ಹಜ್ ಯಾತ್ರೆ : ಜಾಗತಿಕ ಆಧ್ಯಾತ್ಮಿಕ ಮಹಾ ಸಮಾವೇಶ
► ಹಜ್ ಅನುಭವ ಹಂಚಿಕೊಂಡ ಹಿರಿಯರು

ಅಬ್ದುಲ್ ಸಮದ್ ಬಾವ ಹಾಜಿ ಕೂರ್ನಡ್ಕ, ಅಬ್ದುಲ್ ಸಮದ್ ಹಾಜಿ ಪರ್ಲಡ್ಕ, ಹಾಜಿ ಎಂ.ಟಿ ಮೊಹಮ್ಮದ್ ಕಲಾಯಿ
ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಹಝ್ರತ್ ಇಬ್ರಾಹಿಂ ಅಲೈಸ್ಸಲಾಂ ಅವರಿಂದ ನಿರ್ಮಾಣಗೊಂಡ ಸೌದಿ ಅರೇಬಿಯಾದ ಮಕ್ಕಾದ ಪವಿತ್ರ ಕಅಬಾ ಜಾಗತಿಕ ಮುಸಲ್ಮಾನರಿಗೆ ಅತ್ಯಂತ ಪವಿತ್ರ ಸ್ಥಳ.
ಇಸ್ಲಾಮಿನ ಐದು ಆಧಾರ ಸ್ಥಂಭಗಳಲ್ಲಿ ಹಜ್ ಐದನೆಯದು. ಆರ್ಥಿಕ ಸಂಪನ್ಮೂಲವಿರುವ ಮತ್ತು ಆರೋಗ್ಯವಂತ ಮುಸಲ್ಮಾನನಿಗೆ ಹಜ್ ನಿರ್ವಹಣೆಯು ಕಡ್ಡಾಯವಾಗಿದೆ. ಹಜ್ ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬ ಮುಸಲ್ಮಾನನ ಹೆಬ್ಬಯಕೆಯಾಗಿದೆ. ಈದ್ ಉಲ್ ಆಝ್ಹಾ (ಬಕ್ರೀದ್) ಹಬ್ಬದ ಸಂದರ್ಭದಲ್ಲಿ ಮಕ್ಕಾ ಸಂದರ್ಶನ ನಡೆಸಿ ಅಲ್ಲಿನ ಧಾರ್ಮಿಕ ವಿಧಿಗಳನ್ನು ನಿರ್ವಹಿಸಿ ಆಧ್ಯಾತ್ಮಿಕವಾಗಿ ಪುನೀತರಾಗುವ ಕ್ರಿಯೆಯೇ ಹಜ್.
ಜಗತ್ತಿನ ಮೂಲೆ ಮೂಲೆಗಳಿಂದ ಅನಾದಿ ಕಾಲದಿಂದಲೂ ಮಕ್ಕಾದ ಕಅಬಾ ಸಂದರ್ಶನಕ್ಕಾಗಿ ಬರುತ್ತಿದ್ದ ಮುಸಲ್ಮಾನರು ಆಯಾಯ ಕಾಲದ ವ್ಯವಸ್ಥೆಗೆ ಅನುಗುಣವಾಗಿ ಪ್ರಯಾಣ ಮಾಡುತ್ತಿದ್ದರು. ಸಾವಿರಾರು ವರ್ಷಗಳಿಂದ ಬರಿಗಾಲಲ್ಲಿ ನಡೆದು ಬರುತ್ತಿದ್ದ ಹಜ್ ಯಾತ್ರಿಕರು ಬಹುದೂರದ ಮಕ್ಕಾ ಪ್ರಯಾಣವನ್ನು ಸುದೀರ್ಘ ಸಮಯದಲ್ಲಿ ತಲುಪುತ್ತಿದ್ದರು. ಪ್ರಯಾಣಿಕ ಹಡಗಿನ ಸಂಚಾರದ ಬಳಿಕ ಬಹುಕಾಲ ಹಡಗಿನ ಮೂಲಕ ವಿವಿಧ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಆಗಮಿಸುತ್ತಿದ್ದರು.
ಹಡಗಿನಲ್ಲಿ ತಿಂಗಳುಗಟ್ಟಲೆ ಪ್ರಯಾಣ ಮಾಡುವ ಸನ್ನಿವೇಶ ಒಂದು ಕಾಲದಲ್ಲಿತ್ತು. ಹಜ್ ಯಾತ್ರೆಗೆ ಹೊರಟವರು ಮರಳಿ ಬರುವ ಖಾತರಿ ಇರಲಿಲ್ಲ. ಸುದೀರ್ಘ ಸಮಯದ ದಾರಿ, ಸಮುದ್ರ ಸಂಚಾರದ ಬಗ್ಗೆ ಇರುವ ಆತಂಕದಿಂದಾಗಿ ಅಂದು ಹಜ್ ಯಾತ್ರೆಗೆ ಹೊರಟವರು ಮರಳಿ ಬರುವ ಬಗ್ಗೆ ಕುಟುಂಬಿಕರಲ್ಲಿ ಭಯ ಆವರಿಸುತ್ತಿತ್ತು. ಹಜ್ ಗೆ ಮುನ್ನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸುವ, ಗಂಡು ಮಕ್ಕಳಿಗೆ ಸ್ವಾವಲಂಬಿ ಬದುಕಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವ, ಸಾಲದಿಂದ ಮುಕ್ತವಾಗಿ, ಕೊಡುಕೊಳ್ಳುವಿಕೆಯ ಲೆಕ್ಕಾಚಾರವನ್ನು ನ್ಯಾಯೋಚಿತವಾಗಿ ಮುಗಿಸಿ ಯಾರಿಗೂ ಬಿಡಿಗಾಸು ಕೂಡಾ ಬಾಕಿ ಇಡದೆ ಇಸ್ಲಾಮಿನ ಆದರ್ಶದಂತೆ ಸರ್ವರಲ್ಲೂ ಸಣ್ಣಪುಟ್ಟ ಮಾನವ ಸಹಜ ತಪ್ಪಿಗಾಗಿ ಕ್ಷಮೆಯಾಚಿಸಿ ಮಕ್ಕಾ - ಮದೀನಾ ಯಾತ್ರೆ ಕೈಗೊಳ್ಳುತ್ತಿದ್ದ ಹಜ್ಜಾಜ್ ಗಳು ಶುದ್ಧ ಮನಸ್ಸಿನಿಂದ ಹೊರಡುತ್ತಿದ್ದರು. ಒಂದು ವೇಳೆ ಪ್ರಯಣದ ವೇಳೆಯಲ್ಲಿ ಅಥವಾ ಮಕ್ಕಾದಲ್ಲಿ ಮರಣ ಹೊಂದಿದರೆ ಇಹಲೋಕದ ಬದುಕಿನಲ್ಲಿ ಯಾವುದೇ ಕೊಡುಕೊಳ್ಳುವಿಕೆ ಬಾಕಿ ಇರಬಾರದು ಎಂಬ ದೃಢತೆಯಿಂದ ಅಂದಿನ ಹಜ್ ಯಾತ್ರಿಕರು ಬಲು ಸೂಕ್ಷ್ಮತೆಯನ್ನು ಪಾಲಿಸುತ್ತಿದ್ದರು. ತನ್ನೆಲ್ಲಾ ಬದುಕಿನ ಜವಾಬ್ದಾರಿಯಿಂದ ಮುಕ್ತನಾಗಿ ಸಂಪೂರ್ಣವಾಗಿ ದೇವನಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ, ಪ್ರವಾದಿ ಹಝ್ರತ್ ಇಬ್ರಾಹಿಂ ಅಲೈಸ್ಸಲಾಂ ಅವರ ತ್ಯಾಗದ ಬದುಕಿನ ನೆನಪನ್ನು ಮತ್ತೆ ಮರುಪೂರಣಗೊಳಿಸುವ ಒಂದು ಬಲುದೊಡ್ಡ ಧಾರ್ಮಿಕ ವಿಧಿಯೇ ಈ ವಾರ್ಷಿಕ ಹಜ್.
ಅಂದು ಮಕ್ಕಾಗೆ ನಡೆದು ಹೋದವರ ಕಥೆಗಳು ಜನರ ಮನದಿಂದ ಮನಕ್ಕೆ ಹರಡಿ ಇಂದು ಕೂಡಾ ಜನಜನಿತವಾಗಿವೆ. ಹಡಗಿನಲ್ಲಿ ಹೋದವರು ಬೆರಳೆಣಿಕೆಯಲ್ಲಷ್ಟೇ ಇದ್ದಾರೆ. ಕೆಲವರು ತಮ್ಮ ವಯೋ ಸಹಜ ಕಾರಣದಿಂದ ನೆನಪಿನ ಶಕ್ತಿಯನ್ನು ಕಳೆದುಕೋಡಿದ್ದಾರೆ. ಹಜ್ ಕೆಲವು ದಶಕಗಳ ಹಿಂದೆ ಹೇಗಿತ್ತು , ಈಗ ಹೇಗಿದೆ ಎಂಬುದನ್ನು ಮೆಲುಕು ಹಾಕುವ ಸಲುವಾಗಿ ಆಯ್ದ ಕೆಲವು ಹಾಜಿಗಳೊಂದಿಗೆ ನಡೆಸಿದ ಮಾತುಕತೆಯ ಸಾರಾಂಶವನ್ನು ಅವರ ಮಾತಿನಲ್ಲೇ ಇಲ್ಲಿ ನೀಡಲಾಗಿದೆ.
ಅಬ್ದುಲ್ ಸಮದ್ ಬಾವಾ ಹಾಜಿ ಕೂರ್ನಡ್ಕ
1950 ರಲ್ಲಿ ಜನಿಸಿದ ನಾನು, ನನಗೆ ವಿವಾಹವಾಗಿ ಆರು ಮಕ್ಕಳು ಜನಿಸಿದ ಬಳಿಕ ನನ್ನ 44ನೇ ವಯಸ್ಸಿನಲ್ಲಿ ಹಜ್ ಯಾತ್ರೆ ಕೈಗೊಂಡೆ. ನನ್ನ ಅಣ್ಣ ದಿ. ಮೊಹಮ್ಮದ್ ಹಾಜಿಯವರು 1974ರಲ್ಲಿ ಹಜ್ ಯಾತ್ರೆಗೆ ತೆರಳಿದ್ದರು. ಆಗ ನನಗೆ 24 ವರ್ಷ ಪ್ರಾಯ. ಅಕ್ಬರ್ ಎಂಬ ಹಡಗಿನಲ್ಲಿ ಮುಂಬೈನಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡಿದ್ದರು. ಮಂಬೈನಿಂದ ಮಕ್ಕಾಗೆ ಹೋಗಿ ಬರಲು ತಲಾ ಎಂಟು ದಿನಗಳಂತೆ ಒಟ್ಟು 16 ದಿನಗಳನ್ನು ಪ್ರಯಾಣದಲ್ಲೇ ಅಂದು ಕಳೆದಿದ್ದರು. ಇಡೀ ಹಜ್ ಯಾತ್ರೆ ಪ್ರಯಾಣವೂ ಸೇರಿದಂತೆ ಅಂದು ಎರಡು ತಿಂಗಳ ಅವಧಿಯದ್ದಾಗಿತ್ತು.
ನನ್ನ ಯೌವನದಲ್ಲೇ ನನಗೆ ಹಜ್ ಯಾತ್ರೆ ಮಾಡಬೇಕೆಂಬ ಬಲವಾದ ಅಪೇಕ್ಷೆಯಿತ್ತು. ನನ್ನ ಅಣ್ಣ ಅಂದು ಯಾತ್ರೆ ಕೈಗೊಂಡಾಗ ಆ ಅಪೇಕ್ಷೆ ಮತ್ತಷ್ಟು ಬಲವಾಯಿತು. ನನಗೆ ಅಂತಹ ಒಂದು ಅಪೂರ್ವ ಅವಕಾಶ 1994ರಲ್ಲಿ ಕೂಡಿ ಬಂತು. ಭಗವಂತನ ಇಚ್ಚೆಯಂತೆ ನಾನು ನನ್ನ 44ನೇ ಪ್ರಾಯದ ತುಂಬು ಯೌವನದಲ್ಲಿ ಹಜ್ ಗೆ ತೆರಳಲು ಮುಂಬೈನ (ಅಂದಿನ ಬಾಂಬೆ ) ಮುಸ್ಲಿಂ ಟೂರ್ಸ್ ಕಾರ್ಪೋರೇಷನ್ ಸಂಸ್ಥೆಯ ಮೂಲಕ ಅರ್ಜಿ ಸಲ್ಲಿಸಿದೆ. ನನ್ನ ಅರ್ಜಿ ಮಾನ್ಯವಾಗಿ ಅದರ ಶುಲ್ಕವನ್ನು ಪಾವತಿಸಿದೆ. ಅಂದು ನನಗೆ 63,000 ರೂ. ಖರ್ಚು ತಗಲಿತ್ತು.
ಪುತ್ತೂರಿನಿಂದ ಮುಂಬೈಗೆ ಬಸ್ ಮೂಲಕ ಪ್ರಯಾಣಿಸಿ ಅಲ್ಲಿನ ಡೋಂಗ್ರಿಯಲ್ಲಿದ್ದ ಹಜ್ ಯಾತ್ರಾರ್ಥಿಗಳ ಭವನದಲ್ಲಿ ತಂಗಿದೆವು. ಬಹುತೇಕ ದಕ್ಷಿಣ ಮತ್ತು ಮಧ್ಯ ಭಾರತೀಯರು ಮುಂಬೈ ಮೂಲಕವೇ ಹಜ್ ಗೆ ತೆರಳಬೇಕಿತ್ತು. ಮುಂಬೈನಿಂದ ಸಣ್ಣ ವಿಮಾನದಲ್ಲಿ ಕರಾಚಿಗೆ ಪ್ರಯಾಣಿಸಿ ಬಳಿಕ ಅಲ್ಲಿಂದ ದೊಡ್ಡ ವಿಮಾನದಲ್ಲಿ ಅಲ್ಲಿನ ಯಾತ್ರಾರ್ಥಿಗಳನ್ನು ಸೇರಿಸಿ ಜಿದ್ದಾಗೆ ಕರೆದುಕೊಂಡು ಹೋಗುವ ಪರಿಪಾಠ ಅಂದಿತ್ತು. ವಿಮಾನ ಪ್ರಯಾಣದ ವೆಚ್ಚವನ್ನು ಉಳಿಸುವ ಸಲುವಾಗಿ ಟೂರ್ಸ್ ಕಂಪನಿಯವರು ಈ ರೀತಿ ಮಾಡುತ್ತಿದ್ದರು. ಜಿದ್ದಾದಿಂದ ಬಸ್ ಮೂಲಕ ಮಕ್ಕಾಗೆ ನಮ್ಮನ್ನು ಕರೆದುಕೊಂಡು ಹೋಗಲಾಯಿತು.
ಜಗತ್ತಿನ ವಿವಿಧ ಭಾಗಗಳಿಂದ ಹಜ್ ಗೆ ಬರುತ್ತಿದ್ದ ಯಾತ್ರಾರ್ಥಿಗಳು ಏಕೈಕ ಆಧ್ಯಾತ್ಮಿಕ ಉದ್ದೇಶದಿಂದ ಒಂದು ಕಡೆ ಸಮಾವೇಶಗೊಂಡು ಸಹಾಯ, ಸಹಕಾರ, ದಾನಧರ್ಮಗಳೊಂದಿಗೆ ಆರಾಧನೆಯಲ್ಲಿ ತೊಡಗುವುದನ್ನು ಕಂಡು ನಾನು ಮೂಕವಿಸ್ಮಿತನಾಗಿದ್ದೆ. ಊರಿಗೆ ಸಂಪರ್ಕ ಸಾಧಿಸಬೇಕಾದಲ್ಲಿ ನಾಣ್ಯ ಪೆಟ್ಟಿಗೆ (Coin Box) ಗೆ ಹಣ ಹಾಕಿ ಮಾತನಾಡಬೇಕಿತ್ತು. ಅಂದು ಸೌದಿ ಅರೇಬಿಯಾದ ಒಂದು ರಿಯಲ್ ಹಣಕ್ಕೆ ಭಾರತದ ಒಂಭತ್ತು ರೂ. ಸಿಗುತ್ತಿತ್ತು. ನಮಗೆ ನೀಡಿದ ಕೊಠಡಿಯಲ್ಲಿ ನೆಲದಲ್ಲೇ ಹಾಸು ಹಾಕಿ ಮಲಗುವ ವ್ಯವಸ್ಥೆ ಅಂದಿತ್ತು. ಮೊದಲಿಗೆ ಮಕ್ಕಾ ಸಂದರ್ಶನ ನಡೆಸಿದ ನಾವು ಬಳಿಕ ಮದೀನಾವನ್ನು ತಲುಪಿ ಅಲ್ಲಿ ಪ್ರಾರ್ಥನೆಯನ್ನು ನಡೆಸಿ ಹಜ್ ವಿಧಿಗಳನ್ನು ಪೂರ್ಣಗೊಳಿಸಿ ಊರಿಗೆ ಮರಳಿದೆವು. ಊರಿಗೆ ಮರಳಿದ ಮೇಲೂ ನನಗೆ ಮಕ್ಕಾದ ಭಾವನಾತ್ಮಕ ಸೆಳೆತ ಕಡಿಮೆಯಾಗಿರಲಿಲ್ಲ. ಮತ್ತೆ ಮತ್ತೆ ಮಕ್ಕಾ ಸಂದರ್ಶಿಸಬೇಕೆಂಬ ಬಯಕೆ ಮುಂದುವರಿಯಿತು. ಅದರ ಫಲವಾಗಿ 2000ನೇ ಇಸವಿಯಲ್ಲಿ ಎರಡನೇ ಬಾರಿಗೆ ಹಜ್ ಯಾತ್ರೆ ಕೈಗೊಂಡೆ. ಆ ಸಂದರ್ಭದಲ್ಲಿ ಸೌದಿ ಅರೇಬಿಯಾದಲ್ಲಿ ಭಾರೀ ಬದಲಾವಣೆಗಳಾಗಿದ್ದವು, ಹೊಸ ಹೊಸ ಕಟ್ಟಡಗಳು ತಲೆ ಎತ್ತಿದ್ದವು. ನೆಲದಲ್ಲಿ ಮಲಗಬೇಕಾಗಿದ್ದ ಯಾತ್ರಾರ್ಥಿಗಳಿಗೆ ಮಂಚ ಮತ್ತು ಹಾಸಿಗೆ ಸೌಲಭ್ಯಗಳಿದ್ದವು. ಈ ಬಾರಿ ಊರಿನಿಂದಲೇ ಹೋಗುವಾಗ ಕುಚ್ಚಲು ಅಕ್ಕಿ ತೆಗೆದುಕೊಂಡು ಹೋಗಿ ನಾವೇ ಊಟ ತಯಾರಿಸಲು ವ್ಯವಸ್ಥೆ ಮಾಡಿದ್ದೆವು. ಊರಿಗೆ ಸಂಪರ್ಕ ಮಾಡಲು ಪ್ರೀಪೈಡ್ ಕಾರ್ಡ್ ಸಿಗುತ್ತಿತ್ತು. ಅದನ್ನು ಬಳಸಿ ಕರೆ ಮಾಡುತ್ತಿದ್ದೆವು. ಪೆಟ್ಟಿಗೆಗೆ ನಾಣ್ಯ ಹಾಕಬೇಕಾದ ಅಗತ್ಯವಿರಲಿಲ್ಲ. ಎರಡನೇ ಬಾರಿಗೆ ತೆರಳಿದಾಗ ನಾನು 80,000 ರೂ. ಮೊತ್ತ ಪಾವತಿಸಿದ್ದೆ.
ಬದಲಾದ ಸನ್ನಿವೇಶದಲ್ಲಿ 2006 ರಲ್ಲಿ ನಾನು ಮೂರನೇ ಬಾರಿಗೆ ಹಜ್ ಯಾತ್ರೆ ಕೈಗೊಂಡೆ. ಈ ಸಮಯದಲ್ಲಿ ಮತ್ತೆ ಭಾರೀ ಬದಲಾವಣೆಯಾದದ್ದನ್ನು ಗಮನಿಸಿದೆ. ಐದಾರು ಸಹ ಯಾತ್ರಾರ್ಥಿಗಳಿಗೆ ಒಂದು ಉತ್ತಮ ವ್ಯವಸ್ಥೆ ಇರುವ ಕೊಠಡಿಯನ್ನು ಒದಗಿಸಿದ್ದರು. ಊರಿನ ಅಡುಗೆಯನ್ನು ಅಲ್ಲೇ ತಯಾರಿಸಿ ಒದಗಿಸುವ ವ್ಯವಸ್ಥೆ ಇತ್ತು. ಸಂಪರ್ಕ ಸಾಧಿಸಲು ಮೊಬೈಲ್ ಫೋನ್ ವ್ಯವಸ್ಥೆ ಜಾರಿಗೆ ಬಂದಿತ್ತು. ದಾನದ ರೂಪದಲ್ಲಿ ನೀಡುವ ಮೇಕೆಯನ್ನು ಅಲ್ಲೇ ಹಂಚಬಹುದಿತ್ತು ಅಥವಾ ಅದರ ಮಾಂಸವನ್ನು ತೀವ್ರ ಹಸಿವಿನಿಂದ ಬಳಲುತ್ತಿರುವ ಆಫ್ರಿಕನ್ ಬಡರಾಷ್ಟಗಳ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದಕ್ಕಾಗಿ ನಾವು ನಿಗದಿತ ಮೊತ್ತವನ್ನು ಪಾವತಿಸಿದ್ದರೆ ಸಾಕಾಗಿತ್ತು. ಜನರ ಸುರಕ್ಷತೆಗೆ ಭಾರೀ ಕ್ರಮ ಕೈಗೊಳ್ಳಲಾಗಿತ್ತು. ಈ ರೀತಿ ಪ್ರತಿ ಸಲ ಹೋದಾಗಲೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಭಾರೀ ಸುಧಾರಣಾ ಕ್ರಮಗಳನ್ನು ಕಾಣಲು ನನಗೆ ಸಾಧ್ಯವಾಯಿತು. ಅದೇ ರೀತಿ ನಮ್ಮ ದೇಶದಿಂದ ಹೊರಡುವ ಸಂದರ್ಭದಲ್ಲೂ ಇಲ್ಲಿನ ಹೊಣೆಗಾರರು ಯಾತ್ರಾರ್ಥಿ ಸ್ನೇಹಿಯಾಗಿ ಸೇವಾರೂಪದ ಸಹಕಾರ ನೀಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಹಜ್ ಎನ್ನುವುದು ನಮ್ಮ ಎಲ್ಲಾ ಅಹಮಿಕೆಯನ್ನು ದೂರೀಕರಿಸಿ ಅಲ್ಲಾಹನ ಕಡೆಗೆ ತದೇಕಚಿತ್ತದಿಂದ ಮನಸ್ಸನ್ನು ಕೇಂದ್ರೀಕರಿಸುವ ಒಂದು ಆಧ್ಯಾತ್ಮಿಕ ಕ್ರಿಯೆಯಾಗಿದೆ ಎಂಬುದು ನನ್ನ ಭಾವನೆ.
ಅಬ್ದುಲ್ ಸಮದ್ ಹಾಜಿ ಪರ್ಲಡ್ಕ (ಬುತ್ತಿ ಸಮದಾಕ)
ಕೇವಲ ಮೂರೂವರೆ ಅಡಿ ಎತ್ತರದ ದೇಹ. ಹುಟ್ಟಿನಿಂದಲೇ ಗಿಡ್ಡ ದೇಹದ ಸಮದಾಕರಿಗೆ ಈಗ ಸುಮಾರು 74 ವರ್ಷ ಪ್ರಾಯ. ಪುತ್ತೂರು ಪರಿಸರದಲ್ಲಿ ಸಮದಾಕರ ಪರಿಚಯ ಇಲ್ಲದವರು ಕಡಿಮೆ. ಯಾವುದೇ ಗಟ್ಟಿಮುಟ್ಟಾದ ಕೆಲಸ ಮಾಡಲು ಇವರಿಗೆ ಅಸಾಧ್ಯ. ವಿವಾಹಿತರಾಗಿ ಎರಡು ಮಕ್ಕಳನ್ನು ಹೊಂದಿರುವ ಇವರಿಗೆ ಲಘುವಾದ ಕೆಲಸ ಮಾಡಿ ಅದರಲ್ಲಿ ಸಿಗುವ ಸಣ್ಣ ಸಂಬಳವೇ ಜೀವಾನಾಧಾರವಾಗಿತ್ತು. ಇಂತಹ ಸಮದಾಕಾ ಕೂರ್ನಡ್ಕ ಮಸೀದಿಯ ಮೌಲಾನಗಳಿಗೆ ಮಸೀದಿ ವ್ಯಾಪ್ತಿಯ ಮನೆಗಳಿಂದ ಊಟದ ಬುತ್ತಿ ತೆಗೆದುಕೊಂಡು ಕೊಡುವ ಕಾಯಕ ಮಾಡುತ್ತಿದ್ದರು.
ಅಂತಹ ಸಂದರ್ಭದಲ್ಲಿ ಅದೃಷ್ಟವಶಾತ್ ಹಜ್ ಗೆ ತೆರಳುವ ಸೌಭಾಗ್ಯ ಇವರಿಗೆ ಲಭಿಸಿತು. ಹಜ್ ನ ಕರೆ ಬಂದಾಗ ಬಡವನಿರಲಿ, ಬಲ್ಲಿದನಿರಲಿ ಅಲ್ಲಿಗೆ ತಲುಪಲೇ ಬೇಕು. ಅದೆಷ್ಟೋ ಮಂದಿ ಶ್ರೀಮಂತರೂ ತಮ್ಮಲ್ಲಿ ಸಾಕಷ್ಟು ಹಣವಿದ್ದರೂ ಹಜ್ ನ ಭಾಗ್ಯ ಸಿಗದೆ ಮರಣ ಹೊಂದಿದವರಿದ್ದಾರೆ. ಕೈಯಲ್ಲಿ ಬಿಡಿಗಾಸೂ ಇಲ್ಲದೆ ಅನಿರೀಕ್ಷಿತವಾಗಿ ಹಜ್ ಗೆ ತೆರಳಿ ಪವಿತ್ರ ಕರ್ಮ ನಿರ್ವಹಿಸಿದ ಉದಾಹರಣೆಗಳೂ ಅದೆಷ್ಟೋ ಇದೆ. ಅಂತಹ ಒಂದು ಉದಾಹರಣೆ ಈ ಸಮದ್ ಹಾಜಿಯವರದ್ದು. ಅವರಿಗೆ ಹೇಗೆ ಹಜ್ ನಿರ್ವಹಿಸಲು ಸಾಧ್ಯವಾಯಿತು ಎಂಬುದನ್ನು ಅವರ ಮಾತಿನಲ್ಲೇ ಕೇಳೋಣ.
ನನಗೆ ಆಗ 58 ವರ್ಷ ಪ್ರಾಯ. ನನ್ನ ದೈಹಿಕ ಕುಬ್ಜತೆಯಿಂದ ಕಷ್ಟದ ಕೆಲಸ ಮಾಡಲು ನನಗೆ ಅಸಾಧ್ಯವಾಗಿತ್ತು. ಕೆಲವು ವ್ಯಾವಹಾರಿಕ ಸಂಸ್ಥೆಗಳಲ್ಲಿ ಸಹಾಯಕನಾಗಿ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. 2008 ರ ವೇಳೆಯಲ್ಲಿ ಪುತ್ತೂರಿನ ಕೂರ್ನಡ್ಕದ ಮಸೀದಿಯಲ್ಲಿ ಅಲ್ಲಿನ ಗುರುಗಳಿಗೆ (ಉಸ್ತಾದರಿಗೆ) ಸ್ಥಳೀಯ ಮನೆಗಳಿಂದ ಊಟದ ಬುತ್ತಿ ತಂದು ಕೊಡುವ ಕೆಲಸ ಮಾಡುತ್ತಿದ್ದೆ. ಇದೇ ಕೆಲಸವನ್ನು ಬೇರೆ ಜಮಾಅತ್ ನಲ್ಲಿಯೂ ಮಾಡಿದ್ದ ಪರಿಣಾಮ ಜನ ನನ್ನನ್ನು ಬುತ್ತಿ ಸಮದಾಕ ಎಂದು ಗುರುತಿಸುತ್ತಿದ್ದರು. ನನಗೆ ಆಗ ಸಿಗುತ್ತಿದ್ದ ಮಾಸಿಕ ಸಂಬಳ ಕೇವಲ 750 ರೂಪಾಯಿ. ಇದರಲ್ಲೇ ನನ್ನ ಕುಟುಂಬದ ಜೀವನ ಸಾಗಬೇಕಿತ್ತು. ದಾನಿಗಳು ನನಗೆ ನೆರವು ನೀಡುತ್ತಿದ್ದರು. ಇನ್ನೊಬ್ಬರಿಗೆ ಹೊರೆಯಾಗದೆ ದುಡಿದು ತಿನ್ನಬೇಕೆಂಬ ನಿಲುವು ನನ್ನದಾಗಿತ್ತು. ಇಂತಹ ಸಂದರ್ಭದಲ್ಲಿ ನನಗೆ ಹಜ್ ನಿರ್ವಹಿಸಬೇಕೆಂಬ ಆಸೆ ಮನದಲ್ಲಿ ಚಿಗುರೊಡೆಯಿತು. ನನಗೆ ದಾನಿಗಳು ನೀಡುತ್ತಿದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ನಾನು ತೆಗೆದಿರಿಸಿದ್ದೆ. ಅದೊಂದು ದಿನ ಹಜ್ ಯಾತ್ರೆಗಾಗಿ ಅರ್ಜಿ ಸಲ್ಲಿಸುವ ಬಗ್ಗೆ ಮಸೀದಿಯಲ್ಲಿ ನನಗೆ ಹೇಳಿದರು. ನಾನು ಬೇರೆಯವರ ನೆರವಿನಿಂದ ಅರ್ಜಿ ಸಲ್ಲಿಸಿದೆ.
ಆಗ 2008ನೇ ಇಸವಿ. ಹಜ್ ಗೆ ಅರ್ಜಿ ಸಲ್ಲಿಸಿದವರ ಪೈಕಿ ನಿಗದಿತ ಕೋಟಾದ ಯಾತ್ರಿಕರನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಿದ್ದ ಸಮಯ. ಹಲವು ಸಲ ಅರ್ಜಿ ಸಲ್ಲಿಸಿದರೂ ಅದೆಷ್ಟೋ ಮಂದಿಗೆ ಅವಕಾಶ ಸಿಗುತ್ತಿರಲಿಲ್ಲ. ಅನೇಕ ಮಂದಿ ನಿರಾಶರಾಗುತ್ತಿದ್ದರು. ಕೈಯಲ್ಲಿ ಹಣ ಹಿಡಿದುಕೊಂಡು ಸತತವಾಗಿ ಅರ್ಜಿ ಸಲ್ಲಿಸಿದರೂ ಅಯ್ಕೆಯಾಗದೆ ಬಳಿಕ ತಮ್ಮ ಆಸೆ ಈಡೇರದೇನೇ ಮರಣ ಹೊಂದಿದವರೂ ಇದ್ದಾರೆ.
ಅದೇನು ಆಶ್ಚರ್ಯನೋ ? ನಾನು ಅರ್ಜಿ ಹಾಕಿದ ಪ್ರಥಮ ಪ್ರಯತ್ನದಲ್ಲೇ ನಾನು ಆಯ್ಕೆಯಾಗಿದ್ದೇನೆ ಎಂಬ ಮಾಹಿತಿ ಬಂತು. ಬಹಳಷ್ಟು ಜನ ನನ್ನಲ್ಲಿ ಸಮದಾಕ ನಿಮ್ಮ ನಸೀಬು ಚೆನ್ನಾಗಿದೆ, ದೇವರು ನಿಮಗೆ ಅವಕಾಶ ಕೊಟ್ಟಿದ್ದಾನೆ. ಅವನೇ ದಾರಿ ತೋರಿಸುತ್ತಾನೆ. ಬಿಡಬೇಡಿ. ಹಣ ಆಗಿಯೇ ಆಗುತ್ತದೆ ಎಂದು ಧೈರ್ಯ ತುಂಬಿದರು. ಆದರೆ ನನಗೆ ಭಯವಾಯಿತು. ಸುಮಾರು ಒಂದು ಲಕ್ಷದ ಎಂಟು ಸಾವಿರ ರೂ. ಮೊತ್ತ ಬೇಕಿತ್ತು. ನಿಗದಿತ ದಿನಾಂಕಕ್ಕೆ ಕಟ್ಟಬೇಕಿತ್ತು. ಕೂರ್ನಡ್ಕ ಜಮಾಅತಿನ ಬಹುತೇಕ ಎಲ್ಲರೂ ತುಂಬಾ ಖುಷಿಯಿಂದ ನನಗೆ ಅವರೇ ಮುಂದೆ ನಿಂತು ಸಹಾಯ ಮಾಡಿದರು.
ಬುತ್ತಿ ಸಮದಾಕ ಹಜ್ ಗೆ ಆಯ್ಕೆಯಾಗಿದ್ದಾರೆ ಎಂದು ಸಂತಸದಿಂದ ನನಗೆ ಹಲವರು ದಾನ ನೀಡಿದರು. ನನ್ನ ಸಂಬಂಧಿಕರು ಕೂಡಾ ನೆರವಾದರು. ಅನೇಕ ಮಂದಿ ಸಹಾಯ ಮಾಡಿ ನನ್ನ ಹಣವನ್ನು ಪಾವತಿಸಲು ನೆರವಾದರು. ನಾನು ಕನಸಿನಲ್ಲಿಯೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನಂತಹ ಬಡವನಿಗೆ, ದೈಹಿಕ ನ್ಯೂನತೆಯಿರುವ ವ್ಯಕ್ತಿಗೆ ಪವಿತ್ರ ಮಕ್ಕಾ ಯಾತ್ರೆ ಮಾಡಲು ಸಾಧ್ಯವಾಗುತ್ತದೆ ಎಂದು ಎಣಿಸಿರಲಿಲ್ಲ. ಆದರೆ 2008 ರ ಹಜ್ ಸಮಾವೇಶದಲ್ಲಿ ಮಕ್ಕಾದ ಮಣ್ಣಿನಲ್ಲಿ ಜಗತ್ತಿನ ಲಕ್ಷಾಂತರ ಹಜ್ಜಾಜ್ ಗಳೊಂದಿಗೆ ನಾನೂ ಸೇರಿದ್ದೆ. ಮೂರೂವರೆ ಅಡಿ ಎತ್ತರದ ನಾನು ಆರಡಿ ಎತ್ತರದ ವಿದೇಶಿಯರನ್ನು ಕಣ್ಣೆತ್ತಿ ನೋಡಬೇಕಿತ್ತು. ಕಅಬಾ ಕಂಡು ನಾನು ಪುನೀತನಾದೆ. ಊಟದ ಬುತ್ತಿಯನ್ನು ಹೊತ್ತು ಹೊತ್ತಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದ ನನಗೆ ಅಲ್ಲಾಹು ಕರುಣೆ ತೋರಿದ್ದ. ಆ ದಿನ ನನ್ನ ಹುಟ್ಟು ಸಾರ್ಥಕ ಎನಿಸಿತು.
ಹಝ್ರತ್ ಇಬ್ರಾಹಿಂ ಅಲೈಸ್ಸಲಾಂ ಅವರಿಂದ ನಿರ್ಮಿಸಲ್ಪಟ್ಟ ಕಅಬಾ ಸಂದರ್ಶಿಸಲು ನನಗೆ ಸಾಧ್ಯವಾದುದೇ ಒಂದು ಅಚ್ಚರಿ. ಇದಕ್ಕೆ ನೆರವಾದವರಿಗೆ ನಾನು ಸದಾ ಅಭಾರಿ.
ಹಾಜಿ ಎಂ.ಟಿ. ಮೊಹಮ್ಮದ್ ಕಲಾಯಿ
ಮಂಗಳೂರು ತಾಲೂಕಿನ ಮಲ್ಲೂರು ಎಂಬ ಗ್ರಾಮೀಣ ಪ್ರದೇಶದಲ್ಲಿ ನಾನು 1937 ರಲ್ಲಿ ಜನಿಸಿದೆ. ಬಳಿಕ 1959ರಲ್ಲಿ ಬಂಟ್ವಾಳ ತಾಲೂಕಿನ ಅಮ್ಮಂಜೆ ಗ್ರಾಮದ ಕಲಾಯಿ ತಾಳಿಪಾಡಿ ಎಂಬ ಗ್ರಾಮೀಣ ಪ್ರದೇಶದಕ್ಕೆ ನನ್ನ ವಾಸ್ತವ್ಯವನ್ನು ಬದಲಾಯಿಸಿದೆ.
ನನ್ನ ಹುಟ್ಟೂರು ಮಲ್ಲೂರು ಮತ್ತು ಬದುಕು ಬದಲಾಯಿಸಿದ ಊರು ತಾಳಿಪಾಡಿ ಸೇರಿ ನನ್ನ ಹೆಸರಿನ ಮಂದೆ ಎಂ.ಟಿ. ಎಂಬ ಅಕ್ಷರ ನನ್ನ ಗುರುತಾಯಿತು. ನನಗೆ ಈಗ 88 ವರ್ಷ ಪ್ರಾಯ. ಬೀಡಿ ಗುತ್ತಿಗೆದಾರನಾಗಿದ್ದ ನನಗೆ ಪವಿತ್ರ ಹಜ್ ಯಾತ್ರೆ ಮಾಡಬೇಕೆಂಬುದು ನನ್ನ ಬದುಕಿನ ಮಹದಾಸೆಯಾಗಿತ್ತು. ನಾನು ಮತ್ತು ನನ್ನ ಪತ್ನಿ ಜೊತೆಯಾಗಿ ಹಜ್ ಗೆ ತೆರಳಬೇಕೆಂಬುದು ನಮ್ಮಿಬ್ಬರ ಆಕಾಂಕ್ಷೆಯಾಗಿತ್ತು. ಆದರೆ ನನ್ನ ಜೀವನದ ಯೌವನದಲ್ಲಾಗಲೀ, ಮಧ್ಯವಯಸ್ಸಿನಲ್ಲಾಗಲೀ ಆ ಅಪೂರ್ವ ಅವಕಾಶ ಒದಗಿ ಬಂದಿರಲಿಲ್ಲ.
ಆದಾಗ್ಯೂ ನಾನು ಆ ಆಸೆಯನ್ನು ಕೈಬಿಟ್ಟಿರಲಿಲ್ಲ. ಒಂದಲ್ಲಾ ಒಂದು ದಿನ ನಮಗಿಬ್ಬರಿಗೂ ದೇವನು ಹಜ್ ಯಾತ್ರೆಯ ಸೌಭಾಗ್ಯ ಒದಗಿಸುತ್ತಾನೆ ಎಂಬ ನಂಬಿಕೆ ಪ್ರಬಲವಾಗಿತ್ತು. 1998 ರಲ್ಲಿ ನನ್ನ ಆ ಬಹುಕಾಲದ ಕನಸು ನನಸಾಯಿತು.
ಹಜ್ ಯಾತ್ರೆಗೆಂದು ನಾನು ನನ್ನ ದುಡಿಮೆಯಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ಉಳಿತಾಯ ಮಾಡಿಕೊಂಡಿದ್ದೆ. ಸರಕಾರಿ ಕೋಟಾದಲ್ಲಿ ಹಜ್ ಗೆ ತೆರಳಬೇಕಾದರೆ ಬಹಳ ಕಟ್ಟುನಿಟ್ಟಿನ ನಿಯಮಗಳಿದ್ದವು. ಅರ್ಜಿ ಹಾಕಿದ ಎಲ್ಲರಿಗೂ ಅವಕಾಶ ಸಿಗುತ್ತಿರಲಿಲ್ಲ. ಸೀಮಿತ ಸಂಖ್ಯೆಯ ಅರ್ಜಿದಾರರಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಅರ್ಜಿ ಹಾಕಿ ಹಲವು ವರ್ಷ ಕಾದರೂ ಅವಕಾಶ ಸಿಗದ ಉದಾಹರಣೆಗಳಿದ್ದವು. ಇಂತಹ ಸಂದರ್ಭದಲ್ಲಿ ನಾನು ಮಂಗಳೂರಿನ ಅಂದಿನ ಖಾಸಗಿ ಹಜ್ ಪ್ರವಾಸಿಗರ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದ ದಿ. ಹೈದರ್ ಹಾಜಿಯವರನ್ನು ಸಂಪರ್ಕಿಸಿದೆ.
ಅವರು ನನಗೆ ಪೂರ್ಣ ಮಾಹಿತಿ ನೀಡಿ ಯಾತ್ರೆಗೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಅದರಂತೆ 1998ರಲ್ಲಿ ನಾನು ಮತ್ತು ನನ್ನ ಪತ್ನಿಯ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನೀಡಿದೆವು. ನಮ್ಮ ದಾಖಲೆಗಳು ಯಾವುದೇ ಸಮಸ್ಯೆಗಳಿಲ್ಲದೆ ಯಾತ್ರೆಗೆ ಸರಿಹೊಂದಿತು. ಅದರಂತೆ ಆ ವರ್ಷ ನಾನು ಮತ್ತು ನನ್ನ ಪತ್ನಿ ಖುಲ್ಸುಮ್ಮ ಇಬ್ಬರೂ ಅಪಾರ ಸಂತಸ - ಸಂಭ್ರಮದೊಂದಿಗೆ ಹಜ್ ಗೆ ತೆರಳಲು ಸಾಧ್ಯವಾಯಿತು .
ಸ್ವಾರಸ್ಯಕರ ವಿಷಯವೆಂದರೆ ಅಂದು ಹಜ್ ಯಾತ್ರೆಗೆ ಒಬ್ಬರಿಗೆ ಸುಮಾರು 65,000 ರೂ. ಖರ್ಚು ಭರಿಸಬೇಕಿತ್ತು. ನಮಗಿಬ್ಬರಿಗೂ 1,30,000 ರೂ. ಬೇಕಿತ್ತು. ಆದರೆ ನನ್ನಲ್ಲಿ ಇಬ್ಬರಿಗೂ ಸೇರಿ ಒಂದು ಲಕ್ಷದಷ್ಟು ಮೊತ್ತ ಮಾತ್ರ ಇತ್ತು. ಇನ್ನೂ ಮೂವತ್ತು ಸಾವಿರ ರೂಪಾಯಿ ಬೇಕಿತ್ತು. ಹಜ್ ನ ವೆಚ್ಚಕ್ಕಾಗಿ ಸಾಲ ಮಾಡುವಂತಿರಲಿಲ್ಲ. ಯಾರ ಬಳಿಯೂ ಕೇಳುವಂತಿರಲಿಲ್ಲ. ನಮ್ಮ ಪ್ರಾಮಾಣಿಕ ದುಡಿಮೆಯ ಹಣ ಮಾತ್ರ ಬಳಸಬೇಕಿತ್ತು. ನನ್ನ ಜಾಗದಲ್ಲಿದ್ದ ಕೆಲವು ಬಲಿತ ಮರಗಳನ್ನು ಮಾರಾಟ ಮಾಡುವ ನಿರ್ಧಾರ ಮಾಡಿದೆ. ಸುಮಾರು 30,000 ರೂಪಾಯಿಯನ್ನು ಮರಗಳ ಮಾರಾಟದಿಂದ ಗಳಿಸುವ ಮೂಲಕ ಹಜ್ ಯಾತ್ರೆಗೆ ಬೇಕಾದ ಹಣವನ್ನು ಹೊಂದಿಸಿದ್ದು ಅಂದಿನ ನನ್ನ ಬದುಕಿನ ಮರೆಯಲಾಗದ ಘಟನೆ.
ಅಂದು ಮಂಗಳೂರಿನಿಂದ ಬಸ್ ಮೂಲಕ ಮುಂಬೈಗೆ ತೆರಳಿ ಅಲ್ಲಿಂದ ಸೌದಿ ಅರೇಬಿಯಾದ ಜಿದ್ದಾಕ್ಕೆ ವಿಮಾನ ಮೂಲಕ ತಲುಪಿದೆವು. ಸುಮಾರು 30 ದಿನ ಮಕ್ಕಾದಲ್ಲಿದ್ದೆವು. ಹರಮ್ ನ ಸಮೀಪದಲ್ಲೇ ವಸತಿ ವ್ಯವಸ್ಥೆಯಿತ್ತು. ಮುಂಬೈ ಶೈಲಿಯ ಆಹಾರದ ವ್ಯವಸ್ಥೆ ಒದಗಿಸಿದ್ದರು. ನನ್ನ ಒಬ್ಬ ಮಗ ಸೌದಿ ಅರೇಬಿಯಾದಲ್ಲಿ ಒಂದು ಸಣ್ಣ ಸಂಬಳದ ಕೆಲಸದಲ್ಲಿದ್ದ. ಆದರೆ ಆತ ನಮ್ಮ ಹಜ್ ಯಾತ್ರೆಯ ಸಮಯದಲ್ಲಿ ಮಕ್ಕಾಕ್ಕೆ ಬಂದು ನಮ್ಮಿಬ್ಬರ ಸೇವೆಯನ್ನು ಮಾಡಿದ. ನನಗೆ ಆ ಸಮಯದಲ್ಲಿ 61 ವರ್ಷ ಪ್ರಾಯ. ನನಗೆ ಜಬಲ್ ನ್ನೂರು ಬೆಟ್ಟ ಹತ್ತಬೇಕೆಂಬ ತುಡಿತ. ಅದಕ್ಕಾಗಿ ಪ್ರಯತ್ನ ಮಾಡಿ ನಾನು ಯಶಸ್ವಿಯಾದೆ. ನನ್ನ ಮಡದಿಯೂ ಸಾಥ್ ನೀಡಿದಳು. ಅಂದಿನ ಆ ಹಜ್ ಯಾತ್ರೆಯನ್ನು ನೆನೆದಾಗ ಈಗಲೂ ರೋಮಾಂಚನವಾಗುತ್ತದೆ. ಮತ್ತೆ ಮತ್ತೆ ಆ ಕಡೆಗೆ ಎನೋ ಒಂದು ಸೆಳೆತ, ಆಕರ್ಷಣೆ. ಆದರೆ ಮನಸ್ಸು ಹೇಳಿದರೂ ಮುಪ್ಪಾದ ದೇಹ ಅವಕಾಶ ಕೊಡಬೇಕಲ್ವ ? ನನ್ನ ಜೀವನದ ಸಂಗಾತಿ ಪ್ರಿಯ ಪತ್ನಿ ಖುಲ್ಸುಮ್ಮಳನ್ನು ನಾನು 2016 ರಲ್ಲಿ ಕಳೆದುಕೊಂಡೆ. ಇಂದಿಗೂ, ಈ ಇಳಿ ವಯಸ್ಸಿನಲ್ಲೂ ನಮ್ಮಿಬ್ಬರ ಹಜ್ ಯಾತ್ರೆಯ ನೆನಪು ಮನಸ್ಸಿಗೆ ಉಲ್ಲಾಸ ನೀಡುತ್ತಿದೆ.
ಲೇಖನ :- ಅಬ್ದುಲ್ ರಝಾಕ್ ಅನಂತಾಡಿ







