ಸಂವಿಧಾನ ಅಭಿಯಾನಕ್ಕೆ ಬೆಚ್ಚಿದ ಮೋದಿ ಸರಕಾರ | 'ಸಂವಿಧಾನ್ ಹತ್ಯಾ ದಿವಸ್' ಘೋಷಣೆ!
ಸಂಸತ್ತು ಪ್ರವೇಶಿಸುವಾಗ ಸಂವಿಧಾನದ ಪ್ರತಿಗೆ ಬಾಗಿದವರಿಂದಲೇ ಸಂವಿಧಾನ ವಿರೋಧಿ ನಡೆ

PC : PTI
ಜೂನ್ 25ನ್ನು 'ಸಂವಿಧಾನ ಹತ್ಯಾ ದಿವಸ್' ಎಂದು ಆಚರಿಸಲು ಮೋದಿ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶಕ್ಕೆ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿವೆ ಎಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅದೇ ದಿನವನ್ನು ಈಗ ಮೋದಿ ಸರಕಾರ ಸಂವಿಧಾನ ಹತ್ಯಾ ದಿವಸ್ ಎಂದು ಘೋಷಿಸಿದೆ.
ಒಂದು ಕಡೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಸುತ್ತಾಡುತ್ತಾ ಜನರ ಜೊತೆ ಬೆರೆಯುತ್ತಾ ದಿನದಿಂದ ದಿನಕ್ಕೆ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ವಿಪಕ್ಷ ಇಂಡಿಯಾ ಒಕ್ಕೂಟದ ಸಂವಿಧಾನ ಉಳಿಸಿ ಅಭಿಯಾನ ಹಾಗು ಸಂಸತ್ತಿನಲ್ಲಿ ಸಂವಿಧಾನದ ಪ್ರತಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕಾರ ಮೋದಿ ಸರಕಾರಕ್ಕೆ ಇನ್ನಷ್ಟು ಇಕ್ಕಟ್ಟು ತಂದಿಟ್ಟಿದೆ. ಇದನ್ನು ಹೇಗಾದರೂ ಎದುರಿಸಿ ಕಾಂಗ್ರೆಸ್ ಹಾಗು ಇಂಡಿಯಾ ಒಕ್ಕೂಟಕ್ಕೆ ತಿರುಗೇಟು ಕೊಡಲು ಮೋದಿ ಸರಕಾರ ತಿಣುಕಾಡುತ್ತಿದೆ.
ಅದಕ್ಕಾಗಿಯೇ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಮತ್ತೆ ಮತ್ತೆ ನೆನಪಿಸುತ್ತ ಮುಜುಗರಕ್ಕೆ ಸಿಲುಕಿಸುವ ರಾಜಕೀಯದಲ್ಲಿ ತೊಡಗಿರುವಂತೆ ಕಾಣುತ್ತಿದೆ. ಈಚೆಗೆ, ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟ ಸಂವಿಧಾನದ ತತ್ವ-ಆದರ್ಶಗಳನ್ನು ಎತ್ತಿ ಹಿಡಿಯುತ್ತ ಬಂದಿದೆ. ಭರ್ಜರಿ ಬಹುಮತ ಬಂದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳುವ ನಾಯಕರಿರುವ ಬಿಜೆಪಿಯವರಿಗೆ ಅದು ಮುಜುಗರ ತಂದಿದೆ.
ಲೋಕಸಭಾ ಚುನಾವಣೆಯ ಪ್ರಚಾರದಲ್ಲೂ, ಲೋಕಸಭೆಯಲ್ಲೂ ರಾಹುಲ್ ಗಾಂಧಿ ಸಹಿತ ವಿಪಕ್ಷದ ಪ್ರಮುಖ ನಾಯಕರು ಸಂವಿಧಾನ ಮುಖ್ಯ ಅಜೆಂಡಗಳಲ್ಲಿ ಒಂದಾಗಿಸಿದ್ದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸಲಿದೆ, ಮೀಸಲಾತಿ ತಗೆದು ಹಾಕಲಿದೆ ಎಂದು ಎಚ್ಚರಿಸಿದ್ದರು.
ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರ ಪ್ರತಿ ವರ್ಷ ಜೂನ್ 25ನ್ನು 'ಸಂವಿಧಾನ್ ಹತ್ಯಾ ದಿವಸ್' ಎಂದು ಗುರುತಿಸಲಾಗುವುದು ಎಂದು ಘೋಷಿಸಿದೆ. ಇದರಿಂದ, ರಾಜಕೀಯ ವಲಯದಲ್ಲಿ ತಾತ್ವಿಕ ಅಸಮಾಧಾನ ಭುಗಿಲೆದ್ದಿದೆ. ಜೂನ್ 25ನ್ನು 'ಸಂವಿಧಾನ್ ಹತ್ಯಾ ದಿವಸ್' ಎಂದು ಆಚರಿಸುವುದು, ಭಾರತದ ಸಂವಿಧಾನವನ್ನು ತುಳಿದಾಗ ಏನಾಗುತ್ತದೆ ಎಂಬುದನ್ನು ನೆನಪಿಸುತ್ತದೆ. ತುರ್ತುಪರಿಸ್ಥಿತಿ ವೇಳೆ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಅಂದು ನಮನ ಸಲ್ಲಿಸಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮೊದಲ ಅಧಿವೇಶನದಲ್ಲಿ ತುರ್ತು ಪರಿಸ್ಥಿತಿಯನ್ನು ಖಂಡಿಸಿ ನಿರ್ಣಯ ಮಂಡಿಸಿದ್ದರು. “1975ರ ಜೂನ್ 25ರಂದು, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸರ್ವಾಧಿಕಾರಿ ಮನಸ್ಥಿತಿ ಪ್ರದರ್ಶಿಸುತ್ತ, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಆತ್ಮವನ್ನು ಕತ್ತು ಹಿಸುಕಿದರು. ಲಕ್ಷಾಂತರ ಜನಸಾಮಾನ್ಯರನ್ನು ವಿನಾಕಾರಣ ಜೈಲಿಗೆ ತಳ್ಳಿ ಮಾಧ್ಯಮದವರ ಧ್ವನಿಯನ್ನು ಹತ್ತಿಕ್ಕಲಾಯಿತು" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಆದರೆ, ಸಂವಿಧಾನ್ ಹತ್ಯಾ ದಿನ ಘೋಷಣೆಯನ್ನು ಕಾಂಗ್ರೆಸ್ ಖಂಡಿಸಿದೆ. ಸರ್ಕಾರದ ಕ್ರಮವನ್ನು ಟೀಕಿಸಿರುವ ಅದು, ಜೂನ್ 4ನ್ನು "ಮೋದಿ ಮುಕ್ತಿ ದಿವಸ್" ಎಂದು ಆಚರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದೆ. 'ಸಂವಿಧಾನ್ ಹತ್ಯಾ ದಿವಸ್' ಘೋಷಣೆಗೆ ಪ್ರತಿಯಾಗಿ ಜೈರಾಮ್ ರಮೇಶ್ ಕೇಂದ್ರದ ಕ್ರಮವನ್ನು ಟೀಕಿಸುತ್ತ, ಮತ್ತೊಮ್ಮೆ ಹೆಡ್ಲೈನ್ ಆಗುವ ಕಸರತ್ತು ಎಂದಿದ್ದಾರೆ.
"ಅಜೈವಿಕ ಪ್ರಧಾನಿಯ ಬೂಟಾಟಿಕೆಯಲ್ಲಿ ಮತ್ತೊಂದು ಹೆಡ್ಲೈನ್ ಕಬಳಿಸುವ ಕಸರತ್ತು. ಮೊದಲ 10 ವರ್ಷಗಳ ಕಾಲ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಅವರಿಗೆ 2024ರ ಜೂನ್ 4ರಂದು ಜನರು ಸರಿಯಾದ ಪಾಠ ಕಲಿಸಿದ್ದಾರೆ. ಆ ದಿವಸವನ್ನು ಮೋದಿ ಮುಕ್ತಿ ದಿವಸ ಎಂದು ಕರೆಯಲಾಗುವುದು" ಎಂದು ಜರೆದಿದ್ದಾರೆ ಜೈರಾಮ್ ರಮೇಶ್.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಕಳೆದ 10 ವರ್ಷಗಳಲ್ಲಿ, ನಿಮ್ಮ ಸರ್ಕಾರ ಪ್ರತಿದಿನ “ಸಂವಿಧಾನ ಹತ್ಯಾ ದಿವಸ” ಆಚರಿಸಿದೆ. ನೀವು ಪ್ರತಿ ಕ್ಷಣವೂ ದೇಶದ ಪ್ರತಿ ಬಡವರ ಮತ್ತು ವಂಚಿತ ವರ್ಗದ ಸ್ವಾಭಿಮಾನವನ್ನು ಕಸಿದುಕೊಂಡಿದ್ದೀರಿ" ಎಂದು ತಿರುಗೇಟು ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕಿ ಪ್ರಿಯಾಂಕಾ ಕಕರ್, ಆಡಳಿತ ಪಕ್ಷ 2014ರಿಂದ ಪ್ರತಿದಿನ ಸಂವಿಧಾನವನ್ನು 'ಕೊಲೆ' ಮಾಡುತ್ತಿದೆ ಎಂದು ಟೀಕಿಸಿದ್ಧಾರೆ. “ಇತ್ತೀಚೆಗೆ, ಚಂಡೀಗಢದ ಮೇಯರ್ ಚುನಾವಣೆಯ ಸಂದರ್ಭದಲ್ಲಿ, ಅನಿಲ್ ಮಾಸ್ಸಿ ಸಂವಿಧಾನದ ಕೊಲೆ ಮಾಡಿದ್ದು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿತ್ತು; ನ್ಯಾಯಸಮ್ಮತ ಚುನಾವಣೆಗಳು ನಡೆಯುತ್ತಿಲ್ಲ. ಇದು ಸಂವಿಧಾನದ ಕೊಲೆಯಾಗಿದೆ" ಎಂದು ಅವರು ಹೇಳಿದ್ದಾರೆ.
"ಕೆಲವು ವರ್ಷಗಳ ಹಿಂದೆ ವಿಭಜನೆಯ ಭೀಕರ ಸಂಸ್ಮರಣಾ ದಿನವನ್ನು ಘೋಷಿಸಲಾಯಿತು, ಆದರೆ ಅವರು ಅದರ ಕುರಿತು ಮಾತನಾಡುತ್ತಿಲ್ಲ. ಭಾರತದ ಜನರು ಈಗ ನಿಮ್ಮ 'ಜುಮ್ಲಾ'ಗಳಿಗೆ ಮೂರ್ಖರಾಗುವುದಿಲ್ಲ…" ಎಂದು ಆರ್ ಜೆ ಡಿ ಮುಖಂಡ ಮನೋಜ್ ಜಾ ಹೇಳಿದ್ದಾರೆ.
ಬಾಳಾಸಾಹೇಬರು ಮತ್ತು RSS ಬಹಿರಂಗವಾಗಿಯೇ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿದ್ದರು ಎಂದಿರುವ ಶಿವಸೇನೆ ಉದ್ಧವ್ ಬಣದ ನಾಯಕ ಸಂಜಯ್ ರಾವತ್, "ತುರ್ತು ಪರಿಸ್ಥಿತಿಯನ್ನು ದೇಶದ ಭದ್ರತೆಗಾಗಿ ಹೇರಲಾಗಿತ್ತು. ಅದರಲ್ಲಿ ತಪ್ಪೇನಿದೆ" ಎಂದು ಪ್ರಶ್ನಿಸಿದ್ಧಾರೆ.
'ಸಂವಿಧಾನ ಹತ್ಯಾ ದಿವಸ'ದ ನೆಪದಡಿ ನಡೆಯುತ್ತಿರುವ ಸೈದ್ಧಾಂತಿಕ ವಾದ-ಪ್ರತಿವಾದಗಳ ವಾಗ್ವಾದಗಳು ನಡೆಯುತ್ತಲೇ ಇದೆ. ಆದರೆ, ಮೋದಿ ಸರ್ಕಾರ ಮಾತ್ರ ಸಂವಿಧಾನದ ಬಗೆಗೆ ಎಂದೂ ಪ್ರಾಮಾಣಿಕ ಕಳಕಳಿ ತೋರಿಸಿದ್ದಿಲ್ಲ. ಅದರ ಪ್ರತಿಯೊಂದು ನಡವಳಿಕೆಯೂ ಸಂವಿಧಾನದ ಮೌಲ್ಯಗಳನ್ನು ಕಸದ ಬಿಟ್ಟಿಗೆ ಎಸೆದ ರೀತಿಯಲ್ಲಿಯೇ ಇತ್ತು ಎಂಬುದು ಅದರ ಕಾರ್ಯವೈಖರಿಯಿಂದಲೇ ಸ್ಪಷ್ಟವಾಗಿದೆ.
ಸಂಸತ್ತು ಪ್ರವೇಶಿಸುವಾಗ ಸಂವಿಧಾನದ ಪ್ರತಿಗೆ ಬಾಗಿ ನಮಸ್ಕರಿಸುವುದು , ಆಮೇಲೆ ಸಂವಿಧಾನದ ಆಶಯಗಳಿಗೆ ತೀರಾ ತದ್ವಿರುದ್ಧವಾಗಿ ನಡೆದುಕೊಳ್ಳೋದು, ಮೋದಿ ಸರಕಾರದಲ್ಲಿ ನಿರಂತರ ನಡೆದುಕೊಂಡೇ ಬಂದಿದೆ. ಸಾಂವಿಧಾನಿಕ ಸಂಸ್ಥೆಗಳೂ ಈ ಸರಕಾರದ ಅವಧಿಯಲ್ಲಿ ವಿನಾಶದ ಹಾದಿ ಹಿಡಿದಿವೆ ಎಂಬ ದೊಡ್ಡ ಆರೋಪವೂ ಅದರ ಮೇಲಿದೆ.
ಮೊನ್ನೆ ಲೋಕಸಭಾ ಚುನಾವಣೆ ಸಂದರ್ಭದಲ್ಲಂತೂ ಬಿಜೆಪಿಯ ಹಿರಿಯ ಮುಖಂಡರುಗಳೇ ನಾವು ಮೂರನೇ ಎರಡರಷ್ಟು ಬಹುಮತ ಪಡೆಯಬೇಕು. ಆಗ ಮಾತ್ರ ಸಂವಿಧಾನವನ್ನು ಬದಲಾಯಿಸಲು ಸಾಧ್ಯ ಎಂದು ಬಹಿರಂಗವಾಗಿಯೇ ಹೇಳಿದ್ದು ವಿವಾದವಾಗಿತ್ತು. ಬಳಿಕ ಆ ರೀತಿ ಮಾಡುವುದಿಲ್ಲ ಎಂದು ಪಕ್ಷ ಸ್ಪಷ್ಟೀಕರಣ ಕೊಡಬೇಕಾಗಿ ಬಂತು. ಈಗ ಅದೇ ಪಕ್ಷ ಸಂವಿಧಾನದ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿರುವುದನ್ನು ನೋಡುವಾಗ ಯಾರಿಗಾದರೂ ಸಂಶಯ ಬರದೇ ಇರಲು ಸಾಧ್ಯವೇ ?







