Fact Check | ಭಾರತದಲ್ಲಿ ಬಾಂಗ್ಲಾದೇಶದ ಮಾದರಿಗೆ ನೇಹಾ ಬೋರಾ ಕರೆ ನೀಡಿಲ್ಲ
ಸೋಷಿಯಲಿಸ್ಟ್ ಸ್ಟೂಡೆಂಟ್ಸ್ ಫ್ರಂಟ್ ಸಮ್ಮೇಳನಕ್ಕೆ ಕಳುಹಿಸಿದ್ದ ಸಂದೇಶ ವೈರಲ್; ಪ್ರಜಾಪ್ರಭುತ್ವ ಮತ್ತು ವಿದ್ಯಾರ್ಥಿಗಳ ಹಕ್ಕುಗಳ ಕುರಿತ ಮಾತುಗಳನ್ನು ಹಿಂಸಾಚಾರದ ಬೆಂಬಲವೆಂದು ಬಿಂಬಿಸಿದ BJP

Photo: Alt News
ಹೊಸದಿಲ್ಲಿ: ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ಸೃಷ್ಟಿಸಲು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ಅಧ್ಯಕ್ಷೆ ನೇಹಾ ಬೋರಾ ಕರೆ ನೀಡಿದ್ದಾರೆ ಎಂಬ ಆರೋಪ ಈಗ ವಿವಾದದ ಕೇಂದ್ರವಾಗಿದೆ. ಆದರೆ, ವೈರಲ್ ಆಗಿರುವ ವಿಡಿಯೊದ ಪೂರ್ಣ ಸಂದರ್ಭವನ್ನು ಪರಿಶೀಲಿಸಿದಾಗ, ಅವರು ಭಾರತದಲ್ಲಿ ಹಿಂಸಾಚಾರಕ್ಕೆ ಕರೆ ನೀಡಿರುವುದಕ್ಕೆ ಯಾವುದೇ ಆಧಾರ ಕಂಡುಬರುವುದಿಲ್ಲ ಎಂದು alt newsನ fact check ವರದಿ ತಿಳಿಸಿದೆ.
2026ರ ಅಕ್ಟೋಬರ್ 15ರಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ನೇಹಾ ವಿರುದ್ಧ ಆರೋಪ ಮಾಡಿದ್ದರು. ರಾಹುಲ್ ಗಾಂಧಿ ಅವರ ಪಾದಯಾತ್ರೆಯಲ್ಲಿ ನೇಹಾ ಅವರನ್ನು ಮುಂಚೂಣಿಯಲ್ಲಿ ಇರಿಸಲಾಗಿತ್ತು ಎಂಬುದನ್ನು ಉಲ್ಲೇಖಿಸಿದ ಅವರು, ನೇಹಾ ಅವರ ಸಿದ್ಧಾಂತವನ್ನು ರಾಹುಲ್ ಗಾಂಧಿ ಬೆಂಬಲಿಸುತ್ತಾರೆ ಎಂದು ಪ್ರತಿಪಾದಿಸಿದ್ದರು. ಬಾಂಗ್ಲಾದೇಶದ ಚಳವಳಿಯಿಂದ ಸ್ಫೂರ್ತಿ ಪಡೆದಿರುವ ನೇಹಾ, ಅಲ್ಲಿನ ಘಟನೆಗಳು ಭಾರತದಲ್ಲಿಯೂ ನಡೆಯಬೇಕೆಂದು ಬಯಸಿದ್ದಾರೆ ಎಂದು ಆರೋಪಿಸಿದ್ದರು.
ಇದಾದ ಬಳಿಕ ಬಿಜೆಪಿಯ ಅಧಿಕೃತ 'ಎಕ್ಸ್' ಖಾತೆಯಲ್ಲಿಯೂ ನೇಹಾ ಅವರ ಭಾಷಣದ ತುಣುಕನ್ನು ಹಂಚಿಕೊಳ್ಳಲಾಯಿತು. 'ದೇಶದಾದ್ಯಂತ ನಾವು ನೋಡುತ್ತಿರುವ Gen Z ಪ್ರತಿಭಟನೆಗಳು ಮೊದಲು ಬಾಂಗ್ಲಾದೇಶದಲ್ಲಿ ಆರಂಭವಾದವು. ನಮಗೆ ದಾರಿ ತೋರಿಸಿದ್ದಕ್ಕಾಗಿ ಮತ್ತು ದೇಶದ ಯುವಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದಕ್ಕಾಗಿ ನಿಮಗೆ ಅಭಿನಂದನೆಗಳು' ಎಂಬ ಅವರ ಮಾತುಗಳನ್ನು ಆಧರಿಸಿ ಆರೋಪಗಳನ್ನು ಹರಡಲಾಯಿತು.
ಬಲಪಂಥೀಯ ವ್ಯಾಖ್ಯಾನಕಾರರು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ನೇಹಾ ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಿಸಲು ಬಯಸಿದ್ದಾರೆ ಎಂದು ಪ್ರತಿಪಾದಿಸಿದರು. ಸರಕಾರವನ್ನು ಹಿಂಸಾತ್ಮಕವಾಗಿ ಉರುಳಿಸುವುದು ಮತ್ತು ಹಿಂದೂಗಳ ಹತ್ಯೆಗೆ ಕಾರಣವಾಗುವ ಪರಿಸ್ಥಿತಿಯನ್ನು ಅವರು ಬಯಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದವು. ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಕೂಡ ನೇಹಾ ಭಾರತದಲ್ಲಿ ಬಾಂಗ್ಲಾದೇಶದ ಮಾದರಿಯನ್ನು ಜಾರಿಗೆ ತರಲು ಪ್ರತಿಪಾದಿಸುತ್ತಿದ್ದಾರೆ ಎಂದು ಹೇಳಿದ್ದರು.
ಬಾಂಗ್ಲಾದೇಶದ ಚಳವಳಿಯ ಹಿನ್ನೆಲೆ
2024ರ ಜುಲೈ ಮತ್ತು ಆಗಸ್ಟ್ ನಲ್ಲಿ ಬಾಂಗ್ಲಾದೇಶದಲ್ಲಿ ಸರಕಾರಿ ಉದ್ಯೋಗಗಳ ಮೀಸಲಾತಿ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಆರಂಭವಾಗಿತ್ತು. ಬಳಿಕ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಚಳವಳಿಯಾಗಿ ತೀವ್ರಗೊಂಡಿತ್ತು. ಪ್ರತಿಭಟನಾಕಾರರ ವಿರುದ್ಧ ಸರಕಾರ ನಡೆಸಿದ ದಮನಕಾರಿ ಕ್ರಮಗಳು ಮತ್ತು ಮಾರಣಾಂತಿಕ ಬಲಪ್ರಯೋಗದಿಂದ ನೂರಾರು ಜನರು ಮೃತಪಟ್ಟಿದ್ದರು. ಪೊಲೀಸರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ಮೇಲೆಯೂ ದಾಳಿಗಳು ನಡೆದಿದ್ದವು.
ಆಗಸ್ಟ್ 5ರಂದು ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದಿದ್ದರು. ಇದರೊಂದಿಗೆ ಅವರ 15 ವರ್ಷಗಳ ಆಡಳಿತ ಅಂತ್ಯಗೊಂಡಿತ್ತು. ಸರಕಾರ ಪತನಗೊಂಡ ಬಳಿಕ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಮುದಾಯಗಳ ಜನರ ಮೇಲೂ ಗಂಭೀರ ಹಿಂಸಾಚಾರ ಮತ್ತು ದಾಳಿಗಳು ನಡೆದಿದ್ದವು.
ವಿವಾದಕ್ಕೆ ಕಾರಣವಾದ ವಿಡಿಯೋದಲ್ಲಿ ಏನಿದೆ?
ಅಕ್ಟೋಬರ್ 13ರಂದು ಬಾಂಗ್ಲಾದೇಶದ 'ಸೋಷಿಯಲಿಸ್ಟ್ ಸ್ಟೂಡೆಂಟ್ಸ್ ಫ್ರಂಟ್' (SSF) ಸಂಘಟನೆಯ ಆರನೇ ಕೇಂದ್ರ ಸಮ್ಮೇಳನದ ಸಂದರ್ಭದಲ್ಲಿ ನೇಹಾ ಬೋರಾ ವಿಡಿಯೊ ಸಂದೇಶ ಕಳುಹಿಸಿದ್ದರು. ಈ ಸಂದೇಶವನ್ನು ಸಂಘಟನೆಯ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಲಾಗಿತ್ತು.
1 ನಿಮಿಷ 49 ಸೆಕೆಂಡುಗಳ ಸಂದೇಶದಲ್ಲಿ ನೇಹಾ, ಬಾಂಗ್ಲಾದೇಶದ ವಿದ್ಯಾರ್ಥಿ ಚಳವಳಿಗಳಲ್ಲಿ SSF ವಹಿಸಿದ ಪಾತ್ರವನ್ನು ಶ್ಲಾಘಿಸಿದ್ದರು. ಎರಡೂ ದೇಶಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ನಡುವಿನ ಸಾಮ್ಯತೆಗಳನ್ನು ವಿವರಿಸಿದ್ದರು. ಪ್ರಜಾಸತ್ತಾತ್ಮಕ ಹಕ್ಕುಗಳು, ಮತದಾನದ ಹಕ್ಕು, ಧಾರ್ಮಿಕ ಮೂಲಭೂತವಾದ, ಶಿಕ್ಷಣದ ಖಾಸಗೀಕರಣ ಮತ್ತು ಶಿಕ್ಷಣದ ಕೇಸರೀಕರಣದ ವಿರುದ್ಧದ ಹೋರಾಟಗಳನ್ನು ಪ್ರಸ್ತಾಪಿಸಿದ್ದರು.
'ಬಾಂಗ್ಲಾದೇಶದಲ್ಲಿ ಆರಂಭವಾದ ಚಳವಳಿ ಪ್ರಜಾಸತ್ತಾತ್ಮಕ ಮತ್ತು ಮತದಾನದ ಹಕ್ಕುಗಳಿಗಾಗಿ ನಡೆದಿತ್ತು. ಇಂದಿಗೂ ಯುವಜನರು ಭಾಗವಹಿಸುತ್ತಿರುವ ಮತ್ತು ಮುನ್ನಡೆಸುತ್ತಿರುವ ಚಳವಳಿಯು ಪ್ರಜಾಸತ್ತಾತ್ಮಕ ಹಾಗೂ ಮತದಾನದ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ' ಎಂದು ಅವರು ಹೇಳಿದ್ದರು.
'ನಿಮ್ಮ ದೇಶದಲ್ಲಿ ಧಾರ್ಮಿಕ ಮೂಲಭೂತವಾದದ ವಿರುದ್ಧ ನೀವು ನಡೆಸುತ್ತಿರುವ ಹೋರಾಟಗಳು, ನಮ್ಮ ದೇಶದಲ್ಲಿ Gen Z ಮತ್ತು ಯುವಜನರು ನಡೆಸುತ್ತಿರುವ ಹೋರಾಟಗಳಂತೆಯೇ ಇವೆ. ಬಾಂಗ್ಲಾದೇಶದ ಢಾಕಾ ಮತ್ತು ಜಹಾಂಗೀರ್ನಗರ ವಿಶ್ವವಿದ್ಯಾಲಯಗಳು ಹೆಚ್ಚುತ್ತಿರುವ ಬೆದರಿಕೆ ಹಾಗೂ ದಾಳಿಗಳನ್ನು ಎದುರಿಸುತ್ತಿವೆ. ಭಾರತದಲ್ಲಿಯೂ ನಮ್ಮ ಸಾರ್ವಜನಿಕ ಸಂಸ್ಥೆಗಳ ಪರಿಸ್ಥಿತಿ ಇದೇ ರೀತಿಯಾಗಿದೆ' ಎಂದು ತಿಳಿಸಿದ್ದರು.
ವಿದ್ಯಾರ್ಥಿಗಳ ಹಕ್ಕುಗಳ ಮೇಲಿನ ದಮನ, ಶಿಕ್ಷಣದ ಖಾಸಗೀಕರಣ, ಶಿಕ್ಷಣದ ಕೇಸರೀಕರಣ ಮತ್ತು ವಿಮರ್ಶಾತ್ಮಕ ಚಿಂತನೆಯ ಮೇಲಿನ ನಿರ್ಬಂಧಗಳ ಬಗ್ಗೆಯೂ ಅವರು ಮಾತನಾಡಿದ್ದರು. ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಯುವಜನರ ಮೇಲೆ ರಾಜಕೀಯ ಪ್ರಚಾರವನ್ನು ಹೇರಲಾಗುತ್ತಿದೆ ಎಂದು ಹೇಳಿದ್ದರು.
'ನಾವು ನಿಮಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ನಿಮ್ಮಿಂದ ಸ್ಫೂರ್ತಿ ಪಡೆಯುತ್ತೇವೆ ಮತ್ತು ನೀವು ಮುನ್ನಡೆಸುತ್ತಿರುವ ಚಳವಳಿಗಳಿಂದ ಪಾಠಗಳನ್ನು ಕಲಿಯುತ್ತೇವೆ. ಬಾಂಗ್ಲಾದೇಶ ಮತ್ತು ಭಾರತದಲ್ಲಿ ಒಟ್ಟಾಗಿ ಉತ್ತಮ ದಕ್ಷಿಣ ಏಷ್ಯ ಹಾಗೂ ಉತ್ತಮ ಜಗತ್ತಿಗಾಗಿ ಹೋರಾಡಬಹುದು ಎಂಬ ವಿಶ್ವಾಸ ನಮಗಿದೆ' ಎಂಬುದು ಅವರ ಸಂದೇಶದ ಸಾರವಾಗಿತ್ತು.
SSF ಬಾಂಗ್ಲಾದೇಶದ ಸಮಾಜವಾದಿ ಪಕ್ಷದ (ಮಾರ್ಕ್ಸ್ವಾದಿ) ಜೊತೆ ಸಂಯೋಜಿತವಾಗಿರುವ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾಗಿದೆ. 1984ರಲ್ಲಿ ಸ್ಥಾಪನೆಯಾದ ಈ ಸಂಘಟನೆ, ಆರನೇ ಕೇಂದ್ರ ಸಮ್ಮೇಳನಕ್ಕೆ ದಕ್ಷಿಣ ಏಷ್ಯಾದ ಹಲವು ದೇಶಗಳ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿತ್ತು.
ಭಾರತದ AISA ಅಧ್ಯಕ್ಷೆ ನೇಹಾ ಬೋರಾ, ಪಾಕಿಸ್ತಾನದ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್ ನಾಯಕಿ ರಫಿ ಖೋಸಾ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿತ್ತು. ಶ್ರೀಲಂಕಾದ SSU ರಾಷ್ಟ್ರೀಯ ಸಮಿತಿಯ ಸದಸ್ಯರು ಮತ್ತು ನೇಪಾಳದ ANNISU (ಕ್ರಾಂತಿಕಾರಿ) ಸಂಘಟನೆಯ ಸದಸ್ಯರೂ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಪಾಸ್ಪೋರ್ಟ್ ಮತ್ತು ವೀಸಾ ಸಂಬಂಧಿತ ಸಮಸ್ಯೆಗಳಿಂದಾಗಿ ನೇಹಾ ಹಾಗೂ AISA ನಾಯಕಿ ಅದಿತಿ ಮಿಶ್ರಾ ಸಮ್ಮೇಳನಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸಂಘಟನೆಯನ್ನು ಅಭಿನಂದಿಸಿ ಶುಭ ಹಾರೈಸಲು ವಿಡಿಯೊ ಸಂದೇಶಗಳನ್ನು ಕಳುಹಿಸಿದ್ದರು.
‘ಮಾತುಗಳನ್ನು ಸಂದರ್ಭದಿಂದ ಬೇರ್ಪಡಿಸಲಾಗಿದೆ’
ನೇಹಾ ಅವರ ಸಂದೇಶವು SSF ಮತ್ತು ಅದರ ಕಾರ್ಯಕರ್ತರನ್ನು ಉದ್ದೇಶಿಸಿ ನೀಡಿದ್ದ ಅಭಿನಂದನಾ ಸಂದೇಶವಾಗಿತ್ತು. ಬಾಂಗ್ಲಾದೇಶದ ದಂಗೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಉದ್ದೇಶಿಸಿ ಅವರು ಮಾತನಾಡಿರಲಿಲ್ಲ. ಭಾರತದಲ್ಲಿ ಬಾಂಗ್ಲಾದೇಶದಂತಹ ಹಿಂಸಾಚಾರಕ್ಕೆ ಕರೆ ನೀಡುವ ಹೇಳಿಕೆಯೂ ವಿಡಿಯೊದಲ್ಲಿಲ್ಲ ಎಂದು ಆಲ್ಟ್ ನ್ಯೂಸ್ ವರದಿ ತಿಳಿಸಿದೆ.
ಬಾಂಗ್ಲಾದೇಶದ ಸಮಾಜವಾದಿ ಪಕ್ಷದ (ಮಾರ್ಕ್ಸ್ವಾದಿ) ಕಾರ್ಯದರ್ಶಿ ಬಜ್ಲೂರ್ ರಶೀದ್ ಫಿರೋಝ್ ಅವರು ನೇಹಾ ಬೋರಾ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವನ್ನು ಅನುಮೋದಿಸಿಲ್ಲ ಎಂದು ಆಲ್ಟ್ ನ್ಯೂಸ್ ಗೆ ತಿಳಿಸಿದ್ದಾರೆ.
'ಅವರ ಮಾತುಗಳನ್ನು ಸಂದರ್ಭದಿಂದ ಬೇರ್ಪಡಿಸಲಾಗಿದೆ. ನಮ್ಮ ಸಹವರ್ತಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ SSF ಅನ್ನು ಅವರು ಅಭಿನಂದಿಸುತ್ತಿದ್ದರು. ಧಾರ್ಮಿಕ ಮೂಲಭೂತವಾದದ ವಿರುದ್ಧದ ಹೋರಾಟ, ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕುಗಳ ಮರುಸ್ಥಾಪನೆ, ಉತ್ತಮ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಬೇಡಿಕೆಗಳಿಗಾಗಿ SSF ನಡೆಸುತ್ತಿರುವ ಹೋರಾಟದ ಕುರಿತು ಅವರು ಮಾತನಾಡಿದ್ದರು' ಎಂದು ಫಿರೋಝ್ ಹೇಳಿದ್ದಾರೆ.
AISAಯ ಮಾಜಿ ಅಧ್ಯಕ್ಷೆ ಹಾಗೂ CPI(ML) ಕೇಂದ್ರ ಸಮಿತಿಯ ಸದಸ್ಯೆ ಸುಚೇತಾ ಕೂಡ ನೇಹಾ ಅವರ ಸಂದೇಶವನ್ನು ನಿರ್ದಿಷ್ಟ ಸಂದರ್ಭದಲ್ಲಿಯೇ ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.
'ಈ ಒಗ್ಗಟ್ಟಿನ ಸಂದೇಶವನ್ನು ಸಮಾಜವಾದಿ ವಿದ್ಯಾರ್ಥಿ ರಂಗದ (SSF) ಸಹವರ್ತಿಗಳನ್ನು ಉದ್ದೇಶಿಸಿ ನೀಡಲಾಗಿತ್ತು. ಬಾಂಗ್ಲಾದೇಶ ಸೇರಿದಂತೆ ನಮ್ಮ ಉಪಖಂಡದಲ್ಲಿ ಕಂಡುಬಂದ Gen Z ಚಳವಳಿ ಮತ್ತು ಅದರಲ್ಲಿ ಜಾತ್ಯತೀತ ಹಾಗೂ ಪ್ರಗತಿಪರ ಶಕ್ತಿಗಳ ಭಾಗವಹಿಸುವಿಕೆಯ ಹಿನ್ನೆಲೆಯಲ್ಲಿ ಈ ಸಂದೇಶವನ್ನು ನೀಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ನೇಹಾ ಅವರು 'ಧಾರ್ಮಿಕ ಮೂಲಭೂತವಾದ' ಎಂಬ ಪದವನ್ನು ಬಳಸಿದ್ದಾರೆ. ಅವರು ಅಂತಹ ಹಿಂಸಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ, ಬಲಪಂಥೀಯ ಧ್ವನಿಗಳು ಅವರ ಸಂದೇಶವನ್ನು ವಿರೂಪಗೊಳಿಸಿ, ಭಾಷಣವನ್ನು ಹಿಂಸಾಚಾರದೊಂದಿಗೆ ತಪ್ಪಾಗಿ ಜೋಡಿಸಲು ಪ್ರಯತ್ನಿಸುತ್ತಿವೆ ಎಂದು ಸುಚೇತಾ ಆರೋಪಿಸಿದ್ದಾರೆ.
ನೇಹಾ ಸ್ಪಷ್ಟನೆ: ‘SSFಗೆ ಉದ್ದೇಶಿಸಿದ ಸಂದೇಶ’
ವಿಡಿಯೋದ ತುಣುಕು ಪ್ರಸಾರವಾದ ಬಳಿಕ ನೇಹಾ ಬೋರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
SSFನ ಕೇಂದ್ರ ಸಮ್ಮೇಳನದ ಲಾಂಛನ ಮತ್ತು ಇತರ ಗುರುತಿಸುವ ದೃಶ್ಯಗಳನ್ನು ಮೂಲ ವಿಡಿಯೋದಿಂದ ತೆಗೆದುಹಾಕಿ, ತಮ್ಮ ವಿರುದ್ಧದ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ದೃಶ್ಯಗಳು ಆರನೇ ರಾಷ್ಟ್ರೀಯ ಸಮ್ಮೇಳನಕ್ಕಾಗಿ ವಿಡಿಯೊ ಸಂದೇಶವನ್ನು ರೆಕಾರ್ಡ್ ಮಾಡಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದವು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ, ವಿದ್ಯಾರ್ಥಿಗಳ ಹಕ್ಕುಗಳು, ಶಿಕ್ಷಣ ಮತ್ತು ಕೋಮು ಸಾಮರಸ್ಯಕ್ಕಾಗಿ SSF ನಡೆಸುತ್ತಿರುವ ಹೋರಾಟಗಳಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಸಂದೇಶ ನೀಡಲಾಗಿತ್ತು. ಭಾರತದ ವಿದ್ಯಾರ್ಥಿ ಕಾರ್ಯಕರ್ತರು ಈ ಹೋರಾಟಗಳಿಂದ ಸ್ಫೂರ್ತಿ ಪಡೆಯುತ್ತಾರೆ ಎಂಬುದನ್ನು ತಿಳಿಸುವುದೂ ಅದರ ಉದ್ದೇಶವಾಗಿತ್ತು ಎಂದು ವಿವರಿಸಿದ್ದಾರೆ.
ಬಾಂಗ್ಲಾದೇಶದಿಂದ ಸ್ಫೂರ್ತಿ ಪಡೆಯುವುದು ಅಲ್ಲಿನ ವಿದ್ಯಾರ್ಥಿ ಚಳವಳಿಯ ಪ್ರಗತಿಪರ ಮತ್ತು ಜಾತ್ಯತೀತ ಅಂಶಗಳಿಗೆ ಸಂಬಂಧಿಸಿದ್ದೇ ಹೊರತು, ಇಡೀ ದಂಗೆಗೆ ಅಥವಾ ಅದರ ಬಳಿಕ ಪ್ರಭಾವ ಗಳಿಸಿದ ರಾಜಕೀಯ ಶಕ್ತಿಗಳಿಗೆ ಬೆಂಬಲ ಸೂಚಿಸುವುದಲ್ಲ ಎಂದು ನೇಹಾ ಸ್ಪಷ್ಟಪಡಿಸಿದ್ದಾರೆ.
RSS–ಬಿಜೆಪಿಯಂತಹ ಪ್ರತಿಗಾಮಿ ಶಕ್ತಿಗಳಿಗೆ ಕೋಮುವಾದವನ್ನು ಮೀರಿ ವ್ಯಕ್ತವಾಗುವ ಒಗ್ಗಟ್ಟಿನ ಅರ್ಥವಾಗುವುದಿಲ್ಲ. ಹೀಗಾಗಿ, ಸಂದರ್ಭದಿಂದ ಬೇರ್ಪಡಿಸಿದ ವಿಡಿಯೊಗಳನ್ನು ಹರಡಿ ಆಕ್ರೋಶ ಸೃಷ್ಟಿಸುವ ಹಳೆಯ ತಂತ್ರವನ್ನು ಮತ್ತೆ ಅನುಸರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಪ್ರತಿಗಾಮಿ ಶಕ್ತಿಗಳಿಗೆ ತಾವು ಬೆಂಬಲ ಸೂಚಿಸುತ್ತಿರುವಂತೆ ಸಂಘದ ಐಟಿ ಸೆಲ್ ತಮ್ಮ ವಿಡಿಯೊವನ್ನು ಸಂದರ್ಭದಿಂದ ಬೇರ್ಪಡಿಸಿ ಪ್ರಸಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
'ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಾಗೂ ಧಾರ್ಮಿಕ ಮೂಲಭೂತವಾದದ ವಿರುದ್ಧ ನಿಂತಿರುವ ದಮನಿತ ಜನರ ಪರವಾಗಿ ನಾವು ಇದ್ದೇವೆ. ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವಕ್ಕಾಗಿ ನಾವು ನಡೆಸುತ್ತಿರುವ ಹೋರಾಟಕ್ಕೆ ನೀವು ಹೆದರುತ್ತೀರಿ. ಅದಕ್ಕಾಗಿಯೇ ಸುಳ್ಳುಗಳ ಮೂಲಕ ನಮ್ಮ ಮೇಲೆ ದಾಳಿ ಮಾಡುತ್ತಿದ್ದೀರಿ' ಎಂದು ನೇಹಾ ತಿಳಿಸಿದ್ದಾರೆ.
'ಎಸ್ಐಆರ್ (SIR) ಮತ್ತು ಜ್ಞಾನೇಶ್ ಕುಮಾರ್ ಅವರ ಬಗ್ಗೆ ಹಾಗೂ 13 ಕೋಟಿ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅವರನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸತ್ಯ ದೇಶದ ಜನರಿಗೆ ತಿಳಿಯುತ್ತದೆ ಎಂದು ನಿಮಗೆ ಭಯ' ಎಂದೂ ಅವರು ಆರೋಪಿಸಿದ್ದಾರೆ.
ಸೌಜನ್ಯ: Alt News






