ಕಳವಳ ಹೆಚ್ಚಿಸಿದ ನಿಫಾ ವೈರಸ್ ಸೋಂಕು: ಏನಿದು? ರೋಗ ಲಕ್ಷಣಗಳೇನು?

ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಸೋಂಕು ಚೀನಾ ಹಾಗೂ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಕಳವಳ ಹೆಚ್ಚಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಕಾರ್ಯಾಚರಣೆಗಳನ್ನು ಬಿಗಿಗೊಳಿಸಲು ಪ್ರೇರೇಪಿಸಿದೆ. 2025 ಡಿಸೆಂಬರ್ ನಿಂದ ಪಶ್ಚಿಮ ಬಂಗಾಳದಲ್ಲಿ ಎರಡು ದೃಢಪಟ್ಟ ನಿಫಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಭಾರತದ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಸಚಿವಾಲಯವು ಸೋಂಕಿತ ವ್ಯಕ್ತಿಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ದೃಢಪಟ್ಟ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 196 ಸಂಪರ್ಕಿತರಲ್ಲಿ ಯಾರಿಗೂ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಮತ್ತು ಎಲ್ಲರೂ ವೈರಸ್ ಗೆ ನಕಾರಾತ್ಮಕ ಫಲಿತಾಂಶ ಪಡೆದಿದ್ದಾರೆ. ಪರಿಸ್ಥಿತಿ ನಿರಂತರ ಮೇಲ್ವಿಚಾರಣೆಯಲ್ಲಿದ್ದು, ಅಗತ್ಯವಿರುವ ಎಲ್ಲಾ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
►ಏನಿದು ನಿಫಾ ವೈರಸ್?
ನಿಫಾ ವೈರಸ್ (NiV) ಒಂದು ಪ್ರಾಣಿಜನ್ಯ ವೈರಸ್ ಆಗಿದ್ದು, ಇದು ಮುಖ್ಯವಾಗಿ ಬಾವಲಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಬಾವಲಿಗಳ ಲಾಲಾರಸ, ಮೂತ್ರ ಅಥವಾ ಮಲದ ಮೂಲಕ ವೈರಸ್ ಹರಡಬಹುದು. ಕಲುಷಿತ ಆಹಾರ ಉತ್ಪನ್ನಗಳ ಸೇವನೆಯಿಂದ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸಹ ಸೋಂಕು ಹರಡುವ ಸಾಧ್ಯತೆ ಇದೆ. ನಿಫಾ ವೈರಸ್ ಮಾರಕವಾಗಬಹುದಾದದು.
ವೈರಸ್ ಸಾಮಾನ್ಯವಾಗಿ ಮಾನವ ದೇಹದಲ್ಲಿ ಐದು ರಿಂದ 14 ದಿನಗಳವರೆಗೆ ಇಂಕ್ಯುಬೇಷನ್ ಅವಧಿಯಲ್ಲಿದ್ದು, ಮೂರರಿಂದ ನಾಲ್ಕು ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಇದು ಮಾನವರಲ್ಲಿ ತೀವ್ರ ಉಸಿರಾಟದ ತೊಂದರೆಗಳು ಹಾಗೂ ನರಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ತೀವ್ರ ಪ್ರಕರಣಗಳಲ್ಲಿ ಜ್ವರ ಮತ್ತು ತಲೆನೋವಿನಿಂದ ಆರಂಭವಾಗಿ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ) ಉಂಟಾಗಬಹುದು ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ಹಾಗೂ ನಾಗಾಸಾಕಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಖ್ವಾಝಾ ಅಬ್ಬಾಸ್ ತಿಳಿಸಿದ್ದಾರೆ.
ಸೆಳವು ಮತ್ತು ಮಾನಸಿಕ ಗೊಂದಲವೂ ರೋಗ ಲಕ್ಷಣಗಳಾಗಿದ್ದು, ತೀವ್ರ ಪ್ರಕರಣಗಳಲ್ಲಿ ರೋಗಿಗಳು 24 ರಿಂದ 48 ಗಂಟೆಗಳೊಳಗೆ ಕೋಮಾ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ.
ನಿಫಾ ವೈರಸ್ ಸೋಂಕಿನ ಪ್ರಕರಣ ಮರಣ ಪ್ರಮಾಣ ಶೇಕಡಾ 40 ರಿಂದ 75ರ ನಡುವೆ ಇದೆ ಎಂದು ಅಬ್ಬಾಸ್ ಹೇಳಿದ್ದಾರೆ. ಆದಾಗ್ಯೂ, ವೈರಸ್ ನ ಮೂಲ ಸಂತಾನೋತ್ಪತ್ತಿ ಸಂಖ್ಯೆ (R₀) ಸಾಮಾನ್ಯವಾಗಿ ಒಂದಕ್ಕಿಂತ ಕಡಿಮೆ ಇರುವುದರಿಂದ, ಮಾನವನಿಂದ ಮಾನವನಿಗೆ ಸೀಮಿತವಾಗಿ ಮಾತ್ರ ಹರಡುತ್ತದೆ. ಇದರಿಂದ ವೈರಸ್ ವ್ಯಾಪಕ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ.
►ಹಿಂದಿನ ಪ್ರಕರಣಗಳು
1998ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಹಂದಿ ಸಾಕಾಣಿಕೆದಾರರು ಮತ್ತು ಕಟುಕರು ಸೋಂಕಿತ ಹಂದಿಗಳಿಂದ ನಿಫಾ ವೈರಸ್ ಗೆ ತುತ್ತಾಗಿದ್ದರು. ಕನಿಷ್ಠ 250 ಮಂದಿ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 100ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದರು.
2014ರಲ್ಲಿ ಫಿಲಿಪೈನ್ಸ್‌ನಲ್ಲಿ ಕುದುರೆಗಳನ್ನು ಕೊಲ್ಲುವುದು ಹಾಗೂ ಸೋಂಕಿತ ಕುದುರೆ ಮಾಂಸ ಸೇವನೆಯೊಂದಿಗೆ ಸಂಬಂಧಿಸಿದ ನಿಫಾ ವೈರಸ್ ಪ್ರಕರಣಗಳು ವರದಿಯಾಗಿದ್ದವು.
2001ರಿಂದ ದಕ್ಷಿಣ ಏಷ್ಯಾದಲ್ಲಿ, ವಿಶೇಷವಾಗಿ ಬಾಂಗ್ಲಾದೇಶ ಮತ್ತು ಭಾರತದಲ್ಲಿ ವಿರಳವಾದರೂ ಪುನರಾವರ್ತಿತ ನಿಫಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಬಾಂಗ್ಲಾದೇಶದಲ್ಲಿ ಕಲುಷಿತ ಕಚ್ಚಾ ತಾಳೆ ರಸ ಸೇವನೆ, ಸೋಂಕಿತ ವ್ಯಕ್ತಿಗಳ ಸ್ರವಿಸುವಿಕೆ ಹಾಗೂ ವಿಸರ್ಜನೆಗಳೊಂದಿಗೆ ನಿಕಟ ಸಂಪರ್ಕ, ಮತ್ತು ರೋಗಿಗಳನ್ನು ಆರೈಕೆ ಮಾಡುವ ಸಂದರ್ಭಗಳಲ್ಲಿ ಸೋಂಕು ಹರಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
WHO ಪ್ರಕಾರ, ಭಾರತದಲ್ಲಿ ಮೊದಲ ನಿಫಾ ಪ್ರಕರಣಗಳು 2007ರಲ್ಲಿ ಪಶ್ಚಿಮ ಬಂಗಾಳದಲ್ಲಿ ದಾಖಲಾಗಿದ್ದವು. 2001ರಲ್ಲಿ ರಾಜ್ಯದ ಸಿಲಿಗುರಿ ನಗರದಲ್ಲಿ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಹರಡಿದ್ದು, ಅಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಶೇಕಡಾ 75ರಷ್ಟು ಆಸ್ಪತ್ರೆ ಸಿಬ್ಬಂದಿ ಅಥವಾ ಸಂದರ್ಶಕರಲ್ಲೇ ಕಂಡುಬಂದಿತ್ತು.
2018ರಲ್ಲಿ ಕೇರಳದಲ್ಲಿ ನಿಫಾ ಸೋಂಕಿನಿಂದ ಡಝನ್ ಗಟ್ಟಲೆ ಸಾವುಗಳು ವರದಿಯಾಗಿದ್ದು, ಈ ಪ್ರದೇಶವನ್ನು ಈಗ ವೈರಸ್ ಗೆ ಜಗತ್ತಿನ ಅತ್ಯಧಿಕ ಅಪಾಯ ಪ್ರದೇಶವೆಂದು ಪರಿಗಣಿಸಲಾಗಿದೆ.
ಭಾರತದಲ್ಲಿ ಸೋಂಕು ಹರಡುವ ನಿಖರ ಕಾರಣಗಳು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಕೆಲ ವೈದ್ಯಕೀಯ ತಜ್ಞರು ಬಾವಲಿಗಳ ಲಾಲಾರಸ ಅಥವಾ ಮೂತ್ರದಿಂದ ಕಲುಷಿತಗೊಂಡ ಹಣ್ಣುಗಳ ಸೇವನೆಯಿಂದ ಸೋಂಕು ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ, ವೈರಸ್ ಪ್ರಾಥಮಿಕವಾಗಿ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ; ಕೆಲ ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಹರಡುವ ಸಾಧ್ಯತೆ ಇದೆ.
ಅಬ್ಬಾಸ್ ಅವರ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಕಂಡುಬಂದ ಸೋಂಕಿನ ಮೂಲ ಕುರಿತು ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ದೃಢಪಟ್ಟ ಎರಡು ಪ್ರಕರಣಗಳೂ ಒಂದೇ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಲ್ಲಿ ಕಂಡುಬಂದಿರುವುದರಿಂದ, ಸೋಂಕಿತ ಆದರೆ ರೋಗನಿರ್ಣಯವಾಗದ ರೋಗಿಯಿಂದ ಆಸ್ಪತ್ರೆಯೊಳಗಿನ ಹರಡುವಿಕೆಯ ಸಾಧ್ಯತೆಯನ್ನು ಇದು ಸೂಚಿಸುತ್ತದೆ.
►ಇತ್ತೀಚಿನ ಸಾಂಕ್ರಾಮಿಕವನ್ನು ಹೇಗೆ ನಿರ್ವಹಿಸಲಾಗುತ್ತಿದೆ?
2007ರ ನಂತರ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾದ ಮೊದಲ ನಿಫಾ ಪ್ರಕರಣಗಳಾಗಿರುವುದರಿಂದ ಇತ್ತೀಚಿನ ಸಾಂಕ್ರಾಮಿಕ ಮಹತ್ವ ಪಡೆದಿದೆ. ವರ್ಧಿತ ಕಣ್ಗಾವಲು, ಪ್ರಯೋಗಾಲಯ ಪರೀಕ್ಷೆಗಳು ಹಾಗೂ ಕ್ಷೇತ್ರ ತನಿಖೆಗಳನ್ನು ಕೈಗೊಳ್ಳಲಾಗಿದ್ದು, ಸಕಾಲಿಕ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಡಿಸೆಂಬರ್‌ನಿಂದ ಇದುವರೆಗೆ ಎರಡಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
►ವೈರಸ್ ಗೆ ಲಸಿಕೆ ಇದೆಯೇ?
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನಿಫಾ ವೈರಸ್ ಸೋಂಕಿಗೆ ಪ್ರಸ್ತುತ ಯಾವುದೇ ಅನುಮೋದಿತ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಬಾಂಗ್ಲಾದೇಶದಲ್ಲಿ ನಿಫಾ ವೈರಸ್ ಲಸಿಕೆಯ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸುತ್ತಿದ್ದು, 2025 ಡಿಸೆಂಬರ್‌ನಲ್ಲಿ ಎರಡನೇ ಹಂತದ ಪ್ರಯೋಗಗಳನ್ನು ಆರಂಭಿಸಿದೆ.
ಅನುಮೋದಿತ ಲಸಿಕೆಗಳಿಲ್ಲದ ಹಿನ್ನೆಲೆಯಲ್ಲಿ, ವೈದ್ಯರು ರಿಬಾವಿರಿನ್‌ನಂತಹ ಆಂಟಿವೈರಲ್ ಔಷಧಗಳೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 1999ರಲ್ಲಿ ಮಲೇಷ್ಯಾದಲ್ಲಿ ಸಂಭವಿಸಿದ ನಿಫಾ ಸಾಂಕ್ರಾಮಿಕದ ವೇಳೆ ರಿಬಾವಿರಿನ್ ಅನ್ನು ಕಡಿಮೆ ಸಂಖ್ಯೆಯ ರೋಗಿಗಳಲ್ಲಿ ಬಳಸಲಾಗಿತ್ತು; ಆದರೆ ಅದರ ಪರಿಣಾಮಕಾರಿತ್ವ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಹೇಳಿವೆ.
ಪ್ರಾಣಿಗಳ ಮೇಲೆ ನಡೆದ ಪ್ರಯೋಗಗಳಲ್ಲಿ ರೆಮ್‌ಡೆಸಿವಿರ್ ಔಷಧವು ನಿಫಾ ವೈರಸ್ ತಡೆಗೆ ಸಹಾಯಕವಾಗಿರುವುದು ಕಂಡುಬಂದಿದೆ. 2023ರಲ್ಲಿ ಕೇರಳದಲ್ಲಿ ನಿಫಾ ಸೋಂಕಿಗೆ ರೆಮ್‌ಡೆಸಿವಿರ್ ಬಳಸಲಾಗಿದ್ದು, ಪ್ರಕರಣ ಮರಣ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ.
►ನಿಫಾ ವೈರಸ್‌ಗಾಗಿ ತಪಾಸಣೆ ಕ್ರಮಗಳು
ಥೈಲ್ಯಾಂಡ್, ಇಂಡೋನೇಷ್ಯಾ, ನೇಪಾಳ ಮತ್ತು ಮಲೇಷ್ಯಾ ದೇಶಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿವೆ. ನಿಫಾ ಪೀಡಿತ ದೇಶಗಳಿಂದ ಬರುವ ವಿಮಾನಗಳಿಗೆ ವಿಶೇಷ ಪಾರ್ಕಿಂಗ್ ಬೇಗಳನ್ನು ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ವಲಸೆಗೆ ಮುನ್ನ ಆರೋಗ್ಯ ಘೋಷಣೆ ನಮೂನೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಥೈಲ್ಯಾಂಡ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಜ್ವರ ಹಾಗೂ ಇತರ ಲಕ್ಷಣಗಳ ಪತ್ತೆಗೆ ಥರ್ಮಲ್ ಸ್ಕ್ಯಾನರ್‌ಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿಯ ಕ್ರಮಗಳನ್ನು ಮಲೇಷ್ಯಾ, ಇಂಡೋನೇಷ್ಯಾ ಮತ್ತು ನೇಪಾಳವೂ ಜಾರಿಗೊಳಿಸಿವೆ. ಪಶ್ಚಿಮ ಬಂಗಾಳಕ್ಕೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮ್ಯಾನ್ಮಾರ್ ಸಲಹೆ ನೀಡಿದ್ದು, ಚೀನಾ ತನ್ನ ಗಡಿ ಪ್ರದೇಶಗಳಲ್ಲಿ ರೋಗ ತಡೆಗಟ್ಟುವ ಕ್ರಮಗಳನ್ನು ಬಲಪಡಿಸಿದೆ.
►ವೈರಸ್ ಹರಡುವಿಕೆಯನ್ನು ತಡೆಯುವ ಮಾರ್ಗಗಳು
ವಿಮಾನ ನಿಲ್ದಾಣಗಳ ತಪಾಸಣೆಯ ಜೊತೆಗೆ, ಉತ್ತಮ ನೈರ್ಮಲ್ಯ, ಸರಿಯಾದ ಗಾಳಿಚಲನೆ, ಜನಸಂದಣಿಯನ್ನು ತಪ್ಪಿಸುವುದು, ಅನಾರೋಗ್ಯದಲ್ಲಿದ್ದಾಗ ಮನೆಯಲ್ಲಿಯೇ ಇರುವುದು, ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ.
WHO ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಖರ್ಜೂರದ ರಸ ಮತ್ತು ಇತರ ತಾಜಾ ಆಹಾರಗಳಿಗೆ ಬಾವಲಿಗಳ ಪ್ರವೇಶವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ತಿಳಿಸಿದೆ. ರಸ ಸಂಗ್ರಹಣಾ ಸ್ಥಳಗಳಲ್ಲಿ ರಕ್ಷಣಾತ್ಮಕ ಹೊದಿಕೆಗಳನ್ನು ಬಳಸುವುದು, ಹೊಸದಾಗಿ ಸಂಗ್ರಹಿಸಿದ ಖರ್ಜೂರದ ರಸವನ್ನು ಕುದಿಸುವುದು, ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯುವುದು, ಬಾವಲಿಗಳು ಕಚ್ಚಿದ ಗುರುತು ಇರುವ ಹಣ್ಣುಗಳನ್ನು ಸೇವಿಸದಿರುವುದು ಅಗತ್ಯ ಎಂದು WHO ಸಲಹೆ ನೀಡಿದೆ.
ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ಕೊಲ್ಲುವ ಸಂದರ್ಭದಲ್ಲಿ ಕೈಗವಸುಗಳು ಹಾಗೂ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಬೇಕು. ಆರೋಗ್ಯ ವ್ಯವಸ್ಥೆಗಳಲ್ಲಿ ವೈರಸ್ ಹರಡುವಿಕೆಯನ್ನು ತಡೆಯಲು ಪ್ರಮಾಣಿತ ಮುನ್ನೆಚ್ಚರಿಕೆಗಳ ಜೊತೆಗೆ ಸಂಪರ್ಕ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಫಾ ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಅಸುರಕ್ಷಿತ ದೈಹಿಕ ಸಂಪರ್ಕವನ್ನು ತಪ್ಪಿಸಬೇಕು ಹಾಗೂ ರೋಗಿಗಳನ್ನು ಭೇಟಿ ಮಾಡಿದ ನಂತರ ಅಥವಾ ಆರೈಕೆ ಮಾಡಿದ ಬಳಿಕ ನಿಯಮಿತವಾಗಿ ಕೈ ತೊಳೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.







