ಅಪರಾಧಿಗಳು, ನಾಪತ್ತೆಯಾಗಿರುವ ಮಕ್ಕಳ ಸುಲಭ ಪತ್ತೆ: ಮುಂಬೈ ರೈಲ್ವೆಯ FRS ವ್ಯವಸ್ಥೆ ರಾಷ್ಟ್ರವ್ಯಾಪಿ ತನಿಖಾ ಸಾಧನವಾಗಿದ್ದೇಗೆ?

ಸಾಂದರ್ಭಿಕ ಚಿತ್ರ | Photo Credit : NDTV
ಸುಮಾರು 5000 ಕ್ಯಾಮರಾಗಳನ್ನು ಹೊಂದಿರುವ ಮುಂಬೈ ಪೊಲೀಸ್ ಯುನಿಟ್ ಕೂಡ ತಮ್ಮ ಜಾಲಕ್ಕೆ FRS ಲಿಂಕ್ ಮಾಡಲು ಯೋಜಿಸುತ್ತಿದೆ.
ಪೋರ್ಚುಗೀಸ್ ಪ್ರವಾಸಿಗರೊಬ್ಬರಿಗೆ ಕಿರುಕುಳ ನೀಡಿ ಬೆನ್ನಟ್ಟಿದ ಇಬ್ಬರು ವ್ಯಕ್ತಿಗಳನ್ನು ಕಳೆದ ತಿಂಗಳು ಬಂಧಿಸಲಾಗಿದೆ. ಗುರುಗಾಂವ್ನಿಂದ ತಪ್ಪಿಸಿಕೊಂಡಿದ್ದ 14 ವರ್ಷದ ಹುಡುಗನನ್ನು ವಾರದ ಹಿಂದೆ ರಾಜಸ್ಥಾನದಲ್ಲಿ ಪತ್ತೆಹಚ್ಚಲಾಗಿದೆ. ಮುಂಬೈ ಪ್ರೊಫೆಸರ್ ಮೇಲೆ ಹಲ್ಲೆಗೈದ ವ್ಯಕ್ತಿಯನ್ನು ಜನವರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಬಂಧಿಸಲಾಗಿದೆ. ವರ್ಷದ ಹಿಂದೆ ನಟ ಸೈಫ್ ಅಲಿ ಖಾನ್ ಮೇಲೆ ದಾಳಿಗೈದು ಪರಾರಿಯಾಗಿದ್ದ ವ್ಯಕ್ತಿಯನ್ನೂ ಬಂಧಿಸಲಾಗಿದೆ.
ಈ ಎಲ್ಲಾ ಯಶಸ್ವಿ ಪೊಲೀಸ್ ತನಿಖೆಗಳಿಗೆ ನೆರವಾಗಿರುವ ಸಾಧನ ರೈಲ್ವೇ ರಕ್ಷಣಾ ಪಡೆಯ ಮುಂಬೈ ವಿಭಾಗದ 3,675 CCTV ಕ್ಯಾಮರಾಗಳಿಗೆ ಲಿಂಕ್ ಆಗಿರುವ 463 ಮುಖ ಗುರುತಿಸುವಿಕೆ ವ್ಯವಸ್ಥೆ (Facial Recognition System) ಅಥವಾ FRS! ಉತ್ತರದಲ್ಲಿ ಚರ್ಚ್ಗೇಟ್ನಿಂದ ಸೂರತ್ವರೆಗೆ ಮತ್ತು ಪೂರ್ವದಲ್ಲಿ ಜಲಗಾಂವ್ವರೆಗೆ ರೈಲ್ವೇ ನಿಲ್ದಾಣಗಳಲ್ಲಿ ಈ FRS ಜಾಲ ಹರಡಲಾಗಿದೆ.
ಅಧಿಕಾರಿಗಳ ಪ್ರಕಾರ ಪಶ್ಚಿಮ ರೈಲ್ವೆ ದೇಶದ ರೈಲು ಜಾಲಗಳಲ್ಲಿ CCTV ಕ್ಯಾಮರಾಗಳಿಗೆ FRS ವ್ಯವಸ್ಥೆ ಸ್ಥಾಪಿಸಿದ ಮೊದಲ ವಿಭಾಗವಾಗಿದೆ. ರೈಲ್ವೇ ಅಧಿಕಾರಿಗಳ ಪ್ರಕಾರ, “ಕಳೆದ ವರ್ಷಗಳಿಂದ ಅವುಗಳನ್ನು ಇತರ ವಿಭಾಗಗಳಲ್ಲೂ ಸ್ಥಾಪಿಸಲಾಗುತ್ತಿದ್ದು, ಸಂಪೂರ್ಣ ರೈಲ್ವೇ ನೆಟ್ವರ್ಕ್ ಅನ್ನು ಒಳಗೊಳ್ಳಲಾಗುತ್ತದೆ. ಇದೀಗ ದೇಶಾದ್ಯಂತ ಪೊಲೀಸ್ ಪಡೆಗಳು ಮತ್ತು ಕೇಂದ್ರ ತನಿಖಾ ಏಜೆನ್ಸಿಗಳಿಂದಲೂ ಸಹಾಯಕ್ಕೆ ವಿನಂತಿಗಳು ಬರುತ್ತವೆ”.
ಸುಮಾರು 5000 ಕ್ಯಾಮರಾಗಳನ್ನು ಹೊಂದಿರುವ ಮುಂಬೈ ಪೊಲೀಸ್ ಯುನಿಟ್ ಕೂಡ ತಮ್ಮ ಜಾಲಕ್ಕೆ FRS ಲಿಂಕ್ ಮಾಡಲು ಯೋಜಿಸುತ್ತಿದೆ. ಪೋರ್ಚುಗೀಸ್ ಪ್ರವಾಸಿ ಮಹಿಳೆ ಫೆಬ್ರವರಿ 23ರಂದು ಮಹಾಲಕ್ಷ್ಮಿ ರೈಲ್ವೇ ನಿಲ್ದಾಣದ ಬಳಿ ಧೋಬಿ ಘಾಟ್ ಬಳಿ ಕಿರುಕುಳದ ವೀಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅದರಿಂದ ಫೋಟೋ ಪಡೆದ ಮುಂಬೈ ಪೊಲೀಸರು ತಮ್ಮ ಕ್ಯಾಮರಾ ನೆಟ್ವರ್ಕ್ನಲ್ಲಿ ಸ್ಕ್ಯಾನ್ ಮಾಡಿದಾಗ ವಿವರ ಸಿಕ್ಕಿರಲಿಲ್ಲ. ವೀಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ರೈಲ್ವೆ ಪೊಲೀಸ್ ಪಡೆಯ FRS ಜಾಲದಲ್ಲಿ ಹುಡುಕಿದಾಗ ತ್ವರಿತವಾಗಿ ವಿವರ ದೊರಕಿದೆ. ಕಿರುಕುಳ ನೀಡಿದವರಲ್ಲಿ ಒಬ್ಬ ಬಿಹಾರಕ್ಕೆ ಪಲಾಯನಗೈದರೆ ಮತ್ತೊಬ್ಬ ಮುಂಬೈನಲ್ಲೇ ಸಿಕ್ಕಿಬಿದ್ದಿದ್ದಾನೆ.
FRS ವ್ಯಕ್ತಿಗಳ ಮುಖದ ಲಕ್ಷಣಗಳನ್ನು ಆಧರಿಸಿ ಗುರುತಿಸುತ್ತದೆ. ಕಣ್ಣುಗಳ ನಡುವಿನ ಅಂತರ, ಹಣೆ, ಮೂಗು, ಕಿವಿಗಳು ಮತ್ತು ಕೆನ್ನೆಯ ಮೂಳೆಗಳನ್ನು ಪರೀಕ್ಷಿಸಿ ಅವುಗಳನ್ನು ಡಾಟಾವಾಗಿ ಪರಿವರ್ತಿಸಿ ಫೇಸ್ ಪ್ರಿಂಟ್ ಆಗಿಸುತ್ತದೆ. ಮುಖವನ್ನು ಟ್ರ್ಯಾಕ್ ಮಾಡಲು ರೈಲ್ವೈ ಪೊಲೀಸರು ಸಿಸ್ಟಮ್ಗೆ ಪೋಟೋ ಅಪ್ಲೋಡ್ ಮಾಡುತ್ತಾರೆ. ಸಿಸ್ಟಮ್ ಸಂಗ್ರಹಿಸಿರುವ ಫೇಸ್ ಪ್ರಿಂಟ್ಗಳನ್ನು ಹೋಲಿಸಿ ಅಲರ್ಟ್ ಕೊಡುತ್ತದೆ. ನಂತರ ಇತರ ಸ್ಥಳಗಳಲ್ಲಿ ಪತ್ತೆಯಾಗಿರುವುದು ಮತ್ತು ಆಗಾಗ್ಗೆ ಓಡಾಡಿದ ಸ್ಥಳಗಳ ವಿವರ ಕೊಡುತ್ತದೆ.
FRS ಅಳವಡಿಸಿದ CCTV ಕ್ಯಾಮರಾಗಳು ಮುಂಬೈ ಸೆಂಟ್ರಲ್ ಅಥವಾ ರೈಲ್ವೇ ಪೊಲೀಸ್ ಪಡೆಯ ಪೊಲೀಸ್ ಸ್ಟೇಷನ್ಗಳಲ್ಲಿ ಲಭ್ಯವಿರುವ ಸಾಫ್ಟ್ವೇರ್ಗೆ ಸಂಪರ್ಕಿತವಾಗಿರುತ್ತವೆ. ವಾಚ್ಲಿಸ್ಟ್ನಲ್ಲಿರುವ ವ್ಯಕ್ತಿ ಯಾವುದೇ ಕ್ಯಾಮರಾಗಳ ಮೂಲಕ ಸಾಗಿದರೂ ಸಾಫ್ಟ್ವೇರ್ ತಕ್ಷಣವೇ ಅಲರ್ಟ್ ಕೊಡುತ್ತದೆ. 2024ರೊಂದರಲ್ಲೇ 10,000ಕ್ಕೂ ಮೀರಿದ ಫೋಟೋಗ್ರಾಫ್ಗಳನ್ನು ಬಳಸಿ ಎನ್ಐಎ ಮತ್ತು ಸಿಬಿಐ ಸೇರಿದಂತೆ ಏಜೆನ್ಸಿಗಳು ವ್ಯಕ್ತಿಗಳನ್ನು ಪತ್ತೆ ಮಾಡಿದ್ದಾರೆ.
ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಕೂಡ ಈ ಸಾಧನ ಅತಿ ಮುಖ್ಯವಾಗಿದೆ. ಜನನಿಬಿಡ ನಿಲ್ದಾಣಗಳಾದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಚರ್ಚ್ ಗೇಟ್ ನಂತಹ ಸ್ಥಳಗಳಲ್ಲಿಯೂ FRS ನಿಂದ ನಾಪತ್ತೆಯಾದ ಮಕ್ಕಳ ಫೋಟೋಗಳನ್ನು ಬಳಸಿ ಪತ್ತೆ ಮಾಡಲಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ಮಕ್ಕಳನ್ನು ಕೊನೆಯ ಬಾರಿಗೆ ಎಲ್ಲಿ ನೋಡಲಾಗಿದೆ ಎನ್ನುವ ವಿವರ ರೈಲ್ವೆ FRS ಜಾಲದಿಂದ ದೊರೆಯುತ್ತದೆ.
2024ರಲ್ಲಿ 54 ಬ್ಯಾಗ್ ಕಳ್ಳರು ಮತ್ತು ಮೂರು ದರೋಡೆಗಳನ್ನು FRS ಜಾಲದಿಂದ ಪರಿಹರಿಸಲಾಗಿದೆ. 2025ರಲ್ಲಿ 59 ಬ್ಯಾಗ್ ಕಳ್ಳರು ಮತ್ತು ಐದು ಬ್ಯಾಗ್ ಸೆಳೆದುಕೊಂಡು ಹೋಗುವವರನ್ನು ಪತ್ತೆ ಮಾಡಲಾಗಿದೆ. 2026ರಲ್ಲಿ ಫೆಬ್ರವರಿಯವರೆಗೆ 15 ಬ್ಯಾಗ್ ಕಳ್ಳರನ್ನು ಪತ್ತೆ ಮಾಡಲಾಗಿದೆ.
ಕೃಪೆ: indianexpress.com







