ಮೋದಿ ಸರ್ಕಾರದ ಶಿಕ್ಷಣ ನೀತಿಗಳನ್ನು ಪ್ರಶ್ನಿಸಿದ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ

Photo Credit : Facebook/@drmurlimjoshi
“ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯಲಿಲ್ಲ ಯಾಕೆ?”
‘ಅಮರ್ ಉಜಾಲ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜೋಶಿಯವರು ಹೇಳಿದ್ದೇನು?
“ಸರ್ಕಾರವೇ ಹಗರಣಗಳಲ್ಲಿ ಮುಳುಗಿದೆ.”
“ಶಿಕ್ಷಣವು ಸರ್ಕಾರದ ಆದ್ಯತೆಯಾಗಿ ಉಳಿದಿಲ್ಲ. ಬಜೆಟ್ ಅನುದಾನವೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.”
“‘ವಿಕಸಿತ ಭಾರತ’ದ ಪರಿಕಲ್ಪನೆಯಲ್ಲಿ ‘ವಿಕಸಿತ’ ಎಂದರೆ ನಿಜವಾದ ಅರ್ಥವೇನು?”
“ನೀವು ಶಾಲೆಗಳನ್ನು ಸ್ಥಾಪಿಸಿದ್ದೀರಿ, ಆದರೆ ಅಲ್ಲಿ ಶಿಕ್ಷಕರೇ ಇಲ್ಲ. ಹಾಗಿದ್ದಾಗ ವಿದ್ಯಾರ್ಥಿಗಳು ಏನು ಮಾಡಬೇಕು?”
“ಕಾಲೇಜುಗಳನ್ನು ತೆರೆಯುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೀರಿ... ಆದರೆ ಉದ್ಯೋಗಗಳು ಎಲ್ಲಿವೆ?”
“ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆಯಲಿಲ್ಲ ಯಾಕೆ?”
ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ಮುರಳಿ ಮನೋಹರ ಜೋಶಿ ಅವರ ಮಾತುಗಳಿವು. ‘Gen Z’ ಪ್ರತಿಭಟನೆಗಳು ಸ್ವಲ್ಪ ಶಮನಗೊಂಡ ಬೆನ್ನಲ್ಲೇ ‘Gen Alpha’ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ‘ಅಮರ್ ಉಜಾಲ’ ಹಿಂದಿ ದಿನಪತ್ರಿಕೆಯ ಕನ್ಸಲ್ಟಿಂಗ್ ಎಡಿಟರ್ ವಿನೋದ್ ಅಗ್ನಿಹೋತ್ರಿ ಅವರು ಜೋಶಿ ಅವರ ಸುದೀರ್ಘ ಸಂದರ್ಶನ ನಡೆಸಿದ್ದಾರೆ.
2014ರಲ್ಲಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದ ಜೋಶಿ ಅವರನ್ನು ಪಕ್ಷದ ಹೊಸ ‘ಮಾರ್ಗದರ್ಶಕ್ ಮಂಡಲ’ಕ್ಕೆ ಸೇರ್ಪಡೆ ಮಾಡಲಾಗಿತ್ತು. ಇದು ಅವರನ್ನು ಸಕ್ರಿಯ ರಾಜಕಾರಣದಿಂದ ದೂರವಿಟ್ಟಿತು.
‘ಅಮರ್ ಉಜಾಲ’ದ ಈ ಸಂದರ್ಶನದಲ್ಲಿ ಜೋಶಿ ಅವರು ಮೋದಿ ಸರ್ಕಾರದ ಶಿಕ್ಷಣ ನೀತಿ ಮತ್ತು ಅದರ ಆದ್ಯತೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಶಿಕ್ಷಣ ಬಜೆಟ್ ಕಡಿತ, ಸರ್ಕಾರಿ ಶಾಲೆಗಳ ಮುಚ್ಚುವಿಕೆ, ಶಿಕ್ಷಣದ ಖಾಸಗೀಕರಣ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವ್ಯಾಪಕ ಭ್ರಷ್ಟಾಚಾರದ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳು ಹಾಲಿ ವ್ಯವಸ್ಥೆಯ ಆದ್ಯತೆಗಳು ಮತ್ತು ಹಾದಿಯನ್ನು ತೀವ್ರವಾಗಿ ಟೀಕಿಸುತ್ತವೆ.
ಪ್ರಶ್ನೆಪತ್ರಿಕೆ ಸೋರಿಕೆಯನ್ನು ಕೇವಲ ಪರೀಕ್ಷಾ ವ್ಯವಸ್ಥೆಯ ಲೋಪ ಎಂದು ನೋಡುವ ಬದಲು, ಜೋಶಿ ಅದನ್ನು ಸಮಾಜ ಮತ್ತು ಆಡಳಿತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಲಿಂಕ್ ಮಾಡಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಹಣ ಮತ್ತು ಭ್ರಷ್ಟಾಚಾರವೇ ಮೇಲುಗೈ ಸಾಧಿಸುವುದನ್ನು ಕಂಡಾಗ, ಜನರು ಕೂಡ ತಪ್ಪು ಹಾದಿ ತುಳಿಯಲು ಪ್ರಾರಂಭಿಸುತ್ತಾರೆ. ಅಂತಿಮವಾಗಿ ಇದರ ಹೊಣೆ ಸರ್ಕಾರ ಮತ್ತು ವ್ಯವಸ್ಥೆಯ ಮೇಲಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಗೆ ಮೂಲ ಕಾರಣವೇನೆಂದು ಕೇಳಿದಾಗ, ಶಿಕ್ಷಣ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ದಿಕ್ಸೂಚಿ ಇಲ್ಲದಿರುವುದೇ ಮುಖ್ಯ ಕಾರಣ ಎಂದಿದ್ದಾರೆ ಜೋಶಿ.
ಶಿಕ್ಷಣವನ್ನು ಉದ್ಯೋಗದೊಂದಿಗೆ ಜೋಡಿಸುವುದು ಅತ್ಯಗತ್ಯ ಎಂದ ಅವರು, “ಶಿಕ್ಷಣವು ಆರ್ಥಿಕವಾಗಿ ಉತ್ಪಾದಕವಾಗಿರಬೇಕು. ಶಿಕ್ಷಣದಿಂದ ಆರ್ಥಿಕ ಪ್ರಯೋಜನ ಸಿಗದಿದ್ದರೆ, ಅದಕ್ಕೆ ಏನು ಮೌಲ್ಯವಿರುತ್ತದೆ?” ಎಂದು ಪ್ರಶ್ನಿಸಿದ್ದಾರೆ.
ದಿಲ್ಲಿಯಲ್ಲಿ ಎಂ.ಎ. ಪದವೀಧರರೊಬ್ಬರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ಪಿಎಚ್ಡಿ ಪದವೀಧರರೊಬ್ಬರು ಪಾಲಿಕೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿನ ವಾಸ್ತವವನ್ನು ಜೋಶಿ ಎತ್ತಿ ತೋರಿಸಿದ್ದಾರೆ. “ಬಿ.ಎಡ್. ಪದವಿ ಪಡೆದ ವ್ಯಕ್ತಿಯೊಬ್ಬರು ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ನಮಗೆ ತೀವ್ರ ಬೇಸರವಾಗಿತ್ತು. ಅವರು 25,000–30,000 ರೂ. ವೇತನಕ್ಕೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಹಾಗಾದರೆ ಈ ಪರಿಸ್ಥಿತಿ ಎತ್ತ ಸಾಗುತ್ತಿದೆ?” ಎಂದು ಜೋಶಿ ಕೇಳಿದ್ದಾರೆ.
ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದ್ದರೂ, ಪದವಿ ಮುಗಿಸಿ ಹೊರಬರುವ ಯುವಕರಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂದ ಜೋಶಿ, ಸರ್ಕಾರಿ ಉದ್ಯೋಗವೊಂದೇ ಜೀವಿತಾವಧಿಯ ಭದ್ರತೆಯನ್ನು ನೀಡುವ ಸುರಕ್ಷಿತ ಉದ್ಯೋಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮದೇ ಉದಾಹರಣೆಯನ್ನು ನೀಡಿದ ಜೋಶಿ, “ನಾನು ವಿದ್ಯಾರ್ಥಿಯಾಗಿದ್ದಾಗ ಭೌತಶಾಸ್ತ್ರ ಕೋರ್ಸ್ಗೆ ಅತಿ ಹೆಚ್ಚು ಪ್ರವೇಶಾತಿಗಳಿರುತ್ತಿದ್ದವು. ಒಂದು ದಶಕದ ನಂತರ, ಜನರು ಇಲೆಕ್ಟ್ರಾನಿಕ್ಸ್ ಕೋರ್ಸ್ಗಳತ್ತ ಮುಖ ಮಾಡಿದರು. ಅದಾಗಿ ಹದಿನೈದು ವರ್ಷಗಳ ನಂತರ ಇಲೆಕ್ಟ್ರಾನಿಕ್ ಎಂಜಿನಿಯರಿಂಗ್ ಆಯ್ಕೆ ಮಾಡಲು ಪ್ರಾರಂಭಿಸಿದರು” ಎಂದರು.
ಮುಂದುವರಿದು ಮಾತನಾಡಿದ ಅವರು, “ನಿಮ್ಮ ಕಾರ್ಯತಂತ್ರದ ಬಗ್ಗೆ ಆಲೋಚಿಸುವುದು ಅತ್ಯಗತ್ಯ. ಜನರಿಗೆ ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ಅವರಿಗೆ ಬೇರೆ ಏನು ಆಯ್ಕೆಗಳಿವೆ? ಅವರು ಸ್ವಾಭಾವಿಕವಾಗಿಯೇ ತಮಗೆ ಸುಲಭವಾಗಿ ಸಿಗುವ ಅವಕಾಶಗಳತ್ತ ಆಕರ್ಷಿತರಾಗುತ್ತಾರೆ” ಎಂದು ಹೇಳಿದರು.
ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ಒಟ್ಟಾರೆ ಭ್ರಷ್ಟಾಚಾರದ ಹೆಚ್ಚಳಕ್ಕೆ ಲಿಂಕ್ ಮಾಡಿದ ಜೋಶಿ, ವ್ಯವಸ್ಥೆಯೇ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವಾಗ, ವಿದ್ಯಾರ್ಥಿಗಳಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದು ಕಷ್ಟ ಎಂದರು.
“ಇಂತಹ ಪರಿಸ್ಥಿತಿಯಲ್ಲಿ ಅಕ್ರಮಗಳು ನಡೆಯುವುದು ಅನಿವಾರ್ಯ. ಜನರು ಎಲ್ಲವನ್ನೂ ಗಮನಿಸುತ್ತಾರೆ. ಲಂಚ ನೀಡಿ ಗುತ್ತಿಗೆ ಪಡೆಯಲು ಸಾಧ್ಯ ಎಂದಾದರೆ, ತಮ್ಮ ಅರ್ಜಿಗಳಿಗೆ ಅನುಮೋದನೆ ಪಡೆಯಲು ತಾವು ಕೂಡ ಇದೇ ಮಾರ್ಗವನ್ನು ಅನುಸರಿಸಬೇಕು ಎಂದು ಅವರು ತೀರ್ಮಾನಿಸುತ್ತಾರೆ. ಹಾಗೆಯೇ, ಶಿಕ್ಷಕರೊಬ್ಬರು ಲಂಚ ನೀಡಿ ಹುದ್ದೆ ಪಡೆದಿರುವುದನ್ನು ಕಂಡ ವಿದ್ಯಾರ್ಥಿ, ‘ನಾನೂ ಏಕೆ ಇದೇ ರೀತಿಯ ಮಾರ್ಗಗಳ ಮೂಲಕ ಯಶಸ್ವಿಯಾಗಬಾರದು?’ ಎಂದು ಆಲೋಚಿಸಬಹುದು.”
“ಸಚಿವರ ವಿರುದ್ಧ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧ ಹಾಗೂ ನ್ಯಾಯಾಂಗದ ಸದಸ್ಯರ ವಿರುದ್ಧ ಆರೋಪಗಳು ಕೇಳಿಬಂದಾಗ ಅನುಸರಿಸಬೇಕಾದ ಸರಿಯಾದ ಹಾದಿ ಇದೇ ಎಂದು ಸಾಮಾನ್ಯ ವ್ಯಕ್ತಿ ತೀರ್ಮಾನಕ್ಕೆ ಬರುತ್ತಾನೆ. ಈ ಹಾದಿಯನ್ನು ನಿರ್ಮಿಸಿದ್ದೇ ನೀವು, ಈಗ ಇದು ಏಕೆ ನಡೆಯುತ್ತಿದೆ ಎಂದು ಪ್ರಶ್ನಿಸುತ್ತಿದ್ದೀರಿ?” ಎಂದು ಜೋಶಿ ಹೇಳಿದರು.
ನಾವು ಈ ಹಾದಿಯನ್ನು ನಿರ್ಮಿಸಿದ್ದೇವೆ. ಇದರ ತಪ್ಪು ಈ ಮಕ್ಕಳ ಮೇಲಿಲ್ಲ. ಇದಕ್ಕೆ ನಾವೇ ಹೊಣೆ ಎಂದಿದ್ದಾರೆ ಬಿಜೆಪಿಯ ಹಿರಿಯ ನಾಯಕ.
ತಮ್ಮ ಅಧಿಕಾರಾವಧಿಯನ್ನು ಇಂದಿನ ಪರಿಸ್ಥಿತಿಗೆ ಹೋಲಿಸಿದ ಜೋಶಿ, “ನಾನು ಅತ್ಯಂತ ವಿನಮ್ರತೆಯಿಂದ ಕೇಳುತ್ತಿದ್ದೇನೆ. ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಏಕೆ ನಡೆಯಲಿಲ್ಲ?” ಎಂದು ಪ್ರಶ್ನಿಸಿದರು. ಆ ಸಮಯದಲ್ಲಿ ಮೂಲಭೂತ ತತ್ವಗಳಿಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ಅವರು ನೆನಪಿಸಿಕೊಂಡರು. ಈಗ ಬ್ಯಾಂಕುಗಳಲ್ಲಿ ಹಗರಣಗಳು ನಡೆಯುತ್ತಿವೆ, ಹಾಗಾಗಿ ಶಿಕ್ಷಣದಲ್ಲೂ ಹಗರಣಗಳು ನಡೆಯುವುದು ಅನಿವಾರ್ಯ. ವ್ಯಾಪಾರ ಕ್ಷೇತ್ರದಲ್ಲಿ ಹಗರಣಗಳು ನಡೆಯುತ್ತಿವೆ. ಸ್ವತಃ ಸರ್ಕಾರವೇ ಹಗರಣಗಳಲ್ಲಿ ಸಿಲುಕಿದೆ. ಹಾಗಿರುವಾಗ, ಈ ಬಡ ವಿದ್ಯಾರ್ಥಿಗಳನ್ನು ಏಕೆ ಹೊಣೆ ಮಾಡುತ್ತೀರಿ? ಅವರು ಕೂಡ ಅದನ್ನೇ ಅನುಸರಿಸುವುದು ಸಹಜ ಎಂದಿದ್ದಾರೆ.
ಈ ಸಮಸ್ಯೆಯನ್ನು ವಿಶಾಲವಾದ ಸಾಮಾಜಿಕ ಚೌಕಟ್ಟಿಗೆ ಲಿಂಕ್ ಮಾಡಿದ ಜೋಶಿ, “ನಾವು ಮೂಲಭೂತ ವಿಷಯಗಳನ್ನು ಗಮನಿಸಬೇಕು. ಮುಖ್ಯವಾಗಿ ಸಂಪೂರ್ಣವಾಗಿ ಹಣದ ಸುತ್ತಲೇ ನಿರ್ಮಾಣವಾಗಿರುವ ಇಂದಿನ ಸಮಾಜದ ರಚನೆಯನ್ನು ಪರಿಶೀಲಿಸಬೇಕಿದೆ” ಎಂದರು.
ಪ್ರತಿಯೊಬ್ಬ ವ್ಯಕ್ತಿಯೂ ಹಣ ಗಳಿಸಬೇಕು, ಬೇರೆಯವರ ಜೇಬಿಗೆ ಕನ್ನ ಹಾಕಿಯಾದರೂ ಎಲ್ಲರೂ ಸಂಪತ್ತನ್ನು ಗಳಿಸಲು ಶ್ರಮಿಸಬೇಕು ಎಂಬ ಸಾಮಾಜಿಕ ಗುರಿಯನ್ನು ನೀವು ನಿಗದಿಪಡಿಸಿದ್ದೀರಿ ಎಂದು ಅವರು ಅಭಿಪ್ರಾಯಪಟ್ಟರು.
► ಇದು ಪರೀಕ್ಷೆಯೋ ಅಥವಾ ಯುದ್ಧವೋ?
ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮತ್ತು ಈ ಸಮಸ್ಯೆಯನ್ನು ಎದುರಿಸಲು ಸರ್ಕಾರದ ಸಿದ್ಧತೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಜೋಶಿ, ಈ ಪರಿಸ್ಥಿತಿಗೆ ಅಧಿಕಾರದ ಅತಿಯಾದ ಕೇಂದ್ರೀಕರಣವೇ ಕಾರಣ ಎಂದರು. ಪ್ರತಿಯೊಂದು ಸಮಸ್ಯೆಗೂ ಒಂದೇ ಪರಿಹಾರವಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ ಎಂದು ಅವರು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ರೂಪಿಸುವುದು ಹೇಗೆ, ಅವುಗಳನ್ನು ಸುರಕ್ಷಿತವಾಗಿ ಮುದ್ರಿಸುವುದು ಹೇಗೆ, ಅವುಗಳ ರಕ್ಷಣೆಗೆ ಇಡೀ ಸೈನ್ಯವನ್ನೇ ನಿಯೋಜಿಸುವುದು ಹೇಗೆ ಹಾಗೂ ವಿಮಾನಗಳನ್ನು ಬಳಸುವುದು ಹೇಗೆ ಎಂಬುದರ ಮೇಲೆಯೇ ಸರ್ಕಾರ ಗಮನ ಹರಿಸುತ್ತಿದೆ. ಹೀಗೆ ಹೇಳುತ್ತಾ ನಕ್ಕ ಜೋಶಿ, “ಇದು ನಂಬಲಾಗದಂತದ್ದು. ಪರೀಕ್ಷೆ ಎನ್ನುವ ಬದಲು ಯಾವುದೋ ಯುದ್ಧವೇ ಶುರುವಾದಂತೆ ಭಾಸವಾಗುತ್ತಿದೆ” ಎಂದರು.
► ಶಿಕ್ಷಣ ಬಜೆಟ್: ‘ಆದ್ಯತೆ ಏನು?’
ಸರ್ಕಾರದ ಶಿಕ್ಷಣ ಬಜೆಟ್ ಮತ್ತು ಅದರ ಆದ್ಯತೆಗಳ ಬಗ್ಗೆಯೂ ಜೋಶಿ ಪ್ರಶ್ನೆಗಳನ್ನು ಎತ್ತಿದರು. ಸಾಮಾನ್ಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಕಡಿಮೆ ಅನುದಾನ ನೀಡಲು ಶಿಕ್ಷಣವು ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಇಲ್ಲದಿರುವುದೇ ಕಾರಣವೇ ಎಂದು ಕೇಳಿದ್ದಕ್ಕೆ, “ಇಲ್ಲ” ಎಂದ ಜೋಶಿ, ಕಳೆದ ಕೆಲವು ವರ್ಷಗಳ ಬಜೆಟ್ ಹಂಚಿಕೆಯನ್ನು ಗಮನಿಸಿದರೆ, ಶಿಕ್ಷಣ, ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೀಡುವ ಅನುದಾನ ಕಡಿಮೆಯಾಗುತ್ತಿದ್ದು, ರಸ್ತೆ ಹಾಗೂ ರಸ್ತೆ ಸಾರಿಗೆಯ ವೆಚ್ಚ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತದೆ ಎಂದರು.
ಜೋಶಿ ಅವರ ಪ್ರಕಾರ, ಯಾವುದೇ ಅಭಿವೃದ್ಧಿ ನೀತಿಯಲ್ಲಿ ದೇಶದ ಆದ್ಯತೆಗಳನ್ನು ಮೊದಲು ನಿರ್ಧರಿಸುವುದು ಅತ್ಯಗತ್ಯ. ಕೈಗಾರಿಕೀಕರಣ, ಅದರಲ್ಲೂ ವಿಶೇಷವಾಗಿ ಖಾಸಗಿ ವಲಯದ ಕೈಗಾರಿಕೀಕರಣವೇ ಆದ್ಯತೆಯಾಗಿದ್ದರೆ, ಎಲ್ಲಾ ಪ್ರಯತ್ನಗಳು ಅದೇ ಗುರಿಯತ್ತ ಸಾಗುತ್ತವೆ. ದೇಶದ ಸರ್ವತೋಮುಖ ಅಭಿವೃದ್ಧಿಯೇ ಆದ್ಯತೆಯಾಗಿದ್ದರೆ, ಶಿಕ್ಷಣ ಬಜೆಟ್ ಅನ್ನು ಆ ಗುರಿಯತ್ತ ಸಾಗಿಸಲು ಬಳಸಲಾಗುತ್ತದೆ.
ಮೂಲಸೌಕರ್ಯ ಮತ್ತು ಶಿಕ್ಷಣದ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಅವರು, ಕೇವಲ ರಸ್ತೆಗಳನ್ನು ನಿರ್ಮಿಸುವುದರಿಂದಲೇ ಅಭಿವೃದ್ಧಿ ಪೂರ್ಣಗೊಳ್ಳುವುದಿಲ್ಲ ಎಂದರು. “ನೀವು ರಸ್ತೆ ನಿರ್ಮಿಸಿದ್ದೀರಿ, ಆದರೆ ಇಂಜಿನಿಯರ್ಗಳು ಎಲ್ಲಿ ಸಿಗುತ್ತಾರೆ? ಅದಕ್ಕಾಗಿ ನೀವು ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕು. ರಸ್ತೆ ನಿರ್ಮಿಸುವಾಗ ಯಂತ್ರಗಳು ಎಲ್ಲಿಂದ ಬರುತ್ತವೆ? ಅವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದಾದರೆ ಅದರಿಂದೇನು ಪ್ರಯೋಜನ?” ಎಂದು ಪ್ರಶ್ನಿಸಿದರು.
► ರಾಜೀವ್ ಗಾಂಧಿ ಅವಧಿಯಲ್ಲಿ ರೂಪಿಸಿದ ಶಿಕ್ಷಣ ನೀತಿಯನ್ನು ಏಕೆ ಬದಲಾಯಿಸಲಿಲ್ಲ?
ಹೊಸ ಶಿಕ್ಷಣ ನೀತಿಯ (NEP 2020) ಕುರಿತು ಮಾತನಾಡಿದ ಜೋಶಿ, ಇದನ್ನು ರೂಪಿಸುವ ಆರಂಭಿಕ ಪ್ರಯತ್ನಗಳು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದ್ದವು ಎಂದರು. ಆ ಸಮಯದಲ್ಲಿ ಪಠ್ಯಪುಸ್ತಕಗಳಲ್ಲಿ ವಿವಿಧ ಸಮುದಾಯಗಳು ಮತ್ತು ಜಾತಿಗಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಷಯಗಳಿದ್ದದ್ದು ಬೆಳಕಿಗೆ ಬಂದಿತ್ತು. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಹೊಸ ಶಿಕ್ಷಣ ನೀತಿಯನ್ನು ರೂಪಿಸುವಂತೆ ಸರ್ಕಾರ ಅವರಿಗೆ ಸೂಚಿಸಿತ್ತು.
ಆಗಿನ ಶಿಕ್ಷಣ ನೀತಿಯನ್ನು ತಾವು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾಗಿ ನೆನಪಿಸಿಕೊಂಡ ಜೋಶಿ, ಹೊಸ ನೀತಿಯನ್ನು ರೂಪಿಸುವ ಯಾವುದೇ ಅಗತ್ಯ ಕಂಡುಬರಲಿಲ್ಲ ಎಂದರು.
“ನಾನು ಹಳೆಯ ಶಿಕ್ಷಣ ನೀತಿಯನ್ನು ಪರಿಶೀಲಿಸಿದೆ ಮತ್ತು ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದೆ. ನಾವು ಸಾಧಿಸಲು ಬಯಸುವ ಪ್ರತಿಯೊಂದನ್ನೂ ಇದರ ಮೂಲಕವೇ ಸಾಧಿಸಬಹುದು. ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿ ರೂಪಿಸಲಾಯಿತು ಎಂಬ ಒಂದೇ ಕಾರಣಕ್ಕೆ ಹಳೆಯ ಶಿಕ್ಷಣ ನೀತಿಯನ್ನು ಬದಲಾಯಿಸುವುದು ಸೂಕ್ತವಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
ಹಳೆಯ ಶಿಕ್ಷಣ ನೀತಿಯ ಆಧಾರದ ಮೇಲೆಯೇ ಅಗತ್ಯವಿರುವ ಕಡೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ತಮ್ಮ ಸರ್ಕಾರ ಮಾಡಿದೆ ಎಂದು ಅವರು ಹೇಳಿದ್ದಾರೆ.
ಶಿಕ್ಷಣ ನೀತಿಯನ್ನು ರೂಪಿಸುವಾಗ ಅದರ ಗುರಿ ಮತ್ತು ಉದ್ದೇಶಗಳು ಸ್ಪಷ್ಟವಾಗಿರಬೇಕು. “ಉದ್ದೇಶ ಸ್ಪಷ್ಟವಾಗಿರಬೇಕು. ಅದನ್ನು ಯಾವುದೇ ಒಂದು ಕೈಗಾರಿಕಾ ನೀತಿ, ವಾಣಿಜ್ಯ ನೀತಿ, ಅಂತಾರಾಷ್ಟ್ರೀಯ ನೀತಿ ಅಥವಾ ಯುದ್ಧ ನೀತಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಸಮಗ್ರವಾಗಿರಬೇಕು ಮತ್ತು ಈ ಎಲ್ಲಾ ನೀತಿಗಳನ್ನು ಒಳಗೊಳ್ಳುವುದರ ಜೊತೆಗೆ ಮಾನವ ಅಭಿವೃದ್ಧಿಯತ್ತ ಗಮನ ಹರಿಸಬೇಕು” ಎಂದು ಜೋಶಿ ಹೇಳಿದರು.
ಹೊಸ ಶಿಕ್ಷಣ ನೀತಿಯನ್ನು ತಯಾರಿಸಿದ ಪ್ರಕ್ರಿಯೆಯನ್ನೂ ಮಾಜಿ ಸಚಿವರು ಪ್ರಶ್ನಿಸಿದರು. ಹಿಂದಿನ ನೀತಿಯ ಅಧ್ಯಕ್ಷರಾಗಿದ್ದ ವಿಜ್ಞಾನಿ ಕೆ. ಕಸ್ತೂರಿರಂಗನ್ ತಮಗೆ ಹಳೆಯ ಪರಿಚಿತರು. ಹೊಸ ಶಿಕ್ಷಣ ನೀತಿಯ ಕುರಿತು ಏನು ಮಾಡುತ್ತಿದ್ದೀರಿ ಎಂದು ಕಸ್ತೂರಿರಂಗನ್ ಅವರಲ್ಲಿ ಕೇಳಿದಾಗ, “ಸಮಿತಿ ತನ್ನ ಕೆಲಸವನ್ನು ಮಾಡುತ್ತದೆ. ನನ್ನ ಬಳಿ ಬರುವುದನ್ನು ನಾನು ಕೇವಲ ಸಮನ್ವಯಗೊಳಿಸುತ್ತೇನೆ” ಎಂದು ಅವರು ಉತ್ತರಿಸಿದ್ದಾಗಿ ಜೋಶಿ ಹೇಳಿದರು.
ಹೊಸ ಶಿಕ್ಷಣ ನೀತಿಯಲ್ಲಿನ ಹಲವು ಅಂಶಗಳನ್ನು ನೀತಿ ಆಯೋಗದಿಂದ ತೆಗೆದುಕೊಳ್ಳಲಾಗಿದೆ ಎಂದು ಜೋಶಿ ಹೇಳಿದರು. ತಮ್ಮ ಅಧಿಕಾರಾವಧಿಯಲ್ಲಿ ಇದ್ದ ಯೋಜನಾ ಆಯೋಗಕ್ಕೆ ಇದನ್ನು ಹೋಲಿಸಿದ ಅವರು, “ನಮ್ಮ ಅವಧಿಯಲ್ಲಿ ಯೋಜನಾ ಆಯೋಗವಿತ್ತು. ಆದರೆ ಅದು ಶಿಕ್ಷಣದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಯಾವ ಕೆಲಸಗಳಿಗೆ ಎಂತಹ ಶ್ರಮಿಕರ ಅಗತ್ಯವಿದೆ ಎಂದು ನಿರ್ದೇಶಿಸುವುದಷ್ಟೇ ಅದರ ಕೆಲಸವಾಗಿತ್ತು” ಎಂದರು.
► ‘ಶಿಕ್ಷಣವು ವ್ಯಾಪಾರವಾಗಬಾರದು’
ಶಿಕ್ಷಣದಲ್ಲಿ ಸಮಾನತೆ ತರಲು ಜೋಶಿ ಅವರು ಏಕರೂಪದ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಪ್ರತಿಯೊಂದು ಮಗುವೂ ತನ್ನ ನೆರೆಹೊರೆಯ ಶಾಲೆಯಲ್ಲೇ ಕಲಿಯುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಅವರು ಹೇಳಿದರು.
ಕನಿಷ್ಠ ಪ್ರೌಢ ಶಿಕ್ಷಣದವರೆಗಾದರೂ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು. “ಇದು ನನ್ನ ಕನಸಾಗಿತ್ತು. ದೇಶದಲ್ಲಿ ಇಂತಹ ಶಿಕ್ಷಣ ಇಲ್ಲದೆ ಮತ್ತು ಈ ಹಂತದಲ್ಲಿ ಉಚಿತ ಶಿಕ್ಷಣ ಸಿಗದೆ ಹೋದರೆ, ನಾವು ಶಿಕ್ಷಣ ಕ್ಷೇತ್ರದಲ್ಲಿ ತೀವ್ರವಾಗಿ ಹಿಂದುಳಿಯುತ್ತೇವೆ ಎಂಬ ನಂಬಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ” ಎಂದು ಜೋಶಿ ಹೇಳಿದರು.
ಶಿಕ್ಷಣ ಕ್ಷೇತ್ರವು ದಿನೇದಿನೇ ವ್ಯಾಪಾರೀಕರಣಗೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅವರು, ಶಿಕ್ಷಣವನ್ನು ವಾಣಿಜ್ಯ ಉದ್ಯಮವಾಗಿ ನೋಡಬಾರದು ಮತ್ತು ಹಣ ಗಳಿಸುವುದೇ ಅದರ ಉದ್ದೇಶವಾಗಬಾರದು ಎಂದು ಪ್ರತಿಪಾದಿಸಿದರು.
“ಶಿಕ್ಷಣ ಕ್ಷೇತ್ರವು ದೇಶಕ್ಕೆ ಅತ್ಯಗತ್ಯವಾಗಿರುವುದರಿಂದ ಜನರು ಈ ಕ್ಷೇತ್ರದತ್ತ ಬರಬೇಕು. ಇಲ್ಲಿ ಲಾಭಕ್ಕೂ ಅವಕಾಶವಿದೆ. ಆದರೆ, ಶಿಕ್ಷಣದಿಂದ ಬಂದ ಆದಾಯವನ್ನು ಮರಳಿ ಶಿಕ್ಷಣ ಕ್ಷೇತ್ರದಲ್ಲೇ ಹೂಡಿಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ನಿಯಮಗಳಿರಬೇಕು” ಎಂದು ಅವರು ಹೇಳಿದರು.
ಆರೋಗ್ಯ ಕ್ಷೇತ್ರವನ್ನು ಲಾಭ ಮಾಡುವ ಉದ್ಯಮವಾಗಿ ನೋಡುವುದನ್ನೂ ಜೋಶಿ ತೀವ್ರವಾಗಿ ಟೀಕಿಸಿದರು. “ಜನರ ಶಿಕ್ಷಣ ಮತ್ತು ಆರೋಗ್ಯದ ಅಗತ್ಯಗಳನ್ನು ದುರ್ಬಳಕೆ ಮಾಡಿಕೊಂಡು ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಲಾಭ ಮಾಡುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪದ್ಧತಿ ನಮ್ಮ ದೇಶದಲ್ಲಿ ಎಂದಿಗೂ ಇರಲಿಲ್ಲ” ಎಂದರು.
► ‘ವಿಕಸಿತ ಭಾರತ’ದ ಉದ್ದೇಶವೇನು?
ಶಿಕ್ಷಣ ನೀತಿಯನ್ನು ಉಲ್ಲೇಖಿಸಿ ಜೋಶಿ ಅವರು ‘ವಿಕಸಿತ ಭಾರತ’ದ ಗುರಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ಇಲಾಖೆಗಳಿಗೆ ಗುರಿಗಳನ್ನು ನಿಗದಿಪಡಿಸುವುದು ಒಳ್ಳೆಯದೇ ಆದರೂ, “ಅಭಿವೃದ್ಧಿ” ಮತ್ತು “ವಿಕಸಿತ” ಎಂದರೆ ನಿಜವಾದ ಅರ್ಥವೇನು ಎಂಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು. ಆಧುನಿಕ ಮಾನದಂಡಗಳ ಪ್ರಕಾರ ಬುಡಕಟ್ಟು ಸಮುದಾಯಗಳನ್ನು “ಅಸಂಸ್ಕೃತ” ಅಥವಾ “ಅಭಿವೃದ್ಧಿಯಾಗದವರು” ಎಂದು ಪರಿಗಣಿಸಿದರೂ, ಮಾನವೀಯತೆಯ ದೃಷ್ಟಿಕೋನದಿಂದ ಈ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯ?
“ಅವರು ಪರಿಸರವನ್ನು ರಕ್ಷಿಸುತ್ತಾರೆ, ಸರಳವಾಗಿ ಬಾಳುತ್ತಾರೆ, ಸುಳ್ಳು ಹೇಳುವುದಿಲ್ಲ, ಕದಿಯುವುದಿಲ್ಲ, ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತಾರೆ, ತೃಪ್ತಿಯಿಂದಿರುತ್ತಾರೆ ಮತ್ತು ಕಾಡುಗಳನ್ನು ಕಡಿಯುವುದಿಲ್ಲ. ಸಮಾಜಕ್ಕೆ ಜೀವನದ ಮೌಲ್ಯಗಳು ಏನಾಗಿರಬೇಕು ಎಂಬುದನ್ನು ಶಿಕ್ಷಣ ನೀತಿಯಲ್ಲಿ ನಿರ್ಧರಿಸುವುದು ಮುಖ್ಯ” ಎಂದು ಅವರು ಹೇಳಿದರು.
ಸರ್ಕಾರವು “ಶ್ರೇಷ್ಠ ವೈದಿಕ ಪರಂಪರೆ” ಮತ್ತು “ಭಾರತೀಯ ಜ್ಞಾನ ಪರಂಪರೆಗಳನ್ನು” ಉತ್ತೇಜಿಸುತ್ತಿದ್ದರೂ, ಅದೇ ಸಮಯದಲ್ಲಿ ಸಾಮಾನ್ಯ ಜನರಿಗೆ ಶಿಕ್ಷಣವು ಎಟುಕದಷ್ಟು ದುಬಾರಿಯಾಗುತ್ತಿರುವಂತಹ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ನೀಡುತ್ತಿದೆ ಎಂದು ಅವರು ಗಮನಿಸಿದರು.
“ತುಂಬಾ ಒಳ್ಳೆಯದು, ನೀವು ವ್ಯಾಸಂಗ ಮಾಡಲು ಬಯಸಿದರೆ ಹೋಗಿ 50 ಲಕ್ಷ ರೂ. ವ್ಯವಸ್ಥೆ ಮಾಡಿ. ಇದರ ಅರ್ಥವೇನು? ಇಂತಹ ಪರಿಸ್ಥಿತಿಯಲ್ಲಿ ಬಡ ಕುಟುಂಬದ ಯಾವುದೇ ವ್ಯಕ್ತಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ.” ದುಬಾರಿ ಶಿಕ್ಷಣವು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಾಮಾಜಿಕ ಒತ್ತಡದಲ್ಲಿಯೂ ಇದರ ಪ್ರಭಾವ ಎದ್ದು ಕಾಣುತ್ತಿದೆ ಎಂದು ಜೋಶಿ ಹೇಳಿದರು. “ದೊಡ್ಡ ಸಂಸ್ಥೆಗಳಲ್ಲಿ ಮಾತ್ರ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಏಕೆ ನಡೆಯುತ್ತಿವೆ? ಸಣ್ಣ ಶಾಲೆಗಳಲ್ಲಿ ಇವು ಏಕೆ ನಡೆಯುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು.
ಅವರ ಪ್ರಕಾರ, ಆರ್ಥಿಕ ಮತ್ತು ಸಾಮಾಜಿಕ ತಾರತಮ್ಯವು ಈ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ.
ಸರ್ಕಾರಿ ಶಾಲೆಗಳ ಮುಚ್ಚುವಿಕೆ
ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಹಿಂದಿನ ತರ್ಕವನ್ನು ಜೋಶಿ ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಕೊರತೆಯನ್ನು ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆ, ಆದರೆ ಮಕ್ಕಳ ಸಂಖ್ಯೆ ಏಕೆ ಕಡಿಮೆಯಾಗಿದೆ ಎಂದು ಯಾರೂ ಕೇಳುತ್ತಿಲ್ಲ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲು, ಅವುಗಳ ಮೂಲಸೌಕರ್ಯಗಳನ್ನು ಸುಧಾರಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂಬುದು ಜೋಶಿ ಅವರ ಅಭಿಪ್ರಾಯ.
“ಸೌಲಭ್ಯಗಳ ಕುರಿತಾದ ಎಲ್ಲಾ ಭರವಸೆಗಳೂ ಕೇವಲ ಘೋಷಣೆಗಳಷ್ಟೇ. ನೈಜವಾಗಿ ಯಾವುದೇ ಬದಲಾವಣೆ ಏಕೆ ಆಗುತ್ತಿಲ್ಲ?” ಎಂದು ಕೇಳಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಕರ ಕೊರತೆಯ ಸಮಸ್ಯೆಯನ್ನೂ ಎತ್ತಿದರು.
“ನೀವು ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದೀರಿ, ಆದರೆ ಅಲ್ಲಿ ಶಿಕ್ಷಕರೇ ಇಲ್ಲ. ವಿದ್ಯಾರ್ಥಿಗಳು ಏನು ಮಾಡಬೇಕು? ಇತ್ತೀಚೆಗೆ ಕೆಲವು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದುದನ್ನು ನೀವು ನೋಡಿರಬಹುದು. ತಮಗೆ ಭೌತಶಾಸ್ತ್ರ ಶಿಕ್ಷಕರೇ ಇಲ್ಲ ಎಂದು ಅವರು ದೂರುತ್ತಿದ್ದರು. ನಮಗೆ ಕಟ್ಟಡವೇ ಇಲ್ಲ ಎಂದು ಇನ್ನೊಬ್ಬರು ಹೇಳುತ್ತಿದ್ದರೆ, ತಮ್ಮ ಶಾಲೆಗೆ ಮೇಲ್ಚಾವಣಿಯೇ ಇಲ್ಲ ಎಂದು ಮತ್ತೊಬ್ಬರು ಅಳಲು ತೋಡಿಕೊಳ್ಳುತ್ತಿದ್ದರು. ಇವು ವಿದ್ಯಾರ್ಥಿಗಳು ಎತ್ತುತ್ತಿರುವ ಪ್ರಶ್ನೆಗಳು. ಹಾಗಿರುವಾಗ ನೀವು ಎತ್ತ ಸಾಗುತ್ತಿದ್ದೀರಿ?” ಎಂದು ಅವರು ಹೇಳಿದರು.
ಕೃಪೆ: thewire.in






