ಆನ್ಲೈನ್ ಅಶ್ಲೀಲತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ: ಕೇಂದ್ರದ ಕರಡು ಐಟಿ (ಡಿಜಿಟಲ್ ಕೋಡ್) ನಿಯಮಗಳು ಏನು ಹೇಳುತ್ತವೆ?

ಸಾಂದರ್ಭಿಕ ಚಿತ್ರ | Photo Credit : freepik
ಭಾರತ ಸರ್ಕಾರವು ಕರಡು ಐಟಿ (ಡಿಜಿಟಲ್ ಕೋಡ್) ನಿಯಮಗಳು, 2026 ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ನಿಯಮಾವಳಿಗಳು ಇಂಟರ್ನೆಟ್ನಲ್ಲಿ ಅನುಚಿತ ನಡವಳಿಕೆ ಹಾಗೂ ಅಶ್ಲೀಲ ವಿಷಯವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿವೆ. ಈ ಹೊಸ ನಿಯಮಗಳ ಅಡಿಯಲ್ಲಿ, ಧರ್ಮಗಳ ಮೇಲೆ ದಾಳಿ ಮಾಡುವ, ಹಿಂಸೆಯನ್ನು ಪ್ರಚೋದಿಸುವ ಅಥವಾ ಜನರನ್ನು ದಾರಿತಪ್ಪಿಸಲು ಸೂಚ್ಯ ಮತ್ತು ಸುಳ್ಳು ಸುಳಿವುಗಳನ್ನು ಬಳಸುವ ವಿಷಯವನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಪ್ರಸ್ತಾವನೆಯ ಪ್ರಮುಖ ಭಾಗವೆಂದರೆ ವಯಸ್ಸಿನ ಆಧಾರದಲ್ಲಿ ವಿಷಯಗಳನ್ನು ವರ್ಗೀಕರಿಸುವುದು. ಅಂದರೆ, ಎಲ್ಲಾ ಡಿಜಿಟಲ್ ವಿಷಯವು ಮಕ್ಕಳಿಗೆ ಅಥವಾ ವಯಸ್ಕರಿಗೆ ಸೂಕ್ತವಾಗಿದೆಯೇ ಎಂಬುದರ ಆಧಾರದ ಮೇಲೆ ಉಲ್ಲೇಖ ಮಾಡಬೇಕಾಗುತ್ತದೆ.
ಮೂಲಗಳ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಟಿ ಕಾಯ್ದೆ, 2000ರ ಸೆಕ್ಷನ್ 87(1) ಅಡಿಯಲ್ಲಿ ಕರಡು ಐಟಿ (ಡಿಜಿಟಲ್ ಕೋಡ್) ನಿಯಮಗಳು, 2026 ಅನ್ನು ಪ್ರಸ್ತಾಪಿಸಿದೆ. ಈ ನಿಯಮಗಳು ಕಾಯ್ದೆಯ ಸೆಕ್ಷನ್ 67, 67ಎ, 67ಬಿ ಮತ್ತು 66ಬಿ ಅಡಿಯಲ್ಲಿ ಬರುತ್ತವೆ. ಐಟಿ ಕಾಯ್ದೆಯ ಸೆಕ್ಷನ್ 67 ಪ್ರಕಾರ, ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸಿದರೆ ಅಥವಾ ರವಾನಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.
ಕೇಬಲ್ ಟಿವಿ ನೆಟ್ವರ್ಕ್ ನಿಯಮಗಳು, 1994ರ ಅಡಿಯಲ್ಲಿ ಇರುವ ಕಾರ್ಯಕ್ರಮ ಸಂಹಿತೆಯಿಂದ ಎರವಲು ಪಡೆದಿರುವಂತೆ ತೋರುವ ಕರಡು ಐಟಿ (ಡಿಜಿಟಲ್ ಕೋಡ್) ನಿಯಮಗಳು, 2026, ಯಾವುದೇ ಡಿಜಿಟಲ್ ವಿಷಯವು ಸಭ್ಯತೆಯನ್ನು ಮೀರಿದ್ದರೆ ಅಥವಾ ಅಂತಹ ವಿಷಯಗಳ ಮೂಲಕ ಆಕರ್ಷಿಸುತ್ತಿದ್ದರೆ ಅದನ್ನು ಅಶ್ಲೀಲವೆಂದು ಪರಿಗಣಿಸಲಾಗುತ್ತದೆ ಎಂದು ಹೇಳುತ್ತವೆ.
►ಕರಡು ನಿಯಮಗಳ ಪ್ರಕಾರ, ಡಿಜಿಟಲ್ ಕಂಟೆಂಟ್ನಲ್ಲಿ ಈ ಕೆಳಗಿನವುಗಳನ್ನು ಮಾಡಬಾರದು:
ಉತ್ತಮ ಅಭಿರುಚಿ ಅಥವಾ ಸಭ್ಯತೆಗೆ ವಿರುದ್ಧವಾಗಿರುವುದು
ಯಾವುದೇ ಜನಾಂಗ, ಜಾತಿ, ಬಣ್ಣ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಅವಹೇಳನ ಮಾಡುವುದು
ಧರ್ಮಗಳು ಅಥವಾ ಸಮುದಾಯಗಳ ಮೇಲೆ ದಾಳಿ ಮಾಡುವ, ಅಥವಾ ಧಾರ್ಮಿಕ ಗುಂಪುಗಳನ್ನು ಅವಹೇಳನ ಮಾಡುವ ಅಥವಾ ಕೋಮು ಮನೋಭಾವಗಳನ್ನು ಉತ್ತೇಜಿಸುವ ದೃಶ್ಯಗಳು ಅಥವಾ ಪದಗಳನ್ನು ಹೊಂದಿರುವುದು
ಯಾವುದೇ ಅಶ್ಲೀಲ, ಮಾನಹಾನಿಕರ, ಉದ್ದೇಶಪೂರ್ವಕ, ಸುಳ್ಳು ಹಾಗೂ ಸೂಚ್ಯ ವ್ಯಂಗ್ಯಗಳು ಮತ್ತು ಅರ್ಧಸತ್ಯಗಳನ್ನು ಒಳಗೊಂಡಿರುವುದು
ಜನರನ್ನು ಅಪರಾಧಕ್ಕೆ ಪ್ರಚೋದಿಸುವುದು, ಅವ್ಯವಸ್ಥೆ ಅಥವಾ ಹಿಂಸೆಯನ್ನು ಉಂಟುಮಾಡುವುದು, ಕಾನೂನು ಉಲ್ಲಂಘನೆ ಮಾಡುವುದು ಅಥವಾ ಯಾವುದೇ ರೀತಿಯಲ್ಲಿ ಹಿಂಸೆ ಅಥವಾ ಅಶ್ಲೀಲತೆಯನ್ನು ವೈಭವೀಕರಿಸುವುದು
ಹಿಂಸೆ, ಅಶ್ಲೀಲತೆ ಅಥವಾ ಅಪರಾಧವನ್ನು ಅಪೇಕ್ಷಣೀಯವೆಂದು ಪ್ರದರ್ಶಿಸುವುದು
ಅಸಭ್ಯ, ಅಶ್ಲೀಲ ಸೂಚಕ, ಅಸಹ್ಯಕರ ಅಥವಾ ಆಕ್ರಮಣಕಾರಿ ವಿಷಯಗಳನ್ನು ಪ್ರತಿನಿಧಿಸುವುದು
ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಅಥವಾ ಕೆಲವು ಗುಂಪುಗಳು, ದೇಶದ ಸಾಮಾಜಿಕ, ಸಾರ್ವಜನಿಕ ಮತ್ತು ನೈತಿಕ ಜೀವನದ ಭಾಗಗಳನ್ನು ಟೀಕಿಸುವುದು, ಕೆಣಕುವುದು ಅಥವಾ ನಿಂದಿಸುವುದು
ಕೆಲವು ಜನಾಂಗೀಯ, ಭಾಷಾ ಮತ್ತು ಪ್ರಾದೇಶಿಕ ಗುಂಪುಗಳ ಚಿತ್ರಣದಲ್ಲಿ ನಿಂದನಾತ್ಮಕ, ವ್ಯಂಗ್ಯಾತ್ಮಕ ಮತ್ತು ಅಶ್ಲೀಲ ಮನೋಭಾವವನ್ನು ಪ್ರತಿಬಿಂಬಿಸುವ ದೃಶ್ಯಗಳು ಅಥವಾ ಪದಗಳನ್ನು ಹೊಂದಿರುವುದು
ಮಹಿಳೆಯರ ಆಕೃತಿ, ಆಕೆಯ ರೂಪ ಅಥವಾ ದೇಹ ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ರೀತಿಯಲ್ಲಿ ಸೃಷ್ಟಿಸುವುದು, ಹಂಚಿಕೊಳ್ಳುವುದು, ಬಳಸುವುದು, ಅಪ್ಲೋಡ್ ಮಾಡುವುದು ಅಥವಾ ಚಿತ್ರಿಸುವುದು
ಈ ಮೂಲಕ ಅಸಭ್ಯ ಅಥವಾ ಮಹಿಳೆಯರಿಗೆ ಅವಹೇಳನಕಾರಿಯಾದ ಯಾವುದೇ ವಿಷಯವನ್ನು ಪ್ರಕಟಿಸುವುದು
ಮಕ್ಕಳನ್ನು ಅವಹೇಳನ ಮಾಡುವುದು
ಮಕ್ಕಳಿಗಾಗಿ ಉದ್ದೇಶಿತ ವಿಷಯದಲ್ಲಿ ಯಾವುದೇ ಕೆಟ್ಟ ಭಾಷೆ ಅಥವಾ ಹಿಂಸೆಯ ಸ್ಪಷ್ಟ ದೃಶ್ಯಗಳನ್ನು ಒಳಗೊಂಡಿರುವುದು
ವಿಕಲಚೇತನ ವ್ಯಕ್ತಿಗಳನ್ನು ಅವಹೇಳನ ಮಾಡುವುದು
ಹಿಂಸೆ, ಅಶ್ಲೀಲತೆ, ನಗ್ನತೆ, ಲೈಂಗಿಕತೆ, ಭಾಷೆ, ಮಾದಕ ದ್ರವ್ಯಗಳು ಮತ್ತು ಭಯಾನಕತೆ ಸೇರಿದಂತೆ ಥೀಮ್ಗಳು ಮತ್ತು ಸಂದೇಶಗಳ ಆಧಾರದ ಮೇಲೆ ಲೇಬಲ್ಗಳೊಂದಿಗೆ ಎಲ್ಲಾ ಡಿಜಿಟಲ್ ವಿಷಯದ ವರ್ಗೀಕರಣವನ್ನು ಕರಡು ಸಂಹಿತೆ ಕಡ್ಡಾಯಗೊಳಿಸುತ್ತದೆ. ಇದು ವಯಸ್ಸಿನ ಸೂಕ್ತತೆಯ ಆಧಾರದ ಮೇಲೆ ಎಲ್ಲಾ ಡಿಜಿಟಲ್ ವಿಷಯದ ವರ್ಗೀಕರಣವನ್ನು ಪ್ರಸ್ತಾಪಿಸುತ್ತದೆ. ಎಲ್ಲಾ ವಯಸ್ಸಿನವರಿಗೆ ‘U’, 7+, 13+, 16+, ವಯಸ್ಕರಿಗೆ ಮಾತ್ರ, ಹಾಗೂ ವೈದ್ಯರು ಅಥವಾ ವಿಜ್ಞಾನಿಗಳಂತಹ ವೃತ್ತಿಪರರಿಗೆ ನಿರ್ದಿಷ್ಟ ವರ್ಗಗಳಂತೆ ವಿಷಯವನ್ನು ವರ್ಗೀಕರಿಸಬೇಕು ಎಂದು ಸೂಚಿಸಲಾಗಿದೆ.
ಬಳಕೆದಾರರಿಗೆ ಮಾಹಿತಿ ನೀಡಲು ಮತ್ತು ತಿಳುವಳಿಕೆಯುಳ್ಳ ವೀಕ್ಷಣಾ ನಿರ್ಧಾರಗಳನ್ನು ಸಾಧ್ಯವಾಗಿಸಲು, ಎಲ್ಲಾ ಡಿಜಿಟಲ್ ವಿಷಯವು ಆರಂಭದಲ್ಲೇ ಪ್ರಮುಖ ವಿಷಯ ವಿವರಣೆ ಮತ್ತು ವಯಸ್ಸಿನ ರೇಟಿಂಗ್ ಅನ್ನು ಪ್ರದರ್ಶಿಸಬೇಕು ಎಂದು ಅದು ಹೇಳುತ್ತದೆ. U/A 13+ ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ಹೊಂದಿರುವ ವಿಷಯವು ಪೋಷಕರ ನಿಯಂತ್ರಣ ವ್ಯವಸ್ಥೆಗಳನ್ನು ಹೊಂದಿರಬೇಕು. ವಯಸ್ಕರಿಗೆ ಮಾತ್ರ ಇರುವ ವಿಷಯವು ವಿಶ್ವಾಸಾರ್ಹ ವಯಸ್ಸು ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರಬೇಕು.
2021ರ ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಎಲ್ಲಾ ನಿಬಂಧನೆಗಳು ಈ ಹೊಸ ನಿಯಮಗಳಿಗೆ ಸಹ ಅನ್ವಯವಾಗುತ್ತವೆ.
ನ್ಯಾಯಾಲಯದ ನಿರ್ದೇಶನಗಳ ಪ್ರಕಾರ ಕರಡು ಸಂಹಿತೆಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಅಂತಿಮಗೊಳಿಸಿದ ಬಳಿಕ ಸಾರ್ವಜನಿಕ ಸಮಾಲೋಚನೆಗಾಗಿ ಹಂಚಿಕೊಳ್ಳಲಾಗುತ್ತದೆ ಎಂದು ಐ & ಬಿ ಸಚಿವಾಲಯದ ವಕ್ತಾರರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
►ಕಳವಳ ವ್ಯಕ್ತಪಡಿಸಿದ ಕಂಟೆಂಟ್ ಕ್ಯುರೇಟರ್ಗಳು
ಈ ನಡುವೆ, ಸರ್ಕಾರದ ಈ ನಿರ್ಧಾರವು ಕಂಟೆಂಟ್ ಕ್ಯುರೇಟರ್ಗಳಲ್ಲಿ ಸಂಭಾವ್ಯ ಅನಿಯಂತ್ರಿತ ಮತ್ತು ವ್ಯಾಪಕ ದೂರುಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅಶ್ಲೀಲತೆಗೆ ದಂಡ ಪರಿಚಯಿಸುವ ಸರ್ಕಾರದ ಯೋಜನೆಯು ಸ್ಟ್ರೀಮಿಂಗ್ ಸೇವೆಗಳನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂಬುದನ್ನು ಸಂಪೂರ್ಣವಾಗಿ ಬದಲಾಯಿಸಬಹುದು ಎಂದು ಉದ್ಯಮ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲದಿಂದಲೂ ಕಾನೂನು ಸಾಂಪ್ರದಾಯಿಕ ಟಿವಿ ಮತ್ತು ಆನ್ಲೈನ್ ಸ್ಟ್ರೀಮಿಂಗ್ ನಡುವೆ ‘ಸೂಕ್ಷ್ಮ ವ್ಯತ್ಯಾಸ’ವನ್ನು ಕಾಯ್ದುಕೊಂಡಿತ್ತು. ಸಾಂಪ್ರದಾಯಿಕ ಟಿವಿಯನ್ನು ಯಾರಾದರೂ ನೋಡಬಹುದಾದ ಸಾರ್ವಜನಿಕ ವಿಷಯವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಸ್ಟ್ರೀಮಿಂಗ್ ಸೇವೆಗಳನ್ನು ಬಳಕೆದಾರರು ಆಯ್ಕೆ ಮಾಡಿಕೊಂಡು ವೀಕ್ಷಿಸುವ ಖಾಸಗಿ ವಿಷಯವೆಂದು ನೋಡಲಾಗುತ್ತಿತ್ತು.
ಈ ಹೊಸ ನಿಯಮಗಳು ಆ ವ್ಯತ್ಯಾಸವನ್ನು ನಿರ್ಲಕ್ಷಿಸಿ, ನೆಟ್ಫ್ಲಿಕ್ಸ್ನಂತಹ ಅಪ್ಲಿಕೇಶನ್ಗಳನ್ನು ಕೇಬಲ್ ಟಿವಿ ಚಾನೆಲ್ಗಳಂತೆ ಪರಿಗಣಿಸುತ್ತಿವೆ ಎಂದು ಕಂಟೆಂಟ್ ಕ್ಯುರೇಟರ್ಗಳು ವಾದಿಸುತ್ತಾರೆ. ಆಯ್ಕೆ-ಆಧಾರಿತ ಆಧುನಿಕ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಕಟ್ಟುನಿಟ್ಟಾದ, ಹಳೆಯ ಶೈಲಿಯ ನಿಯಮಗಳನ್ನು ಅನ್ವಯಿಸುವ ಮೂಲಕ ಸೃಜನಶೀಲ ಸ್ವಾತಂತ್ರ್ಯವನ್ನು ನಾಶಪಡಿಸಲಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ, ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆಯನ್ನು ಹೊರಡಿಸುವ ಸಂದರ್ಭದಲ್ಲಿ, OCCP ಪ್ಲಾಟ್ಫಾರ್ಮ್ಗಳಿಗಾಗಿ ಕಾರ್ಯಕ್ರಮ ಸಂಹಿತೆಯನ್ನು ಅಳವಡಿಸಿಕೊಳ್ಳುವ ಆಯ್ಕೆಯನ್ನು ಸಚಿವಾಲಯ ತಿರಸ್ಕರಿಸಿತ್ತು. ಅಂದಿನ ನಿರ್ಧಾರದಲ್ಲಿ ಮೂಲಭೂತ ತಾಂತ್ರಿಕ ವ್ಯತ್ಯಾಸಗಳನ್ನು ಒಪ್ಪಿಕೊಳ್ಳಲಾಗಿತ್ತು.
ಆದರೆ ಈಗ ಯಾವುದೇ ಸ್ಪಷ್ಟ ಕಾರಣವಿಲ್ಲದೆ ತನ್ನ ಹಿಂದಿನ ನಿಲುವನ್ನು ಬದಲಾಯಿಸುವ ಮೂಲಕ, ಸಚಿವಾಲಯವು ಯಶಸ್ವಿಯಾಗಿ ಬೆಳೆಯುತ್ತಿರುವ ಡಿಜಿಟಲ್ ಉದ್ಯಮದಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಕಂಟೆಂಟ್ ಕ್ಯುರೇಟರ್ಗಳು ಅಭಿಪ್ರಾಯಪಡುತ್ತಾರೆ. ಸ್ಟ್ರೀಮಿಂಗ್ ಸೇವೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ವಿಚಾರದಲ್ಲಿ ಸರ್ಕಾರ ಅನಗತ್ಯ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂಬುದೂ ಅವರ ಅಭಿಮತ.
Online Curated Content Providers (OCCP) ಗಳು ‘ಪುಲ್’ ಸ್ವಭಾವ ಹೊಂದಿದ್ದು, ಬಳಕೆದಾರರು ತಮ್ಮ ಆಯ್ಕೆಯ ಮೂಲಕ ವಿಷಯವನ್ನು ಪ್ರವೇಶಿಸಬಹುದು. ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಈಗಾಗಲೇ ವಯಸ್ಸಿಗೆ ಅನುಗುಣವಾದ ವಿಷಯ ವಿವರಣೆಗಳು, ಪೋಷಕರ ನಿಯಂತ್ರಣ (parental lock) ವ್ಯವಸ್ಥೆಗಳು ಮತ್ತು ಕ್ಯುರೇಶನ್ ಉಪಕರಣಗಳಿವೆ. ಇದು ಸಾಮಾನ್ಯ ಟಿವಿಯ ‘ಪುಶ್’ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿದೆ.
ಮೂಲತಃ 1990ರ ದಶಕದ ಕುಟುಂಬದ ಲಿವಿಂಗ್ ರೂಂ ಗಾಗಿ ವಿನ್ಯಾಸಗೊಳಿಸಲಾದ ಅನಲಾಗ್ ಪ್ರಸಾರ ಯುಗದ ‘ಅಶ್ಲೀಲತೆ’ ಮಾನದಂಡವನ್ನು ಪಾಸ್ವರ್ಡ್-ರಕ್ಷಿತ, ಆನ್-ಡಿಮ್ಯಾಂಡ್ ಡಿಜಿಟಲ್ ಪರಿಸರಕ್ಕೆ ಅನ್ವಯಿಸುವುದು ಸೂಕ್ತವಲ್ಲ. ಇದರಿಂದ ವೀಕ್ಷಕರ ಆಯ್ಕೆ ಸ್ವಾತಂತ್ರ್ಯ ಮತ್ತು OTT ಪ್ಲಾಟ್ಫಾರ್ಮ್ಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ತಾಂತ್ರಿಕ ಸುರಕ್ಷತಾ ವ್ಯವಸ್ಥೆಗಳು ನಿರ್ಲಕ್ಷಿತವಾಗುತ್ತವೆ ಎಂದು ಕಂಟೆಂಟ್ ಕ್ಯುರೇಟರ್ಗಳು ವಾದಿಸುತ್ತಾರೆ.







