MSME ಇಂಗಾಲ ಮುಕ್ತಗೊಳಿಸಲು ನೀತಿ ಆಯೋಗ ಕರೆ; ಹಸಿರು ಪರಿವರ್ತನೆಗೆ ಸರಕಾರ ಕೈಗೊಂಡ ಕ್ರಮಗಳೇನು?

ಸಾಂದರ್ಭಿಕ ಚಿತ್ರ | Photo Credit : freepik
ಶ್ರೀಮಂತ ಪಾಶ್ಚಿಮಾತ್ಯ ದೇಶಗಳು ಪರಿಸರ ಸ್ನೇಹಿ ಅಲ್ಲದ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸುವುದು ಅಥವಾ ಅವುಗಳ ಆಮದುಗಳನ್ನು ರದ್ದುಪಡಿಸುವುದು ಹೆಚ್ಚಾಗಿದೆ. ಹೀಗಿರುವಾಗ, ರಫ್ತುದಾರರು ಹಸಿರು ಉತ್ಪನ್ನ ಅವಶ್ಯಕತೆಗಳನ್ನು ಪೂರೈಸಲು ನೆರವಾಗುವ ಉದ್ದೇಶದಿಂದ, ಭಾರತದ ವಿಶಾಲವಾದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯವನ್ನು ಇಂಗಾಲರಹಿತಗೊಳಿಸಲು ಹೊಸ ಕಾರ್ಯವಿಧಾನಕ್ಕೆ ನೀತಿ ಆಯೋಗ ಕರೆ ನೀಡಿದೆ.
ಜ. 22ರ ವರದಿಯಲ್ಲಿ, ಸರಕಾರದ ಚಿಂತಕರ ಚಾವಡಿ ರಾಷ್ಟ್ರೀಯ ಯೋಜನಾ ನಿರ್ವಹಣಾ ಸಂಸ್ಥೆ (NPMA) ಸ್ಥಾಪನೆ, ಕಾರ್ಯಸಾಧ್ಯತಾ ಅಂತರ ನಿಧಿ (VGF) ಒದಗಿಕೆ, MSMEಗಳಿಗೆ ಮೇಲ್ಛಾವಣಿ ಸೌರ ಯೋಜನೆ ರೂಪಣೆ ಮತ್ತು ಸ್ವಚ್ಛ ಉತ್ಪಾದನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಕ್ಲಸ್ಟರ್ಗಳನ್ನು ಗುರುತಿಸುವುದನ್ನು ಪ್ರಸ್ತಾಪಿಸಿದೆ. ಭಾರತದ ರಫ್ತಿನಲ್ಲಿ 45%, ಆರ್ಥಿಕ ಉತ್ಪಾದನೆಯಲ್ಲಿ 30% ಕೊಡುಗೆ ನೀಡುವ ಮತ್ತು ಸುಮಾರು 330 ಮಿಲಿಯನ್ ಜನರಿಗೆ ಉದ್ಯೋಗ ನೀಡುವ ಈ ವಲಯಕ್ಕೆ ಈ ಪ್ರಯತ್ನ ನಿರ್ಣಾಯಕವಾಗಿದೆ.
►MSME ಕಾರ್ಯಾಚರಣೆಗಳನ್ನು ಇಂಗಾಲ ಮುಕ್ತಗೊಳಿಸುವ ಅಗತ್ಯ ಏಕೆ?
ಭಾರತದ ರಫ್ತು ಮಾರುಕಟ್ಟೆಗಳಲ್ಲಿ ಸ್ವಚ್ಛ ಉತ್ಪಾದನಾ ಪದ್ಧತಿಗಳಿಗೆ ಸಂಬಂಧಿಸಿದ ಕಟ್ಟುನಿಟ್ಟಾದ ವ್ಯಾಪಾರ ಅಡೆತಡೆಗಳು ಆರಂಭವಾಗುತ್ತಿರುವುದರಿಂದ, ರಫ್ತುಗಳಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು MSMEಗಳು ತಮ್ಮ ಕಾರ್ಯಾಚರಣೆಗಳನ್ನು ಇಂಗಾಲ ಮುಕ್ತಗೊಳಿಸುವ ಅಗತ್ಯವಿದೆ. ಉದಾಹರಣೆಗೆ, ಯುರೋಪಿಯನ್ ಒಕ್ಕೂಟಕ್ಕೆ ಕಡಿಮೆ ಸುಸ್ಥಿರ ಆಮದುಗಳನ್ನು ತಡೆಯುವ ಕಾರ್ಯವಿಧಾನವಾದ ಯುರೋಪಿಯನ್ ಒಕ್ಕೂಟದ ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ (CBAM) ಜನವರಿ 1ರಿಂದ ತನ್ನ ನಿರ್ಣಾಯಕ ಹಂತವನ್ನು ಪ್ರಾರಂಭಿಸಿದೆ.
“ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಪ್ರದೇಶಗಳ, ವಿಶೇಷವಾಗಿ ಯುರೋಪ್ ಮತ್ತು ಅಮೆರಿಕಾದ ಹಸಿರು ‘ಮಟ್ಟದ’ ಉತ್ಪನ್ನ ಅಗತ್ಯಗಳನ್ನು ಪೂರೈಸಲು MSMEಗಳ ಪ್ರಕ್ರಿಯೆಗಳನ್ನು (ಉತ್ಪಾದನೆ ಇತ್ಯಾದಿ) ಇಂಗಾಲ ಮುಕ್ತಗೊಳಿಸುವುದು ಅನಿವಾರ್ಯ,” ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ನೀತಿ ಆಯೋಗವು ಈ ಉದ್ಯಮಗಳಿಗೆ ಅಗ್ಗದ ಸಾಲಗಳು ಮತ್ತು ತಾಂತ್ರಿಕ ತರಬೇತಿಯಂತಹ ವಿಶೇಷ ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ‘ಸೇತುವೆ’ಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಇದರಿಂದ ಸಣ್ಣ ಕಾರ್ಖಾನೆಗಳೂ ಹೊಸ ಅಂತರರಾಷ್ಟ್ರೀಯ ‘ಹಸಿರು’ ಮಾನದಂಡಗಳನ್ನು ಪೂರೈಸಬಹುದಾಗಿದೆ. ಪರಿಣಾಮವಾಗಿ, ಅವುಗಳ ಯುರೋಪ್ ಅಥವಾ ಅಮೆರಿಕಾಕ್ಕೆ ರಫ್ತು ನಿರ್ಬಂಧಿತವಾಗುವುದಿಲ್ಲ.
ವರದಿಯು ಐದು ಪ್ರಮುಖ ಉಪವಲಯಗಳನ್ನು ಗುರುತಿಸಿದೆ. ಅವುಗಳೆಂದರೆ — ಜವಳಿ, ಕಾಗದ, ಉಕ್ಕಿನ ಮರು-ರೋಲಿಂಗ್, ಫೌಂಡ್ರಿ ಮತ್ತು ಫೋರ್ಜಿಂಗ್. ಇವು ಇಂಧನ-ಸಮರ್ಥ ಉತ್ಪಾದನೆಯನ್ನು ಸುಧಾರಿಸುವಲ್ಲಿ ಗಮನಾರ್ಹ ಕೊಡುಗೆ ನೀಡಬಲ್ಲವು. ಈ ವಲಯಗಳಲ್ಲಿನ ಕೆಲವು MSME ಕ್ಲಸ್ಟರ್ಗಳು ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಹೊಂದಿದ್ದು, ಹಸಿರು ವಿದ್ಯುತ್ ಮಾರ್ಗಸೂಚಿಗಾಗಿ ಅವುಗಳನ್ನು ಗುರುತಿಸಲಾಗಿದೆ.
►ಸರಕಾರ ಯಾವ ಪರಿಹಾರವನ್ನು ಪ್ರಸ್ತಾಪಿಸಿದೆ?
ಆರಂಭಿಕವಾಗಿ, ಸರಕಾರದ ಚಿಂತಕರ ಚಾವಡಿ ಮತ್ತು MSME ಸಚಿವಾಲಯವು NPMA ರಚನೆಗೆ ಕರೆ ನೀಡಿದ್ದು, ಈ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಲು ಶಿಫಾರಸು ಮಾಡಿದೆ. ಇಂಧನ-ಸಮರ್ಥ ಯಂತ್ರೋಪಕರಣಗಳು, ಹಸಿರು ವಿದ್ಯುತ್ ಉತ್ಪಾದನೆ ಮತ್ತು ಪರ್ಯಾಯ ಇಂಧನಗಳಿಗೆ ಬೇಡಿಕೆಯನ್ನು ಒಟ್ಟುಗೂಡಿಸಲು MSME ಕ್ಲಸ್ಟರ್ಗಳು ಹಾಗೂ ಕೈಗಾರಿಕಾ ಸಂಘಗಳೊಂದಿಗೆ ಕೆಲಸ ಮಾಡುವ ಮೂಲಕ NPMA ಡಿಕಾರ್ಬೊನೈಸೇಶನ್ ಯೋಜನೆಯನ್ನು ಜಾರಿಗೆ ತರಲಿದೆ.
MSME ಕ್ಲಸ್ಟರ್ಗಳಲ್ಲಿ ಹಳೆಯ ಯಂತ್ರೋಪಕರಣಗಳನ್ನು ಹೆಚ್ಚು ಇಂಧನ-ಸಮರ್ಥ ಯಂತ್ರೋಪಕರಣಗಳೊಂದಿಗೆ ಬದಲಾಯಿಸಲು, NPMA ಬೇಡಿಕೆಯನ್ನು ಒಟ್ಟುಗೂಡಿಸಿದ ಬಳಿಕ ಅನುಷ್ಠಾನ ಏಜೆನ್ಸಿಗಳಾದ ಇಂಧನ ಸೇವಾ ಕಂಪೆನಿಗಳು (ESCOs) ಗುರುತಿಸಲಾಗುತ್ತದೆ. ಈ ಹೊಸ ಯಂತ್ರೋಪಕರಣಗಳ ಮುಂಗಡ ವೆಚ್ಚವನ್ನು ಇಂಧನ ಸೇವಾ ಕಂಪೆನಿಗಳೇ ಭರಿಸುತ್ತವೆ. MSMEಗಳು ಕಾರ್ಯಾಚರಣಾ ವೆಚ್ಚದಲ್ಲಿ ಉಂಟಾಗುವ ಉಳಿತಾಯದಿಂದ ಈ ಕಂಪೆನಿಗಳಿಗೆ ಮರುಪಾವತಿ ಮಾಡಬಹುದು ಎಂದು ಯೋಜನೆ ವಿವರಿಸುತ್ತದೆ.
ಈ ಯೋಜನೆಯಡಿ ಇಂಧನ-ಸಮರ್ಥ ತಂತ್ರಜ್ಞಾನಗಳ ತಯಾರಕರಿಗೆ 6,000 ಕೋಟಿ ರೂ.ಕಾರ್ಯಸಾಧ್ಯತಾ ಅಂತರ ನಿಧಿಯನ್ನು ಪ್ರಸ್ತಾಪಿಸಲಾಗಿದೆ. MSME ಸಚಿವಾಲಯವು ಇಂಧನ ದಕ್ಷತೆಯ ಬ್ಯೂರೋ (BEE) ಜೊತೆಗೆ ವ್ಯವಹಾರಗಳಿಗೆ 20% ಕ್ಕಿಂತ ಹೆಚ್ಚು ಉಳಿತಾಯ ಒದಗಿಸಬಲ್ಲ 6–7 ತಂತ್ರಜ್ಞಾನಗಳನ್ನು ಗುರುತಿಸಲಿದೆ. ಈ ತಂತ್ರಜ್ಞಾನಗಳ ತಯಾರಕರು VGF ಬೆಂಬಲಕ್ಕೆ ಅರ್ಹರಾಗುತ್ತಾರೆ.
ಹಸಿರು ವಿದ್ಯುತ್ ಉತ್ಪಾದನೆಗಾಗಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಮಾದರಿಯಲ್ಲಿ, 3 kWh ವರೆಗಿನ MSMEಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗೆ 7,000 ಕೋಟಿ ರೂ. ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಮೇಲ್ಛಾವಣಿ ಸೌರ ಘಟಕಗಳ ಸ್ಥಾಪನೆಗೆ ಸಬ್ಸಿಡಿ ಹಾಗೂ ಕಡಿಮೆ ಬಡ್ಡಿದರದ, ಮೇಲಾಧಾರ-ಮುಕ್ತ ಸಾಲಗಳನ್ನು ಒದಗಿಸಲಾಗುತ್ತದೆ. ಜನವರಿ 22ರ ವರದಿಯ ಪ್ರಕಾರ, MSMEಗಳಿಗಾಗಿ ಪ್ರಸ್ತಾವಿತ ಈ ಮೇಲ್ಛಾವಣಿ ಸೌರ ಯೋಜನೆ ಐದು ವರ್ಷಗಳವರೆಗೆ ನಡೆಯಲಿದೆ ಮತ್ತು 1–1.5 ಮಿಲಿಯನ್ ಉದ್ಯಮಗಳನ್ನು ಗುರಿಯಾಗಿಟ್ಟುಕೊಂಡಿದೆ. ಜೊತೆಗೆ, ನವೀಕರಿಸಬಹುದಾದ ಇಂಧನ ಸೇವಾ ಕಂಪೆನಿಗಳು (RESCOಗಳು) MSMEಗಳಲ್ಲಿ ಸೌರಶಕ್ತಿ ಸೌಲಭ್ಯಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಸಣ್ಣ ಉದ್ಯಮಗಳ ಮುಂಗಡ ವೆಚ್ಚ ಕಡಿಮೆಯಾಗುತ್ತದೆ ಹಾಗೂ ಕೈಗೆಟುಕುವ ಹಸಿರು ವಿದ್ಯುತ್ ಲಭ್ಯವಾಗುತ್ತದೆ.
MSME ಸಚಿವಾಲಯವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಜೊತೆಗೂಡಿ, ಕಲ್ಲಿದ್ದಲು, ಪೆಟ್ ಕೋಕ್, ಫರ್ನೇಸ್ ಆಯಿಲ್ ಮೊದಲಾದ ಇಂಧನಗಳ ಬದಲಿಗೆ MSME ಕ್ಲಸ್ಟರ್ಗಳಲ್ಲಿ ನೈಸರ್ಗಿಕ ಅನಿಲ ಬಳಕೆಯನ್ನು ಉತ್ತೇಜಿಸಲಿದೆ. ಇದರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗುತ್ತದೆ.
►MSME ವಲಯದ ಹಸಿರು ಪರಿವರ್ತನೆಗೆ ಸರಕಾರ ಕೈಗೊಂಡಿರುವ ಕ್ರಮಗಳೇನು?
ದೇಶದ MSMEಗಳಿಗೆ ಹಸಿರು ಕಾರ್ಯಾಚರಣೆಗಳಲ್ಲಿ ನೆರವಾಗಲು ಸರಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. MSME ಸಚಿವಾಲಯದ ಹಸಿರು ಪೋರ್ಟಲ್ ಅಡಿಯಲ್ಲಿ ಜಾರಿಯಲ್ಲಿರುವ ಎರಡು ಪ್ರಮುಖ ಯೋಜನೆಗಳು —
1. MSME-GIFT (Green Investment and Financing for Transformation)
2. MSME-SPICE (Scheme for Promotion and Investment in Circular Economy)
ಈ ಎರಡು ಯೋಜನೆಗಳನ್ನು ಡಿಸೆಂಬರ್ 2023ರಲ್ಲಿ ಆರಂಭಿಸಲಾಗಿದ್ದು, ಒಟ್ಟು ವೆಚ್ಚ 950 ಕೋಟಿ ರೂಪಾಯಿ. GIFT ಯೋಜನೆ ಮಾರ್ಚ್ 2026ರಲ್ಲಿ ಕೊನೆಗೊಳ್ಳಲಿದ್ದು, SPICE ಯೋಜನೆ ಮಾರ್ಚ್ 2027ರವರೆಗೆ ಜಾರಿಯಲ್ಲಿರುತ್ತದೆ.
478 ಕೋಟಿ ವೆಚ್ಚದ GIFT ಯೋಜನೆಯಡಿಯಲ್ಲಿ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಬಡ್ಡಿದರ ಇಳಿಕೆ ಹಾಗೂ ಸುಲಭ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. SPICE ಯೋಜನೆಯಡಿಯಲ್ಲಿ, ಅಸ್ತಿತ್ವದಲ್ಲಿರುವ ಸಣ್ಣ ಕಾರ್ಖಾನೆಗಳು ತಮ್ಮ ತ್ಯಾಜ್ಯವನ್ನು ಎಸೆಯುವ ಬದಲು ಮರುಬಳಕೆ ಮಾಡಲು ಮುಂದಾದರೆ, ಯಂತ್ರೋಪಕರಣಗಳ ಮೇಲೆ 25% ಸಬ್ಸಿಡಿ ನೀಡಲಾಗುತ್ತದೆ.
ಈ ನಿರ್ಧಾರ MSMEಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ತಜ್ಞರ ಪ್ರಕಾರ, ನಗದು ಕೊರತೆಯಲ್ಲಿರುವ MSMEಗಳಿಗೆ ಸ್ವಚ್ಛ ಉತ್ಪಾದನಾ ಪದ್ಧತಿಗಳಿಗೆ ಹೊಂದಿಕೊಳ್ಳುವುದು ದುಬಾರಿ. ಭಾರತೀಯ MSMEಗಳು ಆಮದು ದೇಶಗಳು ವಿಧಿಸುವ ಇಂಗಾಲ ತೆರಿಗೆಯ ಭಾರವನ್ನು ಭರಿಸಬೇಕಾಗುತ್ತದೆ ಮತ್ತು ರಫ್ತಿಗೆ ಅರ್ಹರಾಗಲು ಇಂಗಾಲ ಹೊರಸೂಸುವಿಕೆಯನ್ನು ಕಡಿತಗೊಳಿಸಬೇಕಾಗುತ್ತದೆ. ಭಾರತದ ಉತ್ಪಾದನಾ ವಲಯದ MSMEಗಳು ಕಡಿಮೆ ಕಾರ್ಯನಿರತ ಬಂಡವಾಳದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಇಂಧನ ಪರಿವರ್ತನೆ ದೊಡ್ಡ ಸವಾಲಾಗುತ್ತದೆ ಎಂದು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ನ ಸುಸ್ಥಿರ ಅಭಿವೃದ್ಧಿ ಕೇಂದ್ರದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಗುರುದಾಸ್ ನುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.







