಗೆ ಸಂಬಂಧಿತ ಟೂಲ್ಗಳನ್ನು ಬಳಸಿ ಪ್ರಾಂಪ್ಟ್ ಅನ್ನು ದೃಶ್ಯಗಳಾಗಿ ಪರಿವರ್ತಿಸಬಹುದು. Invideo AI ಅಥವಾ CapCut ವೇದಿಕೆಗಳು ನಿಮಗೆ ಟಾಪಿಕ್ ಬರೆಯಲು ನೆರವಾಗುತ್ತವೆ. ನಿಮ್ಮದೇ ಧ್ವನಿಗಳನ್ನು ಬೇಕಾದರೂ ಬಳಸಬಹುದು.
ಕಾಪಿರೈಟ್ ಉಲ್ಲಂಘನೆ
ಆದರೆ ಇಂತಹ ಟ್ರೆಂಡ್ಗಳು ಜನಪ್ರಿಯವಾಗುತ್ತಿದ್ದರೂ ಕಾನೂನು ಸಮಸ್ಯೆಗಳೂ ಇವೆ. ಮುಖ್ಯವಾಗಿ ಹಿಂದಿಯ ಮ್ಯಾಗಜೀನ್ ಒಂದು ಮೋಟು ಮತ್ತು ಪತ್ಲು ಕಾಪಿರೈಟ್ ಹೊಂದಿದೆ. ಅದನ್ನು ಸಾರ್ವಜನಿಕವಾಗಿ ಬಳಸುವುದು ಕಾಪಿರೈಟ್ ಉಲ್ಲಂಘನೆಯಾದೀತು.
ಸಾಮಾನ್ಯವಾಗಿ ಮೋಟು ಮತ್ತು ಪತ್ಲು ವೈರಲ್ ವೀಡಿಯೋಗಳು ಎಐ ವೀಡಿಯೋ ಬ್ಲಾಗ್ಗಳಲ್ಲಿ ಬಳಕೆಯಾಗುತ್ತಿವೆ. ರಸ್ತೆ ಬದಿಯ ಆಹಾರ ಮಳಿಗೆಗಳ ಜಾಹೀರಾತುನಂತೆಯೂ ಬಳಕೆಯಾಗುತ್ತಿದೆ. ಸ್ಥಳೀಯ ಬ್ರ್ಯಾಂಡ್ಗಳ ಪ್ರಚಾರಗಳಿಗೂ ಇಂತಹ ವೀಡಿಯೋಗಳು ಬಳಕೆಯಾಗುತ್ತಿವೆ. ಕೆಲವರು ಕಾಮಿಡಿ ಸ್ಕ್ರಿಪ್ಟ್ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಹಾಕಲು ಈ ಪಾತ್ರಗಳನ್ನು ಬಳಸುತ್ತಿದ್ದಾರೆ. ಜೊತೆಗೆ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಸ್ಕ್ರಿಪ್ಟ್ ಕೂಡ ಸಿದ್ಧಮಾಡುತ್ತಿದ್ದಾರೆ. ಕೆಲವು ಬಳಕೆದಾರರು ಮೋಟು ಮತ್ತು ಪತ್ಲು ಜೊತೆಗೆ ತಮ್ಮದೇ ಫೋಟೋಗಳನ್ನೂ ಹಾಕುತ್ತಿದ್ದಾರೆ.
ಮೋಟು ಮತ್ತು ಪತ್ಲು ಪ್ರತಿಷ್ಠಿತ ಅಂಗಡಿಯಲ್ಲಿ ಕುಳಿತು ಐಸ್ಕ್ರೀಂ ಸೇವಿಸುವುದು ವಾಣಿಜ್ಯವಾಗಿ ಬ್ರ್ಯಾಂಡ್ಗಳ ಜಾಹೀರಾತುಗಳಿಗೆ ಪಾತ್ರವನ್ನು ಬಳಸುವಂತೆ ಆಗಬಹುದು. ಇದರಿಂದ ಕಾನೂನು ಕ್ರಮಕ್ಕೆ ಕಾರಣವಾಗಬಹುದು. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ಅನಧಿಕೃತ ಎಐ ವಿಷಯಗಳ ಮೇಲೆ ನಿಯಮಗಳನ್ನು ಬಿಗಿಗೊಳಿಸುತ್ತಿದ್ದು, ಖಾತೆಗಳು ಸಸ್ಪೆಂಡ್ ಆಗುವ ಅಪಾಯವಿದೆ.






