Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಹರ್ರಮ್: ಕರ್ಬಲಾ ಘಟನೆಯ ಸಂದೇಶ

ಮುಹರ್ರಮ್: ಕರ್ಬಲಾ ಘಟನೆಯ ಸಂದೇಶ

ಇರ್ಷಾದ್ ಕೊಪ್ಪಳಇರ್ಷಾದ್ ಕೊಪ್ಪಳ26 Jun 2026 10:54 AM IST
share
ಮುಹರ್ರಮ್: ಕರ್ಬಲಾ ಘಟನೆಯ ಸಂದೇಶ
ಡಾ. ಅಲಿ ಶರಿಅತಿ ದೃಷ್ಟಿಯಲ್ಲಿ
ಡಾ. ಅಲಿ ಶರಿಅತಿ

ಶರಿಅತಿ ಅವರ ಪ್ರಕಾರ, ಕರ್ಬಲಾದ ಮಹತ್ವ ಇರುವುದು ಆ ಯುದ್ಧದ ಫಲಿತಾಂಶದಲ್ಲಿ ಅಲ್ಲ. ಇಮಾಮ್ ಹುಸೈನ್ ಏನನ್ನು ಆರಿಸಿಕೊಂಡರೆಂಬುದೇ ಆ ಯುದ್ಧದ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಅವರ ಕಠಿಣ ಆಯ್ಕೆಯೇ ಕರ್ಬಲಾ ಇತಿಹಾಸದ ಅವಿಸ್ಮರಣೀಯ ಅಂಶವಾಗಿದೆ. ಯಾವ ಬೆಲೆ ತೆರಬೇಕಾಗಿ ಬಂದರೂ ಸದಾ ಸತ್ಯ ಮತ್ತು ನ್ಯಾಯದ ಪರವಾಗಿಯೇ ನಿಲ್ಲಬೇಕು ಎಂಬ ಅವರ ನಿಲುವು ಮತ್ತು ಅದಕ್ಕಾಗಿ ಅವರು ಮತ್ತವರ ಸಹಚರರು ಮಾಡಿದ ಪ್ರಾಣಾರ್ಪಣೆಯೇ ಕರ್ಬಲಾ ಯುದ್ಧವನ್ನು ಇತಿಹಾಸದ ಒಂದು ಉಜ್ವಲ ಪರ್ವವಾಗಿಸುವ ಅಂಶವಾಗಿದೆ.

ಮಾನವ ಇತಿಹಾಸದಲ್ಲಿ ಅನೇಕ ಯುದ್ಧಗಳು ನಡೆದಿವೆ. ಅನೇಕ ರಾಜರು ಅಧಿಕಾರಕ್ಕೆ ಬಂದಿದ್ದಾರೆ, ಕಣ್ಮರೆಯಾಗಿದ್ದಾರೆ. ಅನೇಕ ಸಾಮ್ರಾಜ್ಯಗಳು ಉದಯಿಸಿ ಅಸ್ತಂಗತವಾಗಿವೆ. ಆದರೆ ಹಿಜ್ರಿ 61ನೇ ವರ್ಷದಲ್ಲಿ (ಕ್ರಿ.ಶ. 680) ಇರಾಕ್‌ನ ಕರ್ಬಲಾ ಮರುಭೂಮಿಯಲ್ಲಿ ನಡೆದ ಒಂದು ಘಟನೆ ಮಾತ್ರ ಶತಮಾನಗಳು ಕಳೆದರೂ ಮಾನವ ಮನಸ್ಸನ್ನು ಕದಡುತ್ತಲೇ ಇದೆ. ಏಕೆ?

ಇರಾನ್‌ನ ಖ್ಯಾತ ಸಮಾಜಶಾಸ್ತ್ರಜ್ಞ ಮತ್ತು ಚಿಂತಕ ಡಾ. ಅಲಿ ಶರಿಅತಿ (1933-1977) ಈ ಪ್ರಶ್ನೆಯನ್ನು ತನ್ನದೇ ಆದ ಒಂದು ವಿಶಿಷ್ಟ ಆಯಾಮದಿಂದ ನೋಡಿದ್ದಾರೆ. ಅವರ ಪ್ರಕಾರ, ಕರ್ಬಲಾ ಕೇವಲ ಒಂದು ಐತಿಹಾಸಿಕ ಘಟನೆ ಅಲ್ಲ. ಅದು ಮಾನವನ ಸ್ವಾತಂತ್ರ್ಯ, ಜವಾಬ್ದಾರಿ ಮತ್ತು ನೈತಿಕ ಆಯ್ಕೆಯ ಶಾಶ್ವತ ಪ್ರತೀಕವಾಗಿದೆ. ಕರ್ಬಲಾದಲ್ಲಿ ನಡೆದದ್ದು ಕೇವಲ ಒಂದು ಯುದ್ಧವಲ್ಲ; ಅದು ಸತ್ಯ ಮತ್ತು ಅಸತ್ಯದ ನಡುವಿನ ಶಾಶ್ವತ ಸಂಘರ್ಷದ ಜೀವಂತ ರೂಪವಾಗಿದೆ.

ಈ ವಿಷಯದಲ್ಲಿ ಶರಿಅತಿ ಅವರ ಚಿಂತನೆಯ ಕೇಂದ್ರವಿರುವುದು ‘ಶಹಾದತ್’ ಎಂಬ ಕಲ್ಪನೆಯಲ್ಲಿ. ಸಾಮಾನ್ಯವಾಗಿ, ಶಹಾದತ್ ಎಂದರೆ ತನ್ನ ನಂಬಿಕೆಗಾಗಿ ಪ್ರಾಣಾರ್ಪಣೆ ಮಾಡುವುದು ಎಂದು ಅರ್ಥೈಸಲಾಗುತ್ತದೆ. ಆದರೆ ಶರಿಅತಿ ಅವರ ಪ್ರಕಾರ, ಶಹಾದತ್ ಎಂದರೆ ಕೇವಲ ಮರಣವಲ್ಲ. ‘ಶಹೀದ್’ ಎಂಬ ಪದವನ್ನು ಸಾಮಾನ್ಯವಾಗಿ ‘ಹುತಾತ್ಮ’ ಎಂದು ಅನುವಾದಿಸಲಾಗುತ್ತದೆ. ನಿಜವಾಗಿ ಅದರ ಮೂಲ ಅರ್ಥವೇ ‘ಸಾಕ್ಷಿ’. ಸತ್ಯಕ್ಕೆ ಸಾಕ್ಷಿಯಾಗುವವನು, ತನ್ನ ಜೀವನದ ಮೂಲಕ ಒಂದು ಸಂದೇಶವನ್ನು ಸಾರುವವನು ಮತ್ತು ತನ್ನ ತ್ಯಾಗದ ಮೂಲಕ ಒಂದು ಮೌಲ್ಯವನ್ನು ಜೀವಂತವಾಗಿಡುವವನು ಶಹೀದ್ ಎನಿಸಿಕೊಳ್ಳುತ್ತಾನೆ.

ಶರಿಅತಿ ಅವರ ಪ್ರಕಾರ, ಶಹಾದತ್‌ನಲ್ಲಿ ಎರಡು ಅಂಶಗಳಿವೆ:

* ಸತ್ಯದ ಮೇಲಿನ ಆಳವಾದ ಪ್ರೀತಿ

* ಸಮಾಜದ ಬಗೆಗಿರುವ ಘನ ಹೊಣೆಗಾರಿಕೆಗಳ ಆಳವಾದ ಪ್ರಜ್ಞೆ.

ಈ ಎರಡರ ಸಂಯೋಗವೇ ಶಹಾದತ್. ಹೀಗಾಗಿ ಶಹಾದತ್ ಎಂಬುದು ಬದುಕಿನ ಅಂತ್ಯವಲ್ಲ; ಅದು ಒಂದು ಘೋಷಣೆ. ಅದು ಅನ್ಯಾಯದ ಮುಂದೆ ಪಾಲಿಸಲಾಗುವ ಮೌನದ ವಿರುದ್ಧದ ಪ್ರತಿಭಟನೆ. ಅದು ಅನ್ಯಾಯದ ಎದುರು ಮಾನವ ಘನತೆಯ ಘೋಷಣೆ.

ಇಸ್ಲಾಮ್: ಕೇವಲ ಧರ್ಮವಲ್ಲ, ನ್ಯಾಯದ ಚಳವಳಿ

ಶರಿಅತಿ ಅವರ ಪ್ರಕಾರ, ಇಸ್ಲಾಮ್ ಧರ್ಮದ ಮೂಲ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ಕೇವಲ ವ್ಯಕ್ತಿಗತ ಆರಾಧನಾ ಕರ್ಮಗಳ ಚೌಕಟ್ಟಿನಲ್ಲಿ ನೋಡಿದರೆ ಸಾಲದು. ಇಸ್ಲಾಮ್ ಧರ್ಮವು ಮೂಲತಃ ಒಂದು ಪ್ರಬಲ ಸಾಮಾಜಿಕ ಚಳವಳಿಯೂ ಆಗಿತ್ತು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಪ್ರವಾದಿ ಇಬ್ರಾಹೀಮ್ (ಅ), ಮೂಸಾ (ಅ), ಈಸಾ (ಅ) ಮತ್ತು ಮುಹಮ್ಮದ್ (ಸ) ಇವರೆಲ್ಲರೂ ತಮ್ಮ ಕಾಲದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದವರು. ಅವರು ಕೇವಲ ಧಾರ್ಮಿಕ ಆಚರಣೆಗಳನ್ನು ಕಲಿಸಲಿಲ್ಲ. ಅವರು ಶೋಷಣೆ, ದಬ್ಬಾಳಿಕೆ ಮತ್ತು ಅಸಮಾನತೆಯ ವಿರುದ್ಧ ಸ್ವತಃ ಹೋರಾಡಿದ್ದರು. ಹೋರಾಡಲು ಕಲಿಸಿದ್ದರು.

ಪ್ರವಾದಿ ಮುಹಮ್ಮದ್ (ಸ) ಸತ್ಯಪ್ರಸಾರ ಆರಂಭಿಸಿದಾಗ ಮೊದಲ ಹಂತದಲ್ಲಿ ಅವರ ಜೊತೆ ಸೇರಿಕೊಂಡವರು ಸಮಾಜದ ಮೇಲ್ವರ್ಗದವರಾಗಿರಲಿಲ್ಲ. ಅವರು ಬಡವರು, ಗುಲಾಮರು, ನಿರ್ಲಕ್ಷಿತರು ಮತ್ತು ತುಳಿತಕ್ಕೊಳಗಾದವರಾಗಿದ್ದರು. ಬಿಲಾಲ್ (ರ) ಎಂಬ ಆಫ್ರಿಕನ್ ಗುಲಾಮನನ್ನು ಸಮಾಜದ ಗೌರವಾನ್ವಿತ ಸ್ಥಾನಕ್ಕೆ ಏರಿಸಿದ ಇಸ್ಲಾಮ್, ಜಾತಿ, ವರ್ಗ ಮತ್ತು ವಂಶ ಇತ್ಯಾದಿಯನ್ನಾಧರಿಸಿದ ಶ್ರೇಣೀಕರಣದ ಬುನಾದಿಯಲ್ಲಿ ನಿರ್ಮಿತವಾಗಿದ್ದ ವ್ಯವಸ್ಥೆಗೆ ಸವಾಲು ಹಾಕಿತು.

ಇಸ್ಲಾಮ್ ಧರ್ಮವು ಸಮಾಜದ ಮುಂದಿಟ್ಟ ಸಂದೇಶವು ಬಹಳ ಸ್ಪಷ್ಟವಾಗಿತ್ತು:

ಎಲ್ಲ ಮಾನವರು ಒಂದೇ ಮೂಲದಿಂದ ಬಂದವರು.

ಯಾರೂ ಯಾರಿಗಿಂತಲೂ ಶ್ರೇಷ್ಠರಲ್ಲ.

ನ್ಯಾಯ ಮತ್ತು ಸಮಾನತೆ ಇವು ದೇವದತ್ತ ಮೌಲ್ಯಗಳು.

ಶರಿಅತಿ ಅವರ ಪ್ರಕಾರ, ಇದೇ ಇಸ್ಲಾಮ್‌ನ ಕ್ರಾಂತಿಕಾರಿ ಆತ್ಮ. ಆದರೆ ಕಾಲಕ್ರಮೇಣ ಧರ್ಮವನ್ನು ಅಧಿಕಾರದ ಸಾಧನವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ಆರಂಭವಾದವು. ಧರ್ಮದ ಹೆಸರಿನಲ್ಲಿ ಅನ್ಯಾಯವನ್ನು ಸಮರ್ಥಿಸುವ ಪ್ರವೃತ್ತಿಗಳು ಬೆಳೆಯತೊಡಗಿದವು. ಈ ಸಂದರ್ಭದಲ್ಲೇ ಕರ್ಬಲಾ ಸಂಭವಿಸಿತು.

ಕರ್ಬಲಾ: ಇತಿಹಾಸದ ಕೇವಲ ಒಂದು ಘಟನೆಯಲ್ಲ, ಅದೊಂದು ನಿರಂತರ ಸಂದೇಶ

ಸಾಮಾನ್ಯವಾಗಿ, ಕ್ರಿ.ಶ. 680ರ ಕರ್ಬಲಾ ಸಂಭವವನ್ನು ಒಂದು ಯುದ್ಧದ ರೂಪದಲ್ಲಿ ಬಿಂಬಿಸಲಾಗುತ್ತದೆ. ಆದರೆ ಶರಿಅತಿ ಅವರ ದೃಷ್ಟಿಯಲ್ಲಿ ಅದು ಯುದ್ಧವಾಗಿರಲಿಲ್ಲ. ಅದೊಂದು ನೈತಿಕ ಆಯ್ಕೆಯಾಗಿತ್ತು. ಯಝೀದ್ ಎಂಬ ಸರ್ವಾಧಿಕಾರಿ ತನ್ನ ಅಕ್ರಮ ಅಧಿಕಾರಕ್ಕೆ ಮನ್ನಣೆ ನೀಡಬೇಕೆಂದು ಜನರನ್ನು ನಿರ್ಬಂಧಿಸತೊಡಗಿದಾಗ ಇಮಾಮ್ ಹುಸೈನ್ (ಅ) ಅವರ ಮುಂದೆ ಮೂರು ಆಯ್ಕೆಗಳಿದ್ದವು.

ಮೊದಲನೆಯದು, ಮೌನವಾಗಿರುವುದು. ಎರಡನೆಯದು, ಎಲ್ಲ ಸಾಮಾಜಿಕ ಚಟುವಟಿಕೆಗಳಿಂದ ದೂರ ನಿಂತು ಎಲ್ಲಾದರೂ ವ್ಯಕ್ತಿಗತವಾದ ಆಧ್ಯಾತ್ಮಿಕ ಹಾಗೂ ಆರಾಧನಾ ಕರ್ಮಗಳಲ್ಲಿ ತೊಡಗಿಕೊಳ್ಳುವುದು ಮತ್ತು ಮೂರನೆಯದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು.

ಅವರು ಮೂರನೇ ಮಾರ್ಗವನ್ನು ಆರಿಸಿಕೊಂಡರು.

ಯಝೀದ್‌ನ ಬಳಿ ಬಲಿಷ್ಠ ಸೇನೆ, ಅಧಿಕಾರ, ಸಂಪತ್ತು ಮತ್ತು ರಾಜಕೀಯ ಶಕ್ತಿ ಇತ್ತು. ಹುಸೈನ್ (ಅ) ರ ಬಳಿ ಇದಾವುದೂ ಇರಲಿಲ್ಲ. ಅವರ ಜೊತೆ ಇದ್ದದ್ದು ಕೇವಲ ಕೆಲವು ಮಂದಿ ಸಹಚರರು ಮಾತ್ರ. ಯಝೀದ್ ವಿರುದ್ಧ ಘರ್ಷಣೆಗಿಳಿದು ವಿಜಯ ಸಾಧಿಸುವ ಯಾವುದೇ ಸಾಧ್ಯತೆ ಅವರ ಮುಂದಿರಲಿಲ್ಲ. ಆದರೂ ಅವರು ಶರಣಾಗದೆ, ರಾಜಿ ಮಾಡಿಕೊಳ್ಳದೆ, ಸಂಘರ್ಷದ ಹಾದಿಯನ್ನು ಆಯ್ದುಕೊಂಡರು.

ಶರಿಅತಿ ಅವರ ಪ್ರಕಾರ, ಕರ್ಬಲಾದ ಮಹತ್ವ ಇರುವುದು ಆ ಯುದ್ಧದ ಫಲಿತಾಂಶದಲ್ಲಿ ಅಲ್ಲ. ಇಮಾಮ್ ಹುಸೈನ್ ಏನನ್ನು ಆರಿಸಿಕೊಂಡರೆಂಬುದೇ ಆ ಯುದ್ಧದ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಅವರ ಕಠಿಣ ಆಯ್ಕೆಯೇ ಕರ್ಬಲಾ ಇತಿಹಾಸದ ಅವಿಸ್ಮರಣೀಯ ಅಂಶವಾಗಿದೆ. ಯಾವ ಬೆಲೆ ತೆರಬೇಕಾಗಿ ಬಂದರೂ ಸದಾ ಸತ್ಯ ಮತ್ತು ನ್ಯಾಯದ ಪರವಾಗಿಯೇ ನಿಲ್ಲಬೇಕು ಎಂಬ ಅವರ ನಿಲುವು ಮತ್ತು ಅದಕ್ಕಾಗಿ ಅವರು ಮತ್ತವರ ಸಹಚರರು ಮಾಡಿದ ಪ್ರಾಣಾರ್ಪಣೆಯೇ ಕರ್ಬಲಾ ಯುದ್ಧವನ್ನು ಇತಿಹಾಸದ ಒಂದು ಉಜ್ವಲ ಪರ್ವವಾಗಿಸುವ ಅಂಶವಾಗಿದೆ.

ಇಮಾಮ್ ಹುಸೈನ್ (ರ) ನಮಗೆ ನೀಡಿ ಹೋದ ಪಾಠ

ಹೋರಾಟ ಎಂಬುದು ವಿಜಯ ಖಚಿತವಾಗಿದ್ದಾಗ ಮಾತ್ರ ಕಡ್ಡಾಯವಾಗುವ ಕರ್ತವ್ಯವಲ್ಲ. ಎಲ್ಲ ಸನ್ನಿವೇಶಗಳಲ್ಲೂ ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವುದು ಸ್ವತಃ ಒಂದು ಕರ್ತವ್ಯವಾಗಿದೆ - ಸಂಕ್ಷಿಪ್ತವಾಗಿ, ಇದುವೇ ಕರ್ಬಲಾ ಮೂಲಕ ಇಮಾಮ್ ಹುಸೈನ್ ಅವರು ನಮಗೆ ನೀಡಿದ ಪಾಠವಾಗಿದೆ.

ಇದೇ ಕಾರಣಕ್ಕಾಗಿ ಕರ್ಬಲಾ ಪ್ರತಿಯೊಂದು ಯುಗಕ್ಕೂ ಸಂಗತವಾಗಿರುತ್ತದೆ. ಎಲ್ಲ ಕಾಲಗಳಲ್ಲೂ ಅದು ಅಪಾರ ಸ್ಫೂರ್ತಿಯನ್ನೊದಗಿಸುತ್ತದೆ.

ಯಝೀದ್ ಕೇವಲ ಒಬ್ಬ ಐತಿಹಾಸಿಕ ವ್ಯಕ್ತಿಯಾಗಿರಲಿಲ್ಲ. ಅವನು ಸರ್ವಾಧಿಕಾರ, ಅನ್ಯಾಯ ಮತ್ತು ದಮನದ ಪ್ರತೀಕವಾಗಿದ್ದ. ಹಾಗೆಯೇ ಹುಸೈನ್ (ಅ) ಕೇವಲ ಒಬ್ಬ ಐತಿಹಾಸಿಕ ನಾಯಕರಾಗಿರಲಿಲ್ಲ. ಅವರು ಸತ್ಯ, ನ್ಯಾಯ ಮತ್ತು ಮಾನವೀಯ ಘನತೆಯ ಸಾರ್ವಕಾಲಿಕ ಪ್ರತೀಕವಾಗಿದ್ದರು. ಅವರನ್ನು ಬಲ್ಲವರು ಇಂದು ಕೂಡಾ ಅವರನ್ನು ಅದೇ ದೃಷ್ಟಿಯಿಂದ ನೋಡುತ್ತಾರೆ.

ಯಝೀದ್‌ನಂತಹ ಜನವಿರೋಧಿ, ನಿರಂಕುಶ ಸರ್ವಾಧಿಕಾರಿಗಳು ಮತ್ತು ಅನ್ಯಾಯದ ಪ್ರತಿಪಾದಕರು ಎಲ್ಲ ಕಾಲಗಳಲ್ಲೂ ವಿಭಿನ್ನ ರೂಪಗಳಲ್ಲಿ ತಲೆ ಎತ್ತುತ್ತಲೇ ಇರುತ್ತಾರೆ. ಹಾಗೆಯೇ, ಹುಸೈನ್ (ಅ) ಅವರಂತೆ ಸತ್ಯ ಮತ್ತು ನ್ಯಾಯದ ಧ್ವನಿಯಾಗುವವರ ಅಗತ್ಯ ಎಲ್ಲ ಕಾಲಗಳಲ್ಲೂ ಇರುತ್ತದೆ. ಆದ್ದರಿಂದಲೇ, ಕರ್ಬಲಾ ಕೇವಲ ಹಿಜ್ರಿ 61ನೇ ವರ್ಷದ ಘಟನೆಯಲ್ಲ; ಅದು ಎಲ್ಲ ಯುಗಗಳ ಮುಂದೆ ಬಂದು ನಿಲ್ಲುವ ನೈತಿಕ ಸವಾಲಾಗಿದೆ.

ಹುರ್: ಕರ್ಬಲಾದ ಅತ್ಯಂತ ಆಶಾದಾಯಕ ವ್ಯಕ್ತಿತ್ವ

ಅಲಿ ಶರಿಅತಿ ಅವರ ಬರಹಗಳಲ್ಲಿ ವಿಶೇಷ ಸ್ಥಾನ ಪಡೆಯುವ ಒಂದು ವ್ಯಕ್ತಿತ್ವವಿದೆ. ಅವರ ಹೆಸರು ಹುರ್ ಇಬ್ನು ಯಜೀದ್ ಅಲ್ ತಮೀಮಿ. ಹುರ್, ಕೂಫಾದ ಒಬ್ಬ ದಕ್ಷ ಯೋಧ ಮತ್ತು ಸಮರ್ಥ ದಂಡನಾಯಕನಾಗಿ ಹೆಸರು ಗಳಿಸಿದ್ದವರು. ಅವರು ಯಝೀದ್‌ನ ಬೃಹತ್ ಪಡೆಯ ಒಬ್ಬ ಪ್ರಮುಖ ಸೇನಾನಿಯಾಗಿದ್ದರು. ಯಝೀದ್ ಮತ್ತವನ ಆಡಳಿತಕ್ಕೆ ಪರಮ ನಿಷ್ಠರಾಗಿದ್ದವರು. ಇಮಾಮ್ ಹುಸೈನ್(ರ) ಕೂಫಾ ಪ್ರವೇಶಿಸದಂತೆ ನಗರದ ಪ್ರವೇಶಕ್ಕೆ ಲಭ್ಯವಿದ್ದ ಎಲ್ಲ ದಾರಿಗಳನ್ನು ಮುಚ್ಚಿಡುವ ಕರ್ತವ್ಯವನ್ನು ಅವರಿಗೆ ವಹಿಸಲಾಗಿತ್ತು. ಹೀಗೆ ಅವರು ಸ್ಪಷ್ಟವಾಗಿ ಹುಸೈನ್‌ರ ವಿರೋಧಿ ಪಾಳಯದಲ್ಲಿದ್ದರು. ಆದರೆ ಯುದ್ಧದ ದಿನ ಎಲ್ಲವೂ ಬದಲಾಯಿತು.

ಆ ಯುದ್ಧರಂಗವೂ ವಿಚಿತ್ರವಾಗಿತ್ತು. ಒಂದು ಕಡೆ ಯಝೀದ್‌ನ ಶಸ್ತ್ರ ಸಜ್ಜಿತ ಬೃಹತ್ ಪಡೆ. ಇನ್ನೊಂದು ಕಡೆ ಇಮಾಮ್ ಹುಸೈನ್, ಅವರ ಕುಟುಂಬದ ಸದಸ್ಯರು ಮತ್ತು ಅವರ ಕೆಲವು ಆಪ್ತ ಸಂಗಾತಿಗಳು. ಈ ಎರಡು ಸೇನೆಗಳ ನಡುವೆ ಹುರ್ ನಿಂತಿದ್ದರು. ಹುಸೈನ್ ಮತ್ತವರ ಸಂಗಾತಿಗಳ ಮೇಲೆ ಮುಗಿಬೀಳುವುದಕ್ಕೆಂದೇ ಅವರನ್ನು ನೇಮಿಸಲಾಗಿತ್ತು. ಆದರೆ ಅವರ ಆತ್ಮಸಾಕ್ಷಿ ಅವರನ್ನು ಕೆಣಕುತ್ತಿತ್ತು. ಅವರು ತೀವ್ರ ಭಾವುಕ ಸ್ಥಿತಿಯಲ್ಲಿದ್ದರು. ಯಝೀದ್‌ನ ಪಡೆಯ ಯೋಧನೊಬ್ಬ ಇದನ್ನು ಗಮನಿಸಿ, ‘‘ನಿಮಗೇನಾಗಿದೆ? ನೀವು ನಡುಗುತ್ತಿರುವುದೇಕೆ?’’ ಎಂದು ಹುರ್‌ರನ್ನು ಪ್ರಶ್ನಿಸಿದನು.

ಈ ಪ್ರಶ್ನೆಗೆ ಹುರ್ ಉತ್ತರ ಹೀಗಿತ್ತು:

‘‘ನನ್ನ ಸ್ಥಿತಿ ಸ್ವರ್ಗ ಮತ್ತು ನರಕದ ನಡುವೆ ನಿಂತಿರುವವನ ಹಾಗಿದೆ. ಅಲ್ಲಾಹನಾಣೆ! ನಾನು ಸ್ವರ್ಗವನ್ನೇ ಆಯ್ಕೆ ಮಾಡುತ್ತೇನೆ.’’

ಆ ಕ್ಷಣದಲ್ಲಿ ಅವರು ಕೈಗೊಂಡ ನಿರ್ಧಾರವು ಕೇವಲ ಅವರ ಬದುಕಿನ ಮಾತ್ರವಲ್ಲ, ಇತಿಹಾಸದ ಒಂದು ದೊಡ್ಡ ನಿರ್ಧಾರವಾಗಿತ್ತು. ನನಗೆ ಅಧಿಕಾರ ಬೇಡ, ಭದ್ರತೆ ಬೇಡ, ಸಂಪನ್ನತೆ ಬೇಡ ಎಂಬ ನಿರ್ಧಾರ. ನಾನು ಸತ್ಯ ಮತ್ತು ನ್ಯಾಯದ ಪರ ನಿಲ್ಲುತ್ತೇನೆ ಎಂಬ ನಿರ್ಧಾರ. ಅವರು ಆ ನಿರ್ಣಾಯಕ ಕ್ಷಣದಲ್ಲಿ ಯಝೀದ್‌ನ ಸೇನೆಯನ್ನು ಬಿಟ್ಟು ಹುಸೈನ್ (ಅ) ಅವರ ಪಾಳಯವನ್ನು ಸೇರಿಕೊಳ್ಳಲು ನಿರ್ಧರಿಸಿದರು.

ಶರಿಅತಿ ಅವರ ದೃಷ್ಟಿಯಲ್ಲಿ, ಹುರ್ ಕರ್ಬಲಾದ ಅತ್ಯಂತ ಮಹತ್ವದ ವ್ಯಕ್ತಿತ್ವ. ಏಕೆಂದರೆ ಅವರು ಮನುಷ್ಯನಿಗೆ ಆಶಾವಾದದ ಸಂದೇಶ ನೀಡುತ್ತಾರೆ.

* ಯಾರೂ ತಮ್ಮ ಭೂತಕಾಲದ ಕೈದಿಗಳಲ್ಲ.

* ಆಯ್ಕೆಯ ಅವಕಾಶವು ತೀರಾ ಕೊನೆಯ ಕ್ಷಣದವರೆಗೂ ಲಭ್ಯವಿರುತ್ತದೆ.

* ಸತ್ಯವು ಮನವರಿಕೆಯಾದ ಬಳಿಕ ಅದನ್ನು ಸ್ವೀಕರಿಸಿ ಅದರ ಪರವಾಗಿ ನಿಲ್ಲುವ ಧೈರ್ಯ ತೋರುವುದೇ ನಿಜವಾದ ಸ್ವಾತಂತ್ರ್ಯ.

ಹುರ್ ಕೇವಲ ಒಬ್ಬ ಶಹೀದ್ ಅಲ್ಲ. ಅವರು ಮಾನವನ ನೈತಿಕ ಸ್ವಾತಂತ್ರ್ಯದ ಪ್ರತೀಕ.

ಎದ್ದು ನಿಲ್ಲಿ !

ಅಲಿ ಶರಿಅತಿ ಅವರ ಪ್ರಸಿದ್ಧ ಕೃತಿ Arise and Bear Witnessನ ಮೂಲ ಸಂದೇಶವೇ ಇದು.

ಅವರ ಪ್ರಕಾರ, ಸಮಾಜದ ದೊಡ್ಡ ಸಮಸ್ಯೆ ಅನ್ಯಾಯವಲ್ಲ. ನಿಜವಾಗಿ, ಅನ್ಯಾಯದ ಎದುರು ಮೌನವಾಗಿರುವುದೇ ನೈಜ ಸಮಸ್ಯೆಯಾಗಿದೆ. ಅದೆಷ್ಟೋ ಮಂದಿ ತಾವಿರುವ ಸನ್ನಿವೇಶವನ್ನೇ ತಮ್ಮ ವಿಧಿ ಅಥವಾ ಭಾಗ್ಯ ಎಂದು ಒಪ್ಪಿಕೊಳ್ಳುತ್ತಾರೆ. ಬಡತನ, ಶೋಷಣೆ, ಅಸಮಾನತೆ ಮತ್ತು ದಬ್ಬಾಳಿಕೆಯನ್ನು ಇವೆಲ್ಲಾ ಅನಿವಾರ್ಯ ವಾಸ್ತವಗಳೆಂದು ಅಂಗೀಕರಿಸಿಕೊಳ್ಳುತ್ತಾರೆ. ನಿಜವಾಗಿ, ಈ ಮನೋಭಾವವೇ ಅನ್ಯಾಯದ ವ್ಯವಸ್ಥೆಗಳಿಗೆ ಅತ್ಯಧಿಕ ಶಕ್ತಿ ಒದಗಿಸುವ ಸಾಧನವಾಗಿದೆ.

ಶರಿಅತಿ ಹೇಳುವಂತೆ, ಮಾನವನು ಕೇವಲ ಇತಿಹಾಸದ ವೀಕ್ಷಕನಲ್ಲ. ಅವನು ಇತಿಹಾಸದ ನಿರ್ಮಾತೃ ಕೂಡಾ ಹೌದು. ಅವನ ಮುಂದೆ ಆಯ್ಕೆ ಮಾಡುವ ಅವಕಾಶವಿದೆ. ನ್ಯಾಯ ಮತ್ತು ಅನ್ಯಾಯದ ನಡುವೆ, ಸತ್ಯ ಮತ್ತು ಅಸತ್ಯದ ನಡುವೆ, ಹೊಣೆಗಾರಿಕೆ ಮತ್ತು ಹೊಣೆಗೇಡಿತನಗಳ ನಡುವೆ ತನಗೆ ಸರಿ ಕಂಡದ್ದನ್ನು ಅವನು ಆರಿಸಿಕೊಳ್ಳಬಹುದು. ಒಂದುವೇಳೆ ಅವನು ಈ ಆಯ್ಕೆಯನ್ನು ಬಳಸದೆ ಇದ್ದರೆ ಅವನು ತನ್ನ ಮಾನವೀಯತೆಯನ್ನೇ ಕಳೆದುಕೊಳ್ಳುತ್ತಾನೆ.

ಕರ್ಬಲಾ ಇಂದಿಗೂ ಜೀವಂತವಾಗಿದೆ

ಶರಿಅತಿ ಅವರ ಅತ್ಯಂತ ಮಹತ್ವದ ಸಂದೇಶವೆಂದರೆ ಕರ್ಬಲಾ ಒಂದು ದಿನದಲ್ಲಿ ಮುಗಿದಿಲ್ಲ.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಒಂದು ಕರ್ಬಲಾ ಇರುತ್ತದೆ. ಪ್ರತಿಯೊಬ್ಬರ ಮುಂದೆಯೂ ಒಬ್ಬ ಹುಸೈನ್ ಮತ್ತು ಒಬ್ಬ ಯಝೀದ್ ಇರುತ್ತಾರೆ. ಹುರ್ ಮುಂದೆ ಬಂದು ನಿಂತಂತಹ ಆಯ್ಕೆಯು ಪ್ರತಿಯೊಬ್ಬರ ಮುಂದೆಯೂ ಬಂದು ನಿಲ್ಲುತ್ತದೆ. ಆ ಕ್ಷಣದಲ್ಲಿ ನಾವು ಯಾವ ಪಾಳಯದಲ್ಲಿ ನಿಲ್ಲುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

ಹುಸೈನ್ (ಅ), ಹುರ್ ಮತ್ತು ಅವರ ಶಹಾದತ್ ಅನ್ನು ಸ್ಮರಿಸುವುದೆಂದರೆ ಮರಣವನ್ನು ನ್ಯಾಯಕ್ಕಾಗಿ ಬದುಕುವ ಸಂಕಲ್ಪವನ್ನು ನವೀಕರಿಸುವುದಾಗಿದೆ. ಇತಿಹಾಸದ ಮಹಾನ್ ವ್ಯಕ್ತಿಗಳು ಯಾವತ್ತೂ ಪರಿಸ್ಥಿತಿ ಅಥವಾ ಸನ್ನಿವೇಶಗಳಿಗೆ ಶರಣಾಗಲಿಲ್ಲ. ಅವರು ತಮ್ಮ ಕಾಲದ ಅನ್ಯಾಯವನ್ನು ಪ್ರಶ್ನಿಸಿದರು. ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು. ಸತ್ಯ ಮತ್ತು ನ್ಯಾಯದ ಪರವಾಗಿ ನಿಂತರು. ಅವರ ಸಾಧನೆಗಳು ನಮಗೆ ಒಂದು ಪಾಠವನ್ನು ಕಲಿಸುತ್ತವೆ: ಬದಲಾವಣೆ ಹೊರಗಿನಿಂದ ಬರುವುದಿಲ್ಲ; ಅದು ಮನುಷ್ಯನ ಒಳಗಿನಿಂದ ಆರಂಭವಾಗುತ್ತದೆ.

ಅಲಿ ಶರಿಅತಿ ತಮ್ಮ ಓದುಗರಿಗೆ ಒಂದು ಸರಳ ಆದರೆ ಕ್ರಾಂತಿಕಾರಿ ಸಂದೇಶವನ್ನು ನೀಡುತ್ತಾರೆ:

‘‘ಎದ್ದು ನಿಲ್ಲಿ. ಸಾಕ್ಷಿಯಾಗಿರಿ. ಸತ್ಯದ ಪರವಾಗಿ ನಿಲ್ಲಿ. ವಿಜಯ ನಿಮ್ಮ ಕೈಯಲ್ಲಿಲ್ಲದಿರಬಹುದು; ಆದರೆ ಸತ್ಯದ ಪರವಾಗಿ ನಿಲ್ಲುವುದು ನಿಮ್ಮ ಕರ್ತವ್ಯ. ಹುಸೈನ್ ಅವರ ಧೈರ್ಯವನ್ನು ಮತ್ತು ಹುರ್ ಅವರ ನೈತಿಕ ಆಯ್ಕೆಯನ್ನು ನಿಮ್ಮ ಜೀವನದ ಮಾರ್ಗದರ್ಶಕವಾಗಿಸಿಕೊಳ್ಳಿ.’’

ಒಬ್ಬ ವ್ಯಕ್ತಿ ಎದ್ದು ನಿಂತಾಗ ಅದು ವೈಯಕ್ತಿಕ ಜಾಗೃತಿಯಾಗಿರುತ್ತದೆ. ಒಂದು ಸಮುದಾಯ ಎದ್ದು ನಿಂತಾಗ ಅದು ಸಾಮಾಜಿಕ ಪುನರುತ್ಥಾನವಾಗುತ್ತದೆ. ಒಂದು ರಾಷ್ಟ್ರ ಎದ್ದು ನಿಂತಾಗ ಅದು ಇತಿಹಾಸದ ಹೊಸ ಅಧ್ಯಾಯವಾಗಿ ಬಿಡುತ್ತದೆ. ಆದ್ದರಿಂದ ಇಂದು ನಮ್ಮ ಯುವ ಸಮೂಹಕ್ಕೆ ಈ ಮುಹರ‌್ರಮ್ ದಿನವು ನೀಡುವ ಸಂದೇಶವು ಸರಳವಾಗಿದೆ:

ವಿಧಿವಾದದ ನಿದ್ರೆಯಿಂದ ಎಚ್ಚೆತ್ತುಕೊಳ್ಳಿ, ಕರ್ತವ್ಯ ಪ್ರಜ್ಞೆಯೊಂದಿಗೆ ಎದ್ದು ನಿಲ್ಲಿ, ನ್ಯಾಯ ಮತ್ತು ಮಾನವೀಯತೆಯ ಪರವಾಗಿ ಸದಾ ಸಕ್ರಿಯರಾಗಿರಿ. ಏಕೆಂದರೆ ಇತಿಹಾಸವನ್ನು ನಿರ್ಮಿಸಿದವರು ಯಾರೂ ಪರಿಸ್ಥಿತಿಗಳಿಗೆ ಶರಣಾದವರಲ್ಲ; ಅವರೆಲ್ಲಾ ಸ್ವತಃ ಪರಿಸ್ಥಿತಿಯನ್ನು ಬದಲಾಯಿಸುವ ಧೈರ್ಯ ಮೆರೆದವರು. ಧರ್ಮವೂ ಅಷ್ಟೇ. ಅದು ಮನುಷ್ಯನನ್ನು ನಿಷ್ಕ್ರಿಯಗೊಳಿಸಲು ಬಂದಿಲ್ಲ. ಅದು ಅವನಲ್ಲಿ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಿ ಅವನನ್ನು ಸಕ್ರಿಯಗೊಳಿಸಲು ಬಂದಿದೆ. ಪ್ರವಾದಿಗಳ ಇತಿಹಾಸದಲ್ಲಿರುವ ಪಾಠವೂ ಇದುವೇ.

Tags

Muharram
share
ಇರ್ಷಾದ್ ಕೊಪ್ಪಳ
ಇರ್ಷಾದ್ ಕೊಪ್ಪಳ
Next Story
X