ಕೋಣೆಯಲ್ಲೇ ಕೇಸರಿ ಕೃಷಿ; ನಾಗ್ಪುರದ ದಂಪತಿಯ ಸಾಧನೆ!

Photo Credit : Instagram
ದಂಪತಿ ಮೊದಲು ಕಾಶ್ಮೀರಕ್ಕೆ ಪ್ರಯಾಣಿಸಿ ಅಲ್ಲಿನ ರೈತರಿಂದ ಕೇಸರಿ ಬೆಳೆಯುವ ವಿಧಾನವನ್ನು ಕಲಿಯಲು ಸುಮಾರು ಮೂರೂವರೆ ತಿಂಗಳು ಕಳೆದ ಬಳಿಕ ಸ್ವಂತ ಕೃಷಿ ಆರಂಭಿಸಿದ್ದಾರೆ.
ಬಿರುಬಿಸಿಲಿಗೆ ಹೆಸರಾದ ನಗರವೊಂದರಲ್ಲಿ ಕೇಸರಿಯನ್ನು ಬೆಳೆಯುವುದು ಸಾಧ್ಯವೇ? ಸಾಧ್ಯವಿದೆ ಎಂದು ಸಾಬೀತುಪಡಿಸಿದ್ದಾರೆ ನಾಗ್ಪುರದ ದಂಪತಿ. ಕೇಸರಿ ಬೆಳೆಯುವುದನ್ನು ಅವರು ಯಶಸ್ವಿ ಉದ್ಯಮವಾಗಿ ಪರಿವರ್ತಿಸಿದ್ದಾರೆ. ಕೇವಲ 400 ಚದರ ಅಡಿಯ ಚಿಕ್ಕ ಕೋಣೆಯಲ್ಲಿ ಅಕ್ಷಯ್ ಹೊಲೆ ಮತ್ತು ದಿವ್ಯಾ ಲೋಹಕರೆ ಹೊಲೆ ಮಣ್ಣು ಅಥವಾ ನೀರನ್ನು ಬಳಸದೆ ವಿಶ್ವದ ಅತ್ಯಂತ ದುಬಾರಿ ಮಸಾಲೆಯಾದ ಕೇಸರಿಯನ್ನು ಬೆಳೆಯುತ್ತಿದ್ದಾರೆ.
ಮಹಾರಾಷ್ಟ್ರದ ದಂಪತಿ ಅಕ್ಷಯ್ ಹೋಲೆ ಮತ್ತು ದಿವ್ಯಾ ಲೋಹಕರೆ ಹೋಲೆ ಅವರು ಕಾಶ್ಮೀರದ ತಂಪಾದ ಹವಾಮಾನದಿಂದ ದೂರವಿರುವ ಪ್ರದೇಶದಲ್ಲಿ ಕೇಸರಿ ಬೆಳೆಯುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. 400 ಚದರ ಅಡಿಯ ಕೋಣೆಯೊಂದನ್ನು ಕೇಸರಿ ಬೆಳೆಯುವ ತಾಣವನ್ನಾಗಿ ಪರಿವರ್ತಿಸಿದ್ದು, ಇದರ ಮೂಲಕ 40ರಿಂದ 50 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
ಕೇಸರಿ ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥವಾಗಿದ್ದು, ಇದು ಬೆಳೆಯಲು ತಂಪಾದ ಮತ್ತು ಶುಷ್ಕ ವಾತಾವರಣದ ಅಗತ್ಯವಿರುತ್ತದೆ. ನಾಗ್ಪುರ ಮೂಲದ ಅಕ್ಷಯ್ ಮತ್ತು ದಿವ್ಯಾ ಅವರು ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಬದಲಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಇಂತಹ ವಾತಾವರಣ ಸೃಷ್ಟಿಸುವುದು ಸವಾಲಾಗಿತ್ತು. ಈ ದಂಪತಿ ಕೇಸರಿ ಬೆಳೆಯಲು ‘ಏರೋಫೋನಿಕ್ಸ್’ ಎಂಬ ತಂತ್ರಜ್ಞಾನವನ್ನು ಬಳಸುತ್ತಾರೆ. ಇದರಲ್ಲಿ ಮಣ್ಣಿನ ಅಗತ್ಯವಿಲ್ಲದೆ ಸಸ್ಯಗಳನ್ನು ಬೆಳೆಯಬಹುದು.
ಅಕ್ಷಯ್ ಮತ್ತು ದಿವ್ಯಾ 2018ರಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸುವ ಆಸಕ್ತಿ ಹೊಂದಿದರು. ಬಿಬಿಎ ಪದವೀಧರರಾದ ಅಕ್ಷಯ್ ಆಗ ಉಡುಪು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ದಿವ್ಯಾ ಬ್ಯಾಂಕ್ ಉದ್ಯೋಗಿಯಾಗಿದ್ದರು. ಈ ದಂಪತಿ ಮೊದಲು ಕಾಶ್ಮೀರಕ್ಕೆ ಪ್ರಯಾಣಿಸಿ ಅಲ್ಲಿನ ರೈತರಿಂದ ಕೇಸರಿ ಬೆಳೆಯುವ ವಿಧಾನವನ್ನು ಕಲಿಯಲು ಸುಮಾರು ಮೂರೂವರೆ ತಿಂಗಳು ಕಳೆದರು. ಅವರ ಆರಂಭಿಕ ಪ್ರಯೋಗವು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ 80 ಚದರ ಅಡಿಯ ಲಂಬವಾದ ಏರೋಫೋನಿಕ್ ಘಟಕ ಸ್ಥಾಪಿಸುವುದರೊಂದಿಗೆ ಪ್ರಾರಂಭವಾಯಿತು.
ಗಿಡಗಳನ್ನು ನೆಲದ ಮೇಲೆ ಅಡ್ಡಲಾಗಿ ಬೆಳೆಸುವ ಬದಲು ಕಂಬಗಳ ರೀತಿಯಲ್ಲಿ ಒಂದರ ಮೇಲೊಂದರಂತೆ ಎತ್ತರಕ್ಕೆ ಬೆಳೆಸಿದ್ದಾರೆ. ಇದರಿಂದ ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಬಹುದಾಗಿದೆ. ಏರೋಫೋನಿಕ್ ಎಂದರೆ ಮಣ್ಣು ಮತ್ತು ಹೆಚ್ಚಿನ ನೀರಿಲ್ಲದೆ ಗಿಡಗಳನ್ನು ಬೆಳೆಸುವ ಆಧುನಿಕ ತಂತ್ರಜ್ಞಾನ. ಇದರಲ್ಲಿ ಗಿಡಗಳ ಬೇರುಗಳು ಗಾಳಿಯಲ್ಲಿ ತೂಗಾಡುತ್ತಿರುತ್ತವೆ. ಅವುಗಳಿಗೆ ಪೋಷಕಾಂಶಗಳಿರುವ ನೀರನ್ನು ಮಂಜಿನ ಹನಿಗಳಂತೆ ಸಿಂಪಡಿಸಲಾಗುತ್ತದೆ.
ಅಕ್ಷಯ್ ಮತ್ತು ದಿವ್ಯಾ ಅವರು 100 ಕೇಸರಿ ಗಡ್ಡೆಗಳ ಜೊತೆಗೆ ಕೃಷಿ ಪ್ರಾರಂಭಿಸಿದ್ದರು. ಇವುಗಳ ಒಟ್ಟು ತೂಕ ಸುಮಾರು 1 ಕೆಜಿ ಇತ್ತು. ಅವರ ಮೊದಲ ಫಸಲಿನಲ್ಲಿ ಕೇವಲ ಕೆಲವು ಗ್ರಾಂಗಳಷ್ಟು ಕೇಸರಿ ಮಾತ್ರ ಸಿಕ್ಕಿತ್ತು. ಹೀಗಾಗಿ ಅವರು ಏರೋಫೋನಿಕ್ಸ್ ವಿಧಾನ ಬಳಸಿದರು. ಅಂದರೆ, ಸಸ್ಯದ ಬೇರುಗಳನ್ನು ಗಾಳಿಯಲ್ಲಿ ನೇತುಹಾಕಿ ಅವುಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಸೂಕ್ಷ್ಮ ಹನಿಗಳ ರೂಪದಲ್ಲಿ ನೀಡಲಾಯಿತು. ಈ ಒಳಾಂಗಣ ವ್ಯವಸ್ಥೆಯು ಕೇಸರಿ ಕೃಷಿಗೆ ಅಗತ್ಯವಾದ ಪರಿಸರವನ್ನು ಹೋಲುವಂತಿದ್ದರಿಂದ ಅಕ್ಷಯ್ ಮತ್ತು ದಿವ್ಯಾ ಅವರಿಗೆ ನಾಗ್ಪುರದಲ್ಲಿ ಕೇಸರಿ ಬೆಳೆಯಲು ಸಾಧ್ಯವಾಗಿದೆ.
ಅವರ ಕೇಸರಿ ಕೃಷಿ ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಒಂದು ನಿರ್ದಿಷ್ಟ ಋತುಮಾನದ ಚಕ್ರವನ್ನು ಅನುಸರಿಸುತ್ತದೆ. ಉಳಿದ ತಿಂಗಳುಗಳಲ್ಲಿ ಮುಂದಿನ ಫಸಲಿಗಾಗಿ ಗಡ್ಡೆಗಳನ್ನು ಬೆಳೆಸುವ ಮತ್ತು ನಿರ್ವಹಿಸುವ ಕೆಲಸ ನಡೆಯುತ್ತದೆ.
ಆರಂಭದಲ್ಲಿ ಸಿಕ್ಕ ಫಲಿತಾಂಶಗಳಿಂದ ಪ್ರೋತ್ಸಾಹಿತರಾಗಿ ಅವರು ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿ ತಮ್ಮ ಉತ್ಪಾದನೆಯನ್ನು ಕ್ರಮೇಣ ವಿಸ್ತರಿಸಿದರು. “ಸುಮಾರು 1600 ಗ್ರಾಂ ಕೇಸರಿ ಉತ್ಪಾದಿಸುವಲ್ಲಿ ಯಶಸ್ವಿಯಾದೆವು. ಅಂದಿನಿಂದ ಎರಡು ಸ್ಥಳಗಳಲ್ಲಿ 480 ಚದರ ಮೀಟರ್ಗಳಷ್ಟು ವಿಸ್ತೀರ್ಣದ ಘಟಕಗಳನ್ನು ಹೊಂದಿದ್ದೇವೆ. ಇದರಲ್ಲಿ ಹಿಂಗ್ನಾದಲ್ಲಿರುವ ನಮ್ಮ ಫ್ಲಾಟ್ನಲ್ಲಿರುವ 400 ಚದರ ಅಡಿಯ ಘಟಕವೂ ಸೇರಿದೆ” ಎಂದು ಅಕ್ಷಯ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಕ್ಷಯ್ ಮತ್ತು ದಿವ್ಯಾ ಆರಂಭದಲ್ಲಿ ಸುಮಾರು 55 ಲಕ್ಷ ರೂ. ಹೂಡಿಕೆ ಮಾಡಿದ್ದರು. ಐದು ವರ್ಷಗಳ ಅವಧಿಯಲ್ಲಿ ಈ ಉದ್ಯಮ 1.3 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ಇವರ ಒಟ್ಟು ಕೇಸರಿ ಉತ್ಪಾದನೆ 45 ಕೆಜಿಗೆ ತಲುಪಿದೆ. 2023-25ರ ನಡುವೆ ಈ ದಂಪತಿ ವಾರ್ಷಿಕವಾಗಿ 40 ಲಕ್ಷದಿಂದ 50 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಅಲ್ಲದೆ, ಇವರು ರೈತರಿಗೆ ತರಬೇತಿ ಕಾರ್ಯಕ್ರಮವನ್ನೂ ನೀಡುತ್ತಾರೆ. ಅವರು ಬೆಳೆಯುವ ಕೇಸರಿಯನ್ನು ತಾವೇ ಖರೀದಿಸುತ್ತಾರೆ.






