ವಿಪಕ್ಷ ನಾಯಕ ಅಶೋಕ್ ಗೆ ಬಿಜೆಪಿ ಶಾಸಕರಿಂದಲೇ ಬೈಗುಳ !
ರಣಬೀರ್ ಕಪೂರ್ ಅಭಿನಯದ ಹೊಸ ಸಿನಿಮಾ ಅನಿಮಲ್ ಭಾರೀ ಸುದ್ದಿಯಲ್ಲಿದೆ, ವಿವಾದಕ್ಕೆ ತುತ್ತಾಗಿದೆ. ಅದರ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಬಗ್ಗೆಯೂ ಟೀಕೆಗಳು ವ್ಯಕ್ತವಾಗುತ್ತಿವೆ. ಇದಕ್ಕಿಂತ ಹೆಚ್ಚಾಗಿ ರಾಜ್ಯಸಭೆಯಲ್ಲೂ ಈ ಚಿತ್ರದ ಪ್ರಸ್ತಾಪವಾಗಿದ್ದು, ಕಾಂಗ್ರೆಸ್ನ ರಾಜ್ಯಸಭಾ ಸದಸ್ಯೆ ರಂಜೀತ್ ರಂಜನ್ ಚಿತ್ರದಲ್ಲಿನ ಹಿಂಸೆಯನ್ನು ಖಂಡಿಸಿ ಮಾತನಾಡಿದ್ದಾರೆ.
"ಅನಿಮಲ್ ಚಿತ್ರದಲ್ಲಿ ಹಿಂಸೆಯನ್ನು ವೈಭವೀಕರಿಸಿದ್ದಾರೆ, ಸ್ತ್ರೀ ದ್ವೇಷ ತೋರಿಸಿದ್ದಾರೆ. ಸಮಾಜದ ಪಾಲಿಗೆ ಕಾಯಿಲೆಯಂತಹ ಈ ಸಿನಿಮಾವನ್ನು ಸೆನ್ಸರ್ ಬೋರ್ಡ್ ಹೇಗೆ ಪಾಸ್ ಮಾಡಿತು" ಎಂದು ರಂಜೀತ್ ಖಾರವಾಗಿಯೇ ಕೇಳಿದ್ದಾರೆ.
"ನನ್ನ ಮಗಳು ಹಾಗು ಆಕೆಯ ಸಹಪಾಠಿಗಳು ಸಿನಿಮಾಕ್ಕೆ ಹೋಗಿ ಅದನ್ನು ನೋಡಲಾಗದೆ ಅರ್ಧದಲ್ಲೇ ಅಳುತ್ತಾ ವಾಪಸ್ ಬಂದಿದ್ದಾರೆ. ಕಬೀರ್, ಪುಷ್ಪ, ಅನಿಮಲ್ ನಂತಹ ಚಿತ್ರಗಳು ಹಿಂಸೆಯನ್ನು ವೈಭವೀಕರಿಸುತ್ತಿವೆ, ಮಹಿಳೆಯರ ಬಗ್ಗೆ ದ್ವೇಷ ಹರಡುತ್ತಿವೆ" ಎಂದು ರಂಜೀತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಖ್ ಇತಿಹಾಸದಲ್ಲಿರುವ ಪ್ರಮುಖ ಮಿಲಿಟರಿ ಕಮಾಂಡರ್ ನ ಪುತ್ರ ವೈಲಿ ಹೆಸರಿನ ಅರ್ಜನ್ ವೈಲಿ ಹಾಡನ್ನು ಈ ಸಿನಿಮಾ ಬಳಸಿಕೊಂಡಿದ್ದಕ್ಕೂ ರಂಜಿತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೆಲ್ಲದರ ನಡುವೆಯೇ, ಐದೇ ದಿನಗಳಲ್ಲಿ ಚಿತ್ರ 425 ಕೋಟಿ ಮೀರಿ ಗಳಿಕೆ ಮಾಡಿರುವುದರ ಸುದ್ದಿಯೂ ಮತ್ತೊಂದೆಡೆಗಿದೆ. ಯುವಕರೆಲ್ಲ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆಂಬ ವಾಸ್ತವವೂ ನಮ್ಮೆದುರಿಗೇ ಇದೆ. ಹೆಸರೇ ಅನಿಮಲ್ ಎಂದಿರುವಾಗ, ಚಿತ್ರ ಮೃಗೀಯವಾಗಿದೆ ಎಂದು ಹೇಳುವುದೇ ವಿಚಿತ್ರ.
ಒಂದೆಡೆ ಗಂಡು ಅಹಮಿಕೆ, ಇನ್ನೊಂದೆಡೆ ಜನಾಂಗೀಯ ದ್ವೇಷ ಇವೆಲ್ಲವನ್ನೂ ತುಂಬಿಕೊಂಡಿರೋ ಈ ಸಿನಿಮಾ ಅಸಹಿಷ್ಣುತೆಯನ್ನು ಹಲವಾರು ನೆಲೆಗಳಲ್ಲಿ ವ್ಯಕ್ತಪಡಿಸುತ್ತದೆ ಮತ್ತು ಆ ಮೂಲಕ ಹಿಂಸೆಯೊಂದಿಗೇ ವಿಜೃಂಭಿಸುತ್ತದೆ ಎಂದು ವಿಮರ್ಶಿಸಲಾಗಿದೆ. ಫ್ಯೂಡಲ್ ಮನಃಸ್ಥಿತಿಯವರಿಗೆ ಈ ಚಿತ್ರದಲ್ಲಿನ ಹಲವಾರು ಅಂಶಗಳು ಇಷ್ಟವಾಗಲೂ ಬಹುದು ಎಂದು ವಿಮರ್ಶೆಗಳಿರುವುದು ಒಂದೆಡೆಯಾದರೆ, ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತಾನು ಹೇಳಬೇಕಾದ್ದನ್ನು ಮಾತ್ರ ಹೇಳುವ ಜಾಯಮಾನದ, ಸಂವಾದದಲ್ಲಿ ಆಸಕ್ತಿ ಇಲ್ಲದ ಮನುಷ್ಯ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಜಾತಿ ವ್ಯವಸ್ಥೆ ಹಿಂದೆ ವೈಜ್ಞಾನಿಕ ತಾರ್ಕಿಕತೆ ಇದೆ, ಇಂಡಿಯಾ ಶೈನಿಂಗ್ ಅನ್ನೋದು ನಿಜವಾಗಬೇಕೆಂದರೆ ಸರ್ವಾಧಿಕಾರಿಯೇ ಬೇಕು ಎಂದೆಲ್ಲ ಪ್ರಚೋದನಾಕಾರಿಯಾಗಿ ಮಾತನಾಡೋಕ್ಕೆ ಆತ ಹಿಂಜರಿಯುವುದಿಲ್ಲ. ತಾನು ಹೇಳುವುದೆಲ್ಲವನ್ನೂ ಆತನೇ ನಂಬುತ್ತಾನೊ ಇಲ್ಲವೊ ಎಂಬುದು ಮುಖ್ಯವಲ್ಲ. ಆದರೆ ಆತ ಬೇರೆಯವರು ತನ್ನನ್ನು ಗಮನಿಸಬೇಕೆಂದು ಬಯಸೋದು ನಿಜ ಎಂದು ತತ್ಸಮ್ ಮುಖರ್ಜಿ ಬರೆಯುತ್ತಾರೆ.
ಅನಿಮಲ್ ಸಿನಿಮಾದಲ್ಲಿರುವ ಹೀರೋಗಿರಿ, ಹಿಂಸೆ, ಸ್ತ್ರೀದ್ವೇಷದ ಎಳೆಗಳು ಕೂಡ ಇದೇ ಬಗೆಯವು ಎಂಬುದನ್ನು ವಿಮರ್ಶೆಗಳು ಸೂಚಿಸುತ್ತವೆ. ಅಂದಹಾಗೆ ಹಿಂದಿಯಲ್ಲಿ ವಂಗ ಎರಡನೇ ಸಿನಿಮಾ ಇದು. ಈ ಮೊದಲು ತನ್ನ ನಿರ್ದೇಶನದ ತೆಲುಗು ಸಿನಿಮಾ ಅರ್ಜುನ್ ರೆಡ್ಡಿಯನ್ನು ಕಬೀರ್ ಸಿಂಗ್ ಎಂಬ ಹೆಸರಲ್ಲಿ ಹಿಂದಿಗೆ ರೀಮೇಕ್ ಮಾಡಿದ್ದರು.
2019ರಲ್ಲಿ ಬಂದ ಈ ರೀಮೇಕ್ ಬಗ್ಗೆಯೂ ತೀವ್ರ ಆಕ್ಷೇಪಗಳು ಬಂದಿದ್ದವು. ಆ ಚಿತ್ರದಲ್ಲಿ ಕೂಡ ಕ್ರೌರ್ಯ, ಸ್ತ್ರೀ ದ್ವೇಷದ್ದೇ ವೈಭವೀಕರಣ ಇತ್ತು. ಆ ದಾರಿಯಲ್ಲೇ ವಂಗ ಮುಂದುವರಿದಿರೋದಕ್ಕೆ ಅನಿಮಲ್ ಸಾಕ್ಷಿ ಎನ್ನಲಾಗ್ತಿದೆ. ಏಕೆ ಸಿನಿಮಾಗಳು ಇಷ್ಟೊಂದು ಹಿಂಸೆಯನ್ನು ಪ್ರೇಕ್ಷಕರ ಎದುರು ತೋರಿಸಲು ಬಯಸುತ್ತವೆ? ಹಿಂಸೆ ಕಲಾತ್ಮಕತೆಯ ಭಾಗವಾಗಿ, ದುರಾಸೆ, ದುಃಖ, ಭಯದ ಕಥೆಯಾಗಿ ಚಿತ್ರಿತವಾಗುವುದಕ್ಕೂ, ವಂಗ ಥರದವರ ಕೈಯಲ್ಲಿ ಬರೀ ಅತಾರ್ಕಿಕ ನೆತ್ತರೋಕುಳಿಯಾಗುವುದಕ್ಕೂ ಇರೋ ವ್ಯತ್ಯಾಸಗಳೇನು?
ಅನಿಮಲ್ ಚಿತ್ರದಲ್ಲಿನ ಅತಿರೇಕದ ಹಿಂಸೆ ವಿವಾದಕ್ಕೊಳಗಾಗಿರೋ ಹೊತ್ತಲ್ಲಿಯೇ ನಟ, ನಿರ್ದೇಶಕ ಆಮಿರ್ ಖಾನ್ ಅವರ ವೀಡಿಯೊ ಒಂದು ಸುದ್ದಿಯಲ್ಲಿದೆ. ಪ್ರತಿಭೆ ಇಲ್ಲದವರು ಹಿಂಸೆಯನ್ನು ತೋರಿಸಿ ಗೆಲ್ಲೋಕೆ ನೋಡ್ತಾರೆ ಅನ್ನೋ ಆ ವೀಡಿಯೊ ವೈರಲ್ ಆಗಿದೆ.
ಆಮೀರ್ ಖಾನ್ ಹೇಳಿರೋ ಕೆಲವು ಮಾತುಗಳು ಹೀಗಿವೆ:
ಕೆಲವು ಭಾವನೆಗಳನ್ನ ಪ್ರೇಕ್ಷಕರಲ್ಲಿ ಪ್ರಚೋದಿಸುವುದು ತುಂಬಾ ಸುಲಭ. ಅಂಥವುಗಳಲ್ಲಿ ಒಂದು ಹಿಂಸೆ, ಇನ್ನೊಂದು ಲೈಂಗಿಕತೆ.
ಈ ಎರಡು ಭಾವನೆಗಳನ್ನು ಮನುಷ್ಯನಲ್ಲಿ ಕೆರಳಿಸುವುದು ಅತ್ಯಂತ ಸುಲಭ.
ಕಥೆ ರಚಿಸುವಲ್ಲಿ ಮತ್ತು ಭಾವನೆಗಳನ್ನು ತೋರಿಸುವಲ್ಲಿ ಮತ್ತು ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ಪ್ರತಿಭೆ ಇಲ್ಲದ ನಿರ್ದೇಶಕರು ಹಿಂಸೆ ಮತ್ತು ಲೈಂಗಿಕತೆ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ. ಚಿತ್ರದಲ್ಲಿ ಸಾಕಷ್ಟು ಹಿಂಸೆ ಮತ್ತು ಲೈಂಗಿಕತೆಯನ್ನು ತೋರಿಸಿದರೆ ಸಿನಿಮಾ ಗೆಲ್ಲಬಹುದು ಅನ್ನೋದು ಅವರ ಭಾವನೆಯಾಗಿರುತ್ತದೆ. ಆದರೆ ಇದು ತುಂಬಾ ತಪ್ಪು ಆಲೋಚನೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಕೆಲವೊಮ್ಮೆ ಯಶಸ್ಸು ಸಿಗಲೂ ಬಹುದು. ಆದರೆ ಇದು ಸಮಾಜಕ್ಕೆ ತುಂಬಾ ಹಾನಿಕರ. ಇದು ತಪ್ಪು ಕೆಲಸ ಎಂದಿದ್ದಾರೆ ಆಮಿರ್.
ಆದರೆ ಸ್ವತಃ ಆಮಿರ್ ಖಾನ್ ಈ ಹಿಂದೆ ಘಜನಿಯಂತಹ ಚಿತ್ರ ಮಾಡಿ ಸೂಪರ್ ಹಿಟ್ ಟ್ರ್ಯಾಕ್ ಗೆ ಮರಳಿದವರು ಎಂಬುದನ್ನೂ ನಾವು ಗಮನಿಸಬೇಕು. ಹೀಗಿರುವಾಗಲೇ, ಕೆಟ್ಟದ್ದಾಗಿರುವ, ಗೊಂದಲಮಯವಾಗಿರುವ, ಹಿಂಸಾತ್ಮಕವಾಗಿರುವ, ಸ್ತ್ರೀದ್ವೇಷವನ್ನು ಕಾರುವ ಸಿನಿಮಾ ಇದೆಂದು ಹೇಳುತ್ತಲೇ, ಹಾಗಿದ್ದೂ ಮನರಂಜನೆ ನೀಡುತ್ತದೆ ಎಂಬ ವಿಮರ್ಶೆಯನ್ನೂ ಮಾಧ್ಯಮವೊಂದು ಬರೆದಿದೆ. ಇದು ಯಾವ ಮನಃಸ್ಥಿತಿ ಎಂದೂ ಕೇಳಬೇಕಾಗುತ್ತದೆ.
ಚಿತ್ರ ಸಂಪೂರ್ಣ ಮಾಸ್ ಆಗಿದೆ, ರಂಜಿಸುತ್ತದೆ, ಅತ್ಯಂತ ಹಿಂಸಾತ್ಮಕ ಥ್ರಿಲ್ಲರ್ ಆಗಿದೆ. ಗಟ್ಟಿ ಗುಂಡಿಗೆಯಿಲ್ಲದಿರೋರು ಈ ಸಿನಿಮಾ ನೋಡಬೇಕು ಎಂದುಕೊಂಡರೆ, ಅರಗಿಸಿಕೊಳ್ಳಲು ಆಗದಷ್ಟಿರೋ ಹಿಂಸೆಯನ್ನು ನೋಡಲು ಮನಸ್ಸನ್ನು ತಯಾರು ಮಾಡಿಕೊಳ್ಳಿ ಎನ್ನುವ ವಿಮರ್ಶೆಯ ಉದ್ದೇಶವೇನಿರಲು ಸಾಧ್ಯ?. ಹಾಗೆ ನೋಡಿದರೆ ಈಗ ಸೂಪರ್ ಡೂಪರ್ ಹಿಟ್ ಆಗುತ್ತಿರುವ ಚಿತ್ರಗಳನ್ನು ಒಮ್ಮೆ ಗಮನಿಸಿ ನೋಡಿ. ಪುಷ್ಪ, ಕೆ ಜಿ ಎಫ್ , ಜವಾನ್ - ಈ ಎಲ್ಲ ಚಿತ್ರಗಳಲ್ಲೂ ಹಿಂಸೆಯೇ ಆವರಿಸಿಕೊಂಡಿದೆ. ಅಲ್ಲಿ ಹೀರೊ ವಿಲನ್ ಗಿಂತ ಹೆಚ್ಚು ಹಿಂಸೆ ಎಸಗುವವನು. ಹಿಂಸೆಯ ಮೂಲಕವೇ ವಿಲನ್ ನನ್ನು ಸೋಲಿಸುವವನು.
ಈಗ ಹೀರೊಗಿಂತ ಹೆಚ್ಚು anti ಹಿರೋಗಳೇ ಮಿಂಚುತ್ತಿರುವ ಕಾಲ. ನಿರ್ದೇಶಕ ಸಂದೀಪ್ ರೆಡ್ಡಿ ಸಂದರ್ಶನವೊಂದರಲ್ಲಿ " ಅನಿಮಲ್' ವೈಲೆಂಟ್ ಸಿನಿಮಾ ಅಂತ ಹೇಳ್ತಾ ಇರೋರಿಗೆ ನಿಜವಾದ ವೈಲೆಂಟ್ ಸಿನಿಮಾ ಹೇಗಿರುತ್ತೆ ಅಂತ ನಾನು ತೋರಿಸ್ತೀನಿ. ಮುಂದೆ ಅಂತದ್ದು ಮಾಡ್ತೀನಿ" ಅಂತ ಹೇಳಿದ್ದೂ ವರದಿಯಾಗಿದೆ.
ಹೀಗೆ ಅನಿಮಲ್ ಬಗ್ಗೆ ಎದ್ದಿರುವ ಆಕ್ಷೇಪ, ಅಸಮಾಧಾನ, ಒಂದಿಷ್ಟು ಸಮರ್ಥನೆ ಇತ್ಯಾದಿ ಇತ್ಯಾದಿಗಳ ನಡುವೆಯೇ ಕೇಳಲೇಬೇಕಾದ ಹಲವು ಪ್ರಶ್ನೆಗಳೂ ಇವೆ. ನಾವು ಒಂದು ಸಮಾಜವಾಗಿ ಎಷ್ಟು ಹಿಂಸಾತ್ಮಕವಾಗಿಬಿಟ್ಟಿದ್ದೇವೆ ? ನಮ್ಮ ನಡುವೆಯೇ ಅತ್ಯಂತ ಅಮಾನುಷ ಹಿಂಸೆಗಳು, ಕೊಲೆಗಳು, ವಿಕೃತಿಗಳು ಹೆಚ್ಚುತ್ತಿರೋದು ಏಕೆ ?
ಐದು ಹತ್ತು ರೂಪಾಯಿಗಾಗಿ ಮನುಷ್ಯನನ್ನು ಕೊಂದೇ ಬಿಡುವ, ಪುಟ್ಟ ಹಸುಳೆಯನ್ನೂ ಅತ್ಯಾಚಾರ ಮಾಡುವ , ಅಮಾಯಕರನ್ನು ಕತ್ತು ಸೀಳಿ ಕೊಲ್ಲುವ ಘಟನೆಗಳು ಪ್ರತಿದಿನವೆಂಬಂತೆ ನಡೆಯುತ್ತಿರೋದು ಹೇಗೆ ?. ಇದರಲ್ಲಿ ಸಿನಿಮಾದ ಪಾತ್ರ ಇಲ್ಲವೇ? ದಿನದಿಂದ ದಿನಕ್ಕೆ ಸಿನಿಮಾಗಳಲ್ಲಿ, ವೆಬ್ ಸೀರಿಸ್ ಗಳಲ್ಲಿ ಇದು ತೀವ್ರವಾಗಿ ಹೆಚ್ಚುತ್ತಲೇ ಇರೋದು ಹೇಗೆ ?.
ನಮ್ಮನ್ನು ಖುಷಿಪಡಿಸಲು, ತೃಪ್ತಿಪಡಿಸಲು ಇನ್ನಷ್ಟು ಮತ್ತಷ್ಟು ಮಗದಷ್ಟು ಹಿಂಸೆ, ವಿಕೃತಿ, ಇನ್ನಷ್ಟು ಅಶ್ಲೀಲತೆ ಬೇಕು ಎಂದು ನಿರ್ದೇಶಕರಿಗೆ ಅನಿಸುವುದು ಹೇಗೆ ?. ಸಮಾಜದಲ್ಲಿನ ಇಂಥ ಹಿಂಸಾತ್ಮಕ ಪ್ರವೃತ್ತಿಗೆ ಸಿನಿಮಾ ಮಾತ್ರ ಕಾರಣವೆ ? ಹಾಗೇ ನಮ್ಮ ರಾಜಕಾರಣದ ಪಾತ್ರ ಇದರಲ್ಲಿ ಇಲ್ವಾ ?.
ಸಿನಿಮಾ ಅತ್ಯಂತ ಪ್ರಭಾವೀ ಮಾಧ್ಯಮ ಅನ್ನೋದು ಸರಿ. ರಾಜಕಾರಣವೂ ಅದಕ್ಕಿಂತ ಪ್ರಭಾವೀ ಅಲ್ಲವೇ?. ಸಿನಿಮಾ ಅತ್ಯಂತ ಅಮಾನುಷವಾಗಿದೆ, ಸ್ತ್ರೀ ದ್ವೇಷಿಯಾಗಿದೆ, ಚಿತ್ರದಲ್ಲಿ ಸಮಸ್ಯೆಯಿದೆ, ಆದರೂ ಮನರಂಜನೆ ನೀಡುತ್ತದೆ ಎಂದು ವಿಮರ್ಶೆ ಬರೆಯುವ ಹಿಂದಿನ ರಾಜಕಾರಣ ಏನು? . ಹಾಗೆ ಬರೆಯುವಂತಾಗಲು ನಮ್ಮ ಸಮಾಜ, ನಮ್ಮ ರಾಜಕಾರಣವೂ ಕಾರಣವಲ್ಲವೇ?.
ಕೇವಲ ಒಬ್ಬನ ಧರ್ಮದ ಕಾರಣಕ್ಕೆ, ಗಡ್ಡದ ಕಾರಣಕ್ಕೆ, ಟೋಪಿಯ ಕಾರಣಕ್ಕೆ, ಆಹಾರದ ಕಾರಣಕ್ಕೆ ಇಲ್ಲಿ ಗುಂಪು ಹಲ್ಲೆ, ಕೊಲೆ, ಅತ್ಯಾಚಾರ ಆಗುತ್ತಿರೋದು ಹೇಗೆ?. ಸಿನಿಮಾ, ವೆಬ್ ಸಿರೀಸ್ ಗಳು ಖಂಡಿತ ಕೆಟ್ಟ ಪರಿಣಾಮ ಬೀರುತ್ತವೆ. ಆದರೆ ಅವುಗಳ ಬಗ್ಗೆ ವ್ಯಕ್ತವಾಗುವಷ್ಟೇ ಕಾಳಜಿ, ಖಂಡನೆ ನಮ್ಮ ಕೋಮುವಾದಿ, ಪ್ರಚೋದನಕಾರಿ ಹಾಗು ಹಿಂಸಾತ್ಮಕ ರಾಜಕಾರಣದ ಬಗ್ಗೆ ಯಾಕೆ ವ್ಯಕ್ತವಾಗುತ್ತಿಲ್ಲ?. ನಿಜಜೀವನದಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ರಾಜಕಾರಣಿಗಳು, ಕಾವಿಧಾರಿಗಳ ವಿಷಯವಾಗಿ ಏಕೆ ಇದೇ ಥರದ ತಕರಾರುಗಳು ಏಳುವುದಿಲ್ಲ? ಅವರನ್ನೇಕೆ ಯಾರೂ ಪ್ರಶ್ನೆ ಮಾಡುವುದಿಲ್ಲ?
ಇಲ್ಲಿ ದೇಶದ ಹೆಸರಲ್ಲಿ, ಧರ್ಮದ ಹೆಸ್ರಲ್ಲಿ, ಗೋವಿನ ಹೆಸರಲ್ಲಿ ಅದೆಷ್ಟೇ ಹಿಂಸೆಗೆ ಪ್ರಚೋದಿಸಲಾಗುತ್ತಿಲ್ಲ ?. ಹಾಗೆ ಹಿಂಸೆಗೆ ಪ್ರಚೋದಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗೋದಿಲ್ಲ ಯಾಕೆ ?. ಆ ರೀತಿ ಹಾದಿ ಬೀದಿಯಲ್ಲಿ ನಿಂತು ಹಿಂಸೆಗೆ, ದ್ವೇಷಕ್ಕೆ ಪ್ರಚೋದನೆ ನೀಡುವವರೇ ಇಲ್ಲಿ ಎಮ್ಮೆಲ್ಲೆ, ಎಂಪಿಗಳಾಗುತ್ತಿರೋದು ಹೇಗೆ ?. ಮತ್ತೆ ಅವರೇ ಸಚಿವರೂ, ಮುಖ್ಯಮಂತ್ರಿಗಳೂ ಆಗುತ್ತಿರುವ ಬಗ್ಗೆ ಯಾರಿಗೂ ಯಾವುದೇ ರೀತಿಯ ಆತಂಕ ಇಲ್ಲ ಯಾಕೆ ?.
ಇದು ಕಳವಳಕಾರಿ ಅಲ್ಲವೇ?. ನಾವು ಇವತ್ತು ರಾಜಕಾರಣದಲ್ಲಿ ನೋಡುತ್ತಿರೋದು ಕೂಡ ಇಂಥದೇ ದ್ವೇಷದ, ವಿಭಜನೆಯ, ಪ್ರಚೋದನೆಯ ಮನಃಸ್ಥಿತಿಯನ್ನೇ ಅಲ್ಲವೆ?. ಇಲ್ಲಿ ನ್ಯಾಯಕ್ಕಾಗಿ ಪ್ರತಿಭಟಿಸುವವರನ್ನು ಇಲ್ಲಿನ ರಾಜಕಾರಣ ಭಯೋತ್ಪಾದಕರು ಎಂದು ಹಣೆಪಟ್ಟಿ ಹಚ್ಚುತ್ತದೆ. ಆದರೆ ಹಿಂಸೆಗೆ ಪ್ರಚೋದನೆ ಕೊಡುವವನಿಗೆ ಅದೇ ರಾಜಕಾರಣ ಟಿಕೇಟು ಕೊಡುತ್ತದೆ.
ಇನ್ನೊಂದು ಸಮುದಾಯವನ್ನು ಸಹಿಸಲಾರದ, ಅವರನ್ನು ತಮ್ಮವರೆಂದು ಕಾಣಲಾರದ ಈ ಜನ ಗುಂಡಿಟ್ಟು ಕೊಲ್ಲಿ ಎಂದು ಹೇಳಿ ಚಪ್ಪಾಳೆಯನ್ನೂ, ವೋಟನ್ನೂ, ಅಧಿಕಾರವನ್ನೂ ಗಿಟ್ಟಿಸಿಕೊಳ್ಳುತ್ತಾರೆ. ದೇಶದ ರಾಜಧಾನಿಯಲ್ಲಿಯೇ ನಿಂತು ಕಾವಿಧಾರಿಗಳು ಮನೆಮನೆಯಲ್ಲೂ ಬಂದೂಕು, ಕತ್ತಿ ಇಟ್ಟುಕೊಳ್ಳಿ, ನಡುಬೀದಿಯಲ್ಲಿಯೇ ಕತ್ತರಿಸಿಹಾಕಿ ಎಂದು ಅಲ್ಪಸಂಖ್ಯಾತರ ವಿರುದ್ಧ ಜನರನ್ನು ಎತ್ತಿಕಟ್ಟುತ್ತಾರೆ.
ಇದೆಲ್ಲವನ್ನೂ ತನ್ನ ಒಡಲೊಳಗೇ ಇಟ್ಟುಕೊಂಡು ಹೆಜ್ಜೆ ಹೆಜ್ಜೆಗೂ ಹಿಂಸೆಯನ್ನು ಪ್ರಚೋದಿಸುವ, ದ್ವೇಷವನ್ನು ಹರಡುವ ಈ ದೇಶದ ರಾಜಕಾರಣ ಯಾವ ಹಿಂಸಾತ್ಮಕ ಕಮರ್ಷಿಯಲ್ ಸಿನಿಮಾಕ್ಕಿಂತ ಕಡಿಮೆ? ಯಾವ ಅಪಾಯಕಾರಿ ಅನಿಮಲ್ ಗಿಂತ ಕಡಿಮೆ?. ಒಂದು ಸಮುದಾಯದ ಬಗ್ಗೆ ಅಪಪ್ರಚಾರವನ್ನು ತುಂಬಿಕೊಂಡ, ಹಸಿ ಹಸಿ ಸುಳ್ಳು ಹೇಳುವ, ದ್ವೇಷ ಹೊತ್ತಿ ಉರಿಯುವಂತೆ ಮಾಡುವಷ್ಟು ಪ್ರಚೋದನಕಾರಿಯಾದ ಸಿನಿಮಾ ಪ್ರಮೋಷನ್ ಗೆ ಇಡೀ ಸರ್ಕಾರವೇ ದೇಶದ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಿಲ್ಲುವ ಕಾಲದಲ್ಲಿ ಯಾರಿಗೂ ಹಿಂಸೆಯ, ದ್ವೇಷದ ಆ ರಾಜಕಾರಣ ಅರ್ಥವಾಗುವುದಿಲ್ಲವೆ?.
ಸಮಾಜದಲ್ಲಿ ವಿಭಜನೆಗೆ , ಹಿಂಸೆಗೆ ಪ್ರಚೋದಿಸುವ , ದ್ವೇಷ ಹರಡುವ ಕೆಲಸ ಬಿಟ್ಟು ಬೇರೇನನ್ನೂ ಮಾಡದ ಇಂತಹ ಅದೆಷ್ಟು ಚಿತ್ರಗಳನ್ನು ಈ ದೇಶದ ಸರಕಾರ ನಡೆಸುವವರೇ ಮುಂದೆ ನಿಂತು ಪ್ರೋತ್ಸಾಹಿಸಲಿಲ್ಲ ? ಅದರ ಪರವಾಗಿ ಭರ್ಜರಿ ಪ್ರಚಾರ ಮಾಡಲಿಲ್ಲವೇ ? ಅದಕ್ಕೆ ಸಬ್ಸಿಡಿ, ತೆರಿಗೆ ವಿನಾಯಿತಿ ಇತ್ಯಾದಿ ಕೊಟ್ಟು ಬೆಂಬಲಿಸಲಿಲ್ಲವೇ ?.
ಅಂಥ ಅತಿ ಭಯಾನಕ ಹಿಂಸಾತ್ಮಕ ಅಸ್ತ್ರದ ಬಗ್ಗೆ ಮಾತಾಡಲು ಯಾರೂ ಏಕೆ ನಿಲ್ಲುವುದಿಲ್ಲ?. ಅನಿಮಲ್ ಚಿತ್ರ ಹಿಂಸೆಯನ್ನು ವೈಭವೀಕರಿಸುತ್ತದೆ ಎಂಬುದನ್ನು ಆ ಸಿನಿಮಾದ ಹೆಸರು, ಪೋಸ್ಟರ್ , ಟ್ರೇಲರ್ ಎಲ್ಲವೂ ಸಾರಿ ಸಾರಿ ಹೇಳುತ್ತದೆ. ಅದೆಲ್ಲೂ ನಮ್ಮ ಚಿತ್ರ ದೇಶ ಪ್ರೇಮ ಸಾರುತ್ತದೆ, ದೇಶದ ಜನರಿಗೆ ಆಗಿರುವ ಅನ್ಯಾಯವನ್ನು ತೋರಿಸುತ್ತದೆ, ಸತ್ಯ ಹೇಳುತ್ತದೆ, ಸಂದೇಶ ಸಾರುತ್ತದೆ ಎಂದು ಪ್ರಚಾರ ಮಾಡುತ್ತಿಲ್ಲ.
ನಮ್ಮ ಚಿತ್ರವೇ ಹೀಗೆ. ನಾವು ಮಾಡಿದ್ದೇ ಮನರಂಜನೆಗಾಗಿ. ಇನ್ನು ಮುಂದೆ ಇನ್ನಷ್ಟು ಹಿಂಸಾತ್ಮಕ ಚಿತ್ರ ಮಾಡುತ್ತೇವೆ. ಬೇಕಿದ್ದವರು ಬಂದು ನೋಡಿ ಎಂದೇ ಆ ಸಿನಿಮಾದವರು ಹೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಅವರು ಪ್ರಾಮಾಣಿಕತೆ ಪ್ರದರ್ಶಿಸಿದ್ದಾರೆ. ಆದರೆ ದೇಶ ಪ್ರೇಮದ ಹೆಸರಲ್ಲಿ, ನ್ಯಾಯದ ಹೆಸರಲ್ಲಿ, ಸಂದೇಶದ ಹೆಸರಲ್ಲಿ ತೀರಾ ಕೆಟ್ಟ, ಹಸಿ ಸುಳ್ಳುಗಳ ಸಿನಿಮಾ ಮಾಡಿ ಈ ದೇಶದ ಜನರ ಮನಸ್ಸಲ್ಲಿ ವಿಷ ತುಂಬಿದರಲ್ಲಾ ... ಆ ಬಗ್ಗೆ ಯಾಕೆ ಯಾರೂ ಮಾತಾಡ್ತಾ ಇಲ್ಲ.
ತೆರೆಯ ಮೇಲೆ ಒಂದು ಅನಿಮಲ್ ಓಡುತ್ತಿರಬಹುದು. ಆದರೆ ಇಂಥ ಎಷ್ಟೊಂದು ಅನಿಮಲ್ ಗಳು ನಿಜ ಜೀವನದಲ್ಲಿಯೇ ಅದೆಷ್ಟು ಬದುಕುಗಳನ್ನು ಕಸಿದು, ಅದೆಷ್ಟೋ ಜೀವಗಳ ಬಲಿ ಪಡೆದು, ಅದೇ ಹೆಣಗಳ ರಾಶಿಯ ಮೇಲೆ, ಅದೇ ನೆತ್ತರ ಕಾಲುವೆಯಲ್ಲಿ ಪಾದ ಅದ್ದಿಸಿಕೊಂಡು ರಾಜಕಾರಣ ಮಾಡುತ್ತಿಲ್ಲ?.
ಅನಿಮಲ್ ಸಿನಿಮಾದ ಸೈಕೋಪಾಥಿಕ್ ಮನಃಸ್ಥಿತಿಯ ಬಗ್ಗೆ ಖಂಡಿತವಾಗಿಯೂ ಕಟುವಾಗಿಯೇ ಮಾತನಾಡಬೇಕು . ಆದರೆ ಅದೇ ಹೊತ್ತಲ್ಲಿ ಈ ಸಮಾಜವನ್ನು ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಒಡೆದು ಒಡೆದು ಹಾಕುತ್ತಿರುವ, ದ್ವೇಷದ ಬೆಂಕಿ ಹೊತ್ತಿಸಿ, ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡು ಬೆಚ್ಚಗಿರುವ ಈ ದೇಶದ ರಾಜಕಾರಣದ ಹಿಂಸಾತ್ಮಕ ಮನಃಸ್ಥಿತಿಯ ಬಗ್ಗೆಯೂ ಪ್ರಶ್ನಿಸುವುದು ಮತ್ತು ಎಚ್ಚರಾಗಿರುವುದು ಅಗತ್ಯ. ಅಲ್ಲವೆ?.







