ಪತ್ರಿಕಾ ಗೋಷ್ಠಿಗೆ ನಿರ್ಬಂಧ: ವಿಯೆಟ್ನಾಮ್ ಗೆ ಹೋಗಿ ಹೇಳಿಕೆ ಕೊಟ್ಟ ಜೋ ಬೈಡನ್
► ಮೋದಿಗೆ ಮಾನವ ಹಕ್ಕು, ಪತ್ರಿಕಾ ಸ್ವಾತಂತ್ರ್ಯ ರಕ್ಷಣೆ ನೆನಪಿಸಿದ ಬೈಡನ್ ► ಅಮೇರಿಕನ್ ಪತ್ರಕರ್ತರಿಗೆ ಪ್ರಶ್ನೆ ಕೇಳುವ ಅವಕಾಶವನ್ನೇ ಕೊಡದ ಮೋದಿ

Photo- PTI
ಆರ್. ಜೀವಿ
ನಿಜವಾದ ಪತ್ರಕರ್ತರನ್ನು, ಸಮರ್ಪಕ ಪ್ರಶ್ನೆಗಳನ್ನು ಎದುರಿಸಲು ಸಿದ್ಧವಿಲ್ಲದ ಪ್ರಧಾನಿ ಮೋದಿಯವರ ನಡೆ ಮತ್ತೊಮ್ಮೆ ಭಾರತಕ್ಕೆ ಅಂತರ್ ರಾಷ್ಟ್ರೀಯ ವೇದಿಕೆಯಲ್ಲಿ ಭಾರೀ ಮುಜುಗರ ತಂದಿಟ್ಟಿದೆ.
ಇಷ್ಟು ದೊಡ್ಡ ಜಿ 20 ಶೃಂಗ ಸಭೆಯ ಆತಿಥ್ಯ ವಹಿಸಿದ ಪ್ರಧಾನಿ ಮೋದಿ ಇಡೀ ಎರಡು ದಿನಗಳ ಸಭೆ ಹಾಗು ಅದು ಮುಗಿದ ಬಳಿಕವಾದರೂ ಒಂದೇ ಒಂದು ಪತ್ರಿಕಾ ಗೋಷ್ಠಿ ನಡೆಸಲಿಲ್ಲ. ಶೃಂಗ ಸಭೆಗೆ ಅಮೇರಿಕ ಅಧ್ಯಕ್ಷರ ಜೊತೆ ಬಂದಿದ್ದ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲು ಕೇಳಿದಾಗ ಭಾರತ ಸರಕಾರ ಅದಕ್ಕೆ ಒಪ್ಪಿಲ್ಲ ಎಂದು ಶ್ವೇತ ಭವನ ಕೂಡ ಹೇಳಿತ್ತು.
ಈಗ ಅದಕ್ಕೆ ಬೆಲೆ ತೆರಬೇಕಾಗಿದೆ. ಭಾರತದಲ್ಲಿ ಶೃಂಗ ಸಭೆ ಮುಗಿಸಿಕೊಂಡು ವಿಯೆಟ್ನಾಮ್ ಗೆ ಹೋದ ಅಮೇರಿಕ ಅಧ್ಯಕ್ಷ ಜೋ ಬೈಡನ್ ಅಲ್ಲಿ ತಮ್ಮ ಭಾರತ ಭೇಟಿ ಹಾಗು ಪ್ರಧಾನಿ ಮೋದಿ ಜೊತೆ ಮಾಡಿದ ಚರ್ಚೆಯ ಬಗ್ಗೆ ನೇರವಾಗಿಯೇ ಮಾತಾಡಿದ್ದಾರೆ. ಭಾರತ ಭೇಟಿ ವೇಳೆ ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ತಾನು ಪ್ರಧಾನಿ ಮೋದಿಯವರಲ್ಲಿ ಮಾತಾಡಿದೆ ಎಂದು ಜೋ ಬೈಡನ್ ವಿಯೆಟ್ನಾಮ್ ನಲ್ಲಿ ಹೇಳಿದ್ದಾರೆ. ಅಲ್ಲಿಗೆ ಮೋದಿ ಯಾವುದನ್ನು ದಿಲ್ಲಿಯಲ್ಲಿ ಬಚ್ಚಿಡಲು ಬಯಸಿದ್ದರೋ ಅದನ್ನು ಬೈಡನ್ ವಿಯೆಟ್ನಾಮ್ ಗೆ ಹೋಗಿ ಇಡೀ ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ.
ಸಾಮಾನ್ಯವಾಗಿ ಅಮೇರಿಕ ಅಧ್ಯಕ್ಷರು ವಿದೇಶ ಪ್ರವಾಸಕ್ಕೆ ಹೋಗುವಾಗ ತಮ್ಮ ಜೊತೆ ಪತ್ರಕರ್ತರನ್ನೂ ಕರೆದುಕೊಂಡು ಹೋಗುತ್ತಾರೆ. ವಿದೇಶಗಳಲ್ಲಿ ಅಲ್ಲಿನ ನಾಯಕರನ್ನು ಭೇಟಿಯಾಗುವಾಗ ಅಲ್ಲಿ ಪತ್ರಕರ್ತರಿಗೂ ಹೋಗಲು ಹಾಗು ಪ್ರಶ್ನೆ ಕೇಳಲು ಸಮಯ ನಿಗದಿಪಡಿಸಲಾಗುತ್ತದೆ. ಆದರೆ ಪ್ರಧಾನಿ ಮೋದಿಯವರೇ ಬೇರೆ. ಅವರ ಸ್ಟೈಲೇ ಬೇರೆ. ಅವರು ಪ್ರಧಾನಿಯಾದ ಮೇಲೆ ವಿದೇಶ ಪ್ರವಾಸಕ್ಕೆ ಪತ್ರಕರ್ತರನ್ನು ಕರೆದುಕೊಂಡು ಹೋಗುವುದನ್ನೇ ಬಂದ್ ಮಾಡಿಬಿಟ್ಟರು. ಪ್ರಶ್ನೆಗಳ ರಗಳೆಯೇ ಬೇಡ ಅಂತ.
ಅದೇ ನಿಯಮವನ್ನು ಪ್ರಧಾನಿ ಮೋದಿ ಹಾಗು ಅವರ ಸರಕಾರ ಅಮೇರಿಕ ಪತ್ರಕರ್ತರಿಗೂ ಅನ್ವಯಿಸಿದ್ದಾರೆ. ಬೈಡನ್ ಜೊತೆ ಬಂದ ಪತ್ರಕರ್ತರನ್ನು ತಮ್ಮ ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ಬೈಡನ್ ಹಾಗು ಮೋದಿ ಭೇಟಿಯಾಗುವಾಗ ಎಲ್ಲ ಕಡೆ ಆಗುವಂತೆ ಅಮೇರಿಕನ್ ಪತ್ರಕರ್ತರನ್ನು ಅಲ್ಲಿಗೆ ಬಿಡಲೇ ಇಲ್ಲ. ಅವರನ್ನು ಅವರ ವಾಹನದಲ್ಲೇ ಕೂರಿಸಲಾಯಿತು. ಇದಕ್ಕೆ ಅಮೇರಿಕ ಪತ್ರಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಅವರನ್ನು ಅಮೇರಿಕ ಅದ್ಯಕ್ಷರ ಜೊತೆ ಬಂದಿದ್ದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್ ಪಿಯರ್ ಹಾಗು ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಜೇಕ್ ಸಲ್ಲಿವನ್ ಅವರು ಪತ್ರಕರ್ತರ ಅಸಮಾಧಾನ ತಣಿಸಬೇಕಾಯಿತು. " ನಾವು ಭಾರತ ಸರಕಾರದ ಬಳಿ ಕೇಳಿದ್ದೆವು. ಆದರೆ ನಾವು ಅವರಲ್ಲಿಗೆ ಬಂದಾಗ ಅವರ ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ. ಅವರು ಈಗ ಈ ಶಿಷ್ಟಾಚಾರವನ್ನು ಅಳವಡಿಸಿಕೊಂಡಿದ್ದಾರೆ " ಎಂದು ಅವರಿಬ್ಬರೂ ಅಸಹಾಯಕತೆ ವ್ಯಕ್ತಪಡಿಸಬೇಕಾಯಿತು.
ಇನ್ನು ಭಾರತೀಯ ಪತ್ರಕರ್ತರು ಏನು ಮಾಡುತ್ತಿದ್ದರು ಎಂದು ಕೇಳುವುದೇ ಬೇಡ ಬಿಡಿ. ಅವರೆಲ್ಲರಿಗೂ ಶೃಂಗ ಸಭೆಯ ನಡುವೆ ಬಂದು ಮೋದೀಜಿ ಕೈ ಬೀಸಿದರು. ಅದಕ್ಕೆ ಪ್ರತಿಯಾಗಿ ಅವರು ಅಂದ್ರೆ ಪತ್ರಕರ್ತರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.
ಹೇಗಿದೆ ನಮ್ಮ ದೇಶದ ಪತ್ರಕರ್ತರ ಕಾರ್ಯವೈಖರಿ ? ಇಡೀ ಜಗತ್ತು ನೋಡುತ್ತಿರುವ ಶೃಂಗ ಸಭೆ ದೇಶದಲ್ಲಿ ನಡೆಯುತ್ತಿದೆ. ಇಪ್ಪತ್ತು ದೇಶಗಳ ನಾಯಕರು ಬಂದಿದ್ದಾರೆ. ಆಗ ಎದುರಾದ ಪ್ರಧಾನಿಯವರಲ್ಲಿ ಶೃಂಗ ಸಭೆಯ ಕುರಿತು ಮಹತ್ವದ ಪ್ರಶ್ನೆ ಕೇಳೋದನ್ನು ಬಿಟ್ಟು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದಾರೆ ನಮ್ಮ ದೇಶದ ಪತ್ರಕರ್ತರು.
ಈಗ ಅದಕ್ಕೆ ಬೈಡನ್ ಹೇಳಬೇಕಾದ್ದನ್ನೆಲ್ಲ ಹೋಗಿ ಇನ್ನೊಂದು ದೇಶದಲ್ಲಿ ಹೇಳಿ ಬಿಟ್ಟಿದ್ದಾರೆ. ಭಾರತದಿಂದ ಹೊರಟು ವಿಯೆಟ್ನಾಮ್ ಗೆ ಹೋದ ಬೈಡನ್ " ಪ್ರತಿ ಬಾರಿಯಂತೆ ಈ ಬಾರಿಯೂ ಮಾನವ ಹಕ್ಕುಗಳ ರಕ್ಷಣೆ, ನಾಗರೀಕ ಸಮಾಜದ ಪ್ರಮುಖ ಪಾತ್ರ ಹಾಗು ಸ್ವತಂತ್ರ ಮಾಧ್ಯಮಗಳು ಸಮರ್ಥ ಹಾಗು ಸಮೃದ್ಧ ದೇಶ ಕಟ್ಟಲು ಅನಿವಾರ್ಯ ಎಂದು ನಾನು ಮೋದಿ ಅವರಲ್ಲಿ ಹೇಳಿದೆ " ಎಂದು ಹೇಳಿದ್ದಾರೆ.
ಆದ್ರೆ, ಮೋದಿ ಬೈಡನ್ ಭೇಟಿ ಬಳಿಕ ಭಾರತ ಸರಕಾರವೇ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿಷಯಗಳ ಉಲ್ಲೇಖವೇ ಇರಲಿಲ್ಲ. ಹೇಗಿದೆ ತಮಾಷೆ ?
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ " ನಾನೂ ಪತ್ರಿಕಾ ಗೋಷ್ಠಿ ಮಾಡೋದಿಲ್ಲ, ನಿಮಗೂ ಮಾಡಲು ಬಿಡೋದಿಲ್ಲ ಎಂದು ಬೈಡನ್ ಗೆ ಮೋದಿ ಹೇಳಿರಬೇಕು " ಎಂದು ಕುಟುಕಿದ್ದಾರೆ. ಮಾನವ ಹಕ್ಕು, ನಾಗರೀಕ ಸಮಾಜ ಹಾಗು ಪತ್ರಿಕಾ ಸ್ವಾತಂತ್ರ್ಯ - ಈ ಮೂರು ಅಂಶಗಳಿಗೆ ಪ್ರಧಾನಿ ಮೋದಿ ಹಾಗು ಅವರ ಪರಿವಾರಕ್ಕೆ ಅದೆಷ್ಟು ಮಹತ್ವ ಕೊಡ್ತಾರೆ ಎಂಬುದನ್ನು ಇಡೀ ದೇಶ ಮಾತ್ರವಲ್ಲ ವಿಶ್ವವೇ ನೋಡಿದೆ.
ಇಲ್ಲಿ ಮಾತಾಡಿದ ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿದೆ. ನಾಗರೀಕ ಸಮಾಜ ಹಕ್ಕುಗಳ ಬಗ್ಗೆ ಮಾತಾಡಿದರೆ ದಮನಿಸಲಾಗುತ್ತಿದೆ. ಇನ್ನು ಪತ್ರಿಕಾ ಸ್ವಾತಂತ್ರದ ಬಗ್ಗೆ ಹೇಳೋದೇ ಬೇಡ. ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ 180 ದೇಶಗಳ ಪಟ್ಟಿಯಲ್ಲಿ 161 ನೇ ಸ್ಥಾನಕ್ಕೆ ಬಂದು ನಿಂತಿದೆ ಭಾರತ.
ನಮ್ಮ ದೇಶದಲ್ಲಿ ಮಾವಿನ ಹಣ್ಣು ಹೇಗೆ ತಿನ್ನುತ್ತೀರಿ ಎಂದು ಕೇಳುವವರನ್ನು ಮಾತ್ರ ಹತ್ತಿರ ಬಿಟ್ಟುಕೊಳ್ಳುವ ಪ್ರಧಾನಿ ಮೋದಿ ಅಮೇರಿಕ ಅಧ್ಯಕ್ಷರು ಬಂದಾಗಲೂ ಅದೇ ಚಾಳಿ ಮುಂದುವರಿಸಿ ಈಗ ಸ್ವತಃ ಮುಖಭಂಗಕ್ಕೆ ಒಳಗಾಗಿದ್ದಾರೆ. ದೇಶಕ್ಕೂ ಜಾಗತಿಕವಾಗಿ ಮುಜುಗರ ತಂದಿಟ್ಟಿದ್ದಾರೆ.
ಹಾಗೆಯೇ ಜಿ 20 ಯ ಘೋಷಣಾ ಪತ್ರದಲ್ಲೂ ಪಾಯಿಂಟ್ ನಂಬರ್ 78 ರಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗು ಶಾಂತಿಯುತವಾಗಿ ಒಂದು ಕಡೆ ಸೇರುವ ಸ್ವಾತಂತ್ರ್ಯ ಗಳು ಅತ್ಯಂತ ಮುಖ್ಯ ಹಾಗು ಅವು ಒಂದನ್ನೊಂದು ಅವಲಂಬಿಸಿವೆ. ಧರ್ಮ ಹಾಗು ನಂಬಿಕೆಯ ಆಧಾರದಲ್ಲಿ ಯಾವುದೇ ರೀತಿಯ ತಾರತಮ್ಯ ಹಾಗು ಅಸಹಿಷ್ಣುತೆ ಸಲ್ಲದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಈ ಬಗ್ಗೆ ಪ್ರಧಾನಿ ಮೋದಿಯವರಾಗಲಿ, ಭಾರತ ಸರ್ಕಾರವಾಗಲಿ ಎದೆ ತಟ್ಟಿಕೊಂಡು ನಾವಿದನ್ನು ದೇಶದಲ್ಲಿ ಪಾಲಿಸುತ್ತಿದ್ದೇವೆ ಎಂದು ಹೇಳಲು ಸಾಧ್ಯವೇ ?. ಆದರೆ ಈ ಬಗ್ಗೆ ಮಾತಾಡದೆ ಇದ್ದರೆ, ದೇಶಕ್ಕೆ ಬಂದ ವಿದೇಶಿ ಪತ್ರಕರ್ತರನ್ನು ಮಾತಾಡಲು ಬಿಡದೇ ಇದ್ದರೆ ನಮ್ಮ ವೈಫಲ್ಯ , ನಮ್ಮ ದ್ವಂದ್ವ, ನಮ್ಮ ಸೋಗಲಾಡಿತನ ಮುಚ್ಚಿ ಹೋಗುತ್ತದೆಯೇ ? ಇಲ್ಲ. ಆ ಕಟುಸತ್ಯ ಇಲ್ಲಿ ಬಹಿರಂಗವಾಗದೆ ಜಾಗತಿಕವಾಗಿ ಬಹಿರಂಗವಾಗುತ್ತದೆ.
ಈಗ ವಿಯೆಟ್ನಾಮ್ ನಲ್ಲಿ ಆಗಿರೋದು ಅಷ್ಟೇ.







