ಆಕ್ಸಿಜನ್ ದುರಂತದ ಕತೆ: ಶಾರುಖ್ ಖಾನ್ ಗೆ ಡಾ. ಕಫೀಲ್ ಖಾನ್ ಪ್ರಶಂಸೆ
► ಜವಾನ್ ನಲ್ಲಿ ಗಮನ ಸೆಳೆದ ಡಾ. ಕಫೀಲ್ ಖಾನ್ ಸ್ಟೋರಿ ► ಮಹಾರಾಷ್ಟ್ರದ ದುರಂತದ ಬೆನ್ನಿಗೇ ಚರ್ಚೆಯಾದ ಜವಾನ್ ಕತೆ

ಶಾರುಖ್ ಖಾನ್, ಫೋಟೋ PTI
ಶಾರುಖ್ ಖಾನ್ ನಟನೆಯ, ಅಟ್ಲಿ ನಿರ್ದೇಶನದ ಜವಾನ್ ಚಿತ್ರ ಭಾರೀ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಈಗಲೂ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಪ್ರಚಂಡ ಹಿಟ್ ಚಿತ್ರ ಎಂಬ ಖ್ಯಾತಿ ಗಳಿಸಿದೆ. ಪಕ್ಕಾ ಮಸಾಲೆ ಚಿತ್ರವಾದರೂ ಜವಾನ್ ಇನ್ನೂ ಹಲವು ಕಾರಣಗಳಿಗಾಗಿ ಬಿಡುಗಡೆ ಆದ ದಿನದಿಂದಲೇ ಸುದ್ದಿಯಾಗಿತ್ತು.
ನಮ್ಮ ಸಮಾಜ ಎದುರಿಸುವ ಹಲವು ಗಂಭೀರ ಸಮಸ್ಯೆಗಳನ್ನು ಈ ಚಿತ್ರ ಚರ್ಚಿಸಿ ಪ್ರಶಂಸೆಗೆ ಪಾತ್ರವಾಗಿತ್ತು. ಶಾರುಖ್ ರ ಇತರ ಚಿತ್ರಗಳಂತೆ ಕೇವಲ ರೋಮ್ಯಾನ್ಸ್ ಹಾಗು ಆಕ್ಷನ್ ಗೆ ಮೀಸಲಾಗದೆ ದೇಶವನ್ನು ಕಾಡುತ್ತಿರುವ ವಿಷಯಗಳನ್ನು ಧೈರ್ಯದಿಂದ ತೆರೆ ಮೇಲೆ ತಂದಿದ್ದಾರೆ ಎಂದು ವೀಕ್ಷಕರು ಹಾಗು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈಗ ಮತ್ತೆ ಜವಾನ ಚಿತ್ರ ಸುದ್ದಿಯಲ್ಲಿರುವುದು ಮತ್ತೊಂದು ಬಹಳ ಮುಖ್ಯ ಕಾರಣಕ್ಕೆ. ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮಾಡಿರುವ ಪಾತ್ರ, ಆರು ವರ್ಷಗಳ ಹಿಂದಿನ ಉತ್ತರ ಪ್ರದೇಶದ ಗೋರಖ್ಪುರ ಆಸ್ಪತ್ರೆ ದುರಂತ ಪ್ರಕರಣದಲ್ಲಿ ಬಲಿಪಶುವಾಗಿದ್ದ ಡಾ.ಕಫೀಲ್ ಖಾನ್ ಅವರ ಸ್ಥಿತಿಯನ್ನೇ ಹೋಲುವಂತಿರುವುದು ಮತ್ತು ಆ ಇಡೀ ಸನ್ನಿವೇಶವೇ ಮನಸ್ಸಿಗೆ ಬಹಳ ನಾಟುವಂತಿರುವುದು ಚರ್ಚೆಯಾಗುತ್ತಿದೆ.
ಅವತ್ತಿನ ದುರಂತವನ್ನೇ ಹೋಲುವ ಘಟನೆಯನ್ನು ಚಿತ್ರದಲ್ಲಿ ತಂದಿರುವುದಕ್ಕಾಗಿ ಸ್ವತಃ ಡಾ.ಕಫೀಲ್ ಖಾನ್ ಧನ್ಯವಾದ ತಿಳಿಸಿ ಶಾರುಖ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ. ಗೋರಖ್ಪುರ ಆಸ್ಪತ್ರೆಯಲ್ಲಿ 63 ಮಕ್ಕಳ ಸಾವಿನ ಪ್ರಕರಣದಲ್ಲಿ ಬಲಿಪಶುವಾಗಿದ್ದ ಡಾ ಕಫೀಲ್ ಖಾನ್ ಅನುಭವದ ಹಾಗೆಯೇ ಸಾನ್ಯಾ ನಿರ್ವಹಿಸಿರುವ ಪಾತ್ರವೂ ಇದೆ.
ನಿಜ ಜೀವನದಲ್ಲಿ ಡಾ.ಕಫೀಲ್ ಖಾನ್ ಅವರನ್ನು ಮಕ್ಕಳನ್ನು ಕಾಪಾಡಲು ಕೊನೆವರೆಗೂ ಹೆಣಗಾಡಿದ ಹೀರೋ ಎಂದು ಹೊಗಳಲಾಗುತ್ತದೆ. ಕಡೆಗೆ ಸರ್ಕಾರದ ಕಣ್ಣಿಗೆ ಅವರೇ ವಿಲನ್ ಆಗಿ ಕಾಣುತ್ತಾರೆ. ದುರಂತದಲ್ಲಿ ಅವರ ಪಾತ್ರವಿದೆಯೆಂಬ ಆರೋಪ ಹೊರಿಸಿ ಜೈಲಿಗೂ ಹಾಕಲಾಗುತ್ತದೆ.
ಅದನ್ನೇ ಹೋಲುವ ಘಟನೆ ಜವಾನ್ ಚಿತ್ರದಲ್ಲಿದೆ. ಸಿನಿಮಾ ನೋಡಿದ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಡಾ.ಕಫೀಲ್ ಖಾನ್ ಪತ್ರ ಬರೆದಿದ್ದಾರೆ. ಜವಾನ್ ಸಿನಿಮಾ ಒಂದು ಕಾಲ್ಪನಿಕ ಕಥೆ ಎಂದು ಅರ್ಥಮಾಡಿಕೊಂಡಿದ್ದೇನೆ. ಆದರೆ ಅದರಲ್ಲಿರುವ ಒಂದು ಘಟನೆ ಗೋರಖ್ಪುರ ಆಸ್ಪತ್ರೆ ದುರಂತವನ್ನು ಹೋಲುತ್ತದೆ. ವ್ಯವಸ್ಥಿತ ವೈಫಲ್ಯಗಳು, ನಿರಾಸಕ್ತಿ ಮತ್ತು ಮುಖ್ಯವಾಗಿ, ಕಳೆದುಹೋದ ಮುಗ್ಧ ಜೀವಗಳ ಪ್ರಖರ ನೆನಪಾಗಿ ಅದು ಮೂಡಿದೆ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯ ತುರ್ತು ಅಗತ್ಯವನ್ನು ಆ ದೃಶ್ಯಗಳು ಒತ್ತಿ ಹೇಳುತ್ತವೆ ಎಂದು ಡಾ.ಖಾನ್ ಬರೆದಿದ್ದಾರೆ.
ಸಾನ್ಯಾ ಮಲ್ಹೋತ್ರಾ ಮಾಡಿರುವ ಪಾತ್ರ ನನ್ನನ್ನು ನೇರವಾಗಿ ಉಲ್ಲೇಖಿಸದಿದ್ದರೂ, ನಾನು ಎದುರಿಸಿದ ಅನುಭವಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದ ನಿಜವಾದ ಅಪರಾಧಿ ಸಿಕ್ಕಿಬೀಳುವ ದೃಶ್ಯ ನೋಡುವಾಗ ಖುಷಿಯಾಗುತ್ತದೆ. ಆದರೆ ನಿಜ ಜೀವನದಲ್ಲಿ ನಡೆದ ಗೋರಖ್ಪುರ ಘಟನೆಯ ನಿಜವಾದ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಇಷ್ಟು ವರ್ಷಗಳಾದರೂ ನಾನು ಇನ್ನೂ ನನ್ನ ಉದ್ಯೋಗವನ್ನು ಮರಳಿ ಪಡೆಯಲು ಹೆಣಗಾಡುತ್ತಿದ್ದೇನೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಆ 63 ಪೋಷಕರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ಡಾ.ಕಫೀಲ್ ಖಾನ್ ಶಾರುಖ್ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಗೋರಖ್ಪುರ ಆಸ್ಪತ್ರೆ ದುರಂತ ಎಂಬ ಹೆಸರಿನಲ್ಲಿಯೇ ತಾವು ಬರೆದಿರುವ ಪುಸ್ತಕದ ಬಗ್ಗೆಯೂ ಪತ್ರದಲ್ಲಿ ಡಾ.ಖಾನ್ ಹೇಳಿದ್ದಾರೆ. ಆರಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ಆ ಪುಸ್ತಕದಲ್ಲಿ ವಿವರಿಸಿದ ಘಟನೆಗಳನ್ನೇ ಜವಾನ್ ಚಿತ್ರದ ಒಂದು ಭಾಗವು ಹೋಲುತ್ತದೆ ಎಂದು ಹೇಳಿರುವ ಅವರು, ಇಂಥದೊಂದು ವಿಚಾರವನ್ನು ಸಿನಿಮಾದೊಳಕ್ಕೆ ತಂದಿರುವ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2017ರ ಆಗಸ್ಟ್ನಲ್ಲಿ ಗೋರಖ್ಪುರ ಆಸ್ಪತ್ರೆ ದುರಂತ ಸಂಭವಿಸಿತ್ತು. ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದ ಗೋರಖ್ಪುರದ ಸರ್ಕಾರಿ ಬಿಆರ್ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 63 ಮಕ್ಕಳು ಸಾವನ್ನಪ್ಪಿದ್ದರು. ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಪಾವತಿಸದೆ ಇದ್ದುದರಿಂದ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿತ್ತು. ಅದರ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆದರೂ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ.
ಆ ತೀರಾ ಸಂಕಷ್ಟದ ಸಮಯದಲ್ಲಿ ಅಮಾಯಕ ಜೀವಗಳನ್ನು ಕಾಪಾಡಲು ಡಾ.ಕಫೀಲ್ ಖಾನ್ ನಡೆಸಿದ ಯತ್ನ ಅಸಾಧಾರಣವಾದುದಾಗಿತ್ತು.
ಆಮ್ಲಜನಕ ಸಿಲಿಂಡರ್ಗಳನ್ನು ವ್ಯವಸ್ಥೆ ಮಾಡಲು ಡಾ. ಕಫೀಲ್ ಖಾನ್ ಸ್ವಂತ ಹಣವನ್ನು ಖರ್ಚು ಮಾಡಿದ್ದರು. ಅವರ ಆ ಪ್ರಯತ್ನಗಳು ದೇಶಾದ್ಯಂತ ಹೊಗಳಿಕೆಗೆ ಪಾತ್ರವಾಗಿದ್ದವು.
ಆದರೆ, ಹೀರೋ ಎಂದು ಹೊಗಳಿಸಿಕೊಂಡಿದ್ದ ಖಾನ್ ಅವರ ಹೋರಾಟಕ್ಕೆ ಸರ್ಕಾರ ಕೊಟ್ಟ ಉಡುಗೊರೆ ಮಾತ್ರ ವಿಲನ್ ಪಟ್ಟವಾಗಿತ್ತು. ಡಾ.ಖಾನ್ ಅವರನ್ನೇ ಆದಿತ್ಯನಾಥ್ ಸರ್ಕಾರ ಕರ್ತವ್ಯ ಲೋಪದ ಆರೋಪದ ಮೇಲೆ ಹುದ್ದೆಯಿಂದ ಕಿತ್ತುಹಾಕಿತ್ತು. ಬಳಿಕ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಿ ಜೈಲಿಗೆ ಕಳಿಸಲಾಯಿತು.
2019ರಲ್ಲಿ ನ್ಯಾಯಾಲಯ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿತು. ಅವತ್ತು ಡಾ.ಖಾನ್ ಅನುಭವಿಸಿದ್ದ ನೋವು, ಯಾತನೆಯೇ ಜವಾನ್ ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ ನಿರ್ವಹಿಸಿರುವ ವೈದ್ಯೆಯ ಪಾತ್ರದ ಮೂಲಕ ತೆರೆಯ ಮೇಲೆ ಮೂಡಿದೆ. ಕುತೂಹಲಕಾರಿ ಸಂಗತಿಯೆಂದರೆ, ಆ ಪಾತ್ರ ಗೋರಖ್ಪುರ ದುರಂತದ ಹಿನ್ನೆಲೆಯದ್ದು ಎಂಬುದು ಸ್ವತಃ ಸಾನ್ಯಾಗೇ ಗೊತ್ತಿರಲಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿ ಅದರ ಬಗ್ಗೆ ಅವರಿಗೆ ಅರಿವೇ ಇರಲಿಲ್ಲ. ಸಂದರ್ಶನವೊಂದರಲ್ಲಿ ಸಾನ್ಯಾ ಆ ಬಗ್ಗೆ ಹೇಳಿಕೊಂಡಿರುವುದು ವರದಿಯಾಗಿದೆ.
ಅಂಥದೊಂದು ಪಾತ್ರ ಮಾಡುವ ಅವಕಾಶ ತಮಗೆ ಸಿಕ್ಕಿದ್ದು ಅದೃಷ್ಟವೆಂದು ಭಾವಿಸುವುದಾಗಿಯೂ ಸಾನ್ಯಾ ಹೇಳಿದ್ದಾರೆ. ಜವಾನ್ ಚಿತ್ರದಲ್ಲೂ ಆಕ್ಸಿಜನ್ ಕೊರತೆಯಿಂದ ಸರಕಾರಿ ಆಸ್ಪತ್ರೆಯಲ್ಲಿ ಅಮಾಯಕರು ಪ್ರಾಣ ಕಳಕೊಳ್ಳುತ್ತಾರೆ. ಆಕ್ಸಿಜನ್ ವ್ಯವಸ್ಥೆ ಮಾಡಲು ವೈದ್ಯೆ ಪಾತ್ರ ನಿರ್ವಹಿಸಿದ ಸಾನ್ಯಾ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನೂ ಮಾಡ್ತಾರೆ. ಆದರೆ ಅದರಿಂದ ಪ್ರಯೋಜನವಾಗುವುದಿಲ್ಲ.
ಆಗ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಸರಕಾರ ಸಾನ್ಯಾ ಕರ್ತವ್ಯ ಲೋಪ ಎಸಗಿದ್ದಾರೆ, ಆಕೆ ಡ್ರಗ್ ವ್ಯಸನಿ ಎಂದು ಆಕೆಯನ್ನೇ ಬಂಧಿಸುತ್ತದೆ. ಆದರೆ ಕೊನೆಗೂ ಆಕ್ಸಿಜನ್ ದುರಂತಕ್ಕೆ ಯಾರು ಕಾರಣ ಎಂದು ಚಿತ್ರದಲ್ಲಿ ಬಯಲಾಗುತ್ತದೆ. ಸಾನ್ಯಾಗೆ ನ್ಯಾಯ ಸಿಗುತ್ತದೆ. ಇಂತಹ ಇನ್ನೂ ಕೆಲವು ಗಂಭೀರ ಸಾಮಾಜಿಕ , ರಾಜಕೀಯ ಪಿಡುಗುಗಳನ್ನು ತೋರಿಸಿರುವ ಕಾರಣದಿಂದಾಗಿ ಜವಾನ್ ಚಿತ್ರದ ಹಿರಿಮೆ ನಿಜಕ್ಕೂ ಹೆಚ್ಚಿದೆ. ವ್ಯವಸ್ಥೆಯ ದುಷ್ಟತನವನ್ನು ಯಾವುದೇ ಮುಲಾಜಿಲ್ಲದೆ ಜವಾನ್ ಚಿತ್ರ ಹಾಗೂ ಶಾರುಖ್ ಹೇಳಿದ್ದಾರೆ.
ಸಾಮಾನ್ಯವಾಗಿ ಶಾರುಖ್ ಸಹಿತ ಬಾಲಿವುಡ್ ನ ಪ್ರಮುಖ ಸ್ಟಾರ್ ಗಳು ಇಂತಹ ಕೆಲಸಕ್ಕೆ ಕೈ ಹಾಕೋದಿಲ್ಲ. ಆದರೆ ಶಾರುಖ್ ಹಿಂಜರಿಯದೆ ಈ ಧೈರ್ಯ ತೋರಿಸಿದ್ದಾರೆ ಎಂದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಚಿತ್ರವೂ ಹಿಂದೆಂದೂ ಯಾವ ಚಿತ್ರವೂ ಆಗದಷ್ಟು ಯಶಸ್ವಿಯಾಗಿ ಓಡುತ್ತಿದೆ. ಅದು ಗಳಿಸಿರುವುದು ಕೋಟಿ ಕೋಟಿ ಹಣವನ್ನು ಮಾತ್ರ ಅಲ್ಲ; ಕೋಟಿ ಕೋಟಿ ಮನಸ್ಸುಗಳನ್ನೂ ಈ ಮೂಲಕ ಗೆದ್ದಂತಾಗಿದೆ.







