Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರಾವಳಿಯಲ್ಲಿ 'ಗಲಭೆ ಆಡಳಿತ' : ಬಡವರು...

ಕರಾವಳಿಯಲ್ಲಿ 'ಗಲಭೆ ಆಡಳಿತ' : ಬಡವರು ಮಾತ್ರ ಬಲಿ, ಹಿಂದೂ ಮುಸ್ಲಿಂ ಗಣ್ಯರ ವಹಿವಾಟು ಅಬಾಧಿತ

ಮುಸ್ಲಿಮರ ಕೊಲೆ ಯೋಜಿತವಲ್ಲ, ಆಕಸ್ಮಿಕ ಎಂದ ಶರಣ್ ಪಂಪ್ ವೆಲ್!

ವಿಖಾರ್ ಅಹ್ಮದ್ ಸಯೀದ್ವಿಖಾರ್ ಅಹ್ಮದ್ ಸಯೀದ್6 July 2025 10:33 PM IST
share
ಕರಾವಳಿಯಲ್ಲಿ ಗಲಭೆ ಆಡಳಿತ : ಬಡವರು ಮಾತ್ರ ಬಲಿ, ಹಿಂದೂ ಮುಸ್ಲಿಂ ಗಣ್ಯರ ವಹಿವಾಟು ಅಬಾಧಿತ

ಮೇ 27 ರಂದು, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ (ಕೊಳ್ತಮಜಲು ಎಂದೂ ಕರೆಯಲ್ಪಡುವ) ನಿವಾಸಿ, 34 ವರ್ಷದ ಪಿಕಪ್ ಟ್ರಕ್ ಮಾಲಕ ಅಬ್ದುಲ್ ರಹ್ಮಾನ್ ಅವರಿಗೆ ದೀಪಕ್ ಎಂಬ ಪರಿಚಿತ ವ್ಯಕ್ತಿ ಕರೆ ಮಾಡಿ ತನ್ನ ಮನೆಗೆ ಮರಳು ಹಾಕುವಂತೆ ಕೇಳಿಕೊಂಡಿದ್ದ. ಅಂತೆಯೇ ಮರಳು ಹಾಕಲು ರಹ್ಮಾನ್, ಮೂರು ವರ್ಷಗಳಿಂದ ತನ್ನೊಂದಿಗಿರುವ ಸಹಾಯಕನಾದ 30 ವರ್ಷದ ಕೂಲಿ ಕಾರ್ಮಿಕ ಖಲಂದರ್ ಶಾಫಿಯನ್ನು ಜೊತೆಗೆ ಕರೆದುಕೊಂಡು ಹೋದರು. ಇಬ್ಬರೂ ಮಧ್ಯಾಹ್ನ ಸುಮಾರು 3 ಗಂಟೆಗೆ 50 ಚೀಲ ಮರಳಿನೊಂದಿಗೆ ರಹ್ಮಾನ್ ಅವರ ಮಹೀಂದ್ರಾ ಬೊಲೆರೊ ಪಿಕಪ್ ನಲ್ಲಿ ದೀಪಕ್ ಮನೆಗೆ ಹೊರಟರು.

ತನ್ನ ಪೋಷಕರು, ಒಡಹುಟ್ಟಿದವರು, ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳು, ರಹ್ಮಾನ್ ಅವರನ್ನು ಕೊನೆಯ ಬಾರಿಗೆ ನೋಡಿದ್ದು ಆಗಲೇ. ದೀಪಕ್ ನ ಮನೆ ದಾರಿಯಲ್ಲಿ ಹೋಗುವಾಗ ದೀಪಕ್ ನ ತಾಯಿ ಮತ್ತು ತಮ್ಮ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ರಹ್ಮಾನ್, ಅವರನ್ನೂ ತಮ್ಮ ಪಿಕಪ್ ನಲ್ಲೇ ಕುಳ್ಳಿರಿಸಿಕೊಂಡು ಕರೆದೊಯ್ದರು ಎಂದು ಶಾಫಿ Frontline ಗೆ ತಿಳಿಸಿದ್ದಾರೆ.

ರಹ್ಮಾನ್ ಮತ್ತು ಶಾಫಿ ಇಬ್ಬರಿಗೂ ದೀಪಕ್ ಕುಟುಂಬದ ಸದಸ್ಯರ ಪರಿಚಯ ಇತ್ತು. ಶಾಫಿ ಕೆಲವು ವರ್ಷಗಳ ಹಿಂದೆ ಒಂದು ತಿಂಗಳ ಕಾಲ ದೀಪಕ್ ಮನೆಯಲ್ಲಿ ಕಟ್ಟಡ ಕಾರ್ಮಿಕರನಾಗಿ ಕೆಲಸ ಮಾಡಿದ್ದರು. ಅವರಿಬ್ಬರೂ ಕಲ್ಲಡ್ಕ ಪಟ್ಟಣದಲ್ಲಿ ದೇವಾಲಯ ನಿರ್ಮಾಣ ವೇಳೆಯೂ ಒಟ್ಟಿಗೆ ಕೆಲಸ ಮಾಡಿದ್ದರು. ಪಿಕಪ್, ದೀಪಕ್ ಮನೆ ತಲುಪಿದ ತಕ್ಷಣ, 21 ವರ್ಷದ ದೀಪಕ್ ಮರಳಿನ ಗುಣಮಟ್ಟದ ಬಗ್ಗೆ ರಹ್ಮಾನ್ ಜೊತೆ ಜಗಳವಾಡಲು ಪ್ರಾರಂಭಿಸಿದ. ದೀಪಕ್ ನ ತಾಯಿ ಮತ್ತು ಸಹೋದರ ಮನೆಯೊಳಗೆ ಹೋದ ತಕ್ಷಣ ಅಲ್ಲೊಂದು ಕಗ್ಗೊಲೆ ನಡೆದು ಹೋಯಿತು!

"ನಾನು ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದೆ, ರಹ್ಮಾನ್ ಚಾಲಕನ ಸೀಟಿನಲ್ಲಿದ್ದ. ದೀಪಕ್ ನೊಂದಿಗೆ ಅವನ ನಾಲ್ವರು ಸ್ನೇಹಿತರು ಸೇರಿಕೊಂಡರು. ಅವರೆಲ್ಲರೂ ತಲ್ವಾರ್ (ಕತ್ತಿ) ಹಿಡಿದಿದ್ದರು. ಅವರು ಹುಚ್ಚರಂತೆ ತುಳುವಿನಲ್ಲಿ ನಮ್ಮನ್ನು ಕೊಲ್ಲುವುದಾಗಿ ಕೂಗುತ್ತಾ ನಮ್ಮ ಮೇಲೆ ದಾಳಿ ಮಾಡಿದರು, 'ನೀವು ಬ್ಯಾರಿಗಳು ಸುಹಾಸ್ ಶೆಟ್ಟಿಯನ್ನು ಕೊಂದಿದ್ದೀರಿ! ಈಗ ನಿಮ್ಮ ಸರದಿ!' ಎಂದು ಕೂಗಿದರು. ಈ ವೇಳೆ ರಕ್ಷಣೆಗಾಗಿ ರಹ್ಮಾನ್ ಕೈ ಎತ್ತಿದಾಗ ಅವರು, ಆತನ ಕೈ ಕತ್ತರಿಸಿದರು. ಅವನ ಮುಖವನ್ನು ಮತ್ತು ಅವನ ಬಲ ಕಿವಿಯ ಹಿಂಭಾಗದಲ್ಲಿ ಕತ್ತನ್ನು ಸೀಳಿದರು," ಎಂದು ಶಾಫಿ ಆ ಭಯಾನಕ ಘಟನೆಯನ್ನು ನೆನಪಿಸಿದರು.

ಕೊಲೆಯಾದ ಅಬ್ದುಲ್ ರಹ್ಮಾನ್‌ ಅವರ ತಂದೆ ಅಬ್ದುಲ್ ಖಾದರ್ ಮತ್ತು ತಾಯಿ ಆಸಿಯಮ್ಮ | Photo credit : Vikhar Ahmed Sayeed, Frontline

ಶಾಫಿ ಅವರ ಪ್ರಕಾರ, ದಾಳಿಕೋರರು ಅವರನ್ನೂ ಗುರಿಯಾಗಿಸಿಕೊಂಡರು. ದಾಳಿಯ ತೀವ್ರತೆಗೆ ಶಾಫಿಯವರ ಎದೆ ಮತ್ತು ಮೊಣಕೈಗೆ ಹಲವಾರು ಗಾಯಗಳಾದವು. ಅವರ ಎಡ ಹೆಬ್ಬೆರಳು ಬಹುತೇಕ ತುಂಡಾಗುವ ಹಂತಕ್ಕೆ ತಲುಪಿತ್ತು. ರಹ್ಮಾನ್ ಮೇಲಿನ ದಾಳಿ ನಿಲ್ಲದೆ ಮುಂದುವರೆಯಿತು. ರಹ್ಮಾನ್ ಕುತ್ತಿಗೆಯಿಂದ ರಕ್ತ ಚಿಮ್ಮುತ್ತಿದ್ದಾಗ, ಹಲ್ಲೆಕೋರರ ಗಮನ ಕ್ಷಣಕಾಲ ಬೇರೆಡೆಗೆ ಹೋಯಿತು. ಶಾಫಿ ಈ ಅವಕಾಶವನ್ನು ಬಳಸಿಕೊಂಡು ತನ್ನ ಪ್ರಾಣ ಉಳಿಸಿಕೊಳ್ಳಲು ಓಡಿಹೋದರು. ಅವರು ಅಲ್ಲಿಂದ ಸ್ವಲ್ಪ ದೂರದಲ್ಲಿ ದಟ್ಟವಾದ ಪೊದೆಗಳಲ್ಲಿ ಅಡಗಿಕೊಂಡರು. ಅರ್ಧ ಗಂಟೆಯ ಬಳಿಕ ಶಾಫಿ ಅವರ ಸ್ನೇಹಿತರು ಬಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ವೇಳೆ ಶಾಫಿ ಐವರು ಹಲ್ಲೆಕೋರರ ಹೆಸರನ್ನು ಅವರಿಗೆ ತಿಳಿಸಿದ್ದರು.

"ನಾನು ಯಾವಾಗಲೂ ವೇಗವಾಗಿ ಓಡುವವನು, ಅದೃಷ್ಟವಶಾತ್ ಅದೇ ನನ್ನ ಜೀವ ಉಳಿಸಿತು. ಆದರೆ ರಹ್ಮಾನ್ ನಮ್ಮನ್ನು ಬಿಟ್ಟು ಹೋಗಿ ಬಿಟ್ಟ," ಎಂದು ಶಾಫಿ ನಿಧಾನವಾಗಿ, ಆ ಭೀಕರ ಹಲ್ಲೆಯ ಬಗ್ಗೆ ವಿವರಿಸಿದರು. ಕೆಲವು ದಿನಗಳ ಹಿಂದೆ ಆ ಪ್ರದೇಶದಲ್ಲಿ ಬಜರಂಗದಳದ ಸಭೆ ನಡೆದಿತ್ತು. ಅಲ್ಲಿಯೇ ರಹ್ಮಾನನ್ನು ಕೊಲ್ಲುವ ಸಂಚು ರೂಪಿಸಲಾಗಿತ್ತು ಎಂದು ಖಲಂದರ್ ಶಾಫಿ ಆರೋಪಿಸಿದ್ದಾರೆ.

"ರಹ್ಮಾನ್ ಗೆ ಯಾವುದೇ ಅಪರಾಧದ ಹಿನ್ನೆಲೆ ಇರಲಿಲ್ಲ. ಅವನು ಮುಸ್ಲಿಂ ಆಗಿದ್ದರಿಂದಲೇ ಅವನನ್ನು ಹತ್ಯೆ ಮಾಡಲಾಯಿತು. ಅವರಿಗೆ, ಸುಹಾಸ್ ಶೆಟ್ಟಿ ಸಾವಿಗೆ ಒಬ್ಬ ಮುಸ್ಲಿಂ ನ ಬಲಿ ಬೇಕಿತ್ತು," ಎಂದು ಶಾಫಿ ಹೇಳುತ್ತಾರೆ.

► ದ್ವೇಷದ ಪ್ರತೀಕಾರ

ದೀಪಕ್ ಮತ್ತು ಅವನ ಸಹಚರರು ರಹ್ಮಾನ್ ಮತ್ತು ಶಾಫಿ ಮೇಲೆ ಕ್ರೂರವಾಗಿ ಹಲ್ಲೆ ಮಾಡುವಾಗ ಹೆಸರಿಸಿದ ಸುಹಾಸ್ ಶೆಟ್ಟಿ ಮೇ 1 ರಂದು ಬಜ್ಪೆಯಲ್ಲಿ ಕೊಲೆಯಾಗಿದ್ದ. ಮಂಗಳೂರಿನ ಹೊರವಲಯಲ್ಲಿರುವ ಬಜ್ಪೆಯು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿದೆ. ಬಜರಂಗದಳದ ಸದಸ್ಯನಾಗಿದ್ದ ಸುಹಾಸ್ ಶೆಟ್ಟಿ 2022 ರಲ್ಲಿ ಮುಹಮ್ಮದ್ ಫಾಝಿಲ್ ಎಂಬ ಮುಸ್ಲಿಂ ಯುವಕನ ಕೊಲೆ ಪ್ರಕರಣದಲ್ಲಿ ಆರೋಪಿ. ಸುಹಾಸ್ ಶೆಟ್ಟಿ ಕೊಲೆಯಾಗುವ ಕೆಲವು ದಿನಗಳ ಮೊದಲು, ಎಪ್ರಿಲ್ 27 ರಂದು, ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಹತ್ಯೆ ಘಟನೆ ಬಳಿಕ ದೇಶದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗಿದ್ದ ವೇಳೆ ಮಂಗಳೂರಿನ ಹೊರವಲಯದ ಕುಡುಪು ಬಳಿ ಮುಹಮ್ಮದ್ ಅಶ್ರಫ್ ಎಂಬ ಮಾನಸಿಕ ಅಸ್ವಸ್ಥ ಮುಸ್ಲಿಂ ವ್ಯಕ್ತಿಯನ್ನು ಗುಂಪೊಂದು ಥಳಿಸಿ ಕೊಂದಿತ್ತು.

ಈ ಮೂರು ಕೊಲೆಗಳು ದಕ್ಷಿಣ ಕನ್ನಡದಲ್ಲಿ ಸುಮಾರು 50 ವರ್ಷಗಳಿಂದ ನಡೆಯುತ್ತಿರುವ ಕೋಮು ಹತ್ಯೆಗಳ ಸರಣಿಯ ಭಾಗವಾಗಿವೆ. ಕರಾವಳಿ ಕರ್ನಾಟಕದ ನಿವಾಸಿಗಳಿಗೆ ಇತ್ತೀಚಿನ ಕೊಲೆಗಳು ಅಚ್ಚರಿ ತಂದಿಲ್ಲ. ಮಾನವ ಹಕ್ಕುಗಳ ಕಾರ್ಯಕರ್ತ ಶಬ್ಬೀರ್ ಅಹಮದ್ ಅವರ ಪ್ರಕಾರ, ಈ ಹಿಂಸಾಚಾರವು ಚಕ್ರದಂತೆ ತಿರುಗುತ್ತಾ ಇದೆ. "ಹಿಂದುತ್ವದ ಕಾರ್ಯಕರ್ತರು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಾರೆ. ಇದರಿಂದ ಕೋಮು ಉದ್ವಿಗ್ನತೆ ಹೆಚ್ಚಾಗಿ ಕೆಲವು ಕೊಲೆಗಳು ಸಂಭವಿಸುತ್ತವೆ. ಇದು ಪುನರಾವರ್ತನೆಯಾಗುತ್ತಲೇ ಇದೆ" ಎಂದು ಅವರು ಹೇಳುತ್ತಾರೆ. "ನಂತರ ಎಲ್ಲವೂ ಶಾಂತವಾಗುತ್ತದೆ. ಸ್ವಲ್ಪ ಸಮಯದ ನಂತರ ಮತ್ತೆ ಶುರುವಾಗುತ್ತದೆ. ಏಕೆಂದರೆ ಈ ಪ್ರದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಸಂಘ ಪರಿವಾರಕ್ಕೆ ಕೋಮು ಉನ್ಮಾದವನ್ನು ಹೆಚ್ಚಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ," ಎಂದು ಶಬ್ಬೀರ್ ಅಹಮದ್ ಹೇಳಿದರು.

ಕೊಲೆಯಾದ ಅಬ್ದುಲ್ ರಹ್ಮಾನ್‌ ಅವರ ಸ್ನೇಹಿತ, ಹಲ್ಲೆಗೊಳಗಾದ ಖಲಂದರ್ ಶಾಫಿ | Photo Credit : Vikhar Ahmed Sayeed, Frontline

ಇದಕ್ಕೂ ಮೊದಲು, 2022ರ ಜುಲೈನಲ್ಲಿ ಮೂರು ಕೊಲೆಗಳು ನಡೆದಿದ್ದವು. ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಮುಹಮ್ಮದ್ ಫಾಝಿಲ್ ಎಂಬ ಮೂವರು ಕೊಲೆಯಾಗಿದ್ದರು. ಮತ್ತಷ್ಟು ಹಿಂದೆ ಹೋದರೆ, 2017-18ರಲ್ಲಿ ನಡೆದ ಆರು ಕೊಲೆಗಳಿಗೆ (ಕೊಲೆಯಾದವರಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೇರಿದ್ದಾರೆ) ಪ್ರತೀಕಾರವಾಗಿ 2022ರ ಕೊಲೆಗಳು ನಡೆದವು ಎನ್ನಲಾಗಿದೆ. ಜೂನ್ 3ರಂದು, ʼವಾರ್ತಾ ಭಾರತಿʼ ಪತ್ರಿಕೆಯು ಈ ಪ್ರದೇಶದಲ್ಲಿ ನಡೆದ ಎಲ್ಲಾ ಕೋಮು ಕೊಲೆಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ನಡೆದ ಸುಮಾರು ಕೋಮು ಸಂಬಂಧಿತ 49 ಕೊಲೆಗಳಿದ್ದವು. ಮೊದಲ ಕೊಲೆ 1976ರಲ್ಲಿ ಸಂಭವಿಸಿದೆ ಎಂದು ವರದಿಯು ಉಲ್ಲೇಖಿಸಿದೆ.

ಮಂಗಳೂರಿಗೆ ಬರುವ ಸಾಮಾನ್ಯ ಪ್ರವಾಸಿಗರಿಗೆ, ಒಳಗೊಳಗೇ ಕುದಿಯುತ್ತಿರುವ ಕೋಮು ದ್ವೇಷ ಯಾವುದೂ ಕಾಣಿಸುವುದಿಲ್ಲ. ಅವೆಲ್ಲವೂ ಬೂದಿ ಮುಚ್ಚಿದ ಕೆಂಡ. ತುಳು, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಬ್ಯಾರಿ ಸೇರಿದಂತೆ ಹಲವು ಭಾಷೆಗಳನ್ನು ಕೇಳಬಹುದಾದ ಈ ಬಹುಧಾರ್ಮಿಕ, ಬಹುಭಾಷಾ ನಗರದ ಆರ್ಥಿಕ ಸಮೃದ್ಧಿ ಮಾತ್ರ ತಕ್ಷಣವೇ ಎದ್ದು ಕಾಣುತ್ತದೆ. ಮಂಗಳೂರು ನಗರವು ಖಂಡಿತವಾಗಿಯೂ ಆಕರ್ಷಕವಾಗಿದೆ. ಮುಖ್ಯ ವಾಣಿಜ್ಯ ರಸ್ತೆಗಳಿಂದ ತಿರುಗಿ ಹೋಗುವ ಇಳಿಜಾರಾದ ಕಿರಿದಾದ ರಸ್ತೆಗಳು, ಹಳೆಯ ಮನೆಗಳು ಮತ್ತು ಐತಿಹಾಸಿಕವಾಗಿ ಸಂಗ್ರಹವಾದ ಸಂಪತ್ತನ್ನು ಸೂಚಿಸುವ ಬಂಗಲೆಗಳಿರುವ ಒಳಬೀದಿಗಳಿಗೆ ಕರೆದೊಯ್ಯುತ್ತವೆ. ನಗರವು ದೊಡ್ಡ ಆಸ್ಪತ್ರೆಗಳು, ಪಂಚತಾರಾ ಹೋಟೆಲ್ ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಂದ ತುಂಬಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ಶೈಕ್ಷಣಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಂಗಳೂರು ಹೆಸರುವಾಸಿಯಾದ ಪ್ರಮುಖ ಶೈಕ್ಷಣಿಕ ಕೇಂದ್ರ. ಮಾನವ ಅಭಿವೃದ್ಧಿ ಸೂಚ್ಯಂಕಗಳ ವಿಚಾರದಲ್ಲಿ, ಈ ಜಿಲ್ಲೆ ಕರ್ನಾಟಕದಲ್ಲಿ ಬೆಂಗಳೂರಿನ ನಂತರ ನಿಯಮಿತವಾಗಿ ಅತ್ಯಂತ ಹೆಚ್ಚು ಅಂಕಗಳನ್ನು ತನ್ನದಾಗಿಸಿಕೊಳ್ಳುತ್ತಿದೆ.

► ಹುದುಗಿಕೊಂಡಿರುವ ಕೋಮು ಧ್ರುವೀಕರಣಗೊಂಡ ಸಮಾಜ:

ಮಂಗಳೂರು ನಗರ ಪ್ರದೇಶದಲ್ಲಿ ದೊಡ್ಡ ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್ ಗಳು ಒಂದಕ್ಕೊಂದು ಪಕ್ಕದಲ್ಲಿ ಇರುವುದನ್ನು ಕಾಣಬಹುದು. ಮಂಗಳೂರಿನ ನಿವಾಸಿಗಳು ಶ್ರಮಜೀವಿಗಳು. ಮಳೆಗಾಲದಲ್ಲಿ ಸುರಿಯುವ ಭಾರೀ ಮಳೆಯು ಬೆಂಗಳೂರಿನಂತಹ ನಗರವನ್ನು ಸ್ತಬ್ಧಗೊಳಿಸಬಹುದಾದರೂ, ಮಂಗಳೂರಿನ ವೇಗಕ್ಕೆ ಅದು ಅಡ್ಡಿಪಡಿಸುವುದಿಲ್ಲ. ಮಂಗಳೂರಿನ ಪ್ರದೇಶದ ಹೆಸರುಗಳು ಮತ್ತು ಒಳನಾಡಿನ ಗ್ರಾಮಗಳ ಹೆಸರುಗಳು ಬೆಂಗಳೂರಿನವರಿಗೆ ಸ್ವಲ್ಪ ವಿಭಿನ್ನವಾಗಿ ಕಾಣುತ್ತವೆ. ಇದು ಪಶ್ಚಿಮ ಘಟ್ಟಗಳ ಅಡೆತಡೆಯಿಂದಾಗಿ ಈ ಪ್ರದೇಶವು ಕರ್ನಾಟಕದ ಉಳಿದ ಭಾಗಗಳೊಂದಿಗೆ ಹೊಂದಿರುವ ಭೌಗೋಳಿಕ ಮತ್ತು ಐತಿಹಾಸಿಕ ಸಂಪರ್ಕ ಕಡಿತವನ್ನು ತೋರಿಸುತ್ತದೆ. ಈ ಪ್ರದೇಶದ ಸ್ಥಳೀಯ ಜಾತಿ ಸಮೂಹಗಳು ಕರ್ನಾಟಕದ ಇತರ ಭಾಗಗಳಲ್ಲಿ ಸಾಮಾನ್ಯವಾಗಿಲ್ಲ. ನಗರ ಮತ್ತು ಜಿಲ್ಲೆಯ ಒಂದು ಬದಿಯಲ್ಲಿ ಅರಬ್ಬೀ ಸಮುದ್ರವಿದೆ. ಇಲ್ಲಿನ ಗ್ರಾಮೀಣ ಒಳನಾಡು ಪ್ರದೇಶವು ಬೆಟ್ಟಗುಡ್ಡಗಳಿಂದ ಕೂಡಿದ್ದು, ಅಡಿಕೆ ಮತ್ತು ತೆಂಗಿನ ತೋಟಗಳು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಂದ ಆರ್ಥಿಕವಾಗಿ ಸಬಲವಾಗಿದೆ.

ಈ ಕ್ರಿಯಾಶೀಲ ಮತ್ತು ಕಾಸ್ಮೋಪಾಲಿಟನ್ ಮಹಾನಗರದ ಹೊರನೋಟದ ಆಚೆಗೆ, ವಿಶಾಲವಾದ ಒಳನಾಡಿನವರೆಗೂ ಹರಡಿರುವ ಒಂದು ತೀವ್ರ ಕೋಮು ಧ್ರುವೀಕರಣಗೊಂಡ ಸಮಾಜವು ಹುದುಗಿಕೊಂಡಿದೆ. ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ನಿರಂತರವಾಗಿ ಪರಸ್ಪರ ಹಿಂಸಾಚಾರ ಮತ್ತು ಪೈಪೋಟಿಯಲ್ಲಿ ಸಿಲುಕಿಸಿದೆ. ಈ ಪ್ರದೇಶದ ವಿಶಿಷ್ಟ ಜನಸಂಖ್ಯಾ ವಿನ್ಯಾಸ ಮತ್ತು ರಾಜಕೀಯ ಆರ್ಥಿಕತೆಯೂ ಇದರಲ್ಲಿ ದೊಡ್ಡ ಪಾತ್ರ ವಹಿಸಿದೆ. ಇಲ್ಲಿನ ಮುಸ್ಲಿಂ ಜನಸಂಖ್ಯೆಯು ತುಲನಾತ್ಮಕವಾಗಿ ಹೆಚ್ಚಾಗಿದೆ (2011ರ ಜನಗಣತಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಪ್ರತಿಶತಕ್ಕಿಂತ ಹೆಚ್ಚು). ಅಲ್ಲದೆ, ಪ್ರದೇಶದ ಸಾಮಾನ್ಯ ಆರ್ಥಿಕ ಸಮೃದ್ಧಿಯು ಅಲ್ಪಸಂಖ್ಯಾತ ಸಮುದಾಯಕ್ಕೂ ಲಾಭ ತಂದಿದೆ. ಹಾಗಾಗಿ, ದೇಶದ ಹೆಚ್ಚಿನ ಭಾಗಗಳಲ್ಲಿ ಕೋಮು ಹಿಂಸಾಚಾರದಿಂದ ಸಂತ್ರಸ್ತರಾಗಿರುವ ಮುಸ್ಲಿಂ ಸಮುದಾಯದ ಸದಸ್ಯರು, ಈ ಪ್ರದೇಶದಲ್ಲಿ ಬಲಪಂಥೀಯರ ಆಕ್ರಮಣವನ್ನು ದಿಟ್ಟವಾಗಿ ಎದುರಿಸುತ್ತಾರೆ. ದೀರ್ಘಕಾಲದಿಂದ ಈ ಪ್ರದೇಶವನ್ನು ಕರ್ನಾಟಕದಲ್ಲಿ "ಹಿಂದುತ್ವದ ಪ್ರಯೋಗಾಲಯ" ಎಂದು ಕರೆಯಲಾಗುತ್ತಿತ್ತು. ಆದರೆ, ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಡೆದ ಪ್ರಯೋಗ ಫಲಪ್ರದವಾಗಿರುವುದರಿಂದ, ಇನ್ನು ಮುಂದೆ ಈ ಪ್ರದೇಶವನ್ನು "ಹಿಂದುತ್ವದ ಪ್ರಯೋಗಾಲಯ" ಎಂದು ಕರೆಯುವುದು ಸರಿಯಲ್ಲ ಎಂದು ಕೆಲವು ವಿದ್ವಾಂಸರು ವಾದಿಸಲು ಪ್ರಾರಂಭಿಸಿದ್ದಾರೆ.

ಮಂಗಳೂರಿನಲ್ಲಿ ನೆಲೆಸಲು ವಾಪಸ್ ಆಗಿರುವ ಮಂಗಳೂರಿನವರೇ ಆದ, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ, ವಲೇರಿಯನ್ ರಾಡ್ರಿಗಸ್ ಅವರು ʼFrontlineʼ ಗೆ ಹೇಳಿದಂತೆ, ಅಮೆರಿಕದ ರಾಜಕೀಯ ವಿಜ್ಞಾನಿ ಪಾಲ್ ಆರ್. ಬ್ರಾಸ್ ಅವರ "ಗಲಭೆ ಆಡಳಿತ" (riot regime) ಸಿದ್ಧಾಂತವು ಈ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೋಮು ಘರ್ಷಣೆಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಪರಿಕಲ್ಪನೆಯಾಗಿದೆ. ಬ್ರಾಸ್ ಅವರು ಉತ್ತರ ಭಾರತದ ನಗರಗಳಾದ ಅಲಿಗಢ ಮತ್ತು ಮೀರತ್ ಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ, ಸ್ವಾತಂತ್ರ್ಯದ ನಂತರ ಕೆಲವು ನಗರಗಳಲ್ಲಿ "ಗಲಭೆ ಉಂಟು ಮಾಡುವುದು ಸಾಂಸ್ಥಿಕ ವ್ಯವಸ್ಥೆ"ಯ ಸೃಷ್ಟಿಯಾಗಿದೆ ಎಂದು ವಾದಿಸಿದ್ದಾರೆ. ಇಂತಹ ಸ್ಥಳಗಳಲ್ಲಿ ಕೋಮು ಹಿಂಸಾಚಾರವು ಆಕಸ್ಮಿಕವಾಗಿ ನಡೆಯುವುದಿಲ್ಲ. ಬದಲಾಗಿ, "ಅಂತಹ ಗಲಭೆಗಳ ಹಿಂದಿರುವುದು ಪ್ರಮುಖ ವ್ಯಕ್ತಿಗಳ ಲೆಕ್ಕಾಚಾರದ ಮತ್ತು ಉದ್ದೇಶಪೂರ್ವಕ ಕ್ರಮಗಳು. ಸಂದೇಶಗಳನ್ನು ರವಾನಿಸುವುದು, ಗಲಭೆಗಳಲ್ಲಿ ಪಾಲ್ಗೊಳ್ಳುವವರನ್ನು ನೇಮಿಸಿಕೊಳ್ಳುವುದು ಇದರ ಭಾಗವಾಗಿ ನಡೆಯುತ್ತದೆ. ವಿಶೇಷವಾಗಿ ಪ್ರಚೋದನಕಾರಿ ಚಟುವಟಿಕೆಗಳು ಗಲಭೆ ಎಂಬ ಒಂದು ಪ್ರದರ್ಶನ ಕಲೆಯ ಭಾಗವಾಗಿರುತ್ತವೆ," ಎಂದು ಅವರು ಅಭಿಪ್ರಾಯಪಡುತ್ತಾರೆ.

ದಕ್ಷಿಣ ಕನ್ನಡದಲ್ಲಿ ತೀವ್ರವಾದ, ಕೊನೆಯ ಪ್ರಮುಖ ಕೋಮು ಗಲಭೆ 2006ರಲ್ಲಿ ನಡೆದಿತ್ತು. ಆದರೂ, ಇನ್ನೊಂದು ಧರ್ಮದವರ ಕೊಲೆಗಳು, ಸಾಮಾನ್ಯವಾಗಿ ಸಂಘ ಪರಿವಾರದವರ ಪ್ರಚೋದನಕಾರಿ ಭಾಷಣಗಳ ನಂತರ ನಡೆಯುತ್ತವೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಪರಿಕಲ್ಪನೆ ಸಹಾಯಕವಾಗಿದೆ.

"ಅಪರಾಧ, ಕೋಮು ಚಟುವಟಿಕೆಗಳು ರಾಜಕೀಯ ಲಾಭಕ್ಕೆ ಕಾರಣವಾಗುವುದರಿಂದ, ಮಂಗಳೂರಿನಲ್ಲಿ ಅದಕ್ಕಾಗಿ ರಾಜಕೀಯ ಪ್ರೋತ್ಸಾಹದ ವ್ಯವಸ್ಥೆಗಳು ಸಾಂಸ್ಥಿಕವಾಗಿವೆ” ಎಂದು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪತ್ರಕರ್ತ ನವೀನ್ ಸೂರಿಂಜೆ ಅವರ ಪ್ರಕಾರ, ಈ ಪ್ರದೇಶದಲ್ಲಿನ ಹಿಂದುತ್ವ ಕೋಮು ಸಂಘಟನೆಗಳಿಗೆ ಕಾರ್ಯಕರ್ತರನ್ನು ನೇಮಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಹಾಗಾಗಿ, ಹಿಂದುತ್ವದ ಉದ್ದೇಶವನ್ನು ಮುಂದುವರಿಸಲು ಅವು ನೇರವಾಗಿ ಕ್ರಿಮಿನಲ್ ಗ್ಯಾಂಗ್ ಗಳಿಂದ ಜನರನ್ನು ನೇಮಿಸಿಕೊಳ್ಳಲು ಆರಂಭಿಸಿದ್ದವು.

► ರಾಜಕೀಯದ ಆಟ:

ಆರೆಸ್ಸೆಸ್ ಮತ್ತು ಬಿಜೆಪಿ (ಹಿಂದಿನ ಜನಸಂಘವೂ ಸೇರಿದಂತೆ) ಹಾಗೂ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂತಹ ಸಂಘ ಪರಿವಾರದ ಅಂಗಸಂಸ್ಥೆಗಳು ಈ ಪ್ರದೇಶದಲ್ಲಿ ಕೋಮು ಧ್ರುವೀಕರಣವನ್ನು ಸೃಷ್ಟಿಸಿವೆ. ಕಳೆದ 40-50 ವರ್ಷಗಳಿಂದ ಹಿಂದೂ-ಮುಸ್ಲಿಂ ವ್ಯಾಪಾರ ವೈಷಮ್ಯಗಳಿಂದ ಉಂಟಾದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಏರುಪೇರುಗಳನ್ನು ಬಳಸಿಕೊಂಡು ಇದನ್ನು ಸೃಷ್ಟಿಸಲಾಗಿದೆ.

ಕೋಮು ಧ್ರುವೀಕರಣವು ಈಗ ಎಷ್ಟು ಸಾಮಾನ್ಯವಾಗಿದೆಯೆಂದರೆ, ದಶಕಗಳಿಂದ ಸಂಘ ಪರಿವಾರದ ಮತಾಂಧ ರಾಜಕೀಯದ ವಿರುದ್ಧ ಹೋರಾಡಿದ ರಾಜಕೀಯೇತರ ಕಾರ್ಯಕರ್ತರು, Frontline ಜೊತೆಗಿನ ತಮ್ಮ ಚರ್ಚೆಯಲ್ಲಿ ಇತ್ತೀಚಿನ ಕೊಲೆಗಳಲ್ಲಿ ಬಲಪಂಥೀಯರ ಅಪಾಯಕಾರಿ ಪಾತ್ರದ ಬಗ್ಗೆ ಹೆಚ್ಚು ವಿವರವಾಗಿ ಮಾತನಾಡಲೇ ಇಲ್ಲ.

ಸುಹಾಸ್ ಶೆಟ್ಟಿ ಕೊಲೆಯ ನಂತರ ನಡೆದ ಪ್ರಚೋದನಕಾರಿ ಭಾಷಣಗಳೇ ರಹ್ಮಾನ್ ಹತ್ಯೆಗೆ ಕಾರಣವಾಯಿತು ಎಂದು ಅವರು ಸರಳವಾಗಿ ಹೇಳಿದರು. ಸಂಘ ಪರಿವಾರದ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗಳು ಅವರಿಗೆ ಅರಗಿಸಿಕೊಳ್ಳದಂತಾಯಿತು. ಒಂದೇ ರೀತಿಯ ಪ್ರಶ್ನೆಯನ್ನು ಹಲವಾರು ಬಾರಿ ಎದುರಿಸಿದ್ದರಿಂದ ಅದನ್ನೇ ಪುನರಾವರ್ತಿಸುವುದು ಯೋಗ್ಯವಲ್ಲ ಎಂದು ಅವರು ಭಾವಿಸಿದರು. ಇದುವೇ ಮಂಗಳೂರಿನ ರಾಜಕೀಯ ಮತ್ತು ಸಮಾಜದ ವಾಸ್ತವ ಸ್ಥಿತಿಯಾಗಿತ್ತು. ಬಿಜೆಪಿ ಕರಾವಳಿ ಕರ್ನಾಟಕದಲ್ಲಿ ತನ್ನ ಕೋಮುವಾದಿ ರಾಜಕಾರಣದಿಂದ ಭಾರಿ ಲಾಭ ಗಳಿಸಿರುವುದರಿಂದ ಸಂಘ ಪರಿವಾರವು ತನ್ನ ತಂತ್ರಗಳನ್ನು ಬದಲಾಯಿಸುವುದಿಲ್ಲ ಎಂದು ಅವರು ಹೇಳಿದರು.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಕೊಲೆಯಾದ ಅಬ್ದುಲ್ ರಹ್ಮಾನ್ ಮನೆಗೆ ಭೇಟಿ ನೀಡಿದ್ದ ಸಂದರ್ಭ | Photo Credit: The Hindu

“ಸಂಘ ಪರಿವಾರವು ಈ ಪ್ರದೇಶವನ್ನು ಕೋಮು ಕುಲುಮೆಯನ್ನಾಗಿ ಮಾಡಿದೆ. ಅದರಿಂದ ಲಾಭವನ್ನೂ ಗಳಿಸಿದೆ. ಅದರ ಸದಸ್ಯರು ರಾಜಾರೋಶವಾಗಿ ದ್ವೇಷ ಭಾಷಣಗಳನ್ನು ಮಾಡುತ್ತಾರೆ. ಇದು ಎಲ್ಲರಿಗೂ ತಿಳಿದಿದೆ. ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ?” ಎಂದು ಬಹಳ ಸಾಮಾನ್ಯವಾಗಿ ಕಾರ್ಯಕರ್ತರು ನಮ್ಮಲ್ಲಿ ಪ್ರಶ್ನಿಸಿದರು. ನಂತರ ಸಾಮಾಜಿಕ ಕಾರ್ಯಕರ್ತರು ಕರಾವಳಿ ಕರ್ನಾಟಕದ ಕಡೆಗೆ ರಾಷ್ಟ್ರೀಯ ಗಮನ ಸೆಳೆದ ಘಟನೆಗಳನ್ನು ನೆನಪಿಸಿಕೊಂಡರು. ಇವುಗಳಲ್ಲಿ 2008 ರಲ್ಲಿ ಚರ್ಚ್ ಗಳ ಮೇಲೆ ನಡೆದ ದಾಳಿಗಳು, 2009 ರಲ್ಲಿ ಪಬ್ ಮೇಲೆ ನಡೆದ ದಾಳಿ, 2013 ರಲ್ಲಿ ಹೋಂ ಸ್ಟೇ ದಾಳಿ, ಅನೇಕ “ನೈತಿಕ ಪೊಲೀಸ್” ಪ್ರಕರಣಗಳು, ಗೋವು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಮುಸ್ಲಿಮರ ಹತ್ಯೆ ಸೇರಿವೆ. ಇತ್ತೀಚೆಗೆ 2022 ರಲ್ಲಿ ನೆರೆಯ ಉಡುಪಿ ಜಿಲ್ಲೆಯ ಕಾಲೇಜಿನಲ್ಲಿ ತರಗತಿಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವೂ ಈ ಘಟನೆಗಳಲ್ಲೊಂದು.

ಮಂಗಳೂರಿನವರೇ ಆದ ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕದ ಜಂಟಿ ಕಾರ್ಯದರ್ಶಿ ಶರಣ್ ಪಂಪ್‌ ವೆಲ್‌ ಅವರು, ಸಂಘ ಪರಿವಾರದ ಅಂಗಸಂಸ್ಥೆಗಳು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಗೆ ಕಾರಣ ಎಂಬ ನಿರ್ಣಯವನ್ನು ಒಪ್ಪಲಿಲ್ಲ. ದಶಕಗಳಿಂದ ಮುಸ್ಲಿಮರು ತಮ್ಮ ಮೇಲೆ ನಡೆಸಿದ ದಾಳಿಗೆ ಹಿಂದೂಗಳು 'ಕೇವಲ ಪ್ರತಿಕ್ರಿಯಿಸುತ್ತಿದ್ದಾರೆ' ಎಂದು ಅವರು ಹೇಳಿದರು. "ನಾವು ಬೆಂಕಿಯನ್ನು ಹಚ್ಚಲಿಲ್ಲ. ಹಿಂಸಾಚಾರಕ್ಕೆ ನಾವು ಜವಾಬ್ದಾರರಲ್ಲ. ಹಿಂದುತ್ವದ ಅನುಯಾಯಿಗಳಾಗಿ ನಾವು ನಮ್ಮ ನಂಬಿಕೆಯನ್ನು ರಕ್ಷಿಸಲು ಇಸ್ಲಾಂನ ಮೂಲಭೂತವಾದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ, ಇದು ನಮ್ಮ ಹಕ್ಕು" ಎಂದು ಅವರು ತಮ್ಮ ಕಚೇರಿಯಲ್ಲಿ Frontline ಜೊತೆ ಮಾತನಾಡುತ್ತಾ ಹೇಳಿದರು. ಅವರ ಕಚೇರಿಯು ಹಿಂದಿನ ಆರೆಸ್ಸೆಸ್ ಸರಸಂಘಚಾಲಕರ ದೊಡ್ಡ ಛಾಯಾಚಿತ್ರಗಳಿಂದ ಅಲಂಕೃತವಾಗಿತ್ತು.

► ಮುಸ್ಲಿಮರ ಕೊಲೆ ಆಕಸ್ಮಿಕ, ಯೋಜಿತವಲ್ಲ!

ಶರಣ್ ಪಂಪ್‌ ವೆಲ್‌ ಪ್ರಕಾರ, ಇಲ್ಲಿನ ಕೋಮು ಸಂಘರ್ಷದ ಹಿಂದೆ ನಾಲ್ಕು ವಿವಾದಾತ್ಮಕ ವಿಷಯಗಳಿವೆ. ಅವುಗಳನ್ನು ಸರಿಪಡಿಸಿದರೆ ಕರಾವಳಿ ಪ್ರದೇಶದಲ್ಲಿ ಶಾಂತಿ ತರಬಹುದು.‌ ಗೋಹತ್ಯೆ, ಲವ್ ಜಿಹಾದ್, ಅಂತರರಾಷ್ಟ್ರೀಯ ವಿಷಯಗಳ (ಫೆಲೆಸ್ತೀನ್‌ ನಂತಹ) ಬಗ್ಗೆ ಮುಸ್ಲಿಮರು ತೆಗೆದುಕೊಂಡಿರುವ ನಿಲುವು ಮತ್ತು ಹಿಂದೂ ಹಬ್ಬಗಳ ಶಾಂತಿಯುತ ಆಚರಣೆಯ ಸಂದರ್ಭದಲ್ಲಿ ಮುಸ್ಲಿಮರು ನಡೆಸಿದ್ದಾರೆ ಎನ್ನಲಾದ ಪ್ರಚೋದನೆಗಳು. ಈ ವಿಷಯಗಳು ನಮಗೆ ಭಾವನಾತ್ಮಕವಾಗಿ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.

ಶರಣ್ ಪಂಪ್‌ ವೆಲ್‌ ಮುಸ್ಲಿಮರ ಕೊಲೆಗಳನ್ನು "ಆಕಸ್ಮಿಕ" , ಅವು ಯೋಜಿತವಲ್ಲ ಎಂದು ಕರೆಯುತ್ತಾರೆ. ಅಶ್ರಫ್ ಪ್ರಕರಣದಲ್ಲಿ "ಪಾಕಿಸ್ತಾನ್ ಝಿಂದಾಬಾದ್" ಎಂದು ಕೂಗಿದ್ದರಿಂದ ಹಾಗೂ , ರಹ್ಮಾನ್ ಪ್ರಕರಣದಲ್ಲಿ ಅದು "ವೈಯಕ್ತಿಕ ಜಗಳ" ಎಂದು ಅವರು ಹೇಳಿದರು. ಆದರೆ, ಪ್ರವೀಣ್ ನೆಟ್ಟಾರು (2022ರಲ್ಲಿ) ಮತ್ತು ಸುಹಾಸ್ ಶೆಟ್ಟಿಯಂತಹ ಹಿಂದೂ ಕಾರ್ಯಕರ್ತರ ಸಾವು "ಮುಸ್ಲಿಮರಿಂದ ನಡೆದ ಯೋಜಿತ ಕೊಲೆಗಳು" ಎಂದು ಅವರು ಹೇಳಿದರು.

"SDPI (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಮತ್ತು ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಸದಸ್ಯರು ಮುಕ್ತವಾಗಿ ತಿರುಗಾಡುತ್ತಾರೆ ಮತ್ತು ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಾರೆ. ಆದ್ದರಿಂದ, ಅವರ ಮೇಲೆ ನಿಗಾ ಇಡಲು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮಂಗಳೂರಿನಲ್ಲಿ ಕಚೇರಿ ತೆರೆಯಬೇಕು" ಎಂದು ಶರಣ್ ಪಂಪ್‌ ವೆಲ್‌ ಹೇಳಿದರು. ದಕ್ಷಿಣ ಕನ್ನಡದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಸಂಘಟನೆಗಳಿಗೆ ಸೇರಿದ ಸುಮಾರು 5,000 ಸಕ್ರಿಯ ಹಿಂದೂ ಕಾರ್ಯಕರ್ತರು ಇದ್ದಾರೆ ಎಂದೂ ಅವರು ಹೇಳಿದರು.

► ಅಲ್ಪಸಂಖ್ಯಾತರ ಮೇಲೆ ಮುಸ್ಲಿಂ ಸಂಘಟನೆಗಳ ಸವಾರಿ:

ಪಿಎಫ್ಐನ ರಾಜಕೀಯ ವಿಭಾಗವೇ ಎಸ್ಡಿಪಿಐ. ಪಿಎಫ್ಐ ಒಂದು ಮುಸ್ಲಿಂ ಕೇಡರ್ ಆಧಾರಿತ ಸಂಘಟನೆಯಾಗಿದ್ದು, ಇದನ್ನು 2022ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿದೆ. ಕರಾವಳಿ ಕರ್ನಾಟಕದ ಮುಸ್ಲಿಮರಲ್ಲಿ ಎಸ್ಡಿಪಿಐಗೆ ಪ್ರಭಾವವಿದೆ. ಪಿಎಫ್ಐ ನಿಷೇಧದ ಬಳಿಕ, ಕರಾವಳಿಯನ್ನು ಹೊರತುಪಡಿಸಿ ಕರ್ನಾಟಕದ ಉಳಿದ ಭಾಗಗಳಲ್ಲಿ ಸಂಘಟನೆಯ ಪ್ರಭಾವ ಸೀಮಿತವಾಗಿದ್ದರೂ, ಎಸ್ಡಿಪಿಐ ಕರಾವಳಿಯಲ್ಲಿ ತನ್ನ ಅಸ್ತಿತ್ವವನ್ನು ಮುಂದುವರೆಸಿದೆ. ಎಸ್ಡಿಪಿಐ ಇನ್ನೂ ವಿಧಾನಸಭಾ ಸ್ಥಾನವನ್ನು ಗೆದ್ದಿಲ್ಲ. ಆದರೂ, ಕರಾವಳಿ ಕರ್ನಾಟಕದ ಮುಸ್ಲಿಮರಿಂದ ಆ ಪಕ್ಷಕ್ಕೆ ಅಪಾರ ಬೆಂಬಲ ಸಿಗುತ್ತಿದೆ. ಸಂಘ ಪರಿವಾರದ ಬಹಿರಂಗ ಕೋಮು ಪ್ರಚಾರಗಳನ್ನು ಎದುರಿಸಬಲ್ಲ ಸಂಘಟನೆಯಾಗಿ ಆ ಪಕ್ಷವನ್ನು ನೋಡಲಾಗುತ್ತಿದೆ. ಹಿಂದೂ ಬಲಪಂಥೀಯ ಸಂಘಟನೆಗಳು ತಮ್ಮ ರಾಷ್ಟ್ರೀಯ ಜಾಲಗಳಿಂದ ಮತ್ತು ಮುಸ್ಲಿಂ ಗುರುತು ಆಧರಿತ ರಾಜಕೀಯ ಸಂಘಟನೆಗಳಿಗೆ ಸಕ್ರಿಯವಾಗಿ ವಿರೋಧವಾಗಿರುವ ಕೇಂದ್ರ ಸರ್ಕಾರದಿಂದ ಬಲವನ್ನು ಪಡೆಯುತ್ತವೆ. ಹಾಗಾಗಿ, ಸಂಘ ಪರಿವಾರ ಮತ್ತು ಎಸ್ಡಿಪಿಐ ನಡುವೆ ಸಮಾನತೆಯನ್ನು ಹೇಳಲು ಸಾಧ್ಯವಿಲ್ಲ. ಆದರೆ, ದಕ್ಷಿಣ ಕನ್ನಡದಲ್ಲಿ ಮಾತ್ರ, ಎಸ್ಡಿಪಿಐ ತನ್ನ ಶಿಸ್ತಿನ ಸದಸ್ಯರೊಂದಿಗೆ ಸ್ಪಷ್ಟವಾಗಿ ಒಂದು ಶಕ್ತಿಯಾಗಿ ಕಾಣುತ್ತಿದೆ.

ಸಾಮಾಜಿಕ ಕಾರ್ಯಕರ್ತರ ಪ್ರಕಾರ, ಎಸ್ಡಿಪಿಐ ಈ ಪ್ರದೇಶದಲ್ಲಿ "ಮುಸ್ಲಿಂ ಸಂತ್ರಸ್ತರ ನಿರೂಪಣೆಯನ್ನು" ಯಶಸ್ವಿಯಾಗಿ ಸೃಷ್ಟಿಸಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕರಾವಳಿ ಕರ್ನಾಟಕದ ಮುಸ್ಲಿಮರ ಸಾಮಾಜಿಕ ಮಾಧ್ಯಮ ಪ್ರಪಂಚವು ಎಸ್ಡಿಪಿಐ ಕೈಯಲ್ಲಿದೆ ಎಂದು ಅಭಿಪ್ರಾಯಪಟ್ಟರು. ನಿಷೇಧಿತ ಪಿಎಫ್ಐ ಸದಸ್ಯರು "ಸುಹಾಸ್ ಶೆಟ್ಟಿ ಕೊಲೆ ಸೇರಿದಂತೆ" ಅಪರಾಧ ಚಟುವಟಿಕೆಗಳಲ್ಲಿ ನಿಯಮಿತವಾಗಿ ಭಾಗಿಯಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕೊಲೆಯಾದ ರಹ್ಮಾನ್ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಸೇರಿದ್ದ ಜನಸ್ತೋಮ | Photo Credit: The Hindu

ಎಸ್ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ ಅವರು, ತಮ್ಮ ಪಕ್ಷವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂಬ ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಒಪ್ಪಲಿಲ್ಲ. ಬದಲಿಗೆ, ಅವರು ಸಂಘ ಪರಿವಾರದ ಮೇಲೆ ಬೆರಳು ತೋರಿಸಿದರು. "ಸಂಘ ಪರಿವಾರವು ಮೇಲ್ಜಾತಿಯ ಹಿಂದೂಗಳನ್ನು ಹೊರತುಪಡಿಸಿ ಈ ಪ್ರದೇಶದಲ್ಲಿ ಯಾರನ್ನೂ ಶಾಂತಿಯಿಂದ ಬದುಕಲು ಬಿಡುತ್ತಿಲ್ಲ. ಹಿಂದೂಗಳಲ್ಲಿ ಬಿಲ್ಲವ, ಬಂಟ, ಮೊಗವೀರ ಮತ್ತು ದಲಿತರಂತಹ ಕೆಳಜಾತಿಗಳಿಗೆ ಸೇರಿದ ಯುವಕರನ್ನು ಮಾತ್ರ ಕೊಲ್ಲಲಾಗುತ್ತಿದೆ” ಎಂದು ಅವರು Frontline ಗೆ ಹೇಳಿದರು.

"ನೆಟ್ಟಾರು ಕೊಲೆ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಯಿತು. ಆದರೆ ಶರಣ್ ಪಂಪ್‌ ವೆಲ್‌ ಅವರು ಫಾಝಿಲ್ ಕೊಲೆಯಲ್ಲಿ ತಮ್ಮ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರೂ, ಅವರ ಬಗ್ಗೆ ತನಿಖೆ ನಡೆಯಲಿಲ್ಲ. ಅಲ್ಲದೆ, ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವಷ್ಟು ಗಂಭೀರ ಎಂದು ಪರಿಗಣಿಸಲಾಗಲಿಲ್ಲ. ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್ಐಎ ವಹಿಸಿಕೊಂಡಿತು. ಕೋಮು ದಳ್ಳುರಿಗೆ ಬಲಿಯಾದವರನ್ನು ಹಿಂದೂ ಮತ್ತು ಮುಸ್ಲಿಂ ಎಂದು ಏಕೆ ವಿಭಿನ್ನವಾಗಿ ಪರಿಗಣಿಸಲಾಗುತ್ತದೆ? ಎಂದು ಜಲೀಲ್ ಕೃಷ್ಣಾಪುರ ಅವರು ತನಿಖೆಗಳ ತಾರತಮ್ಯದ ಸ್ವರೂಪವನ್ನು ಉಲ್ಲೇಖಿಸಿ ಪ್ರಶ್ನಿಸಿದರು.

ಎಸ್ಡಿಪಿಐ ಸಿದ್ಧಾಂತ ಏನು? ಮುಸ್ಲಿಮರಲ್ಲಿ ಅದು ಏಕೆ ಜನಪ್ರಿಯ? ಎಂದು ಕೇಳಿದಾಗ, ಜಲೀಲ್ ಕೃಷ್ಣಾಪುರ ಅವರು ತಮ್ಮ ಟೇಬಲ್ ಹಿಂದೆ ಇದ್ದ ಸಂವಿಧಾನದ ಪೀಠಿಕೆಯನ್ನು ತೋರಿಸಿದರು. "ಸಂವಿಧಾನವೇ ನಮ್ಮ ಸಿದ್ಧಾಂತ. ಮುಸ್ಲಿಮರು ಮತ್ತು ದಲಿತರು ಸೇರಿದಂತೆ ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳು ಸಿಗುವಂತೆ ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತೇವೆ," ಎಂದು ಜಲೀಲ್ ಕೃಷ್ಣಾಪುರ ಹೇಳಿದರು. ಈ ಸಿದ್ಧಾಂತವೇ ದಕ್ಷಿಣ ಕನ್ನಡದಲ್ಲಿ ಪಕ್ಷವು 10,000 ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಹೊಂದಲು ಕಾರಣವಾಗಿದೆ. ಈ ಕಾರ್ಯಕರ್ತರು ಮುಖ್ಯವಾಗಿ ಮುಸ್ಲಿಮರಾಗಿದ್ದರೂ, ದಲಿತರು ಮತ್ತು ಕ್ರಿಶ್ಚಿಯನ್ನರೂ ಇದರಲ್ಲಿ ಸೇರಿದ್ದಾರೆ ಎಂದು ಜಲೀಲ್ ಕೃಷ್ಣಾಪುರ ಉಲ್ಲೇಖಿಸಿದರು.

► ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ನಿರಾಸಕ್ತಿ:

ಜಲೀಲ್ ಕೃಷ್ಣಾಪುರ ಅವರ ಪ್ರಕಾರ, ಕರಾವಳಿ ಕರ್ನಾಟಕದಲ್ಲಿ ನಡೆಯುತ್ತಿರುವ ಅಪಾಯಕಾರಿ ಧಾರ್ಮಿಕ ಆಟದಲ್ಲಿ ಕಾಂಗ್ರೆಸ್ ಪಕ್ಷವೂ ಪೂರ್ವಾಗ್ರಹ ಪೀಡಿತವಾಗಿದೆ. ಇದನ್ನು ಪುಷ್ಟೀಕರಿಸಲು, ಅಶ್ರಫ್ ಅವರನ್ನು ಹಿಂದೂ ಗುಂಪೊಂದು ಥಳಿಸಿ ಹತ್ಯೆ ಮಾಡಿದ ನಂತರ, ಮಂಗಳೂರು ಪೊಲೀಸರಿಗೆ ಆ ಗುಂಪಿನ ಸದಸ್ಯರ ವಿರುದ್ಧ ತಕ್ಷಣವೇ ಪ್ರಥಮ ಮಾಹಿತಿ ವರದಿ ದಾಖಲಿಸದಂತೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿತ್ತು ಎಂದು ಅವರು ಆರೋಪಿಸಿದರು. ಅದನ್ನು ಆರಂಭದಲ್ಲಿ, ಅಸಹಜ ಸಾವು ಪ್ರಕರಣ ಎಂದು ದಾಖಲಿಸಲಾಗಿತ್ತು.

"ವಿಳಂಬದ ನಂತರ ಅಂತಿಮವಾಗಿ ಎಫ್ಐಆರ್ ದಾಖಲಿಸಿದಾಗ, ಅಶ್ರಫ್ 'ಪಾಕಿಸ್ತಾನ್ ಝಿಂದಾಬಾದ್' ಎಂದು ಘೋಷಣೆ ಕೂಗಿದನೆಂಬ ಸುಳ್ಳು ಹೇಳಿಕೆಯನ್ನು ಕೂಡ ಅದರಲ್ಲಿ ಸೇರಿಸಲಾಗಿತ್ತು," ಎಂದು ಜಲೀಲ್ ಕೃಷ್ಣಾಪುರ ಆರೋಪಿಸಿದರು.

ಘೋಷಣೆಯ ಸುಳ್ಳು ಸೇರ್ಪಡೆಯ ಬಗ್ಗೆ Frontline ಗೆ ದೃಢೀಕರಿಸಲು ಸಾಧ್ಯವಾಗದಿದ್ದರೂ, ಅಶ್ರಫ್ ನನ್ನು ಥಳಿಸಿ ಕೊಂದ ಘಟನೆಯ ಕುರಿತು ಸತ್ಯಶೋಧನಾ ತಂಡದ ಭಾಗವಾಗಿದ್ದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ ಘಟಕದ ಸದಸ್ಯೆ ಮಾನವಿ ಅತ್ರಿ ಅವರು ಎಫ್ಐಆರ್ ದಾಖಲಿಸುವಲ್ಲಿ ಗಣನೀಯ ವಿಳಂಬವಾಗಿದೆ ಎಂಬುದನ್ನು ದೃಢಪಡಿಸಿದರು.

"ಮೃತದೇಹವನ್ನು ಪೊಲೀಸರು ನೋಡಿದ್ದರೂ ಕೂಡ, ಎಫ್ಐಆರ್ ದಾಖಲಿಸುವಲ್ಲಿನ ವಿಳಂಬವು ತಹ್ಸೀನ್ ಎಸ್. ಪೂನಾವಾಲಾ ಪ್ರಕರಣದ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಸಂಪೂರ್ಣ ಉಲ್ಲಂಘನೆಯಾಗಿದೆ," ಎಂದು ಮಾನವಿ ಹೇಳಿದರು. ಈ ಪ್ರಕರಣದಲ್ಲಿ ಪೊಲೀಸರು ಪಕ್ಷಪಾತ ಧೋರಣೆ ತೋರಿದ್ದಾರೆ ಎಂಬ ಆರೋಪಕ್ಕೆ ಇದು ಪುಷ್ಠಿ ನೀಡುತ್ತದೆ.

ಜಲೀಲ್ ಕೃಷ್ಣಾಪುರ ವ್ಯಕ್ತಪಡಿಸಿದ ಕಾಂಗ್ರೆಸ್ ಮೇಲಿನ ಈ ಅಸಮಾಧಾನವು ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿದೆ. ಇದು ಅನೇಕ ಸಂಭಾಷಣೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕಾಂಗ್ರೆಸ್ ನ ಅವಕಾಶವಾದ ರಾಜಕೀಯವನ್ನು ವಿವರಿಸಲು ಇಲ್ಲಿ 'ಹೊಂದಾಣಿಕೆ ರಾಜಕೀಯ' ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. 2023 ರಲ್ಲಿ ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ವ್ಯಾಪಕ ಅಸಮಾಧಾನವಿತ್ತು. ಆ ಸಮಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ತೀವ್ರ ಬಲಪಂಥೀಯ ಧೋರಣೆಯನ್ನು ಅನುಸರಿಸಿತು. ಇದು ಹಿಂದುತ್ವದ ಕಾರ್ಯಕರ್ತರಿಗೆ ಉತ್ತೇಜನ ನೀಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದ್ದರೂ, ಕರಾವಳಿ ಕರ್ನಾಟಕದ ಧಾರ್ಮಿಕವಾಗಿ ಧ್ರುವೀಕರಣಗೊಂಡ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿ ಪಕ್ಷದ ಸಾಧನೆ ಕಳಪೆಯಾಗಿತ್ತು. ದಕ್ಷಿಣ ಕನ್ನಡದಲ್ಲಿ ಎಂಟು ಕ್ಷೇತ್ರಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಉಡುಪಿಯಲ್ಲಿ ಎಲ್ಲಾ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡು ಸಂಪೂರ್ಣವಾಗಿ ಸೋಲನುಭವಿಸಿತು. ಬಿಜೆಪಿ ಜಯಗಳಿಸಿತು.

ಕೋಮು ಹತ್ಯೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಚರ್ಚಿಸಲು ಆಯೋಜಿಸಿದ್ದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿದ ಸಂದರ್ಭ | Photo Credit: The Hindu

"ನಾವು ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಕೋಮು ಪರಿಸ್ಥಿತಿಯನ್ನು ನಿಯಂತ್ರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷವು ನಮಗೆ ಭರವಸೆ ನೀಡಿತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಬಜರಂಗದಳದ ಸದಸ್ಯರು ಭಯದಿಂದ ಕಂಗೆಟ್ಟಿದ್ದರು. ಆದರೆ ಏನೂ ಬದಲಾಗಲಿಲ್ಲ" ಎಂದು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಮಂಗಳೂರು ನಗರ ಕಾರ್ಪೊರೇಷನ್ ನ ಮಾಜಿ ಮೇಯರ್ ಕೆ. ಅಶ್ರಫ್ ಹೇಳಿದರು.

“ಸುಹಾಸ್ ಶೆಟ್ಟಿ ಹತ್ಯೆಯ ನಂತರ ಶರಣ್ ಪಂಪ್‌ ವೆಲ್‌ ಪ್ರಚೋದಕಾರಿ ಭಾಷಣ ಮಾಡಿ ದಕ್ಷಿಣ ಕನ್ನಡದಲ್ಲಿ ಬಂದ್ ಘೋಷಿಸಿದರು. ಈ ವೇಳೆ ನಾಲ್ವರು ಮುಸ್ಲಿಂ ಪುರುಷರ ಮೇಲೆ ದಾಳಿ ಮಾಡಲಾಯಿತು. ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ ಎಂದು ಕಾಂಗ್ರೆಸ್ ನ ಮುಸ್ಲಿಂ ನಾಯಕರು ರಾಜ್ಯ ನಾಯಕತ್ವಕ್ಕೆ ಮನವಿ ಮಾಡಿದರು. ಸುಹಾಸ್ ಶೆಟ್ಟಿ ಹತ್ಯೆಯ ನಂತರ ಬಿಜೆಪಿ ಶಾಸಕ ಹರೀಶ್ ಪೂಂಜಾ ಮತ್ತು ಬಜರಂಗದಳದ ಭರತ್ ಕುಮ್ಡೆಲ್ ದ್ವೇಷ ಭಾಷಣಗಳಲ್ಲಿ ಮುಸ್ಲಿಮರನ್ನು ಬಹಿರಂಗವಾಗಿ ಗುರಿಯಾಗಿಸಿದರು. ನಾವು ಭರತ್ ಕುಮ್ಡೆಲ್ ನ ಬಂಧನಕ್ಕೆ ಒತ್ತಾಯಿಸಿದೆವು. ಉನ್ನತ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆವು. ಆದರೆ ಯಾರೂ ನಮ್ಮ ಮನವಿಯನ್ನು ಕೇಳಲಿಲ್ಲ. ಕಾಂಗ್ರೆಸ್ ಏನಾದರೂ ಕ್ರಮ ತೆಗೆದುಕೊಂಡಿದ್ದರೆ, ರಹ್ಮಾನ್ ಹತ್ಯೆ ನಡೆಯುತ್ತಿರಲಿಲ್ಲ," ಎಂದು ಅಶ್ರಫ್ ಉಲ್ಲೇಖಿಸಿದರು.

ರಹ್ಮಾನ್ ಹತ್ಯೆಯ ನಂತರ ಸಾವಿರಾರು ಮುಸ್ಲಿಮರು ಮಂಗಳೂರಿನಿಂದ ಬಡಗಬೆಳ್ಳೂರಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು. ಅಶ್ರಫ್ ಹೇಳುವಂತೆ ಎಸ್ ಡಿ ಪಿ ಐ ಕಾರ್ಯಕರ್ತರೂ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 25,000 ಜನರ ಈ ದೊಡ್ಡ ಗುಂಪು, ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು. ಇದರ ನಂತರ ಅಶ್ರಫ್ ಸೇರಿದಂತೆ ದಕ್ಷಿಣ ಕನ್ನಡದ 300-400 ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿದರು. ಈ ದೊಡ್ಡ ಪ್ರತಿಕ್ರಿಯೆಯ ನಂತರ ಕಾಂಗ್ರೆಸ್ ಪಕ್ಷವು ಕ್ರಮ ಕೈಗೊಳ್ಳಬೇಕಾಗಿ ಬಂತು. ಆದರೆ ಆ ವೇಳೆಗೆ ವಿಳಂಬವಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಬದಲಾಯಿಸಲಾಯಿತು ನೂತನ ಕಮಿಷನರ್ ಗೆ ಪರಿಸ್ಥಿತಿ ನಿಯಂತ್ರಿಸಲು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ವಿರೋಧಿ ಕಾರ್ಯಪಡೆ ರಚಿಸಲಾಯಿತು. ಕರಾವಳಿ ಕರ್ನಾಟಕದಲ್ಲಿ ಹದಗೆಡುತ್ತಿರುವ ಕೋಮು ಪರಿಸ್ಥಿತಿಯ ಕಾರಣಗಳನ್ನು ವಿಶ್ಲೇಷಿಸಲು ಕಾಂಗ್ರೆಸ್ ನಿಯೋಗ ರಚಿಸಲಾಯಿತು.

► ಸಮುದಾಯದ ಏಳಿಗೆಗಿಂತ ವ್ಯಾಪಾರದ ಹಿತಾಸಕ್ತಿ ಮುಖ್ಯ:

ಮಂಗಳೂರು ಕ್ಷೇತ್ರದ ಐದು ಬಾರಿಯ ಕಾಂಗ್ರೆಸ್ ಶಾಸಕ ಮತ್ತು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ದಕ್ಷಿಣ ಕನ್ನಡದಲ್ಲಿ ಕೋಮುವಾದ ಎದುರಿಸುವಲ್ಲಿ ಕಾಂಗ್ರೆಸ್ ವೈಫಲ್ಯಕ್ಕೆ ನೇರ ಹೊಣೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸುತ್ತಾರೆ.

"ಖಾದರ್ ತಮ್ಮ ವ್ಯಾಪಾರದ ಆಸಕ್ತಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅವರು ಜಿಲ್ಲೆಯ ಪಕ್ಷದ ಸುಪ್ತ ನಾಯಕರಾಗಿದ್ದಾರೆ. ಉಳಿದ ಎಲ್ಲ ಪದಾಧಿಕಾರಿಗಳು ಕೇವಲ ಪ್ರತಿನಿಧಿಗಳು. ದಕ್ಷಿಣ ಕನ್ನಡದಿಂದ ನಿಯಮಿತವಾಗಿ ಗೆಲ್ಲುವ ಏಕೈಕ ಕಾಂಗ್ರೆಸ್ ಪಕ್ಷದ ರಾಜಕಾರಣಿ ಅವರು. ಆದರೆ ಜನರು ಅರಿಯದ ವಿಷಯವೆಂದರೆ ಎಸ್ ಡಿ ಪಿ ಐ ಅವರ ಕಾರಣದಿಂದ ಜನಪ್ರಿಯತೆ ಗಳಿಸುತ್ತಿದೆ. ಮುಸ್ಲಿಮರು ಎಸ್ ಡಿ ಪಿ ಐ ಕಡೆ ತಿರುಗುತ್ತಿದ್ದಾರೆ. ಏಕೆಂದರೆ ಖಾದರ್ ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ವ್ಯಕ್ತಿಯಾಗಿ ಅವರಿಗೆ ಕಾಣುತ್ತಿಲ್ಲ. ಜಾತ್ಯತೀತ ಹಿಂದೂಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಬಯಸಿದರೂ ಎಸ್ ಡಿ ಪಿ ಐ ನ ರಾಜಕೀಯದಿಂದಾಗಿ ಹಿಂಜರಿಯುತ್ತಾರೆ. ಮುಸ್ಲಿಮರಲ್ಲಿ ಎಸ್ ಡಿ ಪಿ ಐ ಗೆ ಬೆಂಬಲ ಹೆಚ್ಚಾಗಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ. ಜಾತ್ಯತೀತ ಹಿಂದೂಗಳು ಬೇರೆ ದಾರಿಯಿಲ್ಲದೆ ಅಂತಿಮವಾಗಿ ಬಿಜೆಪಿಗೆ ಮತ ಹಾಕುತ್ತಾರೆ" ಎಂದು ಮುನೀರ್ ಕಾಟಿಪಳ್ಳ ಅವರು ಜಿಲ್ಲೆಯ ರಾಜಕೀಯದ ಬಗ್ಗೆ ತಮ್ಮ ವಾದವನ್ನು ಮಂಡಿಸುತ್ತಾರೆ.

“ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿರುವ ಅನೇಕ ಗಣ್ಯ ಮುಸ್ಲಿಮರ ನಡುವಿನ ಬಲವಾದ ಸಂಬಂಧದಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ಎಲ್ಲಾ ಅಭಿವೃದ್ಧಿ ಕೆಲಸಗಳ ಗುತ್ತಿಗೆಗಳು 'ಈ ಗಣ್ಯ' ರಿಗೇ ಸಿಗುತ್ತವೆ. ಕಾಂಗ್ರೆಸ್ ಗೆ ಆರೆಸ್ಸೆಸ್ ಸಿದ್ಧಾಂತವನ್ನು ಹೇಗೆ ಎದುರಿಸಬೇಕೆಂದು ತಿಳಿದಿಲ್ಲ. ಹಿಂದೂಗಳಿಗೆ ಹಾನಿಯಾಗದಂತೆ ತಮ್ಮ ಸಿದ್ಧಾಂತವನ್ನು ಹೇಗೆ ಮಂಡಿಸಬೇಕೆಂಬ ಅರಿವೂ ಇಲ್ಲ. ಆದ್ದರಿಂದ ಅದು 'ಮೃದು ಹಿಂದುತ್ವ'ವನ್ನು ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ. ಇಲ್ಲಿನ ರಾಜಕಾರಣ ಒಂದು ರೀತಿಯ ವ್ಯಾಪಾರದಂತಿದೆ. ಕಾಂಗ್ರೆಸ್ ಗೊಂದಲದಲ್ಲಿದೆ. ಪಕ್ಷವು ತನ್ನ ಸಂಘಟನಾ ಸಮಸ್ಯೆಗಳನ್ನು ಪರಿಹರಿಸಿಲ್ಲ. ಕೋಮು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿಲ್ಲ” ಎಂದು ಮಂಗಳೂರಿನವರೇ ಆದ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗ್ಡೆ ಹೇಳುತ್ತಾರೆ.

ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರು ಸಂಘ ಪರಿವಾರ ಮತ್ತು 'ಗಣ್ಯ ಮುಸ್ಲಿಮ'ರ ನಡುವಿನ ಸಂಬಂಧವನ್ನು ಒಂದು ಘಟನೆಯ ಮೂಲಕ ವಿವರಿಸಿದರು. "2023ರ ಕರ್ನಾಟಕ ಚುನಾವಣೆಗೂ ಮುನ್ನ ರಮಝಾನ್ ತಿಂಗಳಲ್ಲಿ ಕೋಮು ಸೌಹಾರ್ದ ಸಂದೇಶ ಹರಡಲು ನಾನು ಅಂತರ್ ಧರ್ಮೀಯ ಇಫ್ತಾರ್ ಕೂಟ ಆಯೋಜಿಸಲು ಬಯಸಿದ್ದೆ. ಈ ಕುರಿತಂತೆ ನನ್ನ ಯೋಜನೆಯನ್ನು ನಗರದ ಅತ್ಯಂತ ಶ್ರೀಮಂತ ಮುಸ್ಲಿಂ ಉದ್ಯಮಿಯೊಂದಿಗೆ ಹಂಚಿಕೊಂಡೆ. ನನ್ನ ಆಲೋಚನೆಗೆ ಅವರು ಅತ್ಯಂತ ಉತ್ಸುಕರಂತೆ ಕಂಡು ಬಂದರು. ಆದರೆ ಬಳಿಕ ಅದನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡರು! ಅವರು ಅತ್ಯಂತ ಕುಖ್ಯಾತ ಸಂಘ ಪರಿವಾರದ ಸದಸ್ಯರನ್ನು ಆಹ್ವಾನಿಸಿ ಇಫ್ತಾರ್ ಆಯೋಜಿಸಿದರು. ಸೌಹಾರ್ದತೆಯ ಸಂದೇಶದ ಮೇಲೆ ಕೇಂದ್ರೀಕೃತವಾದ ಒಂದು ಪ್ರತ್ಯೇಕ ಇಫ್ತಾರ್ ಅನ್ನು ನಾನು ಆಯೋಜಿಸಿದೆ. ಹಿಂದೂಗಳು ಮತ್ತು ಮುಸ್ಲಿಮರ ಗಣ್ಯರ ನಡುವಿನ ಈ ಮೈತ್ರಿಯೇ ಇಲ್ಲಿನ ಕೋಮು ಉದ್ವಿಗ್ನ ಪರಿಸ್ಥಿತಿಗೆ ಕಾರಣ ಎಂದು ನಾನು ಅರಿತುಕೊಂಡ ದಿನ ಅದು," ಎಂದು ದಿನೇಶ್ ಹೆಗ್ಡೆ ಉಳೆಪಾಡಿ ಹೇಳುತ್ತಾರೆ.

ಮುನೀರ್ ಕಾಟಿಪಳ್ಳ ಅವರಂತೆ ಉಳೆಪಾಡಿ ಕೂಡ ಖಾದರ್, ಸಂಘ ಪರಿವಾರದ ಪ್ರಮುಖ ಸದಸ್ಯರನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿದರು.

"ಖಾದರ್ ಯಾವುದೇ ಕೋಮು ಸೌಹಾರ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ. ಆದರೆ ಎಲ್ಲಾ ಹಿಂದೂ ಬಲಪಂಥೀಯ ಕಾರ್ಯಕ್ರಮಗಳಲ್ಲಿ ಅವರು ಖಂಡಿತಾ ಉಪಸ್ಥಿತರಿರುತ್ತಾರೆ. ಇದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಿದೆ. ಕರಾವಳಿ ಬಗ್ಗೆ ಕಾಂಗ್ರೆಸ್ ನಾಯಕತ್ವ ನಿರಾಸಕ್ತಿ ತಾಳಿದೆ. ಇಲ್ಲಿ ಸೈದ್ಧಾಂತಿಕವಾಗಿ ಸಂಘ ಪರಿವಾರವನ್ನು ವಿರೋಧಿಸಬಲ್ಲ ಪ್ರಾಮಾಣಿಕ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಬೇಕಾಗಿದೆ", ಎಂದು ಉಳೆಪಾಡಿ ಅಭಿಪ್ರಾಯಪಡುತ್ತಾರೆ.

"ಕಾಂಗ್ರೆಸ್ ನಲ್ಲಿ ದಲ್ಲಾಳಿಗಳು ನಾಯಕರಾಗಿದ್ದಾರೆ. ಒಂದು ಕಾಲದಲ್ಲಿ ಈ ಜಿಲ್ಲೆಯು ಆಸ್ಕರ್ ಫೆರ್ನಾಂಡಿಸ್, ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿಯಂತಹ ಪ್ರಬಲ ಸೈದ್ಧಾಂತಿಕ ನಾಯಕರನ್ನು ನೀಡುತ್ತಿತ್ತು. ಆದರೆ ಈಗಿನ ನಾಯಕರನ್ನು ನೋಡಿ. ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾದರೂ ಅರ್ಥವಾಗುತ್ತದೆಯೇ? ಬಿಜೆಪಿಗೆ ಪರ್ಯಾಯವನ್ನು ಹುಡುಕುತ್ತಿರುವ ಹಿಂದೂಗಳದ್ದೊಂದು ದೊಡ್ಡ ಗುಂಪಿದೆ. ಆದರೆ ಅವರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಇಷ್ಟವಿಲ್ಲದ ಕಾರಣ ಬಿಜೆಪಿಯನ್ನು ಅನಿವಾರ್ಯವಾಗಿ ಬೆಂಬಲಿಸುತ್ತಿದ್ದಾರೆ" ಎಂದು ಮಂಗಳೂರು ಮೂಲದ ವಿಶ್ಲೇಷಕ ಶ್ರೀನಿವಾಸ್ ಕಾರ್ಕಳ ಅವರು ಕಾಂಗ್ರೆಸ್ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿದ್ದಾರೆ.

"ದಕ್ಷಿಣ ಕನ್ನಡದ ಕಾಂಗ್ರೆಸ್ ನಾಯಕರಿಗೆ ಕೋಮು ಸೌಹಾರ್ದತೆಯಲ್ಲಿ ಆಸಕ್ತಿಯಿಲ್ಲ. ಅವರ 90 ಪ್ರತಿಶತ ನಾಯಕರು ಆರೆಸ್ಸೆಸ್ ಸಿದ್ಧಾಂತವನ್ನು ಅನುಸರಿಸುತ್ತಾರೆ," ಎಂದು ಪತ್ರಕರ್ತ ನವೀನ್ ಸೂರಿಂಜೆ ಅವರು ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ನಡೆಯ ಕುರಿತು ತಾವು ಕಂಡುಕೊಂಡಿದ್ದನ್ನು ಸ್ಪಷ್ಟವಾಗಿ ಹೇಳಿದರು.

ಕಾಂಗ್ರೆಸ್, ಬಿಜೆಪಿ ಸೇರಿದಂತೆ ಸಂಘ ಪರಿವಾರ ಮತ್ತು ಎಸ್ ಡಿ ಪಿ ಐ ನಂತಹ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳು ಈ ಪ್ರದೇಶದಲ್ಲಿ ಕೋಮು ದಳ್ಳುರಿ ಹೆಚ್ಚಿಸುತ್ತಿವೆ. ಇದು ಧರ್ಮಾತೀತ ಸಂಬಂಧಗಳ ಭವಿಷ್ಯಕ್ಕೆ ಒಳ್ಳೆಯದಲ್ಲ.

ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಈಗಾಗಲೇ ಪ್ರತೀಕಾರದ ಸಂಚುಗಳನ್ನು ರೂಪಿಸುತ್ತಿರುವುದು, ಕೋಮು ದ್ವೇಷದ ಕೊಲೆಗಳ ಸರಣಿ ಮುಂದುವರಿಯುವ ಭಯ ಹೆಚ್ಚಿಸಿದೆ. ಕರಾವಳಿ ಕರ್ನಾಟಕದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡ ಕಂದಕವಿದೆ. ಆ ಕಂದಕವು ವಿಸ್ತರಿಸುತ್ತಿದೆ. ಇಲ್ಲಿ ನಿಜವಾಗಿಯೂ ಆಗಬೇಕಾಗಿರುವುದು ಧಾರ್ಮಿಕ ಏಕೀಕರಣ. ಪೊಲೀಸರು ಕೇವಲ ಕಾನೂನನ್ನು ಜಾರಿಗೊಳಿಸಬಹುದು. ಶ್ರೀಮಂತ ಹಿಂದೂಗಳು ಅಥವಾ ಮುಸ್ಲಿಮರು ಸಾಯುತ್ತಿದ್ದಾರೆಯೇ? ಎಂದು ಸಮುದಾಯದ ನಾಯಕರು ನಿಜವಾಗಿಯೂ ತಮ್ಮನ್ನು ತಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಮತ್ತೆ ಮತ್ತೆ ಮರುಕಳಿಸುತ್ತಿರುವ ಈ ಹಿಂಸಾಚಾರದ ಸರಣಿಯಲ್ಲಿ ಬಡವರ ಮತ್ತು ಅನಕ್ಷರಸ್ಥರ ಜೀವಗಳು ಬೆಲೆ ತೆರುತ್ತಿವೆ" ಎಂದು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕೋಮು ಘರ್ಷಣೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ Frontline ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕೃಪೆ : Frontline ಮ್ಯಾಗಝೀನ್

share
ವಿಖಾರ್ ಅಹ್ಮದ್ ಸಯೀದ್
ವಿಖಾರ್ ಅಹ್ಮದ್ ಸಯೀದ್
Next Story
X