ನೇಪಾಳ ಭೀಕರ ಪ್ರವಾಹ: ಈ ದುರಂತಕ್ಕೆ ಏನು ಕಾರಣ? ಇಲ್ಲಿವರೆಗೆ ನಾಪತ್ತೆಯಾದವರು ಎಷ್ಟು?
ದಿಢೀರ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವೇನು?

Photo Credit : PTI
ಬುಧವಾರದಂದು, ಹಿಮಾಲಯದ ಅತ್ಯುನ್ನತ ಪ್ರದೇಶದಲ್ಲಿ ಹಿಮನದಿ ಕರಗಿದ ಪರಿಣಾಮ ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಈ ವಿಕೋಪದಲ್ಲಿ ಕನಿಷ್ಠ 160 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ನೇಪಾಳ ಮತ್ತು ಚೀನಾದ ಟಿಬೆಟ್ ಪ್ರದೇಶದಾದ್ಯಂತ ಸುಮಾರು 1,500 ಜನರು ನಾಪತ್ತೆಯಾಗಿದ್ದಾರೆ. ನೇಪಾಳದ ಪೊಲೀಸ್ ಮತ್ತು ಪ್ರವಾಸೋದ್ಯಮ ಅಧಿಕಾರಿಗಳ ಪ್ರಕಾರ, ಅಲ್ಲಿ ಸುಮಾರು 600 ವಿದೇಶಿ ಪ್ರವಾಸಿಗರು ಸೇರಿ ಒಟ್ಟು 826 ಜನರು ನಾಪತ್ತೆಯಾಗಿದ್ದಾರೆ. ಗಡಿಯ ಆಚೆಗಿನ ಟಿಬೆಟ್ನ ಗೈರಾಂಗ್ (Gyirong) ಕೌಂಟಿಯಲ್ಲಿ 260 ವಿದೇಶಿಗರು ಸೇರಿದಂತೆ 558 ಜನರು ಕಾಣೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಈ ದುರಂತಕ್ಕೆ ಕಾರಣವೇನು? ಎಲ್ಲೆಲ್ಲಿ ಪ್ರವಾಹ ಉಂಟಾಗಿದ್ದು ಮತ್ತು ವೇಗವಾಗಿ ಬಿಸಿಯಾಗುತ್ತಿರುವ ಹಿಮಾಲಯ ಪ್ರದೇಶವು ಎದುರಿಸುತ್ತಿರುವ ಅಪಾಯಗಳೇನು ಎಂಬುದರ ವಿವರ ಇಲ್ಲಿದೆ.
ನೇಪಾಳದಲ್ಲಿ ನಡೆದಿದ್ದೇನು?
ಬುಧವಾರ ಬೆಳಿಗ್ಗೆ ಸುಮಾರು 8:40ಕ್ಕೆ (ಸ್ಥಳೀಯ ಸಮಯ) ನೇಪಾಳ-ಟಿಬೆಟ್ ಗಡಿಭಾಗದ ಪರ್ವತ ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಮತ್ತು ಭೂ ಕುಸಿತ ಸಂಭವಿಸಿದೆ. ಇದರಿಂದ ನೇಪಾಳದಲ್ಲಿ 157 ಹಾಗೂ ಟಿಬೆಟ್ನಲ್ಲಿ ಮೂವರು ಮೃತಪಟ್ಟಿದ್ದು, ಇಡೀ ಪ್ರದೇಶದಲ್ಲಿ ಸುಮಾರು 1,500 ಜನರು ಕಾಣೆಯಾಗಿದ್ದಾರೆ.
ಲೆಂಡೆ ಖೋಲಾ ನದಿ ಕಣಿವೆಯಲ್ಲಿ ಭಾರೀ ಪ್ರಮಾಣದ ನೀರು, ಕೆಸರು ಮತ್ತು ಬಂಡೆಗಳು ಹರಿದು ಬಂದು ಗ್ರಾಮಗಳನ್ನು ನೆಲಸಮ ಮಾಡಿವೆ. ಮನೆಗಳು ಹಾಗೂ ಮೂಲಸೌಕರ್ಯಗಳು ನಾಶವಾಗಿವೆ. ಕನಿಷ್ಠ 19 ಸೇತುವೆಗಳು ಮತ್ತು ಸುಮಾರು 40 ಕಿಲೋಮೀಟರ್ ರಸ್ತೆ ಕೊಚ್ಚಿಹೋಗಿದೆ.
ನೇಪಾಳದ ಸೇನೆ ಮತ್ತು ರಕ್ಷಣಾ ತಂಡಗಳು ಹೆಲಿಕಾಪ್ಟರ್, ಡ್ರೋನ್ ಹಾಗೂ ಶ್ವಾನಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಆದರೆ ನದಿಯ ಹರಿವು ಹೆಚ್ಚಿರುವುದು, ರಸ್ತೆಗಳು ಹಾಳಾಗಿರುವುದು ಮತ್ತು ಕೆಸರು ತುಂಬಿರುವುದರಿಂದ ಸಂಕಷ್ಟಕ್ಕೊಳಗಾದ ಪ್ರದೇಶಗಳನ್ನು ತಲುಪುವುದು ಸವಾಲಾಗಿದೆ. ಇತ್ತ ಟಿಬೆಟ್ ಭಾಗದಲ್ಲೂ ಕೆಸರು ಶೇಖರಣೆಯಾಗಿರುವುದರಿಂದ ಚೀನಾದ ರಕ್ಷಣಾ ಪಡೆಗಳಿಗೆ ಗಡಿ ಪ್ರದೇಶ ತಲುಪಲು ವಿಳಂಬವಾಗಿದೆ.
ದಿಢೀರ್ ಪ್ರವಾಹ ಮತ್ತು ಭೂ ಕುಸಿತಕ್ಕೆ ಕಾರಣವೇನು?
ಸ್ಥಳೀಯ ಸುದ್ದಿ ಮೂಲಗಳ ಪ್ರಕಾರ, ಆ ಸಮಯದಲ್ಲಿ ಮಳೆಯೇ ಇರಲಿಲ್ಲ. ಹೀಗಾಗಿ ಪ್ರವಾಹದ ಮುನ್ಸೂಚನೆ ಸಿಗದೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
ಹಿಮಾಲಯದ ಅತ್ಯಂತ ಎತ್ತರದ ಪ್ರದೇಶದಲ್ಲಿ ಹಿಮನದಿ ಭಾಗವೊಂದು ಕರಗಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಇದು ಸರಣಿ ಅನಾಹುತಕ್ಕೆ ದಾರಿ ಮಾಡಿಕೊಟ್ಟು, ಕೆಳಭಾಗದಲ್ಲಿ ಭಾರೀ ಪ್ರಮಾಣದ ನೀರು ಮತ್ತು ಪಳೆಯುಳಿಕೆಗಳನ್ನು ತಂದಿದೆ.
ಉಪಗ್ರಹ ಚಿತ್ರಗಳ ಪ್ರಕಾರ, ಸುಮಾರು 5,200 ಮೀಟರ್ ಎತ್ತರದಲ್ಲಿದ್ದ ಹಿಮನದಿಯ ಕೆಳಭಾಗ ಕರಗಿ, ಸುಮಾರು 1,200 ಮೀಟರ್ ಆಳದ ಕಣಿವೆಗೆ ಬಿದ್ದಿದೆ. ಬೀಳುವ ರಭಸಕ್ಕೆ ಕಲ್ಲು ಮತ್ತು ಕೆಸರನ್ನು ತನ್ನೊಂದಿಗೆ ಹೊತ್ತುಕೊಂಡು ಹೋಗಿದೆ.
ಈ ಹಿಮ-ಬಂಡೆಗಳ ಕುಸಿತವು ನೇಪಾಳ-ಚೀನಾ ಗಡಿಯಿಂದ 20 ಕಿಲೋಮೀಟರ್ ದೂರದಲ್ಲಿರುವ ಟಿಬೆಟ್ನ ಲೆಂಡೆ ನದಿಗೆ ಅಪ್ಪಳಿಸಿದೆ. ಇದರಿಂದ ರೂಪುಗೊಂಡ ತಾತ್ಕಾಲಿಕ ನೈಸರ್ಗಿಕ ಕಟ್ಟೆ ಒಡೆದು, ಕೆಳಭಾಗಕ್ಕೆ ದಿಢೀರ್ ಪ್ರವಾಹ ಹರಿದುಬಂದಿದೆ.
ಆರಂಭದಲ್ಲಿ 4.4 ತೀವ್ರತೆಯ ಭೂಕಂಪದಿಂದಾಗಿ ಇದು ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಆದರೆ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಸಂಸ್ಥೆಯು, ಇದು ಭೂಕಂಪವಲ್ಲ, ಭೂಕುಸಿತದ ತೀವ್ರತೆಯಿಂದಾಗಿಯೇ ಭೂಮಿಯಲ್ಲಿ ಕಂಪನ ಸೃಷ್ಟಿಯಾಗಿತ್ತು ಎಂದು ಸ್ಪಷ್ಟಪಡಿಸಿದೆ. ಈ ಭೂಕುಸಿತವು 5.2 ತೀವ್ರತೆಯ ಕಂಪನವಾಗಿ ದಾಖಲಾಗಿದೆ.
ಪ್ರವಾಹ ಎಲ್ಲಿ ಸಂಭವಿಸಿತು?
ನೇಪಾಳ-ಟಿಬೆಟ್ ಗಡಿಯ ಪರ್ವತ ಪ್ರದೇಶಗಳಲ್ಲಿ ಈ ದುರಂತ ಸಂಭವಿಸಿದೆ. ಚೀನಾ ಗಡಿಗೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ.
ದಿಢೀರ್ ಹರಿದುಬಂದ ಪ್ರವಾಹ ಲೆಂಡೆ ಖೋಲಾ ನದಿಯನ್ನು ಸೇರಿ, ಅಲ್ಲಿಂದ ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿಗೆ ಹರಿದುಬಂತು. ಇದರಿಂದ ನೇಪಾಳದ ದಕ್ಷಿಣ ಭಾಗಕ್ಕೆ ಪ್ರವಾಹದ ನೀರು ನುಗ್ಗಿತು. ತ್ರಿಶೂಲಿ ನದಿಯ ನೀರಿನ ಮಟ್ಟ ಕೇವಲ 30 ನಿಮಿಷಗಳಲ್ಲಿ ಬರೋಬ್ಬರಿ 9 ಮೀಟರ್ಗಳಷ್ಟು (27 ಅಡಿ) ಏರಿಕೆಯಾಯಿತು.
ರಸುವಾ ಜಿಲ್ಲೆಯ ಟಿಮುರೆ ಮತ್ತು ಸ್ಯಾಪ್ರು ಬೇಸಿ ಪ್ರದೇಶಗಳು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿವೆ. ನದಿಯ ಕೆಳಭಾಗದಲ್ಲಿರುವ ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಿಗೂ ಪ್ರವಾಹ ತಲುಪಿದ್ದು, ಮನೆಗಳು, ರಸ್ತೆಗಳು ಹಾಗೂ ಇತರ ಮೂಲಸೌಕರ್ಯಗಳು ನಾಶವಾಗಿವೆ.
ಗಡಿಯ ಆಚೆ ಟಿಬೆಟ್ನ ಶಿಗಾಟ್ಸೆ ವಲಯದಲ್ಲಿರುವ ಗೈರಾಂಗ್ ಪೋರ್ಟ್ಗೆ ಭಾರೀ ಪ್ರಮಾಣದ ಕೆಸರು ಮತ್ತು ತ್ಯಾಜ್ಯ ಅಪ್ಪಳಿಸಿದೆ. ತ್ರಿಶೂಲಿ ನದಿಯು ಮುಂದೆ ನಾರಾಯಣಿ ನದಿಯನ್ನು ಸೇರಲಿದ್ದು, ಅದು ಭಾರತದ ಬಿಹಾರ ರಾಜ್ಯವನ್ನು ಪ್ರವೇಶಿಸಿದಾಗ ಗಂಡಕ್ ನದಿ ಎಂದು ಕರೆಯಲ್ಪಡುತ್ತದೆ.
ಸಂತ್ರಸ್ತರ ವಿವರಗಳು
ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಕನಿಷ್ಠ 160 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ಸುಮಾರು 1,500 ಜನರು ಕಾಣೆಯಾಗಿದ್ದಾರೆ. ನೇಪಾಳದಲ್ಲಿ ಪೊಲೀಸರು ಕನಿಷ್ಠ 157 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಟಿಬೆಟ್ ನ ಗೈರಾಂಗ್ ಕೌಂಟಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, 260 ವಿದೇಶಿಗರು ಸೇರಿದಂತೆ 558 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ನನ್ನ ಭಾವ ಇಲ್ಲೊಂದು ಮದ್ಯದ ಅಂಗಡಿ ಇಟ್ಟುಕೊಂಡಿದ್ದರು. ಬೆಳಿಗ್ಗೆ ಅವರಿಂದ ಕರೆ ಬಂದಿತ್ತು. ತಮ್ಮ ಇಡೀ ಮನೆ ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ಅಳುತ್ತಾ ಹೇಳಿದರು" ಎಂದು ನೇಪಾಳದ ಸ್ಥಳೀಯ ಉದ್ಯಮಿ ರಾಜು ಭದೇಲ್ ಅಲ್ ಜಝೀರಾಗೆ ತಿಳಿಸಿದ್ದಾರೆ.
ಶಿಕ್ಷಕ ಮನೋಜ್ ಮಿಶ್ರಾ ಎಂಬವರು ಮಾತನಾಡಿ, "ಜನರು ಮತ್ತು ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುವುದನ್ನು ಕಣ್ಣಾರೆ ಕಂಡೆ. ಜನರಿದ್ದ ಸುಮಾರು ಒಂಬತ್ತು ಟ್ರಕ್ಗಳು ಪ್ರವಾಹದಲ್ಲಿ ತಾಸಿನೊಳಗೆ ಕೊಚ್ಚಿಹೋದವು. ಇದು ಅತ್ಯಂತ ಹೃದಯವಿದ್ರಾವಕ ಘಟನೆ" ಎಂದು ಕಣ್ಣೀರಿಟ್ಟರು.
ಯಾರು ಕಾಣೆಯಾಗಿದ್ದಾರೆ?
ನೇಪಾಳ ಮತ್ತು ಟಿಬೆಟ್ನಾದ್ಯಂತ ಕನಿಷ್ಠ 800 ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 1,500 ಜನರು ನಾಪತ್ತೆಯಾಗಿದ್ದಾರೆ.
ನೇಪಾಳದ ಪೊಲೀಸ್ ಮತ್ತು ಪ್ರವಾಸೋದ್ಯಮ ಅಧಿಕಾರಿಗಳ ಪ್ರಕಾರ, ನೇಪಾಳವೊಂದರಲ್ಲೇ ಸುಮಾರು 600 ವಿದೇಶಿ ಪ್ರವಾಸಿಗರು ಸೇರಿ ಒಟ್ಟು 826 ಜನರು ಕಾಣೆಯಾಗಿದ್ದಾರೆ. ಈ ಪ್ರವಾಸಿಗರು 25ಕ್ಕೂ ಹೆಚ್ಚು ದೇಶಗಳಿಗೆ ಸೇರಿದವರಾಗಿದ್ದಾರೆ.
ನೇಪಾಳದಲ್ಲಿ ಕಾಣೆಯಾದ ವಿದೇಶಿಗರ ವಿವರ:
ಭಾರತ: 177
ಅಮೆರಿಕ: 63
ಆಸ್ಟ್ರೇಲಿಯಾ: 34
ಬ್ರಿಟನ್: 33
ಕೆನಡಾ: 25
ಕಾಣೆಯಾದ ಎಲ್ಲಾ ವಿದೇಶಿ ಪ್ರಜೆಗಳ ಸಂಪೂರ್ಣ ದೇಶವಾರು ವಿವರಗಳನ್ನು ಅಧಿಕಾರಿಗಳು ಇನ್ನು ಅಧಿಕೃತವಾಗಿ ಬಿಡುಗಡೆ ಮಾಡಬೇಕಿದೆ.
ಗಡಿಯ ಆಚೆ ಟಿಬೆಟ್ನ ಗೈರಾಂಗ್ ಕೌಂಟಿಯಲ್ಲಿ 260 ವಿದೇಶಿಗರು ಸೇರಿದಂತೆ 558 ಜನರು ಕಾಣೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಸಿಸಿಟಿವಿ ವರದಿ ಮಾಡಿದೆ.
ಈ ದುರಂತದಲ್ಲಿ ಸಿಲುಕಿಕೊಂಡವರಲ್ಲಿ ಹೆಚ್ಚಿನವರು ಟಿಬೆಟ್ನ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳುತ್ತಿದ್ದ ಯಾತ್ರಿಕರಾಗಿದ್ದಾರೆ. ಪ್ರವಾಹ ಅಪ್ಪಳಿಸಿದ ಸಮಯದಲ್ಲಿ ಈ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರ ತಂಡಗಳ ಮಾಹಿತಿ ಸಂಗ್ರಹಿಸಲು ಪ್ರವಾಸೋದ್ಯಮ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಗಾಯಗೊಂಡವರು ಮತ್ತು ರಕ್ಷಿಸಲ್ಪಟ್ಟವರು:
ಕನಿಷ್ಠ 65 ಜನರು ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಹಾಗೂ ಕಾಠ್ಮಂಡುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ನೇಪಾಳ ಸೇನೆ ಮತ್ತು ಪೋಲಿಸರ 5,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರವಾಹ ಹಾಗೂ ರಸ್ತೆ ಹಾನಿಯಿಂದಾಗಿ ಸಂಪರ್ಕ ಕಳೆದುಕೊಂಡಿರುವ ಪ್ರದೇಶಗಳಲ್ಲಿ ಸಂತ್ರಸ್ತರನ್ನು ಹುಡುಕಲು ಮತ್ತು ತುರ್ತು ಸಾಮಗ್ರಿಗಳನ್ನು ತಲುಪಿಸಲು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ.
ತೀವ್ರವಾಗಿ ಬಾಧಿತವಾದ ಪ್ರದೇಶಗಳಿಂದ ಬದುಕುಳಿದವರನ್ನು ಮಿಲಿಟರಿ ಹೆಲಿಕಾಪ್ಟರ್ ಮೂಲಕ ತೆರವುಗೊಳಿಸಲಾಗುತ್ತಿದ್ದು, ಕೆಲವರನ್ನು ಚಿಕಿತ್ಸೆಗಾಗಿ ಕಾಠ್ಮಂಡುವಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ನಾಯಕರು ಈ ಸಂಕಷ್ಟಕ್ಕೆ ಹೇಗೆ ಸ್ಪಂದಿಸುತ್ತಿದ್ದಾರೆ?
ನೇಪಾಳ ಮತ್ತು ಟಿಬೆಟ್ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಂತೆ, ವಿವಿಧ ದೇಶಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ತುರ್ತು ನೆರವು, ಧನಸಹಾಯ ಮತ್ತು ತಾಂತ್ರಿಕ ಬೆಂಬಲವನ್ನು ನೀಡಿವೆ.
ಮಾನವೀಯ ಹಾಗೂ ಹಣಕಾಸಿನ ನೆರವು:
ಭಾರತವು ನೇಪಾಳಕ್ಕೆ ಸುಮಾರು 10 ಟನ್ ತುರ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ರಕ್ಷಣಾ ವಿಮಾನವನ್ನು ಕಳುಹಿಸಿದೆ. ಇದರಲ್ಲಿ ತಾತ್ಕಾಲಿಕ ಆಶ್ರಯ ಸಾಮಗ್ರಿಗಳು, ಕಂಬಳಿಗಳು, ನೈರ್ಮಲ್ಯ ಕಿಟ್ಗಳು, ಸೋಲಾರ್ ದೀಪಗಳು ಮತ್ತು ಔಷಧಗಳು ಸೇರಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ಮಾತನಾಡಿ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಅಂತರರಾಷ್ಟ್ರೀಯ ಒಕ್ಕೂಟವು (IFRC), ನೇಪಾಳ ರೆಡ್ ಕ್ರಾಸ್ ಸೊಸೈಟಿಯ ಪರಿಹಾರ ಕಾರ್ಯಾಚರಣೆ ಮತ್ತು ಹಾನಿ ಸಮೀಕ್ಷೆಗೆ ಬೆಂಬಲವಾಗಿ 10 ಲಕ್ಷ ಸ್ವಿಸ್ ಫ್ರಾಂಕ್ (ಸುಮಾರು 1.2 ಮಿಲಿಯನ್ ಡಾಲರ್) ತುರ್ತು ನಿಧಿಯನ್ನು ಬಿಡುಗಡೆ ಮಾಡಿದೆ.
ಅಂತರರಾಷ್ಟ್ರೀಯ ಸಮನ್ವಯ ಮತ್ತು ಉಪಗ್ರಹ ಬೆಂಬಲ:
ಸಂಯುಕ್ತ ರಾಷ್ಟ್ರ ಸಂಘವು ಸರ್ಕಾರಿ ಚಾಲಿತ ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡಲು ನೇಪಾಳದಲ್ಲಿ ತನ್ನ ಸಿಬ್ಬಂದಿಯನ್ನು ನಿಯೋಜಿಸಿದೆ. ಚೀನಾದಲ್ಲಿರುವ ತನ್ನ ಕಚೇರಿಯು ಟಿಬೆಟ್ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಸಿದ್ಧವಾಗಿದೆ ಎಂದು ತಿಳಿಸಿದೆ.
ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದು, ದುರಂತಕ್ಕೊಳಗಾದ ಜನರೊಂದಿಗೆ ತಮ್ಮ ಸಂಸ್ಥೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಯುರೋಪಿಯನ್ ಯೂನಿಯನ್ ತನ್ನ 'ಕೋಪರ್ನಿಕಸ್ ತುರ್ತು ನಿರ್ವಹಣಾ ಸೇವೆ'ಯನ್ನು ಸಕ್ರಿಯಗೊಳಿಸಿದೆ. ಇದು ಉಪಗ್ರಹ ಚಿತ್ರಣವನ್ನು ಬಳಸಿ ದುರಂತ ಪೀಡಿತ ಪ್ರದೇಶಗಳ ನಕ್ಷೆಯನ್ನು ತಯಾರಿಸಿ, ಹಾನಿಯನ್ನು ಅಂದಾಜಿಸಲು ಮತ್ತು ರಕ್ಷಣಾ ಕಾರ್ಯಗಳನ್ನು ಸಮನ್ವಯಗೊಳಿಸಲು ಅಧಿಕಾರಿಗಳಿಗೆ ನೆರವಾಗುತ್ತದೆ.
ಶೋಧ ಮತ್ತು ರಕ್ಷಣಾ ಕಾರ್ಯಗಳು:
ಜಲವಿದ್ಯುತ್ ಯೋಜನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ದೇಶದ ಹಲವು ನಾಗರಿಕರು ಕಾಣೆಯಾದ ನಂತರ ದಕ್ಷಿಣ ಕೊರಿಯಾ ಸರ್ಕಾರಿ ಟಾಸ್ಕ್ ಫೋರ್ಸ್ ಒಂದನ್ನು ರಚಿಸಿದೆ. ಶೋಧ ಕಾರ್ಯಕ್ಕೆ ನೆರವಾಗಲು ಸರ್ಕಾರಿ, ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ನೇಪಾಳಕ್ಕೆ ಕಳುಹಿಸಲು ಚಿಂತಿಸಿರುವುದಾಗಿ ದಕ್ಷಿಣ ಕೊರಿಯಾ ತಿಳಿಸಿದೆ.
ಅಮೆರಿಕವು ದುರಂತ ನಿರ್ವಹಣಾ ಸಲಹೆಗಾರರನ್ನು ಕಳುಹಿಸುತ್ತಿದ್ದು, 5 ಲಕ್ಷ ಡಾಲರ್ ನೆರವು ನೀಡುವುದಾಗಿ ಘೋಷಿಸಿದೆ.
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ನೇಪಾಳದ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿರುವುದಾಗಿ ತಿಳಿಸಿದ್ದು, ಈ ಪ್ರವಾಹವನ್ನು "ಅತ್ಯಂತ ವಿನಾಶಕಾರಿ" ಎಂದು ಬಣ್ಣಿಸಿದ್ದಾರೆ.
ಚೀನಾ ಭಾಗದಲ್ಲಿ, ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಟಿಬೆಟ್ನಲ್ಲಿ ಕಾಣೆಯಾದವರಿಗಾಗಿ "ಪೂರ್ಣ ಪ್ರಮಾಣದ" ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಿದ್ದು, ಮುಂದಿನ ಅನಾಹುತಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ದುರಂತದಲ್ಲಿ ಹವಾಮಾನ ವೈಪರೀತ್ಯದ ಪಾತ್ರವೇನು?:
ಈ ಹಿಮನದಿ ಕರಗಿ ಕುಸಿದಿದ್ದಕ್ಕೆ ಪ್ರಮುಖ ಕಾರಣವೇನು ಎಂಬುದರ ಕುರಿತು ವಿಜ್ಞಾನಿಗಳು ಇನ್ನೂ ಸಂಶೋಧನೆ ನಡೆಸುತ್ತಿದ್ದಾರೆ. ಈ ನಿರ್ದಿಷ್ಟ ಘಟನೆಗೆ ಹವಾಮಾನ ವೈಪರೀತ್ಯ ಎಷ್ಟು ಕಾರಣ ಎಂಬುದನ್ನು ತಕ್ಷಣವೇ ಸ್ಪಷ್ಟಪಡಿಸುವುದು ಕಷ್ಟ.
ಈ ದುರಂತವು ಹಿಮಾಲಯ ಪ್ರದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ತಾಪಮಾನ ಮತ್ತು ಕರಗುತ್ತಿರುವ ಹಿಮನದಿಗಳ ಹಿನ್ನೆಲೆಯಲ್ಲೇ ಸಂಭವಿಸಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಭಾರತ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಹರಡಿರುವ ಹಿಂದೂ ಕುಶ್ ಹಿಮಾಲಯ ಪರ್ವತ ಶ್ರೇಣಿಯ ಹಿಮನದಿಗಳು, 2011 ರಿಂದ 2020 ರ ನಡುವೆ ಕಳೆದ ದಶಕಕ್ಕಿಂತ ಶೇಕಡಾ 65 ರಷ್ಟು ವೇಗವಾಗಿ ಹಿಮವನ್ನು ಕಳೆದುಕೊಂಡಿವೆ. ನೇಪಾಳದ ಹಿಮನದಿಗಳು ಸುಮಾರು ಮೂರು ದಶಕಗಳಲ್ಲಿ ತಮ್ಮ ಒಟ್ಟು ಹಿಮದ ಪ್ರಮಾಣದಲ್ಲಿ ಮೂರನೇ ಒಂದು ಭಾಗವನ್ನು ಕಳೆದುಕೊಂಡಿವೆ.
ಹಿಮನದಿಗಳು ಕರಗಿದಂತೆ ಪರ್ವತಗಳ ಇಳಿಜಾರುಗಳು ಹೆಚ್ಚು ಅಸ್ಥಿರಗೊಳ್ಳುತ್ತವೆ. ಹಿಮನದಿಗಳ ಸುತ್ತಮುತ್ತ ನೀರು ಶೇಖರಣೆಗೊಂಡು ದಿಢೀರ್ ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತದೆ.
ಹಿಮನದಿ ಕರಗಿ ಕುಸಿಯುವುದಕ್ಕೂ ಮುನ್ನ ಈ ಪ್ರದೇಶದಲ್ಲಿ ಹೆಚ್ಚಿನ ತಾಪಮಾನವಿತ್ತು ಎಂಬುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಇದರಿಂದ ಹಿಮದ ಹೊದಿಕೆ ಗಣನೀಯವಾಗಿ ಕಡಿಮೆಯಾಗಿತ್ತು.
ಹಿಮ ಕರಗಿರುವುದು ಹಿಮನದಿಯ ಅಸ್ಥಿರತೆಗೆ ಕಾರಣವಾಯಿತೇ ಎಂಬುದರ ಕುರಿತು ಸಂಶೋಧಕರು ಪರಿಶೀಲಿಸುತ್ತಿದ್ದಾರೆ. ಈ ವಾರದ ಘಟನೆಗೂ ಹವಾಮಾನ ವೈಪರೀತ್ಯಕ್ಕೂ ನೇರ ಸಂಪರ್ಕವಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ..
ಪ್ರಸ್ತುತ ಪರಿಸ್ಥಿತಿ ಹೇಗಿದೆ?:
ನೇಪಾಳ ಸೇನೆ ಮತ್ತು ಪೋಲಿಸ್ ಪಡೆಯ 5,000ಕ್ಕೂ ಹೆಚ್ಚು ಸಿಬ್ಬಂದಿ ಬದುಕುಳಿದವರಿಗಾಗಿ ಶೋಧ ನಡೆಸುತ್ತಿದ್ದು, ಮೃತದೇಹಗಳನ್ನು ಹೊರತೆಗೆಯುತ್ತಿದ್ದಾರೆ. ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿರುವ ಪ್ರದೇಶಗಳಿಗೆ ಹೆಲಿಕಾಪ್ಟರ್ಗಳ ಮೂಲಕ ಡೇರೆ, ಆಹಾರ ಮತ್ತು ತುರ್ತು ಸಾಮಗ್ರಿಗಳನ್ನು ತಲುಪಿಸಲಾಗುತ್ತಿದೆ.
ಹಾನಿಗೊಳಗಾದ ರಸ್ತೆಗಳು, ನೀರಿನ ಮಟ್ಟ ಹೆಚ್ಚಿರುವುದು ಮತ್ತು ದಪ್ಪನೆಯ ಕೆಸರಿನಿಂದಾಗಿ ತಲುಪಲಾಗದ ಪ್ರದೇಶಗಳಿಗೆ ರಕ್ಷಣಾ ಸಿಬ್ಬಂದಿ ತಲುಪುತ್ತಿದ್ದಂತೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಟಿಬೆಟ್ನ ಗೈರಾಂಗ್ನಲ್ಲಿ ದುರಂತ ಸಂಭವಿಸಿದ ಪ್ರದೇಶದ ಮೇಲ್ಭಾಗದಲ್ಲಿ ಹರಿವು ತಡೆಯಲ್ಪಟ್ಟು ಸೃಷ್ಟಿಯಾಗಿರುವ ಸರೋವರದ ಮೇಲೆ ಚೀನಾ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಇದು ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟುಮಾಡುವ ಹಾಗೂ ಮತ್ತಷ್ಟು ಪ್ರವಾಹದ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ.
ಕೃಪೆ: aljazeera.com






