ಪಕ್ಷಗಳಿಗೆ ಬರುವ ಹಣದ ಮೂಲ ತಿಳಿಯುವ ಹಕ್ಕು ಜನರಿಗಿಲ್ಲ ಎಂದ ಕೇಂದ್ರ ಸರಕಾರ
► ಚುನಾವಣಾ ಬಾಂಡ್ ಎಂಬ ಮಹಾ ಅಕ್ರಮ ಕಾಪಾಡಿಕೊಳ್ಳುವ ಹುನ್ನಾರ

ಸಾಂದರ್ಭಿಕ ಚಿತ್ರ.| Photo: PTI
"ನಾನು ನಿಮ್ಮ ಚೌಕಿದಾರ, ನಾನು ಕೇವಲ ನಿಮ್ಮ ಪ್ರಧಾನ ಸೇವಕ" ಎಂಬಲ್ಲಿಂದ ಪ್ರಾರಂಭವಾಗಿ ಈಗ " ನನಗೆ ದುಡ್ಡು ಎಲ್ಲಿಂದೆಲ್ಲಾ ಬರುತ್ತೆ ಅಂತ ನಿಮಗ್ಯಾಕೆ ? ಅದನ್ನೆಲ್ಲ ಕೇಳೋ ಅಧಿಕಾರ ನಿಮಗಿಲ್ಲ" ಅನ್ನೊವರೆಗೆ ಬಂದು ತಲುಪಿದೆ ಪರಿಸ್ಥಿತಿ.
“ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ತಿಳಿಯುವ ಹಕ್ಕು ನಾಗರಿಕರಿಗೆ ಇಲ್ಲ.” ಇಂಥದೊಂದು ಆತಂಕಕಾರಿ ನಿಲುವನ್ನು ಕೇಂದ್ರ ಸರ್ಕಾರ ನ್ಯಾಯಾಲಯದ ಮುಂದೆ ಮಂಡಿಸಿದೆ. ಏನಿದರ ಅರ್ಥ? ಈ ದೇಶದಲ್ಲಿ ಇನ್ನು ಮುಂದೆ ಸರ್ಕಾರ ಆಡಿದ್ದೇ ಆಟ ಎಂಬಂತಾಗಲಿದೆಯೆ?. ತನ್ನನ್ನು ಟೀಕಿಸುವವರನ್ನು ಮತ್ತು ಪ್ರಶ್ನಿಸುವವರನ್ನು ನೆಪ ಹುಡುಕಿ ಜೈಲಿಗೆ ಕಳಿಸುವ ಮಟ್ಟಿಗೆ ಸರ್ವಾಧಿಕಾರಿ ಧೋರಣೆ ತೋರಿಸುತ್ತ ಬಂದಿರುವ ಸರ್ಕಾರ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆಂದರೆ ಏನೆಂದು ಭಾವಿಸಿದೆ?.
ಅಧಿಕಾರಕ್ಕೇರಿಸಿ ಕೂರಿಸುವ ಜನರಿಗೆ ಚುನಾವಣೆಗೆ ರಾಜಕೀಯ ಪಕ್ಷಗಳು ಖರ್ಚು ಮಾಡುವ ಹಣವೆಲ್ಲಿಂದ ಬರುತ್ತದೆ ಎಂಬುದನ್ನು ತಿಳಿಯುವ ಹಕ್ಕೂ ಇಲ್ಲ ಎಂದು ಈ ಸರ್ಕಾರ ಅದ್ಯಾವ ಧೈರ್ಯದಲ್ಲಿ ಹೇಳುತ್ತಿದೆ ?. ತಾವು ಚುನಾಯಿಸುವ ಪಕ್ಷಕ್ಕೆ ಎಲ್ಲಿಂದ ದುಡ್ಡು ಬರುತ್ತೆ ಎಂದು ತಿಳಿಯುವ ಹಕ್ಕೇ ಜನರಿಗೆ ಇಲ್ಲ ಎನ್ನುತ್ತಿದೆ ಮೋದಿ ಸರಕಾರ ಎಂದರೆ ಅದರ ಧೋರಣೆ ಯಾವ ಮಟ್ಟದ್ದು?.
ತನ್ನನ್ನು ತಾನು ಜನರ ಚೌಕಿದಾರ್, ಪ್ರಧಾನ ಸೇವಕ ಎಂದು ಬಣ್ಣಿಸಿಕೊಳ್ಳುವ ಸರಕಾರ ತನಗೆ ಎಲ್ಲಿಂದ ಆದಾಯ ಬರುತ್ತೆ ಎಂದು ಜನ ಕೇಳಬಾರದು ಎನ್ನುತ್ತಿರುವುದರ ಮರ್ಮ ಏನು?. ಬೇರೆ ಪಕ್ಷಗಳನ್ನು ಭ್ರಷ್ಟ ಎಂದು ಹೇಳಿ ಹೇಳಿಯೇ ಅಧಿಕಾರಕ್ಕೆ ಬಂದವರು ಈಗ ತಮಗೆ ಎಲ್ಲಿಂದೆಲ್ಲ ದುಡ್ಡು ಬರುತ್ತಿದೆ ಎಂದು ಕೇಳಬೇಡಿ ಎನ್ನುತ್ತಿದ್ದಾರೆ ಎಂದರೆ, ಭ್ರಷ್ಟಾಚಾರ ನಿರ್ಮೂಲನೆಯ ಇವರ ಮಾತು ಎಲ್ಲಿಗೆ ಮುಟ್ಟಿತು?.
ಬಹುಶಃ ಈಗಾಗಲೇ ಅಪಾಯದಲ್ಲಿರುವಂತೆ ತೋರುತ್ತಿರುವ ದೇಶದ ಪ್ರಜಾಪ್ರಭುತ್ವ ಮೋದಿ ಸರ್ಕಾರದ ಇಂಥದೊಂದು ಧೋರಣೆಯಿಂದ ನಿಜವಾಗಿಯೂ ದೊಡ್ಡ ಮಟ್ಟದ ಅಪಾಯಕ್ಕೆ ಸಿಲುಕಲಿದೆ ಎಂಬ ಆತಂಕ ಕಾಡುತ್ತದೆ. ರಾಜಕೀಯ ಪಕ್ಷಗಳ ಹಣದ ಮೂಲವನ್ನು ತಿಳಿಯುವ ಹಕ್ಕು ಜನರಿಗಿಲ್ಲ ಎಂಬ ನಿಲುವನ್ನು ಕೇಂದ್ರ ಸರ್ಕಾರ ಮಂಡಿಸಿರುವುದು ಸುಪ್ರೀಂ ಕೋರ್ಟ್ ಮುಂದೆ.
ಸಂದರ್ಭ: ಚುನಾವಣಾ ಬಾಂಡ್ ಬಗ್ಗೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಹಿನ್ನೆಲೆ.
ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾಗಿರುವ ಹೇಳಿಕೆಯಲ್ಲಿ ಭಾರತ ಸರಕಾರದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, "ಈ ನಿಧಿಗಳ ಮೂಲವನ್ನು ತಿಳಿದುಕೊಳ್ಳುವ ಹಕ್ಕನ್ನು ಸಂವಿಧಾನ ನಾಗರಿಕರಿಗೆ ಮೂಲಭೂತ ಹಕ್ಕಾಗಿ ನೀಡಿಲ್ಲ" ಎಂದು ವಾದಿಸಿದ್ದಾರೆ.
ರಾಜಕೀಯ ಪಕ್ಷಗಳಿಗೆ ಹರಿದುಬರುವ ಹಣದ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಇದೆ ಎಂಬುದೇ, ಚುನಾವಣಾ ಬಾಂಡ್ ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿನ ಪ್ರಮುಖ ವಿಚಾರವಾಗಿದೆ. ಮೊದಲು, ಚುನಾವಣಾ ಬಾಂಡ್ ಮತ್ತದನ್ನು ಯಾಕೆ ಪ್ರಶ್ನಿಸಲಾಗಿದೆ ಎಂಬುದನ್ನು ನೆನಪಿಸಿಕೊಳ್ಳೋಣ. ಯಾರೇ ಆದರೂ ಎಷ್ಟೇ ದೊಡ್ಡ ಮೊತ್ತವನ್ನಾದರೂ ರಾಜಕೀಯ ಪಕ್ಷಗಳಿಗೆ ಗುಟ್ಟಾಗಿ ದೇಣಿಗೆ ನೀಡಲು ಅವಕಾಶ ಮಾಡಿಕೊಡುವುದೇ ಚುನಾವಣಾ ಬಾಂಡ್ ವ್ಯವಸ್ಥೆ.
ಇದನ್ನು 2017ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿತು. ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ, ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಅಥವಾ ಸಂಸ್ಥೆಗಳು ನೀಡುವ ದೇಣಿಗೆ ಮೊತ್ತವು 20 ಸಾವಿರಕ್ಕಿಂತ ಹೆಚ್ಚಿದ್ದಲ್ಲಿ ಅಂಥವರ ಹೆಸರನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕು. ಆದರೆ, ಹೀಗೆ ಮಾಹಿತಿಯನ್ನೇ ಬಹಿರಂಗಪಡಿಸದೆ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಬೇಕೆನಿಸಿದಷ್ಟು ದೊಡ್ಡ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಲು ಚುನಾವಣಾ ಬಾಂಡ್ ಮೂಲಕ ಅವಕಾಶ ಮಾಡಿಕೊಡಲಾಗಿದೆ.
2017ರಲ್ಲಿ ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್ 1951 (RPA) ನ ಸೆಕ್ಷನ್ 29ಸಿ ಗೆ ತಿದ್ದುಪಡಿ ತರುವ ಮೂಲಕ, 2017ರ ಹಣಕಾಸು ಮಸೂದೆಯಲ್ಲಿ ಚುನಾವಣಾ ಬಾಂಡ್ ಪರಿಚಯಿಸಲಾಯಿತು. 10 ಸಾವಿರದಿಂದ ಒಂದು ಕೋಟಿವರೆಗಿನ ಮೌಲ್ಯದಲ್ಲಿ ಈ ಬಾಂಡ್ಗಳು ಲಭ್ಯವಿರುತ್ತವೆ. ಯಾರೂ ಯಾವುದೇ ಪಕ್ಷಕ್ಕೂ ಗುಟ್ಟಾಗಿ ದೇಣಿಗೆ ಕೊಡಲು ಇದರಲ್ಲಿ ಅವಕಾಶವಿರುತ್ತದೆ.
ದೇಣಿಗೆ ನೀಡುವವರ ಮಾಹಿತಿ ಗೌಪ್ಯವಾಗಿರಿಸಲು ಅವಕಾಶವಿರುವುದೇ ಇಲ್ಲಿ ವಿವಾದದ ವಿಚಾರವಾಗಿದೆ. ಪ್ರತಿವರ್ಷ ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸುವ ದೇಣಿಗೆ ವರದಿಯಲ್ಲಿ ಚುನಾವಣಾ ಬಾಂಡ್ಗಳ ಮೂಲಕ ಯಾರಿಂದ ದೇಣಿಗೆ ಬಂದಿದೆ ಎಂಬುದನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸುವ ಅಗತ್ಯವೇ ಇಲ್ಲ
ಚುನಾವಣಾ ಬಾಂಡ್ಗಳು ನಾಗರಿಕರಿಗೆ ಯಾವುದೇ ವಿವರಗಳನ್ನು ನೀಡುವುದಿಲ್ಲ. ಹಣ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬ ವಿವರಗಳನ್ನು ಪಡೆಯುವ ಅವಕಾಶವೇ ಈ ದೇಶದ ಜನತೆಗೆ ಇಲ್ಲ. ತೆರಿಗೆದಾರರಾಗಿರುವ ಜನರು ಈ ದೇಣಿಗೆಗಳ ಮೂಲ ತಿಳಿದುಕೊಳ್ಳದಂತೆ ಮಾಡಲಾಗಿದೆ. ಹೀಗಾಗಿಯೇ, ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, ಈ ವಾದವೇ ಆಧಾರವಿಲ್ಲದ್ದು ಎಂಬ ಧಾಟಿಯಲ್ಲಿ ಅಟಾರ್ನಿ ಜನರಲ್ ವಾದ ಮಂಡಿಸಿದ್ದಾರೆ. ಮತ್ತು ಚುನಾವಣಾ ಬಾಂಡ್ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಟಾರ್ನಿ ಜನರಲ್ ವಾದದ ಕೆಲವು ಅಂಶಗಳನ್ನು ಹೀಗೆ ಗುರುತಿಸಬಹುದು:
1.ಚುನಾವಣಾ ಬಾಂಡ್ ಯೋಜನೆ ಪ್ರಸ್ತುತ ಅಸ್ತಿತ್ವದಲ್ಲಿರುವ ಯಾವುದೇ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ. ಹಾಗಾಗಿ ಅದು ಕಾನೂನು ಬಾಹಿರವಲ್ಲ.
2.ಏನನ್ನೂ ಮತ್ತು ಎಲ್ಲವನ್ನೂ ತಿಳಿದುಕೊಳ್ಳುವ ಅನಿರ್ಬಂಧಿತ ಹಕ್ಕು ಎಂಬುದು ಇರುವುದಿಲ್ಲ.
3. ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ತಿಳಿದುಕೊಳ್ಳುವ ನಾಗರಿಕರ ಹಕ್ಕನ್ನು ಎತ್ತಿಹಿಡಿಯುವ ತೀರ್ಪುಗಳನ್ನು ಪಕ್ಷಗಳಿಗೆ ಬರುವ ಹಣದ ಮೂಲವನ್ನು ತಿಳಿಯುವ ಹಕ್ಕುಗಳಿಗೂ ಸಂಬಂಧಿಸಿವೆ ಎಂದು ಅರ್ಥೈಸಲು ಸಾಧ್ಯವಿಲ್ಲ.
4.ಚುನಾವಣಾ ಬಾಂಡ್ ಯೋಜನೆ ದೇಣಿಗೆ ನೀಡುವವರಿಗೆ ಗೌಪ್ಯತೆಯ ಪ್ರಯೋಜನವನ್ನು ನೀಡುತ್ತದೆ. ಸ್ವಚ್ಛ ಹಣವನ್ನು ದೇಣಿಗೆ ನೀಡುವಂತೆ ಉತ್ತೇಜಿಸುತ್ತದೆ. ತೆರಿಗೆಗೆ ಸಂಬಂಧಿಸಿದ ಕರಾರುಗಳಿಗೆ ಅನುಗುಣವಾಗಿಯೇ ದೇಣಿಗೆ ನೀಡಲಾಗುವುದನ್ನು ಯೋಜನೆ ಖಾತರಿಪಡಿಸುತ್ತದೆ.
5. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಪ್ರಜಾಸತ್ತಾತ್ಮಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ರಾಜಕೀಯ ಚರ್ಚೆಗೆ ಸೂಕ್ತವಾದ ವಿಷಯವಾಗಿದೆ.
6. ಇದು ಸಂಸತ್ತಿನಲ್ಲಿ ಚರ್ಚಿಸಲು ಅರ್ಹವಾದ ವಿಚಾರ.
7.ಅಸಂಗತ ಎನಿಸದ ಯಾವುದೇ ಕಾನೂನನ್ನು ಯಾವುದೇ ಕಾರಣಕ್ಕೆ ರದ್ದುಪಡಿಸುವಂತಿಲ್ಲ.
8.ಯಾವುದೇ ಕಾನೂನು ಸಂವಿಧಾನವನ್ನು ಉಲ್ಲಂಘಿಸದ ಹೊರತು ಆ ಕಾನೂನಿನ ಕುರಿತಾಗಿ ಸರ್ಕಾರದ ಉತ್ತರದಾಯಿತ್ವದ ಹೆಸರಿನಲ್ಲಾಗಲಿ ಅಥವಾ ವಶೀಲಿಗಳಿಂದ ಸರ್ಕಾರವನ್ನು ಮುಕ್ತಗೊಳಿಸಲೆಂದಾಗಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು.
ಪ್ರಕರಣ ದಾಖಲಾಗಿ 6 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ಸಂದರ್ಭದಲ್ಲಿ ಸರ್ಕಾರ ರಾಜಕೀಯ ಪಕ್ಷಗಳ ಹಣದ ಮೂಲವನ್ನು ಕೇಳುವ ಹಕ್ಕನ್ನೇ ಜನತೆ ಹೊಂದಿಲ್ಲ ಎನ್ನುತ್ತಿರುವುದು ಅಪಾಯಕಾರಿ ನಡೆಯಾಗಿ ಕಾಣಿಸುತ್ತಿದೆ.
ತಾನೂ ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಹೇಳುತ್ತ ಅಧಿಕಾರಕ್ಕೆ ಬಂದಿದ್ದ ಮೋದಿ ಸರ್ಕಾರ, ಇಂಥದೊಂದು ಯೋಜನೆ ಜಾರಿಗೆ ತಂದಾಗಿನಿಂದಲೂ ಬಿಜೆಪಿಯ ಖಜಾನೆ ತುಂಬುತ್ತಲೇ ಇದೆ ಎಂಬುದನ್ನು ಹಲವು ವರದಿಗಳು ಬಹಿರಂಗಪಡಿಸಿವೆ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚಿನ ಮೂಲ ಚುನಾವಣಾ ಬಾಂಡ್ಗಳ ದೇಣಿಗೆಯೇ ಆಗಿದೆ ಎಂಬುದು ಚುನಾವಣಾ ಬಾಂಡ್ ಬಗ್ಗೆ ಕೋರ್ಟಿನಲ್ಲಿ ಪ್ರಶ್ನಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಾದ.
ಈಗ ಚುನಾವಣಾ ಬಾಂಡ್ ವ್ಯವಸ್ಥೆಯಿಂದ ಭರ್ಜರಿಯಾಗಿ ಜೇಬು ತುಂಬಿಸಿಕೊಳ್ಳುತ್ತಿರುವುದು ಆಡಳಿತಾರೂಢ ಬಿಜೆಪಿ. ಮಾರ್ಚ್ 2018 ರಿಂದ 2022 ರವರೆಗೆ ಮಾರಾಟವಾದ ಎಲೆಕ್ಟೋರಲ್ ಬಾಂಡ್ ಗಳ ಒಟ್ಟು ಮೊತ್ತ 9,208 ಕೋಟಿ. ಅದರಲ್ಲಿ ಬಿಜೆಪಿಗೆ ಹೋಗಿದ್ದು 5,270 ಕೋಟಿ ರೂಪಾಯಿ. ಅಂದರೆ ಅರ್ಧಕ್ಕಿಂತ ಹೆಚ್ಚನ್ನು ಬಿಜೆಪಿ ಒಂದೇ ಪಕ್ಷ ಬಾಚಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಗೆ ಸಿಕ್ಕಿದ್ದು ಕೇವಲ 964 ಕೋಟಿ ರೂಪಾಯಿ ಅಂದ್ರೆ ಕೇವಲ 10%.
ಆದರೆ ಇಷ್ಟೊಂದು ದೊಡ್ಡ ಮೊತ್ತದ ಹಣದ ಹರಿವಿನ ಮೂಲ ಕೇಳುವಂತಿಲ್ಲ ಎಂಬುದೇ ದೇಶದ ಜನತೆಯನ್ನು ಪೂರ್ತಿ ಕತ್ತಲಲ್ಲಿಡುವ ನೀತಿಯಾಗಲಿದೆ. ದೇಣಿಗೆ ನೀಡುವವರ ಅನಾಮಧೇಯತೆ ವಿಚಾರದಲ್ಲಿ ಮತ್ತೂ ಒಂದು ಅಪಾಯಕಾರಿ ಸಂಗತಿಯಿದೆ. ದೇಣಿಗೆ ಯಾರಿಂದ ಯಾರಿಗೆ ಬಂತೆಂಬುದು ಜನರಿಗೆ ಗೊತ್ತಾಗುವುದಿಲ್ಲ ಅಷ್ಟೆ.
ಆದರೆ, ವಿರೋಧ ಪಕ್ಷಕ್ಕೆ ಯಾರು ಎಷ್ಟು ಕೊಟ್ಟರು ಎಂಬುದನ್ನು ಸರ್ಕಾರ ತಿಳಿದುಕೊಳ್ಳಲು ಅವಕಾಶ ಇದೆ. ಚುನಾವಣಾ ಬಾಂಡ್ ವ್ಯವಸ್ಥೆಯಿಂದ ತಾನು ಜೇಬು ತುಂಬಿಸಿಕೊಳ್ಳುತ್ತಿರುವ ಬಿಜೆಪಿ, ತನ್ನ ವಿರೋಧಿ ಪಕ್ಷಗಳಿಗೆ ಬರುವ ಹಣದ ಮೇಲೆ ಕಣ್ಣಿಡುತ್ತದೆ. ತನ್ನನ್ನು ಮಾತ್ರ ಸಮರ್ಥಿಸಿಕೊಳ್ಳುವ ಸರ್ಕಾರ, ಬೇರೆಯವರ ಮೇಲೆ ಕಣ್ಣಿಡುವ ಈ ಬಗೆಯೇ ಅಪಾಯಕ್ಕೆ ಎಡೆ ಮಾಡಿಕೊಡುವಂಥದ್ದು.
ಚುನಾವಣಾ ಬಾಂಡ್ ಪ್ರಸ್ತಾವನೆ ಹಂತದಲ್ಲಿಯೇ ಅದನ್ನು ಆರ್ಬಿಐ ಮತ್ತು ಚುನಾವಣಾ ಆಯೋಗ ಕೂಡ ವಿರೋಧಿಸಿದ್ದವು. ಅದರ ಅಪಾಯದ ಬಗ್ಗೆ ಎಚ್ಚರಿಸಿದ್ದವು. ದೇಣಿಗೆ ವಿಚಾರದಲ್ಲಿ ಯಾವುದೇ ಪಾರದರ್ಶಕತೆ, ಉತ್ತರದಾಯಿತ್ವ ಇಲ್ಲದಿರುವುದರಿಂದ ದೇಣಿಗೆಯ ಮೂಲವೇ ಗೊತ್ತಾಗುವುದಿಲ್ಲ. ಅದು ಕಪ್ಪುಹಣ ವ್ಯವಹಾರಕ್ಕೆ ಉತ್ತೇಜನ ನೀಡಿದಂತೆ ಎಂಬ ಆಕ್ಷೇಪ ಎದ್ದಿತ್ತು.
ಆದರೆ ಈಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಎದುರು ಸ್ವಚ್ಛ ಹಣ ದೇಣಿಗೆ ನೀಡಲು ಚುನಾವಣಾ ಬಾಂಡ್ ಉತ್ತೇಜಿಸುತ್ತದೆ ಎಂದು ಹೇಳಿದೆ. ತೆರಿಗೆ ನಿಯಮಗಳಿಗೆ ಅನುಗುಣವಾಗಿಯೇ ಇರುತ್ತದೆ ಎಂದಿದೆ. ಗುಟ್ಟಾಗಿ ಕೊಡುವ ಹಣ ಹೇಗೆ ಸ್ವಚ್ಛ ಹಣವಾಗಿರಲಿದೆ ಮತ್ತು ತೆರಿಗೆ ಕರಾರುಗಳಿಗೆ ಬದ್ಧವಾಗಿರಲಿದೆ? ಮತ್ತು ಹೀಗಿರುವಾಗ ರಾಜಕೀಯ ಪಕ್ಷಗಳು ಹಣದ ಮೂಲವನ್ನೇಕೆ ಬಹಿರಂಗಪಡಿಸಕೂಡದು ಎಂಬ ಅನುಮಾನಗಳು ಬಗೆಹರಿಯಬೇಕಿದೆ.
ರಾಜಕೀಯ ಪಕ್ಷಗಳು ಸಂಗ್ರಹಿಸುವ ಒಟ್ಟು ದೇಣಿಗೆಯಲ್ಲಿ ದೊಡ್ಡ ಮೊತ್ತ ಚುನಾವಣಾ ಬಾಂಡ್ಗಳಿಂದಲೇ ಸಂಗ್ರಹವಾಗುತ್ತದೆ. ಮತ್ತು ಆ ಹಣವೇ ಕುದುರೆ ವ್ಯಾಪಾರಕ್ಕೂ ಬಳಕೆಯಾಗುವುದು ಎಂಬ ಆರೋಪಗಳೂ ಇವೆ. ಚುನಾವಣೆಯಲ್ಲಿ ಗೆಲ್ಲಲಾಗದೇ ಹೋದಾಗ, ಗೆದ್ದ ಅನ್ಯಪಕ್ಷಗಳ ಮಂದಿಯನ್ನು ಸೆಳೆಯುವ ಕೆಲಸ ಮಾಡುತ್ತಲೇ ಬಂದಿರುವವರು ಯಾರು ಎಂಬುದೂ ತಿಳಿಯದಿರುವ ವಿಚಾರವೇನಲ್ಲ.
ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ಸಲ್ಲಿಕೆಯಾಗುವ ಹಣ ಮನಿ ಲಾಂಡರಿಂಗ್ಗೆ ಸಮವೆಂದೂ, ಅದು ಕಪ್ಪು ಹಣವನ್ನು ಬಿಳಿಯಾಗಿಸುವ ಸಾಧನವೆಂದೂ ವಾದಗಳಿವೆ. ಹೀಗಿರುವುದರಿಂದಲೇ ಅದರ ಗೌಪ್ಯತೆ ವಿಚಾರದಲ್ಲಿ ಪ್ರಶ್ನೆ ಮೂಡಿರುವುದು.
ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ಇರದಂತೆ ಮಾಡುವ ವ್ಯವಸ್ಥೆ ಇದಾಗಿದೆ ಎಂದು ಚುನಾವಣಾ ಆಯೋಗ ಕೂಡ ಹಿಂದೆ ಹೇಳಿತ್ತು. ಎಲ್ಲ ಹಣವೂ ಆಡಳಿತ ಪಕ್ಷದ ಜೇಬು ಸೇರುವುದಕ್ಕೆ ದಾರಿ ಮಾಡಿಕೊಡುವ, ಚುನಾವಣೆಯಲ್ಲಿ ಪಾರದರ್ಶಕತೆ ಇಲ್ಲವಾಗಿಸುವ, ಪ್ರಜಾತಂತ್ರಕ್ಕೆ ಮಾರಕವಾದ ಯೋಜನೆ ಇದೆಂಬ ವಾದಗಳೊಂದಿಗೆ ಚುನಾವಣಾ ಬಾಂಡ್ ವಿರುದ್ಧದ ಪ್ರಶ್ನೆಗಳು ಸುಪ್ರೀಂ ಕೋರ್ಟ್ ಎದುರು ಇವೆ.
ಆಳುವ ಪಕ್ಷ ಹಣ ಮಾಡಿಕೊಳ್ಳುವ, ಪ್ರಜಾತಂತ್ರವನ್ನು ನರಳುವಂತೆ ಮಾಡುವ ಇಂಥದೊಂದು ವ್ಯವಸ್ಥೆ ಎಂಥ ಅನಾಹುತವನ್ನು ತರಬಲ್ಲದು ಎಂಬುದೇ ಈ ಎಲ್ಲ ಪ್ರಶ್ನೆಗಳ ಹಿಂದಿರುವ ಆತಂಕ ಮತ್ತು ಕಳವಳ. ಬರುವ ಲೋಕಸಭೆ ಚುನಾವಣೆಗಾಗಿ ಚುನಾವಣಾ ಬಾಂಡ್ ಯೋಜನೆ ಆರಂಭವಾಗುವ ಮೊದಲೇ ವಿಚಾರಣೆ ನಡೆಸಬೇಕೆಂಬ ಅರ್ಜಿದಾರರ ಮನವಿಯನ್ನು ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಈಗ ವಿಚಾರಣೆ ಕೈಗೆತ್ತಿಕೊಂಡಿದೆ. ಎಜಿ ಎತ್ತಿರುವ ಕೆಲವು ವಿಚಾರಗಳನ್ನು ನೋಡಿದರೆ, ಸಂಸತ್ತು ಮತ್ತು ನ್ಯಾಯಾಂಗದ ನಡುವಿನ ಸಂಘರ್ಷಕ್ಕೂ ಮತ್ತೊಮ್ಮೆ ಎಡೆಯಾಗುವ ಸಾಧ್ಯತೆಗಳೂ ಇವೆಯೆ ಎಂಬ ಪ್ರಶ್ನೆಯೂ ಮೂಡುತ್ತದೆ.







