‘ನಕ್ಸಲರು’ ಕಾಡಿನಿಂದ ಜೈಲಿಗೆ...ಜೈಲಿನಿಂದ ನಾಡಿಗೆ ಯಾವಾಗ?

ಸಾಂದರ್ಭಿಕ ಚಿತ್ರ PC : NDTV
ಬೆಂಗಳೂರು, ಜ.7: ಮುಖ್ಯವಾಹಿನಿಗೆ ಬಂದ ನಕ್ಸಲರಿಗೆ ಕಾನೂನಿನ ಚೌಕಟ್ಟಿನಲ್ಲಿ ಸರಕಾರ ಏನೆಲ್ಲ ಸಹಾಯ ಮಾಡಬಹುದೋ ಎಲ್ಲವನ್ನೂ ಪೂರೈಸಿ, ಅವರನ್ನು ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ಕರೆತರಲು ಸಂಪೂರ್ಣ ಸಹಕಾರ ಕೊಡುತ್ತೇವೆಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 8ಕ್ಕೆ ಒಂದು ವರ್ಷವಾಗುತ್ತಿದೆ. ಆದರೆ ಅವರನ್ನು ಜೈಲಿನಿಂದ ನಾಡಿಗೆ ಕರೆತರವುದು ಯಾವಾಗ? ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಶಾಂತಿಗಾಗಿ ನಾಗರಿಕರ ವೇದಿಕೆ ಹಾಗೂ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿ ತಂಡದ ಪ್ರಯತ್ನದಿಂದಾಗಿ ನಕ್ಸಲ್ ಹೋರಾಟಗಾರರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜಿಷಾ ಇವರುಗಳು ಶಸ್ತ್ರಾಸ್ತ್ರ ಹೋರಾಟದ ಹಾದಿ ಬಿಟ್ಟು ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಇನ್ನಿತರ ಅಧಿಕಾರಿಗಳ ಮುಂದೆ 2025ರ ಜನವರಿ 8ರಂದು ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯವಾಹಿನಿಗೆ(ಶರಣಾಗತಿ) ಮರಳಿದ್ದರು.
ಆ ವೇಳೆಯಲ್ಲಿ ಸಶಸ್ತ್ರ ಹೋರಾಟ ತೊರೆದ ಎಲ್ಲ ನಕ್ಸಲರ ಮೇಲಿನ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು. ಪ್ರಕರಣಗಳ ತ್ವರಿತ ಇತ್ಯರ್ಥದ ನಂತರ ಅವರು ಸಮಾಜದ ಮುಖ್ಯವಾಹಿನಿಗೆ ಸೇರಲಿದ್ದಾರೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಒಂದು ವರ್ಷವಾಗುತ್ತಿದ್ದರೂ ವಿಶೇಷ ನ್ಯಾಯಾಲಯ ಇನ್ನೂ ಪ್ರಾರಂಭವಾಗಿಲ್ಲ. ನಕ್ಸಲರ ಮೇಲಿದ್ದ ಪ್ರಕರಣಗಳು ಇತ್ಯರ್ಥವಾಗದೇ, ಜಾಮೀನು ಸಿಗದೇ ಜೈಲಿನಲ್ಲಿಯೇ ವಾಸಿಸುವಂತಾಗಿದೆ.
ಭಾರತದಲ್ಲಿ ನೂರಾರು ಜನ ನಕ್ಸಲೀಯರು ಮುಖ್ಯವಾಹಿನಿಯ ಭಾಗವಾಗುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಹಾರಾಷ್ಟ್ರ, ತೆಲಂಗಾಣದಲ್ಲಿ ಮುಖ್ಯವಾಹಿನಿಗೆ ಸೇರಲು ಮುಂದೆ ಬಂದಿರುವ ನಕ್ಸಲೀಯರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆದು ಅವರಿಗೆ ನೌಕರಿ ಮತ್ತು ಇತರ ಪುನರ್ವಸತಿಗಳನ್ನು ಒದಗಿಸುವ ಕೆಲಸವನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಮಾವೋವಾದಿಗಳ ಕೇಂದ್ರ ಸ್ಥಾನವಾಗಿರುವ ಛತ್ತೀಸಘಡ ಸರಕಾರವು ಶರಣಾಗಿರುವ ನಕ್ಸಲೀಯರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಪ್ರಕಟಿಸಿದೆ. ಅವರಿಗೆ ಹೋಲಿಸಿದರೆ, ಕರ್ನಾಟಕದ ನಕ್ಸಲೀಯರ ಮೇಲಿನ ಮೊಕದ್ದಮೆಗಳು ಗುರುತರವಾದವುಗಳಲ್ಲ. ಹೀಗಾಗಿ ತಕ್ಷಣವೇ ರಾಜ್ಯ ಸರಕಾರವು ಜೈಲಿನಲ್ಲಿರುವ ಎಲ್ಲ ನಕ್ಸಲೀಯರ ಮೇಲಿನ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವುದು ಸೂಕ್ತ ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಮುಖಂಡ ವಿ.ಎಸ್.ಶ್ರೀಧರ್ ಒತ್ತಾಯಿಸಿದ್ದಾರೆ.
ನಕ್ಸಲರ ವಿರುದ್ಧ ದಾಖಲಾಗಿರುವ ಪ್ರಕರಣಗಳು :
ಮುಂಡಗಾರು ಲತಾ ವಿರುದ್ಧ ಒಟ್ಟು ಕರ್ನಾಟಕದಲ್ಲಿ 85 ಪ್ರಕರಣಗಳು, ಸುಂದರಿ ಕೊತ್ಲೂರು 71, ವನಜಾಕ್ಷಿ ಬಾಳೆಹೊಳೆ 29, ಮಾರೆಪ್ಪ ಅರೋಲಿ 50, ಕೆ.ವಸಂತಾ 8, ಜೀಶಾ 17 ಹಾಗೂ ಜಯಣ್ಣ ವಿರುದ್ಧ ಕರ್ನಾಟಕದಲ್ಲಿ 13 ಪ್ರಕರಣಗಳು ದಾಖಲಾಗಿವೆ. ಆದರೆ ಮುಖ್ಯವಾಹಿನಿಗೆ ಬಂದಿರುವ ನಕ್ಸಲರ ಹಲವು ಪ್ರಕರಣಗಳಿಗೆ ಪೊಲೀಸ್ ಇಲಾಖೆ ಇನ್ನೂ ದೋಷಾರೋಪಪಟ್ಟಿ(ಚಾರ್ಜ್ಶೀಟ್) ಸಲ್ಲಿಕೆ ಮಾಡಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ.
ಎಂಟು ವರ್ಷಗಳಿಂದಲೂ ಜೈಲಿನಲ್ಲಿರುವ ಕನ್ಯಾಕುಮಾರಿ, ರಮೇಶ್ ಬಾಬಯ್ಯ ಒಬ್ಬರಿಗೆ ಮಾತ್ರ ಜಾಮೀನು ಭಾಗ್ಯ: 2017 ಜೂನ್ 5 ರಂದು ಶರಣಾಗತಿಯಾಗಿದ್ದ ಕನ್ಯಾಕುಮಾರಿ ಮತ್ತು ರಮೇಶ್ ಬಾಬಯ್ಯ ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇದ್ದಾರೆ. ಅವರ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯದೇ, ಜಾಮೀನೂ ಸಿಗದೇ ಜೈಲಿನಲ್ಲಿಯೇ ಇರುವಂತಾಗಿದೆ.
2025ರಲ್ಲಿ ಶರಣಾದ ನಕ್ಸಲರ ಪೈಕಿ ಕೇವಲ ತೊಂಬೊಟ್ಟು ಲಕ್ಷ್ಮೀಗೆ ಮಾತ್ರ ಜಾಮೀನು ಸಿಕ್ಕಿದೆ. ಇನ್ನು ಉಳಿದವರೆಲ್ಲರೂ ಜೈಲಿನಲ್ಲಿಯೇ ಇದ್ದಾರೆ.
ವಿಶೇಷ ನ್ಯಾಯಾಲಯ ಎಂದು?: ಸರಕಾರದಿಂದ ನಕ್ಸಲರ ಮೇಲಿನ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಮಾಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಧೀಶರಿಗೆ ಅರ್ಜಿ ಸಲ್ಲಿಸುವ ಪ್ರಯತ್ನ ನಡೆದಿದೆ. ಆದರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರ್ಜಿಯನ್ನು ತಿರಸ್ಕರಿ ಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುನರ್ವಸತಿಗೆ ದಿಟ್ಟ ಕ್ರಮ ತೆಗೆದುಕೊಳ್ಳದ ಕಾಂಗ್ರೆಸ್ ಸರಕಾರ :
ಮಹಾರಾಷ್ಟ್ರ, ಆಂದ್ರಪ್ರದೇಶದಲ್ಲಿ ನಕ್ಸಲ್ ಚಳವಳಿ ತೊರೆದು ಹೊರಗೆ ಬಂದವರು ಬಹಳ ಸಲೀಸಾಗಿ ತಮ್ಮ ಜೀವನ ನಡೆಸಿಕೊಳ್ಳುತ್ತಿದ್ದಾರೆ. ಕೆಲವರಿಗೆ ಸರಕಾರಿ ಹುದ್ದೆಗಳನ್ನು ಕೊಡಲಾಗಿದೆ. ಛತ್ತೀಸಘಡದ ಬಿಜೆಪಿ ಸರಕಾರ ತೀವ್ರ ಸಂಘರ್ಷ ಇರುವಂತಹ ದೊಡ್ಡ ಮಟ್ಟದ ಪ್ರಕರಣಗಳಿದ್ದರೂ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆದುಕೊಂಡು ಅವರನ್ನು ಮುಖ್ಯವಾಹಿನಿಗೆ ಸೇರ್ಪಡೆ ಆಗುವುದಕ್ಕೆ ಸರಕಾರ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆ ನಿಟ್ಟಿನಲ್ಲಿ ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ನೂರ್ ಶ್ರೀಧರ್ ಹೇಳಿದ್ದಾರೆ.
ನಕ್ಸಲ್ರ ಬೇಡಿಕೆಗಳು ಈಡೇರಿದೆಯೇ? :
ಮುಖ್ಯವಾಹಿನಿಗೆ ಬರುವ ವೇಳೆಯಲ್ಲಿ ನಕ್ಸಲರು ಪ್ರಮುಖ 18 ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದಿಟ್ಟಿದ್ದರು. ಸರಕಾರ ಕಾನೂನಿನ ರೀತಿಯಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತದೆ ಎಂದು ಹೇಳಿತ್ತು. ಆದರೆ ಒಂದು ವರ್ಷವಾದರೂ, ಬಹುತೇಕ ಬೇಡಿಕೆಗಳು ಪತ್ರಕ್ಕೆ ಸೀಮಿತವಾಗಿವೆ.
ನಕ್ಸಲ್ ಪ್ರಭಾವಿತ ಪ್ರದೇಶಗಳಿಗೆ 10 ಕೋಟಿ ರೂ. ಬಿಡುಗಡೆ! :
ನಕ್ಸಲ್ ಪ್ರಭಾವಿತ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಪ್ಯಾಕೇಜ್ ಯೋಜನೆಯಡಿಯಲ್ಲಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಆ ಹಣವನ್ನು ಯಾವ ಉದ್ದೇಶಕ್ಕಾಗಿಖರ್ಚು ಮಾಡಬೇಕು? ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ನಡೆದುಕೊಂಡಿಲ್ಲ. ಬಿಡುಗಡೆ ಆದ ಹಣದಲ್ಲಿ ನಕ್ಸಲ್ ಪ್ರದೇಶಗಳು ಯಾವುವು? ಅಲ್ಲಿರುವ ನೈಜ ಸಮಸ್ಯೆಗಳು ಏನು? ಎನ್ನುವುದನ್ನು ಅಧ್ಯಯನ ಮಾಡಲು ವೆಚ್ಚ ಮಾಡಬೇಕಿತ್ತು. ಹಾಗೂ ನಕ್ಸಲ್ರು
ಹೇಳಿದ್ದ ಮಾನದಂಡದಂತೆ ಹಣ ಖರ್ಚು ಮಾಡಬೇಕಿತ್ತು. ಆದರೆ, ಆ ರೀತಿಯಲ್ಲಿ ಆಗಿಲ್ಲ ಎಂದು ಸಾಮಾಜಿಕ ಹೋರಾಟಗಾರ ವೆಂಕಟೇಶ್ ಹಾಗಲಗಂಚಿ ಆರೋಪ ಮಾಡಿದ್ದಾರೆ.
ಭರವಸೆಯಾಗಿಯೇ ಉಳಿದ ಪುನರ್ ವಸತಿ..!
ಮುಖ್ಯವಾಹಿನಿಗೆ ಬಂದ ನಕ್ಸಲರಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಹಣ, ಬದುಕಲು ಕೃಷಿಯೋಗ್ಯ ಭೂಮಿ ಮತ್ತು ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿತ್ತು. ಘೋಷಣೆ ಮಾಡಿದಂತೆ ಎ ಮತ್ತು ಬಿ ಗುಂಪಿನಲ್ಲಿರುವರಿಗೆ ಹಂತ ಹಂತವಾಗಿ 7.5 ಲಕ್ಷ ರೂ., 4 ಲಕ್ಷ ರೂ., ಹಾಗೂ 2 ಲಕ್ಷ ರೂ. ಬಿಡುಗಡೆ ಮಾಡಿದೆ. (ಕೆಲವರಿಗೆ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ).
ಬಿಡುಗಡೆ ಹಂತದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾದಾಗ ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆಯೊಂದಿಗೆ ಯಶಸ್ವಿಯಾಗಿ ಹಣ ಬಿಡುಗಡೆಯಾಗಿದೆ. ಇನ್ನೂ ಯೋಗ್ಯ ಕೃಷಿ ಭೂಮಿ, ಮನೆ, ಕೌಶಲ್ಯ ತರಬೇತಿ, ಇನ್ನಿತರೇ ಭರವಸೆಗಳು ಈಡೇರಿಲ್ಲ.
ಕರ್ನಾಟಕದಲ್ಲಿ ಇದುವರೆಗೂ 21 ನಕ್ಸಲರು ಮುಖ್ಯವಾಹಿನಿಗೆ...!
ಇಲ್ಲಿಯವರೆಗೆ ವೆಂಕಟೇಶ್ ಹಾಗಲಗಂಚಿ, ರಾಧಾ ಹಾಗಲಗಂಚಿ, ದೂಬಳದ ಮಲ್ಲಿಕಾ, ಹೊರಲೆ ಜಯ, ಯಡಗುಂದ ಗ್ರಾಮದ ಕೋಮಲ, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ರಿಝ್ವಾನ ಬೇಗಂ, ಪರಶುರಾಂ, ರೇಣುಕಾ, ನಿಲಗುಳಿ ಪದ್ಮನಾಭ್, ಶಿವು, ಕನ್ಯಾಕುಮಾರಿ, ಚೆನ್ನಮ್ಮ, ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ಸುಂದರಿ ಕುತ್ಲೂರು, ಜಯಣ್ಣ ಅರೋಲಿ, ಕೆ.ವಸಂತ್, ಟಿ.ಎನ್.ಜೀಶ, ಕೋಟೆಹೊಂಡ ರವೀಂದ್ರ ಸೇರಿ ಒಟ್ಟು 21 ಜನ ಮುಖ್ಯವಾಹಿನಿಗೆ ಬಂದಿದ್ದಾರೆ. ಈ ಮೂಲಕ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಸರಕಾರ ಘೋಷಿಸಿತ್ತು.
ಆದಿವಾಸಿ ಹೋರಾಟಗಾರ ನಕ್ಸಲ್ ನಾಯಕ ವಿಕ್ರಮ್ ಗೌಡ ಅವರ ಎನ್ಕೌಂಟರ್ ನಕಲಿ ಎಂದು ಮಾನವಹಕ್ಕುಗಳ ಕೆಲ ಹೋರಾಟಗಾರರು ಹೇಳುತ್ತಿದ್ದೂ, ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ಸಕಾಲಕ್ಕೆ ನಡೆಯದ ಪುನರ್ವಸತಿ ಸಭೆಗಳು :
ನಕ್ಸಲರ ಪುನರ್ವಸತಿ ವಿಚಾರದಲ್ಲಿ ಕಾನೂನು ಪ್ರಕ್ರಿಯೆಗಳು ಸಂಪೂರ್ಣಗೊಳ್ಳಲು ಮೂರು ತಿಂಗಳಾಗಬಹುದೆಂದು ನಿರೀಕ್ಷಿಸಿದ್ದೆವು. ಆದರೆ ವರ್ಷವಾಗುತ್ತಿದ್ದರೂ ನಕ್ಸಲರು ಜೈಲಿನಲ್ಲಿಯೇ ಇರುವುದು ಬೇಸರ. ಸರಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಸರಕಾರದ ಕಡೆಯಿಂದ ಅಡೆತಡೆಗಳು ಇರುವುದಾದರೆ ಅದನ್ನು ಬಗೆಹರಿಸಲು ಬದ್ಧವಾಗಿದ್ದೇವೆ. ಅವರನ್ನು ಸಾಧ್ಯವಾದಷ್ಟು ಬೇಗ ನಾಗರಿಕ ಜೀವನದಲ್ಲಿ ನೆಲೆಗೊಳಿಸಿಕೊಳ್ಳಲು ಬೇಕಾಗಿರುವ ಸಹಾಯ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಆ ನಿಟ್ಟಿನಲಿನ ಪ್ರಕ್ರಿಯೆಗಳು ನಿಧಾನವಾಗಿದೆ. ಇದಕ್ಕೆ ಕಾರಣ ನಕ್ಸಲ್ ಪುನರ್ವಸತಿ ಸಭೆಗಳು ಕಾಲಕಾಲಕ್ಕೆ ನಡೆಯದಿರುವುದು. ಕಾನೂನು ಸಲಹೆಗಾರರು, ಬೇರೆ ಇಲಾಖೆಗಳು, ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ, ಇವರೆಲ್ಲರೂ ಒಂದು ಸಂಯೋಜನೆ ಇಟ್ಟುಕೊಂಡು ತ್ವರಿತವಾಗಿ ಕಾನೂನು ಪ್ರಕ್ರಿಯೆ ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು.
-ಡಾ. ಬಂಜಗೆರೆ ಜಯಪ್ರಕಾಶ್, ಸದಸ್ಯ, ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ
ದಿಟ್ಟ ಕ್ರಮಗಳ ಅಗತ್ಯ :
ಕರ್ನಾಟಕ, ಕೇರಳ ರಾಜ್ಯದ ಕೊನೆ ನಕ್ಸಲ್ ತಂಡ ಮುಖ್ಯವಾಹಿನಿಗೆ ಬಂದು ಒಂದು ವರ್ಷ ಆಗುತ್ತಿದೆ. ಬಂದವರು ತೀವ್ರ ಒತ್ತಡದಲ್ಲಿದ್ದಾರೆ. ನಕ್ಸಲರು ಮುಖ್ಯವಾಹಿನಿಗೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದು ನಿಜ. ಅದಕ್ಕೆ ದಿಟ್ಟ ಕ್ರಮಗಳ ಅಗತ್ಯ ಇದೆ.
-ನೂರ್ ಶ್ರೀಧರ್, ರಾಜ್ಯಾಧ್ಯಕ್ಷ, ಕರ್ನಾಟಕ ಜನಶಕ್ತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ
ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ..! :
ನಕ್ಸಲರನ್ನು ಅವರ ಘನತೆಗೆ ಧಕ್ಕೆ ಬಾರದ ರೀತಿಯಲ್ಲಿ ಅವರನ್ನು ಬರಮಾಡಿಕೊಂಡ ರಾಜ್ಯ ಸರಕಾರ ಆ ಸಮಯದಲ್ಲಿ ಅವರಿಗೆ ಕೊಟ್ಟ ಭರವಸೆಗಳನ್ನು ಇನ್ನೂ ಈಡೇರಿಸಬೇಕಾಗಿದೆ. ಅವರೆಲ್ಲರೂ ಇನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ. ಆ ಪ್ರಕ್ರಿಯೆಯ ಭಾಗವಾಗಿದ್ದ ಶಾಂತಿಗಾಗಿ ನಾಗರಿಕರ ವೇದಿಕೆ ಅಂದಿನಿಂದಲೂ ಅವರ ಪರವಾಗಿ ಪ್ರಯತ್ನ ನಡೆಸುತ್ತಲೇ ಇದೆ. ಈಗಲಾದರೂ ಸರಕಾರ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.
-ಪ್ರೊ.ನಗರಗರೆ ರಮೇಶ್, ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ







