ನಿತ್ಯವೂ ಡಿಫ್ಯೂಸರ್ ತೈಲದ ಬಳಕೆ ಉತ್ತಮ ಅಭ್ಯಾಸವೆ?

ಸಾಂದರ್ಭಿಕ ಚಿತ್ರ | Photo Credit : magnific.com
ಸೂಕ್ತ ವೆಂಟಿಲೇಶನ್ ಕೊರತೆ ಇರುವ ಮತ್ತು ದಿನವಿಡೀ ಮುಚ್ಚಿರುವ ಸ್ಥಳಗಳಲ್ಲಿ ತೈಲ ಡಿಫ್ಯೂಸರ್ಗಳ ಬಳಕೆಯನ್ನು ತಪ್ಪಿಸಬೇಕು!
ಅಂತರ್ಜಾಲದಲ್ಲಿ ಒತ್ತಡ ನಿವಾರಣೆಯ ಅನೇಕ ಮಾರ್ಗದರ್ಶಿಗಳಿವೆ. ಅವುಗಳಲ್ಲಿ ಸುಲಭವಾದ ತಂತ್ರವೆಂದರೆ ತೈಲ ಡಿಫ್ಯೂಸರ್ ಅನ್ನು ಆನ್ ಮಾಡುವುದು. ಇದರಿಂದ ನಿಮ್ಮ ಕೋಣೆಯಲ್ಲಿ ಉತ್ತಮ ಸುವಾಸನೆ ಮೂಡುತ್ತದೆ, ಮನಸ್ಸು ಶಾಂತವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ತಂತ್ರ ನಿಜವಾಗಿಯೂ ಒಳ್ಳೆಯದೇ? ತಜ್ಞರು ಏನು ಹೇಳುತ್ತಾರೆ?
ಗ್ರೇಟರ್ ಕೈಲಾಶ್ ನ ಕೈಲಾಶ್ ಆಸ್ಪತ್ರೆಯ ಪಲ್ಮನಾಲಜಿಸ್ಟ್ ಸಲಹೆಗಾರ ಡಾ. ಸಾಗರ್ ಶ್ರೀವಾಸ್ತವ ಅವರ ಪ್ರಕಾರ, ಪ್ರಮುಖ ಕಾಳಜಿ ವೆಂಟಿಲೇಶನ್. ಸೂಕ್ತ ವೆಂಟಿಲೇಶನ್ ಕೊರತೆ ಇರುವ ಮತ್ತು ದಿನವಿಡೀ ಮುಚ್ಚಿರುವ ಸ್ಥಳಗಳಲ್ಲಿ ತೈಲ ಡಿಫ್ಯೂಸರ್ಗಳ ಬಳಕೆಯನ್ನು ತಪ್ಪಿಸಬೇಕು!
ಡಿಫ್ಯೂಸರ್ಗಳು ಏರೋಸೋಲೈಸೇಶನ್ ಎಂಬ ಪ್ರಕ್ರಿಯೆಯ ಮೂಲಕ ಗಾಳಿಯಲ್ಲಿ ತೈಲದ ಕಣಗಳನ್ನು ಬಿಡುಗಡೆ ಮಾಡುತ್ತವೆ. ಅವು ಒಳಾಂಗಣದಲ್ಲಿ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು (VOCs) ಹರಡುತ್ತವೆ. ಸುಗಂಧವು ಹಿತಕರವೆನಿಸಿದರೂ, ಗಾಳಿಯಾಡದ ಜಾಗದಲ್ಲಿ ಇವು ನಿರಂತರವಾಗಿ ಬಿಡುಗಡೆಯಾದರೆ ಸಂಯುಕ್ತಗಳು ಶೇಖರಣೆಯಾಗುತ್ತವೆ.
ಬಾಷ್ಪಶೀಲ ಸಾವಯವ ಸಂಯುಕ್ತಗಳ ನಿರಂತರ ಬಿಡುಗಡೆಯು ಒಳಾಂಗಣ ಸ್ಥಳಗಳಲ್ಲಿ ಹೆಚ್ಚಾಗಿ ಸಂಗ್ರಹವಾಗಬಹುದು ಮತ್ತು ಉಸಿರಾಟದ ಅಂಗಗಳಿಗೆ ಅಪಾಯ ಉಂಟುಮಾಡಬಹುದು. ಆದರೆ ಕಡಿಮೆ ಅವಧಿಗೆ ಮಾತ್ರ ಬಳಸಿದರೆ ಹಾಗೂ ಸಾಕಷ್ಟು ಗಾಳಿಯಾಡುವ ವ್ಯವಸ್ಥೆ ಇದ್ದರೆ, ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸೇರುವುದಿಲ್ಲ ಮತ್ತು ಒಳಾಂಗಣ ವಾಯು ಗುಣಮಟ್ಟವೂ ಕಾಪಾಡಲ್ಪಡುತ್ತದೆ.
ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಲು ಮಾತ್ರವಲ್ಲ, ನಿತ್ಯವೂ ಡಿಫ್ಯೂಸರ್ಗೆ ಒಡ್ಡಿಕೊಳ್ಳುವುದರಿಂದ ದೇಹದ ಮೇಲೂ ನೇರ ಪರಿಣಾಮ ಬೀಳಬಹುದು. ಡಿಫ್ಯೂಸರ್ ತೈಲಗಳಿಗೆ ಪದೇಪದೆ ಒಡ್ಡಿಕೊಳ್ಳುವುದರಿಂದ ಲೋಳೆಯ ಪೊರೆಯ ಒಳಪದರಕ್ಕೆ (mucous membrane lining) ಕಿರಿಕಿರಿ ಉಂಟಾಗಬಹುದು. ಇದರಿಂದ ಕೆಲವರಲ್ಲಿ ಕೆಮ್ಮು, ಉಬ್ಬಸ, ಗಂಟಲಿನ ಕಿರಿಕಿರಿ ಅಥವಾ ಅಲರ್ಜಿಯ ಪ್ರತಿಕ್ರಿಯೆಗಳು ಕಾಣಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಲ್ಲದೆ, ಕೆಲವು ತೈಲಗಳಲ್ಲಿ ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಸಂಯುಕ್ತಗಳಿರುತ್ತವೆ. ಹೀಗಾಗಿ ಡರ್ಮಟೈಟಿಸ್ ಅಥವಾ ರೈನಿಟಿಸ್ ರೋಗ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆಯೂ ಇದೆ. ಡಿಫ್ಯೂಸರ್ ಬಳಕೆಯ ನಂತರ ಗಂಟಲಿನ ಅಸ್ವಸ್ಥತೆ, ಕೆಮ್ಮು ಅಥವಾ ಚರ್ಮದ ಪ್ರತಿಕ್ರಿಯೆಗಳು ಕಂಡುಬಂದರೆ ಜಾಗರೂಕರಾಗಬೇಕು.
ಯಾರು ಜಾಗರೂಕರಾಗಬೇಕು?
ಹಾನಿಕರವಲ್ಲದ ಅಭ್ಯಾಸ ಎಂದುಕೊಳ್ಳುವ ಡಿಫ್ಯೂಸರ್ ಕೆಲವರಿಗೆ ಅಪಾಯಕಾರಿಯಾಗಬಹುದು. ವೈದ್ಯರ ಪ್ರಕಾರ, “ಮಕ್ಕಳು, ಹಿರಿಯರು, ಅಸ್ತಮಾ ರೋಗಿಗಳು ಹಾಗೂ ದೀರ್ಘಕಾಲದ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಆರೋಗ್ಯ ಅಪಾಯ ಎದುರಿಸಬಹುದು.”
ಮಕ್ಕಳಲ್ಲಿ ವಾಯುಮಾರ್ಗಗಳ ಬೆಳವಣಿಗೆಯ ಹಂತದಲ್ಲಿರುವುದರಿಂದ, ಹಿರಿಯರಲ್ಲಿ ವಯೋಸಹಜ ಬದಲಾವಣೆಗಳ ಕಾರಣದಿಂದ ಹಾಗೂ ಈಗಾಗಲೇ ಉಸಿರಾಟದ ಸಮಸ್ಯೆಗಳಿರುವವರಲ್ಲಿ ಇದರ ಪರಿಣಾಮಗಳಿಗೆ ಹೆಚ್ಚು ಸೂಕ್ಷ್ಮತೆ ಕಾಣಿಸಬಹುದು.
ಡಿಫ್ಯೂಸರ್ ಬಳಸುವುದೇ ಬೇಡವೆ?
ಅಪಾಯವಿದೆ ಎಂದಾಕ್ಷಣ ಬಳಸಬಾರದು ಎಂದಲ್ಲ. ಎಷ್ಟು ಸಮಯ ಬಳಸಲಾಗುತ್ತದೆ ಎಂಬುದೇ ಮುಖ್ಯ. ಸಾಮಾನ್ಯವಾಗಿ ಡಿಫ್ಯೂಸರ್ ಅನ್ನು 20ರಿಂದ 30 ನಿಮಿಷಗಳವರೆಗೆ ಮಾತ್ರ ಬಳಸುವುದು ಸೂಕ್ತ. ದಿನಕ್ಕೆ ಎರಡು ಬಾರಿ ಈ ಅವಧಿಯಲ್ಲಿ ಬಳಸಬಹುದು. ತೈಲದ ದಟ್ಟತೆಯನ್ನು ಸಮತೋಲನದಲ್ಲಿ ಇಡುವುದು ಮುಖ್ಯ. ಅಧಿಕ ಪ್ರಮಾಣದಲ್ಲಿ ಬಳಸಬಾರದು. ಉಸಿರಾಟದ ಅಸ್ವಸ್ಥತೆ ಉಂಟಾದರೆ ತಕ್ಷಣ ಬಳಕೆ ನಿಲ್ಲಿಸಬೇಕು.






