ಜೆಇಇಗಿಂತ ಹೆಚ್ಚಾಗಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಕಾರಣವೇನು?

Photo Credit : PTI
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ವ್ಯಾಪಕ ತನಿಖೆ ನಡೆಯುತ್ತಿರುವ ನಡುವೆಯೇ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಹಲವಾರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪರೀಕ್ಷೆ ರದ್ದತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ. ಈ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಆದರೆ ರದ್ದಾಗಿರುವುದು ಇದೇ ಮೊದಲು. ಇದಕ್ಕೆ ವ್ಯತಿರಿಕ್ತವಾಗಿ, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ತುಲನಾತ್ಮಕವಾಗಿ ಕಡಿಮೆ ವಿವಾದಗಳನ್ನು ಕಂಡಿದೆ. ಜೆಇಇ ಪರೀಕ್ಷೆ ನಡೆಸುವುದು ನೀಟ್ ಗಿಂತ ಹೇಗೆ ಭಿನ್ನವಾಗಿದೆ? ಅವು ಅದೇ ಮಾದರಿಯನ್ನು ಏಕೆ ಅನುಸರಿಸುವುದಿಲ್ಲ? ಎಂಬುದನ್ನು ನೋಡೋಣ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯು (ಪದವಿಪೂರ್ವ) ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿರುವ ಲಿಖಿತ ಪರೀಕ್ಷೆಯಾಗಿದೆ. ಇದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 13 ಭಾಷೆಗಳಲ್ಲಿ ನಡೆಸುತ್ತದೆ - ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು.
ಜಂಟಿ ಪ್ರವೇಶ ಪರೀಕ್ಷೆ (JEE Main), ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಿಗೆ ಪ್ರವೇಶಕ್ಕಾಗಿರುವ ಪರೀಕ್ಷೆಯಾಗಿದೆ. ಜೆಇಇ (ಮುಖ್ಯ) ವರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಐಐಟಿಗಳಿಗೆ ಪ್ರವೇಶಕ್ಕಾಗಿ ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹರಾಗಿರುತ್ತಾರೆ.
ಜೆಇಇ (ಮುಖ್ಯ) ಪರೀಕ್ಷೆಯನ್ನು ಎನ್ಟಿಎ ನಡೆಸುತ್ತದೆ, ಇದರಲ್ಲಿ ಐಐಟಿಗಳು ಸ್ವಲ್ಪ ಮಟ್ಟಿಗೆ ಭಾಗಿಯಾಗಿರುತ್ತವೆ. ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯನ್ನು ಸಂಪೂರ್ಣವಾಗಿ ಐಐಟಿಗಳು ನಿರ್ವಹಿಸುತ್ತವೆ.
►ನೀಟ್ ಮತ್ತು ಜೆಇಇ ಪರೀಕ್ಷೆ ಹೇಗೆ ನಡೆಯುತ್ತವೆ ?
ಪರೀಕ್ಷೆಗಳನ್ನು ಹೇಗೆ ನಡೆಸಲಾಗುತ್ತದೆ ಎಂಬುದರಲ್ಲಿ ಎರಡು ಪ್ರಮುಖ ವ್ಯತ್ಯಾಸವೆಂದರೆ ಜೆಇಇಗಿಂತ ಹೆಚ್ಚಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಾರೆ. ಜೆಇಇ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ.
ಆನ್ಲೈನ್ ಪರೀಕ್ಷೆಯು ಪರೀಕ್ಷಾ ಪ್ರಕ್ರಿಯೆಯಿಂದ ಹಲವಾರು ದೋಷಗಳನ್ನು ತೆಗೆದುಹಾಕುತ್ತದೆ. ಉದಾಹರಣೆಗೆ ಕೇಂದ್ರಗಳಿಗೆ ಸಾಗಣೆ ಮತ್ತು ವಿತರಣೆಯ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಸಾಧ್ಯತೆ ಇಲ್ಲಿರುವುದಿಲ್ಲ. ಇದು ಮುದ್ರಣಾಲಯ ಅಥವಾ ಸಾರಿಗೆ ಕಂಪನಿಯಂತಹ ಹೊರಗಿನ ಏಜೆನ್ಸಿಗಳ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
► ಹಾಗಾದರೆ ನೀಟ್ ಪರೀಕ್ಷೆಯನ್ನು ಕೂಡಾ ಆನ್ ಲೈನ್ ಆಗಿ ಯಾಕೆ ಮಾಡುತ್ತಿಲ್ಲ?
ಕಂಪ್ಯೂಟರ್ ಆಧಾರಿತ ಅಥವಾ ಆನ್ ಲೈನ್ ಆಗಿ ನೀಟ್-ಯುಜಿ ಪರೀಕ್ಷೆಯನ್ನು ಜಾರಿಗೆ ತರಲು ಎರಡು ಪ್ರಮುಖ ಅಡೆತಡೆಗಳಿವೆ.
ಮೊದಲನೆಯದಾಗಿ, ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ಬಹಳ ಕಡಿಮೆ ಸಂಖ್ಯೆಯ ಕೇಂದ್ರಗಳು ಸಜ್ಜಾಗಿವೆ. ಅರ್ಜಿಗಳ ಸಂಖ್ಯೆಯ ವಿಷಯದಲ್ಲಿ ನೀಟ್-ಯುಜಿ ಭಾರತದ ಅತಿದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ .ಅವರಿಗೆ ಅವಕಾಶ ಕಲ್ಪಿಸಲು ಸಾಕಷ್ಟು ಕೇಂದ್ರಗಳಿಲ್ಲ. ಅದೇ ವೇಳೆ ಜೆಇಇಗೆ ಸುಮಾರು 14 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ.
ಎನ್ಟಿಎ ಒಂದೇ ಶಿಫ್ಟ್ನಲ್ಲಿ ಸುಮಾರು 1.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಬಹುದು. ಇದರರ್ಥ ನೀಟ್-ಯುಜಿಯನ್ನು ಕನಿಷ್ಠ 15 ಶಿಫ್ಟ್ಗಳು ಮತ್ತು ವಾರಗಳ ಅವಧಿಯಲ್ಲಿ ನಡೆಸಬೇಕಾಗುತ್ತದೆ.
ಎರಡನೆಯದಾಗಿ, ಪರೀಕ್ಷೆಯನ್ನು ಹಲವಾರು ಶಿಫ್ಟ್ಗಳಲ್ಲಿ ನಡೆಸಿದರೆ, ಸಾಮಾನ್ಯೀಕರಣ ಪ್ರಕ್ರಿಯೆಯು ಒಂದು ಸವಾಲಾಗಿರುತ್ತದೆ. "ಜೆಇಇ ನಂತಹ ಪರೀಕ್ಷೆಗಳಲ್ಲಿ ಮಾಡುವಂತೆ, ಹಲವಾರು ಶಿಫ್ಟ್ಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಾಮಾನ್ಯೀಕರಿಸುವ ಪ್ರಕ್ರಿಯೆ ಅಸ್ತಿತ್ವದಲ್ಲಿದ್ದರೂ, ಬಹು ಶಿಫ್ಟ್ಗಳಲ್ಲಿ ಹಾಗೆ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಇದು ಕಾನೂನು ಹೋರಾಟಗಳಿಗೆ ಕಾರಣವಾಗುತ್ತದೆ ಮತ್ತು ಪ್ರವೇಶ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ" ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಪರೀಕ್ಷೆಯ ಪ್ರಶ್ನೆಗಳನ್ನು ವಿವಿಧ ಹಂತಗಳಲ್ಲಿ ವಿಭಜಿಸಲಾಗಿದೆ. ಅಂದರೆ ಸುಲಭವಿರುವವು, ಸ್ವಲ್ಪ ಕಷ್ಟದ್ದು, ಕಠಿಣವಾಗಿರುವುದು ಹೀಗೆ. ಪ್ರತಿ ಪ್ರಶ್ನೆ ಪತ್ರಿಕೆಯು ಈ ವಿಭಿನ್ನ ಹಂತಗಳಿಂದ ನಿರ್ದಿಷ್ಟ ಶೇಕಡಾವಾರು ಪ್ರಶ್ನೆಗಳನ್ನು ಹೊಂದಿರುತ್ತದೆ.
"ಎಂಜಿನಿಯರಿಂಗ್ ವಿಷಯಕ್ಕೆ ಬಂದರೆ, ಪ್ರತಿ ವರ್ಷ ಅನೇಕ ಸೀಟುಗಳು ಖಾಲಿಯಾಗುತ್ತವೆ. ವೈದ್ಯಕೀಯದಷ್ಟು ಹೆಚ್ಚಿನ ಜವಾಬ್ದಾರಿ ಇಲ್ಲ." ಎಂದು ಮೇಲೆ ಉಲ್ಲೇಖಿಸಿರುವ ಅದೇ ಅಧಿಕಾರಿ ಹೇಳಿದ್ದಾರೆ.
ಇದು ಸುಪ್ರೀಂ ಕೋರ್ಟ್ ನೀಡಿದ ಸೂಚನೆಗೆ ಅನುಗುಣವಾಗಿದೆ ಎಂದು ಆರೋಗ್ಯ ಸಚಿವಾಲಯದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ನೀಟ್-ಯುಜಿ 2024 ರಲ್ಲಿ ಅಕ್ರಮಗಳ ನಂತರ, ನೀಟ್-ಪಿಜಿ ಪತ್ರಿಕೆ ಸೋರಿಕೆಯ "ವದಂತಿಗಳು" ಸಹ ಇದ್ದವು, ಇದು ಅದನ್ನು ಮುಂದೂಡಲು ಕಾರಣವಾಯಿತು. ನೀಟ್-ಪಿಜಿ ಪರೀಕ್ಷೆಯನ್ನು ನಡೆಸುವ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಎರಡು ಪಾಳಿಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಅದನ್ನು ನಡೆಸಲು ನಿರ್ಧರಿಸಿತು. ಆದರೆ, ಮೊಕದ್ದಮೆಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕೆಂದು ನಿರ್ದೇಶಿಸಿತು. ಅದು ಹಿಂದಿನಂತೆಯೇ ಮುಂದುವರೆಯಿತು ಎಂದಿದ್ದಾರೆ.
►ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಸುರಕ್ಷಿತವೇ?
ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿದ್ದರೂ, ಅವು ಸಾಮಾನ್ಯವಾಗಿ ಹೆಚ್ಚು ಸುರಕ್ಷಿತವಾಗಿರುತ್ತವೆ.
ಈ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಒಬ್ಬ ವ್ಯಕ್ತಿಯಿಂದ ತಯಾರಿಸಲಾಗುವುದಿಲ್ಲ. ವಿವಿಧ ರೀತಿಯ ಪ್ರಶ್ನೆಗಳ ಬ್ಯಾಂಕ್ ಅನ್ನು ಹಲವಾರು ತಜ್ಞರು ಸಿದ್ಧಪಡಿಸುತ್ತಾರೆ. ಸಿಸ್ಟಂ ಯಾವ ರೀತಿಯ ಪ್ರಶ್ನೆಗಳು ಮತ್ತು ಅವುಗಳಲ್ಲಿ ಎಷ್ಟು ಅಗತ್ಯವಿದೆ ಎಂಬುದರ ನೀಲನಕ್ಷೆಯನ್ನು ಆಧರಿಸಿ ಪ್ರಶ್ನೆಗಳನ್ನು ಸ್ವತಃ ಆಯ್ಕೆ ಮಾಡುತ್ತದೆ. ಪ್ರಶ್ನೆ ಪತ್ರಿಕೆಯು ಪರೀಕ್ಷಾ ಕೇಂದ್ರಗಳಲ್ಲಿ ನಿಗದಿತ ಸಮಯದಲ್ಲಿ ಒಟ್ಟಿಗೆ ತೆರೆಯುತ್ತದೆ, ಇದು ಒಂದು ಕೇಂದ್ರದಿಂದ ಇತರ ಕೇಂದ್ರಗಳಿಗೆ ಸೋರಿಕೆಯಾಗುವ ಸಾಧ್ಯತೆಯನ್ನು ತೆಗೆದುಹಾಕುತ್ತದೆ. ಈ ಪ್ರಶ್ನೆ ಪತ್ರಿಕೆಗಳ ಭೌತಿಕ ಸಾಗಣೆ ಇಲ್ಲ.
“ದೇಶಾದ್ಯಂತ ಭೌತಿಕವಾಗಿ ಪತ್ರಿಕೆಗಳನ್ನು ಸಾಗಿಸುವಾಗ, ಎಷ್ಟೇ ಭದ್ರತೆ ಇರಿಸಿದ್ದರೂ ಸೋರಿಕೆಯ ಸಾಧ್ಯತೆ ಇರುತ್ತದೆ. ಅದು ಮುದ್ರಣ ಸಂಸ್ಥೆಗಳಿಂದ ಅಥವಾ ಅದನ್ನು ಸಾಗಿಸುವ ವಾಹನದಿಂದ ಸೋರಿಕೆಯಾಗಬಹುದು. ನೀಟ್ ಹೆಚ್ಚು ಅಭ್ಯರ್ಥಿಗಳು ಹಾಜರಾಗುವ ಪರೀಕ್ಷೆಯಾಗಿದೆ. ಪ್ರಶ್ನೆ ಪತ್ರಿಕೆಯನ್ನು ಪಡೆಯಲು ಹಣ ಪಾವತಿಸಲು ಸಿದ್ಧರಿರುವ ಜನರು ಯಾವಾಗಲೂ ಇರುತ್ತಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.
►NEET ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಕಾರಣವೇನು?
ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುವ ಏಕೈಕ ಮಾರ್ಗವಾದ NEET-UG ಪರೀಕ್ಷೆಯು ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ. ದೇಶಾದ್ಯಂತ ಸುಮಾರು 1 ಲಕ್ಷ ವೈದ್ಯಕೀಯ ಸೀಟುಗಳಿಗೆ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಸರ್ಕಾರಿ ಕಾಲೇಜುಗಳಿಗೆ ಪ್ರವೇಶಿಸಲು ವಿದ್ಯಾರ್ಥಿಗಳು ಶ್ರಮಿಸುತ್ತಿರುವುದರಿಂದ ಸ್ಪರ್ಧೆ ತೀವ್ರವಾಗಿದೆ. ಈ ಕಾಲೇಜುಗಳು ಖಾಸಗಿ ವೈದ್ಯಕೀಯ ಕಾಲೇಜುಗಳಿಗಿಂತ ಕಡಿಮೆ ಶುಲ್ಕ ರಚನೆಯನ್ನು ಹೊಂದಿವೆ. ಖಾಸಗಿ ಕಾಲೇಜುಗಳಲ್ಲಿ ಶುಲ್ಕವು ಕೋಟಿಗಟ್ಟಲೆ ತಲುಪಬಹುದು.
ಮತ್ತೊಂದು ಕಳವಳವೆಂದರೆ ಕೋಚಿಂಗ್ ಉದ್ಯಮದ ತ್ವರಿತ ವಿಸ್ತರಣೆ. ಈ ಬೆಳವಣಿಗೆಯು ಹೆಚ್ಚಿನ ಅಪಾಯದ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲಿ ವಿದ್ಯಾರ್ಥಿಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳಿಗೆ ಹಣ ಪಾವತಿಸಲು ತರಬೇತಿ ಕೇಂದ್ರಗಳು ಪ್ರಚೋದಿಸಲ್ಪಡಬಹುದು. ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಪಾಸಾದರೆ, ಈ ಕೋಚಿಂಗ್ ಸೆಂಟರ್ ಗೆ ಮುಂದಿನ ವರ್ಷ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಾರೆ ಎಂಬ ಲೆಕ್ಕಾಚಾರ ಇಲ್ಲಿದೆ ಎಂದು ಹೆಸರು ಹೇಳಲು ಬಯಸದ ತಜ್ಞರೊಬ್ಬರು ಹೇಳಿದ್ದಾರೆ.
2024 ರ NEET-UG ಅಕ್ರಮಗಳ ನಂತರ, 14 ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಗೊಳಿಸಲಾಯಿತು, 215 ವಿದ್ಯಾರ್ಥಿಗಳ ಉಮೇದುವಾರಿಕೆಯನ್ನು ತಡೆಹಿಡಿಯಲಾಯಿತು. ಅಕ್ರಮದಲ್ಲಿ ಭಾಗವಹಿಸಿದ ಈಗಾಗಲೇ ವೈದ್ಯಕೀಯ ಕೋರ್ಸ್ಗಳಿಗೆ ದಾಖಲಾಗಿದ್ದ 26 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಯಿತು. ಹಲವರನ್ನು ಎರಡರಿಂದ ಮೂರು ವರ್ಷಗಳವರೆಗೆ ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ.
ಕೃಪೆ: indianexpress.com






