ಸಮುದಾಯ ಅಭಿವೃದ್ಧಿ ನಿಗಮಗಳಿಗೆ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ!

ಸಾಂದರ್ಭಿಕ ಚಿತ್ರ
ಬೆಂಗಳೂರು : ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿನ ಸಮುದಾಯ ಅಭಿವೃದ್ಧಿ ನಿಗಮಗಳಿಗೆ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಹೀಗೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೇ ವಿಧಾನ ಪರಿಷತ್ನಲ್ಲಿ ಲಿಖಿತ ಉತ್ತರದ ಮೂಲಕ ಒಪ್ಪಿಕೊಂಡಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಚುನಾಯಿತರಾಗಿರುವ ಆರ್.ರಘು ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಶಿವರಾಜ್ ತಂಗಡಗಿ ಅವರು ಈ ಕುರಿತು ಮಾಹಿತಿ ಒದಗಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಒಟ್ಟು 17 ಸಮುದಾಯಗಳ ಅಭಿವೃದ್ಧಿ ನಿಗಮಗಳು ಕಾರ್ಯನಿರ್ವಹಿಸುತ್ತಿವೆ. 2026-27ನೇ ಸಾಲಿಗೆ ಈ 17 ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 473.41 ಕೋಟಿ ರೂ.ಅನುದಾನ ಹಂಚಿಕೆಯಾಗಿತ್ತು. ಈ ಅನುದಾನ ಹಂಚಿಕೆಯಾಗಿ ನಾಲ್ಕೂವರೆ ತಿಂಗಳಾದರೂ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಸಮುದಾಯ ಅಭಿವೃದ್ಧಿ ನಿಗಮಗಳ ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಗಳೇ ಕುಂಠಿತಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಲ್ಲದೇ ಡಿ.ದೇವರಾಜ ಅರಸು ಕಾಯಕ ಕಿರಣ, ಸಹಜೀರಾಜೇ ಸಮೃದ್ಧಿ ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ, ಜೀವಜಲ, ಜೀಜಾವು ಭಗೀರಥ ನೀರಾವರಿ ಯೋಜನೆ, ಅರಿವು ಬಸವ ಬೆಳಗು ಶೈಕ್ಷಣಿಕ ಸಾಲ ಯೋಜನೆ, ರಾಜಶ್ರೀ ಶಾಹು ಮಹಾರಾಜ/ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ಯೋಜನೆ, ಇಸ್ತ್ರಿ ಪೆಟ್ಟಿಗೆ ವಿತರಣೆ, ಮೌಲ್ಯಾಧಾರಿತ ಉತ್ಪನ್ನಗಳ ತಯಾರಿಕೆ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಕಾಲಕ್ಕೆ ಅನುದಾನ ಬಿಡುಗಡೆಯಾಗಿಲ್ಲ.
ಅದೇ ರೀತಿ 2026-27ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ 250 ಇಂಜಿನಿಯರಿಂಗ್ ಪದವೀಧರರಿಗೆ ಅವರ ತಾಂತ್ರಿಕ ಕೌಶಲವನ್ನು ಉತ್ಕೃಷ್ಟಗೊಳಿಸಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಎನ್ಐಟಿ, ಐಐಟಿ, ಐಐಎಂಗಳಲ್ಲಿ ಎಐ ತರಬೇತಿ ಪಡೆಯಲು ತಲಾ 2ಲಕ್ಷ ರೂಗಳಂತೆ ಸಾಲ ನೀಡಲಾಗುವುದು ಎಂದು ಆಯವ್ಯಯ (ಕಂಡಿಕೆ 211)ದಲ್ಲಿ ಘೋಷಿಸಿದ್ದರು. ಅದೇ ರೀತಿ ಬೆಂಗಳೂರು ಮೈಸೂರು ನಗರದ ದೋಬಿಘಾಟ್ಗಳಲ್ಲಿ ಮಡಿವಾಳ ಸಮಾಜದವರಿಗೆ ವಾಷಿಂಗ್ ಮೆಷೀನ್, ಡ್ರೈಯರ್, ಐರನಿಂಗ್ ಮಷೀನ್ ಇತ್ಯಾದಿ ಸಾಮಗ್ರಿಗಳನ್ನು ಒಳಗೊಂಡ 75 ಲಕ್ಷ ರೂ.ಘಟಕ ವೆಚ್ಚದಲ್ಲಿ ಆಧುನಿಕ ಲ್ಯಾಂಡ್ರಿಗಳನ್ನು ಸ್ಥಾಪಿಸಲಾಗುವುದು ಎಂದು ಆಯವ್ಯಯ (ಘೋಷಣೆ ಕಂಡಿಕೆ 208)ರಲ್ಲಿ ಘೋಷಿಸಿತ್ತು.
ಹಾಗೆಯೇ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಆಧುನಿಕ ಲ್ಯಾಂಡ್ರಿಗಳನ್ನು ಸ್ಥಾಪಿಸಲು 5 ಲಕ್ಷ ರೂ.ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಘೋಷಿಸಿದ್ದರು.
ಸವಿತಾ ಸಮಾಜದವರು ಸಲೂನ್ಗಳನ್ನು ತೆರೆಯಲು ಶೇ.4ರ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡಲಾಗುವುದು ಎಂದು ಘೋಷಿಸಿತ್ತು. ಈ ಎಲ್ಲಾ ಯೋಜನೆಗಳಿಗೆ ಸಂಬಂಧಿಸಿದಂತೆ ನಿಗಮಗಳು ವಾರ್ಷಿಕ ಕ್ರಿಯಾ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಸಲ್ಲಿಸಿವೆ. ಆದರೂ ಅನುದಾನದ ಪೈಕಿ ನಯಾ ಪೈಸೆಯನ್ನೂ ನೀಡಿಲ್ಲ. ಹೀಗಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ ಎಂದು ತಿಳಿದು ಬಂದಿದೆ.
ಯಾವ್ಯಾವ ನಿಗಮಕ್ಕೆ ಎಷ್ಟೆಷ್ಟು?
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 129.50 ಕೋಟಿ ರೂ., ಕರ್ನಾಟಕ ಉಪ್ಪಾರ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 11 ಕೋಟಿ ರೂ., ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 17.88 ಕೋಟಿ ರೂ., ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 6.88 ಕೋಟಿ ರೂ., ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 16.50 ಕೋಟಿ ರೂ., ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 82.50 ಕೋಟಿ ರೂ., ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 82.50 ಕೋಟಿ ರೂ., ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ 6.88 ಕೋಟಿ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ 12.38 ಕೋಟಿ ರೂ., ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ 20.63 ಕೋಟಿ ರೂ., ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 68.75 ಕೋಟಿ ರೂ., ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮಕ್ಕೆ 2 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು.
ಅದೇ ರೀತಿ ಕರ್ನಾಟಕ ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮಕ್ಕೆ 2 ಕೋಟಿ ರೂ., ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮಕ್ಕೆ 2 ಕೋಟಿ ರೂ., ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 10.01 ಕೋಟಿ ರೂ., ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮಕ್ಕೆ 2 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ಒಟ್ಟು 17 ಸಮುದಾಯ ಅಭಿವೃದ್ಧಿ ನಿಗಮಗಳಿಗೆ ಒಟ್ಟು 473.41 ಕೋಟಿ ರೂ.ಅನುದಾನ ಹಂಚಿಕೆಯಾಗಿತ್ತು. ಇದುವರೆಗೂ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.
2025ರ ಸೆಪ್ಟಂಬರ್ ಅಂತ್ಯಕ್ಕೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಪೈಕಿ 8 ನಿಗಮಗಳಲ್ಲಿ 72.55 ಕೋಟಿ ರೂ. ಅನುದಾನ ಬಳಕೆಯಾಗದೇ ಹಾಗೇ ಉಳಿದಿತ್ತು. ಈ ಕುರಿತು ‘the-file.in’ 2025ರ ಸೆ.11ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.






