ಇಲಾಖೆಗಳಿಂದ ಒಟ್ಟು ಅನುದಾನದ ಶೇ.36.25ರಷ್ಟು ಮಾತ್ರ ವೆಚ್ಚ

ಬೆಂಗಳೂರು : 2026-27ನೇ ಸಾಲಿನ ಆಯವ್ಯಯ ಮಂಡನೆಯಾಗಿ 7 ತಿಂಗಳಾಗಿದ್ದರೂ ಇಲಾಖೆಗಳು ಒಟ್ಟು ಅನುದಾನಕ್ಕೆ ಕೇವಲ ಶೇ.36.25ರಷ್ಟು ಮಾತ್ರ ವೆಚ್ಚ ಮಾಡಿದೆ. ಇದು ಕಳೆದ ಬಾರಿ ಅಂದರೇ 2025-26ನೇ ಸಾಲಿನ ಇದೇ ಹೊತ್ತಿಗೆ ಶೇ.36.99ರಷ್ಟು ವೆಚ್ಚ ಮಾಡಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶೇ. 0.74ರಷ್ಟು ಕಡಿಮೆ ಪ್ರಗತಿ ಸಾಧಿಸಿದೆ. ಬಿಡುಗಡೆ ಮಾಡಿರುವ 1,95,743.68 ಕೋಟಿ ರೂ. ಅನುದಾನದ ಪೈಕಿ 1,34,931.12 ಕೋಟಿ ರೂ. ಖರ್ಚು ಮಾಡಿರುವ ಇಲಾಖೆಗಳು ವೆಚ್ಚಕ್ಕೆ ಇನ್ನೂ 60, 812.56 ಕೋಟಿ ರೂ. ಬಾಕಿ ಇರಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಇಲಾಖೆಗಳು ಸಾಧಿಸಿರುವ ಪ್ರಗತಿ ಕುರಿತು 2026ರ ಅಕ್ಟೋಬರ್ 27ರ ಇಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪರಿಶೀಲನೆ ನಡೆಯಿತು. 2026ರ ಅಕ್ಟೋಬರ್ 19ರ ಅಂತ್ಯಕ್ಕೆ ಸಾಧಿಸಿರುವ ಒಟ್ಟಾರೆ ಆರ್ಥಿಕ ಪ್ರಗತಿ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ, ಎಸ್‌ಸಿಎಸ್‌ಪಿ ಟಿಎಸ್‌ಪಿ ಕಾರ್ಯಕ್ರಮಗಳಲ್ಲಿನ ಪ್ರಗತಿ, ಮತ್ತು 2026-27ನೇ ಸಾಲಿನ ಆಯವ್ಯಯ ಘೋಷಣೆಗಳ ಕುರಿತು ಕಂಡಿಕೆಗಳ ಅನುಷ್ಠಾನದ ವಸ್ತುಸ್ಥಿತಿ ಕುರಿತು ಚರ್ಚಿಸಿತು.
ವಿವಿಧ ಇಲಾಖೆಗಳು ಈ ಸಭೆಗೆ ಮಂಡಿಸಿರುವ ಸಮಗ್ರ ಅಂಕಿಅಂಶಗಳು ಮತ್ತು ಪ್ರಗತಿಯ ವರದಿಯು "the-file.in'ಗೆ ಲಭ್ಯವಾಗಿದೆ.
2026-27ನೇ ಸಾಲಿನ ಆಯವ್ಯಯದ ಸಂದರ್ಭದಲ್ಲಿ ಒಟ್ಟು 565 ಘೋಷಣೆಗಳನ್ನು ಮಾಡಲಾಗಿತ್ತು. ಈ ಪೈಕಿ ಹೊಸದಾಗಿ 212 ಘೋಷ ಣೆಗಳಿದ್ದವು. ಈ ಪೈಕಿ 120 ಘೋಷಣೆಗಳಿಗಷ್ಟೇ ಆದೇಶ ಹೊರಡಿಸಿದೆ. 92 ಘೋಷಣೆಗಳಿಗೆ ಸಂಬಂಧಿಸಿದಂತೆ ಇನ್ನೂ ಆದೇಶ ಹೊರಬಿದ್ದಿಲ್ಲ. ಮುಂದುವರಿದ ಮಾರ್ಪಾಡಿತ ವಿಭಾಗದಲ್ಲಿ ಒಟ್ಟು 55 ಘೋಷಣೆಗಳ ಪೈಕಿ 24 ಘೋಷಣೆಗಳಿಗಷ್ಟೇ ಆದೇಶ ಹೊರಡಿಸಿರುವ ಇಲಾಖೆಗಳು ಇನ್ನೂ 31 ಘೋಷಣೆಗಳಿಗೆ ಆದೇಶ ಹೊರಡಿಸಲು ಬಾಕಿ ಇರಿಸಿರುವುದು ತಿಳಿದು ಬಂದಿದೆ.
ಮುಂದುವರಿದ ಯೋಜನೆಗಳಿಗೆ ಸಂಬಂಧಿಸಿ ಹೊರಡಿಸಿದ್ದ ಒಟ್ಟು 120 ಘೋಷಣೆಗಳ ಪೈಕಿ 75 ಘೋಷಣೆಗಳಿಗೆ ಆದೇಶ ಹೊರಡಿಸಿದ್ದರೆ ಇನ್ನು 45 ಘೋಷಣೆಗಳಿಗೆ ಆದೇಶ ಹೊರಡಿಸಲು ಬಾಕಿ ಇದೆ. ನೀತಿಗೆ ಸಂಬಂಧಿಸಿದಂತೆ 27 ಘೋಷಣೆಗಳನ್ನು ಹೊರಡಿಸಿತ್ತು. ಈ ಪೈಕಿ 11 ಘೋಷಣೆಗಳಿಗೆ ಆದೇಶ ಹೊರಡಿಸಿದ್ದರೆ ಇನ್ನು 11 ಘೋಷಣೆಗಳಿಗೆ ಆದೇಶ ಹೊರಡಿಸಬೇಕಿದೆ. ಹೇಳಿಕೆ ವಿಭಾಗದಲ್ಲಿ ಹೊರಡಿಸಿದ್ದ ಒಟ್ಟು 151 ಘೋಷಣೆಗಳಿಗೆ ಸಂಬಂಧಿಸಿದಂತೆ 31 ಕ್ಕೆ ಮಾತ್ರ ಆದೇಶ ಹೊರಡಿಸಿದೆ. ಇನ್ನು 219 ಘೋಷಣೆಗಳಿಗೆ ಆದೇಶ ಹೊರಡಿಸಲು ಬಾಕಿ ಇದೆ.
<ಒಟ್ಟು ಖರ್ಚು ವೆಚ್ಚದ ಶೇಕಡವಾರು ಎಷ್ಟು?
2026-27ನೇ ಸಾಲಿನಲ್ಲಿ ಒಟ್ಟಾರೆ 3,65,186.59 ಕೋಟಿ ರೂ. ಒಟ್ಟು ಅನುದಾನವನ್ನು ಲಭ್ಯವಾಗಿಸಿಕೊಂಡಿತ್ತು. ಈ ಪೈಕಿ 2026ರ ಅಕ್ಟೋಬರ್ 19ರ ಅಂತ್ಯಕ್ಕೆ 1,95,743.68 ಕೋಟಿ ರೂ. ಬಿಡುಗಡೆ ಮಾಡಿದೆ. ಕಳೆದ ವರ್ಷದ ಇದೇ ಹೊತ್ತಿಗೆ 1,66,385.76 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ 28,999.92 ಕೋಟಿ ರೂ. ಹೆಚ್ಚಿಗೆ ಅನುದಾನ ಬಿಡುಗಡೆ ಮಾಡಿತ್ತು. 2026ರ ಅಕ್ಟೋಬರ್ 19ರ ಅಂತ್ಯಕ್ಕೆ ಒಟ್ಟಾರೆ 1,34,931.12 ಕೋಟಿ ರೂ. ವೆಚ್ಚ ಮಾಡಿದೆ. ಇದು ಒಟ್ಟು ಅನುದಾನಕ್ಕೆ ಶೇ. 36.25ರಷ್ಟಿದೆ. ಲಭ್ಯ ಅನುದಾನಕ್ಕೆ ಶೇ 66.52ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವೆಚ್ಚದ ಪ್ರಮಾಣವು ಇದೇ ಹೊತ್ತಿಗೆ ಶೇ.36.99ರಷ್ಟಿದೆ. ಲಭ್ಯ ಅನುದಾನಕ್ಕೆ ಶೇ. 73.60ರಷ್ಟಿತ್ತು. ಆರಂಭಿಕ ಶಿಲ್ಕ ಮತ್ತು ವಾಸ್ತವ ವೆಚ್ಚ ಮಾಡಿಯೂ ಇನ್ನೂ ವೆಚ್ಚಕ್ಕೆ 67,921.92 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ವೇತನೇತರ ವಿಭಾಗದಲ್ಲಿ 31,504.87 ಕೋಟಿ ರೂ. ವೆಚ್ಚಕ್ಕೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.






