ಕರಾವಳಿ-ಮಲೆನಾಡು ಭಾಗದ ನಕ್ಸಲರ ರಕ್ತಸಿಕ್ತ ಅಧ್ಯಾಯಕ್ಕೆ ಕೊನೆಗೂ ಮುಕ್ತಿ

(ಉಡುಪಿಯಲ್ಲಿ ತೊಂಬಟ್ಟು ಲಕ್ಷ್ಮೀ ಜಿಲ್ಲಾಡಳಿತದ ಮುಂದೆ ಶರಣಾಗುತ್ತಿರುವುದು)
ಉಡುಪಿ/ಚಿಕ್ಕಮಗಳೂರು, ಫೆ.3: ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ದಟ್ಟ ಅರಣ್ಯ ಪ್ರದೇಶದಲ್ಲಿ 2002ರ ನವೆಂಬರ್ 6ರಂದು ತರಬೇತಿ ನಿರತರಾಗಿದ್ದ ನಕ್ಸಲರ ಬಂದೂಕಿನಿಂದ ಸಿಡಿದ ಗುಂಡೊಂದು ಕಟ್ಟಿಗೆ ಸಂಗ್ರಹಿಸಲು ಬಂದಿದ್ದ ಚೀರಮ್ಮ ಎಂಬ ವೃದ್ಧೆಯ ಕಾಲಿಗೆ ಬಡಿಯಿತು. ಈ ರೀತಿ ಕರಾವಳಿ-ಮಲೆನಾಡು ಭಾಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ನಕ್ಸಲರ ಇರುವಿಕೆ ಮೊದಲ ಬಾರಿ ಹೊರಜಗತ್ತಿನ ಅರಿವಿಗೆ ಬಂದ 22 ವರ್ಷಗಳ ಬಳಿಕ ಇದೀಗ ಪಶ್ಚಿಮ ಘಟ್ಟ ಪರಿಸರ ಹಾಗೂ ರಾಜ್ಯ ನಕ್ಸಲ್ ಚಟುವಟಿಕೆಗಳಿಂದ ಮುಕ್ತಗೊಂಡಿದೆ ಎಂದು ಘೋಷಿಸಿಕೊಳ್ಳುವ ಹಂತಕ್ಕೆ ಬಂದಿದೆ.
ಶನಿವಾರ ಚಿಕ್ಕಮಗಳೂರಿನಲ್ಲಿ ಕೋಟೆಹೊಂಡ ರವೀಂದ್ರ ಹಾಗೂ ರವಿವಾರ ಉಡುಪಿಯಲ್ಲಿ ತೊಂಬಟ್ಟು ಲಕ್ಷ್ಮೀ ಎಂಬ ಇಬ್ಬರು ಕೊನೆಯ ಶಂಕಿತ ನಕ್ಸಲರು ಶಸ್ತ್ರಾಸ್ತ್ರ ತೊರೆದು ಜಿಲ್ಲಾಡಳಿತದ ಮುಂದೆ ಶರಣಾಗುವ ಮೂಲಕ ಮುಖ್ಯವಾಹಿನಿಗೆ ಬಂದಿದ್ದಾರೆ. ಆ ಮೂಲಕ ರಾಜ್ಯವೀಗ ಸಂಪೂರ್ಣ ನಕ್ಸಲ್ ಮುಕ್ತವಾಗಿದೆ ಎಂದು ರಾಜ್ಯ ಸರಕಾರದಿಂದ ನೇಮಕಗೊಂಡ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯ, ನ್ಯಾಯವಾದಿ ಶ್ರೀಪಾಲ್ ಕೆ.ಪಿ. ಹೇಳಿದ್ದಾರೆ.
ಕಳೆದ 22 ವರ್ಷಗಳಲ್ಲಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಇದರೊಂದಿಗೆ ನಕ್ಸಲರು ಹಾಗೂ ಪೊಲೀಸರು ಹರಿಸಿದ ಸಾಕಷ್ಟು ರಕ್ತವೂ ಸೇರಿಕೊಂಡಿದೆ. 2002ಕ್ಕೆ ಮೊದಲು ಆಂಧ್ರ ಪ್ರದೇಶದೊಂದಿಗೆ ಸಂಪರ್ಕ ಹೊಂದಿದ್ದ ರಾಜ್ಯದ ರಾಯಚೂರು, ಬಳ್ಳಾರಿ ಹಾಗೂ ಉತ್ತರ ಕರ್ನಾಟಕ ಕೆಲವು ಭಾಗಗಳಲ್ಲಿ ಕೇಳುತ್ತಿದ್ದ ‘ನಕ್ಸಲ್ ದಾಳಿ’ ಪದಪುಂಜ ಪಶ್ಚಿಮ ಘಟ್ಟದಲ್ಲಿ ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನ’ ಘೋಷಣೆಯೊಂದಿಗೆ ಮಲೆನಾಡು ಹಾಗೂ ಕರಾವಳಿ ಪರಿಸರದಲ್ಲೂ ಪರಿಚಿತಗೊಂಡು ಇವುಗಳೂ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಒಂದಾಗಿ ರಾಜ್ಯ ಭೂಪಟದಲ್ಲಿ ಗುರುತಿಸಿಕೊಂಡವು.
ಉರುಳಿದ್ದು 36 ಜೀವಗಳು: ಈ ಭಾಗದಲ್ಲಿ ಕಳೆದ ಎರಡು ದಶಕಗಳಿಗೂ ಅಧಿಕ ಕಾಲ ಸಕ್ರಿಯವಾಗಿದ್ದ ನಕ್ಸಲ್ ಚಳವಳಿಗೆ ರಾಜ್ಯ ದುಬಾರಿ ಬೆಲೆ ತೆತ್ತಿದೆ. ಪೊಲೀಸ್ ಇಲಾಖೆಯ ಅಂಕಿಅಂಶಗಳೇ ಹೇಳುವಂತೆ ನಕ್ಸಲಿಸಂಗೆ ಒಟ್ಟು 36 ಅಮೂಲ್ಯ ಜೀವಗಳು ಇಲ್ಲಿ ಬಲಿಯಾಗಿವೆ. ಇವುಗಳಲ್ಲಿ ಹಲವು ಬಿಸಿರಕ್ತದ ತರುಣ-ತರುಣಿಯರೂ ಸೇರಿದ್ದಾರೆ. ಮೃತಪಟ್ಟ 36 ಮಂದಿ ಯಲ್ಲಿ 17 ನಕ್ಸಲರು ಪೊಲೀಸರ ಗುಂಡೇಟಿಗೆ ಬಲಿಯಾದರೆ, 10 ಮಂದಿ ಪೊಲೀಸರು ಸಹ ಇದೇ ವೇಳೆ ಜೀವ ತೆತ್ತಿದ್ದಾರೆ. ಅಲ್ಲದೇ ನಕ್ಸಲರು ಹಾಗೂ ಪೊಲೀಸರ ನಡುವೆ ಸಿಲುಕಿ 9 ಮಂದಿ ‘ಅಮಾಯಕ’ ಜನಸಾಮಾನ್ಯರೂ ತಮ್ಮ ಜೀವ ಕಳೆದುಕೊಂಡಿದ್ದಾರೆ.
ಕಿಟಕಿಯಿಂದ ಬಂದ ನಕ್ಸಲ್ ಚಳವಳಿ: ಶಾಂತಿ ಹಾಗೂ ಸೌಹಾರ್ದಕ್ಕೆ ಹೆಸರಾಗಿದ್ದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಎರಡೂವರೆ ದಶಕಗಳ ಹಿಂದೆಯೇ ಬಂದೂಕಿನೊಂದಿಗೆ ನಕ್ಸಲರ ಪ್ರವೇಶಕ್ಕೆ ಅವಕಾಶ ನೀಡಿದ್ದು, ಕೇಂದ್ರ ಸರಕಾರದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ. ಜನರ ಸಮಸ್ಯೆಗೆ ಬಂದೂಕಿನ ಮೂಲಕವೇ ಉತ್ತರ ಪಡೆಯಲು ಸಾಧ್ಯ ಎಂದು ಬಲವಾಗಿ ನಂಬಿದ್ದ ನಕ್ಸಲರು, ರಾಷ್ಟ್ರೀಯ ಉದ್ಯಾನವನ ಯೋಜನೆಯಿಂದಾಗಿ ಒಕ್ಕಲೇಳುವ ಭೀತಿಯಲ್ಲಿದ್ದ ಸಂತ್ರಸ್ತರಿಂದ ಸಹಾನೂಭೂತಿ ಪಡೆಯುವಲ್ಲಿ ಯಶಸ್ವಿಯಾಗಿ ತಮ್ಮ ಬೇರು ಊರಲು ಯಶಸ್ವಿಯಾಗಿದ್ದರು.
ಇದರಿಂದಾಗಿ ಕಾಫಿನಾಡು ಚಿಕ್ಕಮಗಳೂರು, ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲರ ಸಂಘಟನೆ ಭೂಗತವಾಗಿ ಪ್ರಾರಂಭಗೊಂಡಿತ್ತು. ಅರಣ್ಯವಾಸಿಗಳ ಬೆಂಬಲದೊಂದಿಗೆ ನಕ್ಸಲ್ ಚಟುವಟಿಕೆ ಕಾಡಂಚಿನ ಗ್ರಾಮಗಳಲ್ಲಿ ಬಿರುಸಿನಿಂದ ನಡೆಯುತ್ತಿದ್ದರೂ ಇದು ಹೊರ ಜಗತ್ತಿಗೆ ತಿಳಿದಿದ್ದು 2002ರ ಬಳಿಕ. ಅದಾಗಲೇ ಅರಣ್ಯವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಯೊಂದಿಗೆ ಗಿರಿಜನರ ಬೆಂಬಲಗಳಿಸಿದ್ದ ಪೀಪಲ್ಸ್ ವಾರ್ ಗ್ರೂಪ್ ಮಲೆನಾಡಿನ ದುರ್ಗಮ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಯ ಕಾರಿಡಾರ್ ರ್ನಿುಸಿಕೊಂಡಿತ್ತು.
ಚುರುಕುರಿ ರಾಜಕುಮಾರ್(ಆಝಾದ್) ಎಂಬವರ ನಾಯಕತ್ವದಲ್ಲಿ ಚಿಕ್ಕಮಗಳೂರು, ಉಡುಪಿ, ದ.ಕ. ಹಾಗೂ ರಾಜ್ಯದ ಕೆಲ ಗಡಿ ಜಿಲ್ಲೆಗಳಲ್ಲಿ ನಕ್ಸಲ್ ಚಳವಳಿ ಸಂಘಟನೆಗೊಂಡಿತ್ತು. ರಾಜಕುಮಾರ್ ಸಂಘಟಿಸಿದ್ದ ಈ ಚಳವಳಿ ಭವಿಷ್ಯದಲ್ಲಿ ಮಲೆನಾಡಿನಲ್ಲಿ ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಕಾರಣವಾಯಿತು.
2002ರ ನ.6ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಗ್ರಾಮದ ನಿವಾಸಿ ಚೀರಮ್ಮ ಎಂಬವರ ಕಾಲಿಗೆ ಗುಂಡಿನ ಏಟು ಬಿದ್ದಿತ್ತು. ಚೀರಮ್ಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ನಡೆದ ತನಿಖೆಯಿಂದಾಗಿ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಅದಾಗಲೇ ಬೇರೂರಿ ಹಲವು ವರ್ಷಗಳು ಕಳೆದಿರುವುದು ಹೊರಜಗತ್ತಿಗೆ ತಿಳಿದು ಬಂತು. ಆ ನಂತರ ಪೊಲೀಸ್ ಇಲಾಖೆ ಚುರುಕುಗೊಂಡಿದ್ದರಿಂದ ಚಿಕ್ಕಮಗಳೂರು, ಉಡುಪಿ, ದ.ಕ. ಜಿಲ್ಲೆಗಳ ವ್ಯಾಪ್ತಿಯಲ್ಲಿ ನಕ್ಸಲರು ಹಾಗೂ ಪೊಲೀಸರು, ಎಎನ್ಎಫ್ ಸಿಬ್ಬಂದಿ ನಡುವೆ ಹಲವು ಮುಖಾಮುಖಿಗಳು ನಡೆದವು.
ಈದುವಿನಲ್ಲಿ ಮೊದಲ ಬಲಿ: ನಕ್ಸಲರು ಹಾಗೂ ಪೊಲೀಸರ ನಡುವೆ ಮೊದಲ ಬಾರಿ ಗುಂಡಿನ ಚಕಮಕಿ ನಡೆದಿದ್ದು, 2003ರ ಆ.6ರಂದು ಕುದುರೆಮುಖ ಸಮೀಪದ ಸಿಂಗ್ಲಾರದಲ್ಲಿ. ಆದರೆ ಇದು ರಕ್ತರಂಜಿತಗೊಂಡಿದ್ದು, ಕಾರ್ಕಳ ತಾಲೂಕಿನ ಈದುವಿನ ಬಲ್ಯೊಟ್ಟುವಿನಲ್ಲಿ. 2003ರ ನವೆಂಬರ್ 17ರ ನಡುರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಪಾರ್ವತಿ ಹಾಗೂ ಹಾಜಿಮಾ ಎಂಬ ಶಂಕಿತ ನಕ್ಸಲ್ ಯುವತಿಯರು ಪೊಲೀಸರ ಗುಂಡಿಗೆ ಬಲಿಯಾಗಿ ನಕ್ಸಲ್ ಚಳವಳಿಯ ರಕ್ತಸಿಕ್ತ ಅಧ್ಯಯದ ಪುಟ ಆರಂಭಿಸಿದ್ದರು.
ನಕ್ಸಲ್ ಚಳವಳಿಗೆ ಈ ಭಾಗದಲ್ಲಿ ಅತಿದೊಡ್ಡ ಆಘಾತವಾಗಿದ್ದು, 2005ರ ಫೆ.6ರಂದು. ಮೆಣಸಿನಹಾಡ್ಯದ ಬಲಿಗೆಗುಡ್ಡದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ಚಳವಳಿಯ ಮಾಸ್ಟರ್ಮೈಂಡ್ ಎಂದು ಹೆಸರಾಗಿದ್ದ ಸಾಕೇತ್ರಾಜನ್ ಹಾಗೂ ಅವರ ಸಹಚರ ಶಿವಲಿಂಗು ಬಲಿಯಾಗಿದ್ದರು. ಸಾಕೇತ್ರಾಜನ್ ಎನ್ಕೌಂಟರ್ ಬಳಿಕ ಮಲೆನಾಡಿನಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕೆಲ ಅಮಾಯಕ ಗಿರಿಜನರೂ ಸೇರಿದಂತೆ ನಕ್ಸಲ್ ಮಾಹಿತಿದಾರರು, ಪೊಲೀಸರು, ನಾಗರಿಕರ ಹತ್ಯೆಗಳು ನಡೆದಿವೆ.
ರಾಜ್ಯದಲ್ಲಿ ನಕ್ಸಲ್ ಚಳವಳಿ ಬೇರು ಗಟ್ಟಿಗೊಳ್ಳುತ್ತಿದ್ದಂತೆ ಸಾಕೇತ್ ರಾಜನ್ ಹತ್ಯೆ ಹಾಗೂ ನಕ್ಸಲ್ ಚಳವಳಿ ಹತ್ತಿಕ್ಕಲು ಸರಕಾರಗಳು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಮತ್ತು ನಕ್ಸಲ್ ಪ್ಯಾಕೇಜ್ ಹೆಸರಿನಲ್ಲಿ ಕುಗ್ರಾಮಗಳ ಅಭಿವೃದ್ಧಿಗೆ ನೀಡಿದ ಅನುದಾನ, ವಿವಿಧ ಯೋಜನೆಗಳಿಂದಾಗಿ ನಕ್ಸಲ್ ಚಳವಳಿಗೆ ಹಿನ್ನೆಡೆಯಾಯಿತು. ನಕ್ಸಲರನ್ನು ಮಟ್ಟಹಾಕಲೆಂದೇ ಎಎನ್ಎಫ್ನ್ನು ನಿಯೋಜಿಸಿದ್ದು, ಅವರು ನಡೆಸಿದ ತೀವ್ರವಾದ ಕೂಂಬಿಂಗ್ ಕಾರ್ಯಾಚರಣೆ ನಕ್ಸಲರ ಚಳವಳಿಗೆ ದೊಡ್ಡ ಹಿನ್ನೆಡೆಯನ್ನೇ ಉಂಟು ಮಾಡಿತು.
ಇದರೊಂದಿಗೆ ಮಲೆನಾಡು ಸೇರಿದಂತೆ ವಿಶೇಷವಾಗಿ ಕರಾವಳಿ ಭಾಗದಲ್ಲಿ ಹಿಂಸಾತ್ಮಕ ಹೋರಾಟಕ್ಕೆ ಸಿಗದ ಜನ ಬೆಂಬಲ ಹಾಗೂ ನಕ್ಸಲರಲ್ಲೇ ಮೂಡಿದ ಒಡಕು, ಭಿನ್ನಾಭಿಪ್ರಾಯ, ನಾಯಕತ್ವದ ಕೊರತೆಯಿಂದಾಗಿ ನಕ್ಸಲ್ ಚಳವಳಿಗೆ ರಾಜ್ಯದಲ್ಲಿ 2015ರ ಬಳಿಕ ಸಂಪೂರ್ಣ ಹಿನ್ನಡೆಯಾಗಿತ್ತು. ಈ ಅವಧಿಯಲ್ಲಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಅಳಿದುಳಿದ ನಕ್ಸಲರು ನೆರೆಯ ಆಂಧ್ರ ಪ್ರದೇಶ, ಕೇರಳ, ತುಮಿಳುನಾಡು ರಾಜ್ಯಗಳತ್ತ ಮುಖಮಾಡಿ ಆ ರಾಜ್ಯಗಳಲ್ಲಿ ನಕ್ಸಲ್ ಚಳವಳಿ ಸಂಘಟಿಸಲಾರಂಭಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ರಾಜ್ಯಗಳಲ್ಲೂ ನಕ್ಸಲ್ ಚಳವಳಿಗೆ ಹಿನ್ನೆಡೆಯಾಗಿದ್ದರಿಂದ ಕರ್ನಾಟಕ ಮೂಲದ ನಕ್ಸಲರ ತಂಡ ಕೆಲ ತಿಂಗಳುಗಳ ಹಿಂದೆ ರಾಜ್ಯದ ಮಲೆನಾಡು-ಕರಾವಳಿ ಭಾಗಕ್ಕೆ ಹಿಂದಿರುಗಿದ್ದರು. ಮುಂಡಗಾರು ಲತಾ, ವಿಕ್ರಂಗೌಡ ನೇತೃತ್ವದ ತಂಡ ಮಲೆನಾಡಿಗೆ ಬಂದಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಮತ್ತು ಎಎನ್ಎಫ್ ನಕ್ಸಲರ ಬೆನ್ನು ಬಿದ್ದಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ-2024ಅನ್ನು ಜಾರಿ ಮಾಡಿ ಶರಣಾಗತರಾಗಿ ಮುಖ್ಯವಾಹಿನಿಗೆ ಮರಳುವ ನಕ್ಸಲರಿಗೆ ಪರಿಹಾರಧನ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿ ಸುವ ಯೋಜನೆ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆ ಮಲೆನಾಡಿನಲ್ಲಿದ್ದ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಕ್ಕೆ ಮುಂದಾಗಿತ್ತು.
ಆದರೆ ಕೇರಳದಿಂದ ರಾಜ್ಯಕ್ಕೆ ಬಂದಿದ್ದ ಎಂಟು ಜನರ ನಕ್ಸಲರ ತಂಡದಲ್ಲಿದ್ದ ಉಡುಪಿ ಕೂಡ್ಲು ಮೂಲದ ವಿಕ್ರಂಗೌಡರನ್ನು 2024ರ ನ.24ರಂದು ಎಎನ್ಎಫ್ ಸಿಬ್ಬಂದಿ ಉಡುಪಿ ಜಿಲ್ಲೆಯಲ್ಲಿ ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದರು. ಈ ಘಟನೆ ಬಳಿಕ ಚುರುಕುಗೊಂಡ ಶಾಂತಿಗಾಗಿ ನಾಗರಿಕರ ವೇದಿಕೆ ಹಾಗೂ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಮುಖಂಡರು ನಕ್ಸಲರ ಸಂಪರ್ಕ ಸಾಧಿಸಿ ಜ.8ರಂದು 6ಮಂದಿ ನಕ್ಸಲರ ಮನವೊಲಿಸಿ ಮುಖ್ಯಮಂತ್ರಿಯ ಸಮ್ಮುಖದಲ್ಲೇ ಮುಖ್ಯವಾಹಿನಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಇದೀಗ ನಕ್ಸಲರ ಪಟ್ಟಿಯಲ್ಲಿ ಉಳಿದ ಇಬ್ಬರು ಕೊನೆಯ ನಕ್ಸಲರಾದ ರವೀಂದ್ರ ಹಾಗೂ ತೊಂಬಟ್ಟು ಲಕ್ಷ್ಮೀಯವರನ್ನು ಮುಖ್ಯವಾಹಿನಿಗೆ ಕರೆತರುವ ಮೂಲಕ ರಾಜ್ಯವನ್ನು ನಕ್ಸಲ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯರ ಅವಧಿಯಲ್ಲಿ ಶರಣಾಗತಿ ಪ್ರಕ್ರಿಯೆ, ನಕ್ಸಲ್ ಮುಕ್ತ
ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ನಕ್ಸಲ್ಪರ ಸಹಾನುಭೂತಿ ಇದ್ದ ಬುದ್ಧಿಜೀವಿಗಳು ನಕ್ಸಲರನ್ನು ಮುಖ್ಯ ವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಚಿಂತನೆ ನಡೆಸಿ, ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರ ಅವಧಿಯಲ್ಲಿ ಮೊದಲ ಬಾರಿಗೆ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆದಿದ್ದು, ಇದುವರೆಗೆ 22 ನಕ್ಸಲರು ಮುಖ್ಯವಾಹಿನಿಗೆ ಮರಳಿದ್ದಾರೆ. ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿಯ ಚಿಕ್ಕಮಗಳೂರು ಜಿಲ್ಲಾ ಸಮಿತಿ ಮುಂದೆ 13, ಶಿವಮೊಗ್ಗ ಜಿಲ್ಲಾ ಸಮಿತಿ ಮುಂದೆ ಓರ್ವ ನಕ್ಸಲ್ ಶರಣಾಗಿದ್ದು, ಜ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಸಮ್ಮುಖದಲ್ಲಿ ಆರು ಜನ ನಕ್ಸಲರು ಹಾಗೂ ಉಡುಪಿಯಲ್ಲಿ ಒಬ್ಬರು ಶರಣಾಗಿದ್ದಾರೆ. ಸದ್ಯ ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದು, ಅವರ ಅವಧಿಯಲ್ಲೇ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತ ಆಗಿದೆ.
ನಕ್ಸಲ್ ಮುಕ್ತ ಘೋಷಣೆಗೆ ಕರ್ನಾಟಕ ಸಿದ್ಧ
2026ರ ಮಾರ್ಚ್ ಅಂತ್ಯದೊಳಗೆ ದೇಶವನ್ನು ನಕ್ಸಲ್ಮುಕ್ತ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲ ತಿಂಗಳ ಹಿಂದೆ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶ ರಾಜ್ಯಗಳು ಈಗಾಗಲೇ ನಕ್ಸಲ್ಮುಕ್ತ ರಾಜ್ಯ ಎಂದು ಘೋಸಿಕೊಂಡಿವೆ. ಕರ್ನಾಟಕ ರಾಜ್ಯದಲ್ಲಿ ಜ.8ರಂದು ಆರು ನಕ್ಸಲರು ಮುಖ್ಯವಾಹಿನಿಗೆ ಬರುವ ಮೂಲಕ ರಾಜ್ಯ ಕೂಡ ನಕ್ಸಲ್ ಮುಕ್ತವಾಗುವತ್ತ ಹೆಜ್ಜೆ ಇಟ್ಟಿತ್ತು.
ಫೆ.1ರಂದು ರವೀಂದ್ರ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರೇ, ಫೆ.2ರಂದು ಉಡುಪಿ ಜಿಲ್ಲಾಡಳಿತದ ಮುಂದೆ ತೊಂಬಟ್ಟು ಲಕ್ಷ್ಮೀ ಶರಣಾಗುವ ಮೂಲಕ ಸದ್ಯ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ. ಈ ಮೂಲಕ ರಾಜ್ಯ ಪೊಲೀಸರು ಹಾಗೂ ಎಎನ್ಎಫ್ ಪಟ್ಟಿಯಲ್ಲಿದ್ದ ಎಲ್ಲಾ ‘ಶಂಕಿತ’ ನಕ್ಸಲರು ಮುಖ್ಯವಾಹಿನಿಗೆ ಅಧಿಕೃತವಾಗಿ ಬಂದಂತಾಗಿದೆ. ಹೀಗಾಗಿ ರಾಜ್ಯದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿದ್ದ ಹಿಂಸಾತ್ಮಕ ನಕ್ಸಲ್ ಚಳವಳಿಗೆ ಸದ್ಯಕ್ಕೆ ಇತಿಶ್ರೀ ಬಿದ್ದಂತಾಗಿದೆ.
"ಸದ್ಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗುರುತಿಸಿಕೊಂಡಿದ್ದ, ನಕ್ಸಲ್ ಪಟ್ಟಿಯಲ್ಲಿದ್ದ ಎಲ್ಲರೂ ರಾಜ್ಯ ಸರಕಾರದ ಮುಂದೆ ಶರಣಾಗತರಾಗಿದ್ದಾರೆ. ಶನಿವಾರ ರವೀಂದ್ರ ಜಿಲ್ಲಾಡಳಿತದ ಮುಂದೇ ಶರಣಾಗಿದ್ದಾನೆ. ರವಿವಾರ ಉಡುಪಿಯಲ್ಲಿ ತೊಂಬಟ್ಟು ಲಕ್ಷ್ಮೀ ಮುಖ್ಯವಾಹಿನಿಗೆ ಮರಳಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತವಾಗಿದೆ".
- ಡಾ.ವಿಕ್ರಮ್ ಅಮಟೆ, ಚಿಕ್ಕಮಗಳೂರು ಎಸ್ಪಿ ಹಾಗೂ ಡಾ.ಅರುಣ್ ಕೆ. ಉಡುಪಿ ಎಸ್ಪಿ







