‘ಮಸ್ಕ್ ಈಗಷ್ಟೇ ಹಾರುವ ಕಾರು ಕಂಡುಹಿಡಿದಿದ್ದಾರೆ, ಭಾರತದಲ್ಲಿ 5 ಸಾವಿರ ವರ್ಷಗಳ ಹಿಂದೆಯೇ ಇತ್ತು!’: ಟ್ರೋಲ್ ಗೆ ಗುರಿಯಾದ ರಣಬೀರ್ ಕಪೂರ್ ಹೇಳಿಕೆ
ಪುಷ್ಪಕ ವಿಮಾನಕ್ಕೆ ಟೆಸ್ಲಾ ಕಾರಿನ ಹೋಲಿಕೆ ಮಾಡಿದ ʼರಾಮಾಯಣʼ ಸ್ಟಾರ್

ನಟ ರಣಬೀರ್ ಕಪೂರ್ | Screengrab : X
ಮುಂಬೈ: ಎಲಾನ್ ಮಸ್ಕ್ ಅವರ ಹಾರುವ ಕಾರಿನ ಪ್ರಯೋಗಕ್ಕೆ ಐದು ಸಾವಿರ ವರ್ಷಗಳ ಹಿಂದಿನ ಪುಷ್ಪಕ ವಿಮಾನವನ್ನು ಹೋಲಿಸುವ ಮೂಲಕ ಬಾಲಿವುಡ್ ನಟ ರಣಬೀರ್ ಕಪೂರ್ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ‘ಭಾರತದಲ್ಲಿ ಇಂತಹ ತಂತ್ರಜ್ಞಾನ ಬಹಳ ಹಿಂದೆಯೇ ಇತ್ತು’ ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳಿಗೆ ಆಹಾರವಾಗಿದೆ.
ಮುಂಬರುವ ‘ರಾಮಾಯಣ’ ಚಿತ್ರದ ಪ್ರಚಾರದ ಅಂಗವಾಗಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್, ‘ಎಲಾನ್ ಮಸ್ಕ್ ಇತ್ತೀಚೆಗಷ್ಟೇ ಹಾರುವ ಕಾರನ್ನು ಕಂಡುಹಿಡಿದಿರಬಹುದು. ಆದರೆ ಭಾರತದಲ್ಲಿ ಐದು ಸಾವಿರ ವರ್ಷಗಳ ಹಿಂದೆಯೇ ಇಂತಹ ತಂತ್ರಜ್ಞಾನ ಇತ್ತು’ ಎಂದು ಹೇಳಿದ್ದಾರೆ. ಈ ಮೂಲಕ ರಾಮಾಯಣ ಕಾಲದ ಪುಷ್ಪಕ ವಿಮಾನವನ್ನು ಮಸ್ಕ್ ಅವರ ಆಧುನಿಕ ತಂತ್ರಜ್ಞಾನಕ್ಕೆ ಹೋಲಿಸಿದ್ದಾರೆ.
ಸುಮಾ ಅವರೊಂದಿಗಿನ ಸಂವಾದದಲ್ಲಿ ನಿರ್ದೇಶಕ ನಿತೇಶ್ ತಿವಾರಿ, ರಾಕಿಂಗ್ ಸ್ಟಾರ್ ಯಶ್, ರವಿ ದುಬೆ ಮತ್ತು ರಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಭಾಗವಹಿಸಿದ್ದ ರಣಬೀರ್ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಟೆಕ್ಸಾಸ್ ನಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಎಲಾನ್ ಮಸ್ಕ್ ಅವರ ಟೆಸ್ಲಾ ರೋಡ್ಸ್ಟರ್ ಕಾರು ರ್ಯಾಂ ಪ್ ಮೇಲೆ ಚಲಿಸಿ, ಕೆಲ ಸೆಕೆಂಡುಗಳ ಕಾಲ ಗಾಳಿಯಲ್ಲಿ ತಿರುಗಿ ಸುರಕ್ಷಿತವಾಗಿ ಕೆಳಗಿಳಿದಿತ್ತು. ಈ ಪ್ರಯೋಗ ಯಶಸ್ವಿಯಾದಾಗ ಮಸ್ಕ್, ‘ಅಬ್ಬಾ, ಕೆಲಸ ಮಾಡಿತು’ ಎಂದು ಉದ್ಗರಿಸಿದ್ದರು. ಆದರೆ ರಣಬೀರ್ ಅವರ ಮಾತು ಕೇಳಿದರೆ, ‘ಇದರಲ್ಲಿ ವಿಶೇಷವೇನಿದೆ? ರಾವಣ ಇದನ್ನು ಯಾವಾಗಲೋ ಓಡಿಸಿದ್ದ’ ಎಂಬಂತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಂಗ್ಯವಾಡಿದ್ದಾರೆ.
►ʼಪುಷ್ಪಕ ವಿಮಾನʼ ಸಿದ್ಧಪಡಿಸಲು ಎರಡು ವರ್ಷ!
ರಣಬೀರ್ ಅವರ ಹೇಳಿಕೆಗೆ ಮತ್ತೊಂದು ವ್ಯಂಗ್ಯದ ಆಯಾಮವನ್ನೂ ನೆಟ್ಟಿಗರು ಗುರುತಿಸಿದ್ದಾರೆ. ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಅವರ ಪ್ರಕಾರ, ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪುಷ್ಪಕ ವಿಮಾನದ ಕಂಪ್ಯೂಟರ್ ಗ್ರಾಫಿಕ್ಸ್ (ಸಿಜಿಐ) ವಿನ್ಯಾಸ ರೂಪಿಸಲು ಬರೋಬ್ಬರಿ ಎರಡು ವರ್ಷಗಳು ಬೇಕಾಗಿವೆಯಂತೆ.
ಕಂಪ್ಯೂಟರ್ ನಲ್ಲಿ ವಿಮಾನದ ವಿನ್ಯಾಸ ರೂಪಿಸುವುದಕ್ಕೇ ಎರಡು ವರ್ಷ ಬೇಕಾದರೆ, ನೈಜ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವ ಎಲಾನ್ ಮಸ್ಕ್ ಅವರ ಪರಿಶ್ರಮ ಎಷ್ಟಿರಬಹುದು ಎಂಬ ಪ್ರಶ್ನೆಯನ್ನೂ ವ್ಯಂಗ್ಯವಾಗಿ ಮುಂದಿಡಲಾಗಿದೆ.
ಪುರಾಣಗಳ ಪ್ರಕಾರ, ವಿಶ್ವಕರ್ಮನು ಬ್ರಹ್ಮದೇವನಿಗಾಗಿ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದ. ಅದು ಮನಸ್ಸಿನ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿತ್ತು. ಅಷ್ಟೇ ಅಲ್ಲ, ಅದರಲ್ಲಿ ಎಷ್ಟು ಜನರು ಕುಳಿತರೂ ಎಲ್ಲರಿಗೂ ಸಾಕಷ್ಟು ಸ್ಥಳಾವಕಾಶ ಇರುತ್ತಿತ್ತು ಎಂಬ ವರ್ಣನೆಯಿದೆ. ಇಂತಹ ಅದ್ಭುತ ಪೌರಾಣಿಕ ಕಲ್ಪನೆಯನ್ನು ಕೇವಲ ಎರಡು ಆಸನಗಳಿರುವ ಬ್ಯಾಟರಿ ಚಾಲಿತ ಕಾರಿಗೆ ಹೋಲಿಸಿರುವುದು ವಿಜ್ಞಾನ ಮತ್ತು ಪುರಾಣ ಎರಡಕ್ಕೂ ಮಾಡಿದ ಅನ್ಯಾಯ ಎಂಬ ಟೀಕೆಗಳೂ ವ್ಯಕ್ತವಾಗಿವೆ.
►‘ಎಲ್ಲವನ್ನೂ ಕಂಡುಹಿಡಿದರು, ಪೇಟೆಂಟ್ ಮಾತ್ರ ಮಾಡಿಸಲಿಲ್ಲ!’
ರಣಬೀರ್ ಅವರ ಹೇಳಿಕೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯದ ಅಲೆ ಎದ್ದಿದೆ. ‘ಭಾರತೀಯರು ಎಲ್ಲವನ್ನೂ ಕಂಡುಹಿಡಿದಿದ್ದರು. ಆದರೆ ಪೇಟೆಂಟ್ ಮಾಡಿಸಿಕೊಳ್ಳುವುದನ್ನಷ್ಟೇ ಮರೆತುಬಿಟ್ಟರು’ ಎಂದು ನೆಟ್ಟಿಗರು ಛೇಡಿಸಿದ್ದಾರೆ.
‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ರಣಬೀರ್, ಚಿತ್ರದ ಪ್ರಚಾರದ ಭರದಲ್ಲಿ ವಾಸ್ತವ ಪ್ರಜ್ಞೆಯನ್ನೇ ಮರೆತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ. ಕಾವ್ಯ ಮತ್ತು ಪುರಾಣಗಳಲ್ಲಿನ ಭವ್ಯ ಕಲ್ಪನೆಗಳೇ ಬೇರೆ; ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳೇ ಬೇರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಚಿತ್ರಕ್ಕೆ ಪ್ರಚಾರ ಮತ್ತು ನಿರೀಕ್ಷೆ ಹೆಚ್ಚಿಸುವ ಉದ್ದೇಶದಿಂದ ಪೌರಾಣಿಕ ಕಲ್ಪನೆಗಳನ್ನೇ ವೈಜ್ಞಾನಿಕ ಆವಿಷ್ಕಾರಗಳೆಂದು ಬಿಂಬಿಸುವುದು ಅಗ್ಗದ ಪ್ರಚಾರ ತಂತ್ರದಂತೆ ಕಾಣುತ್ತದೆ ಎಂಬ ಟೀಕೆಗಳೂ ಕೇಳಿಬಂದಿವೆ. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಸಿಲುಕಿದಾಗ ಆಕಾಶದಲ್ಲಿ ಹಾರುವ ಆಟಿಕೆ ಕಾರಿನ ಬಗ್ಗೆ ಕಲ್ಪಿಸಿಕೊಂಡು ಸಮಾಧಾನಪಟ್ಟುಕೊಂಡಷ್ಟೇ ಈ ಹೋಲಿಕೆ ಹಾಸ್ಯಾಸ್ಪದ ಎಂಬ ವ್ಯಂಗ್ಯವೂ ವ್ಯಕ್ತವಾಗಿದೆ.
ಪುರಾಣಗಳ ಸಾಹಿತ್ಯಿಕ ಶ್ರೀಮಂತಿಕೆ ಮತ್ತು ಅವುಗಳಲ್ಲಿನ ಕಲ್ಪನಾಶಕ್ತಿಯನ್ನು ಕೊಂಡಾಡುವುದರಲ್ಲಿ ತಪ್ಪಿಲ್ಲ. ಆದರೆ, ಯಾವುದೇ ಸಂಶೋಧನೆ ಅಥವಾ ವೈಜ್ಞಾನಿಕ ಪುರಾವೆಗಳಿಲ್ಲದೆ ಪ್ರಾಚೀನ ಕಥೆಗಳನ್ನು ಆಧುನಿಕ ಇಂಜಿನಿಯರಿಂಗ್ ಗೆ ನೇರವಾಗಿ ಹೋಲಿಸುವುದು ಸರಿಯಲ್ಲ. ಇಂತಹ ಹೇಳಿಕೆಗಳು ಚಿತ್ರದ ಪ್ರಚಾರದ ಅಗ್ಗದ ತಂತ್ರವಾಗಿ ಕಾಣುತ್ತವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ನವೆಂಬರ್ 5 ತೆರೆಗೆ ಬರಲಿರುವ ‘ರಾಮಾಯಣ’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತದೆಯೇ ಅಥವಾ ಚಿತ್ರದ ಪ್ರಚಾರದ ನಡುವೆ ಹುಟ್ಟಿಕೊಂಡಿರುವ ಟ್ರೋಲ್ ಗಳ ಸುಳಿಯಲ್ಲಿ ಸಿಲುಕುತ್ತದೆಯೇ ಎಂಬ ಕುತೂಹಲ ಮೂಡಿದೆ. ರಣಬೀರ್ ಅವರ ಸಂದರ್ಶನವನ್ನು ಎಲಾನ್ ಮಸ್ಕ್ ನೋಡಿದರೆ, ‘ಮುಂದಿನ ಜನ್ಮದಲ್ಲಿ ನಾನು ಭಾರತದಲ್ಲೇ ಹುಟ್ಟುತ್ತೇನೆ’ ಎಂದು ಟ್ವೀಟ್ ಮಾಡಿದರೂ ಅಚ್ಚರಿಯಿಲ್ಲ ಎಂಬ ವ್ಯಂಗ್ಯದೊಂದಿಗೆ ಈ ಚರ್ಚೆ ಮುಂದುವರಿದಿದೆ.






