ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಸಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ

ಸಾಂದರ್ಭಿಕ ಚಿತ್ರ | Photo Credit : freepik
ಬೆಂಗಳೂರು, ನ.9: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಸಗೊಬ್ಬರ ವಿತರಣೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ. ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ ಎನ್ನಲಾಗಿರುವ ರಸಗೊಬ್ಬರ ಸರಬರಾಜುದಾರರು, ನಕಲಿ ಬಿಲ್ಗಳನ್ನು ಸೃಷ್ಟಿಸಿ ಕೋಟ್ಯಂತರ ರೂ.ಗಳನ್ನು ಕಬಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. 2023-24ನೇ ಸಾಲಿಗೆ ಸಂಬಂಧಿಸಿದಂತೆ ನೀರಿನಲ್ಲಿ ಕರಗುವ ರಸಗೊಬ್ಬರ ವಿತರಣೆ ಮಾಡುವ ಯೋಜನೆಯಲ್ಲಿಯೂ ಅಕ್ರಮ ನಡೆದಿರುವ ಆರೋಪಗಳು ಕೇಳಿ ಬಂದಿವೆ.
ಈ ಯೋಜನೆಯಡಿಯಲ್ಲಿನ ಫಲಾನುಭವಿಗಳಿಗೆ ರಸಗೊಬ್ಬರ ವಿತರಣೆ ಮಾಡದೇ ಇದ್ದರೂ ಸಹ ಫಲಾನುಭವಿಗಳ ಹೆಸರಿನಲ್ಲಿ ಬಿಲ್ಗಳನ್ನು ಸೃಷ್ಟಿಸಲಾಗಿದೆ. ಈ ಸಂಬಂಧ ಕೆಲವು ಬಿಲ್ಗಳು ‘the-file.in’ಗೆ ಲಭ್ಯವಾಗಿವೆ.
ಯಾದಗಿರಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಂಗಳೂರಿನ ವಿನಾಯಕ ಆಗ್ರೋ ಏಜೆನ್ಸಿಗೆ ವಹಿಸಲಾಗಿತ್ತು. ಈ ಏಜೆನ್ಸಿಯು ಯಾವುದೇ ರಸಗೊಬ್ಬರವನ್ನು ವಿತರಣೆ ಮಾಡದೇ ಇದ್ದರೂ ಸಹ ಫಲಾನುಭವಿಗಳ ಹೆಸರಿನಲ್ಲಿ ಬಿಲ್ ಸೃಷ್ಟಿಸಿದೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದೆ.
ಟೆಂಡರ್ ನಡೆಸಲಿಲ್ಲವೇಕೆ?: ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ರಸಗೊಬ್ಬರ ವಿತರಣೆ ಮಾಡಲು ತೋಟಗಾರಿಕೆ ಇಲಾಖೆಯು ಟೆಂಡರ್ ಕರೆದಿಲ್ಲ. ಬದಲಿಗೆ 4 ಜಿ ವಿನಾಯಿತಿ ಪಡೆದಿದೆ. ಟೆಂಡರ್ ಕರೆಯಲು ಸಾಕಷ್ಟು ಅವಕಾಶಗಳು ಇದ್ದರೂ ಸಹ 4 ಜಿ ವಿನಾಯಿತಿ ಪಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಫಲಾನುಭವಿಗಳಿಗೆ ಗೊಬ್ಬರ ವಿತರಣೆ ಆಗಿದೆಯೇ?: 4 ಜಿ ವಿನಾಯಿತಿ ಪಡೆದಿದ್ದ ತೋಟಗಾರಿಕೆ ಇಲಾಖೆಯು ರಸಗೊಬ್ಬರ ವಿತರಣೆಯನ್ನು ವಿನಾಯಕ ಆಗ್ರೋ ಏಜೆನ್ಸಿಗೆ ವಹಿಸಿತ್ತು. ಆದರೆ ವಾಸ್ತವದಲ್ಲಿ ಈ ಏಜೆನ್ಸಿಯು ಫಲಾನುಭವಿ ರೈತರಿಗೆ ರಸಗೊಬ್ಬರ ವಿತರಣೆ ಮಾಡಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ. ಆದರೆ ಫಲಾನುಭವಿಗಳ ಹೆಸರಿನಲ್ಲಿ ಬಿಲ್ಗಳನ್ನು ತಯಾರಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ವಿನಾಯಕ ಆಗ್ರೋ ಏಜೆನ್ಸಿಸ್ 2024ರ ಮಾರ್ಚ್ನ ವಿವಿಧ ದಿನಗಳಂದು ನೀಡಿರುವ ಬಿಲ್ಗಳ ಬಗ್ಗೆಯೇ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. 2024 ಮಾರ್ಚ್ 12ರಂದು ನೀಡಿದ್ದ ಬಿಲ್ನಲ್ಲಿ (ಬಿಲ್ ನಂ 413) 8,64,000ರೂ.ನಮೂದಿಸಲಾಗಿದೆ. ಆದರೆ ಬಿಲ್ನಲ್ಲಿ ಸರಬರಾಜುದಾರರ ರಿಜಿಸ್ಟ್ರೇಷನ್ ಸಂಖ್ಯೆಯೇ ಇಲ್ಲ. ಅಲ್ಲದೇ ಇದಕ್ಕೆ ಇ ವೇ ಬಿಲ್ ಕೂಡ ಇಲ್ಲ ಎಂದು ಗೊತ್ತಾಗಿದೆ.
2024ರ ಮಾರ್ಚ್ 12ರಂದು ನೀಡಿರುವ ಬಿಲ್ (ನಂ 414)ರಲ್ಲಿ 3,74,000 ರೂ., ಇದೇ ಬಿಲ್ ಸಂಖ್ಯೆ 414ರಲ್ಲಿ 2024ರ ಮಾರ್ಚ್ 1ರಂದು 94,000 ರೂ. ಎಂದು ನಮೂದಿಸಲಾಗಿದೆ. ಬಿಲ್ನಲ್ಲಿ ಸರಿಯಾದ ದಿನಾಂಕವನ್ನು ನಮೂದಿಸಿಲ್ಲ. ಹಲವು ಬಿಲ್ಗಳಲ್ಲಿ ಸರಬರಾಜುದಾರರ ಸಹಿಯೇ ಇಲ್ಲ. ಹಾಗೆಯೇ ಬಿಲ್ಗಳಲ್ಲಿ ನಮೂದಿಸಿರುವ ದಿನಾಂಕಗಳಲ್ಲೂ ಹಲವು ವ್ಯತ್ಯಾಸಗಳು ಕಂಡು ಬಂದಿವೆ.
ಬಿಲ್ ನಂ 391ರಲ್ಲಿ 3,33,000 ರೂ. ನಮೂದಿಸಲಾಗಿದೆ. ರಸಗೊಬ್ಬರದ 87 ಬ್ಯಾಗ್ಗಳನ್ನು ವಿತರಿಸಲಾಗಿದೆ ಎಂದು ಹೇಳಲಾಗಿದೆ. ಬಿಲ್ ನಂ 390ರಲ್ಲಿ 87, 480 ರೂ., ಬಿಲ್ ನಂ 392ರಲ್ಲಿ 1,49,800 ರೂ. ಎಂದು ನಮೊದಿಸಲಾಗಿದೆ. 37-45 ಬ್ಯಾಗ್ಗಳನ್ನು ವಿತರಿಸಲಾಗಿದೆ ಎಂದು ಹೇಳಲಾಗಿದೆ.
ಬಿಲ್ ನಂ 116ರಲ್ಲಿ 65, 909 ರೂ. , ಬಿಲ್ ನಂ 317ರಲ್ಲಿ 67, 200 ರೂ. ಎಂದು ನವೂದಿಸಲಾಗಿದೆ. ಆದರೆ ಈ ಬಿಲ್ಗಳಲ್ಲಿ ದಿನಾಂಕವನ್ನೇ ನವೂದಿಸಿಲ್ಲ. ಅಲ್ಲದೇ ಸರಬರಾಜುದಾರರ ಸಹಿ ಕೂಡ ಇಲ್ಲದಿರುವುದು ಕಂಡು ಬಂದಿದೆ. ಅದೇ ರೀತಿ ಬಿಲ್ ನಂ 112, ಬಿಲ್ ನಂ 115ರಲ್ಲಿಯೂ ದಿನಾಂಕ ನವೂದಿಸಿಲ್ಲ ಮತ್ತು ಬಿಲ್ ನೀಡಿದವರ ಸಹಿ ಇಲ್ಲ. 113, 115, 116, 117 ರಲ್ಲಿಯೂ ಸಹ ದಿನಾಂಕವಿಲ್ಲ ಮತ್ತು ಸರಬರಾಜುದಾರರ ಸಹಿ ಕಂಡು ಬಂದಿಲ್ಲ. ಬಿಲ್ ನಂಬರ್ 413ರಲ್ಲಿ ದಿನಾಂಕವನ್ನು ನವೂದಿಸಲಾಗಿದೆ. ಆದರೆ ಬಿಲ್ನಲ್ಲಿ ಸರಬರಾಜುದಾರರ ಸಹಿಯೇ ಇಲ್ಲ. ಮತ್ತೊಂದು ಸಂಗತಿ ಎಂದರೇ 4 ಜಿ ವಿನಾಯಿತಿ ಪಡೆದಿರುವ ವಿನಾಯಕ ಆಗ್ರೋ ಏಜೆನ್ಸಿಸ್ ಮತ್ತು ಸನ್ನತಿ ಏಜೆನ್ಸಿಯು ಸ್ವಂತವಾಗಿ ಯಾವುದೇ ರಸಗೊಬ್ಬರವಾಗಲೀ ಪ್ಲಾಟ್ ಪ್ರೊಟೆಕ್ಷನ್ನ ಸರಕನ್ನು ಉತ್ಪಾದಿಸುವುದಿಲ್ಲ. ಹಾಗೂ ಯಾವುದೇ ರೀತಿಯ ಬೀಜ ಉತ್ಪಾದನೆ ಮಾಡುವುದಿಲ್ಲ. ಆದರೂ ಸಹ ಟೆಂಡರ್ ಕರೆಯದೇ 4 ಜಿ ವಿನಾಯಿತಿಯಲ್ಲಿ ಈ ಏಜೆನ್ಸಿಗಳಿಗೆ ರಸಗೊಬ್ಬರ ಪೂರೈಕೆ, ಬೀಜ ಪೂರೈಕೆ ಹಾಗೂ ಮೋಹಕ ಬಲೆಗಳ ಪೂರೈಕೆಗೆ ಅನುಮತಿ ನೀಡಿರುವುದು ಸಹ ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಹಾಗೆಯೇ ಈ ಕಂಪೆನಿಗಳು ರಸಗೊಬ್ಬರವನ್ನು ಉತ್ಪಾದನೆ ಮಾಡುವುದಿಲ್ಲ ಎಂದಾದರೇ ಬೇರೆ ಕಂಪೆನಿಗಳಿಂದಲೇ ರಸಗೊಬ್ಬರವನ್ನು ಖರೀದಿಸಬೇಕು. ಈ ಸಂಸ್ಥೆಗಳು ಅಥವಾ ಕಂಪೆನಿಗಳು ತೋಟಗಾರಿಕೆ ಇಲಾಖೆಗೆ ನೀಡಿದ ಬಿಲ್ಗಳಿಗೆ ಅನುಸಾರವಾಗಿ ಬೇರೆ ಕಂಪೆನಿಯಿಂದ ರಸಗೊಬ್ಬರ ಖರೀದಿಸಿರಬೇಕು. ಆಗ ಮಾತ್ರ ಈ ಕಂಪೆನಿಗಳು, ಸಂಸ್ಥೆಗಳು ಪೂರೈಕೆ ಮಾಡಲು ಸಾಧ್ಯ ಎನ್ನುತ್ತಾರೆ ಅಧಿಕಾರಿಯೊಬ್ಬರು.
ಈ ಯೋಜನೆ ಮಾರ್ಗಸೂಚಿ ಪ್ರಕಾರ ಸಾಮಾನ್ಯ ವರ್ಗದ ರೈತರಿಗೆ ಶೇ. 40ರಷ್ಟು ಸಬ್ಸಿಡಿ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 50ರಷ್ಟು ಸಬ್ಸಿಡಿ ನೀಡಬೇಕು. ಎಂಪ್ಯಾನಲ್ ಆಗಿರುವ ಕಂಪೆನಿಗಳಿಂದ ರೈತರು ರಸಗೊಬ್ಬರ ಖರೀದಿಸಿದರೇ ಸರಕಾರಿ ಪಾಲುದಾರಿಕೆ ಹೊರತುಪಡಿಸಿ ಉಳಿದ ಹಣವನ್ನು ಫಲಾನುಭವಿಗಳು ಈ ಸಂಸ್ಥೆಗೆ ಪಾವತಿಸಬೇಕು. ಆದರೆ ಫಲಾನುಭವಿ ರೈತರು ತಮ್ಮ ಸ್ವಂತ ಹಣವನ್ನು ಭರಿಸಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡು ಬಂದಿಲ್ಲ. ರೈತರು ಹಣ ಪಾವತಿಸದಿದ್ದರೇ ಏಜೆನ್ಸಿಗಳು ಹೇಗೆ ರಸಗೊಬ್ಬರವನ್ನು ಪೂರೈಕೆ ಮಾಡಿದರು ಎಂಬ ಪ್ರಶ್ನೆಯೂ ಎದುರಾಗಿದೆ.
ಎಂಪ್ಯಾನಲ್ ಆಗಿರುವ ಕಂಪೆನಿಗಳಿಂದಲೇ ರಸಗೊಬ್ಬರ ಖರೀದಿಸಲು ಫಲಾನುಭವಿ ರೈತರಿಗೆ ಮುಕ್ತ ಅವಕಾಶವಿದೆ. ಎಂಪ್ಯಾನಲ್ ಆಗಿರುವ ಪೈಕಿ ಬಹುತೇಕ ಕಂಪೆನಿಗಳು ಬೆಂಗಳೂರು ನಗರದಲ್ಲಿವೆ. ಹೀಗಾಗಿ ನೂರಾರು ಕಿಲೋ ಮೀಟರ್ ದೂರದ ಪ್ರದೇಶಗಳಲ್ಲಿರುವ ಫಲಾನುಭವಿ ರೈತರು ರಸಗೊಬ್ಬರ ಖರೀದಿಗಾಗಿ ಬೆಂಗಳೂರು ನಗರಕ್ಕೆ ಹೋಗಲು ಸಾಧ್ಯವೇ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಫಲಾನುಭವಿ ರೈತರೊಬ್ಬರು.
‘ಕೋಟ್ಯಂತರ ರೂ.ಮೌಲ್ಯದ ವಿತರಣೆಯಾಗಿ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ವಾಸ್ತವದಲ್ಲಿ ಯಾವುದೇ ವಿತರಣೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲ ಬಿಲ್ಗಳು ಮತ್ತು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅಕ್ರಮಗಳು ನಡೆದಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಸಹ ಸ್ಪಷ್ಟವಾಗಿದೆ. ರೈತರ ಹೆಸರು ಪಟ್ಟಿ ಮತ್ತು ಹಣಕಾಸು ದಾಖಲೆಗಳನ್ನು ಪರಿಶೀಲಿಸಿದರೆ ಮತ್ತಷ್ಟು ಅಕ್ರಮಗಳು ಹೊರಬರಲಿವೆ,’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು.







