Chhattisgarh | ಕ್ರಿಶ್ಚಿಯನ್ ಸಮುದಾಯದವರಿಗೆ ಅಂತ್ಯಸಂಸ್ಕಾರಕ್ಕೆ ಇಲ್ಲ ಜಾಗ, ಗ್ರಾಮ ಪಂಚಾಯತ್ ನಿರ್ಣಯದಿಂದ ಆತಂಕ
►ಜಯಪ್ರಕಾಶ್ ಎಸ್ ನಾಯ್ಡು - indianexpress. com ವರದಿ

Photo Credit :indianexpress.com
ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಪುನ್ ಪಲ್ಲಿ ಗ್ರಾಮದಲ್ಲಿ ಧರ್ಮಗುರುಗಳ ಪ್ರವೇಶ ಹಾಗೂ ಮತಾಂತರ ಚಟುವಟಿಕೆಗಳನ್ನು ನಿಷೇಧಿಸಿ ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡಿದೆ. ಈ ಬೆಳವಣಿಗೆಯಿಂದ ಅಲ್ಲಿನ ಕ್ರಿಶ್ಚಿಯನ್ ಸಮುದಾಯದವರಿಗೆ ಅಂತ್ಯಸಂಸ್ಕಾರಕ್ಕೆ ಜಾಗ ಸಿಗದಂತಾಗಿದ್ದು, ಆತಂಕ ಮೂಡಿಸಿದೆ.
ಗ್ರಾಮದಲ್ಲಿ ಅಳವಡಿಸಿರುವ ಬ್ಯಾನರ್ ನಲ್ಲಿ ಧರ್ಮಗುರುಗಳ ಪ್ರವೇಶ ಮತ್ತು ಧಾರ್ಮಿಕ ಸಭೆಗಳ ನಿಷೇಧದ ಬಗ್ಗೆ ನಮೂದಿಸಲಾಗಿದೆ. ಆದರೆ, ಬ್ಯಾನರ್ ನಲ್ಲಿ ಉಲ್ಲೇಖಿಸದ ಮತ್ತೊಂದು ನಿರ್ಣಯವು ಕ್ರಿಶ್ಚಿಯನ್ ಸಮುದಾಯದವರಿಗೆ ಆತಂಕ ತಂದಿದೆ.
‘ಕ್ರಿಶ್ಚಿಯನ್ ಧರ್ಮ ಅನುಸರಿಸುವ ಆದಿವಾಸಿಗಳಿಗೆ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಯಾವುದೇ ಭೂಮಿ ನೀಡುವುದಿಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ’ ಎಂದು ಪುನ್ ಪಲ್ಲಿ ಗ್ರಾಮದ ಜನ್ಪದ್ ಸದಸ್ಯ ಮಡ್ಕಮ್ ಭೀಮಾ ತಿಳಿಸಿದ್ದಾರೆ.
ಈ ನಿರ್ಣಯ ಜಾರಿಯಾದರೆ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕುಟುಂಬದವರು 13 ಕಿಲೋಮೀಟರ್ ದೂರದ ಧೋರ್ಣಪಾಲ್ ಅಥವಾ 40 ಕಿಲೋಮೀಟರ್ ದೂರವಿರುವ ಸುಕ್ಮಾ ಕೇಂದ್ರಸ್ಥಾನಕ್ಕೆ ಹೋಗಬೇಕಾಗುತ್ತದೆ.
ಸುಕ್ಮಾ ಜಿಲ್ಲೆಯ ಪುನ್ ಪಲ್ಲಿ ಸೇರಿದಂತೆ ಒಟ್ಟು ನಾಲ್ಕು ಗ್ರಾಮಗಳು ಇಂತಹ ನಿರ್ಣಯಗಳನ್ನು ಕೈಗೊಂಡಿವೆ ಎಂದು ಭೀಮಾ ಹೇಳಿದ್ದಾರೆ.
‘ಇದು ಕೆಲ ತಿಂಗಳುಗಳ ಹಿಂದೆ ಎರಾಬೋರ್ ನಿಂದ ಪ್ರಾರಂಭವಾಯಿತು, ಬಳಿಕ ನನ್ನ ಗ್ರಾಮವಾದ ಪೊಲಂಪಲ್ಲಿಯಲ್ಲೂ ಇದು ನಡೆಯಿತು. ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲೂ ಇದನ್ನು ಜಾರಿಗೆ ತರಲಾಗುವುದು’ ಎಂದು ಅವರು ತಿಳಿಸಿದರು.
ಈ ಗ್ರಾಮದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಒಟ್ಟು 21 ಕುಟುಂಬಗಳಿದ್ದು, 75 ಜನ ಸದಸ್ಯರಿದ್ದಾರೆ. ಈ ನಿರ್ಣಯ ಜಾರಿಗೆ ಬಂದರೆ, ಅಂತ್ಯಸಂಸ್ಕಾರಕ್ಕಾಗಿ ಈ ಕುಟುಂಬಗಳು 13 ಕಿಲೋಮೀಟರ್ ದೂರವಿರುವ ಧೋರ್ಣಪಾಲ್ ಅಥವಾ 40 ಕಿಲೋಮೀಟರ್ ದೂರವಿರುವ ಸುಕ್ಮಾ ಕೇಂದ್ರಸ್ಥಾನಕ್ಕೆ ಹೋಗಬೇಕಾಗುತ್ತದೆ.
ಈ ಆದೇಶಕ್ಕೆ ಕಾನೂನು ಆಧಾರವಿದೆಯೇ ಎಂದು ಕೇಳಿದಾಗ, ‘ಹೌದು, ನಾವು ಪೆಸಾ (PESA) ಕಾನೂನನ್ನು ಪಾಲಿಸುತ್ತಿದ್ದೇವೆ. ನಾವು ಯಾವುದೇ ಕಾನೂನನ್ನು ಉಲ್ಲಂಘಿಸುತ್ತಿಲ್ಲ’ ಎಂದು ಭೀಮಾ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
ಅಕ್ಟೋಬರ್ 2 ರಂದು ನಡೆದ ಸಭೆಯಲ್ಲಿ, ಪುನ್ ಪಲ್ಲಿ ಗ್ರಾಮ ಸಭೆಯು ಭಾರತೀಯ ಸಂವಿಧಾನದ ಐದನೇ ಅನುಸೂಚಿಗೆ ಒಳಪಟ್ಟಿರುವುದರಿಂದ, ಪಂಚಾಯತ್ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ, 1996 (ಪೆಸಾ) ಅನ್ನು ಉಲ್ಲೇಖಿಸಿ ಈ ನಿರ್ಣಯವನ್ನು ಅಂಗೀಕರಿಸಿತು.
ಇದರ ಬೆನ್ನಲ್ಲೇ ಹಾಕಲಾದ ಬ್ಯಾನರ್ ನಲ್ಲಿ ಹೀಗಿದೆ: ‘ಪೆಸಾ ಕಾಯ್ದೆಯ ಪ್ರಕಾರ, ಗ್ರಾಮ ಸಭೆಯು ತನ್ನ ಸಾಂಸ್ಕೃತಿಕ ಗುರುತು, ಸಂಪ್ರದಾಯಗಳು, ಆಚರಣೆಗಳು ಮತ್ತು ಸಾಮಾಜಿಕ ಪರಂಪರೆಯನ್ನು ರಕ್ಷಿಸುವ ಹಕ್ಕನ್ನು ಹೊಂದಿದೆ. ಆಮಿಷ, ಒತ್ತಡ ಅಥವಾ ಇನ್ಯಾವುದೇ ರೀತಿಯ ಮತಾಂತರ ಚಟುವಟಿಕೆಗಳು ನಮ್ಮ ಸಾಂಪ್ರದಾಯಿಕ ಬುಡಕಟ್ಟು ಸಂಸ್ಕೃತಿ, ಸಾಮಾಜಿಕ ಐಕ್ಯತೆ ಮತ್ತು ಸಾಂಸ್ಕೃತಿಕ ಗುರುತಿನ ಮೇಲೆ ಪರಿಣಾಮ ಬೀರುತ್ತಿವೆ ಎಂದು ಗ್ರಾಮಸ್ಥರು ನಂಬುತ್ತಾರೆ. ಆದ್ದರಿಂದ, ಹೊರಗಿನವರಿಂದ ಮತಾಂತರಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಅಥವಾ ಮತಾಂತರದ ಉದ್ದೇಶ ಹೊಂದಿರುವ ಧರ್ಮಪ್ರಚಾರವನ್ನು ಸ್ವೀಕರಿಸಲಾಗುವುದಿಲ್ಲ.’
ಆದರೆ, ಈ ಪ್ರದೇಶದಲ್ಲಿ ಇಂತಹ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿರುವ ವಕೀಲ ಸುದೀಪ್ ಶ್ರೀವಾಸ್ತವ, ‘ಯಾವುದೇ ಭಾರತೀಯ ಪ್ರಜೆಯ ಗ್ರಾಮ ಪ್ರವೇಶವನ್ನು ನಿಷೇಧಿಸಲು ಸಾಧ್ಯವಿಲ್ಲ. ವ್ಯಕ್ತಿಯೊಬ್ಬರು ಯಾವುದೇ ಗ್ರಾಮದಲ್ಲಿ ತಮ್ಮ ಧರ್ಮವನ್ನು ಆಚರಿಸಬಹುದು. ಇತರರು ಅವರ ಪ್ರಾರ್ಥನೆಯಲ್ಲಿ ಸೇರುವ ವಿಚಾರದಲ್ಲಿ, ಗ್ರಾಮಸ್ಥರಿಗೆ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುವ ಹಕ್ಕಿದೆ. ಗ್ರಾಮದಲ್ಲಿ ವಾಸಿಸುವ ಕ್ರಿಶ್ಚಿಯನ್ ಧರ್ಮದ ವ್ಯಕ್ತಿಗೆ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡುವುದಿಲ್ಲ ಎಂಬ ನಿರ್ಣಯವಿದ್ದರೆ, ಅದು ಅಸಂವಿಧಾನಿಕ’ ಎಂದಿದ್ದಾರೆ.
ಬಸ್ತಾರ್ ಜಿಲ್ಲಾ ಗ್ರಾಮೀಣ ಕ್ರಿಶ್ಚಿಯನ್ ಸೇವಾ ಸಮಿತಿಯ ಉಪಾಧ್ಯಕ್ಷ ನುಕೇಶ್ ಬಘೇಲ್ ಮಾತನಾಡಿ, ‘ಬಸ್ತಾರ್ ಪ್ರದೇಶದಲ್ಲಿ ಇಂತಹ ನಿರ್ಣಯ ಕೈಗೊಂಡಿರುವ ಕನಿಷ್ಠ 10ನೇ ಗ್ರಾಮ ಇದು’ ಎಂದು ತಿಳಿಸಿದ್ದಾರೆ.
►ಸುಪ್ರೀಂ ಕೋರ್ಟ್ ನ ವಿಭಜಿತ ತೀರ್ಪಿನ ದುರ್ಬಳಕೆ: ನುಕೇಶ್ ಆರೋಪ
ಈ ವರ್ಷದ ಆರಂಭದಲ್ಲಿ ಅಂತ್ಯಸಂಸ್ಕಾರದ ಹಕ್ಕುಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ವಿಭಜಿತ ತೀರ್ಪನ್ನು ಕೆಲವು ಗುಂಪುಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ನುಕೇಶ್ ತಿಳಿಸಿದ್ದಾರೆ.
‘ಸುಪ್ರೀಂ ಕೋರ್ಟ್ ಫೆಬ್ರವರಿಯಲ್ಲಿ ಆದಿವಾಸಿ ಕ್ರಿಶ್ಚಿಯನ್ನರ ಮೃತದೇಹಗಳನ್ನು ಬಲವಂತವಾಗಿ ಹೊರತೆಗೆಯುವುದರ ಮೇಲೆ ಮಧ್ಯಂತರ ತಡೆ ನೀಡಿತ್ತು. ಇದನ್ನು ತಪ್ಪಾಗಿ ಬಳಸಿಕೊಂಡು, ಗ್ರಾಮಸ್ಥರು ಮೊದಲ ಹಂತದಲ್ಲೇ ಶವಗಳನ್ನು ಹೂಳಲು ಬಿಡುತ್ತಿಲ್ಲ’ ಎಂದಿದ್ದಾರೆ ನುಕೇಶ್.
2025 ಜನವರಿಯಲ್ಲಿ, ಛತ್ತೀಸ್ ಗಢದ ದಿವಂಗತ ಕ್ರಿಶ್ಚಿಯನ್ ಧರ್ಮಗುರುವೊಬ್ಬರ ಮಗ ರಮೇಶ್ ಬಘೇಲ್ ತಮ್ಮ ತಂದೆಯ ಶವವನ್ನು ಸ್ವಗ್ರಾಮವಾದ ಬಸ್ತಾರ್ ಜಿಲ್ಲೆಯಲ್ಲಿ ಹೂಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದ್ವಿಸದಸ್ಯ ಪೀಠ ನಡೆಸುತ್ತಿತ್ತು.
ಬುಡಕಟ್ಟು ಬಹುಸಂಖ್ಯಾತರ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನಿರಾಕರಿಸಿದ್ದಕ್ಕಾಗಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ರಮೇಶ್ ಅವರ ಸ್ವಂತ ಕೃಷಿ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟರು. ಆದರೆ, ಸಂವಿಧಾನದ ಕಾಯ್ದೆಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಮೂರ್ನಾಲ್ಕು ಗ್ರಾಮಗಳ ಕ್ರಿಶ್ಚಿಯನ್ನರಿಗಾಗಿ ಮೀಸಲಿಟ್ಟಿರುವ ಸಾಮಾನ್ಯ ಸ್ಮಶಾನದಲ್ಲೇ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅಭಿಪ್ರಾಯಪಟ್ಟರು. ನಂತರ ಬಘೇಲ್ ಅವರು ಭಾರೀ ಪೊಲೀಸ್ ಭದ್ರತೆಯಲ್ಲಿ ಕರ್ಕಪಾಲ್ ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.
‘ಬುಡಕಟ್ಟು ಜನಾಂಗದವರು ಮತ್ತು ಕ್ರಿಶ್ಚಿಯನ್ ಆದಿವಾಸಿಗಳು ನೆಮ್ಮದಿಯಿಂದ ವಾಸಿಸುತ್ತಿರುವ ಗ್ರಾಮಗಳಿಗೆ ಬಲಪಂಥೀಯ ಕಾರ್ಯಕರ್ತರ ತಂಡ ತೆರಳುತ್ತಿದೆ. ಅವರು ಬುಡಕಟ್ಟು ಜನರನ್ನು ಪ್ರಚೋದಿಸಿ ಇಂತಹ ನಿರ್ಣಯಗಳನ್ನು ಕೈಗೊಳ್ಳುವಂತೆ ಮಾಡುತ್ತಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ನುಕೇಶ್ ಆರೋಪಿಸಿದ್ದಾರೆ.
‘ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರ ನೀಡಿದ ಕೂಡಲೇ, ಮೃತದೇಹಗಳನ್ನು ಬಲವಂತವಾಗಿ ಹೊರತೆಗೆಯಬಾರದು ಎಂಬ ಉಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವಂತೆ ಕೋರಿ ನಾವು ಛತ್ತೀಸ್ ಗಢ ಡಿಜಿಪಿಗೆ ಪತ್ರ ಬರೆದಿದ್ದೆವು. ಆದರೂ ಇದು ಮುಂದುವರಿದಿದೆ. ನಾವು ಈ ಎಲ್ಲ ಘಟನೆಗಳನ್ನು ದಾಖಲಿಸುತ್ತಿದ್ದು, ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಛತ್ತೀಸ್ ಗಢ ಅಸೋಸಿಯೇಷನ್ ಫಾರ್ ಜಸ್ಟೀಸ್ ಅಂಡ್ ಈಕ್ವಾಲಿಟಿಯ ಸಂಚಾಲಕ ವಕೀಲ ಡಿಗ್ರಿ ಪ್ರಸಾದ್ ಚೌಹಾಣ್ ತಿಳಿಸಿದ್ದಾರೆ.
ಈ ನಿರ್ಣಯದ ಬಗ್ಗೆ ಸಂಪರ್ಕಿಸಿದಾಗ, ಸುಕ್ಮಾ ಜಿಲ್ಲಾ ಪಂಚಾಯತ್ ಸಿಇಒ ಮುಕುಂದ್ ಠಾಕೂರ್, ‘ಇದು ನಮ್ಮ ಕಾರ್ಯಸೂಚಿಯಲ್ಲಿರಲಿಲ್ಲ. ನನಗೆ ಲಿಖಿತ ದೂರು ಬಂದರೆ, ಅನ್ವಯವಾಗುವ ನಿಯಮಗಳ ಪ್ರಕಾರ ಇದರ ಕಾನೂನುಬದ್ಧತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಸೌಜನ್ಯ: indianexpress.com






