Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಷ್ಟ್ರ ರಾಜಕಾರಣ: ಯಾರಿಗುಂಟು?...

ರಾಷ್ಟ್ರ ರಾಜಕಾರಣ: ಯಾರಿಗುಂಟು? ಯಾರಿಗಿಲ್ಲ?

ವಾರ್ತಾಭಾರತಿವಾರ್ತಾಭಾರತಿ1 Jan 2026 12:21 PM IST
share
ರಾಷ್ಟ್ರ ರಾಜಕಾರಣ: ಯಾರಿಗುಂಟು? ಯಾರಿಗಿಲ್ಲ?
2025 ಹಿನ್ನೋಟ - 2026 ಮುನ್ನೋಟ

• ವಿಶೇಷ ಪ್ರತಿನಿಧಿ

ನಮ್ಮ ಬದುಕಿನ ಮತ್ತೊಂದು ಮಹತ್ವದ ವರ್ಷ ಕಣ್ಮರೆಯಾಗುತ್ತಿದೆ.

‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ’- ಇದು ಬೇಂದ್ರೆ ಅವರ ಕವನ.

ಕ್ಯಾಲೆಂಡರ್ ಪ್ರಕಾರ ಯುಗಾದಿ ಪ್ರತೀ ವರ್ಷ ಬರುತ್ತದೆ. ಅಷ್ಟೇ ಅಲ್ಲ, ರಮಝಾನ್, ಬಕ್ರೀದ್, ಕ್ರಿಸ್ಮಸ್, ದೀಪಾವಳಿ, ಬುದ್ಧ ಪೂರ್ಣಿಮಾ ಎಲ್ಲವೂ ಮರಳಿ ಮರಳಿ ಬರುತ್ತವೆ.

ಆದರೆ, ಕಳೆದು ಹೋದ ವರ್ಷ ಮತ್ತು ಸಮಯ ಇನ್ನೆಂದೂ ಬರಲಾರದು.

ಕಳೆದು ಹೋದ ವರ್ಷದ ಪ್ರಮುಖ ಘಟನೆಗಳು ಕಾಲ ಗರ್ಭ ಸೇರಿದರೂ, ಆಗಾಗ ನಮ್ಮ ಸ್ಮತಿ ಪಟಲದಲ್ಲಿ ಹಾದು ಹೋಗುತ್ತವೆ.

ಕಹಿ ಘಟನೆಗಳು ಅಂತಃಕರಣ ಕಲಕುತ್ತವೆ. ಈ ಸಾಲಿಗೀಗ 2025 ಸೇರುತ್ತಿದೆ.

ಸಾಲು ಸಾಲು ದುರಂತ

ವರ್ಷದ ಆರಂಭದಲ್ಲೇ ಸಾಲು ಸಾಲು ದುರಂತಗಳ ಕಹಿ. ಧಾರ್ಮಿಕ ಉತ್ಸವಗಳು; ಕ್ರೀಡಾ ವಿಜಯೋತ್ಸವಗಳಲ್ಲಿ ಕಾಲ್ತುಳಿತ. ಅಮಾಯಕರ ಬಲಿ. ಬಂದೋಬಸ್ತ್ ನಿರ್ವಹಣೆ ಲೋಪ ದುರಂತಗಳಿಗೆ ಕಾರಣ. ವಿಪರ್ಯಾಸವೆಂದರೆ ಈ ಘಟನೆಗಳ ನೈತಿಕ ಹೊಣೆಯನ್ನು ಯಾರೂ ಹೊರಲಿಲ್ಲ. ಇಲ್ಲಿ ಅಮಾಯಕರ ಜೀವಗಳಿಗೆ ಬೆಲೆ ಇಲ್ಲ ಎಂದು ಮತ್ತೆ ಖಚಿತವಾಯಿತು.

ಜನವರಿ 8ರಂದು ‘ತಿರುಮಲ ವೈಕುಂಠ ದ್ವಾರ ದರ್ಶನ’ದ ಟೋಕನ್‌ಗಳ ವಿತರಣೆ ವೇಳೆ ಕಾಲ್ತುಳಿತ ಉಂಟಾಗಿ ಆರು ಮಂದಿ ಮೃತಪಟ್ಟರು. ಅದೇ ತಿಂಗಳು 29ರಂದು ಪ್ರಯಾಗ ರಾಜ್‌ನಲ್ಲಿ ಮಹಾಕುಂಭ ಪುಣ್ಯಸ್ನಾನಕ್ಕೆ ಲಕ್ಷಾಂತರ ಭಕ್ತರು ಜಮಾಯಿಸಿದ್ದ ಸಮಯ ನೂಕುನುಗ್ಗಲು ಉಂಟಾಗಿ 30ಕ್ಕೂ ಹೆಚ್ಚು ಜೀವಗಳು ಬಲಿಯಾದವು. ಅಲ್ಲಿ ನಿಜವಾಗಿ ಬಲಿಯಾದವರು ನೂರಾರು ಮಂದಿ ಎಂಬ ಆರೋಪವೂ ಕೇಳಿ ಬಂತು. ಫೆ. 15ರಂದು ಮಹಾಕುಂಭಕ್ಕೆ ಹೋಗಲು ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಗುಂಪು ರೈಲು ಹತ್ತುವ ಸಂದರ್ಭದಲ್ಲಿ ನಡೆದ ನೂಕಾಟ-ತಳ್ಳಾಟದಲ್ಲಿ 18 ಜನರ ಪ್ರಾಣ ಹೋಯಿತು. ಅಗತ್ಯ ಸಂಖ್ಯೆಯ ರೈಲು ಒದಗಿಸಲು ಕೇಂದ್ರ ಸರಕಾರ, ರೈಲ್ವೆ ಅಧಿಕಾರಿಗಳು ವಿಫಲವಾಗಿದ್ದು ದುರ್ಘಟನೆಗೆ ಕಾರಣ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4ರಂದು ಐಪಿಎಲ್ ಚಾಂಪಿಯನ್ಸ್ ‘ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡದ ವಿಜಯೋತ್ಸವ ವೇಳೆಯ ಕಾಲ್ತುಳಿತದಲ್ಲಿ 11 ಮಂದಿ ಜೀವ ಕಳೆದುಕೊಂಡರು. ಕ್ರೀಡಾಂಗಣಕ್ಕೆ ಹೋಗುವ ಎಲ್ಲ ರಸ್ತೆಗಳಲ್ಲಿ ಜನ ಸಾಗರವೇ ಕಿಕ್ಕಿರಿದಿತ್ತು. ‘ಪಂದ್ಯ ಮುಗಿದ ಮರುದಿನವೇ ವಿಜಯೋತ್ಸವ ಬೇಡ’ ಎಂದು ರಾಜ್ಯ ಸರಕಾರಕ್ಕೆ ವರದಿ ಕೊಟ್ಟ ಪೊಲೀಸರನ್ನೇ ಹೊಣೆ ಮಾಡಲಾಯಿತು. ನಗರ ಪೊಲೀಸ್ ಕಮಿಷನರ್ ಆಗಿದ್ದ ಬಿ. ದಯಾನಂದ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ‘ತಲೆದಂಡ’ ಪಡೆಯಲಾಯಿತು.

ಸೆಪ್ಟಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ಖ್ಯಾತ ನಟ, ರಾಜಕಾರಣಿ ವಿಜಯ್ ಸಮಾವೇಶದಲ್ಲಿ ನೂಕು ನುಗ್ಗಲಾಗಿ 40 ಮಂದಿ ಬಲಿಯಾದರು. ಘಟನೆ ಬಳಿಕ ವಿಜಯ್ ಸ್ಥಳದಿಂದ ಪರಾರಿಯಾಗಿದ್ದರಿಂದ ಜನಾಕ್ರೋಶ ವ್ಯಕ್ತವಾಯಿತು. ನವೆಂಬರ್ 1ರ ಏಕಾದಶಿ ದಿನ ಶ್ರೀಕಾಕುಳಂ ಜಿಲ್ಲೆ ಕಾಶಿಬುಗ್ಗ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ದರ್ಶನದ ವೇಳೆ ನಡೆದ ದುರಂತದಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿದರು.

ನಿಲ್ಲದ ಉಗ್ರರ ಕಾಟ

ಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸರನ್ ಕಣಿವೆಯಲ್ಲಿ ಎಪ್ರಿಲ್ 22ರಂದು ಭಯೋತ್ಪಾದಕರು ಯದ್ವಾತದ್ವ ಗುಂಡು ಹಾರಿಸಿ 26 ಮಂದಿಯನ್ನು ಹತ್ಯೆಗೈದರು. ಇವರಲ್ಲಿ 25 ಜನ ಪ್ರವಾಸಿಗರು. ಒಬ್ಬ ಸ್ಥಳೀಯ. ಎಲ್‌ಇಟಿಗೆ ಸೇರಿದ ‘ದಿ. ರೆಸಿಸ್ಟೆಂಟ್ ಫ್ರಂಟ್’ (ಟಿಆರ್‌ಎಫ್) ಘಟನೆ ಹೊಣೆ ಹೊತ್ತಿತು. ಪ್ರತೀಕಾರವಾಗಿ ಗಡಿಯಾಚೆಗಿನ ಉಗ್ರರ ನೆಲೆಗಳನ್ನು ನೆಲಸಮ ಮಾಡಲು ಕೇಂದ್ರ ಸರಕಾರ ‘ಆಪರೇಷನ್ ಸಿಂಧೂರ’ ನಡೆಸಿತು. ಈ ವೇಳೆ ಪತನಗೊಂಡ ವಿಮಾನಗಳು ಯಾರವು ಎಂಬುದು ಇನ್ನೂ ಖಚಿತವಾಗಿಲ್ಲ. ಈ ಕಹಿ ಘಟನೆ ಮಾಸುವ ಮೊದಲೇ ದಿಲ್ಲಿಯ ಕೆಂಪು ಕೋಟೆ ಬಳಿ ನವೆಂಬರ್ 10ರಂದು ಕಾರ್ ಬಾಂಬ್ ಸ್ಫೋಟಿಸಲಾಯಿತು. ಈ ಸ್ಫೋಟಕ್ಕೆ 15 ಜನ ಬಲಿಯಾದರು. ಪುಲ್ವಾಮಾದ ವೈದ್ಯ ಡಾ. ಉಮರ್ ಮುಹಮ್ಮದ್ ಆತ್ಮಾಹುತಿ ದಾಳಿಕೋರ ಎಂದು ಗುರುತಿಸಲಾಯಿತು. ಜೆಇಎಂ ಸಂಘಟನೆಯ ಕೈವಾಡ ಘಟನೆ ಹಿಂದಿರಬಹುದು ಎಂದು ಶಂಕಿಸಲಾಯಿತು. ನವೆಂಬರ್ 14ರಂದು ಶ್ರೀನಗರದ ನೌಗಾವ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಸೇರಿ ಒಂಭತ್ತು ಮಂದಿಯ ಪ್ರಾಣಕ್ಕೆ ಕುತ್ತು ತಂದಿತು.

ಮತಗಳ್ಳತನದ ಗಂಭೀರ ಆರೋಪ

ಈ ವರ್ಷದ ರಾಷ್ಟ್ರೀಯ ರಾಜಕಾರಣದ ಅತಿದೊಡ್ಡ ಹೈಲೈಟ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಮತಗಳ್ಳತನದ ಗಂಭೀರ ಆರೋಪ. ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿಕೊಂಡು ಮತಗಳ್ಳತನ ಮಾಡಿವೆ ಎಂದು ರಾಹುಲ್ ಗಾಂಧಿ ದಾಖಲೆಗಳ ಸಹಿತ ಆರೋಪ ಮಾಡಿದರು. ಆಮೇಲೆ ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಆರೋಪ ಬಂತು. ದೇಶದ ವಿವಿಧೆಡೆ ಇದೇ ರೀತಿಯಲ್ಲಿ ಮತದಾರರನ್ನು ಟಾರ್ಗೆಟ್ ಮಾಡಿ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಹರ್ಯಾಣದಲ್ಲೂ ಹೀಗೆ ನಡೆದಿದೆ ಎಂದು ಅವರು ದಾಖಲೆ ಬಿಡುಗಡೆ ಮಾಡಿದರು. ಚುನಾವಣಾ ಆಯೋಗ ಮತಗಳ್ಳತನದಲ್ಲಿ ಬಿಜೆಪಿ ಜೊತೆ ಸೇರಿಕೊಂಡಿದೆ ಎಂದೇ ರಾಹುಲ್ ಗಾಂಧಿ ನೇರ ಆರೋಪ ಮಾಡಿದರು. ದೇಶಾದ್ಯಂತ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಈ ಬಗ್ಗೆ ಪ್ರತಿಭಟನೆ ನಡೆಸಿದವು.

ಆದರೆ ಚುನಾವಣಾ ಆಯೋಗ ರಾಹುಲ್ ಗಾಂಧಿ ಮಾಡಿದ ಗಂಭೀರ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿತೇ ವಿನಃ ಅವರ ನಿರ್ದಿಷ್ಟ ಆರೋಪಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ರಾಹುಲ್ ಗಾಂಧಿ ವಿರುದ್ಧವೇ ಪ್ರತಿ ಆರೋಪ ಮಾಡಿತು. ಬಿಜೆಪಿಯೂ ಚುನಾವಣಾ ಆಯೋಗದ ಜೊತೆ ಸೇರಿಕೊಂಡು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿತು. ಕಾಂಗ್ರೆಸ್ ಕೂಡ ಈ ಹಿಂದೆ ಮತಗಳ್ಳತನ ಮಾಡಿಯೇ ಅಧಿಕಾರಕ್ಕೆ ಬಂದಿದ್ದು ಎಂದು ಪ್ರತಿ ಆರೋಪ ಮಾಡಿತು.

ರಾಹುಲ್ ಗಾಂಧಿ ಮಾಡಿರುವ ಆರೋಪ ನಿರಾಧಾರ ಎಂದು ಸಾಬೀತುಪಡಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿತ್ತು. ಅದಕ್ಕೆ ಸೂಕ್ತ ದಾಖಲೆಗಳನ್ನು ಅದು ಬಿಡುಗಡೆ ಮಾಡಬೇಕಿತ್ತು. ಆದರೆ ಅದಾಗಲಿಲ್ಲ. ಬದಲಿಗೆ ಚುನಾವಣಾ ಆಯುಕ್ತರೂ ರಾಜಕಾರಣಿಗಳ ಧಾಟಿಯಲ್ಲಿ ಮಾತಾಡಿ ನುಣುಚಿಕೊಂಡರು. ಹಾಗಾಗಿ ಮತಗಳ್ಳತನ ಕುರಿತ ರಾಹುಲ್ ಗಾಂಧಿ ಆರೋಪ ಇನ್ನೂ ಚರ್ಚೆಯಲ್ಲಿದೆ.

ಬಿಹಾರದಲ್ಲಿ ಎನ್‌ಡಿಎ ಜಯಭೇರಿ

ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ವೋಟ್ ಚೋರಿ’ ಆರೋಪ ಮುಂದಿಟ್ಟುಕೊಂಡು ಕೈಗೊಂಡಿದ್ದ ‘ಜನ ಅಧಿಕಾರ್ ಯಾತ್ರೆ’ ನಡುವೆಯೂ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯಭೇರಿ ಬಾರಿಸಿತು. ಬಿಜೆಪಿ 89, ಜೆಡಿಯು 85 ಮತ್ತು ಎಲ್‌ಜೆಪಿ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಭಾರೀ ಹಿನ್ನಡೆ ಅನುಭವಿಸಿತು. ಆರ್‌ಜೆಡಿ 25 ಮತ್ತು ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು.

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ 65 ಲಕ್ಷ ಹೆಸರನ್ನು ತೆಗೆಯಲಾಯಿತು. ಎನ್‌ಡಿಎ ಗೆಲುವಿನಲ್ಲಿ ಮತ ಪರಿಷ್ಕರಣೆ ಪಾಲೂ ಇದೆಯೇ? ಅಧಿಕ ಸಂಖ್ಯೆ ಮಹಿಳೆಯರು ಮತದಾನ ಮಾಡಿದ್ದರ ಹಿಂದೆ ಚುನಾವಣೆ ಸಮಯದಲ್ಲಿ 1.4 ಕೋಟಿ ಖಾತೆಗಳಿಗೆ ಜಮಾ ಮಾಡಿದ ತಲಾ 10 ಸಾವಿರ ರೂಪಾಯಿ ಕೊಡುಗೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಒಟ್ಟಾರೆ ಎನ್‌ಡಿಎಗಿದ್ದ ಕೆಲವು ಅನುಕೂಲಗಳು ಮಹಾಘಟಬಂಧನ್‌ಗೆ ಇರಲಿಲ್ಲ ಎನ್ನುವ ಸತ್ಯ ಮೇಲ್ನೋಟಕ್ಕೆ ಕಾಣು ವಂತಹದ್ದು.

ಫೆಬ್ರವರಿಯಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಪುನಃ ಅಧಿಕಾರ ಹಿಡಿಯಿತು. ಒಟ್ಟು 70 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನ ಗೆದ್ದು, ರೇಖಾ ಗುಪ್ತಾ ಮುಖ್ಯಮಂತ್ರಿಯಾದರು. ಹಿಂದಿನ ಯುಪಿಎ ಸರಕಾರದ ವಿರುದ್ಧದ ಭ್ರಷ್ಟಾಚಾರ ವಿರೋಧಿ ಆಂದೋಲನದ ಅಲೆಯಲ್ಲಿ ಗೆದ್ದಿದ್ದ ‘ಆಮ್ ಆದ್ಮಿ ಪಕ್ಷ’(ಎಎಪಿ) 22 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತು.

ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ರಾಜ್ಯಸಭೆಯ ಅಧ್ಯಕ್ಷರಾಗಿದ್ದ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಅನಿರೀಕ್ಷಿತ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಆಯ್ಕೆಯಾದರು. ಜಗದೀಪ್ ಧನ್ಕರ್ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದರಾದರೂ, ವಾಸ್ತವ ಬೇರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ. ನಿಜವಾದ ಕಾರಣವೇನೇ ಇರಲಿ, ಧನ್ಕರ್ ರಾಜೀನಾಮೆಯನ್ನು ಅವಸರದಲ್ಲಿ ಪಡೆದು ಅಂಗೀಕರಿಸಲಾಯಿತು.

ಎಎಪಿ ನಾಯಕರಾದ ಅರವಿಂದ ಕೇಜ್ರಿವಾಲ್, ಮನಿಷ್ ಸಿಸೋಡಿಯಾ ಭ್ರಷ್ಟಾಚಾರ ಹಗರಣದಲ್ಲಿ ಬಂಧಿತರಾಗಿದ್ದು ವಿಪರ್ಯಾಸ. 14 ವರ್ಷಗಳ ಹಿಂದೆ ಅಣ್ಣಾ ಹಝಾರೆ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ ಎಎಪಿಗೆ ಹಾಗೂ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಲಾಭ ಮಾಡಿಕೊಟ್ಟಿತು. ಈಗ ಅದೇ ಆಂದೋಲನದ ರೂವಾರಿಗಳು ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಮನೆ ಸೇರಿದ್ದಾರೆ

2026ರ ಮುನ್ನೋಟ

ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳ ದೃಷ್ಟಿಯಿಂದ 2026 ಮಹತ್ವದ ವರ್ಷ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆ ಎದುರಿಸಲಿವೆ. ಈ ಚುನಾವಣೆ ಬಿಜೆಪಿಗೆ ಹಾಗೂ ವಿಪಕ್ಷಕ್ಕೆ ಅಗ್ನಿ ಪರೀಕ್ಷೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜೋಡಿ ಒಂದೊಂದೇ ರಾಜ್ಯಗಳಲ್ಲಿ ಆಧಿಪತ್ಯ ಸ್ಥಾಪಿಸುತ್ತಿದೆ. ಐದು ರಾಜ್ಯಗಳ ಪೈಕಿ ಅಸ್ಸಾಂ ಹೊರತುಪಡಿಸಿ, ಬೇರೆಡೆ ಬಿಜೆಪಿ ಅಧಿಕಾರದಲ್ಲಿ ಇಲ್ಲ. ಹೀಗಾಗಿ, ಮಿಕ್ಕ ರಾಜ್ಯಗಳು ಅದಕ್ಕೆ ಮುಖ್ಯವಾಗಿದೆ. ಎದುರಾಳಿಗಳನ್ನು ಬಗ್ಗುಬಡಿಯಲು ‘ಮತದಾರರ ಪಟ್ಟಿ ಪರಿಷ್ಕರಣೆ’ ಅಸ್ತ್ರ (ಎಸ್‌ಐಆರ್) ಸಿಕ್ಕಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೂ ಇದು ಸವಾಲಿನ ಚುನಾವಣೆ. ಎಡಪಂಥದ ಕೋಟೆ ಕೇರಳವೂ ಬಿಜೆಪಿಗೆ ಬೇಕು. ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಖಾತೆ ತೆರೆದಿರುವುದು ಬಿಜೆಪಿಗೆ ನವ ಚೈತನ್ಯ ತಂದಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು ಸ್ಥಾನ 294. ಮುರ್ಷಿದಾಬಾದ್, ಮಾಲ್ಡಾ ಮತ್ತಿತರ ಕಡೆ ಮುಸ್ಲಿಮರದೇ ಪ್ರಾಬಲ್ಯ. ಲಭ್ಯವಿರುವ ಅಂಕಿಸಂಖ್ಯೆಯ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಸಂಖ್ಯೆ ಶೇ. 24. ಸುಮಾರು 50 ಕ್ಷೇತ್ರಗಳಲ್ಲಿ ಅವರು ನಿರ್ಣಾಯಕ. ಈಗ ಮಮತಾಗೆ ತಲೆ ನೋವಾಗಿರುವುದು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ಬಾಬರಿ ಮಸೀದಿ ಮತ್ತು ರಾಮಮಂದಿರ ವಿವಾದ.

ಟಿಎಂಸಿ ಭರತ್ಪುರ ಶಾಸಕ ಹುಮಾಯೂನ್ ಕಬೀರ್ ಮುರ್ಷಿದಾಬಾದ್‌ನಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ನೆಲಸಮವಾದ ಬಾಬರಿ ಮಸೀದಿಯ ಪ್ರತಿರೂಪ ಇದಾಗಿದೆ. ಪ್ರತಿಯಾಗಿ ಬಿಜೆಪಿ ನಾಯಕರು ಬೆಹ್ರಾಂಪುರದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಇದೇ ಚುನಾವಣೆಯ ಕಾರ್ಯಸೂಚಿ ಆಗಬಹುದೇನೊ ಎಂಬ ಆತಂಕ ಮಮತಾಗೆ. ಸತತ ಮೂರು ಚುನಾವಣೆಗಳಿಂದ ತಮ್ಮ ಕೈ ಹಿಡಿದಿರುವ ಮುಸ್ಲಿಮರು ದೂರ ಆಗುವರೇನೋ ಎಂಬ ಚಿಂತೆ; ಇನ್ನೊಂದೆಡೆ, ಹಿಂದೂ ಮತಗಳು ಬಿಜೆಪಿ ಪರ ಧ್ರುವೀಕರಣವಾಗ ಬಹುದೇನೊ ಎನ್ನುವ ಕಳವಳ.

ರಾಜ್ಯದಲ್ಲಿ ಟಿಎಂಸಿ 2011ರಿಂದ ಸತತವಾಗಿ ಅಧಿಕಾರ ಹಿಡಿಯುತ್ತಿದೆ. ಈ ಸಲವೂ ಅದು ಗೆಲ್ಲುವುದೇ ಅಥವಾ ಬಿಜೆಪಿಗೆ ವಿಧಾನಸಭೆ ಬಿಟ್ಟುಕೊಡುವುದೇ? ‘ಫೈರ್ ಬ್ರ್ಯಾಂಡ್ ಲೇಡಿ’ ಮಮತಾ ಹೋರಾಟದಿಂದಾಗಿ ಕಮ್ಯುನಿಸ್ಟ್ ಕೋಟೆ ಕುಸಿಯಿತು. ಬಂಗಾಳ ದಲ್ಲಿ ಕಾಂಗ್ರೆಸ್ ಪಕ್ಷ ಲೆಕ್ಕಕ್ಕಿಲ್ಲ. ಬಿಜೆಪಿ ವಿರುದ್ಧ ಮಮತಾ ಅವರದ್ದು ಏಕಾಂಗಿ ಹೋರಾಟ. ಟಿಎಂಸಿ ಬಲ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಬಲವೂ ವೃದ್ಧಿ ಆಗಿದೆ. 2016ರಲ್ಲಿ ಬರೀ ಮೂರು ಸ್ಥಾನ ಗೆದ್ದಿದ್ದ ಬಿಜೆಪಿ 2021ರಲ್ಲಿ 77 ಸ್ಥಾನ ಪಡೆದಿದೆ. ಪಶ್ಚಿಮ ಬಂಗಾಳ ಇದುವರೆಗೆ ಧರ್ಮ ರಾಜಕಾರಣಕ್ಕೆ ಮಣೆ ಹಾಕಿಲ್ಲ. ಮುಂದೆ ಗೊತ್ತಿಲ್ಲ.

ಬಿಜೆಪಿ ನಾಯಕರಿಗೆ ಪಶ್ಚಿಮ ಬಂಗಾಳದಷ್ಟೇ ಪ್ರಮುಖ ರಾಜ್ಯ ತಮಿಳುನಾಡು. ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಅದಕ್ಕೆ ನೆಲೆ ಇಲ್ಲ. ಶತಾಯಗತಾಯ ದ್ರಾವಿಡ ರಾಜ್ಯದೊಳಗೆ ನುಸುಳಲು ಪ್ರಯತ್ನ ನಡೆಸುತ್ತಿದೆ. ಆರು ದಶಕಗಳಿಂದ ಎರಡೇ ಎರಡು ಪ್ರಾದೇಶಿಕ ಪಕ್ಷಗಳ ನಡುವೆ ಅಧಿಕಾರ ಕೈ ಬದಲಾಯಿಸಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಪಕ್ಷಗಳ ನೆರಳಲ್ಲೇ ಮುನ್ನಡೆಯಬೇಕು. ಕಾಂಗ್ರೆಸ್‌ಗೆ ಡಿಎಂಕೆ, ಬಿಜೆಪಿಗೆ ಎಡಿಎಂಕೆ ಆಶ್ರಯ ಬೇಕು. ಹೊಸ ಪ್ರಾದೇಶಿಕ ಪಕ್ಷಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ.

ತಮಿಳುನಾಡು ರಾಜಕಾರಣದಲ್ಲಿ ಕರುಣಾನಿಧಿ ಹಾಗೂ ಜಯಲಲಿತಾ ನಿಧನದ ಬಳಿಕ ಶೂನ್ಯ ಆವರಿಸಿತ್ತು. ಕರುಣಾನಿಧಿ ಉತ್ತರಾಧಿಕಾರಿಯಾಗಿ ಎಂ.ಕೆ. ಸ್ಟಾಲಿನ್ ಯಶಸ್ವಿಯಾದರು. ಆದರೆ, ಎಡಿಎಂಕೆಯಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ ನಡೆದಿದೆ. ಜಯಾ ಪಕ್ಷದ ನಾಯಕರ ಕಿತ್ತಾಟವನ್ನು ಪರಿಹರಿಸಿ, ಸಖ್ಯ ಬೆಳೆಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಹೊಸ ಪಕ್ಷ ಟಿವಿಕೆ ಕಟ್ಟಿದ ನಟ ವಿಜಯ್ ಒಲವು-ನಿಲುವು ಗೊತ್ತಾಗಿಲ್ಲ. ಸದ್ಯಕ್ಕೆ ಡಿಎಂಕೆ ಸ್ಥಿತಿ ಸುಭದ್ರ.

ಕೇರಳ ವಿಧಾನಸಭೆ ಚುನಾವಣೆಯೂ ಕುತೂಹಲ ಹೆಚ್ಚಿಸಿದೆ. ಹತ್ತು ವರ್ಷಗಳಿಂದ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅಧಿಕಾರದಲ್ಲಿದೆ. ಈ ಸಲ ಎಲ್‌ಡಿಎಫ್ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂಬ ಭಾವನೆ ಮೂಡಿದೆ. ಅದಕ್ಕೆ ಕಾರಣ ಈಚೆಗೆ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆ. ಯುಡಿಎಫ್ ಭರ್ಜರಿಯಾಗಿ ಗೆದ್ದಿದೆ. ಬಿಜೆಪಿ ತಿರುವನಂತಪುರ ಪಾಲಿಕೆ ವಶ ಮಾಡಿಕೊಂಡಿದೆ. ಇದು ವಿಧಾನಸಭೆ ಚುನಾವಣೆ ಗೆಲುವಿನ ಮುನ್ಸೂಚನೆ ಎಂಬ ತೀರ್ಮಾನಕ್ಕೆ ಬರಲಾಗದು. ಸದ್ಯಕ್ಕಂತೂ ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಮಧ್ಯೆ ಪೈಪೋಟಿ ಕಾಣುತ್ತಿದೆ. ಎರಡರ ನಡುವೆ ದಾರಿ ಮಾಡಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X