NEET-UG ಪರೀಕ್ಷಾ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದು ಹೇಗೆ? ಈ ಕೃತ್ಯದ ಕಿಂಗ್ಪಿನ್ ಪಿವಿ ಕುಲಕರ್ಣಿ ಯಾರು?

ಪಿವಿ ಕುಲಕರ್ಣಿ | Photo Credit : X
ನೀಟ್-ಯುಜಿ 2026 ರ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಈ ಕೃತ್ಯದ ಹಿಂದಿನ "ಕಿಂಗ್ಪಿನ್" ನಿವೃತ್ತ ಕೆಮಿಸ್ಟ್ರಿ ಶಿಕ್ಷಕ ಪಿವಿ ಕುಲಕರ್ಣಿ ಎಂಬಾತನನ್ನು ಬಂಧಿಸಿದೆ.
ಮೇ 3 ರಂದು ನೀಟ್-ಯುಜಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ ಕೆಲವು ದಿನಗಳ ಮೊದಲು ಪುಣೆಯಲ್ಲಿ ರಹಸ್ಯವಾಗಿ ಆಯೋಜಿಸಲಾದ ತರಬೇತಿ ತರಗತಿಗಳ ಮೂಲಕ ಕುಲಕರ್ಣಿ ಪರೀಕ್ಷಾ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಸೋರಿಕೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (NEET-UG) 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಸೋರಿಕೆಯ ಆರೋಪದ ನಂತರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಜೂನ್ 21 ರಂದು ಮರುಪರೀಕ್ಷೆ ನಡೆಯಲಿದೆ.
ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿದ್ದು ಹೇಗೆ?
ಎಪ್ರಿಲ್ ಕೊನೆಯ ವಾರದಲ್ಲಿ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ಸಿಬಿಐ ತಿಳಿಸಿದೆ. ಕುಲಕರ್ಣಿ ಮತ್ತು ಮತ್ತೊಬ್ಬ ಆರೋಪಿ ಮನೀಷಾ ವಾಘ್ಮಾರೆ ಒಟ್ಟಿಗೆ ಸೇರಿ ವಿದ್ಯಾರ್ಥಿಗಳ ಗುಂಪನ್ನು ಒಟ್ಟುಗೂಡಿಸಿದ್ದರು. ಇವರು ಎಲೆಕ್ಟ್ರಾನಿಕ್ ಪ್ರತಿಗಳು ಅಥವಾ ಮುದ್ರಿತ ಹಾಳೆಗಳನ್ನು ವಿತರಿಸುವ ಬದಲು ಬೇರೆಯೇ ಯೋಜನೆ ಹೂಡಿದ್ದರು. ಅದೇನೆಂದರೆ, ಕುಲಕರ್ಣಿ ಪುಣೆಯಲ್ಲಿರುವ ತಮ್ಮ ಮನೆಯಿಂದಲೇ ಅತ್ಯಂತ ವಿಶೇಷವಾದ “ವಿಶೇಷ ತರಬೇತಿ ತರಗತಿಗಳನ್ನು” ನಡೆಸಿದ್ದರು.
ಈ ಅವಧಿಗಳಲ್ಲಿ ಕುಲಕರ್ಣಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಬಹು-ಆಯ್ಕೆಯ ಪ್ರಶ್ನೆಗಳು ಮತ್ತು ಸರಿಯಾದ ಉತ್ತರಗಳನ್ನು ನಿರ್ದೇಶಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ತರಬೇತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಈ ವಿವರಗಳನ್ನು ತಮ್ಮ ನೋಟ್ಬುಕ್ ಗಳಲ್ಲಿ ಬರೆದುಕೊಳ್ಳಲು ಹೇಳಲಾಗಿತ್ತು.
ಇತ್ತೀಚಿನ ತನಿಖೆಗಳಲ್ಲಿ ಸಿಬಿಐ ತನಿಖಾಧಿಕಾರಿಗಳು ವಿದ್ಯಾರ್ಥಿಗಳು ಕೈಬರಹದಲ್ಲಿ ಬರೆದುಕೊಂಡಿರುವ ನೋಟ್ಸ್ ಅಧಿಕೃತ NEET-UG 2026 ಪರೀಕ್ಷಾ ಪತ್ರಿಕೆಯಲ್ಲಿನ ರಸಾಯನಶಾಸ್ತ್ರ ವಿಭಾಗದ ಪ್ರಶ್ನೆಗಳಿಗೆ “ನಿಖರವಾಗಿ ತಾಳೆಯಾಗುತ್ತವೆ” ಎಂದು ತಿಳಿಸಿದ್ದಾರೆ.
ಯಾರು ಈ ಪಿವಿ ಕುಲಕರ್ಣಿ?
ಕುಲಕರ್ಣಿ ಲಾತೂರಿನ ದಯಾನಂದ ಜೂನಿಯರ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿದ್ದ. ಇಂಡಿಯನ್ ಎಕ್ಸ್ಪ್ರೆಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿದ್ಧೇಶ್ವರ ಬೆಳ್ಳಾಳೆ, ಕುಲಕರ್ಣಿ ಅವರು 2022-23ರಲ್ಲಿ ನಿವೃತ್ತರಾಗಿದ್ದಾನೆ ಎಂದು ತಿಳಿಸಿದ್ದಾರೆ. ನಿವೃತ್ತಿಯಾದ ಎರಡು ವರ್ಷಗಳ ನಂತರ ಆತ ಲಾತೂರಿನಿಂದ ಪುಣೆಗೆ ಸ್ಥಳಾಂತರಗೊಂಡು ಅಲ್ಲಿಯೇ ನೆಲೆಸಿದ್ದಾನೆ. ನಿವೃತ್ತಿಯ ನಂತರ ನಮ್ಮ ಕಾಲೇಜಿಗೂ ಆತನಿಗೂ ಯಾವುದೇ ಸಂಬಂಧವಿಲ್ಲ. ಆತ ಇಲ್ಲಿ ಪಾಠ ಮಾಡುತ್ತಿದ್ದಾಗ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಕುಲಕರ್ಣಿ ಎನ್ಟಿಎಗಾಗಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದರ ಜೊತೆಗೆ, ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಗೆ (MSBSHSE) 12ನೇ ತರಗತಿಯ ಮಂಡಳಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಲ್ಲಿಯೂ ತೊಡಗಿಸಿಕೊಂಡಿದ್ದ ಎಂದು ಬೆಳ್ಳಾಳೆ ತಿಳಿಸಿದ್ದಾರೆ.
ಕುಲಕರ್ಣಿ MSBSHSEಯ ಲಾತೂರ್ ವಿಭಾಗೀಯ ಮಂಡಳಿಗೆ ರಸಾಯನಶಾಸ್ತ್ರ ಪತ್ರಿಕೆಯ ಮುಖ್ಯ ಮಾಡರೇಟರ್ ಆಗಿಯೂ ಸೇವೆ ಸಲ್ಲಿಸಿದ್ದ ಎಂದು ದಯಾನಂದ ಜೂನಿಯರ್ ಕಾಲೇಜಿನ ಮತ್ತೊಬ್ಬ ನಿವೃತ್ತ ರಸಾಯನಶಾಸ್ತ್ರ ಉಪನ್ಯಾಸಕ ಕಿಶೋರ್ ಪನ್ಸೆ ಹೇಳಿದ್ದಾರೆ.
ಕುಲಕರ್ಣಿಗೆ ಮಂಡಳಿಯೊಂದಿಗಿನ ಸಂಪರ್ಕದ ಕುರಿತು ಪ್ರತಿಕ್ರಿಯೆ ಕೇಳಿದ್ದರೂ MSBSHSE ಅಧ್ಯಕ್ಷ ತ್ರಿಗುಣ್ ಕುಲಕರ್ಣಿ ಪ್ರತಿಕ್ರಿಯಿಸಿಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮೂಲಕ ನೀಟ್ ಪರೀಕ್ಷಾ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಸಿಬಿಐ ಹೇಳಿಕೊಂಡಿದ್ದು, ಇದರಿಂದ ಅವರಿಗೆ ಗೌಪ್ಯ ಪ್ರಶ್ನೆ ಪತ್ರಿಕೆಗಳು ಸಿಕ್ಕಿದ್ದವು. ಅವರ ನಿಖರ ಪಾತ್ರದ ಕುರಿತು ಸಿಬಿಐ ಸಾರ್ವಜನಿಕವಾಗಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ
ಕೇಂದ್ರ ಶಿಕ್ಷಣ ಸಚಿವಾಲಯವು ಔಪಚಾರಿಕ ದೂರು ದಾಖಲಿಸಿದ ನಂತರ ಮೇ 12ರಂದು ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಈ ಪ್ರಕರಣ ಮೊದಲು ಮೇ 7ರಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿತ್ತು. ಅಂದಿನಿಂದ ಸಿಬಿಐ ಅನೇಕ ರಾಜ್ಯಗಳಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಹಲವೆಡೆಯಿಂದ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ಮೊಬೈಲ್ ಫೋನ್ಗಳು ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಪ್ರಸ್ತುತ ವಿಧಿವಿಜ್ಞಾನ ಮತ್ತು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 14ರ ಹೊತ್ತಿಗೆ ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ ಮತ್ತು ಅಹಲ್ಯಾನಗರ ಸೇರಿದಂತೆ ವಿವಿಧ ನಗರಗಳಿಂದ ಏಳು ಆರೋಪಿಗಳನ್ನು ಬಂಧಿಸಲಾಗಿತ್ತು.
ವಿಶೇಷ ತರಗತಿಗಳ ಮೂಲಕ ಸೋರಿಕೆಯಾದ ವಿಷಯವನ್ನು ಪ್ರವೇಶಿಸಲು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರಿಂದ ಹಲವಾರು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದ ಮಧ್ಯವರ್ತಿಗಳ ಜಾಲವನ್ನೂ ಸಿಬಿಐ ಪತ್ತೆಹಚ್ಚಿದೆ.
ಕೋಚಿಂಗ್ ಸೆಂಟರ್ ಮೇಲೆ ಕಣ್ಣು
ಲಾತೂರಿನ ರೇಣುಕೈ ಕೆಮಿಸ್ಟ್ರಿ ಕ್ಲಾಸೆಸ್ (RCC) ನಿರ್ದೇಶಕ ಶಿವರಾಜ್ ಮೋಟೆಗಾಂವ್ಕರ್ ಅವರನ್ನೂ ಸಿಬಿಐ ಪ್ರಶ್ನಿಸಿದೆ.
28 ಸದಸ್ಯರ ಸಿಬಿಐ ತಂಡವು ಅವರ ನಿವಾಸಕ್ಕೆ ಭೇಟಿ ನೀಡಿ ವ್ಯಕ್ತಿಗಳನ್ನು ವಿಚಾರಣೆ ನಡೆಸಿದೆ. ಕೋಚಿಂಗ್ ಸಂಸ್ಥೆ ಮತ್ತು ಆಪಾದಿತ ಸೋರಿಕೆ ಜಾಲದ ನಡುವಿನ ಯಾವುದೇ ಸಂಬಂಧದ ವ್ಯಾಪ್ತಿಯನ್ನು ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮೋಟೆಗಾಂವ್ಕರ್ ಅವರ ಸಂಸ್ಥೆಯು ಮಹಾರಾಷ್ಟ್ರದಾದ್ಯಂತ ಶಾಖೆಗಳನ್ನು ಹೊಂದಿದೆ. ಇದು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ಪ್ರಮುಖ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ. ಕೋಚಿಂಗ್ ತರಗತಿಗಳಲ್ಲಿ ಪ್ರಸಾರವಾಗುವ “ಅಣಕು ಪ್ರಶ್ನೆ ಪತ್ರಿಕೆ”ಗಳಲ್ಲಿನ ಪ್ರಶ್ನೆಗಳು ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ಕಾಣಿಸಿಕೊಂಡಿವೆ ಎಂಬ ಆರೋಪಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಸ್ಟರ್ಮೈಂಡ್ ಬಂಧನ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ಮುಂದುವರಿಯುತ್ತಿದ್ದು, ಸಿಬಿಐ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಪುಣೆಯ ಹಿರಿಯ ಸಸ್ಯಶಾಸ್ತ್ರ ಶಿಕ್ಷಕಿ ಮತ್ತು ಎನ್ಟಿಎ ನೇಮಿಸಿದ ತಜ್ಞೆ ಮನೀಷಾ ಗುರುನಾಥ್ ಮಾಂಧರೆಯನ್ನು ಪ್ರಕರಣದ ಮಾಸ್ಟರ್ಮೈಂಡ್ಗಳಲ್ಲಿ ಒಬ್ಬಳೆಂದು ಗುರುತಿಸಲಾಗಿದೆ.
ಮಾಂಧರೆ ಪುಣೆಯ ಶಿವಾಜಿನಗರದ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ನ ಶಿಕ್ಷಕಿ. ಅಲ್ಲಿ ಅವರು ನೀಟ್ ಪ್ರಶ್ನೆ ಪತ್ರಿಕೆ ಹೊಂದಿಸುವ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತಿದ್ದರು. ಅವರು ಕಳೆದ ಐದಾರು ವರ್ಷಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ತಂಡದಲ್ಲಿದ್ದರು. ಮಾಂಧರೆ ನೀಟ್-ಯುಜಿ 2026 ಪರೀಕ್ಷೆಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳನ್ನು ಸಿದ್ಧಪಡಿಸುವ ತಂಡದ ಭಾಗವಾಗಿದ್ದರು ಎಂದು ಮೂಲಗಳು ಹೇಳಿರುವುದಾಗಿ India Today ವರದಿ ಮಾಡಿದೆ.
ತನಿಖಾಧಿಕಾರಿಗಳ ಪ್ರಕಾರ ಪ್ರಶ್ನೆ ಪತ್ರಿಕೆಗಳಿಗೆ ಅವರು ನೇರ ಪ್ರವೇಶವನ್ನು ಹೊಂದಿದ್ದರು. ಎಪ್ರಿಲ್ ನಲ್ಲಿ ಅವರ ನಿವಾಸದಲ್ಲಿ ನಡೆದ ಖಾಸಗಿ ತರಬೇತಿ ಅವಧಿಗಳಲ್ಲಿ ಆಯ್ದ ವಿದ್ಯಾರ್ಥಿಗಳೊಂದಿಗೆ ಅವರು ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪ್ರಶ್ನೆಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಶ್ನೆಗಳಲ್ಲಿ ಹಲವು ಮೇ 3ರಂದು ನಡೆದ ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ಕಾಣಿಸಿಕೊಂಡಿದ್ದವು.
ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರಾದ ಒಟ್ಟು ಆರೋಪಿಗಳ ಸಂಖ್ಯೆ 9ಕ್ಕೇರಿದೆ. ಸಿಬಿಐ ತನಿಖೆಯ ಭಾಗವಾಗಿ ದಾಖಲೆಗಳು, ಲ್ಯಾಪ್ಟಾಪ್ಗಳು ಮತ್ತು ಹಣಕಾಸು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಸುಪ್ರೀಂ ಕೋರ್ಟ್ ತಲುಪಿದ ನೀಟ್ ವಿವಾದ
ನೀಟ್ ಪರೀಕ್ಷೆ ರದ್ದತಿ ಪ್ರಕರಣವು ಈಗ ಸುಪ್ರೀಂ ಕೋರ್ಟ್ಗೆ ತಲುಪಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅನ್ನು ಅದರ ಪ್ರಸ್ತುತ ರೂಪದಲ್ಲಿ ವಿಸರ್ಜಿಸಲು ಅರ್ಜಿ ಸಲ್ಲಿಸಲಾಗಿದೆ.
ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಸಲ್ಲಿಸಿದ ಈ ಅರ್ಜಿಯು ನಡೆಯುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಗಳ ನಡುವೆಯೇ ಬಂದಿದೆ. ಪರೀಕ್ಷೆಯನ್ನು ನಡೆಸುವಲ್ಲಿ ಪುನರಾವರ್ತಿತ ವೈಫಲ್ಯಗಳು ಈ ಸಮಸ್ಯೆಗಳಿಗೆ ಕಾರಣವೆಂದು ಅರ್ಜಿಯಲ್ಲಿ ಹೇಳಲಾಗಿದೆ. ಪ್ರಸ್ತುತ ಸೊಸೈಟೀಸ್ ನೋಂದಣಿ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ರಚಿಸಲಾದ ಶಾಸನಬದ್ಧ ಸಂಸ್ಥೆಯೊಂದಿಗೆ ಬದಲಾಯಿಸಲು ಇದು ಕರೆ ನೀಡಿದೆ.
22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ವೈದ್ಯಕೀಯ ಪ್ರವೇಶವನ್ನು ನಿರ್ಧರಿಸುವ ನೀಟ್ ಪುನರಾವರ್ತಿತ ಅಡಚಣೆಗಳನ್ನು ಭರಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪುನರಾವರ್ತಿತ ಸೋರಿಕೆಗಳು ಮತ್ತು ರದ್ದತಿಗಳು ನ್ಯಾಯಸಮ್ಮತತೆ ಮತ್ತು ಹೊಣೆಗಾರಿಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತವೆ. ಹೆಚ್ಚಿನ ಸುರಕ್ಷತೆ ಮತ್ತು ಸ್ಪಷ್ಟ ಮೇಲ್ವಿಚಾರಣೆಯೊಂದಿಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಹೊಸ ವ್ಯವಸ್ಥೆಗೆ ಬದಲಾಗಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.






