ಸಹಜ ಸಾವೇ, ವ್ಯವಸ್ಥಿತ ಕೊಲೆಯೇ? ಭಾರತದ ಕಾರಾಗೃಹಗಳ ಕಟು ವಾಸ್ತವವೇನು?

ಸಾಂದರ್ಭಿಕ ಚಿತ್ರ | Photo Credit : scroll.in
ಭಾರತದ ಕಾರಾಗೃಹಗಳ ಕತ್ತಲ ಕೋಣೆಗಳೊಳಗೆ ಸದ್ದಿಲ್ಲದೆ ಸಂಭವಿಸುತ್ತಿರುವ ಕೈದಿಗಳ ಸಾವುಗಳು ಮತ್ತು ಜೈಲು ಆಡಳಿತದ ಅಮಾನವೀಯ ನಿರ್ಲಕ್ಷ್ಯದ ಕಟು ವಾಸ್ತವವನ್ನು ಬಿಚ್ಚಿಡುವ ತನಿಖಾ ವರದಿಯೊಂದನ್ನು 'the wire' ಪ್ರಕಟಿಸಿದೆ. ದೇಶದ ಜೈಲುಗಳಲ್ಲಿ ಸಂಭವಿಸುವ ಬಹುತೇಕ ಸಾವುಗಳನ್ನು ವ್ಯವಸ್ಥಿತವಾಗಿ ವೈದ್ಯಕೀಯ ನಿರ್ಲಕ್ಷ್ಯದ ಹೊಣೆಗಾರಿಕೆಯಿಂದ ಮುಕ್ತಗೊಳಿಸಿ, ಕೇವಲ 'ಸಹಜ ಸಾವು' ಎಂಬ ಅಂಕಿ-ಅಂಶಗಳ ಕೋಷ್ಟಕಕ್ಕೆ ಸೇರಿಸಲಾಗುತ್ತಿರುವ ಗಂಭೀರ ಆಯಾಮವನ್ನು ಈ ವರದಿ ಬಯಲು ಮಾಡಿದೆ.
"ನನ್ನ ಪತಿ ಜೈಲಿನಿಂದ ಮಾಡುತ್ತಿದ್ದ ಕೊನೆಯ ಕೆಲವು ಫೋನ್ ಕರೆಗಳಲ್ಲಿ ಕೇವಲ ನಿರಾಶೆ ಮತ್ತು ಅಸಹಾಯಕತೆ ಎದ್ದು ಕಾಣುತ್ತಿತ್ತು," ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಸಾದಿಕ್ ಬಾಷಾ ಅವರ ಪತ್ನಿ ಪರ್ವೀನ್ ಬಾನು, ಪತಿಯ ಕೊನೆಯ ದಿನಗಳನ್ನು ನೆನೆದು ಕಣ್ಣೀರು ಹಾಕುತ್ತಾರೆ. ಅವರು ವಾರಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದರು. ಜೈಲಿನಿಂದ ಹೊರಗಿರುವ ಯಾವುದಾದರೂ ಒಂದು ಆಸ್ಪತ್ರೆಯಲ್ಲಿ ತಮಗೆ ಸೂಕ್ತ ಚಿಕಿತ್ಸೆ ಕೊಡಿಸಲು ಏನಾದರೂ ಒಂದು ದಾರಿ ಹುಡುಕು ಎಂದು ಪ್ರತಿ ಬಾರಿಯೂ ನನ್ನ ಬಳಿ ಬೇಡಿಕೊಳ್ಳುತ್ತಿದ್ದರು.
ಕೇವಲ 48 ವರ್ಷದ ಸಾದಿಕ್ ಬಾಷಾ ಅವರು ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರು. "ಸಕಾಲದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಕ್ಕಿದ್ದರೆ ಅವರ ಕಾಯಿಲೆಗಳನ್ನು ಗುಣಪಡಿಸಬಹುದಿತ್ತು," ಎನ್ನುತ್ತಾರೆ ಪರ್ವೀನ್. ಆದರೆ, ಜೈಲಿನ ಅಧಿಕಾರಿಗಳು ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದರೂ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಎಂಬುದು ಪರ್ವೀನ್ ಅವರ ಆರೋಪ. "ಅವರಿಗೆ 2021ರಲ್ಲಿ ಡಯಾಬಿಟಿಸ್ ಇರುವುದು ಪತ್ತೆಯಾಗಿತ್ತು. 2024ರ ವೇಳೆಗೆ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಎಷ್ಟು ಹೆಚ್ಚಾಗಿತ್ತೆಂದರೆ, ಅದು ಅವರ ಇತರ ಅಂಗಾಂಗಗಳ ಮೇಲೆಯೂ ಗಂಭೀರ ಪರಿಣಾಮ ಬೀರಲು ಪ್ರಾರಂಭಿಸಿತು. ಅವರ ಹೃದಯದ ಕಾರ್ಯಕ್ಷಮತೆ ಶೇಕಡಾ 30ಕ್ಕೆ ಕುಸಿದಿತ್ತು" ಎಂದು ಪರ್ವೀನ್ ಹೇಳಿದ್ದಾರೆ.
ಬಾಷಾ ಮತ್ತು ಅವರ ಕುಟುಂಬಸ್ಥರು ಜೈಲು ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಆ ಮನವಿಗಳನ್ನು ಪದೇ ಪದೇ ನಿರ್ಲಕ್ಷಿಸಲಾಯಿತು.
2024ರಲ್ಲಿ, ಬಾಷಾ ಅವರು ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ, ಬಾಷಾ ಅವರಿಗೆ ಜೈಲಿನೊಳಗೆ "ಸಮರ್ಪಕ ಚಿಕಿತ್ಸೆ" ನೀಡಲಾಗುತ್ತಿದೆ ಎಂದು ಹೇಳಿ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿತು. ಜೈಲು ಅಧಿಕಾರಿಗಳೂ ಸಹ ತನಿಖಾ ಸಂಸ್ಥೆಯ ಈ ವಾದವನ್ನೇ ಬೆಂಬಲಿಸಿದರು.
ಬಾಷಾ ಅವರಿಗೆ ಸರ್ಕಾರಿ ಸ್ವಾಮ್ಯದ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿ "ವಿಶೇಷ ವೈದ್ಯಕೀಯ ಚಿಕಿತ್ಸೆ" ನೀಡಲಾಗುತ್ತಿದೆ ಎಂದು ಜೈಲು ಇಲಾಖೆಯು ವರದಿಯೊಂದನ್ನು ಸಲ್ಲಿಸಿತ್ತು. ಅಲ್ಲದೆ, ಜೈಲಿನ ವೈದ್ಯಾಧಿಕಾರಿಗಳು ತಮ್ಮ ವರದಿಯಲ್ಲಿ ಬಾಷಾ ಅವರ ಆರೋಗ್ಯ ಸ್ಥಿತಿ "ಸ್ಥಿರವಾಗಿದೆ" ಎಂದು ಉಲ್ಲೇಖಿಸಿದ್ದರು. ಈ ವರದಿಗಳ ಆಧಾರದ ಮೇಲೆ ಎನ್ಐಎ ವಿಶೇಷ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್ ಎರಡೂ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದವು.
2026ರ ಫೆಬ್ರುವರಿ 2ರಂದು ಸಾದಿಕ್ ಬಾಷಾ ಮೃತಪಟ್ಟರು.
ಅಂದಿನಿಂದ ಪರ್ವೀನ್ ಅವರು ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದದ್ದನ್ನು ಪ್ರಶ್ನಿಸಿ ನ್ಯಾಯಾಲಯ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ (KSHRC) ಮೆಟ್ಟಿಲೇರಿದ್ದಾರೆ. ಆದರೆ, ಜೈಲಿನ ದಾಖಲೆಗಳು ಮಾತ್ರ ಅವರ ಸಾವನ್ನು "ಸಹಜ ಸಾವು" ಎಂದೇ ವರ್ಗೀಕರಿಸುವ ಸಾಧ್ಯತೆಯಿದೆ. ಭಾರತದ ಕಾರಾಗೃಹಗಳಲ್ಲಿ ಸಂಭವಿಸುವ ಬಹುತೇಕ ಸಾವುಗಳಿಗೆ ಇದೇ ವರ್ಗೀಕರಣವನ್ನು ಬಳಸಲಾಗುತ್ತದೆ.
ಆದರೆ, ಈ ವರ್ಗೀಕರಣವೇ ಒಂದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಸಕಾಲದಲ್ಲಿ ವೈದ್ಯಕೀಯ ನೆರವು ಸಿಗದೆ ಕೈದಿಗಳು ಮೃತಪಟ್ಟಾಗ, ಆ ಸಾವುಗಳನ್ನು ನಿಜವಾಗಿಯೂ 'ಸಹಜ' ಎಂದು ಕರೆಯಲು ಸಾಧ್ಯವೇ? ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಯಾರ ಮೇಲೆ ಆರೋಪವಿದೆಯೋ, ಅದೇ ಅಧಿಕಾರಿಗಳು ಇದು ಸಹಜ ಸಾವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವುದು ಎಷ್ಟು ಸರಿ?
ಬಾಷಾ ಅವರ ಪ್ರಕರಣವೊಂದೇ ಈ ರೀತಿಯದ್ದು ಎಂದು ಹೇಳಲಾಗುವುದಿಲ್ಲ.
ಕಳೆದ ವಾರವಷ್ಟೇ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ಅಬ್ದುಲ್ ಖಾದರ್ ಎಂಬ ಮತ್ತೊಬ್ಬ ವಿಚಾರಣಾಧೀನ ಕೈದಿ 18 ವರ್ಷಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದ ನಂತರ ಸಾವನ್ನಪ್ಪಿದ್ದಾರೆ. ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಖಾದರ್, ಸುದೀರ್ಘ ಜೈಲುವಾಸದ ಅವಧಿಯಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಅವರ ವಕೀಲರಾದ ಗಂಗಾಧರ್ ಅವರ ಪ್ರಕಾರ, ಖಾದರ್ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರತಿ ಬಾರಿಯೂ ಅವರ ಮನವಿಯನ್ನು ತಿರಸ್ಕರಿಸಲಾಗಿತ್ತು.
"ನಾವು ಖಾದರ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದಾಗಲೆಲ್ಲಾ, ಜೈಲಿನೊಳಗೆ ಸೂಕ್ತ ಚಿಕಿತ್ಸೆ ಲಭ್ಯವಿದೆ ಎಂದು ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಭರವಸೆ ನೀಡುತ್ತಿದ್ದರು. ನ್ಯಾಯಾಲಯದ ದಾಖಲೆಗಳಲ್ಲಿ, ಜೈಲುಗಳು ಅನಾರೋಗ್ಯಪೀಡಿತ ಕೈದಿಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ ಎಂದೇ ಬಿಂಬಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಅನಾರೋಗ್ಯಕ್ಕೆ ಒಳಗಾದ ಕೆಲವೇ ದಿನಗಳಲ್ಲಿ ಕೈದಿಗಳು ಸಾವನ್ನಪ್ಪುತ್ತಿದ್ದಾರೆ" ಎಂದು ಗಂಗಾಧರ್ ಆರೋಪಿಸಿದ್ದಾರೆ.
ಅಧಿಕೃತವಾಗಿ, ಬಾಷಾ ಮತ್ತು ಖಾದರ್ ಇಬ್ಬರ ಸಾವುಗಳೂ ಒಂದೇ ವರ್ಗದಲ್ಲಿ, ಅಂದರೆ 'ಸಹಜ ಸಾವುಗಳು' ಎಂದೇ ದಾಖಲಾಗುವ ಸಾಧ್ಯತೆಯಿದೆ.
ಜೈಲುಗಳಲ್ಲಿ ಸಾವುಗಳು ಸಂಭವಿಸುವುದು ಸಾಮಾನ್ಯವಾಗಿದ್ದರೂ, ಅವುಗಳ ಬಗ್ಗೆ ಸರಿಯಾದ ಲೆಕ್ಕಾಚಾರ ಅಥವಾ ಹೊಣೆಗಾರಿಕೆ ಇರುವುದು ತೀರಾ ಅಪರೂಪ. ಇತರ ಅಂಕಿ-ಅಂಶಗಳೊಂದಿಗೆ ಜೈಲು ಸಾವುಗಳ ಅಂಕಿ ಅಂಶಗಳನ್ನು ದಾಖಲಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB), 2010ರಿಂದ ಇಂತಹ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದೆ. ಸಾರ್ವಜನಿಕವಾಗಿ ಲಭ್ಯವಿರುವ ಏಕೈಕ ಅಂಕಿಅಂಶಗಳು ಇದಾಗಿದ್ದು, ಇದು ಜೈಲು ಸಾವುಗಳಿಗೆ ಕೇವಲ ಒಂದು ಸಾಮಾನ್ಯ "ಸಾವಿನ ಕಾರಣ"ವನ್ನಷ್ಟೇ ನೀಡುತ್ತದೆ.
ಈ ಮಾಹಿತಿ ಸಾವುಗಳನ್ನು ಸ್ಥೂಲವಾಗಿ 'ಸಹಜ' ಮತ್ತು 'ಅಸಹಜ' ಎಂದು ವರ್ಗೀಕರಿಸುತ್ತದೆ. ಅನಾರೋಗ್ಯ ಅಥವಾ ವಯೋಸಹಜ ಕಾರಣಗಳಿಂದ ಸಂಭವಿಸುವ ಸಾವುಗಳನ್ನು "ಸಹಜ" ಎಂದು ಪರಿಗಣಿಸಿದರೆ, ಜೈಲಿನೊಳಗೆ ನಡೆಯುವ ಆತ್ಮಹತ್ಯೆ, ಹಲ್ಲೆ ಅಥವಾ ದೌರ್ಜನ್ಯಗಳಿಂದ ಸಂಭವಿಸುವ ಸಾವುಗಳು "ಅಸಹಜ ಸಾವುಗಳು" ಎಂಬ ವರ್ಗಕ್ಕೆ ಸೇರುತ್ತವೆ.
ಹಕ್ಕುಗಳಿಗಾಗಿ ಹೋರಾಡುವ ಕಾರ್ಯಕರ್ತರ ದಶಕಗಳ ಕಾಲದ ಹೋರಾಟ ಮತ್ತು ಭಾರತೀಯ ಕಾನೂನು ಆಯೋಗದ (ತನ್ನ 152ನೇ ವರದಿಯಲ್ಲಿ) ಶಿಫಾರಸುಗಳ ನಂತರ, 2006ರಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC)ಗೆ ತಿದ್ದುಪಡಿ ತರಲಾಯಿತು. ಇದರ ಅನ್ವಯ, ಕಸ್ಟಡಿ ಸಾವುಗಳ ಕುರಿತು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ತನಿಖೆಯ ಬದಲಿಗೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆಯನ್ನು ಕಡ್ಡಾಯಗೊಳಿಸಲಾಯಿತು. ಸಿಆರ್ಪಿಸಿಯ ಸೆಕ್ಷನ್ 176(1) ಅನ್ನು ಸೆಕ್ಷನ್ 176(1A) ಆಗಿ ತಿದ್ದುಪಡಿ ಮಾಡುವ ಮೂಲಕ, ಕಸ್ಟಡಿಯಲ್ಲಿ ನಡೆಯುವ ಪ್ರತಿಯೊಂದು ಸಾವು ಮತ್ತು ಅತ್ಯಾಚಾರದ ಪ್ರಕರಣಗಳಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತನಿಖೆಯನ್ನು ಕಡ್ಡಾಯಗೊಳಿಸಲಾಗಿದೆ.
ಸಿಆರ್ಪಿಸಿ ಜಾಗಕ್ಕೆ ಬಂದಿರುವ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯೂ ಕಸ್ಟಡಿ ಸಾವುಗಳ ಕುರಿತು ನ್ಯಾಯಾಂಗ ತನಿಖೆಯನ್ನು ಕಡ್ಡಾಯಗೊಳಿಸಿದೆ. ಆದರೆ, ಇಂತಹ ಕಾನೂನು ಅಸ್ತಿತ್ವಕ್ಕೆ ಬಂದು ಎರಡು ದಶಕಗಳು ಕಳೆದಿದ್ದರೂ, ಈ ಕಡ್ಡಾಯ ತನಿಖೆಗಳು ನಡೆಯುವುದು ತೀರಾ ವಿರಳ. ಹಲವು ರಾಜ್ಯಗಳಲ್ಲಿ ಇದನ್ನು ಕೇವಲ ಒಂದು ತಾಂತ್ರಿಕ ಪ್ರಕ್ರಿಯೆಯಂತೆ ನೋಡಲಾಗುತ್ತಿದ್ದು, ಇಂದಿಗೂ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ಗಳ ಮೂಲಕವೇ ತನಿಖೆ ನಡೆಸಲಾಗುತ್ತಿದೆ. ಕಸ್ಟಡಿ ದೌರ್ಜನ್ಯದ ಅನೇಕ ಪ್ರಕರಣಗಳಲ್ಲಿ, ಸಂತ್ರಸ್ತರ ಕುಟುಂಬಸ್ಥರು ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಮಾಡಲು ಹೈಕೋರ್ಟ್ಗಳ ಮೆಟ್ಟಿಲೇರಬೇಕಾದ ಪರಿಸ್ಥಿತಿ ಇದೆ.
ಇತ್ತೀಚಿನ NCRB ಡೇಟಾ ಪ್ರಕಾರ (2024ರ ಸಾಲಿನದು), ಭಾರತದ ಜೈಲುಗಳಲ್ಲಿ 1,960 ಕೈದಿಗಳು ಮೃತಪಟ್ಟಿದ್ದಾರೆ. ಇವುಗಳಲ್ಲಿ 1,737 ಸಾವುಗಳನ್ನು "ಸಹಜ ಕಾರಣಗಳು" ಎಂದು ದಾಖಲಿಸಲಾಗಿದೆ.
'ಸಹಜ ಸಾವುಗಳು' ಎಂಬ ವರ್ಗವನ್ನು ವಯೋಸಹಜ ಸಾವುಗಳು ಮತ್ತು ಅನಾರೋಗ್ಯದ ಸಾವುಗಳು ಎಂದು ಮತ್ತಷ್ಟು ವಿಭಾಗಿಸಲಾಗಿದೆ. NCRB ವರದಿ ಈ 'ಅನಾರೋಗ್ಯ'ಗಳನ್ನು ಹೃದಯದ ಸಮಸ್ಯೆ, ಶ್ವಾಸಕೋಶದ ತೊಂದರೆ, ಲಿವರ್ ಸಮಸ್ಯೆ, ಕಿಡ್ನಿ ವೈಫಲ್ಯ, ಎಚ್ಐವಿ, ಕ್ಯಾನ್ಸರ್, ಕ್ಷಯರೋಗ, ಪಾರ್ಶ್ವವಾಯು, ಕಾಲರಾ/ಅತಿಸಾರ, ಅಪಸ್ಮಾರದೊಂದಿಗೆ ಸ್ಕಿಜೋಫ್ರೇನಿಯಾ, ಮೆದುಳಿನ ರಕ್ತಸ್ರಾವ, ಕರುಳಿನ ರಂದ್ರ, ಮಾದಕವಸ್ತು/ಮದ್ಯದ ವ್ಯಸನಮುಕ್ತ ಲಕ್ಷಣಗಳು (ವಿತ್ಡ್ರಾಯಲ್ ಸಿಂಪ್ಟಮ್ಸ್) ಮತ್ತು ಇತರ ಕಾಯಿಲೆಗಳು ಎಂದು ವರ್ಗೀಕರಿಸಿದೆ.
ಕೈದಿಯ ಸಂಪೂರ್ಣ ಹೊಣೆಗಾರಿಕೆ ನ್ಯಾಯಾಂಗದ್ದೇ ಆಗಿರುತ್ತದೆ
ಈ ಸಾವುಗಳು ನಿಜಕ್ಕೂ ಸಹಜವೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಒಂದು ವೇಳೆ ಇವು ಸಹಜ ಸಾವುಗಳಲ್ಲ ಎಂದಾದರೆ, ಅದನ್ನು ನಿರ್ಧರಿಸುವವರು ಯಾರು? ದೌರ್ಜನ್ಯ ಮತ್ತು ನಿರ್ಲಕ್ಷ್ಯದ ಆರೋಪ ಹೊತ್ತಿರುವ ಜೈಲು ಅಧಿಕಾರಿಗಳೇ ಅಥವಾ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿ ಪದೇ ಪದೇ ಮನವಿ ಮಾಡಿದರೂ ಪರಿಹಾರ ನೀಡಲು ನಿರಾಕರಿಸಿದ ನ್ಯಾಯಾಂಗವೇ?
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸ್ಟಡಿ ಸಾವುಗಳು ಸಂಭವಿಸುತ್ತಿದ್ದರೂ, ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಜೈಲು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಅಥವಾ ಹೊಣೆಗಾರರನ್ನಾಗಿ ಮಾಡಲಾಗಿದೆ. ಕಸ್ಟಡಿ ಸಾವುಗಳು ಮತ್ತು ದೌರ್ಜನ್ಯದ ಹಲವು ಪ್ರಕರಣಗಳನ್ನು ಮುನ್ನಡೆಸಿರುವ ಮಹಾರಾಷ್ಟ್ರದ ಮಾನವ ಹಕ್ಕುಗಳ ವಕೀಲ ನಿಹಾಲ್ಸಿಂಗ್ ರಾಥೋಡ್, ಇದರ ಜವಾಬ್ದಾರಿ ನ್ಯಾಯಾಂಗ ಮತ್ತು ಸರ್ಕಾರ ಎರಡರ ಮೇಲೂ ಸಮಾನವಾಗಿದೆ ಎನ್ನುತ್ತಾರೆ.
"ಜೈಲು ವಾಸವನ್ನು 'ನ್ಯಾಯಾಂಗ ಬಂಧನ' ಎಂದು ಕರೆಯುವುದಕ್ಕೆ ಒಂದು ಕಾರಣವಿದೆ. ಬಂಧಿತ ವ್ಯಕ್ತಿಯ ಸಂಪೂರ್ಣ ರಕ್ಷಕ ನ್ಯಾಯಾಂಗವೇ ಆಗಿರುವಾಗ, ಜೈಲುಗಳಲ್ಲಿ ನಿಜಕ್ಕೂ ಅಗತ್ಯ ಸೌಲಭ್ಯಗಳಿವೆಯೇ ಎಂದು ಪರಿಶೀಲಿಸುವುದು ಮತ್ತು ಅಲ್ಲಿನ ಸ್ಥಿತಿ ಸುಧಾರಿಸುವವರೆಗೆ ಜನರನ್ನು ಜೈಲಿಗೆ ಕಳುಹಿಸಲು ನಿರಾಕರಿಸುವುದು ನ್ಯಾಯಾಲಯಗಳ ಜವಾಬ್ದಾರಿಯಲ್ಲವೇ?" ಎಂದು ರಾಥೋಡ್ ಪ್ರಶ್ನಿಸುತ್ತಾರೆ.
ಭಾರತದಲ್ಲಿ ಜೈಲುಗಳು ಇಂದಿಗೂ ಅತ್ಯಂತ ಪಾರದರ್ಶಿಯಲ್ಲದ ಸಂಸ್ಥೆಗಳಾಗಿ ಉಳಿದಿವೆ. ಅಲ್ಲಿಂದ ಹೊರಜಗತ್ತಿಗೆ ತಿಳಿಯುವುದು ಬಹುತೇಕ ಜೈಲು ಅಧಿಕಾರಿಗಳು ನೀಡುವ ವರದಿಗಳು ಮಾತ್ರ. ಈ ಅಧಿಕಾರಿಗಳು ಒಂದು ಸಾವನ್ನು "ಸಹಜ" ಎಂದು ವರ್ಗೀಕರಿಸಿದಾಗ, ನ್ಯಾಯಾಂಗದ ಸಕ್ರಿಯ ಹಸ್ತಕ್ಷೇಪವಿಲ್ಲದೆ ಸತ್ಯವನ್ನು ಹೊರತರುವುದು ತೀರಾ ಕಠಿಣವಾದ ಕೆಲಸವಾಗಿದೆ.
'ಅಸಹಜ ಸಾವುಗಳು' ಮತ್ತು ಜೈಲುಗಳ ಒಳಗಿನ ವಾಸ್ತವ
ಜೈಲುಗಳ ಒಳಗಿನ ಪರಿಸ್ಥಿತಿಯ ಕುರಿತು "ಅಸಹಜ ಸಾವುಗಳ" ಹಿಂದಿರುವ ಕಾರಣಗಳು ಸಹ ಮಹತ್ವದ ಒಳನೋಟವನ್ನು ನೀಡುತ್ತವೆ. 2024ರ NCRB ದತ್ತಾಂಶದ ಪ್ರಕಾರ, ದಾಖಲಾದ 166 ಅಸಹಜ ಸಾವುಗಳಲ್ಲಿ 122 ಸಾವುಗಳು ಆತ್ಮಹತ್ಯೆಯಿಂದ ಸಂಭವಿಸಿವೆ. ಒಟ್ಟು ಅಸಹಜ ಸಾವುಗಳಲ್ಲಿ ಕೇವಲ ಒಂದು ಸಾವನ್ನು ಮಾತ್ರ "ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ದೌರ್ಜನ್ಯ"ಕ್ಕೆ ಕಾರಣ ಎಂದು ದಾಖಲಿಸಲಾಗಿದೆ.
ಅಂಕಿ-ಅಂಶಗಳು ಗುರಿ ಮಾಡುತ್ತಿರುವುದು ಯಾರನ್ನು?
ಭಾರತದ ಜೈಲುಗಳು ಸರಾಸರಿ ಶೇಕಡಾ 112ಕ್ಕಿಂತ ಹೆಚ್ಚು ಭರ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ. ದಿಲ್ಲಿಯಲ್ಲಿ ಈ ಪ್ರಮಾಣ ಶೇ. 200ಕ್ಕಿಂತ ಹೆಚ್ಚಿದ್ದರೆ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಶೇ. 150ಕ್ಕೂ ಹೆಚ್ಚು ಕೈದಿಗಳನ್ನು ಇರಿಸಲಾಗಿದೆ. ಇದೇ ಸಮಯದಲ್ಲಿ, ಜೈಲುಗಳಲ್ಲಿನ ಆರೋಗ್ಯ ಸೇವೆಗಳು ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ.
ಭಾರತದ 1,333 ಜೈಲುಗಳಲ್ಲಿರುವ 5,11,542 ಕೈದಿಗಳ ಪೈಕಿ ಸುಮಾರು ಶೇಕಡಾ 73ರಷ್ಟು (3,71,440) ಜನರು ತಮ್ಮ ಪ್ರಕರಣಗಳ ವಿಚಾರಣೆ ಮುಗಿಯುವುದನ್ನೇ ಕಾಯುತ್ತಿರುವ ವಿಚಾರಣಾಧೀನ ಕೈದಿಗಳಾಗಿದ್ದಾರೆ.
ಜೈಲುಗಳಲ್ಲಿ ಸಂಭವಿಸುವ ಸಾವುಗಳೂ ಇದೇ ಮಾದರಿಯನ್ನು ಪ್ರತಿಬಿಂಬಿಸುತ್ತವೆ. ಕಸ್ಟಡಿಯಲ್ಲಿ ಮರಣ ಹೊಂದುವವರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಕಸ್ಟಡಿ ಸಾವುಗಳ ಬಗ್ಗೆ ನಿಯಮಿತವಾಗಿ ತನಿಖೆ ನಡೆಸಿ, ಕಠಿಣ ಮತ್ತು ಸ್ವತಂತ್ರ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸದ ಹೊರತು, ಸಾದಿಕ್ ಬಾಷಾ ಮತ್ತು ಅಬ್ದುಲ್ ಖಾದರ್ ಅವರಂತಹ ಕೈದಿಗಳ ಸಾವುಗಳು ಕೇವಲ 'ಸಹಜ ಸಾವುಗಳು' ಎಂಬ ಅಂಕಿ-ಅಂಶಗಳ ಕೋಷ್ಟಕಕ್ಕೆ ಮಾತ್ರ ಸೀಮಿತವಾಗುವ ಅಪಾಯವಿದೆ.
ಸೌಜನ್ಯ: thewire.in






