ನೇಪಾಳ ಪ್ರವಾಹ | DNA ಮೂಲಕ ಮೃತದೇಹಗಳ ಗುರುತು ಪತ್ತೆ ಹಚ್ಚುವುದು ಹೇಗೆ?
ಉರೂಬಾ ಜಮಾಲ್ – Aljazeera. com ವರದಿ

Photo Credit : Dar Yasin/AP
ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿರುವ ಲಂಗ್ಟಾಂಗ್ ಲಿರುಂಗ್ ಪರ್ವತ ಶಿಖರದ ಬಳಿ ಹಿಮಪಾತದಿಂದ ಭೀಕರ ಪ್ರವಾಹ ಉಂಟಾಗಿ ವಾರಕ್ಕೂ ಹೆಚ್ಚಿನ ಕಾಲ ಕಳೆದಿದೆ. ಬಂಡೆಗಳು, ಕೆಸರು ಹಾಗೂ ನೀರಿನ ಪ್ರವಾಹ ಕಣಿವೆಗಳಿಗೆ ನುಗ್ಗಿದ ಈ ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಗುರುತಿಸಲು ವಿಧಿವಿಜ್ಞಾನ ತಜ್ಞರು ಹರಸಾಹಸ ಪಡುತ್ತಿದ್ದಾರೆ.
ಗುರುವಾರದ ಮಾಹಿತಿಯ ಪ್ರಕಾರ 1,270ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 4,700ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಬಂದ ವರದಿಗಳ ಪ್ರಕಾರ, ಬಾಧಿತ ನದಿಗಳ ಬಳಿಯ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿದ್ದ ನೂರಾರು ಕಾರ್ಮಿಕರ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ.
ಮತ್ತೊಂದೆಡೆ, ಶವಾಗಾರಗಳಲ್ಲಿ ಶವಗಳು ತುಂಬಿ ತುಳುಕುತ್ತಿರುವುದರಿಂದ, ನೂರಾರು ಮೃತದೇಹಗಳನ್ನು ಗುರುತಿಸಲು ಅಧಿಕಾರಿಗಳು DNA ಪರೀಕ್ಷೆಯ ಮೊರೆ ಹೋಗಿದ್ದಾರೆ. ನಾಪತ್ತೆಯಾದವರ ತಂದೆ, ತಾಯಿ, ಮಗ ಅಥವಾ ಮಗಳಂತಹ ಹತ್ತಿರದ ಸಂಬಂಧಿಕರು DNA ಪರೀಕ್ಷೆಗಾಗಿ ರಕ್ತದ ಮಾದರಿಗಳನ್ನು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ನಾಪತ್ತೆಯಾದ ವಿದೇಶಿ ಪ್ರಜೆಗಳ ವಿಚಾರದಲ್ಲಿ, ವಿದೇಶದಲ್ಲಿರುವ ಅವರ ಹತ್ತಿರದ ಸಂಬಂಧಿಕರು (ತಂದೆ, ತಾಯಿ, ಮಗ ಅಥವಾ ಮಗಳು) ತಮ್ಮ ಸ್ವದೇಶದಲ್ಲೇ DNA ಪರೀಕ್ಷೆ ಮಾಡಿಸಿ, ಆ ಫಲಿತಾಂಶವನ್ನು ಪರಿಶೀಲನೆಗಾಗಿ ನೇಪಾಳ ಪೊಲೀಸರಿಗೆ ಇಮೇಲ್ ಮೂಲಕ ಕಳುಹಿಸಬಹುದು. ಇದುವರೆಗೆ ಸಂಬಂಧಿಕರಿಂದ ನೂರಾರು DNA ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಸಂಗ್ರಹಿಸಲಾದ ಮಾದರಿಗಳನ್ನು ನೇಪಾಳ ಪೊಲೀಸ್ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ನೇಪಾಳ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಕಳುಹಿಸಲಾಗುತ್ತಿದೆ.
DNA ಪರೀಕ್ಷೆಯ ಅಗತ್ಯವೇಕೆ?
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ವಿಧಿವಿಜ್ಞಾನ ತಂಡಗಳು ಮೃತದೇಹಗಳ ಗುರುತು ಪತ್ತೆಹಚ್ಚಲು ಶ್ರಮಿಸುತ್ತಿವೆ. ಕಾಠ್ಮಂಡುವಿನ DNA ಪರೀಕ್ಷಾ ಕೇಂದ್ರದಿಂದ ವರದಿ ಮಾಡಿರುವ ಅಲ್ ಜಝೀರಾದ ಜೆಸ್ಸಿಕಾ ವಾಷಿಂಗ್ಟನ್, “ಹಲವು ಮೃತದೇಹಗಳು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿವೆ” ಎಂದು ತಿಳಿಸಿದ್ದಾರೆ.
“ಟ್ಯಾಟೂ ಮತ್ತು ಆಭರಣಗಳಂತಹ ವಸ್ತುಗಳು ಗುರುತು ಪತ್ತೆಹಚ್ಚುವ ಪ್ರಕ್ರಿಯೆಗೆ ಸಹಾಯ ಮಾಡುತ್ತವೆ ಎಂದು ಸ್ಥಳದಲ್ಲಿದ್ದ ವಿಧಿವಿಜ್ಞಾನ ತಂಡಗಳು ನಮಗೆ ತಿಳಿಸಿವೆ. ಆದರೆ, ಹಲವು ಮೃತದೇಹಗಳು ಎಷ್ಟು ವಿಕಾರಗೊಂಡಿವೆಯೆಂದರೆ ಅವುಗಳನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ” ಎಂದು ವಾಷಿಂಗ್ಟನ್ ಹೇಳಿದ್ದಾರೆ.
ಮೃತದೇಹಗಳು ಕೊಳೆತು ಹೋಗಿರುವುದೇ DNA ಪರೀಕ್ಷೆಯನ್ನು ಅನಿವಾರ್ಯವಾಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ದೀರ್ಘಕಾಲ ನೀರಿನಲ್ಲಿ ಮುಳುಗಿದ್ದಾಗ ವಿಕಾರಗೊಂಡ ಶವಗಳನ್ನು ಬರಿಗಣ್ಣಿನಿಂದ ಗುರುತಿಸಲು ಸಾಧ್ಯವಾಗುವುದಿಲ್ಲ.
ರಕ್ತ, ಮೃದು ಅಂಗಾಂಶ, ಮೂಳೆ ಮತ್ತು ಹಲ್ಲುಗಳಿಂದ DNA ವಿವರಗಳನ್ನು ಪಡೆಯಬಹುದು. ಸ್ವೀಡನ್ ನ ನ್ಯಾಷನಲ್ ಬೋರ್ಡ್ ಆಫ್ ಫೋರೆನ್ಸಿಕ್ ಮೆಡಿಸಿನ್ ನ ಮಾಲಿಕ್ಯೂಲರ್ ಬಯಾಲಜಿಸ್ಟ್ ಕೆರ್ಸ್ಟಿನ್ ಮಾಂಟೆಲಿಯಸ್ ಪ್ರಕಾರ, ಹೆಚ್ಚಿನ ಅಂಗಾಂಶಗಳು ಕೊಳೆತುಹೋದರೂ ಮೂಳೆಗಳಿಂದ DNA ಮಾದರಿಯನ್ನು ಹೊರತೆಗೆಯಬಹುದು.
“ಪ್ರಕ್ರಿಯೆಯ ಆರಂಭಿಕ ಹಂತದಲ್ಲಿ ಕಣ್ಣಿನಿಂದ ನೋಡಿ ಗುರುತಿಸುವುದು ಅಸಾಧ್ಯವಾಗಬಹುದು, ಇದು ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ಮಾಂಟೆಲಿಯಸ್ Aljazeera ಕ್ಕೆ ತಿಳಿಸಿದ್ದಾರೆ. “ಆದರೆ, DNA ಕೂಡ ಕ್ರಮೇಣ ಕ್ಷೀಣಿಸುತ್ತದೆ, ಹೀಗಾಗಿ ಅಲ್ಲಿನ ಸನ್ನಿವೇಶಗಳೇ ನಿರ್ಧಾರಗಳನ್ನು ತೀರ್ಮಾನಿಸುತ್ತವೆ” ಎಂದು ಅವರು ಎಚ್ಚರಿಸಿದ್ದಾರೆ.
► DNA ಪರೀಕ್ಷೆ ಹೇಗೆ ಕೆಲಸ ಮಾಡುತ್ತದೆ?
ವಿಪತ್ತುಗಳಲ್ಲಿ ಬಲಿಯಾದವರನ್ನು ನಿರ್ವಹಿಸಲು ಮತ್ತು ಗುರುತಿಸಲು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ವ್ಯವಸ್ಥೆಯೆಂದರೆ ಇಂಟರ್ಪೋಲ್ ನ ‘ಡಿಸಾಸ್ಟರ್ ವಿಕ್ಟಿಮ್ ಐಡೆಂಟಿಫಿಕೇಷನ್’ (DVI).
ಮಾನವ ದೇಹದಲ್ಲಿರುವ ಎಲ್ಲಾ ಜೀವಕೋಶಗಳು ಕಾರ್ಯನಿರ್ವಹಿಸಲು ಅಗತ್ಯವಾದ ಮಾಹಿತಿಯನ್ನು DNA ಕಣಗಳು ಹೊಂದಿರುತ್ತವೆ. ಒಂದೇ ರೀತಿಯಾಗಿ ಕಾಣುವ ಅವಳಿ ಮಕ್ಕಳನ್ನು ಹೊರತುಪಡಿಸಿ, ಪ್ರತಿಯೊಬ್ಬ ವ್ಯಕ್ತಿಯ DNA ವಿಶಿಷ್ಟವಾಗಿರುತ್ತದೆ. ಹೀಗಾಗಿ, ಇದನ್ನು ವಿಪತ್ತಿನಲ್ಲಿ ಮೃತಪಟ್ಟವರ ಅಥವಾ ನಾಪತ್ತೆಯಾದವರ ಗುರುತು ಪತ್ತೆಹಚ್ಚಲು ಬಳಸಬಹುದು.
DVI ಪ್ರಕ್ರಿಯೆಯ ಭಾಗವಾಗಿ, ಸಾಧ್ಯವಾದಷ್ಟು ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಲು ತಜ್ಞರು ಮೃತದೇಹದ ಭಾಗಗಳನ್ನು ಪರಿಶೀಲಿಸುತ್ತಾರೆ.
“ಗುರುತು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಅತ್ಯಂತ ನಿಖರ ಫಲಿತಾಂಶ ನೀಡುವ ಮೂರು ಮುಖ್ಯ ವಿಧಾನಗಳಿವೆ–ಅವುಗಳೆಂದರೆ DNA ಹೋಲಿಕೆ, ಬೆರಳಚ್ಚುಗಳು ಮತ್ತು ಹಲ್ಲುಗಳ ಹೋಲಿಕೆ. ಪರಿಸ್ಥಿತಿಗೆ ಅನುಗುಣವಾಗಿ ಯಾವ ವಿಧಾನವನ್ನು ಬಳಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ” ಎಂದು ಮಾಂಟೆಲಿಯಸ್ ಹೇಳಿದ್ದಾರೆ.
ನಾಪತ್ತೆಯಾದ ವ್ಯಕ್ತಿಯ ನೇರ DNA ಲಭ್ಯವಿದ್ದಾಗ, ಉದಾಹರಣೆಗೆ ಹಲ್ಲುಜ್ಜುವ ಬ್ರಷ್ ಅಥವಾ ಬಾಚಣಿಗೆಯಂತಹ ವೈಯಕ್ತಿಕ ವಸ್ತುಗಳಿಂದ ಮಾದರಿಯನ್ನು ಪಡೆದು, ಅದನ್ನು ಸಿಕ್ಕಿರುವ ಮೃತದೇಹದ DNA ಜೊತೆ ಹೋಲಿಸಿ ತಾಳೆಯಾಗುತ್ತದೆಯೇ ಎಂದು ನೋಡಲಾಗುತ್ತದೆ.
“ಕೆಲವೊಮ್ಮೆ ಸಂತ್ರಸ್ತರ ಬೆರಳಚ್ಚುಗಳು ಎಲ್ಲಿಯೂ ಲಭ್ಯವಿರುವುದಿಲ್ಲ ಅಥವಾ ದಂತ ವೈದ್ಯರ ಬಳಿ ಅವರ ಹಲ್ಲುಗಳ ಮಾಹಿತಿ ಸಿಗುವುದು ಕಷ್ಟವಾಗಬಹುದು” ಎಂದು ಮಾಂಟೆಲಿಯಸ್ ತಿಳಿಸಿದ್ದಾರೆ.
ಅಂತಹ ಸಂದರ್ಭಗಳಲ್ಲಿ, ಸಂತ್ರಸ್ತರ ಹತ್ತಿರದ ಸಂಬಂಧಿಗಳಿಂದ DNA ಮಾದರಿಗಳನ್ನು ಸಂಗ್ರಹಿಸಬಹುದು ಎಂದು ಮಾಲಿಕ್ಯೂಲರ್ ಬಯಾಲಜಿಸ್ಟ್ ಹೇಳಿದ್ದಾರೆ. ನೇಪಾಳದಲ್ಲಿ ಪ್ರಸ್ತುತ ರಕ್ತದ ಮಾದರಿಗಳ ಮೂಲಕ ಈ ಕೆಲಸ ಮಾಡಲಾಗುತ್ತಿದೆ.
ಮಾಹಿತಿ ಸಂಗ್ರಹವಾದ ಬಳಿಕ, ತಜ್ಞರ ತಂಡವು ಸಂಬಂಧಿಕರಿಂದ ಪಡೆದ ಮಾಹಿತಿ ಮತ್ತು ಸಿಕ್ಕಿರುವ ಮೃತದೇಹದ ವಿವರಗಳನ್ನು ಹೋಲಿಸಿ ಪರಿಶೀಲಿಸುತ್ತದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯೂಟರ್ ವ್ಯವಸ್ಥೆಗಳ ಮೂಲಕ ಈ ಕೆಲಸವನ್ನು ಮಾಡಬಹುದು. ಈ ವ್ಯವಸ್ಥೆಯು ತಾಳೆಯಾಗುವ ಸಾಧ್ಯತೆಗಳನ್ನು ತೋರಿಸುತ್ತದೆ. ಬಳಿಕ DNA ತಜ್ಞರು ಅದನ್ನು ವಿವರವಾಗಿ ಪರಿಶೀಲಿಸುತ್ತಾರೆ ಎಂದು ಮಾಂಟೆಲಿಯಸ್ ಹೇಳಿದ್ದಾರೆ.
ಎರಡೂ ಡೇಟಾಗಳು ಶೇಕಡಾ 100ರಷ್ಟು ತಾಳೆಯಾದರೆ ಮಾತ್ರ ಗುರುತು ಪತ್ತೆಯಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗುತ್ತದೆ.
► ಇತರ ದೇಶಗಳು ನೆರವು ನೀಡುತ್ತಿವೆಯೇ?
ನೇಪಾಳದ ರಾಜಧಾನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಭಾರತವು 19 ಸದಸ್ಯರ ವಿಧಿವಿಜ್ಞಾನ ತಂಡವನ್ನು ಕಳುಹಿಸಿದೆ. ಈ ತಂಡವು ನೇಪಾಳ ಪೊಲೀಸ್ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ರಾಷ್ಟ್ರೀಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನೇಪಾಳಿ ತಜ್ಞರೊಂದಿಗೆ ಸೇರಿ DNA ಮಾದರಿಗಳ ವಿಶ್ಲೇಷಣೆಯನ್ನು ಪ್ರಾರಂಭಿಸಿದೆ.
“ಇತ್ತೀಚಿನ ದಿಢೀರ್ ಪ್ರವಾಹದಿಂದ ಸಂತ್ರಸ್ತರಾದವರ ಗುರುತು ಪತ್ತೆಹಚ್ಚಲು, ನೇಪಾಳದಲ್ಲಿ DNA ಮಾದರಿಗಳ ಪರಿಶೀಲನೆ ಪ್ರಕ್ರಿಯೆಯನ್ನು ವೇಗಗೊಳಿಸಲು ಈ ತಂಡವು ಶ್ರಮಿಸುತ್ತಿದೆ” ಎಂದು ರಾಯಭಾರ ಕಚೇರಿ ತಿಳಿಸಿದೆ.
ಇನ್ನೊಂದೆಡೆ, ಚೀನಾ ಕೂಡ DNA ಪತ್ತೆ ತಜ್ಞರ ಎರಡನೇ ತಂಡವನ್ನು ಹಾಗೂ ತುರ್ತು ಪರಿಹಾರ ಸಾಮಗ್ರಿಗಳ ಮೂರನೇ ಕಂತನ್ನು ನೇಪಾಳಕ್ಕೆ ಕಳುಹಿಸಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ಗುರುವಾರ ವರದಿ ಮಾಡಿದೆ.
ಸೌಜನ್ಯ: aljazeera.com






