84 ಅಧಿಕಾರಿಗಳ ವಿರುದ್ಧದ 22 ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸ್‌ಗೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ

ಬೆಂಗಳೂರು : ನಿವೃತ್ತ ಜಿಲ್ಲಾಧಿಕಾರಿ ಎಂ.ಎ.ಸಾದಿಕ್, ಎಂ.ಕೆ.ಅಯ್ಯಪ್ಪ, ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಂಗಪ್ಪ, ಬಾಳಪ್ಪ ಹಂದಿಗುಂದ ಸಹಿತ ಹಲವು ಐಎಎಸ್, ಕೆಎಎಸ್ ಅಧಿಕಾರಿಗಳು, ಇಂಜಿನಿಯರ್ ಸೇರಿದಂತೆ ಒಟ್ಟು 84 ಅಧಿಕಾರಿಗಳ ವಿರುದ್ಧದ 22 ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ.
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ಕಲಂ 17 ಅನ್ವಯ ಪೂರ್ವಾನುಮತಿ ಪಡೆಯುವ ಸಂಬಂಧ ಲೋಕಾಯುಕ್ತ ಪೊಲೀಸ್ ವಿಭಾಗವು ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್‌ಗೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವ ಆಧರಿಸಿ ರಿಜಿಸ್ಟ್ರಾರ್ ಅವರು 2026ರ ಮೇ 19ರಂದು ರಾಜ್ಯ ಸರಕಾರ ಬರೆದಿದ್ದ ಹಲವು ಪತ್ರಗಳು ಮತ್ತು ನೆನಪೋಲೆಗಳನ್ನು ಹಲವು ಇಲಾಖೆಗಳ ಮುಖ್ಯಸ್ಥರು ಕಾಲಕಸವನ್ನಾಗಿಸಿಕೊಂಡಿದ್ದಾರೆ.
ಅಲ್ಲದೇ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಭಾಯಿಸುತ್ತಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ನಗರಾಭಿವೃದ್ಧಿ ಖಾತೆ ನಿರ್ವಹಿಸುತ್ತಿದ್ದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ ಅವರು ಸಚಿವರಾಗಿದ್ದ ಕಂದಾಯ ಇಲಾಖೆಯಲ್ಲಿನ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಕ್ಕೆ ಗುರಿಯಾಗಿದ್ದಾರೆ.
ಭ್ರಷ್ಟಾಚಾರ, ಕರ್ತವ್ಯಲೋಪ, ಅಧಿಕಾರ ಮತ್ತು ಹಣ ದುರುಪಯೋಗ, ನಿಯಮಬಾಹಿರವಾಗಿ ಭೂ ಪರಿವರ್ತನೆ, ಕರ್ತವ್ಯ ನಿರ್ಲಕ್ಷ್ಯ, ಇನ್ನಿತರ ಆರೋಪಗಳ ಕುರಿತು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರುಗಳ ಪೈಕಿ ಒಟ್ಟು 22 ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ನೀಡಲು ಪೊಲೀಸ್ ವಿಭಾಗವು ಕೋರಿತ್ತು. ಇದರಲ್ಲಿ ಐಎಎಸ್, ಕೆಎಎಸ್, ಬಿಬಿಎಂಪಿ, ಕಂದಾಯ ಮತ್ತು ಇನ್ನಿತರ ಇಲಾಖೆಗಳ ಅಧಿಕಾರಿಗಳ ಹೆಸರುಗಳೂ ಇವೆ. ಇದಕ್ಕೆ ಸಂಬಂಧಿಸಿ ಪೂರಕ ದಾಖಲೆಗಳು "the-file.in"ಗೆ ಲಭ್ಯವಾಗಿವೆ.
<ಬಿಬಿಎಂಪಿಯ ಎಆರ್‌ಒ ಕೃತಿಕಾ, ಸೀನಿಯರ್ ಸಬ್ ರಿಜಿಸ್ಟ್ರಾರ್ ಪ್ರಭಾಕರ್ ಸಿ.ಜೆ. ಅವರ ವಿರುದ್ಧ ಕರ್ತವ್ಯ ಲೋಪದ ಆರೋಪ ಹೊರಿಸಿ ಲೋಕಾಯುಕ್ತ ಡಿವೈಎಸ್ಪಿ ಪ್ರದೀಪ್ ಕುಮಾರ್ ಎಂಬವರು ದೂರು ನೀಡಿದ್ದರು. ಇವರ ವಿರುದ್ಧ ವಿಚಾರಣೆ ನಡೆಸಲು ನೋಂದಣಾ ಮಹಾ ನಿರೀಕ್ಷಕರಿಗೆ 2025ರ ನ.15ರಂದೇ ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.
<ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ, ಡಾ. ನಾಗರಾಜ್ ಎಸ್, ಶಿವಸ್ವಾಮಿ, ಪ್ರಸನ್ನಕುಮಾರ್, ಲಲಿತಾ, ಸುಬೇಸಹ, ದೇವಕಿ, ಸತ್ಯಮೂರ್ತಿ, ಗಾಯತ್ರಿ, ಸುಬ್ರಮಯ್ಯ, ಗಿರಿಯಪ್ಪ ಎಂಬವರ ವಿರುದ್ಧ ಮಂಜುನಾಥ್ ವಿ. ಎಂಬವರು 2023ರಲ್ಲಿ ದೂರು ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆ ನಡೆಸಲು ಬಿಬಿಎಂಪಿ ಮುಖ್ಯ ಆಯುಕ್ತ, ಡಿಪಿಎಆರ್‌ಗೆ ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. 2023ರ ಅ.7ರಂದು ಕೋರಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ಗೊತ್ತಾಗಿದೆ.
<ಬಿಬಿಎಂಪಿಯ ದಕ್ಷಿಣ ವಿಭಾಗದ ಉಪ ಆರೋಗ್ಯ ಅಧಿಕಾರಿ ಡಾ.ಕಲ್ಪನಾ ಪಿ. ಎಂಬವರ ವಿರುದ್ಧ ಲೋಕಾಯುಕ್ತ ಡಿವೈಎಸ್ಪಿ ಶ್ರೀನಿವಾಸಮೂರ್ತಿ 2025ರಲ್ಲಿ ದೂರು ನೀಡಿದ್ದರು. ಇವರ ವಿರುದ್ಧವೂ ಸಕ್ಷಮ ಪ್ರಾಧಿಕಾರವು ವಿಚಾರಣೆಗೆ ಪೂರ್ವಾನುಮತಿ ನೀಡಿಲ್ಲ. ಹೀಗಾಗಿ ಲೋಕಾಯುಕ್ತ ರಿಜಿಸ್ಟ್ರಾರ್ 2025ರ ಸೆ. 11ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು ಎಂದು ತಿಳಿದು ಬಂದಿದೆ.
<ರಾಜಾಜಿನಗರದ ದಿಫೆನ್ ಎಚ್.ನಗಡಾ ಎಂಬವರು ಜಯನಗರದಲ್ಲಿನ ಉಪ ನೋಂದಣಾಧಿಕಾರಿ ಲೋಕೇಶ್ ಎಂಬವರ ವಿರುದ್ಧ ದೂರು ನೀಡಿದ್ದರು. ಈ ದೂರನ್ನಾಧರಿಸಿ ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸ್ ವಿಭಾಗವು ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೇ ಇವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ 2025ರ ನ. 29ರಂದು ನೋಂದಣಿ ಮಹಾ ನಿರೀಕ್ಷಕರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ಗೊತ್ತಾಗಿದೆ.
<ಬೆಂಗಳೂರಿನ ವೈಟ್ ಫೀಲ್ಡ್‌ನ ನಿವಾಸಿ ಎಸ್. ರಘುನಾಥ್ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಫ್‌ಡಿಎ ಆಗಿರುವ ಜಿ.ರಾಯಕರ್ ಎಂಬವರ ವಿರುದ್ಧ ದೂರು ಸಲ್ಲಿಸಿದ್ದರು. ರಘುನಾಥ್ ಅವರಿಗೆ ಸೇರಿದ್ದ ಆಸ್ತಿಯನ್ನು ಬೇರೊಬ್ಬರಿಗೆ ನಿಯಮಬಾಹಿರವಾಗಿ ನೋಂದಣಿ ಮಾಡಿಕೊಟ್ಟಿದ್ದರು. ಈ ಸಂಬಂಧ ರಘುನಾಥ್ ಎಂಬವರು ಸಲ್ಲಿಸಿದ್ದ ದೂರಿನ ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರು 2020ರ ಅ.17ರಂದೇ ವಿಚಾರಣೆಗೆ ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಇದುವರೆಗೂ ಪೂರ್ವಾನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.
<ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಎಂ.ಕೆ . ಜಗದೀಶ್ ಎಂಬವರು ನವರತ್ನ ಅಗ್ರಹಾರದ ಸರ್ವೇ ನಂಬರ್ 13ರಲ್ಲಿನ 33 ಎಕರೆ ವಿಸ್ತೀರ್ಣದ ಸರಕಾರಿ ಜಮೀನನ್ನು ಖಾಸಗಿ ಕಂಪೆನಿಗೆ ಪರಭಾರೆ ಮಾಡಲು ಸಹಕರಿಸಿದ್ದರು ಎಂದು ಆರೋಪಿಸಿದ್ದ ಎನ್.ವಾಸುದೇವರೆಡ್ಡಿ ಎಂಬವರು ದೂರು ನೀಡಿದ್ದರು. ದೂರಿನ ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸ್ ವಿಭಾಗವು ಇವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ 2021ರ ಸೆ.18 ಮತ್ತು 2022ರ ಎ.21ರಂದು ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವ ಸಲ್ಲಿಕೆಯಾಗಿ 4 ವರ್ಷಗಳಾದರೂ ವಿಚಾರಣೆಗೆ ಪೂರ್ವಾನುಮತಿ ನೀಡಿಲ್ಲ ಎಂದು ಗೊತ್ತಾಗಿದೆ.
<ಅದೇ ರೀತಿ ಕರ್ತವ್ಯ ಲೋಪದ ಆರೋಪದ ಮೇರೆಗೆ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗೀಯ ಅಧಿಕಾರಿ ಪ್ರಮೋದ್ ಎಲ್.ಪಾಟೀಲ್, ತಹಶೀಲ್ದಾರ್ ಶ್ರೇಯಸ್ ಪಾಟೀಲ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಸುಬ್ರಹ್ಮಣ್ಯ, ಎಡಿಎಲ್‌ಆರ್ ಮಂಜುನಾ ಜಿ.ಜಿ. ಸಂದೀಪ್ ಸಿಂಘ, ಲೋಕೇಶ್ ಬಿ.ಕೆ. ಎಂಬವರ ವಿರುದ್ಧ ದೂರು ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿ 2025ರ ನ.28ರಂದು ಲೋಕಾಯುಕ್ತ ಪೊಲೀಸ್ ವಿಭಾಗವು ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಕರಣದಲ್ಲಿಯೂ ಸಹ ಸಕ್ಷಮ ಪ್ರಾಧಿಕಾರವು ಪೂರ್ವಾನುಮತಿ ನೀಡಿಲ್ಲ.
<ವಿಕ್ರಂ ಗಂಗಾಧರ್ ಎಂಬವರು ಸಬ್‌ರಿಜಿಸ್ಟ್ರಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಾಜಣ್ಣ, ರಘುನಂದನ್ ಅವರ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದ ಆರೋಪ ಹೊರಿಸಿ ದೂರು ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆ ನಡೆಸಲು ನೋಂದಣಿ ಮಹಾ ಪರಿವೀಕ್ಷಕರಿಗೆ ಲೋಕಾಯುಕ್ತ ಪೊಲೀಸ್ ವಿಭಾಗವು 2025ರ ನ.28ರಂದು ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದುವರೆಗೂ ಪೂರ್ವಾನುಮತಿ ದೊರೆತಿಲ್ಲ.
<ಬ್ರಿಜೇಶ್ ಮ್ಯಾಥ್ಯೂ ಎಂಬವರು ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಭಾರತಿ ಡಿ, ಮಂಡಳಿಯ ಜಂಟಿ ಕಾರ್ಯದರ್ಶಿ ಸಂಗಪ್ಪ ಉಪಾಧ್ಯ ಅವರ ವಿರುದ್ಧ ಕರ್ತವ್ಯಲೋಪದ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿದ್ದ ಲೋಕಾಯುಕ್ತ ಪೊಲೀಸ್ ವಿಭಾಗವು ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಭೂ ದಾಖಲೆಗಳ ಆಯುಕ್ತರಿಗೆ 2025ರ ಆ. 28ರಂದು ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವ ಸಲ್ಲಿಕೆಯಾಗಿ 9 ತಿಂಗಳಾದರೂ ಪೂರ್ವಾನುಮತಿ ಲಭಿಸಿಲ್ಲ.
<ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಕಾಂತ್ ಎಂಬವರು ಶಿಡ್ಲಘಟ್ಟದ ಸಬ್ ರಿಜಿಸ್ಟ್ರಾರ್ ಆಗಿದ್ದ ರಂಗನಾಥ್ ಎಂಬವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿದ್ದರು.
<ಕೆಂಗೇರಿಯ ಕುಂಬಳಗೋಡಿನ ಮಂಜುನಾಥ್ ಎಂಬವರು ಬಿಡಿಎನ ಉಪ ವಿಭಾಗಾಧಿಕಾರಿ ಸುಧಾ, ಬಸಂತಿ, ಡಾ.ಎಂ.ಜಿ. ಶಿವಣ್ಣ ಅವರ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪ ಹೊರಿಸಿ ದೂರು ಸಲ್ಲಿಸಿದ್ದರು. ಚಲ್ಲಘಟ್ಟದ ಸರ್ವೇ ನಂಬರ್ 13ರಲ್ಲಿ ಪುಟ್ಟಮ್ಮ ಎಂಬವರಿಗೆ ಸೇರಿದ್ದ ಜಾಗವನ್ನು ಬಿಡಿಎಯು ಸ್ವಾಧೀನಪಡಿಸಿಕೊಂಡಿತ್ತು ಎಂಬಂತೆ ದಾಖಲೆ ಸೃಷ್ಟಿಸಲಾಗಿತ್ತು. ಈ ದಾಖಲೆಗಳ ನೈಜತೆಯನ್ನು ಈ ಆಪಾದಿತ ಅಧಿಕಾರಿಗಳು ಪರಿಶೀಲಿಸಿರಲಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದರು.
<ಈ ದೂರಿನ ಪ್ರಾಥಮಿಕ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸ್ ವಿಭಾಗವು 2022ರ ಎ.12ರಂದು ಪೂರ್ವಾನುಮತಿ ಕೋರಿ ಪ್ರಸ್ತಾವ ಸಲ್ಲಿಸಿತ್ತು. ಅಲ್ಲದೇ 2025ರ ಅ.17ರಂದು ನೆನಪೋಲೆಯನ್ನು ಸಹ ಕಳಿಸಿತ್ತು. ಆದರೆ ಸಕ್ಷಮ ಪ್ರಾಧಿಕಾರವಾಗಿರುವ ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪೂರ್ವಾನುಮತಿ ನೀಡುವಲ್ಲಿ ವಿಳಂಬ ಅನುಸರಿಸಿರುವುದು ಗೊತ್ತಾಗಿದೆ.
<ದಲಿತ ಸಂಘರ್ಷ ಸೇನೆಯ ನರಸಿಂಹ ಕೆ.ಎಂಬವರು ಬಿಬಿಎಂಪಿಯ ಆರೋಗ್ಯ ಅಧಿಕಾರಿ ಡಾ.ಸವಿತಾ ಎಸ್.ಕೆ, ಜ್ಯೋತಿ ನಿವಾಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಿರಾಗ್ ಎಸ್ ಎಂಬವರ ವಿರುದ್ಧ ಕರ್ತವ್ಯ ಲೋಪ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿದ್ದ ಲೋಕಾಯುಕ್ತ ಪೊಲೀಸ್ ವಿಭಾಗವು 2025ರ ಆ.7ರಂದು ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದುವರೆಗೂ ಪೂರ್ವಾನುಮತಿ ದೊರೆತಿಲ್ಲ.
<ಟಿ.ಜೆ.ಅಬ್ರಹಾಂ ಎಂಬವರು ಗದಗ್ ಜಿಲ್ಲಾಧಿಕಾರಿ ಮಹಂತ್ರಯ್ಯ ಜಿ.ಹಿರೇಮಠ್, ಶಿವಾನಂದ ಬಿ. ಕರಲೆ, ಕೆಎಎಸ್ ಅಧಿಕಾರಿ ತಹಶೀಲ್ದಾರ್ ಅಜಿತ್ ಎಂ, ಬಸವರಾಜ ಎ.ಬಿ, ಮುಖ್ಯ ಇಂಜಿನಿಯರ್ ಹನುಮಂತರಾಯಪ್ಪ, ಹೆಸ್ಕಾಂ ಕೃಷ್ಣಪ್ಪ, ಮಾರುತಿ ಎಂಬವರ ವಿರುದ್ಧ ಕರ್ತವ್ಯ ಲೋಪ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಇವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿದ್ದ ಲೋಕಾಯುಕ್ತ ಪೊಲೀಸ್ ವಿಭಾಗವು 2023ರ ಎ.28ರಂದು ಪ್ರಸ್ತಾವ ಸಲ್ಲಿಸಿತ್ತು. ಅಲ್ಲದೇ 2024ರ ಮೇ 16, ಅ.18, ಜು.14ರಂದು ನೆನಪೋಲೆಯನ್ನೂ ಸಹ ಕಳಿಸಿತ್ತು. ಆದರೆ ಇದುವರೆಗೂ ಸಕ್ಷಮ ಪ್ರಾಧಿಕಾರವು ವಿಚಾರಣೆಗೆ ಪೂರ್ವಾನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.
<ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಶೀಲ್ದಾರ್ ಆಗಿದ್ದ ಶಿವಪ್ಪ ಎಚ್.ಲಮಾಣಿ, ವಿಶೇಷ ಜಿಲ್ಲಾಧಿಕಾರಿ ಎಸ್. ರಂಗಪ್ಪ, ಜಯಮಾದಪ್ಪ, ನಟೇಶ್ ಡಿ.ಬಿ.ಅವರ ವಿರುದ್ಧ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಆರ್.ಮಗದುಂ ಅವರು ಕರ್ತವ್ಯ ಲೋಪ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಇವರ ವಿರುದ್ಧ ಪೂರ್ವಾನುಮತಿ ನೀಡಬೇಕು ಎಂದು 2025ರ ಜ.28ರಂದು ಕಂದಾಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಪಿಎರ್‌ನ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಈ ಪ್ರಸ್ತಾವ ಸಲ್ಲಿಕೆಯಾಗಿ 1 ವರ್ಷ 5 ತಿಂಗಳಾದರೂ ಪೂರ್ವಾನುಮತಿ ದೊರೆತಿಲ್ಲ.
<ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ವಿಶ್ವನಾಥ್ ಡಿ. ಕಬ್ಬೂರಿ ಅವರು ಕ್ರಿಡಿಲ್‌ನ ಎಇಇ ಪ್ರಕಾಶ್ ಸಿ.ಪಿ, ಬಿಬಿಎಂಪಿಯ ಮಹದೇವಪುರ ವಲಯದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶ್ ರೆಡ್ಡಿ, ಬಿಬಿಎಂಪಿಯ ಸೂಪರಿಟೆಂಡಿಂಗ್ ಇಂಜಿನಿಯರ್ ಆರ್.ವಿ. ಮಂಜುನಾಥ್ ಅವರ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಪ್ರಾಥಮಿಕ ಪರಿಶೀಲನೆ ನಂತರ ಆಪಾದಿತ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿ ಲೋಕಾಯುಕ್ತ ಪೊಲೀಸ್ ವಿಭಾಗವು 2025ರ ಆ. 5ರಂದು ಕ್ರಿಡಿಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಈ ಕುರಿತು ಇದುವರೆಗೂ ಸಕ್ಷಮ ಪ್ರಾಧಿಕಾರವು ವಿಚಾರಣೆಗೆ ಪೂರ್ವಾನುಮತಿಯನ್ನೇ ನೀಡಿಲ್ಲ ಎಂದು ತಿಳಿದು ಬಂದಿದೆ.
<ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಂ.ಎ.ಸಾದಿಕ್, ಎಂ.ಕೆ. ಅಯ್ಯಪ್ಪ, ಡಾ. ಜಿ.ಸಿ.ಪ್ರಕಾಶ್, ಬೆಂಗಳೂರು ಉತ್ತರ ತಾಲೂಕಿನ ಹಿಂದಿನ ತಹಶೀಲ್ದಾರ್ ರಂಗನಾಥಯ್ಯ ಕೆ, ಬಿ.ವೆಂಕಟೇಶ್, ಬಾಳಪ್ಪ ಹಂದಿಗುಂದ, ಮಂಜುನಾಥ ಬಿ.ಆರ್. ಅವರ ವಿರುದ್ಧ ಬಿಜೆಪಿಯ ಎನ್.ಆರ್. ರಮೇಶ್ ಅವರು 2021ರಲ್ಲಿ ಎಸಿಬಿಗೆ ದೂರು ನೀಡಿದ್ದರು. ಇವರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ ಕಂದಾಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದರು. 2022ರ ಫೆ.9ರಂದು ಮೊದಲ ಪ್ರಸ್ತಾವ ಸಲ್ಲಿಸಿತ್ತು. ಇದಾದ ನಂತರ 2025ರ ಆ.26ರಂದು ಮೊದಲ ನೆನಪೋಲೆ ಕಳಿಸಿತ್ತು. 2026ರ ಜ.28ರಂದು 2ನೇ ನೆನಪೋಲೆ ಕಳಿಸಿತ್ತು. 2ನೇ ನೆನಪೋಲೆ ಕಳಿಸಿದ 4 ತಿಂಗಳಾದರೂ ವಿಚಾರಣೆಗೆ ಪೂರ್ವಾನುಮತಿ ದೊರೆತಿಲ್ಲ.
<ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ಎಂಬವರು ವಿಶೇಷ ಜಿಲ್ಲಾಧಿಕಾರಿ ರಂಗಪ್ಪ, ಸೋಮಶೇಖರ್, ಎಡಿಸಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ರಜನಿಕಾಂತ್, ಅಪೂರ್ವ ಬಿದರಿ, ರಘುನಂದನ್, ತಹಶೀಲ್ದಾರ್ ಶ್ರೀನಿವಾಸ್, ವಿಶೇಷ ತಹಶೀಲ್ದಾರ್ ಕೆಂಪೆಗೌಡ, ಕಂದಾಯ ನಿರೀಕ್ಷಕ ಮೋನಿಶ್, ನವೀನ್, ನಂಜೇಗೌಡ, ರವೀಂದ್ರ, ಮಂಜುನಾಥ್ ಎಂಬವರ ವಿರುದ್ಧ ಕರ್ತವ್ಯ ಲೋಪದ ಆರೋಪ ಹೊರಿಸಿ ದೂರು ನೀಡಿದ್ದರು. ಇವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಪಡೆದುಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕಂದಾಯ ಇಲಾಖೆ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಈ ಪ್ರಸ್ತಾವ ಆಧರಿಸಿ ಪೂರ್ವಾನುಮತಿ ನೀಡಲು ಮೀನಮೇಷ ಎಣಿಸುತ್ತಿರುವುದು ಗೊತ್ತಾಗಿದೆ.
ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ
ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೂ ಭ್ರಷ್ಟಾಚಾರ ಮತ್ತು ಇತರ ಅಪರಾಧಗಳ ಆರೋಪ ಎದುರಿಸುತ್ತಿರುವ ಕೆಎಎಸ್ ಸೇರಿದಂತೆ ಇನ್ನಿತರ ವೃಂದದ ಅಧಿಕಾರಿಗಳನ್ನು ಸಂಬಂಧಿತ ಪ್ರಾಧಿಕಾರಗಳು ರಕ್ಷಿಸುತ್ತಿವೆ. ಅಲ್ಲದೇ ಅವರಿಗೆ ಆಶ್ರಯವನ್ನೂ ನೀಡುತ್ತಿವೆ. ಸಂಬಂಧಿತ ಪ್ರಾಧಿಕಾರಗಳು ಪದೇ ಪದೇ ಕರ್ತವ್ಯ ಲೋಪ ಎಸಗುತ್ತಲೇ ಇದೆ. ಇಲಾಖೆಗಳ ಮುಖ್ಯಸ್ಥರು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡದ ಕಾರಣ ರಾಜ್ಯದಲ್ಲಿ ಆಡಳಿತ ದುರುಪಯೋಗಕ್ಕೂ ದಾರಿ ಮಾಡಿಕೊಡುತ್ತಿದೆ ಎಂದು ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು.






