ಕರ್ನಾಟಕದ 35 ವರ್ಷದೊಳಗಿನ ಯುವಜನರ ಪೈಕಿ ಸುಮಾರು ಶೇಕಡಾ 23 ರಷ್ಟು ಮಂದಿ ಉದ್ಯೋಗವೂ ಇಲ್ಲದೆ, ಶಿಕ್ಷಣವೂ ಇಲ್ಲದೆ ವಂಚಿತರಾಗಿದ್ದಾರೆ: ವರದಿ

ಸಾಂದರ್ಭಿಕ ಚಿತ್ರ | Photo Credit : magnific
ರಾಜ್ಯದ ನಿರುದ್ಯೋಗ ದರವು ಶೇಕಡಾ 8.6 ರಷ್ಟಿದ್ದರೂ ಸಹ, ಕರ್ನಾಟಕದ 35 ವರ್ಷದೊಳಗಿನ ಯುವಕರ ಪೈಕಿ ಸುಮಾರು ಶೇಕಡಾ 23 ರಷ್ಟು ಯುವಜನರು ಯಾವುದೇ ಉದ್ಯೋಗದಲ್ಲೂ ಇಲ್ಲದೆ ಅಥವಾ ಶಿಕ್ಷಣವನ್ನೂ ಪಡೆಯದೆ ಉಳಿದುಕೊಂಡಿದ್ದಾರೆ. ಸೂಕ್ತ ತರಬೇತಿಯ ಕೊರತೆ ಮತ್ತು ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವುದು ಯುವ ಪೀಳಿಗೆಯು ತಮ್ಮ ಮನೆಗಳನ್ನು ತೊರೆದು ಬೆಂಗಳೂರಿಗೆ ವಲಸೆ ಹೋಗುವಂತೆ ಮಾಡುತ್ತಿದೆ. ಇದು ರಾಜ್ಯದ ರಾಜಧಾನಿಯ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಕರ್ನಾಟಕದ ಯುವ ಕಾರ್ಮಿಕರ ಸ್ಥಿತಿಗತಿ ಕುರಿತಾದ ವರದಿಯೊಂದು ಆತಂಕ ವ್ಯಕ್ತಪಡಿಸಿದೆ.
ಯುವಜನರಲ್ಲಿ ಸುಮಾರು ಶೇಕಡಾ 42 ರಷ್ಟು ಮಂದಿ ಮಾತ್ರ ಪ್ರಸ್ತುತ ಉದ್ಯೋಗದಲ್ಲಿದ್ದಾರೆ ಮತ್ತು ಸುಮಾರು ಶೇಕಡಾ 35 ರಷ್ಟು ಮಂದಿ ಶಿಕ್ಷಣ ಅಥವಾ ತರಬೇತಿ ಪಡೆಯುತ್ತಿದ್ದಾರೆ ಎಂದು ವರದಿ ಗುರುತಿಸಿದೆ. ಉದ್ಯೋಗದಲ್ಲಿರುವವರ ಪೈಕಿ ಶೇಕಡಾ 44 ರಷ್ಟು ಜನರು ನಿಯಮಿತ ಮಾಸಿಕ ವೇತನದ ಉದ್ಯೋಗಗಳಲ್ಲಿದ್ದಾರೆ ಎಂದು ವರದಿ ಹೇಳಿದೆ.
ವಿವಿಧ ಮಾನದಂಡಗಳು
ಶಿಕ್ಷಣ, ಉದ್ಯೋಗ ಸನ್ನದ್ಧತೆ/ಕೌಶಲ್ಯ ತರಬೇತಿ, ಉದ್ಯೋಗಾವಕಾಶಗಳು, ಕೆಲಸ ಮತ್ತು ವಿವಿಧ ವಲಯಗಳಲ್ಲಿನ ಯುವಕರ ಪಾಲ್ಗೊಳ್ಳುವಿಕೆ ಎಂಬ ಐದು ಪ್ರಮುಖ ಮಾನದಂಡಗಳ ಆಧಾರದ ಮೇಲೆ ಜಿಲ್ಲೆಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗಿದೆ. ಈ ನಿಟ್ಟಿನಲ್ಲಿ ‘ಫ್ಯೂಚರ್ ಆಫ್ ಇಂಡಿಯಾ ಫೌಂಡೇಶನ್’ ಬುಧವಾರ (ಜುಲೈ 8) ಜಿಲ್ಲಾವಾರು ಯೂತ್ ಪವರ್ ಸ್ಕೋರ್ ಕಾರ್ಡ್ ಒಳಗೊಂಡ ‘ಯುವ ಅವಕಾಶಗಳ ಕುರಿತ ಕರ್ನಾಟಕ ರಾಜ್ಯ ಕೈಪಿಡಿ’ಯನ್ನು ಬಿಡುಗಡೆ ಮಾಡಿದೆ. ಈ ವರದಿಯು ಸರ್ಕಾರದ 27 ಡೇಟಾಬೇಸ್ ಗಳಿಂದ 80 ಸೂಚಕಗಳನ್ನು ಒಟ್ಟುಗೂಡಿಸಿ, ಐದು ಮಾನದಂಡಗಳಾದ್ಯಂತ ಜಿಲ್ಲೆಗಳ ಸ್ಥಿತಿಗತಿಯನ್ನು ಹೋಲಿಕೆ ಮಾಡಿದೆ.
ಪ್ರಾದೇಶಿಕ ಅಸಮತೋಲನ
ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಸಂಘಟಿತ ವಲಯದ ಉದ್ಯೋಗಾವಕಾಶಗಳು ಕೇಂದ್ರೀಕೃತವಾಗಿವೆ. ಆದರೆ, ರಾಜ್ಯದ ಇತರ ಭಾಗಗಳಲ್ಲಿ ಇಂಥ ಅವಕಾಶಗಳು ತೀರಾ ಸೀಮಿತವಾಗಿವೆ. ಈ ಕಾರಣದಿಂದಾಗಿಯೇ ಯುವಜನರು ಕೆಲಸ ಮತ್ತು ಜೀವನೋಪಾಯವನ್ನು ಅರಸಿಕೊಂಡು ತಮ್ಮ ಮನೆಗಳನ್ನು ಬಿಟ್ಟು ಬೆಂಗಳೂರು ನಗರದತ್ತ ಮುಖ ಮಾಡುತ್ತಿದ್ದಾರೆ.
ಕರ್ನಾಟಕದ ಒಟ್ಟಾರೆ ಸೂಚ್ಯಂಕದ ಸ್ಕೋರ್ 48.5 ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ಸ್ಕೋರ್ ಆದ 50ಕ್ಕಿಂತ ಸ್ವಲ್ಪ ಮಾತ್ರ ಕಡಿಮೆಯಾಗಿದೆ. ಆದರೂ ಸಹ, ಇದು ರಾಜ್ಯದ ಒಳಗಿರುವ ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳ ನಡುವಿನ ಗಂಭೀರ ತಾರತಮ್ಯವನ್ನು ಎತ್ತಿ ತೋರಿಸುತ್ತದೆ. ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಯಾದಗಿರಿ ಕೇವಲ 42 ಸ್ಕೋರ್ ಪಡೆದಿದ್ದರೆ, ಬೆಂಗಳೂರು ನಗರ ಜಿಲ್ಲೆಯು ಅತ್ಯಧಿಕ ಅಂದರೆ 65 ಸ್ಕೋರ್ ಗಳಿಸಿದೆ.
ರಾಜ್ಯದ ಒಟ್ಟಾರೆ ದುಡಿಯುವ ಜನಸಂಖ್ಯೆಯಲ್ಲಿ ಯುವಜನರ ಪಾಲು 2017-18ರಲ್ಲಿ ಇದ್ದ ಶೇಕಡಾ 40ರಿಂದ 2025ರ ವೇಳೆಗೆ ಶೇಕಡಾ 45.6ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಇದೇ ಅವಧಿಯಲ್ಲಿ ನಿರುದ್ಯೋಗ ದರವು ಶೇಕಡಾ 15.8ರಿಂದ ಶೇಕಡಾ 8.6ಕ್ಕೆ ಇಳಿದಿದ್ದು, ನೈಜ ಮಾಸಿಕ ವೇತನದಲ್ಲಿ ಸುಮಾರು ಶೇಕಡಾ 23ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ವೃತ್ತಿಪರ ಅಥವಾ ತಾಂತ್ರಿಕ ತರಬೇತಿಯ ವ್ಯಾಪ್ತಿಯು ಶೇಕಡಾ 6.5ರಿಂದ ಶೇಕಡಾ 28.5ಕ್ಕೆ ವಿಸ್ತರಿಸಿದೆ.
ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಭದ್ರ ಬುನಾದಿಯನ್ನು ಹೊಂದಿರುವ ಕರ್ನಾಟಕವು ಭಾರತದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ ಎಂದು ವರದಿ ಉಲ್ಲೇಖಿಸಿದೆ. ಆದರೆ, ಈ ಆರ್ಥಿಕ ಸಮೃದ್ಧಿಯನ್ನು ಕೇವಲ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಸೀಮಿತಗೊಳಿಸದೆ, ಇಡೀ ರಾಜ್ಯದ ಎಲ್ಲ ಯುವಜನರಿಗೂ ಲಭ್ಯವಾಗುವಂತೆ ಮಾಡುವುದು ಇಂದಿನ ಪ್ರಮುಖ ಸವಾಲಾಗಿದೆ. ಮಹಿಳೆಯರನ್ನು ಸಂಪೂರ್ಣವಾಗಿ ಉದ್ಯೋಗ ವಲಯಕ್ಕೆ ತರುವುದು, ಶಿಕ್ಷಣ ಮತ್ತು ಕೌಶಲ್ಯ ಸಾಮರ್ಥ್ಯವನ್ನು ನೈಜ ಉದ್ಯೋಗಗಳನ್ನಾಗಿ ಪರಿವರ್ತಿಸುವುದು ಹಾಗೂ ತಂತ್ರಜ್ಞಾನದ ಬದಲಾವಣೆಗಳು ಯುವ ಪೀಳಿಗೆಯನ್ನು ಬದಿಗೊತ್ತದೆ ಅವರಿಗೆ ಶಕ್ತಿ ತುಂಬುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ವರದಿ ಹೇಳಿದೆ.
ಯುವಜನರನ್ನು ಕೆಲಸಕ್ಕೆ ಸಿದ್ಧಗೊಳಿಸುವುದು, ಉದ್ಯಮಶೀಲತೆಗೆ ಬೆಂಬಲ ನೀಡುವುದು, ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಜಿಲ್ಲಾ ಆಡಳಿತದಲ್ಲಿ ಯುವಜನರಿಗೆ ಆದ್ಯತೆ ನೀಡುವುದನ್ನು ವರದಿ ಶಿಫಾರಸು ಮಾಡಿದೆ. “ಎಲ್ಲಾ ಯುವಜನರು ಯಶಸ್ವಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯೂತ್ ಪವರ್ ಸ್ಕೋರ್ ಕಾರ್ಡ್, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನಾಗರಿಕರಿಗೆ ಯಾವುದೇ ಪಕ್ಷಪಾತವಿಲ್ಲದೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ದಾರಿ ತೋರಿಸುತ್ತದೆ” ಎಂದು ಫ್ಯೂಚರ್ ಆಫ್ ಇಂಡಿಯಾ ಫೌಂಡೇಶನ್ ನ ಕಾರ್ಯನಿರ್ವಾಹಕ ನಿರ್ದೇಶಕಿ ರುಚಿ ಗುಪ್ತಾ ಹೇಳಿರುವುದಾಗಿ The Hindu ವರದಿ ಉಲ್ಲೇಖಿಸಿದೆ.
ಲಿಂಗ ತಾರತಮ್ಯದ ಅಡೆತಡೆಗಳು
ಮಹಿಳೆಯರು ಉದ್ಯೋಗಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕರ್ನಾಟಕದಲ್ಲಿ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆ ಜಾರಿಯಲ್ಲಿದ್ದರೂ ಸಹ, ರಾಜ್ಯದ 31 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಮಾರುಕಟ್ಟೆ, ಆಸ್ಪತ್ರೆ ಅಥವಾ ತಮ್ಮ ಸಮುದಾಯದ ಗಡಿಯನ್ನು ದಾಟಿ ಒಬ್ಬಂಟಿಯಾಗಿ ಪ್ರಯಾಣಿಸಲು ಅನುಮತಿ ಇಲ್ಲ ಎಂದು ವರದಿ ಬಹಿರಂಗಪಡಿಸಿದೆ.
ಹನ್ನೆರಡು ಜಿಲ್ಲೆಗಳಲ್ಲಿ ಬಹುತೇಕ ಮಹಿಳೆಯರಿಗೆ ಅವರ ಜೀವನವನ್ನು ರೂಪಿಸುವ ಪ್ರಮುಖ ಕೌಟುಂಬಿಕ ನಿರ್ಧಾರಗಳಲ್ಲಿ ಯಾವುದೇ ಹಕ್ಕಿಲ್ಲ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಸಮಸ್ಯೆಗಳು ಸಾಮಾನ್ಯವಾಗಿದ್ದರೂ ಸಹ, ಅಲ್ಲಿನ ಹೆಚ್ಚಿನ ಮಹಿಳೆಯರಿಗೆ ಸ್ವತಂತ್ರವಾಗಿ ಪ್ರಯಾಣಿಸುವ ಅವಕಾಶವಿದೆ. 9 ಜಿಲ್ಲೆಗಳಲ್ಲಿ ಮಹಿಳೆಯರು ವ್ಯಾಪಕವಾಗಿ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಓದುತ್ತಿದ್ದು, ಇದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರಿಗಿರುವ ಆಸಕ್ತಿಯನ್ನು ತೋರಿಸುತ್ತದೆ. ಆದರೆ ಬೆಳಗಾವಿ, ಚಿತ್ರದುರ್ಗ, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪತ್ರಿಕೆ ಓದುವುದು ಮಹಿಳೆಯರ ಸ್ವಾತಂತ್ರ್ಯಕ್ಕೆ ಪೂರಕವಾಗಿಲ್ಲ. ಏಕೆಂದರೆ ಇಲ್ಲಿ ಇಂದಿಗೂ ಮಹಿಳೆಯರಿಗೆ ಸ್ವತಂತ್ರವಾಗಿ ಓಡಾಡಲು ಅನುಮತಿ ಇಲ್ಲ.
ಪದವೀಧರ ನಿರುದ್ಯೋಗಿಗಳ ಪೈಕಿ ಶೇಕಡಾ 24 ರಷ್ಟು ಮಹಿಳೆಯರಾಗಿದ್ದಾರೆ ಎಂದು ವರದಿ ತಿಳಿಸಿದೆ. ನಾಲ್ಕು ಯುವತಿಯರಲ್ಲಿ ಕೇವಲ ಒಬ್ಬರು ಮಾತ್ರ ಉದ್ಯೋಗದಲ್ಲಿದ್ದಾರೆ ಮತ್ತು ಕೇವಲ ಮೂರನೇ ಒಂದು ಭಾಗದಷ್ಟು ಮಹಿಳೆಯರು ಮಾತ್ರ ಮಾರುಕಟ್ಟೆ ಅಥವಾ ಆಸ್ಪತ್ರೆಗೆ ಸ್ವತಂತ್ರವಾಗಿ ಹೋಗುವ ಸಾಮರ್ಥ್ಯ ಹೊಂದಿದ್ದಾರೆ.
ಐಟಿಐಗಳ ಕಳಪೆ ಸ್ಥಿತಿ
ಕಾರ್ಮಿಕ ವಲಯಕ್ಕೆ ಸೇರಲು ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಬೃಹತ್ ಜಾಲವನ್ನು ಕರ್ನಾಟಕ ಹೊಂದಿದ್ದರೂ ಸಹ, ಅನೇಕ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ ನಂತರವೂ ಅಗತ್ಯ ಪ್ರಮಾಣಪತ್ರ ಅಥವಾ ಅರ್ಹತೆ ಪಡೆಯದೆ ಹೊರಬರುತ್ತಿದ್ದಾರೆ. ಬಾಗಲಕೋಟೆ, ಬೀದರ್, ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಕೊಡಗು, ರಾಯಚೂರು, ವಿಜಯನಗರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ರಾಜ್ಯವು ದೇಶದಲ್ಲೇ ಅತಿ ದೊಡ್ಡ ಐಟಿಐ ಜಾಲವನ್ನು ಹೊಂದಿದ್ದರೂ ಸಹ, ಸುಮಾರು ಅರ್ಧದಷ್ಟು ಬೋಧಕ ಹುದ್ದೆಗಳು ಖಾಲಿ ಇವೆ. ನೋಂದಾಯಿತ ಉದ್ಯಮಗಳಲ್ಲಿ ಕೇವಲ ನಾಲ್ಕರಲ್ಲಿ ಒಂದು ಸಂಸ್ಥೆ ಮಾತ್ರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿದೆ ಎಂದು ವರದಿ ಹೇಳಿದೆ.
ವೈಯಕ್ತಿಕ ಸಾಲಗಳತ್ತ ಒಲವು
ಮೈಸೂರು ಮತ್ತು ಉಡುಪಿ ಜಿಲ್ಲೆಗಳು ಬ್ಯಾಂಕ್ ಸಾಲ ವಿತರಣೆಯಲ್ಲಿ ವಿಭಿನ್ನ ಸ್ವರೂಪವನ್ನು ತೋರಿಸಿವೆ. ಸಾಮಾನ್ಯವಾಗಿ ಬ್ಯಾಂಕ್ ಸಾಲಗಳು ವೈಯಕ್ತಿಕ ಬಳಕೆಯ ಬದಲಿಗೆ ಕೃಷಿ, ಕೈಗಾರಿಕೆ ಮತ್ತು ವ್ಯಾಪಾರದಂತಹ ಉತ್ಪಾದಕ ಆರ್ಥಿಕತೆಗೆ ಬಳಕೆಯಾದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ವ್ಯವಹಾರಗಳಿಗೆ ಬಂಡವಾಳ ಸಿಗುತ್ತದೆ. ಆದರೆ ಮೈಸೂರು ಮತ್ತು ಉಡುಪಿಯಲ್ಲಿ ಬ್ಯಾಂಕ್ ಕ್ರೆಡಿಟ್ ಹೆಚ್ಚಾಗಿ ವೈಯಕ್ತಿಕ ಸಾಲಗಳತ್ತ ವಾಲಿದೆ. ಇದರಿಂದಾಗಿ ಸ್ಥಳೀಯ ಸಾಲ ಸೌಲಭ್ಯಗಳು ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಿಗೆ ತಲುಪದೆ ಹೋಗುವ ಸಾಧ್ಯತೆಯಿದೆ. ಇದನ್ನು ಹೊರತುಪಡಿಸಿ, ಹೆಚ್ಚಿನ ಜಿಲ್ಲೆಗಳಲ್ಲಿ ಸ್ಥಳೀಯ ಠೇವಣಿಗಳಿಗೆ ಹೋಲಿಸಿದರೆ ಬ್ಯಾಂಕ್ ಸಾಲದ ಪ್ರಮಾಣ ಹೆಚ್ಚಾಗಿದ್ದು, ಇದು ಉದ್ಯೋಗ ಸೃಷ್ಟಿಸುವ ಉದ್ದೇಶಗಳಿಗಾಗಿ ಸಾಲ ಪಡೆಯಲು ಸ್ಥಳೀಯವಾಗಿ ಹೆಚ್ಚಿನ ಬೇಡಿಕೆ ಇರುವುದನ್ನು ತೋರಿಸುತ್ತದೆ.
ವಾಸ್ತವಿಕ ಸ್ಥಿತಿಗತಿಗಳು
ಉತ್ಪಾದನಾ ವಲಯದಲ್ಲಿ 8,741 ರೂಪಾಯಿಯಿಂದ ಹಿಡಿದು ಸೇವಾ ವಲಯದಲ್ಲಿ 16,977 ರೂಪಾಯಿವರೆಗೆ ಸಂಬಳದ ಶ್ರೇಣಿಯಿದೆ (2017-18ರ ಬೆಲೆಗಳ ಆಧಾರದ ಮೇಲೆ).
ಕುಟುಂಬದ ಒಡೆತನದ ಜಮೀನು ಅಥವಾ ಉದ್ಯಮದಲ್ಲಿ ಕೆಲಸ ಮಾಡುವ ಶೇಕಡಾ 24 ರಷ್ಟು ಮಹಿಳೆಯರಿಗೆ ಮತ್ತು ಶೇಕಡಾ 17 ರಷ್ಟು ಪುರುಷರಿಗೆ ಯಾವುದೇ ಸಂಬಳ ಸಿಗುತ್ತಿಲ್ಲ.
ಉದ್ಯೋಗದಲ್ಲಿರುವ ಯುವತಿಯರ ಪೈಕಿ ಶೇಕಡಾ 34 ರಷ್ಟು ಮತ್ತು ಯುವಕರ ಪೈಕಿ ಶೇಕಡಾ 23 ರಷ್ಟು ಮಂದಿ ಕೃಷಿ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದ ಸಣ್ಣ ಉದ್ಯಮಗಳ ಪೈಕಿ ಶೇಕಡಾ 33 ರಷ್ಟು ಮಹಿಳಾ ಒಡೆತನದ್ದಾಗಿವೆ ಮತ್ತು ಕಾರ್ಖಾನೆ ಕಾರ್ಮಿಕರಲ್ಲಿ ಸುಮಾರು ಶೇಕಡಾ 37 ರಷ್ಟು ಮಹಿಳೆಯರಾಗಿದ್ದಾರೆ.
2023-24ರಲ್ಲಿ 14,984 ನೋಂದಾಯಿತ ಕಾರ್ಖಾನೆಗಳಲ್ಲಿ 12.33 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ.
39.09 ಲಕ್ಷ ಉದ್ಯಮಗಳು ನೋಂದಣಿಯಾಗಿಲ್ಲ ಮತ್ತು ಇವು ಅಸಂಘಟಿತ ಆರ್ಥಿಕ ವಲಯದಲ್ಲಿವೆ.
ಶೇಕಡಾ 56.9ರಷ್ಟು ಯುವ ಕಾರ್ಮಿಕರಿಗೆ ಉದ್ಯೋಗದಾತರಿಂದ ಯಾವುದೇ ಸಾಮಾಜಿಕ ಭದ್ರತೆ, ಭವಿಷ್ಯ ನಿಧಿ (ಪಿಎಫ್), ಗ್ರಾಚ್ಯುಟಿ ಅಥವಾ ಆರೋಗ್ಯ ವಿಮೆಯ ಸೌಲಭ್ಯಗಳಿಲ್ಲ.
ದುಡಿಯುವ ಜನಸಂಖ್ಯೆಯಲ್ಲಿ ಯುವಜನರ (15 ರಿಂದ 29 ವರ್ಷ) ಪಾಲು 2017-18ರಲ್ಲಿ ಇದ್ದ ಶೇಕಡಾ 40ರಿಂದ 2025ರ ವೇಳೆಗೆ ಶೇಕಡಾ 45.6ಕ್ಕೆ ಏರಿಕೆಯಾಗಿದೆ.
ನಿರುದ್ಯೋಗ ದರವು 2017-18ರಲ್ಲಿ ಇದ್ದ ಶೇಕಡಾ 15.8ರಿಂದ 2025ರ ವೇಳೆಗೆ ಶೇಕಡಾ 8.6ಕ್ಕೆ ಇಳಿಕೆಯಾಗಿದೆ.
ನಿರುದ್ಯೋಗ ದರವು 2022-23ರಲ್ಲಿ ಇದ್ದ ಶೇಕಡಾ 8.5ರಿಂದ 2025ರ ವೇಳೆಗೆ ಶೇಕಡಾ 8.6ಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.
ನಿಯಮಿತ ಮಾಸಿಕ ವೇತನ ಪಡೆಯುವ ಉದ್ಯೋಗಗಳಲ್ಲಿ ಇರುವವರ ಸಂಖ್ಯೆ ಶೇಕಡಾ 37.3ರಿಂದ ಶೇಕಡಾ 44.4ಕ್ಕೆ ಹೆಚ್ಚಾಗಿದೆ.
ನೈಜ ಮಾಸಿಕ ವೇತನವು 2017-18ರಲ್ಲಿ ಇದ್ದ 12,517 ರೂಪಾಯಿಯಿಂದ 15,508 ರೂಪಾಯಿಗೆ ಏರಿಕೆಯಾಗಿದ್ದು, ಇದು ಸುಮಾರು ಶೇಕಡಾ 24ರಷ್ಟು ಹೆಚ್ಚಳವನ್ನು ತೋರಿಸುತ್ತದೆ.
(ಮೂಲ: ಯುವ ಅವಕಾಶಗಳ ಕುರಿತ ಕರ್ನಾಟಕ ರಾಜ್ಯ ಕೈಪಿಡಿ)
ಸೌಜನ್ಯ: thehindu.com






