Bengaluru | ಸಿಬ್ಬಂದಿ ತಪ್ಪಲ್ಲ, ಟ್ರಾಫಿಕ್ ತಾಪತ್ರಯ; ಖಾಲಿ ಕಚೇರಿಯ ಫೋಟೋ ಹಾಕಿ ಬೇಸರಪಟ್ಟ ಸ್ಟಾರ್ಟಪ್ ಮಾಲೀಕ!

Photo Credit : LinkedIn/Bala Panneerselvam)
ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಲಿಂಕ್ಡ್ಇನ್ ಪೋಸ್ಟ್ ನಲ್ಲಿ ಬೆಳಿಗ್ಗೆ 10:15ಕ್ಕೆ ಖಾಲಿ ಕಚೇರಿಯನ್ನು ತೋರಿಸಿ, ಸಿಬ್ಬಂದಿ ತಡವಾಗಿ ಆಗಮಿಸುತ್ತಿರುವುದಕ್ಕೆ ನಗರದ ಸಂಚಾರ ದಟ್ಟಣೆಯನ್ನು ಕಾರಣವೆಂದು ಹೇಳಿದ್ದಾರೆ.
ಬೆಂಗಳೂರು ಮೂಲದ ಸ್ಟಾರ್ಟಪ್ ಸಂಸ್ಥಾಪಕ ಹಾಗೂ ಅಪ್ಲೈಡ್ AI ಸ್ಟುಡಿಯೊ ಮತ್ತು ಅಪ್ಲೈಡ್ AI ಕ್ಲಬ್ ಸಮುದಾಯದ ಸಂಸ್ಥಾಪಕ ಬಾಲಾ ಪನ್ನೀರ್ ಸೆಲ್ವಂ ಅವರು ಲಿಂಕ್ಡ್ಇನ್ನಲ್ಲಿ ತಮ್ಮ ಕಚೇರಿಯ ಫೋಟೋ ಹಂಚಿಕೊಂಡು, ಖಾಲಿಯಾಗಿದ್ದ ಮೇಜು–ಕುರ್ಚಿಗಳಿಗೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಾರಣವಾಗಿ ನೀಡಿದ್ದಾರೆ. ಸಂಸ್ಥಾಪಕರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಚೇರಿಗೆ ಆಗಮಿಸಿದಾಗ ಕಚೇರಿ ನಿರ್ಜನವಾಗಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದರು.
“ಬೆಂಗಳೂರಿನ ಕಚೇರಿ ಬೆಳಗ್ಗೆ 10:15ಕ್ಕೆ ಹೇಗೆ ಕಾಣಿಸುತ್ತದೆ? ಬೆಳಗ್ಗೆ ಜನರೇ ಬಾರದೆ ಇದ್ದರೆ ನಾವು ಉತ್ತಮ ಕಾರ್ಯಕ್ಷಮತೆ ತೋರಿಸುವುದಾದರೂ ಹೇಗೆ? ಸಮಸ್ಯೆ ಜನರಲ್ಲಿಲ್ಲ. ಬದಲಾಗಿ ಕಚೇರಿಗೆ ಆಗಮಿಸಲು ತೆಗೆದುಕೊಳ್ಳುವ ಸಮಯದಲ್ಲಿದೆ” ಎಂದು ಅವರು ಹೇಳಿದ್ದಾರೆ.
ಅವರು ಮುಂದುವರಿದು, “HSR ಪ್ರದೇಶದಲ್ಲಿ 4 ಕಿಮೀ ದೂರ ಕ್ರಮಿಸಲು ಸ್ಕೂಟರ್ ನಲ್ಲಿ 20 ನಿಮಿಷ ಮತ್ತು ಕಾರಿನಲ್ಲಿ 30 ನಿಮಿಷಗಳು ಹಿಡಿಯುತ್ತದೆ. ಸಂಚಾರ ದಟ್ಟಣೆ ಇರುವ ಸಮಯದಲ್ಲಿ ಇನ್ನೂ 10 ನಿಮಿಷ ಸೇರಿಸಿ. ಸಿಗ್ನಲ್ ಗಳನ್ನು ತಪ್ಪಿಸಿ, ಓಲಾಡುತ್ತಾ ಮತ್ತು ಅಲ್ಲಾಡುತ್ತಾ ಕಚೇರಿಗೆ ದ್ವಿಚಕ್ರ ವಾಹನಗಳಲ್ಲಿ ಬಂದಾದ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದ ಮೇಲೆ ಹೊಸ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಸಂಜೆ 6 ಗಂಟೆಯ ನಂತರ ಕಚೇರಿ ತೊರೆದರೆ ಮನೆ ತಲುಪಲು ಡಬಲ್ ಸಮಯ ತೆಗೆದುಕೊಳ್ಳುತ್ತದೆ. 5 ಗಂಟೆಗೆ ಕಚೇರಿ ತೊರೆದರೂ ಮನೆಗೆ ಹೋದ ನಂತರ ಯಾವುದೇ ವೈಯಕ್ತಿಕ ಕೆಲಸ ಮಾಡಲು ಆಸಕ್ತಿ ಇರದಷ್ಟು ಸುಸ್ತಾಗಿರುತ್ತದೆ. ಹೀಗಾಗಿ ಮರುದಿನ ಬೆಳಗ್ಗೆ ತಡವಾಗಿ ಆಗಮಿಸುತ್ತಾರೆ” ಎಂದು ಅವರು ಬರೆದಿದ್ದಾರೆ.
ಬಾಲಾ ಪನ್ನೀರ್ ಸೆಲ್ವಂ ತಮ್ಮದೇ ಅನುಭವವನ್ನೂ ಹಂಚಿಕೊಂಡಿದ್ದಾರೆ. ವೈಟ್ಫೀಲ್ಡ್ ಮತ್ತು HSR ನಡುವೆ 17 ಕಿಮೀ ಅಂತರವನ್ನು ಸಾಗಲು ಎರಡು ಗಂಟೆಗಳು ಹಿಡಿಯುತ್ತವೆ. ಮಳೆ ಅಥವಾ ಇನ್ಯಾವುದೇ ಅಡೆತಡೆಗಳು ಇಲ್ಲದ ಸಮಯದಲ್ಲೂ ಇಷ್ಟು ತಡವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. “ನಗರದಲ್ಲಿ ಉತ್ತಮ ಕೆಲಸ ಮಾಡುವ ನಮ್ಮ ಸಾಮರ್ಥ್ಯವನ್ನು ನಾವು ಸಂಪೂರ್ಣ ನಾಶಪಡಿಸುತ್ತಿದ್ದೇವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಸುತ್ತಮುತ್ತಲಿನ ಅವ್ಯವಸ್ಥೆಯಲ್ಲಿ ನಿರಂತರವಾಗಿ ಮುಳುಗಿರುವಾಗ ಯೋಚಿಸಲು ಸಮಯ ಮತ್ತು ಮಾನಸಿಕ ಸ್ಥಳವನ್ನು ಅವರು ಹೇಗೆ ಕಂಡುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಅನೇಕ ನಿವಾಸಿಗಳು ಈ ಪೋಸ್ಟ್ ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಬಹಳಷ್ಟು ಮಂದಿ ತಮ್ಮ ಭಯಾನಕ ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಆಕಸ್ಮಿಕವಾಗಿ ತಡೆಹಿಡಿದ ರಸ್ತೆಗಳನ್ನು ತಪ್ಪಿಸಿ ಹೊಸ ದಾರಿಯಲ್ಲಿ ಹೋಗಬೇಕಾದ ಅನಿವಾರ್ಯತೆಯಿಂದ ಸುತ್ತು ಹಾಕಿ ಸಾಗುವುದು ಮತ್ತು ಇತರ ನಗರ ಸಂಚಾರದ ದೈನಂದಿನ ಅನನುಕೂಲತೆಗಳನ್ನು ಕಮೆಂಟ್ ಗಳಲ್ಲಿ ಹೇಳಿಕೊಂಡಿದ್ದಾರೆ.






